HomeUncategorizedನಮ್ಮ ವ್ಯಕ್ತಿ ಸ್ವಾತಂತ್ರ್ಯ ಸಾಮುದಾಯಿಕ ಹಿತವನ್ನು ಕಡೆಗಣಿಸಬಹುದೆ?

ನಮ್ಮ ವ್ಯಕ್ತಿ ಸ್ವಾತಂತ್ರ್ಯ ಸಾಮುದಾಯಿಕ ಹಿತವನ್ನು ಕಡೆಗಣಿಸಬಹುದೆ?

- Advertisement -
- Advertisement -

ಪ್ರತಿ ವರ್ಷದಂತೆ ಈ ವರ್ಷವೂ ಮೂಡಬಿದರೆಯ ಸಾಹುಕಾರರ ಮನೆಯ ವತಿಯಿಂದ ನಡೆಯುವ ನುಡಿಸಿರಿಗೆ ಸರ್ವಾಧ್ಯಕ್ಷರಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದಂತಹ ಪ್ರೊ. ಮಲ್ಲಿಕಾ ಎಸ್ ಘಂಟಿ ಅವರನ್ನು ಆಯ್ಕೆಮಾಡಲಾಗಿದೆ ಎಂಬ ಸುದ್ದಿ “ಇದು ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ದಕ್ಕಿದ ಗೌರವ”À ಎಂಬ ಒಕ್ಕಣೆಯೊಂದಿಗೆ ಹೊರಬಿದ್ದಿದೆ…!
ಸದರಿ ಸುದ್ದಿ ಹೊರ ಬಿದ್ದತಕ್ಷಣ ಸಾಮಾಜಿಕ ಜಾಲತಾಣದಲ್ಲಿ ಮಲ್ಲಿಕಾ ಘಂಟಿ ಅವರ ನಿರ್ಣಂiÀiದ ಪರ/ವಿರೋಧ ಚರ್ಚೆ ಆರಂಭವಾಗಿದೆ. ಪ್ರಗತಿಪರ ವಲಯದ ಸಾಕಷ್ಟು ಮಂದಿ ಮೂಲತಃ ಶೋಷಕ ಸಂಸ್ಕøತಿ ಮತ್ತು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳ ಜೊತೆ ಗುರುತಿಸಿಕೊಂಡಿರುವ ಮೂಡಬಿದರೆ ಸಾಹುಕಾರರು ನಡೆಸುವ ನುಡಿಸಿರಿಗೆ ಮಲ್ಲಿಕಾಘಂಟಿ ಅವರು ಒಪ್ಪಿಕೊಂಡದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಹಾಗೆ ವ್ಯಕ್ತಪಡಿಸಲು ಅವರಿಗಿದ್ದ ಏಕೈಕ ಮತ್ತು ಬಲವಾದ ಕಾರಣ ಮಲ್ಲಿಕಾ ಘಂಟಿ ಅವರು “ನಮ್ಮವರು ಎಂಬ ಪ್ರಜ್ಞೆ”.
ಒಂದು ಅರ್ಥದಲ್ಲಿ ಅದೂ ಸಹಜವೂ ಹೌದು. ಏಕೆಂದರೆ ಕರ್ನಾಟಕದ ಪ್ರಗತಿಪರ ಚಳವಳಿಯಲ್ಲಿ ಮಲ್ಲಿಕಾ ಘಂಟಿ ಅವರ ಹೆಸರು ಬಹಳ ಪ್ರಮುಖವಾದುದು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಇಷ್ಟಾಗಿಯೂ ಏಕೆ ಅವರು ಸಾಹುಕಾರರ ಆಹ್ವಾನ ಒಪ್ಪಿಕೊಂಡರು. .? ಅದರ ಜರೂರು ಏನಿತ್ತು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡಿದೆ. ಆದರ ಪರಿಣಾಮ ತೀರಾ ವೈಯಕ್ತಿಕ ಎನ್ನಬಹುದಾದ ಕೆಲವು ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿವೆ. ಈ ಎಲ್ಲಾ ಚರ್ಚೆಗಳ ಮಧ್ಯ ದಿವಂಗತ ಗೌರಿಲಂಕೇಶ ಅವರ ಹೆಸರಿನ ಪ್ರಸ್ತಾಪವೂ ಆಗಿಹೋಗಿದೆ.
ಅವರ ಕುರಿತು ತೀರಾ ವೈಯಕ್ತಿಕ ಎನ್ನಿಸುವ ಒಂದು ಟೀಕೆಗೆ (ಗೌರಿ ಲಂಕೇಶರು ಘಂಟಿಯವರನ್ನು ಕುಲಪತಿ ಮಾಡಲು ಪ್ರಯತ್ನಿಸಿದ್ದರು ಎಂಬ ಅಭಿಪ್ರಾಯ) ಪ್ರತಿಕ್ರಿಯಿಸಿರುವ ಮಲ್ಲಿಕಾಘಂಟಿ ಅವರು ‘ನನಗೆ ಸದರಿ ವೇದಿಕೆ ಯಾವುದು ಎಂಬ ಅರಿವಿದೆ, ಮತ್ತು ಅಲ್ಲಿ ಏನು ಮಾತನಾಡಬೇಕು ಎಂಬ ಸ್ಪಷ್ಟತೆಯಿದೆ ಈ ಹಿನ್ನೆಲೆಯಲ್ಲಿ ನಾನು ಪ್ರಗತಿಪರರ ಹೆಸರಿನ ಕೆಲವರ ದಾದಾಗಿರಿಗೆ ಹೆದರುವುದಿಲ್ಲ, ನಾನು ಹೆಣ್ಣಾಗಿ ಹುಟ್ಟಿದ್ದು, ನಮ್ಮಂತಹ ಕುಲದವರು ಆಸೆ ಪಡಬಾರದ ಕುಲಪತಿ ಹುದ್ದೆ ಏರಿದ್ದು ಕೆಲವರಿಗೆ ಸೈರಿಕೆಯಾಗುತ್ತಿಲ್ಲ, ಆ ಕಾರಣಕ್ಕೆ ನನ್ನನ್ನು ದೂಷಿಸಲಾಗುತ್ತಿದೆ…! ಆದರೆ ಬದುಕಿನುದ್ದಕ್ಕೂ ಇಂತಹ ಸಂಗತಿಗಳನ್ನು ಎದುರಿಸುತ್ತಲೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿರುವ ನನಗೆ, ವ್ಯಕ್ತಿಯಾಗಿ ಆಯ್ಕೆಯ ಹಕ್ಕಿದೆ ಅದನ್ನು ತಡೆಯಲು ನೀವು ಯಾರು? ಗೌರಿ ಹೆಸರಿನ ಕೆಲ ಕೈಗೂಲಿಗಳ ತಂತ್ರಕ್ಕೆ ನಾನು ಬಗ್ಗುವುದಿಲ್ಲ’ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಘಂಟಿ ಅವರ ವ್ಯಕ್ತಿತ್ವವನ್ನು ಬಹಳ ಹಿಂದಿನಿಂದ ಬಲ್ಲವರು ಅವರ ಇಷ್ಟು ತೀಕ್ಷ್ಣ ಪ್ರತಿಕ್ರಿಯೆಗೆ ಹೆಚ್ಚು ತಲೆ ಕೆಡಿಸಿಕೊಂಡಿಲ್ಲ. ಆದರೆ ನಮ್ಮ ಕಾಲದ ಚಳವಳಿಯನ್ನು ನಿರ್ವಹಿಸುತ್ತಿರುವ ಹೊಸ ತಲೆಮಾರಿನ ಯುವ ಮನಸ್ಸುಗಳು ಮಾತ್ರ ಅವರು ಬಳಸಿದ ಪದಗಳಿಗೆ ನೊಂದುಕೊಂಡಿದ್ದಾರೆ. ನಾವು ನಂಬಿದ ಆದರ್ಶಗಳು ಹೀಗೆ ನಮ್ಮೆದುರು ನಮ್ಮ ನಂಬಿಕೆಗೆ ವಿರುದ್ಧವಾಗಿ ನಿಂತುಬಿಡುವುದನ್ನು ನಂಬುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ…?
ಎರಡೂ ಬದಿಯಿಂದಲೂ ಸಮರ್ಥಿಸಬಹುದಾದ ಈ ಒಟ್ಟು ಚರ್ಚೆಯನ್ನು ಸಮಕಾಲೀನ ಸಂದರ್ಭದಲ್ಲಿ ಹೇಗೆ ನೋಡಬೇಕು. .? ಅದರಲ್ಲಿಯೂ ಸ್ವಾತಂತ್ರ್ಯ, ಸಮಾನತೆ ಮತ್ತು ಅಭಿವ್ಯಕ್ತಿಗಳ ಕುರಿತು ಮಾತನಾಡುವ ಪ್ರಗತಿಪರರು ಏಕೆ ಘಂಟಿ ಅವರ ಆಯ್ಕೆಯನ್ನು ವಿರೋಧಿಸಿದರು. . ? ಎಂಬುದು ಒಂದು ಕಡೆ ಆದರೆ, ದಶಕಗಳ ಕಾಲ ಪ್ರಗತಿಪರ ಹೋರಾಟದ ಭಾಗವಾಗಿದ್ದ ಘಂಟಿಯವರು ಏಕೆ ಮತ್ತು ಹೇಗೆ ಸಾಹುಕಾರರ ಸಿರಿಯ ಹಬ್ಬಕ್ಕೆ ಒಪ್ಪಿಕೊಂಡುಬಿಟ್ಟರು? ನಾನು ಹೆಣ್ಣು ಎಂಬ ಅಸ್ಮಿತೆಯನ್ನು ಮುಂದಕ್ಕೆ ತಂದ ಘಂಟಿಯವರಿಗೆ ಸಾಹುಕಾರರ ಶಿಕ್ಷಣ ಸಂಸ್ಥೆಯಲ್ಲಿ ನೇಣಿಗೆ ಕೊರಳೊಡ್ಡುತ್ತಿರುವ ಹೆಣ್ಣುಮಕ್ಕಳು ಕಾಣಲಿಲ್ಲವೇ? ಎಂಬ ಸೂಕ್ಷ್ಮ ಪ್ರಶ್ನೆಗಳು ನಮ್ಮೆದುರು ಬಂದು ನಿಲ್ಲುತ್ತವೆ. ಈ ಪ್ರಶ್ನೆಗಳಿಗೆ ಹೇಗೆ ಉತ್ತರ ಕಂಡುಕೊಳ್ಳಬೇಕು ಎಂಬ ಅಲೋಚನೆಗೆ ತುಸು ಸಮರ್ಥನೀಯ ಎಂಬ ಉತ್ತರ ದೊರಕಿದ್ದು ನಾನೇ ಬೋಧಿಸುವ ರಾಜ್ಯಶಾಸ್ತ್ರದ ಚರ್ಚೆಯೊಂದರ ಭಾಗವಾಗಿ.
ಈ ಸಂದರ್ಭದಲ್ಲಿ ಪ್ರಸಿದ್ಧ ರಾಜ್ಯಶಾಸ್ತ್ರ ಚಿಂತಕಿ ಹೆನ್ನಾ ಅರೆಂಟ್ ಅವರು “ರಾಜಕೀಯ ವ್ಯವಸ್ಥೆಯಲ್ಲಿ ವ್ಯಕ್ತಿಯ ಮೌಲ್ಯ ನಿರ್ಣಯದ” ಕುರಿತು ನೀಡಿದ ವಿವರಣೆ ಮಹತ್ವದ್ದು ಎನ್ನಿಸುತ್ತಿದೆ. ಆಕೆಯ ಪ್ರಕಾರ “ಪ್ರತಿಯೊಂದು ಜೀವಿಗೂ ತನ್ನದೇ ಆದ ಇಚ್ಛೆ/ಆಯ್ಕೆ ಎಂಬುದು ಇರುತ್ತದೆ. ವಾಸ್ತವದಲ್ಲಿ ಈ ಅಂಶ ಮಾತ್ರವೇ ಜೀವಿ ಮತ್ತು ಶವದ ನಡುವೆ ವ್ಯತ್ಯಾಸಕ್ಕೆ ಕಾರಣವಾಗಿದೆ. ಆದರೆ ಒಂದು ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ ಸಂಘಜೀವನ ನಡೆಸುತ್ತಿರುವ ವ್ಯಕ್ತಿಗೆ (ಮನುಷ್ಯನಿಗೆ) ವ್ಯವಸ್ಥೆಯ ಭಾಗವಾಗಿರುವ ಜನರ ಒಳಿತಿನ ಕಾರಣಕ್ಕೆ ತನ್ನ ವೈಯಕ್ತಿಕ ಇಚ್ಛೆ/ಸ್ವಾತಂತ್ರ್ಯಕ್ಕೆ ಕೆಲವು ನಿರ್ಬಂಧÀಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಇದನ್ನು ನಾವು ನೈತಿಕತೆ ಮತ್ತು ಸ್ವಾತಂತ್ರ್ಯದ ಕುರಿತ ಕಾನೂನು ಎನ್ನುತ್ತೇವೆ. ಸಮಾಜವೊಂದು ವ್ಯಕ್ತಿಯ ವೈಯಕ್ತಿಕ ಆಯ್ಕೆಯ ಸ್ವಾತಂತ್ರ್ಯವನ್ನು ಪ್ರಭಾವಿಸುವ ಈ ಅಂಶ ಆಕೆಯ/ಆತನ ಸ್ವಾತಂತ್ರದ ಹರಣ ಎನ್ನಲಾಗದು. . ! ಬದಲಾಗಿ ಆಕೆ/ಆತನಿಗೆ ಇರುವ ಸ್ವಾತಂತ್ರ್ಯವನ್ನು ಸಾಮುದಾಯಿಕ ಹಿತಕ್ಕಾಗಿ ಸ್ವತಃ ಸಮುದಾಯವೇ ಕ್ರಮಬದ್ಧಗೊಳಿಸುವಂತೆ ಕೋರುವ ಸಹಜ ವಿಧಾನವಾಗಿದೆ ಎನ್ನುವ ಅರ್ಥದಲ್ಲಿ ಗ್ರಹಿಸಬೇಕಿದೆ.
ಈ ವಾದದ ಹಿನ್ನೆಲೆಯಲ್ಲಿ ಮಲ್ಲಿಕಾಘಂಟಿ ಅವರ ನಿರ್ಣಯವನ್ನು ವಿರೋಧಿಸಿದ ಕನ್ನಡದ ಸಾರ್ವಜನಿಕ ಒತ್ತಡದ ಕಾಳಜಿಗೆ ಘಂಟಿಯವರ ವ್ಯಕ್ತಿಗತ ಸ್ವಾತಂತ್ರ್ಯದ ಹರಣ ಮಾಡಬೇಕು, ಅವರು ಅಭಿವ್ಯಕ್ತಿಯ ಹಕ್ಕನ್ನು ಪ್ರಶ್ನಿಸಬೇಕು ಎಂಬ ಉದ್ದೇಶ ಖಂಡಿತ ಇರಲಿಕ್ಕಿಲ್ಲ. ಬದಲಾಗಿ ಒಂದು ಶೋಷಕ ವ್ಯವಸ್ಥೆಯನ್ನು ಎದುರಿಸುವ ಚಳವಳಿಯ ಭಾಗವಾಗಿ ನಿಮ್ಮ ವ್ಯಕ್ತಿಗತ ಆಯ್ಕೆಯನ್ನು/ಸ್ವಾತಂತ್ರ್ಯವನ್ನು ವ್ಯವಸ್ಥಿತಗೊಳಿಸಿಕೊಳ್ಳಿ/ಕ್ರಮಬದ್ಧಗೊಳಿಸಿಕೊಳ್ಳಿ. ಆ ಆಯ್ಕೆ ನಿಮ್ಮನ್ನು ಹೆಚ್ಚು ಸಮಾಜಜೀವಿಯಾಗಿ ಉಳಿಸುತ್ತದೆ ಮತ್ತು ಈ ಮಾದರಿಯ ನಿರ್ಣಯಗಳು ಮಾರುಕಟ್ಟೆ ಮತ್ತು ಧಾರ್ಮಿಕ ಮೂಲಭೂತವಾದಗಳು ಸೇರಿಕೊಂಡು ಮನುಷ್ಯನ ಕನಿಷ್ಟ ಅವಶ್ಯಕತೆಗಳಾದ ಶಿಕ್ಷಣ, ಆರೋಗ್ಯ, ಆಹಾರದ ಹಕ್ಕನ್ನು ವ್ಯಾಪಾರವಾಗಿಸಿ ಸಾಮುದಾಯಿಕ ಬದುಕುಗಳನ್ನು ಅಪಾಯಕ್ಕೆ ಸಿಲುಕಿಸಿರುವ ಈ ಹೊತ್ತಿನಲ್ಲಿ ಬಹಳ ಮಹತ್ವದ್ದು ಎಂಬ ಗೌರವದಿಂದ ಕೂಡಿದ ಸಾತ್ವಿಕ ಒತ್ತಾಯದ ಭಾಗವಾಗಿವೆ ಎಂದೆನ್ನಿಸುತ್ತದೆ. ಮಲ್ಲಿಕಾಘಂಟಿ ಅವರೂ ಈ ವಿರೋಧವನ್ನು ಹೀಗೆಯೇ ನೋಡಬೇಕಿದೆ. ಆದರೆ, ಘಂಟಿಯವರು ಹೀಗೆ ತಮ್ಮನ್ನು ವಿರೋಧಿಸಿದ ಹಲವರನ್ನು ‘ಗೌರಿ ಹೆಸರನ್ನು ಹೇಳಿಕೊಂಡು ಅಸ್ತಿತ್ವದಲ್ಲಿರುವ ಕೆಲ ಕೈಗೂಲಿಗಳು’ ಎಂದು ಕರೆದಿದ್ದಾರೆ. ನನ್ನಂಥ ಅನೇಕರು ಹುಟ್ಟುವುದಕ್ಕಿಂತಲೂ ಮೊದಲೇ ಎಡಪಂಥೀಯ ಚಳವಳಿಗಳಲ್ಲಿ ತೊಡಗಿಕೊಂಡಿದ್ದ ಘಂಟಿಯವರು ತಮ್ಮನ್ನು ಸಕಾರಣವಾಗಿ ವಿರೋಧಿಸಿದವರನ್ನು ‘ಕೂಲಿಗಳು’ ಎಂದು ಕರೆದಿರುವುದು ಶೋಚನೀಯ. ‘ಕೂಲಿಗಳು’ ಎಂದು ಹಂಗಿಸಿ ಮಾತಾಡುವುದು ಕೂಲಿ ಕೊಡುವ ಧಣಿಗಳೇ ಹೊರತು, ಘಂಟಿಯವರಿಗೆ ಈ ಮಾತು ಶೋಭೆಯಲ್ಲ ಎಂಬುದು ನಮ್ಮ ತಲೆಮಾರಿನ ಗ್ರಹಿಕೆ.
ಆದರಂತೆಯೇ ಘಂಟಿಯವರ ನಿರ್ಣಯವನ್ನು ವ್ಯಾಪಕವಾಗಿ ವಿರೋಧಿಸಿದ ಮನಸ್ಸುಗಳು ನಮ್ಮ ಕಾಲದಲ್ಲಿ “ವಿರೋಧ ಮತ್ತು ವಿಮರ್ಶೆಗಳ” ನಡುವಿನ ತೆಳುವಾದ ಗೆರೆಯನ್ನು ಗಮನಿಸುವ ಸೂಕ್ಷ್ಮತೆಯನ್ನು ಮೈಗೂಡಿಸಿಕೊಳ್ಳಬೇಕಿದೆ. ಈ ಸೂಕ್ಷ್ಮತೆ ಇಲ್ಲದೆ ಹೋದರೆ ಖಂಡಿತ ಚಳವಳಿಗಳು ವಿಘಟನೆಗೊಳ್ಳುತ್ತವೆ. ಈಗಾಗಲೇ ಕನ್ನಡದ ಸಾಂಸ್ಕøತಿಕಲೋಕ ಗುಣಾತ್ಮಕ ಸಂವಾದಗಳ ಕೊರತೆಯ ಕಾರಣಕ್ಕೆ ಸಾಕಷ್ಟು ಕಳೆದುಕೊಂಡಿದೆ. ಈ ಕಾರಣಕ್ಕೆ ಪ್ರಗತಿಪರ ಮನಸ್ಸುಗಳ ನಡುವಿನ ಸಾತ್ವಿಕ ಮತ್ತು ತಾತ್ವಿಕ ಸಿಟ್ಟು/ಸೆಡವು/ವಿಮರ್ಶೆಗಳನ್ನು ದ್ವೇಷ/ಅಸೂಯೆಗಳ ಮಾದರಿಯಲ್ಲಿ ಬಿಂಬಿಸುವ ದೊಡ್ಡ ಶಕ್ತಿಗಳು ಇಂದು ಯಶಸ್ಸು ಸಾಧಿಸುತ್ತಿವೆ ಮತ್ತು ಈ ಪ್ರಕರಣದಲ್ಲಿ ಅದು ಇನ್ನೂ ನಿಚ್ಚಳವಾಗಿ ಕಾಣುತ್ತಿದೆ.
ಅಂತಿಮವಾಗಿ ಇಂದು ಚರ್ಚೆಗಳು/ಸಂವಾದಗಳು ನಡೆಯಬೇಕಿರುವುದು ನಮ್ಮಗಳ ನಡುವೆಯೇ ಹೊರತು ಬೇರೆಯವರೊಟ್ಟಿಗೆ ಅಲ್ಲ. ಏಕೆಂದರೆ ಸಾಹುಕಾರರಿಗೆ ತಮ್ಮ ನಿಲುವು ಮತ್ತು ಕ್ರಿಯೆಯ ಸ್ಪಷ್ಟ ಅರಿವಿದೆ. ಆದರ ಕೊರತೆ ಇರುವುದು ನಮಗೆ…!
ಇಂದು ನಾವು ಅವರ ವೇದಿಕೆಯಲ್ಲಿ ನಿಂತು ಮಾತನಾಡಿ ಅವರನ್ನು ಬದಲಿಸುತ್ತೇವೆ ಎನ್ನುವವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಸಾಕಷ್ಟು ಬಾರಿ ಉಡುಪಿಗೆ ಭೇಟಿ ನೀಡಿದ್ದರೂ, ಏಕೆ ಉಡುಪಿ ಮಠಕ್ಕೆ ಭೇಟಿ ನೀಡಿ ಮಠದವರ ಗ್ರಹಿಕೆಯನ್ನು ಬದಲಿಸಲು ಪ್ರಯತ್ನಿಸಲಿಲ್ಲ..? ಎಂಬ ಪ್ರಶ್ನೆ ಕೇಳಿಕೊಳ್ಳಬೇಕು. ಉತ್ತರ ಸರಳ. ಏಕೆಂದರೆ ಅವರಿಗೆ ತಾನು ಸಂವಾದಿಸಬೇಕಿರುವುದು ಯಾರೊಂದಿಗೆ ಎಂಬ ಕುರಿತು ಸ್ಪಷ್ಟ ಗ್ರಹಿಕೆ ಮತ್ತು ಬದ್ಧತೆ ಇತ್ತು. ಒಬ್ಬ ರಾಜಕಾರಣಿಗೆ ಇರುವ ಸೂಕ್ಷ್ಮತೆಯನ್ನು ವಿದ್ವಾಂಸರಿಂದ ಇಂದಿನ ತಲೆಮಾರಿನ ಯುವಜನತೆ ಬಯಸುವುದು ತಪ್ಪಲ್ಲ ಅನ್ನಿಸುತ್ತದೆ.
ಇಷ್ಟಾಗಿಯೂ ‘ನನ್ನ ಭಾಷಣ ಆ ಮನುಷ್ಯರನ್ನು ಬದಲಿಸಿಬಿಡುತ್ತದೆ’ ಎಂಬ ಅತಿ ಆತ್ಮವಿಶ್ವಾಸದಿಂದ ಯಾರಾದರೂ ಮಾತನಾಡಿದರೆ ಅವರಿಗೆ ಶುಭ ಕೋರೋಣ. ಅಂಥಾ ಭಾಷಣದ ಪರಿಣಾಮವಾಗಿ ಸಾಹುಕಾರರ ಶಿಕ್ಷಣ ಸಂಸ್ಥೆಯಲ್ಲಿ ದೀನದಲಿತರಿಗೆ ಉಚಿತ ಶಿಕ್ಷಣ, ಶಿಕ್ಷಕರಿಗೆ ಸಿಬ್ಬಂದಿಗೆ ನಿಯಮಬದ್ಧ ವೇತನ, ಸತ್ತ ಮಕ್ಕಳ ಕುಟುಂಬಗಳಿಗೆ ಸಾಂತ್ವನ ದೊರಕಲಿ ಎಂದು ಆಶಿಸೋಣ.

– ಕಿರಣ್ ಗಾಜನೂರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...