ಅಕ್ಕಿ, ಗೋಧಿಗೆ ಮಾತ್ರವಲ್ಲ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಬೇಕು: ರೈತರು

ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಣಿದ ನಂತರ ಸಂಭ್ರಮದಲ್ಲಿರುವ ರೈತರು, ಅಕ್ಕಿ ಮತ್ತು ಗೋಧಿಗೆ ಮಾತ್ರವಲ್ಲದೆ ಎಲ್ಲಾ ಉತ್ಪನ್ನಗಳಿಗೂ ಕನಿಷ್ಠ ಬೆಂಬಲ ಬೆಲೆಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿ ಸೋಮವಾರ (ನ.22) ಉತ್ತರ ಪ್ರದೇಶದ ಲಕ್ನೋದಲ್ಲಿ ಬೃಹತ್ ರ್‍ಯಾಲಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ಅಕ್ಟೋಬರ್‌ 3 ರಂದು ನಡೆದ ರೈತರ ಹತ್ಯಾಕಾಂಡಕ್ಕೆ ನ್ಯಾಯವನ್ನು ಕೋರಿ ಇಂದು ಲಕ್ನೋ ಕಿಸಾನ್ ಮಹಾಪಂಚಾಯತ್ ನಡೆಯುತ್ತಿದೆ. ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿಗೂ ರೈತರು ಒತ್ತಾಯಿಸಿದ್ದಾರೆ.

ಒಂದು ವರ್ಷದ ಹಿಂದೆ ರೈತರು ಪ್ರಾರಂಭಿಸಿದ ರೈತ ಹೋರಾಟ ಬಿಜೆಪಿ ಸರ್ಕಾರಕ್ಕೆ ಅತ್ಯಂತ ಗಂಭೀರವಾದ ರಾಜಕೀಯ ಸವಾಲುಗಳಲ್ಲಿ ಒಂದಾಗಿತ್ತು. ಇದರ ಪರಿಣಾಮವಾಗಿ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದಾಗಿ ಪ್ರಧಾನಿ ಮೋದಿ ಶುಕ್ರವಾರ (ನ.19) ಘೋಷಿಸಿದ್ದಾರೆ.

ಇದನ್ನೂ ಓದಿ: ಲಕ್ನೋ ಕಿಸಾನ್ ಮಹಾಪಂಚಾಯತ್: ಬಿಜೆಪಿ, ಓವೈಸಿ ವಿರುದ್ಧ ರಾಕೇಶ್ ಟಿಕಾಯತ್ ವಾಗ್ದಾಳಿ

ಪ್ರಧಾನಿ ಘೋಷಣೆ ರೈತರಲ್ಲಿ ಸಂಭ್ರಮಕ್ಕೆ ಕಾರಣವಾದರೂ ಕೂಡ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ರೈತ ನಾಯಕರು ಈ ಮೂರು ಕಾನೂನುಗಳನ್ನು ಸಂವಿಧಾನ ಬದ್ಧವಾಗಿ ವಾಪಸ್ ಪಡೆಯಬೇಕು ಮತ್ತು ತಕ್ಷಣವೇ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಲೆಗಳನ್ನು ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವ ಭರವಸೆಯನ್ನು ಸರ್ಕಾರ ನೀಡುವವರೆಗೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಎಚ್ಚರಿಸಿದ್ದಾರೆ.

ಪ್ರಸ್ತುತ, ಸರ್ಕಾರವು ಮುಖ್ಯವಾಗಿ ಅಕ್ಕಿ ಮತ್ತು ಗೋಧಿಗಯನ್ನು ಖಾತರಿಪಡಿಸಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸುತ್ತಿದೆ. ಆದರೆ ಇದು ಭಾರತದ ಲಕ್ಷಾಂತರ ರೈತರಲ್ಲಿ ಕೇವಲ 6 ರಷ್ಟು ರೈತರಿಗೆ ಮಾತ್ರ ಲಾಭ ನೀಡುತ್ತದೆ ಎಂದು ರೈತರು ಹೇಳಿದ್ದಾರೆ.

ಕಿಸಾನ್ ಮಹಾಪಂಚಾಯತ್‌ನಲ್ಲಿ ಲಖಿಂಪುರ್‌ ಖೇರಿ ಹತ್ಯಾಕಾಂಡದ ಇನ್ನೂ ಈಡೇರದ ಬೇಡಿಕೆಗಳನ್ನು ನೆನಪಿಸಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೇನಿಯನ್ನು ಜೈಲಿಗೆ ಕಳುಹಿಸುವುದು ಮತ್ತು ಆತನ ಪುತ್ರ ಆಶಿಶ್ ಮೋನು ಮಿಶ್ರಾ ನಡೆಸಿದ ದಾಳಿಯಲ್ಲಿ ಗಾಯಗೊಂಡವರಿಗೆ ಯುಪಿ ಸರ್ಕಾರ ಪರಿಹಾರ ನೀಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಾವಿರಾರು ಮಂದಿ ರೈತರು ಲಕ್ನೋದಲ್ಲಿ ರ್‍ಯಾಲಿ ನಡೆಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುತ್ತಿದೆ.


ಇದನ್ನೂ ಓದಿ: ಸಂಸತ್ತಿನಲ್ಲಿ ಕಾಯ್ದೆ ರದ್ದಾದ ನಂತರವೇ ಮುಷ್ಕರ ವಾಪಸ್: ನಾಳೆ ಲಕ್ನೋದಲ್ಲಿ ಮಹಾಪಂಚಾಯತ್

LEAVE A REPLY

Please enter your comment!
Please enter your name here