Homeಮುಖಪುಟಲೋಕಸಭೆ ಚುನಾವಣೆ: ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ

ಲೋಕಸಭೆ ಚುನಾವಣೆ: ಹಾಲಿ ಬಿಜೆಪಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ

- Advertisement -
- Advertisement -

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಬಹುದು ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಲಾಗುತ್ತಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪ್ರಭಾವಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ, ಪ್ರಸ್ತುತ 25 ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರಿದ್ದಾರೆ. ಇದರಲ್ಲಿ ಬೆಂಗಳೂರು ದಕ್ಷಿಣ, ಧಾರವಾಡ, ಬೆಳಗಾವಿ ಮತ್ತು ಹಾವೇರಿ ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆಯ ಸಾಧ್ಯತೆ ಇದೆ.

ಬೆಂಗಳೂರು ದಕ್ಷಿಣಕ್ಕೆ ಸೀತಾರಾಮನ್‌? 

ಪ್ರಸ್ತುತ ಬೆಂಗಳೂರು ದಕ್ಷಿಣದಿಂದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಧಾರವಾಡದಿಂದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬೆಳಗಾವಿಯಿಂದ ಮಂಗಳಾ ಅಂಗಡಿ ಮತ್ತು ಹಾವೇರಿಯಿಂದ ಶಿವಕುಮಾರ್ ಉದಾಸಿ ಸಂಸದರಾಗಿದ್ದಾರೆ.

ವರದಿಗಳ ಪ್ರಕಾರ, ತೇಜಸ್ವಿ ಸೂರ್ಯ ಸಂಸದರಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ನಿರ್ಮಾಲಾ ಸೀತಾರಾಮನ್ ಅವರು ಪ್ರಸ್ತುತ ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರಾಗಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರದಲ್ಲಿ ಅವರ ಮನೆಯಿದೆ.

ಸೀತಾರಾಮನ್ ಮಾತ್ರವಲ್ಲದೆ, ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್‌ ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಕೂಡ ಬೆಂಗಳೂರು ದಕ್ಷಿಣದ ಪಟ್ಟಿಯಲ್ಲಿದ್ದಾರೆ. 2019ರಿಂದಲೂ ಬೆಂಗಳೂರು ದಕ್ಷಿಣದ ಟಿಕೆಟ್‌ಗೆ ತೇಜಸ್ವಿನಿ ಅಕಾಂಕ್ಷಿಯಾಗಿದ್ದಾರೆ. ಆದರೆ, ಕಳೆದ ಬಾರಿಯ ಚುನಾವಣೆಯಲ್ಲಿ ತೇಜಸ್ವಿನಿ ಬದಲು ಯುವ ನಾಯಕ ತೇಜಸ್ವಿ ಸೂರ್ಯಗೆ ಟಿಕೆಟ್‌ ದೊರೆತಿತ್ತು. ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಕಾರಣ ಎನ್ನಲಾಗಿದೆ.

2023ರ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ಬಿ.ಎಸ್ ಯಡಿಯೂರಪ್ಪ ಬಣವನ್ನು ಹೈಕಮಾಂಡ್‌ ಕಡೆಗಣಿಸಿದ ಆರೋಪ ಕೇಳಿ ಬಂದಿತ್ತು. ಅಲ್ಲದೆ, ಬಿಜೆಪಿಯ ಹಿರಿಯ ನಾಯಕರಾಗಿದ್ದ ಕೆ.ಎಸ್‌ ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷಣ ಸವದಿಗೆ ಟಿಕೆಟ್ ತಪ್ಪಿತ್ತು. ಸತತವಾಗಿ ಗೆಲ್ಲುತ್ತಾ ಬಂದಿದ್ದ ಈ ನಾಯಕರಿಗೆ ಟಿಕೆಟ್ ನೀಡದಿರಲು ಬಿ.ಎಲ್‌ ಸಂತೋಷ್ ಕಾರಣ ಎನ್ನಲಾಗಿತ್ತು.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಬಳಿಕ, ಇದಕ್ಕೆ ಬಿಎಸ್‌ವೈ ಬಣವನ್ನು ದೂರ ಇಟ್ಟಿರುವುದೇ ಕಾರಣ ಎಂದು ಅರಿತ ಹೈಕಮಾಂಡ್, ಯಡಿಯೂರಪ್ಪ ಪುತ್ರ ಶಾಸಕ ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿದೆ. ವಿಜಯೇಂದ್ರ ಬಹಳ ಚುರುಕಿನಿಂದ ರಾಜ್ಯದಲ್ಲಿ ಓಡಾಟ ನಡೆಸುತ್ತಿದ್ದು, ಅಪ್ಪ ಯಡಿಯೂರಪ್ಪ ಅವರ ಹಿಂದೆ ಬಲವಾಗಿ ನಿಂತಿದ್ದಾರೆ.

ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದು ವಿಧಾನಪರಿಷತ್‌ ಸದಸ್ಯರಾಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌ ಅವರನ್ನು ಮತ್ತೆ ಪಕ್ಷಕ್ಕೆ ಕರೆ ತಂದಿದ್ದು ಬಿಎಸ್‌ವೈ ಬಣದ ದೊಡ್ಡ ಸಾಧನೆ ಎಂದು ಬಿಬಿಂತವಾಗಿದೆ. ಹಾಗಾಗಿ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಎಸ್‌ವೈ ಬಣದ ತೀರ್ಮಾನವೇ ಅಂತಿಮವಾಗುವ ಸಾಧ್ಯತೆ ಇದೆ.

ಬಿಎಸ್‌ವೈ ಬಣಕ್ಕೆ ಮತ್ತೆ ರಾಜ್ಯ ಬಿಜೆಪಿಯ ಕಡಿವಾಣ ಸಿಕ್ಕಿರುವ ಹಿನ್ನೆಲೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಎಲ್‌ ಸಂತೋಷ್ ಬಣದ ಸಂಸದರಿಗೆ ಕೊಕ್‌ ನೀಡಬಹುದು ಎಂದು ಹೇಳಲಾಗ್ತಿದೆ. ಇದರಲ್ಲಿ ಸಂತೋಷ ಕೂಟದ ಪ್ರಲ್ಹಾದ್ ಜೋಶಿ ಇದ್ದಾರೆ ಎಂದು ಚರ್ಚೆಗಳು ನಡೆಯುತ್ತಿದೆ.

ಜೋಶಿ ಬದಲು ಯಾರು ಕಣಕ್ಕೆ?

ಪ್ರಲ್ಹಾದ್ ಜೋಶಿ ಪ್ರಸ್ತುತ ಧಾರವಾಡದ ಸಂಸದರಾಗಿದ್ದಾರೆ. ಕೇಂದ್ರದ ಸಂಸದೀಯ ಸಚಿವರಾಗಿರುವ ಅವರು, ಒಬ್ಬ ಪ್ರಭಾವಿ ರಾಜಕಾರಣಿ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಜೋಶಿ ಬದಲು ಧಾರವಾಡದಿಂದ ಬಿಎಸ್‌ವೈ ಬಣದ ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಹಾವೇರಿಯಿಂದ ಬೊಮ್ಮಾಯಿ

ಅಭ್ಯರ್ಥಿ ಬದಲಾವಣೆಯ ಸಾಧ್ಯತೆ ಇರುವ ಮತ್ತೊಂದು ಪ್ರಮುಖ ಕ್ಷೇತ್ರ ಹಾವೇರಿ. ಇಲ್ಲಿ ಪ್ರಸ್ತುತ ಶಿವಕುಮಾರ್ ಉದಾಸಿ ಸಂಸದರಾಗಿದ್ದಾರೆ. ಈ ಕ್ಷೇತ್ರದ ಟಿಕೆಟ್‌ಗಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಈ ಹಿಂದೆ ಪ್ರಯತ್ನಿಸಿದ್ದರು. ಆದರೆ, ಈ ಬಾರಿ ಸ್ವತಃ ಬಸವರಾಜ ಬೊಮ್ಮಾಯಿ ಹಾವೇರಿಯ ಟಿಕೆಟ್ ಆಕಾಂಕ್ಷಿ ಎನ್ನಲಾಗ್ತಿದೆ. ಬಸವರಾಜ ಬೊಮ್ಮಾಯಿ ಪ್ರಮುಖ ಲಿಂಗಾಯತ ನಾಯಕ ಹಾಗೂ ಬಿಎಸ್‌ವೈ ಬಣದವರು ಎಂಬುವುದು ಇಲ್ಲಿ ಗಮನಾರ್ಹ.

ಬೆಂಗಳೂರು ಸೆಂಟ್ರಲ್ ಮೇಲೆ ರಾಜೀವ್ ಕಣ್ಣು

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಕೂಡ ಈ ಬಾರಿ ಕರ್ನಾಟಕದಿಂದ ಲೋಕಸಭೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಅವರು ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ, ರಾಜೀವ್ ಚಂದ್ರಶೇಖರ್ ಕೇರಳದ ತಿರುವನಂತಪುರಂಗೆ ಹೋಗಿ ಅಲ್ಲಿಂದಲೇ ಸ್ಪರ್ಧಿಸಿ ಗೆಲ್ಲಲಿ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಹೇಳಿರುವುದಾಗಿ ದಿ ಸೌಥ್‌ ಫಸ್ಟ್‌ ವರದಿ ಮಾಡಿದೆ.

ಬೆಂಗಳೂರು ಸೆಂಟ್ರಲ್‌ನಲ್ಲಿ ಪ್ರಸ್ತುತ ಪಿ.ಸಿ ಮೋಹನ್ ಸಂಸದರಾಗಿದ್ದಾರೆ. ಹಾಗಾಗಿ, ರಾಜೀವ್ ಚಂದ್ರಶೇಖರ್ ಕೇರಳಕ್ಕೆ ಹೋಗಿ ಕಾಂಗ್ರೆಸ್ ನಾಯಕ ಶಶಿತರೂರ್ ಎದುರು ಸ್ಪರ್ಧಿಸಲಿ ಎಂಬುವುದು ಕರ್ನಾಟಕದ ಬಿಜೆಪಿ ನಾಯಕರ ಒತ್ತಾಯವಂತೆ.

ದಕ್ಷಿಣ ಕನ್ನಡ, ಬೆಳಗಾವಿಗೆ ಯಾರು?

ದಕ್ಷಿಣ ಕನ್ನಡ ಮತ್ತು ಬೆಳಗಾವಿಯಲ್ಲೂ ಹಾಲಿ ಸಂಸದರಿಗೆ ಟಿಕೆಟ್‌ ಕೈ ತಪ್ಪು ಸಾಧ್ಯತೆ ಇದೆ ಎನ್ನಲಾಗ್ತಿದೆ. ಆದರೆ, ಈ ಕ್ಷೇತ್ರಗಳಿಗೆ ಸೂಕ್ತ ಅಭ್ಯರ್ಥಿಗಳು ಬಿಜೆಪಿ ಸಿಕ್ಕಿಲ್ಲ. ದಕ್ಷಿಣ ಕನ್ನಡದ ಸಂಸದ, ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಅಸಮಧಾನ ಹೊಂದಿದ್ದಾರೆ. ಅವರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ಕೊಡಿ ಎಂಬುವುದು ಕೆಲ ಕಾರ್ಯಕರ್ತರ ವಾದ. ಹಿಂದುತ್ವ ನಾಯಕ ಅರುಣ್ ಕುಮಾರ್ ಪುತ್ತಿಲಗೆ ಈ ಬಾರಿ ಟಿಕೆಟ್ ಕೊಡಿ ಎಂಬುವುದು ಅವರ ಪುತ್ತಿಲ ಪರಿವಾರದ ಒತ್ತಾಯ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತಿಲಗೆ ಟಿಕೆಟ್ ನೀಡದ ಬಿಜೆಪಿ ಈ ಬಾರಿ ಲೋಕಭೆ ಟಿಕೆಟ್ ಕೊಡುತ್ತಾ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಬಿಜೆಪಿ ನಾಯಕರು ಮತ್ತು ಪುತ್ತಿಲ ಪರಿವಾರದ ನಡುವೆ ಒಮ್ಮತ ಮೂಡಿದಂತೆ ಕಾಣುತ್ತಿಲ್ಲ.

ಇನ್ನೂ ಬೆಳಗಾವಿಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಸಂಸದರಾಗಿದ್ದಾರೆ. ಮಂಗಳ ಅಂಗಡಿ ರಾಜಕೀಯದಲ್ಲಿ ಸಕ್ರಿಯವಾಗಿ ಗುರುತಿಸಿಕೊಳ್ಳದಿದ್ದರೂ, ಕೋವಿಡ್‌ನಿಂದ ಪತಿ ಅಗಲಿದ ಬಳಿಕ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿ ಜಯಗಳಿಸಿ ಸಂಸದರಾದವರು. ಮಂಗಳ ಅಂಗಡಿ ಬಿಜೆಪಿಯಲ್ಲಿ ರಾಜ್ಯ ಮಟ್ಟದಲ್ಲಿ ಏನೂ ಗುರುತಿಸಿಕೊಂಡಿಲ್ಲ.ಹಾಗಾಗಿ, ಮಂಗಳಾ ಬದಲಿಗೆ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಚರ್ಚಗೆಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

ನಿರ್ಮಲಾ ಸೀತಾರಾಮನ್ ಜೊತೆ ಕೇಂದ್ರ ವಿದೇಶಾಂಗ ಸಚಿವ ಎಸ್‌. ಜೈಶಂಕರ್ ಅವರೂ ಕರ್ನಾಟಕದಿಂದಲೇ ಲೋಕಸಭೆಗೆ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ರಾಜ್ಯಸಭಾ ಸದಸ್ಯರಾಗಿರುವ ಜೈಶಂಕರ್‌ಗೆ ಬೆಂಗಳೂರು ಅಥವಾ ದಕ್ಷಿಣ ಕನ್ನಡ ಟಿಕೆಟ್ ಸಿಗುವ ಸಾಧ್ಯತೆಯಿದೆ.

ಬಿಎಸ್‌ವೈ ಬಣದ ತೀರ್ಮಾನವೇ ಅಂತಿಮ

ಚರ್ಚೆಗಳು ಏನೇ ಇದ್ದರೂ, ಬಿಜೆಪಿ ಹೈಕಮಾಂಡ್ ಈ ಬಾರಿ ಯಡಿಯೂರಪ್ಪ ಬಣ ಹೇಳಿದಂತೆ ಟಿಕೆಟ್ ನಿಶ್ಚಯಿಸುವ ಸಾಧ್ಯತೆ ಇದೆ. ಏಕೆಂದರೆ, ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಬಣವನ್ನು ಕಡೆಗಣಿಸಿ ಕೈ ಸುಟ್ಟುಕೊಂಡೆವು ಎಂಬ ಭಾವನೆಯಲ್ಲಿ ಬಿಜೆಪಿ ಹೈಕಮಾಂಡ್ ಇದೆ.

ನಿರ್ಮಲಾ ಸೀತಾರಾಮನ್‌ ಅವರನ್ನು ಬೆಂಗಳೂರು ದಕ್ಷಿಣದಿಂದ ಕಣಕ್ಕಿಳಿಸುವ ವಿಷಯ ಬಿಜೆಪಿ ನಾಯಕರಿಗೆ ಅಷ್ಟೊಂದು ಸಮಧಾನ ತಂದಂತೆ ಕಾಣುತ್ತಿಲ್ಲ. ಏಕೆಂದರೆ, 2022ರಲ್ಲಿ ಸಂಸತ್‌ನ ಮೇಲ್ಮನೆಗೆ ಆಯ್ಕೆಯಾಗಿರುವ ಸೀತಾರಾಮನ್ ಅವರ ಅವಧಿ ಇನ್ನೂ ನಾಲ್ಕು ವರ್ಷ ಇದೆ. ಹಾಗಾಗಿ, ಅವರನ್ನು ಯಾಕಾಗಿ ಲೋಕಸಭೆಗೆ ನಿಲ್ಲಿಸಬೇಕು ಎಂಬುವುದು ಕೆಲ ನಾಯಕರ ಪ್ರಶ್ನೆ.

ಒಂದು ವೇಳೆ ಸೀತರಾಮನ್‌ಗೆ ಬೆಂಗಳೂರು ದಕ್ಷಿಣದ ಟಿಕೆಟ್‌ ಕೊಟ್ಟರೆ ತೇಜಸ್ವಿ ಸೂರ್ಯ ಕಥೆಯೇನು? ಧಾರವಾಡದಲ್ಲಿ ಅಭ್ಯರ್ಥಿ ಬದಲಿಸಿದರೆ ಪ್ರಲ್ಹಾದ್ ಜೋಶಿ ಯಾವ ಎಲ್ಲಿಗೆ ಹೋಗ್ತಾರೆ? ಇತ್ಯಾದಿ ಪ್ರಶ್ನೆಗಳು ಮೂಡಿದೆ. ಎಲ್ಲದಕ್ಕೂ ಮುಂದೆ ಉತ್ತರ ಸಿಗಲಿದೆ.

ಇದನ್ನೂ ಓದಿ: ಮನುಷ್ಯತ್ವದ ಎದುರು ಮಂದಿರ, ಮಸೀದಿ ನಿಲ್ಲಿಸಲಾಗುತ್ತಿದೆ: ಪತ್ರಕರ್ತ ನವೀನ್‌ ಕುಮಾರ್ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...