“ದೊಡ್ಡ ಬಳ್ಳಾಪುರದಲ್ಲಿ 22 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸದೇ 23ನೇ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಆರೋಪಿಸಿ, ಖಂಡಿಸಿರುವ ಜಿಲ್ಲೆಯ ಕನ್ನಡಪರ ಸಂಘಟನೆಗಳು, ಕಪ್ಪು ಬಾವುಟ ಪ್ರದರ್ಶನ ಮಾಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್ ವಿರುದ್ಧ ಘೋಷಣೆ ಕೂಗಿದರು.
ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ದೊಡ್ಡಬಳ್ಳಾಪುರದಲ್ಲಿ ಭಾನುವಾರ 23 ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಧ್ವಜಾರೋಹಣ, ಸಮ್ಮೇಳನಾಧ್ಯಕ್ಷರು ಮತ್ತು ಕಲಾ ತಂಡಗಳ ಮೆರವಣಿಗೆ ನಡೆಯಿತು. ಇದಾದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಚಿ.ಮಾ.ಸುಧಾಕರ್, ಪ್ರಾಸ್ತಾವಿಕ ನುಡಿ ಆರಂಭಿಸುತ್ತಿದ್ದಂತೆ ವೇದಿಕೆ ಮುಂಭಾಗದಲ್ಲಿದ್ದ ಹೋರಾಟಗಾರರು ಕಪ್ಪುಪಟ್ಟಿ ಪ್ರದರ್ಶನ ಮಾಡಿ ಘೊಷಣೆ ಕೂಗಿದರು. ಜೊತೆಗೆ ವೇದಿಕೆ ಮುಂಭಾಗದಲ್ಲಿ ಪ್ರತಿಭಟನೆಯನ್ನೂ ನಡೆಸಿದರು.
ಇದನ್ನೂ ಓದಿ: ಕನ್ನಡ ಧ್ವಜ ಇಳಿಸದಿದ್ದರೆ ಗಲ್ಲಿ-ಗಲ್ಲಿಯಲ್ಲಿ ಭಗವಾಧ್ವಜ ಹಾರಾಡುತ್ತದೆ: ಎಚ್ಚರಿಕೆ ನೀಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ
“ಜಿಲ್ಲಾ ಘಟಕದ ಅಧ್ಯಕ್ಷರು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ. 22 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ನಂತರ ಜನವರಿ 28 ಕ್ಕೆ ಸಮ್ಮೇಳನ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಈಗ ತರಾತುರಿಯಲ್ಲಿ 23 ನೇ ಸಮ್ಮೇಳನ ಮಾಡಲಾಗುತ್ತಿದೆ. ಇದರಿಂದ 22ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಅಪಮಾನ ಮಾಡಿದಂತಾಗುತ್ತದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದಿಂದ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗುತ್ತಿದೆ. 22ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಂದ 23ನೇ ಸಮ್ಮೇಳನಾಧ್ಯಕ್ಷರಿಗೆ ಕನ್ನಡದ ಬಾವುಟ ಹಸ್ತಾಂತರಿಸುವುದು ರೂಢಿ. ಸಮ್ಮೇಳನವೇ ನಡೆಯದೇ ಇರುವಾಗ ಹಸ್ತಾಂತರ ಮಾಡುವವರು ಯಾರು, ಈ ವಿಚಾರ ಅವರಿಗೆ ತಿಳಿದಿದ್ದರೂ ಪ್ರಭುದೇವ್ ಅವರಿಗೆ ಅಪಮಾನ ಮಾಡಿದ್ದಾರೆ” ಎಂದು ದೊಡ್ಡಬಳ್ಳಾಪುರ ಸಾಹಿತ್ಯ ಪರಿಷತ್ ನಿರ್ದೇಶಕ ಕಿರಣ್ ಹೇಳಿದರು.
ನಂತರ ಮಾತನಾಡಿದ ಸುಧಾಕರ್, ಜನವರಿ 28 ರಂದು ಸಮ್ಮೇಳನ ನಡೆಸುವುದಾಗಿ ಹೇಳಿದರು.
ಇದನ್ನೂ ಓದಿ: ಬಿಜೆಪಿ ಜಿಲ್ಲಾಧ್ಯಕ್ಷರ ಆಮಿಷ: ಪಕ್ಷಕ್ಕೆ ಬಂದರೆ ಅಧ್ಯಕ್ಷ ಪದವಿ ಗ್ಯಾರೆಂಟಿ ಎಂದ ಬಿ.ಸುರೇಶ್ ಗೌಡ