Homeಮುಖಪುಟಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

ಮಗಳಿಗೆ ತಂದೆಯ ಓಲೆಗಳು : ಇಂದಿರಾಗೆ ಜವಹರಲಾಲ್ ನೆಹರು ಪತ್ರಗಳು

- Advertisement -
- Advertisement -

ನೆಹರು ಮತ್ತು ಕಮಲಾರವರ ಮಗಳಾದ ಇಂದಿರಾ ಬಾಲ್ಯದಲ್ಲಿ ಏಕಾಂಗಿಯಾಗಿ ದಿನಗಳನ್ನು ಕಳೆದವರು. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ತಾಯಿಯ ಜೊತೆ ಅಲಹಾಬಾದಿನ ಆನಂದಭವನದಲ್ಲಿ ವಾಸ. ತಂದೆಯೋ ಸ್ವಾತಂತ್ರ್ಯ ಚಳವಳಿಯ ಮುಖ್ಯ ಭಾಗ. ರಾಜಕೀಯ, ಬಂಧನ ಮತ್ತು ಹೋರಾಟಗಳ ಕಾರಣಗಳಿಂದಾಗಿ ಮಗಳ ಜೊತೆಗೆ “ಕ್ವಾಲಿಟಿ ಟೈಂ” ಎಂದಿಗೂ ಕೊಡಲಾಗುತ್ತಿರಲಿಲ್ಲ. ಇಂದಿರಾಗೆ ಹುಟ್ಟಿದ ಒಬ್ಬ ತಮ್ಮನೋ ಬಲು ಬೇಗ ಕಣ್ಮುಚ್ಚಿದ. ರವೀಂದ್ರನಾಥ್ ಠಾಗೋರರ ಶಾಂತಿನಿಕೇತನವೂ ಸೇರಿದಂತೆ ಶಾಲೆಗೆಂದು ಹೋದರೂ ನಾನಾ ಕಾರಣಗಳಿಂದ ಶಾಲೆಗಳನ್ನು ಪದೇ ಪದೇ ಬದಲಾಯಿಸಬೇಕಾಗುತ್ತಿತ್ತು. ಕೊನೆಗೆ ಠಾಗೋರರ ಶಾಂತಿನಿಕೇತನ, ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಯೂನಿವರ್ಸಿಟಿ ಆಫ್ ಆಕ್ಸ್‍ಫರ್ಡ್‍ಗೆ ಶೈಕ್ಷಣಿಕವಾಗಿ ಸೇರ್ಪಡೆಯಾದ್ದರಿಂದ ಇಂದಿರಾ ಪದವಿಯನ್ನು ಪಡೆದಿದ್ದು ಅಲ್ಲಿಂದಲೇ. ಇಷ್ಟೆಲ್ಲದರ ಜೊತೆಗೆ ಅವರ ಆರೋಗ್ಯವೂ ಕೆಡುತ್ತಿದ್ದರಿಂದ ಪದೇಪದೇ ಚಿಕಿತ್ಸೆಗಾಗಿ ಸ್ವಿಜರ್‍ಲೆಂಡ್‍ಗೆ ಹೋಗುತ್ತಿದ್ದರು.

ಇವು ಔಪಚಾರಿಕ ಶಿಕ್ಷಣವನ್ನು ಪಡೆಯಲು ಇಂದಿರಾ ಎದುರಿಸುತ್ತಿದ್ದ ಅಡ್ಡಿ ಆತಂಕಗಳು. ಅಕಾಡೆಮಿಕ್ ಆಗಿ ಇಂದಿರಾ ಉತ್ತಮವಾದ ಮೇಲ್ಗೈಯನ್ನು ಸಾಧಿಸಿದ್ದು ಅಷ್ಟಕಷ್ಟೇ ಆಗಿದ್ದರೂ ಬಹು ಸುಶಿಕ್ಷಿತ ವ್ಯಕ್ತಿಯಾಗಿ ರೂಪುಗೊಂಡಿದ್ದು ತಂದೆ ನೀಡಿದ ಅನೌಪಚಾರಿಕ ಶಿಕ್ಷಣದಿಂದ.
ಸ್ವಾತಂತ್ರ್ಯ ಹೋರಾಟದಲ್ಲಿ, ರಾಜಕೀಯವಾಗಿ ಸಕ್ರಿಯವಾಗಿದ್ದ ನೆಹರು ನೇರವಾಗಿ ಮಗಳ ಜೊತೆಗೆ ಇರಲಾಗದಿದ್ದರೂ ಮಗಳನ್ನು ಸುಶಿಕ್ಷಿತೆಯನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಅದರ ಸಾಕ್ಷಿಯೇ “ಮಗಳಿಗೆ ತಂದೆಯ ಓಲೆಗಳು.”

10-11 ವರ್ಷದ ಹುಡುಗಿಗೆ ನೈನಿತಾಲ್ ಜೈಲಿನಿಂದ ಬರೆದಿರುವ ಈ ಪತ್ರಗಳು ಜಗತ್ತಿನ ಚರಿತ್ರೆಯನ್ನು, ಮಾನವನ ಸಾಂಸ್ಕೃತಿಕ ಮತ್ತು ಸಾಮಾಜಿಕ ಜೀವನದ ವಿಕಾಸವನ್ನು ತೆರೆದಿಡುತ್ತಾ ಹೋಗುತ್ತದೆ. ಇದು ಆ ಕಾಲಘಟ್ಟದ ಒಂದು ಸಂಕ್ಷಿಪ್ತ ವಿಶ್ವಕೋಶ. ಬರೆದಿರುವುದೋ ಮಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದಾದರೂ ತಮ್ಮ ಈ ಪತ್ರಗಳು ಸಂಗ್ರಹ ಯೋಗ್ಯವಾಗಿ ಮುಂದೊಂದು ದಿನ ಅತ್ಯುತ್ತಮ ಪುಸ್ತಕಗಳ ಸಾಲಿಗೆ ಸೇರಲಿದೆ ಎಂಬ ದೂರದೃಷ್ಟಿಯೂ ಅವರಿಗಿತ್ತು. ಹಾಗಾಗಿ ಒಂದೇ ಪ್ರಯತ್ನದಲ್ಲಿ ಮಗಳನ್ನು ಸುಶಿಕ್ಷಿತಳನ್ನಾಗಿಸುವುದು ಮತ್ತು ಗ್ರಂಥರಚನೆ ಎರಡಕ್ಕೂ ಆಕರಗಳನ್ನು ಸೃಷ್ಟಿಸಿದರು.

ಭೂಮಿಯ ಉಗಮ, ಸಸ್ಯ, ಪ್ರಾಣಿಗಳ ಸೃಷ್ಟಿ, ಜನಾಂಗಗಳು ಹೇಗೆ ಹುಟ್ಟಿದವು, ನಾಗರಿಕತೆ, ಧರ್ಮಗಳ ಉದಯ ಹೇಗಾಯಿತು, ಪ್ರಾಚೀನಕಾಲದಲ್ಲಿ ಇತಿಹಾಸ ಹೇಗೆ ಬರೆಯಲ್ಪಟ್ಟಿತು, ಒಕ್ಕಲುತನ ಹೇಗೆ ಪ್ರಾರಂಭವಾಯಿತು ಹೀಗೆ ಸಂಕೀರ್ಣವಾದ ವಿಷಯಗಳನ್ನು ಸರಳಶೈಲಿಯ ಪತ್ರಗಳಲ್ಲಿ ಇತಿಹಾಸ, ಮಾನವಶಾಸ್ತ್ರೀಯ ಅಧ್ಯಯನ, ಸಂಸ್ಕೃತಿಗಳ ಪರಿಚಯ, ಭಾಷೆಗಳ ಬಗ್ಗೆ, ಜನಾಂಗಗಳ ಸಂಘರ್ಷ ಮತ್ತು ಬೆರಗುಗಳು ಎಲ್ಲವನ್ನೂ ಹೇಳಿಕೊಡುತ್ತಾರೆ. ಸ್ವಾರಸ್ಯವೆಂದರೆ ತೀರಾ ವಿವರಣೆಗಳಿಂದಲೂ ಕೂಡಿರದೆ, ಹಾಗೆಂದು ಪರಿವಿಡಿಯಂತೆ ಬರಿಯ ಪಟ್ಟಿಯಾಗಿರದೇ ತಿಳಿಯಲೇಬೇಕಾದ ವಿಷಯವನ್ನು ಸಂಕ್ಷಿಪ್ತಗೊಳಿಸಿ ಸಾಂದ್ರಗೊಳಿಸುವಂತಹ ಚಾತುರ್ಯ ಈ ಬರವಣಿಗೆಯಲ್ಲಿದೆ.

ಒಂದು ಹುಡುಗಿ ತನ್ನ ತಂದೆ ತೋರುತ್ತಿರುವ ತನ್ನೆಲ್ಲಾ ಪ್ರೀತಿಯ ಜೊತೆಗೆ ನೀಡುವ ಆದ್ಯತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ. ಜ್ಞಾನ ಮತ್ತು ಸಂವೇದನೆ ಎರಡಕ್ಕೂ ಒತ್ತು ನೀಡಿರುವ ನೆಹರು ಓದುಗನು ಯಾವುದನ್ನು ಸ್ವೀಕರಿಸಬೇಕು, ಹೇಗೆ ಗ್ರಹಿಸಬೇಕು, ಕೆಲವೊಂದರ ಬಗ್ಗೆ ತಿಳಿವಳಿಕೆ ಇದ್ದು ಅವನ್ನು ಹೇಗೆ ನಿರಾಕರಿಸಬೇಕು ಎಂದೂ ಸೂಕ್ಷ್ಮವಾಗಿ ನಿರ್ದೇಶನಗಳನ್ನು ನೀಡಿದ್ದಾರೆ. ತಮ್ಮ ಧೋರಣೆಯನ್ನು ಹೇರದೇ ಅರಿವಿನ ಗ್ರಹಿಕೆಗೆ ಬೇಕಾದ ಸೂಚನೆಗಳಿವು ಎಂಬ ಕಾಳಜಿ ಗುಪ್ತವಾಗಿ ಬರವಣಿಗೆಯ ತಂತ್ರದಲ್ಲಿದೆ ಮತ್ತು ಪದಗಳ ಬಳಕೆಯಲ್ಲಿದೆ. ವಾಕ್ಯಗಳ ರಚನೆಯಲ್ಲಿ ವಿಚಾರವನ್ನೂ, ಬೆರಗನ್ನೂ ಮತ್ತು ನವಿರಾಗಿ ಭಾವುಕತೆಯನ್ನೂ ಬೆಸೆಯುತ್ತಾ ಹೋಗುತ್ತಾರೆ.

ಓದಿನ ಬಗ್ಗೆ, ಜಗತ್ತಿನ ಬಗ್ಗೆ, ಜನರ ಬಗ್ಗೆ, ವಿಸ್ಮಯವನ್ನೂ ಮತ್ತು ಪ್ರೀತಿಯನ್ನೂ ಹುಟ್ಟಿಸುವಂತಹ ಕೃತಿಯಾಗಿ ಇದು ಕಾಣುತ್ತದೆ. ವಿಶೇಷವೆಂದರೆ, ಜಗತ್ತಿನ ಎಲ್ಲ ಜನರಿಗೂ ಮತ್ತು ಓದುತ್ತಿರುವ ನನಗೂ ಸಂಬಂಧವಿದೆ ಎಂಬಂತಹ ಭಾವವಿದೆ. ಈ ಅನೌಪಚಾರಿಕ ಶಿಕ್ಷಣ ಬರಿಯ ಇಂದಿರಾಗೆ ಮಾತ್ರವಲ್ಲ ಯಾವುದೇ ಓದುವ ಪ್ರೀತಿಯುಳ್ಳವನಿಗೆ ಸಂವೇದನೆಯನ್ನು ಉಂಟುಮಾಡಬಲ್ಲದು. ಓದುಗ ಮತ್ತು ಬರಹಗಾರನ ನಡುವೆ ಆತ್ಮೀಯತೆಯನ್ನು ಮೊಳೆಸಬಲ್ಲದು. ಆಪ್ತತೆಯನ್ನು ಬೆಸೆಯಬಲ್ಲದು. ಏನೇ ಆದರೂ ತಂದೆ ಮಗಳಿಗೆ ಬರೆದದ್ದು ಅಲ್ಲವೇ!

ಜಗತ್ತೆಂದರೆ ಹಲವು ರಾಷ್ಟ್ರಗಳ ಒಂದು ದೊಡ್ಡ ಕುಟುಂಬ ಎಂದು ಅರಿವಾಗಲೆಂಬ ನೆಹರೂರವರ ಆಶಯವನ್ನು ಈ ಪತ್ರಗಳ ಸಂಗ್ರಹ ಧ್ವನಿಸುವುದಂತೂ ಸತ್ಯ.

ಪ್ರೀತಿಯ ಇಂದಿರಾ ಎಂದು ಸಂಬೋಧಿಸುತ್ತಾ ಯಾವುದೇ ಕತೆ ಕಾದಂಬರಿಗಿಂತ ರೋಚಕವಾಗಿರುವ ಜಗತ್ತಿನ ಕತೆಯನ್ನು ತೆರೆದಿಡುವ ನೆಹರೂ ಓರ್ವ ತಂದೆಯಾಗಿ ಮಕ್ಕಳ ಶಿಕ್ಷಣದ ವಿಷಯದಲ್ಲಿ ಯಾವ ಪಾತ್ರ ವಹಿಸಬೇಕು ಎಂದು ಮಾದರಿಯಾಗಿ ನಿಲ್ಲುತ್ತಾರೆ.

ನೆಹರು ಮಗಳಿಗೆ ಇಂಗ್ಲಿಷಲ್ಲಿಯೇ ಪತ್ರಗಳನ್ನು ಬರೆದಿದ್ದು. ನಂತರ ಹಿಂದಿಯೇ ಮೊದಲಾದ ಭಾಷೆಗಳಿಗೆ ಅನುವಾದವಾಯ್ತು. ಶ್ರೀ ಕಪಟರಾಳ ಕೃಷ್ಣರಾಯರು ನೆಹರೂ ಜೊತೆಗೆ ಅನೇಕ ಪತ್ರ ವ್ಯವಹಾರಗಳನ್ನು ಮಾಡಿ, ತಪ್ಪುಒಪ್ಪುಗಳನ್ನೆಲ್ಲಾ ಗಮನಿಸಿಕೊಂಡು 1946ರಲ್ಲಿಯೇ ಕನ್ನಡಕ್ಕೆ ತಂದವರು. ಪ್ರಕಾಶಕರು ಹುಬ್ಬಳ್ಳಿಯ ಸಾಹಿತ್ಯ ಭಂಡಾರದ ಮಂಗಳೂರು ಗೋವಿಂದರಾಯರು.


ಇದನ್ನೂ ಓದಿ: ನೆಹರು ಒಬ್ಬ ನೈಜ ಭಾರತೀಯ ಜಾತ್ಯತೀತ ವ್ಯಕ್ತಿ: ಇಂದಿನ ಕೋಮುವಾದಕ್ಕೆ ಅವರನ್ನು ದೂರಬೇಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...