Homeಮುಖಪುಟಮರಾಠ ಮೀಸಲಾತಿಗಾಗಿ ತೀವ್ರಗೊಂಡ ಪ್ರತಿಭಟನೆ: ಹೆದ್ದಾರಿ ತಡೆ, ಪಂಚಾಯತ್ ಕಚೇರಿಗೆ ಬೆಂಕಿ

ಮರಾಠ ಮೀಸಲಾತಿಗಾಗಿ ತೀವ್ರಗೊಂಡ ಪ್ರತಿಭಟನೆ: ಹೆದ್ದಾರಿ ತಡೆ, ಪಂಚಾಯತ್ ಕಚೇರಿಗೆ ಬೆಂಕಿ

- Advertisement -
- Advertisement -

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗೆ ಆಗ್ರಹಿಸಿ ಮಂಗಳವಾರ ಮಧ್ಯಾಹ್ನ ಎರಡು ಗಂಟೆಗಳ ಕಾಲ ಮುಂಬೈ-ಬೆಂಗಳೂರು ಹೆದ್ದಾರಿ ತಡೆ ನಡೆಸಿ ಮರಾಠ ಸಮುದಾಯದವರು ಪ್ರತಿಭಟನೆಗಳನ್ನು ನಡೆಸಿದ್ದು, ಘನ್ಸವಂಗಿ ಎಂಬಲ್ಲಿ ಪ್ರತಿಭಟನಾಕಾರರ ಗುಂಪು ಪಂಚಾಯತ್‌ ಸಮಿತಿ ಕಚೇರಿಗೆ ಬೆಂಕಿ ಹಚ್ಚಿದೆ.

ಮಹಾರಾಷ್ಟ್ರದ ಪುಣೆ ನಗರದ ನವಲೆ ಸೇತುವೆ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿಭಟನಾಕಾರರು ಟೈರ್‌ಗಳನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರತಿಭಟನೆ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು.

ಮರಾಠ ಕ್ರಾಂತಿ ಮೋರ್ಚಾದ ಕಾರ್ಯಕರ್ತರ ಗುಂಪೊಂದು ಸೋಲಾಪುರದಲ್ಲಿ ರೈಲ್ವೇ ಹಳಿಯಲ್ಲಿ ಪ್ರತಿಭಟನೆ ನಡೆಸಿದೆ. ರೈಲು ಹಳಿಗಳಲ್ಲಿ ಕೇಸರಿ ಧ್ವಜ ಹಿಡಿದ ಪ್ರತಿಭಟನಾಕಾರರು ಟೈರುಗಳಿಗೆ ಬೆಂಕಿ ಹಚ್ಚುತ್ತಿರುವುದೂ ಕಂಡು ಬಂತು. ರೈಲ್ವೆ ಮತ್ತು ಸೋಲಾಪುರ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಒಬಿಸಿ ವರ್ಗದ ಅಡಿಯಲ್ಲಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ಕೋರಿ ಮರಾಠ ಸಮುದಾಯವು ಪ್ರತಿಭಟನೆಗಳನ್ನು ನಡೆಸುತ್ತಿದೆ. ಮರಾಠ ನಾಯಕ ಮನೋಜ್ ಜಾರಂಗೆ ಅ.25 ರಂದು ಎರಡನೇ ಹಂತದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ಆಂದೋಲನವು ತೀವ್ರಗೊಂಡಿತ್ತು.

ಸೋಮವಾರ ರಾಜ್ಯದ ಕೆಲವು ಭಾಗಗಳಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದವು. ಮೀಸಲಾತಿ ಪರ ಪ್ರತಿಭಟನಾಕಾರರು ಶಾಸಕರ ಮನೆಗಳ ಅಥವಾ ಕಚೇರಿಗಳನ್ನು ಧ್ವಂಸಗೊಳಿಸಿದ್ದರು. ಇಬ್ಬರು ಎನ್‌ಸಿಪಿ ಶಾಸಕರ ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಿಜೆಪಿಯ ಶಾಸಕರೋರ್ವರ ಕಚೇರಿಯನ್ನು ಧ್ವಂಸಗೊಳಿಸಲಾಗಿದೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಘನ್ಸವಂಗಿ ಎಂಬಲ್ಲಿ ಪ್ರತಿಭಟನಾಕಾರರ ಒಂದು ಗುಂಪು ಪಂಚಾಯತ್‌ ಸಮಿತಿ ಕಚೇರಿಗೆ ಬೆಂಕಿ ಹಚ್ಚಿದೆ. ಪ್ರತಿಭಟನಾಕಾರರು ಏಕ್‌ ಮರಾಠ ಲಾಖ್‌ ಮರಾಠ ಎಂಬ ಘೋಷಣೆಗಳನ್ನೂ ಕೂಗುತ್ತಿದ್ದರು. ಬೆಂಕಿಯಿಂದಾಗಿ ಕಚೇರಿಯ ಪೀಠೋಪಕರಣಗಳು ಮತ್ತು ಕೆಲ ಪ್ರಮುಖ ದಾಖಲೆಗಳು ಹಾನಿಗೀಡಾಗಿವೆ.

ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಹಿಂಸಾತ್ಮಕ ಘಟನೆಯನ್ನು ಬೆಂಬಲಿಸಲು ಸಾಧ್ಯವಿಲ್ಲ ಮತ್ತು ಮರಾಠರಿಗೆ ಮೀಸಲಾತಿ ನೀಡುವಲ್ಲಿ ಸರ್ಕಾರವು ಬದ್ಧವಾಗಿದೆ. ಇಂದು ಕೂಡ ಅದಕ್ಕೆ ಸಂಬಂಧಿಸಿದಂತೆ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕೆಲವರು ಹಿಂಸಾಚಾರವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅದನ್ನು ಸಹಿಸಲಾಗುವುದಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಹೇಳಿದ್ದಾರೆ.

ಇದನ್ನು ಓದಿ: ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪೊಲೀಸ್‌ ಅಧಿಕಾರಿಯ ಹತ್ಯೆ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...