Homeಮುಖಪುಟಕೊರೊನಾ ವಿರುದ್ಧದ ಹೋರಾಟ ಯುದ್ಧವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು: ನೋಬೆಲ್ ಪುರಸ್ಕೃತ ಅಮರ್ತ್ಯ ಸೇನ್

ಕೊರೊನಾ ವಿರುದ್ಧದ ಹೋರಾಟ ಯುದ್ಧವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು: ನೋಬೆಲ್ ಪುರಸ್ಕೃತ ಅಮರ್ತ್ಯ ಸೇನ್

ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವುದು ಒಂದು ಯುದ್ಧದಲ್ಲಿ ಹೋರಾಡಿದಂತಲ್ಲ. ಒಬ್ಬ ನಾಯಕ ಉನ್ನತ ಅಧಿಕಾರ ಹೊಂದಿದ್ದು, ಯಾರ ಜೊತೆಗೂ ಸಮಾಲೋಚನೆ ನಡೆಸುವ ಅಗತ್ಯವೇ ಇಲ್ಲದೆ, ಪ್ರತಿಯೊಬ್ಬರಿಗೂ ಆಜ್ಞೆ ಮಾಡುವ ಅಧಿಕಾರ ಹೊಂದಿದ್ದಾಗ, ಯುದ್ಧವು ಚೆನ್ನಾಗಿ ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವಾಗ ಬೇಕಾಗಿರುವುದೇನೆಂದರೆ, ಭಾಗವಹಿಸುವಿಕೆಯ ಮೂಲಕ ಆಡಳಿತ ಮತ್ತು ಎಚ್ಚರವುಳ್ಳ ಸಾರ್ವಜನಿಕ ಚರ್ಚೆ ಎಂದು ನೋಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಹೇಳುತ್ತಾರೆ

- Advertisement -
- Advertisement -

ಅನುವಾದ: ನಿಖಿಲ್ ಕೋಲ್ಪೆ

ಭಾರತವು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಶೀಲ ಜಗತ್ತಿನಲ್ಲಿ ಅತ್ಯಂತ ಹಳೆಯದು ಎಂಬ ವಿಷಯದ ಕುರಿತು ಹೆಮ್ಮೆಪಡಲು ನಮಗೆ ಸಕಾರಣಗಳಿವೆ. ಎಲ್ಲರಿಗೂ ಒಂದು ಧ್ವನಿಯನ್ನು ನೀಡುವುದರ ಜೊತೆಗೆ, ಪ್ರಜಾಪ್ರಭುತ್ವವು ನಮಗೆ ಹಲವಾರು ವ್ಯಾವಹಾರಿಕ ಅನುಕೂಲತೆಗಳನ್ನೂ ಒದಗಿಸುತ್ತದೆ. ಆದರೆ ನಮ್ಮ ದೇಶವು ಬೃಹತ್ತಾದ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಮತ್ತು ತೀರಾ ಅಗತ್ಯ ಎನಿಸಿರುವ ಈಗಿನ ಸಂದರ್ಭದಲ್ಲಿ ನಾವು ಈ ಅನುಕೂಲತೆಗಳನ್ನು ಚೆನ್ನಾಗಿ ಬಳಸುತ್ತಿದ್ದೇವೆಯೇ ಎಂಬ ಪ್ರಶ್ನೆ ಕೇಳಬಹುದು.

ಮೊದಲಿಗೆ ಸ್ವಲ್ಪ ಇತಿಹಾಸ. ಬ್ರಿಟಿಷ್ ರಾಜ್ ಕೊನೆಗೊಂಡು, ಹೊಸದಾಗಿ ಭಾರತದಲ್ಲಿ ಸ್ಥಾಪಿತವಾದ ಪ್ರಜಾಪ್ರಭುತ್ವವು ತಕ್ಷಣವೇ ವಾಸ್ತವವಾದ ಫಲಗಳನ್ನು ಪಡೆಯಲಾರಂಭಿಸಿತು. ಬ್ರಿಟಿಷರ ಸರ್ವಾಧಿಕಾರಿ ಆಡಳಿತದ ಇತಿಹಾಸದುದ್ದಕ್ಕೂ, ಬರಗಾಲ ಎಂಬ ಮತ್ತೆಮತ್ತೆ ಮರುಕಳಿಸುವ ವಿಕೋಪವು, ಪ್ರಜಾಪ್ರಭುತ್ವವಾದಿ ಭಾರತದ ಸ್ಥಾಪನೆಯೊಂದಿಗೆ ಏಕಾಏಕಿಯಾಗಿ ನಿಂತುಹೋಯಿತು.

1943ರ ಬಂಗಾಳದ ಮಹಾ ಬರಗಾಲದ ಹೃದಯವಿದ್ರಾವಕ ಚಿತ್ರ.

ಕೊನೆಯ ಬರಗಾಲವು- ಸ್ವಾತಂತ್ರ್ಯಕ್ಕೆ ಸ್ವಲ್ಪವೇ ಮೊದಲು ಆಗಿದ್ದು; ಬಾಲ್ಯದಲ್ಲಿ ನಾನು ಕಂಡಿದ್ದ 1943ರ ಬಂಗಾಳದ ಬರಗಾಲವೇ- ವಸಾಹತುಶಾಹಿ ಆಡಳಿತದ ಕೊನೆಯ ಗುರುತಾಯಿತು. ಆ ಬಳಿಕದಿಂದ ಭಾರತವು ಹೇಳಿಕೊಳ್ಳುವಂತಹ ಬರಗಾಲವನ್ನು ಕಂಡಿಲ್ಲ ಮತ್ತು ಸ್ವಾತಂತ್ರ್ಯದ ಬಳಿಕದ ಮೊದಲ ದಶಕಗಳಲ್ಲಿ ಬೆದರಿಕೆ ಒಡ್ಡಿದ್ದ ಬರಗಳನ್ನು ದೃಢವಾಗಿ ನಿಭಾಯಿಸಲಾಯಿತು.

ಇದು ಸಾಧ್ಯವಾದದ್ದು ಹೇಗೆ? ಪ್ರಜಾಪ್ರಭುತ್ವವು ಬರಗಳನ್ನು ತಡೆಯಲು ಕಠಿಣವಾಗಿ ಕೆಲಸಮಾಡಲು ಸರಕಾರಕ್ಕೆ ಬಲವಾದ ಪ್ರೋತ್ಸಾಹವನ್ನು ನೀಡುತ್ತದೆ. ಸಾರ್ವಜನಿಕ ಚರ್ಚೆ ಮತ್ತು ಚುನಾವಣೆಗಳ ಸಂಯೋಜನೆಯಿಂದಾಗಿ ಸರಕಾರವು ಜನರ ಆಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸಬೇಕಾಗುತ್ತದೆ.

ಹಾಗಿದ್ದರೂ, ಕೇವಲ ಚುನಾವಣೆಗಳಷ್ಟೇ ಅದನ್ನು ಮಾಡಲಾಗುವುದಿಲ್ಲ. ನಿಜವಾಗಿಯೂ, ಪ್ರಜಾಪ್ರಭುತ್ವವನ್ನು ಕಾಲಕಾಲಕ್ಕೆ ನಡೆಯುವ ಮತ್ತು ಒಂದು ಇನ್ನೊಂದರ ನಡುವೆ ಆಂತರವಿರುವ ಮತ್ತು ತಕ್ಷಣದ ರಾಜಕೀಯ ಪರಿಸ್ಥಿತಿಗಳು ಉಂಟುಮಾಡುವ ಉತ್ಸಾಹ, ಉನ್ಮಾದಗಳಿಂದ ಓಲಾಡಿಸಬಹುದಾದ ಮುಕ್ತ ಚುನಾವಣೆಗಳಿಂದಷ್ಟೇ ಅರ್ಥಮಾಡಿಕೊಳ್ಳಲಾಗದು.

ಉದಾಹರಣೆಗೆ, ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ 1982ರ ಫಾಕ್ಲ್ಯಾಂಡ್ ಯುದ್ಧಕ್ಕೆ ಮೊದಲು ಚುನಾವಣಾ ಸಮೀಕ್ಷೆಗಳಲ್ಲಿ ತೀರಾ ಹಿಂದಿದ್ದರು. ಯುದ್ಧದ ಜಯದಿಂದಾಗಿ ದೊಡ್ಡ ನೆಗೆತ ಕಂಡು, 1983ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಆರಾಮವಾಗಿ ಜಯಿಸಿದರು.

ಆದಲ್ಲದೇ, ಸಂಸದೀಯ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಪ್ರಾಥಮಿಕವಾಗಿ- ಸಂಸತ್ತಿನ ಕೆಳಮನೆಯಲ್ಲಿ (ನಮ್ಮಲ್ಲಿ ಲೋಕಸಭೆ) ಬಹುಮತದ ಸ್ಥಾನಗಳನ್ನು ಪಡೆಯುವುದಾಗಿದೆ. ಮತದಾನದ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಗುಂಪುಗಳ ಹಿತಾಸಕ್ತಿ ಮತ್ತು ಹಕ್ಕುಗಳ ಕುರಿತು ಅಧಿಕೃತ ನಿಯಮಗಳೇನೂ ಇಲ್ಲ. ಇದನ್ನು ಗಣಿಸಿದಲ್ಲಿ ಪ್ರತಿಯೊಬ್ಬರೂ ಅವರ ಸ್ವಂತ, ವೈಯಕ್ತಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ಮತದಾನ ಮಾಡುವುದಿದ್ದರೆ, ಚುನಾವಣೆಯೊಂದು ಬರಗಾಲದ ಸಂತ್ರಸ್ತರ ದೊಡ್ಡ ರಕ್ಷಕನಾಗುವುದು ಸಾಧ್ಯವಿಲ್ಲ. ಏಕೆಂದರೆ, ವಾಸ್ತವವಾಗಿ ಜನರ ಚಿಕ್ಕ ಅಲ್ಪಸಂಖ್ಯಾತ ಗುಂಪುಗಳು ಮಾತ್ರವೇ ಎಲ್ಲಾ ಬರಗಾಲಗಳಲ್ಲಿ ಉಪವಾಸ ಬೀಳುತ್ತವೆ.

ಆದರೆ, ಮುಕ್ತವಾದ ಮಾಧ್ಯಮ ಮತ್ತು ಮುಕ್ತ ಸಾರ್ವಜನಿಕ ಚರ್ಚೆಗಳು, ಬಡವರು ಮತ್ತು ದುರ್ಬಲರು ಎದುರಿಸುತ್ತಿರುವ ಸಂಕಷ್ಟ ಮತ್ತು ಅಪಾಯಗಳನ್ನು ಸಾರ್ವಜನಿಕರು ವ್ಯಾಪಕವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ ಮತ್ತು ಅಂತಹಾ ಒಂದು ವಿಪತ್ತು ಸಂಭವಿಸಲು ಅವಕಾಶ ಕೊಟ್ಟ ಸರಕಾರವನ್ನು ಅಸ್ಥಿರಗೊಳಿಸುತ್ತವೆ. ಖಂಡಿತವಾಗಿಯೂ, ಒಂದು ಸರಕಾರವನ್ನು- ಜನರ ಮೇಲೆ ಸಹಾನುಭೂತಿ ಮತ್ತು ತಿಳುವಳಿಕೆ ಹೊಂದಿರುವ ಸಾಮರ್ಥ್ಯವಿರುವ ಜನರು ಮತ್ತು ಪಕ್ಷಗಳು ಕೂಡಾ ನಡೆಸಬಹುದಾದುದರಿಂದ, ಅದೂ ಕೂಡಾ ಸಾರ್ವಜನಿಕ ಚರ್ಚೆಯಿಂದ ಮೂಡಿಬರುವ ಮಾಹಿತಿ ಹಾಗೂ ವಿಶ್ಲೇಷಣೆಯಿಂದ ನೇರವಾಗಿ ಪ್ರಭಾವಿತವಾಗಬಹುದು.

ಒಂದು ಅಲ್ಪಸಂಖ್ಯಾತ ಜನವರ್ಗವು ಮಾತ್ರ ವಾಸ್ತವಿಕವಾಗಿ ಅಭಾವವನ್ನು ಎದುರಿಸಬೇಕಾಗಿ ಬಂದರೂ, ಸಾರ್ವಜನಿಕ ಚರ್ಚೆ ಮತ್ತು ಮುಕ್ತ ಮಾಧ್ಯಮದಿಂದ ವಿಷಯ ಅರಿತುಕೊಂಡಿರುವ ಬಹುಸಂಖ್ಯಾತರ ಅಭಿಪ್ರಾಯಗಳನ್ನು ಮನ್ನಿಸುವುದರಿಂದ ಸರಕಾರವೊಂದು ಹೆಚ್ಚು ಸಂವೇದನಾಶೀಲವಾಗಬಹುದು. ಇದು- ಸಹಾನುಭೂತಿಯಿಂದ (ಸರಕಾರ ಕಾಳಜಿ ಹೊಂದಿದ್ದಾಗ) ಅಥವಾ ಅದರ ನಿಷ್ಕ್ರಿಯತೆಯು ಉಂಟುಮಾಡುವ ಅಸಮಾಧಾನದಿಂದ (ಸರಕಾರ ಕಾಳಜಿ ಹೊಂದಿಲ್ಲದಿದ್ದಾಗ) ಸಾಧ್ಯವಾಗಬಹುದು. ಜಾನ್ ಸ್ಟುವರ್ಟ್ ಮಿಲ್‌ನ ಪ್ರಜಾಪ್ರಭುತ್ವದ “ಚರ್ಚೆಯಿಂದ ಆಡಳಿತ” ಎಂಬ ವಿಶ್ಲೇಷಣೆಯು, ಬರಗಾಲದಿಂದ ಸಂತ್ರಸ್ತರನ್ನು ಪಾರು ಮಾಡುವವರನ್ನು, ಮತ್ತು ನಿರ್ದಿಷ್ಟವಾಗಿ ಮುಕ್ತ ಮಾಧ್ಯಮ ಮತ್ತು ಸ್ವತಂತ್ರವಾದ ಚರ್ಚೆಗಳನ್ನು ಗುರುತಿಸಲು ನೆರವಾಗುತ್ತದೆ.

ಒಂದು ಸಾಮಾಜಿಕ ವಿಪತ್ತನ್ನು ನಿಭಾಯಿಸುವುದೆಂದರೆ, ಒಂದು ಯುದ್ಧದಲ್ಲಿ ಹೋರಾಡಿದಂತಲ್ಲ. ಒಬ್ಬ ನಾಯಕ ಉನ್ನತ ಅಧಿಕಾರ ಹೊಂದಿದ್ದು, ಯಾರ ಜೊತೆಗೂ ಸಮಾಲೋಚನೆ ನಡೆಸುವ ಅಗತ್ಯವೇ ಇಲ್ಲದೆ, ಪ್ರತಿಯೊಬ್ಬರಿಗೂ ಆಜ್ಞೆ ಮಾಡುವ ಅಧಿಕಾರ ಹೊಂದಿದ್ದಾಗ, ಯುದ್ಧವು ಚೆನ್ನಾಗಿ ನಡೆಯುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಒಂದು ಸಾಮಾಜಿಕ ವಿಪತ್ತನ್ನು ನಿಬಾಯಿಸುವಾಗ ಬೇಕಾಗಿರುವುದೆಂದರೆ, ಭಾಗವಹಿಸುವಿಕೆಯ ಮೂಲಕ ಆಡಳಿತ ಮತ್ತು ಎಚ್ಚರವುಳ್ಳ ಸಾರ್ವಜನಿಕ ಚರ್ಚೆ.

ಬರಗಾಲದ ಸಂತ್ರಸ್ತರು, ತುಲನಾತ್ಮಕವಾಗಿ ಹೆಚ್ಚು ಅನುಕೂಲವಂತರಾಗಿರುವ ಜನತೆಯಿಂದ ಸಾಮಾಜಿಕವಾಗಿ ದೂರವಾಗಿರಬಹುದು; ಅದರಂತೆಯೇ, ಇತರ ಪ್ರಕೋಪಗಳಿಂದ ಬಾಧಿತರಾದ ಇತರ ಸಂತ್ರಸ್ತರು ಕೂಡಾ. ಆದರೆ, ಸಾರ್ವಜನಿಕ ಚರ್ಚೆಗೆ ಕಿವಿಗೊಡುವುದು- ನಿಜವಾಗಿಯೂ ಮಾಡಬೇಕಾಗಿರುವುದು ಏನು ಎಂಬುದನ್ನು ಯೊಜನಾ ನಿರೂಪಕರು ಅರ್ಥ ಮಾಡಿಕೊಳ್ಳುವಂತೆ ಮಾಡುತ್ತದೆ. ನೆಪೋಲಿಯನ್, ಆಲಿಸುವುದಕ್ಕಿಂತಲೂ ಹೆಚ್ಚಾಗಿ, ನೇತೃತ್ವವಹಿಸಿ ಆಜ್ಞೆ ಮಾಡುವುದರಲ್ಲಿ ಹೆಚ್ಚು ಸಕ್ಷಮನಾಗಿದ್ದಿರಬಹುದು. ಆದರೆ ಇದು, ಬಹುಶಃ ರಷ್ಯನ್ ದಂಡಯಾತ್ರೆಯನ್ನು ಹೊರತುಪಡಿಸಿ, ಆತನ ಬೇರೆ ದಂಡಯಾತ್ರೆಗಳಿಗೆ ತೊಡಕುಂಟುಮಾಡಲಿಲ್ಲ.

ಆದರೆ, ಒಂದು ಸಾಮಾಜಿಕ ಪಿಡುಗಿನಿಂದ ಹೊರಬರಲು, ಆಲಿಸುವುದು ಯಾವತ್ತೂ ಇರಬೇಕಾದ ಒಂದು ಅಗತ್ಯ. ಇದು ಒಂದು ಸಾಂಕ್ರಾಮಿಕ ರೋಗ ಉಂಟುಮಾಡುವ ಬಿಕ್ಕಟ್ಟಿಗೂ ಅನ್ವಯಿಸುತ್ತದೆ. ಇವುಗಳಲ್ಲಿ ಕೆಲವರು- ಅಂದರೆ, ಉಳ್ಳವರು- ಕೇವಲ ಆ ರೋಗ ಅಂಟಿಸಿಕೊಳ್ಳದೇ ಇರುವ ಬಗ್ಗೆ ಮಾತ್ರ ಚಿಂತೆ ಹೊಂದಿರಬಹುದು; ಆದರೆ, ಉಳಿದವರು ಜೀವಿಸಲು ಬೇಕಾದ ಹಣ ಸಂಪಾದನೆ ಮಾಡುವ ಕುರಿತೂ ಚಿಂತಿಸಬೇಕಾಗಿರುತ್ತದೆ. (ಅವರ ಜೀವನೋಪಾಯವು ರೋಗದಿಂದ ಆಥವಾ ರೋಗ ನಿಯಂತ್ರಣಕ್ಕಾಗಿ ಹೇರಲಾಗುವ ಲಾಕ್‌ಡೌನ್‌ನಂತಹ ಧೋರಣಾಕ್ರಮಗಳಿಂದ ಅಪಾಯಕ್ಕೀಡಾಗಿರಬಹುದು.) ತಮ್ಮ ಮನೆಗಳಿಂದ ದೂರ ಸಿಕ್ಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಮನೆಗೆ ಮರಳುವ ದಾರಿಯಾದರೂ ಯಾವುದು ಎಂಬ ಹೆಚ್ಚುವರಿ ಚಿಂತೆ ಇರುತ್ತದೆ.

ವಿವಿಧ ಗುಂಪುಗಳು ಅನುಭವಿಸುವ ವಿವಿಧ ರೀತಿಯ ಸಂಕಷ್ಟಗಳನ್ನು ಪರಿಹರಿಸಲು ಏಕಕಾಲದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದಕ್ಕೆ ಭಾಗವಹಿಸುವಿಕೆಯುಳ್ಳ ಪ್ರಜಾಪ್ರಭುತ್ವವು ನೆರವಾಗುತ್ತದೆ; ಅದೂ, ವಿಶೇಷವಾಗಿ ಮಾಧ್ಯಮವು ಮುಕ್ತವಾಗಿದ್ದಾಗ, ಸಾರ್ವಜನಿಕ ಚರ್ಚೆಗೆ ನಿಯಂತ್ರಣಗಳು ಇಲ್ಲದಿರುವಾಗ ಮತ್ತು ಸರಕಾರದ ಆದೇಶಗಳು- ಆಲಿಸುವಿಕೆ ಮತ್ತು  ವಿಚಾರವಿನಿಮಯಗಳ ಮೂಲಕ ತಿಳುವಳಿಕೆಯನ್ನು ಹೊಂದಿದಂತವುಗಳಾಗಿದ್ದಾಗ ಮಾತ್ರ.

ಕೋವಿಡ್- 19 ವೈರಸ್‌ನ ಹರಡುವಿಕೆಯಿಂದ ಭಾರತದಲ್ಲಿ ಉಂಟಾಗಿರುವ ಹಠಾತ್ ಬಿಕ್ಕಟ್ಟಿನಲ್ಲಿ ರೋಗದ ಹರಡುವಿಕೆಯನ್ನು ತ್ವರಿತವಾಗಿ ನಿಲ್ಲಿಸುವ ಕುರಿತು ಸರಕಾರ ಆತಂಕಿತವಾಗಿರುವುದು ಸರಿ. ಪರಿಹಾರವಾಗಿ “ಸಾಮಾಜಿಕ ಅಂತರ” (ದೈಹಿಕ ಅಂತರ) ಕಾಯ್ದುಕೊಳ್ಳುವುದೂ ಮುಖ್ಯವಾಗಿದ್ದು, ಭಾರತದ ದೋರಣಾ ನಿರೂಪಣೆಯಲ್ಲಿ ಅದನ್ನು ಸರಿಯಾಗಿಯೇ ಅಳವಡಿಸಿಕೊಳ್ಳಲಾಗಿದೆ. ಆದರೆ, ಸಮಸ್ಯೆ ಉಂಟಾಗಿರುವುದು- ರೋಗದ ಹರಡುವಿಕೆಯನ್ನು ನಿಧಾನಗೊಳಿಸುವ ಏಕಗುರಿಯ ಸಾಧನೆಗಾಗಿ- ಇರಬಹುದಾದ ಬೇರೆಬೇರೆ ದಾರಿಗಳ ನಡುವಿನ ವ್ಯತ್ಯಾಸಗಳನ್ನು ಕಾಣದಿರುವುದರಲ್ಲಿ. ಇವುಗಳಲ್ಲಿ ಕೆಲವು ದಾರಿಗಳು ಕೋಟ್ಯಂತರ ಬಡಜನರ ಜೀವನದಲ್ಲಿ ದುರಂತ ಮತ್ತು ವ್ಯಾಪಕ ಹಾನಿಯನ್ನು ತರಬಹುದು. ಇನ್ನು ಕೆಲವು ದಾರಿಗಳು ಇಂತಹಾ ಸಂಕಷ್ಟಗಳ ನಿವಾರಣೆಯ ಕ್ರಮಗಳಲ್ಲಿ ತಮ್ಮ ಪಾಲು ಸಲ್ಲಿಸಬಹುದೆಂದು ಆಶಿಸಬಹುದು.

ಉದ್ಯೋಗ ಮತ್ತು ಆದಾಯಗಳು ಬಡವರ ಮೂಲಭೂತ ಆತಂಕಗಳಾಗಿವೆ. ಅವರು ಅಪಾಯಕ್ಕೆ ಒಳಗಾದಾಗಲೆಲ್ಲ ಅವರನ್ನು ರಕ್ಷಿಸುವುದು ಧೋರಣಾ ನಿರೂಪಣೆಯ ಅತೀ ಮುಖ್ಯ ಅಗತ್ಯ. ಉಪವಾಸ ಮತ್ತು ಅಭಾವಗಳು ಆದಾಯದ ಕೊರತೆ ಮತ್ತು ಆಹಾರವಸ್ತುಗಳನ್ನು ಕೊಳ್ಳಲು ಬಡಜನರ ಅಸಾಮರ್ಥ್ಯಗಳ ಜೊತೆ ಸಾಮಾನ್ಯವಾಗಿ ತಳಕುಹಾಕಿಕೊಂಡಿರುತ್ತವೆ ಎಂಬುದನ್ನು ಗಮನಿಸುವುದು ಈ ಸಂದರ್ಭದಲ್ಲಿ ಅತ್ಯಗತ್ಯ. (ಹಲವಾರು ಆಳವಾದ ಆರ್ಥಿಕ ಅಧ್ಯಯನಗಳು ಈ ಸಂಬಂಧವನ್ನು ಹೊರಗೆಳೆದಿವೆ.) ಹಠಾತ್ ಲಾಕ್‌ಡೌನ್- ಕೋಟ್ಯಂತರ ಜನರನ್ನು ತಮ್ಮ ಆದಾಯದಿಂದ ವಂಚಿತಗೊಳಿಸುತ್ತದೆ ಮತ್ತು ಒಂದು ಪ್ರಮಾಣದಲ್ಲಿ ಅವರು ಉಪವಾಸ ಬೀಳುವ ದಿನಗಳು ದೂರವಿಲ್ಲ.

ಅತ್ಯುತ್ತಮ ಉದ್ಯಮಶೀಲ ಆರ್ಥಿಕತೆ ಎಂದು ಕರೆಯಲಾಗುವ (ಹಲವು ರೀತಿಗಳಲ್ಲಿ ಇದು ನಿಜವೂ ಹೌದು) ಯುಎಸ್‌ಎ ಕೂಡಾ, ನಿರುದ್ಯೋಗಿಗಳು ಮತ್ತು ಬಡವರಿಗೆ ಭಾರೀ ಪ್ರಮಾಣದ ಸರಕಾರಿ ವೆಚ್ಚದ ಮೂಲಕ ಆದಾಯ ಸಬ್ಸಿಡಿಯನ್ನು ಸ್ಥಾಪಿಸಿದೆ. ಯುಎಸ್‌ಎಯಲ್ಲಿ ಇಂತಹಾ ಸಾಮಾಜಿಕ ಸುರಕ್ಷಾ ಕ್ರಮಗಳು ಮೂಡಿಬಂದಿರುವುದು ಮತ್ತು ಅದನ್ನು ಸ್ವೀಕರಿಸುವುದರಲ್ಲಿ, ರಾಜಕೀಯ ವಿರೋಧ ಪಕ್ಷಗಳ ಅಭಿಯಾನ ಮತ್ತು ಸಾರ್ವಜನಿಕ ಚರ್ಚೆಗಳು ವಹಿಸಿದ ಪಾತ್ರಗಳು ನಿರ್ಣಾಯಕವಾಗಿವೆ.

ಭಾರತದಲ್ಲಿ ಬಡಜನರನ್ನು ಅಭಾವ ಮತ್ತು ದುರ್ಗತಿಯಿಂದ ದೂರ ಇಡುವ ಸಾಂಸ್ಥಿಕ ವ್ಯವಸ್ಥೆಯು ಅದರ ಸ್ವಂತ ಆರ್ಥಿಕ ಪರಿಸ್ಥಿತಿಗೆ ಹೊಂದಿಕೊಂಡಿರಬೇಕಾಗುತ್ತದೆ. ಆದರೆ, ಈಗ ಸಾಧ್ಯವಿರುವ ರಕ್ಷಣಾ ವ್ಯವಸ್ಥೆಗಳನ್ನು ಪರಿಗಣಿಸುವುದು ಕಷ್ಟವಲ್ಲ. ಇವುಗಳೆಂದರೆ, ಬಡವರಿಗೆ ನೆರವಾಗುವ ನಿಧಿಗಳನ್ನು ಹೆಚ್ಚಿಸುವುದು (ಈಗಿರುವಂತೆ, ಅದು ಕೇಂದ್ರ ಬಜೆಟ್‌ನಲ್ಲಿ ತುಲನಾತ್ಮಕವಾಗಿ ಸಣ್ಣ ಪ್ರಮಾಣದ ಅನುದಾನ ಪಡೆಯುತ್ತಿದೆ), ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಜನರಿಗೆ ಊಟ ಒದಗಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಮತ್ತು ಭಾರತೀಯ ಆಹಾರ ನಿಗಮ (ಎಫ್‌ಸಿಐ)ದಲ್ಲಿ ಬಳಸದೇ ಉಳಿದುಕೊಂಡಿರುವ ಆರು ಕೋಟಿ ಟನ್ ಆಕ್ಕಿ ಮತ್ತು ಗೋಧಿಯನ್ನು ಬಳಸುವುದು.

ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಬಡವರ ಹೊಟ್ಟೆ ಸೇರದೆ ಚರಂಡಿ ಸೇರುತ್ತಿರುವ ಧಾನ್ಯಗಳು
ಭಾರತೀಯ ಆಹಾರ ನಿಗಮದ ಗೋದಾಮಿನ ಇನ್ನೊಂದು ಚಿತ್ರ

ಸ್ಥಳಾಂತರಗೊಂಡಿರುವ ವಲಸೆ ಕಾರ್ಮಿರನ್ನು ಅವರ ಮನೆಗಳಿಗೆ ಸೇರಿಸುವ ದಾರಿಗಳು ಮತ್ತು ಉಪಾಯಗಳನ್ನು ಹುಡುಕುವುದು, ಅವರ ಪುನರ್ವಸತಿಗೆ ವ್ಯವಸ್ಥೆಗಳನ್ನು ರೂಪಿಸುವುದು, ಅವರ ರೋಗಗಳ ಸ್ಥಿತಿಗತಿ ಮತ್ತು ಆರೋಗ್ಯ ರಕ್ಷಣೆಯ ಕುರಿತು ಗಮನಹರಿಸುವುದು ಕೂಡಾ ಸವಾಲೊಡ್ಡುವ ವಿಷಯಗಳಾಗಿದ್ದು, ಇವುಗಳಿಗೆ, ಸರಿಯಾದ ವಿಚಾರ ವಿನಿಮಯ ಇಲ್ಲದ, ಬಗ್ಗಿಸಲಾಗದ ನಿರ್ಧಾರಗಳಿಗಿಂತಲೂ ಹೆಚ್ಚಾಗಿ, ಎಚ್ಚರಿಕೆಯಿಂದ ಕಿವಿಗೊಟ್ಟು ಕೇಳಿ ತೆಗೆದುಕೊಂಡ ನಿರ್ಧಾರಗಳ ಅಗತ್ಯವಿದೆ.

ಮಾಧ್ಯಮಗಳ ಬಾಯಿ ಮುಚ್ಚಿಸುವುದು, ಭಿನ್ನಮತೀಯರಿಗೆ ಶಿಕ್ಷೆಯ ಬೆದರಿಕೆ ಒಡ್ಡುವುದು (ಆ ಮೂಲಕ ರಾಜಕೀಯವಾಗಿ ಪ್ರಶ್ನಾತೀತರಾಗಿ ಉಳಿಯುವುದು) ಇವುಗಳ ಬದಲಾಗಿ- ಸಮಸ್ಯೆಗಳು ಯಾವುವು, ಅವು ಖಚಿತವಾಗಿ ಎಲ್ಲೆಲ್ಲಿ ಹೊಡೆತ ನೀಡಿವೆ, ಅವು ಸಂತ್ರಸ್ತರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎಂಬುದನ್ನು ಕೇಳುವುದು ಸೇರಿದಂತೆ- ಸಾಮಾಜಿಕ ದುರಂತವನ್ನು ತಪ್ಪಿಸುವ ಸರಕಾರದ ಕಾರ್ಯದಲ್ಲಿ ಆಲಿಸುವಿಕೆಯು ಪ್ರಮುಖ ಪಾತ್ರ ಹೊಂದಿದೆ. ಸಾರ್ವಜನಿಕ ಚರ್ಚೆಯಿಂದ ಆಡಳಿತಕ್ಕೆ ಬಹಳವಾಗಿ ನೆರವು ಸಿಗಬಹುದು. ಸಾಂಕ್ರಾಮಿಕ ರೋಗವೊಂದನ್ನು ಗೆಲ್ಲುವುದು ಒಂದು ಯುದ್ಧದಂತೆ ಕಾಣಬಹುದು. ಆದರೆ ನಿಜವಾದ ಅವಶ್ಯಕತೆ ಅದಕ್ಕಿಂತ ಬೇರೆಯೇ ಆಗಿದೆ.

(ಈ ಲೇಖನವು “ಆಡಳಿತವಾಗಿ ಆಲಿಸುವಿಕೆ” ಎಂಬ ಶೀರ್ಷಿಕೆಯಲ್ಲಿ ಮೊದಲ ಬಾರಿಗೆ ಪ್ರಕಟವಾಗಿತ್ತು. ನೋಬೆಲ್ ಅರ್ಥಶಾಸ್ತ್ರ ಪ್ರಶಸ್ತಿ ವಿಜೇತರಾದ ಅಮರ್ತ್ಯ ಸೇನ್ ಅವರು, ಥಾಮಸ್ ಡಬ್ಲ್ಯೂ. ಲೆಮೋಂಟ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳ ಪ್ರಾಧ್ಯಾಪಕರಾಗಿದ್ದಾರೆ.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ಬೆದರಿಕೆ: ಕಾಂಗ್ರೆಸ್ ನಿಂದ ರಾಜೀವ್ ಗೌಡ ಅಮಾನತು

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಗೌಡ ಅವರಿಗೆ ಕರೆ ಮಾಡಿ ಅಸಭ್ಯವಾಗಿ ನಿಂದಿಸಿ,...

ಭೀಮಾ ಕೋರೆಗಾಂವ್ ಪ್ರಕರಣ: ನಾಲ್ಕು ವರ್ಷಗಳ ನಂತರ ಇಬ್ಬರಿಗೆ ಬಾಂಬೆ ಹೈಕೋರ್ಟ್‌ನಿಂದ ಜಾಮೀನು

ಎಲ್ಗರ್ ಪರಿಷತ್ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಾಲ್ಕು ವರ್ಷಗಳ ನಂತರ, ಸಾಮಾಜಿಕ ಕಾರ್ಯಕರ್ತರಾದ ಸಾಗರ್ ಗೋರ್ಖೆ ಮತ್ತು ರಮೇಶ್ ಗೈಚೋರ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಈಗಾಗಲೇ ಬಿಡುಗಡೆಯಾದ...

‘ಗುಜರಾತ್‌ನಂತೆಯೇ ಕೇರಳವೂ ಈಗ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದೆ’: ಪ್ರಧಾನಿ ನರೇಂದ್ರ ಮೋದಿ 

ತಿರುವನಂತಪುರಂ: ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಿರುವನಂತಪುರಂ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯ ಐತಿಹಾಸಿಕ ವಿಜಯವನ್ನು "ಬದಲಾವಣೆಗೆ ಮಹತ್ವದ ಜನಾದೇಶ" ಎಂದು ಶ್ಲಾಘಿಸಿದ್ದಾರೆ.  ಇದೇ ವೇಳೆ "ಜನಪರ ಮತ್ತು...

ರಾಜಸ್ಥಾನ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ನಡುವೆ ಪ್ರೀತಿ: ಮದುವೆಗಾಗಿ ಪೆರೋಲ್ ಮೇಲೆ ಹೊರ ಬಂದ ಕೊಲೆ ಅಪರಾಧಿಗಳು

ಜೈಪುರದ ಸಂಗನೇರ್ ಓಪನ್ ಜೈಲಿನಲ್ಲಿ(ಮುಕ್ತ ಜೈಲು) ಪ್ರಾರಂಭವಾದ ಇಬ್ಬರು ಕೊಲೆ ಅಪರಾಧಿಗಳ ನಡುವಿನ ಪ್ರಣಯವು ಸಾರ್ವಜನಿಕ ಜೀವನಕ್ಕೂ ಕಾಲಿರಿಸಿದೆ. ಕೊಲೆ ಪ್ರಕರಣಗಳಲ್ಲಿ ಜೀವಾವಧಿಗೆ ಒಳಗಾಗಿರುವ ಇಬ್ಬರು ಕೈದಿಗಳು ಮದುವೆಯಾಗಲು ಪೆರೋಲ್ ಮೇಲೆ ಹೊರಬಂದಿದ್ದಾರೆ. ಅಪರಾಧ...

‘ಅತ್ಯಾಚಾರ-ಕೊಲೆ ಸಣ್ಣ ಘಟನೆ’: ಸಂಸದ ರಾಜಶೇಖರ್ ಹಿಟ್ನಾಳ್ ವಿವಾದಾತ್ಮಕ ಹೇಳಿಕೆ: ಸಂಸದರ ಹೇಳಿಕೆಗೆ ವ್ಯಾಪಕ ಖಂಡನೆ 

ಕೊಪ್ಪಳ: ಒಂದು ವರ್ಷದ ಹಿಂದೆ ಸಾಣಾಪುರದಲ್ಲಿ ವಿದೇಶಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಹಾಗೂ ವ್ಯಕ್ತಿಯ ಕೊಲೆ ಪ್ರಕರಣ ಸಣ್ಣದಾಗಿದ್ದರೂ ಮಾಧ್ಯಮಗಳು ವೈಭವೀಕರಿಸಿದ್ದರಿಂದ ಪ್ರವಾಸೋದ್ಯಮಕ್ಕೆ ವ್ಯಾಪಕ ಪೆಟ್ಟು ಬಿದ್ದಿದೆ ಎಂದು ಸಂಸದ ರಾಜಶೇಖರ...

ರಾಹುಲ್ ಕಡೆಗಣನೆ ಆರೋಪ: ಅಸಮಾಧಾನಗೊಂಡ ಶಶಿ ತರೂರ್, ಕೇರಳ ಕಾಂಗ್ರೆಸ್ ಕಾರ್ಯತಂತ್ರದ ಸಭೆಗೆ ಗೈರಾಗುವ ಸಾಧ್ಯತೆ!

ನವದೆಹಲಿ: ಕೇರಳ ಕಾಂಗ್ರೆಸ್ ಘಟಕದಲ್ಲಿ ಹೊಸ ಬಿಕ್ಕಟ್ಟು ಉಂಟಾಗಿದ್ದು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಪಕ್ಷದ ಕಾರ್ಯಕ್ರಮವೊಂದರಲ್ಲಿ ತಮ್ಮನ್ನು ಕಡೆಗಣಿಸಿದ್ದರಿಂದ ಅಸಮಾಧಾನಗೊಂಡಿರುವ ಹಿರಿಯ ಸಂಸದ ಶಶಿ ತರೂರ್, ಚುನಾವಣಾ...

ಒಡಿಶಾ| ಮದುವೆ ಪ್ರಸ್ತಾಪ ತಿರಸ್ಕರಿಸಿದ ಮಹಿಳೆ ಮೇಲೆ ಸೇಡು; ನಕಲಿ ಖಾತೆ ತೆರೆದು ಜಗನ್ನಾಥ ದೇಗುಲ ಸ್ಪೋಟಿಸುವ ಬೆದರಿಕೆ

ಮಹಿಳೆಯ ಹೆಸರಿನಲ್ಲಿ ನಕಲಿ ಸಾಮಾಜಿಕ ಮಾಧ್ಯಮ ಖಾತೆಯನ್ನು ರಚಿಸಿ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ...

ಬೈಕ್ ಟ್ಯಾಕ್ಸಿ ನಿಷೇಧ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಪರ್ಮಿಟ್ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಜನವರಿ 23 ರಂದು ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅನುಮತಿ ನೀಡಿದ್ದು, ಬೈಕ್ ಟ್ಯಾಕ್ಸಿ ಸಂಗ್ರಾಹಕರು, ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರು ಮತ್ತು ಇತರರು ಸಲ್ಲಿಸಿದ ಮೇಲ್ಮನವಿಗಳನ್ನು ಅಂಗೀಕರಿಸಿದೆ. ಮುಖ್ಯ...

ಮಧ್ಯಪ್ರದೇಶ: ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 22 ಮಂದಿ ಅಸ್ವಸ್ಥ

ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ ಕನಿಷ್ಠ 22 ಜನರು ಅಸ್ವಸ್ಥರಾಗಿದ್ದಾರೆ. ಕೆಲವೇ ವಾರಗಳ ಹಿಂದೆ ಕಲುಷಿತ ನೀರಿನಿಂದ ಹರಡುವ ರೋಗಗಳಿಂದ ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದರು....

ರಾಜ್ಯಪಾಲರ ಭಾಷಣ ಪದ್ಧತಿ ಕೊನೆಗೊಳಿಸುವ ಸಮಯ ಬಂದಿದೆ: ಮುಖ್ಯಮಂತ್ರಿ ಸ್ಟಾಲಿನ್

ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಹೆಹ್ಲೋಟ್ ಸದನವನ್ನು ಉದ್ದೇಶಿಸಿ ಸಂಪೂರ್ಣ ಸಾಂಪ್ರದಾಯಿಕ ಭಾಷಣವನ್ನು ಓದದೆ ವಿಧಾನಸಭೆಯಿಂದ ನಿರ್ಗಮಿಸಿರುವುದು ಇದೀಗ ರಾಷ್ಟ್ರಮಟ್ಟದ ಗಮನ ಸೆಳೆದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ...