ಜರ್ಮನಿಯಿಂದ ವಿಲಿಯಂ ಡಿಸಿಲ್ವಾ ಬರುವವರೆಗೆ… ಜನವಾಹಿನಿ ನೆನಪುಗಳು..

ಜನವಾಹಿನಿ ನೆನಪು : ಭಾಗ-4

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ 

ನಮಗೆ ಭಯಹುಟ್ಟಿಸಿದ್ದ ಇನ್ನೊಂದು ವಿಷಯವೆಂದರೆ ಇದು ಕ್ರೈಸ್ತರ ಪತ್ರಿಕೆಯೆಂದು ಮೊದಲೇ ಅಪಪ್ರಚಾರ ನಡೆಯುತ್ತಿದೆ! ಇಲ್ಲಿ ನೋಡಿದರೆ ಕ್ರೈಸ್ತರ ಬಂಡವಾಳವೇ ಗಣನೀಯವಾಗಿದೆ. ಅವರು ಎಲ್ಲಾ ಬಂಡವಾಳಗಾರರಿಗೆ ಸಹಜವಾಗಿರುವಂತೆ ಈ ಪತ್ರಿಕೆಯು ಕ್ರೈಸ್ತರ ಧಾರ್ಮಿಕ, ಸಾಮಾಜಿಕ, ಆರ್ಥಿಕ, ವ್ಯಾವಹಾರಿಕ, ಸಾಂಸ್ಕೃತಿಕ, ರಾಜಕೀಯ ಹಿತಾಸಕ್ತಿಗಳನ್ನು ಮಾತ್ರ ಪೋಷಿಸಬೇಕು ಎಂದು ಬಯಸಿದರೆ ನಮ್ಮ ಜಾತ್ಯಾತೀತ ನಿಲುವಿನ ಗತಿಯೇನು?

ನಮ್ಮಲ್ಲಿನ ಒಂದು ಕಟು ಸತ್ಯ ನೋಡಿ! ದೇಶದ ಬಹುತೇಕ ಮಾಧ್ಯಮಗಳಲ್ಲಿ ಒಂದು ಧರ್ಮವಾಗಿ ಹಿಂದೂಗಳ ಮತ್ತು ನಿರ್ದಿಷ್ಟ ಜಾತಿಗಳ ಬಂಡವಾಳವೇ ಹೆಚ್ಚಿದೆ. ಪತ್ರಕರ್ತರಲ್ಲೂ ಕೆಲವೇ ಜಾತಿಗಳ ಪೌರೋಹಿತ್ಯವೇ ಇದೆ. ದಲಿತರಿಗೆ, ದಮನಿತರಿಗೆ ಬಡವರಿಗೆ ಇಲ್ಲಿ ಸ್ಥಾನ, ಸ್ಥಳಾವಕಾಶಗಳು ಕಡಿಮೆ. ಆದರೆ, ಅವುಗಳಲ್ಲಿ ಉಳಿದ ಸಮುದಾಯಗಳ ಸುದ್ದಿಗಳೂ ಬರುತ್ತವೆ. ಅವುಗಳಲ್ಲಿ ಹೆಚ್ಚಿನವು ಯಾರ ಹಿತಾಸಕ್ತಿಗಳನ್ನು ಪೋಷಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಆದರೂ, ಅವುಗಳನ್ನೂ ಯಾರೂ ಹಿಂದೂಗಳ ಪತ್ರಿಕೆ, ನಿರ್ದಿಷ್ಟ ಜಾತಿಯ ಪತ್ರಿಕೆ ಎಂದು ಕರೆಯುವುದಿಲ್ಲ! ಹಲವಾರು ಪ್ರಸಿದ್ಧ ಇಂಗ್ಲೀಷ್ ಪತ್ರಿಕೆಗಳಲ್ಲಿ ಜೈನ ಮಾರ್ವಾಡಿಗಳ ಒಡೆತನ ಇದೆ. ಅದರೂ ಯಾರೂ ಅವುಗಳನ್ನು ಜೈನ ಮಾರ್ವಾಡಿಗಳ ಪತ್ರಿಕೆ ಎಂದು ಕರೆಯುವುದಿಲ್ಲ. ಆದರೆ, ಕ್ರೈಸ್ತರ, ಮುಸ್ಲಿಮರ ಬಂಡವಾಳ ಹೆಚ್ಚಿದ್ದರೆ ಮಾತ್ರ ಅದು ಅವರ ಪತ್ರಿಕೆ, ಇವರ ಪತ್ರಿಕೆ ಎಂಬ ಲೇಬಲ್ ಅಂಟಿಸಲಾಗುತ್ತದೆ! ಯಾಕೆ ಹೀಗೆ? ಅವು ಕೂಡಾ ಜಾತ್ಯತೀತ ಪತ್ರಿಕೆಗಳಾಗಲು ಸಾಧ್ಯವಿಲ್ಲವೆ? ಇದೇ ಚಿಂತನೆ ನಮಗೆ ಧೈರ್ಯ ನೀಡಿತ್ತು.

ಅದಕ್ಕಿಂತ ಹೆಚ್ವು ಧೈರ್ಯ ನೀಡಿದ್ದು ಸ್ಯಾಮ್ಯುಯೆಲ್ ಸಿಕ್ವೇರಾ ಅವರ ಭರವಸೆ. ಅಸಾಧಾರಣ ಬುದ್ಧಿಮತ್ತೆ, ಪಾದ್ರಿಯ ಗಾಂಭೀರ್ಯ, ವಯೋಸಹಜ ಹುಡುಗುಬುದ್ಧಿ ಎಲ್ಲವೂ ಇದ್ದ ಅವರು ನಮಗೆ ಹೇಳಿದ್ದೆಂದರೆ, ಸಂಪಾದಕೀಯದಲ್ಲಿ ಆಡಳಿತವರ್ಗದ ಹಸ್ತಕ್ಷೇಪ ಇರುವುದಿಲ್ಲ. ಸಂಪಾದಕೀಯ ನಿರ್ಧಾರ ಅಂತಿಮ. ಈ ನಿರ್ಧಾರ ಪತ್ರಿಕೆಯ ಘೋಷಿತ, ಸ್ಪಷ್ಟ  ಧೋರಣೆಗಳಿಗೆ ಅನುಗುಣವಾಗಿರುತ್ತದೆ. ಪತ್ರಿಕೆಯ ವಿಷಯದಲ್ಲಿ ಜಾತ್ಯತೀತತೆಯೇ ಮುಖ್ಯ. ನಮಗೆ ಸಂವಿಧಾದ ತತ್ವಗಳೇ ಪರಮ ಧರ್ಮ!

ನಮಗೆ ಇನ್ನೊಂದು ಭಯವಿತ್ತು. ಹಿಂದಿನ ದಿನಗಳಲ್ಲಿ ಪತ್ರಿಕೆಯ ಸಂಪಾದಕರೇ ಪತ್ರಕರ್ತರ ಪರಮನಾಯಕರು! ಪತ್ರಿಕಾಧರ್ಮ, ಸಂಪಾದಕೀಯ ಸ್ವಾತಂತ್ರ್ಯದ ರಕ್ಷಕರು. ಉಳಿದ ಪತ್ರಕರ್ತರು ಅವರಿಗೆ ಮಾತ್ರ ಉತ್ತರದಾಯಿಗಳು. ಆಡಳಿತ ಮಂಡಳಿಯವರು ನೇರವಾಗಿ ಮೂಗು ತೂರಿಸುವಂತಿರಲಿಲ್ಲ. ಸಂಘರ್ಷದ ಸಂದರ್ಭದಲ್ಲಿ ಅವರು ರಕ್ಷಣೆಗೆ ಬರುತ್ತಿದ್ದರು. ತೀರಾ ಭಿನ್ನಾಭಿಪ್ರಾಯ ಇದ್ದರೆ, ರಾಜೀನಾಮೆ ಎಸೆದು ಹೊರನಡೆಯುತ್ತಿದ್ದರು. ಅವರ ನಿಷ್ಟರು ಅವರನ್ನು ಹಿಂಬಾಲಿಸುತ್ತಿದ್ದರು.

‘ಮುಂಗಾರು’ ಪತ್ರಿಕೆಯ ಸ್ಥಾಪಕರು, ಮತ್ತು ಸಂಪಾದಕರೂ ಆಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿಯವರೂ ಹಾಗೆಯೇ ಮಾಡಿದವರು. ನಂತರ ಬಂದಿದ್ದ ವೈ.ಎಂ. ಹೆಗ್ಡೆಯವರು ಅದೇ ಜಾಯಮಾನದವರು. ಒಂದು ಸಲ ಅಲ್ಲಿ ನಮಗೆ ಕೊಡುತ್ತಿದ್ದ ಜುಜುಬಿ ಸಂಬಳವನ್ನೂ ಕೆಲದಿನಗಳವರೆಗೆ ಕೊಡದೇ ನಾವು ಕಂಗಾಲಾಗಿದ್ದೆವು. ಒಂದು ದಿನ ಕೆಂಡಾಮಂಡಲವಾಗಿ ಬೇಗನೇ ಕಚೇರಿಗೆ ಬಂದ ಅವರು, ಎಲ್ಲರೂ ಪೆನ್ನು ಕೆಳಗಿಡಿ; ಮಧ್ಯಾಹ್ನದೊಳಗೆ ಸಂಬಳ ಬರದಿದ್ದರೆ ಕೆಲಸ ಆರಂಭಿಸಬೇಡಿ ಎಂದರು. ಮಧ್ಯಾಹ್ನದೊಳಗೆ ಅರ್ಧ ಸಂಬಳ ಬಂದಿತ್ತು- ಕೂಡಲೇ ಬಾಕಿ ಕೊಡುವ ಭರವಸೆಯೊಂದಿಗೆ. ‘ಜನವಾಹಿನಿ’ ಪತ್ರಿಕೆಯ ಆರಂಭಕಾಲಕ್ಕೆ ಈ ಪರಂಪರೆ ಇಲ್ಲವಾಗಿ ಎಲ್ಲಾ ಪತ್ರಿಕೆಗಳಲ್ಲಿ ಕೈಗೊಂಬೆ ಸಂಪಾದಕರ ಮೂಲಕ ಬಹುತೇಕ ಅಡಳಿತ ವರ್ಗದ ಕಾರುಬಾರೇ ನಡೆಯುತ್ತಿತ್ತು.

ನಮಗೆ ಒಬ್ಬರು ಗಟ್ಟಿ ಸಂಪಾದಕರು ಬೇಕಾಗಿದ್ದರು. ನಮಗೆ ಸಿಕ್ಕಿದವರು ಬಾಲಕೃಷ್ಣ ಗಟ್ಟಿ! ಹಿಂದೆ ಹೇಳಿರುವಂತೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ಹಲವು ವರ್ಷಗಳ ಕಾಲ ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರರಾಗಿದ್ದವರು. ನಂತರ, ನೇತ್ರಾವತಿ ವಾರ್ತೆ ಎಂಬ ಪತ್ರಿಕೆ ಆರಂಭಿಸಿ ಕೈಸುಟ್ಟುಕೊಂಡವರು. ದಿನಪತ್ರಿಕೆಯ ದೈನಂದಿನ ಪ್ರಕ್ರಿಯೆಗಳ ಬಗ್ಗೆ ಅಂತಹ ಅನುಭವ ಇಲ್ಲದವರು. ಆದರೆ, ಸಮಾಜವಾದಿ ಒಲವುಳ್ಳ ಪ್ರಗತಿಪರರು. ವ್ಯಕ್ತಿಯಾಗಿ ಗೌರವಾರ್ಹರಾಗಿದ್ದವರು. ಗಟ್ಟಿಮುಟ್ಟು ದೇಹಕ್ಕೆ ವ್ಯತಿರಿಕ್ತವಾಗಿ ಮೃದು ಸ್ವಭಾವದವರು. ಸಿಟ್ಟುಬಂದರೆ ಗಟ್ಟಿಯಾಗಿ ಗದರಿಸಬಲ್ಲವರು. ನಾನು ಅದೇ ಕಾಲೇಜಿನಲ್ಲಿ ವಿಜ್ಞಾನದ ವಿದ್ಯಾರ್ಥಿ ಆಗಿದ್ದರೂ, ಅವರಿಗೆ ಪ್ರೀತಿಪಾತ್ರನಾಗಿದ್ದೆ. ಅದರೆ ಇವರು ಮುಂದಕ್ಕೆ ಬರಬಹುದಾದ ಒತ್ತಡಗಳನ್ನು ಗಟ್ಟಿಯಾಗಿ ಎದುರಿಸಬಹುದೆ? ಮುಂದೆ ಕಾಲವೇ ಇದಕ್ಕೆ ಉತ್ತರ ನೀಡಿತು. ಅದನ್ನೂ ಮುಂದಕ್ಕೆ ನೋಡೋಣ.

‘ಜನವಾಹಿನಿ’ ಪತ್ರಿಕೆಯ ಅಭೂತಪೂರ್ವ ಮತ್ತು ತ್ವರಿತಗತಿಯ ಬೆಳವಣಿಗೆಗೆ ಮುಖ್ಯ ಕಾರಣವೆಂದರೆ ನಾವು ಮಾಡಿಕೊಂಡಿದ್ದ ಸಿದ್ಧತೆಗಳು. ಜನರ ನಾಡಿ ಮಿಡಿತ ತಿಳಿಯಲು ಒಂದು ಸರ್ವೇ ಏರ್ಪಡಿಸಲಾಗಿತ್ತು. ನಾವೆಲ್ಲಾ ಬರುವ ಮೊದಲೇ ಅದನ್ನು ಹಿರಿಯ ಗೆಳೆಯ ಕಿಶೋರ್ ಅತ್ತಾವರ ಅವರ ಸಮಾಜಸೇವಾ ಸಂಸ್ಥೆಗೆ ವಹಿಸಲಾಗಿತ್ತು. ನಾವು ಆಗಾಗ ಅವರ ಕಚೇರಿಗೆ ಹೋಗಿ ಚರ್ಚಿಸುತ್ತಿದ್ದೆವು. ಅವರೂ ಬರುತ್ತಿದ್ದರು. ಅವರ ವರದಿ ಮುಂದೆ ನಮಗೆ ಜನರ ನಾಡಿ ತಿಳಿಯಲು ಅನುಕೂಲವಾಯಿತು.

ನಮ್ಮ ಬಳಿ ಸ್ಯಾಂಪಲ್ ಪತ್ರಿಕೆ ಇದ್ದುದರಿಂದ ನಾವು ಜಾಹೀರಾತು, ಪ್ರಸರಣ ಮತ್ತು ಸಂಪಾದಕೀಯ ವಿಭಾಗದವರು ಒಂದು ಪೂರ್ವಭಾವಿ ಜನಸಂಪರ್ಕ ಯಾತ್ರೆ ಮಾಡುವುದೆಂದು ನಿರ್ಧರಿಸಿದೆವು. ನಮ್ಮಂತಹ ಪತ್ರಿಕೆ ನಡೆಯಬೇಕಾದರೆ ಈ ಮೂರೂ ವಿಭಾಗಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂಬುದನ್ನು ಕಂಡುಕೊಂಡಿದ್ದೆವು. ಹೆಚ್ಚಿನ ಪತ್ರಿಕೆಗಳಲ್ಲಿ ಈಗಲೂ ಇವುಗಳ ನಡುವೆ ಮೇಲಾಟ, ಕಾಲೆಳೆಯುವ ಆಟವೇ ಹೆಚ್ಚು.

ಗಣ್ಯರು, ಪ್ರಮುಖ ರಾಜಕಾರಣಿಗಳು, ಏಜೆಂಟರು ಮೊದಲಾದವರ ಪಟ್ಟಿ ಮಾಡಿದೆವು. ಪ್ರಸರಣ ವಿಭಾಗದಲ್ಲಿ ಸ್ಟ್ಯಾನ್ಲಿ ಸೆರಾವೊ ಮತ್ತು ಜಾಹೀರಾತು ವಿಭಾಗದಲ್ಲಿ  ಎನ್.ವಿ. ಪೌಲೋಸ್ ಆಗಲೇ ಚುರುಕಾಗಿ ಕೆಲಸಮಾಡುತ್ತಾ, ತಮ್ಮ ತಮ್ಮ ಸಂಪರ್ಕಗಳನ್ನು ಬೆಳೆಸುತ್ತಿದ್ದರು. ನಾವು ದಿನಕ್ಕೊಂದು ತಾಲೂಕಿಗೆ ಹೋಗಿ ನಮ್ಮ ಪತ್ರಿಕೆ ಹಂಚುತ್ತಾ, ಅದರ ಬಗ್ಗೆ ವಿವರಿಸಿ ಸಹಕಾರ ಕೋರಿದೆವು. ಆಗ ಸಿಕ್ಕ ಪ್ರೋತ್ಸಾಹ ನಮ್ಮ ಆತ್ಮವಿಶ್ವಾಸವನ್ನು ಇನ್ನೂ ಬೆಳೆಸಿತು.

ಎಲ್ಲಾ ತಾಂತ್ರಿಕ ಸಿದ್ಧತೆಗಳು ಮುಗಿಯುತ್ತಾ ಬರುತ್ತಿವೆ. ಆದರೆ, ಸಿಬ್ಬಂದಿಗಳ ನೇಮಕ, ಅದರಲ್ಲೂ ಮುಖ್ಯವಾಗಿ ಪತ್ರಕರ್ತರ ನೇಮಕ ಆಗಿಲ್ಲ. ನಾನಿಲ್ಲಿ ಸಂಪಾದಕೀಯ ನೇಮಕಾತಿ ಬಗ್ಗೆ ಮಾತ್ರ ಬರೆಯಲು ಸಾಧ್ಯ. ಯಾಕೆಂದರೆ, ಉಳಿದ ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಬಗ್ಗೆ ನಾವು ಅಂದರೆ ಸಂಪಾದಕೀಯ ಕೋರ್ ಗ್ರೂಪ್ ಹೆಚ್ಚು ತಲೆಕೆಡಿಸಲೇ ಇಲ್ಲ!

ಅಷ್ಟು ಹೊತ್ತಿಗಾಗಲೇ ಅವರಿಗೆ ಒಂದು ಕೆಲಸ ಕೊಡಿ, ಇವರಿಗೆ ಒಂದು ಕೆಲಸ ಕೊಡಿ ಎಂಬ ಒತ್ತಡ ಹಣ ಹೂಡಿದವರಿಂದಲೂ, ಕ್ರೈಸ್ತ ಧರ್ಮಾಡಳಿತದಿಂದಲೂ ಬರುತ್ತಿತ್ತೆಂಬುದು ನಮಗೆ ಗೊತ್ತಿತ್ತು! ಇದೊಂದು ಸೂಕ್ಷ್ಮ ವಿಷಯವಾಗಿತ್ತು. ಯಾರನ್ನೂ ನಿರಾಶೆಪಡಿಸುವುದು ಸಾಧ್ಯವಿರಲಿಲ್ಲ. ಹಾಗೆಂದು ಕಳಪೆ, ಅದಕ್ಷ ಸಿಬ್ಬಂದಿಯನ್ನೂ ನೇಮಿಸುವಂತಿರಲಿಲ್ಲ. ಈ ಸಮಸ್ಯೆಯನ್ನು ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ, ಪ್ರಸರಣ ವಿಭಾಗದ ಸ್ಟ್ಯಾನ್ಲಿ ಸೆರಾವೊ ಮತ್ತು ಜಾಹೀರಾತು ವಿಭಾಗದ ಎನ್.ವಿ. ಪೌಲೋಸ್ ಉತ್ತಮವಾಗಿ ನಿರ್ವಹಿಸಿದರು. ಪತ್ರಿಕೆಯ ಗುಣಮಟ್ಟದ ಮೇಲೆ ನೇರ ಪ್ರಭಾವ ಬೀರದ ಆಡಳಿತ ಸಿಬ್ಬಂದಿಯನ್ನು ಕ್ರೈಸ್ತ ಸಮುದಾಯದಿಂದಲೇ ನೇಮಿಸುವುದು ಅನಿವಾರ್ಯವಾಗಿತ್ತು. ಆ ಸಮುದಾಯದಿಂದಲೇ ದಕ್ಷ ಸಿಬ್ಬಂದಿಗಳ ನೇಮಕವೂ ಆಯಿತು. ಆ ಸುಶಿಕ್ಷಿತ ಸಮಾಜದಲ್ಲಿ ಅಂತವರ ಕೊರತೆಯೂ ಇರಲಿಲ್ಲ! ಕೆಲವರಿಗೆ ನಿರಾಸೆಯಾದುದು ಸಹಜ. ಈ ಕಾರಣದಿಂದ ಕೆಲವರು ಒಂದು ರೀತಿಯ ಅಸಮಾಧಾನದಿಂದ ಇದ್ದು, ನಂತರ ಹುಳುಕು ಹುಡುಕುವುದರಲ್ಲಿಯೇ ತೊಡಗಿದ್ದರು ಎಂಬುದೂ ನಂತರ ನಮ್ಮ ಗಮನಕ್ಕೆ ಬಂತು. ತಾಂತ್ರಿಕ ಸಿಬ್ಬಂದಿಗಳಲ್ಲಿಯೂ ದೊಡ್ಡ ಸಮಸ್ಯೆ ಎದುರಾಗಲಿಲ್ಲ! ಅಲ್ಲಿ ಎಲ್ಲಾ ಸಮುದಾಯಗಳ ಪ್ರಾತಿನಿಧ್ಯ ಇತ್ತು! ಅವರಲ್ಲಿ ಆಯ್ದ ಕೆಲವರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಯೂ ಅಗಿತ್ತು. ಅಂದರೆ, ಜಾಹೀರಾತುದಾರರ ಸಂಪರ್ಕ, ಪ್ರಸರಣ ಏಜೆಂಟರ ನೇಮಕ, ಯಂತ್ರಗಳ ಟೆಸ್ಟಿಂಗ್ ಇತ್ಯಾದಿ.

ಇನ್ನೊಂದು ಕಡೆಯಲ್ಲಿ ಸಂಪಾದಕೀಯ ವಿಭಾಗದ ಸಿಬ್ಬಂದಿಗಾಗಿ ನೀಡಿದ್ದ ಜಾಹೀರಾತುಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಅವುಗಳಲ್ಲಿ ಕೆಲವರು ಈಗಾಗಲೇ ಪತ್ರಿಕಾರಂಗದಲ್ಲಿ ಅನುಭವ ಪಡೆದವರ ಅರ್ಜಿಗಳೂ ಇದ್ದವು. ಹೊಸ ಪತ್ರಿಕೆ ಆಗಿರುವುದರಿಂದ ಕೆಲವರು ಚಿತ್ರವಿಚಿತ್ರ ಷರತ್ತುಗಳನ್ನೂ ಹಾಕಿದ್ದರು. ಕೆಲವರಿಗೆ ನಾವೇ ಆಹ್ವಾನ ನೀಡಿದ್ದರೂ, ಈ ಪತ್ರಿಕೆ ಎಷ್ಟು ದಿನ ಬಾಳುವುದೋ ಎಂಬ ಭಯದಿಂದ ಅವರಲ್ಲಿ ಕೆಲವರು ಹಿಂಜರಿದಿದ್ದರು. ನಮಗಾದರೋ, ಕೆಲಸದ ಭದ್ರತೆ ಅಥವಾ ಜಾಬ್ ಸೆಕ್ಯುರಿಟಿ ಎಂಬುದು ಕಟ್ಟಕಡೆಯ ಆದ್ಯತೆಯಾಗಿತ್ತು. ಹೀಗೆ ಹಿಂಜರಿದವರಲ್ಲಿ ನಂತರ ಕೆಲವರು ಪತ್ರಿಕೆಯ ಯಶಸ್ಸು ಕಂಡು ಅರ್ಜಿ ಹಾಕಿದರು ಎನ್ನಿ! ಅಂತಹ ಅವಕಾಶವಾದಿಗಳು ನಮಗೆ ಬೇಕಾಗಿರಲಿಲ್ಲ. ಅರ್ಜಿ ಹಾಕಿದ ಹಲವಾರು ‘ಅನುಭವಿ’ಗಳ ತಾತ್ವಿಕತೆ, ಪ್ರಾಮಾಣಿಕತೆಗಳ ಅನುಭವ ನಮಗಿದ್ದುದರಿಂದ ಕೆಲವರ ಅರ್ಜಿಗಳನ್ನು ದಾಕ್ಷಿಣ್ಯವಿಲ್ಲದೇ ತಿರಸ್ಕರಿಸಲಾಯಿತು. ಅವರಲ್ಲಿ ಕೆಲವರು ಬೇರೆ ಸ್ಥಾಪಿತ ದೊಡ್ಡಪತ್ರಿಕೆಗಳ ಏಜೆಂಟರು, ಕೋಮುವಾದಿಗಳ ಏಜೆಂಟರು ಇರುವ ಸಾಧ್ಯತೆಗಳ ಬಗ್ಗೆ ನಮಗೆ ಎಚ್ಚರವೂ ಇತ್ತು!

ನಮಗೆ ಬಂದ ಅರ್ಜಿಗಳಲ್ಲಿ ಎಳೆಯ ಪ್ರಾಯದ ಹುಡುಗ ಹುಡುಗಿಯರ ಸಂಖ್ಯೆಯೇ ಗಣನೀಯವಾಗಿತ್ತು. ಕೆಲವರಿಗೆ ಪತ್ರಿಕಾವೃತ್ತಿಯ ಪದವಿ ಇದ್ದರೂ ಅನುಭವ ಇರಲಿಲ್ಲ! ಕೆಲವರಿಗೆ ಚಿಕ್ಕ ಪತ್ರಿಕೆಗಳಲ್ಲಿ ಅನುಭವವಿದ್ದರೂ, ನಾವು ಯೋಜಿಸಿದಂತಹ ದೊಡ್ಡ ಪ್ರಮಾಣದ ಪತ್ರಿಕೆಯ ಒಳಗಿನ ವ್ಯವಸ್ಥೆಯ ಬಗ್ಗೆ ಕಲ್ಪನೆಯಿದ್ದಂತಿರಲಿಲ್ಲ.

ನಾವು ಸಂಪೂರ್ಣವಾಗಿ ಕಾಗದ ರಹಿತ, ಕಂಪ್ಯೂಟರೀಕೃತ ಎಡಿಟಿಂಗ್ ವ್ಯವಸ್ಥೆಯ ಕುರಿತು ನಿರ್ಧರಿಸಿ ಆಗಿತ್ತು. ಉಪಸಂಪಾದಕರೇ ಡಿಟಿಪಿ, ಕರಡು ತಿದ್ದುವುದು, ಪುಟ ಸಿದ್ಧಪಡಿಸುವುದು ಇತ್ಯಾದಿ ಮಾಡಬೇಕಿತ್ತು. ಅದುದರಿಂದ ಸಂಪಾದಕೀಯ ಸಾಮರ್ಥ್ಯ ಹೊಂದಿರುವುದರ ಜೊತೆಗೆ ಕಂಪ್ಯೂಟರ್ ಜ್ಞಾನ ಅಗತ್ಯವಾಗಿತ್ತು. ಇದಕ್ಕಾಗಿ ಆಗ ಬಳಕೆಯಲ್ಲಿದ್ದ ಕನ್ನಡ ಸಾಫ್ಟ್‌ವೇರ್ ಎಂದರೆ ಡಾಸ್ ಬೇಸ್ಡ್ ಪ್ರಕಾಶಕ್! ಇದನ್ನು ಪ್ರಾಕ್ ವಿನ್ (ಪ್ರಕಾಶಕ್ ಆನ್ ವಿಂಡೋಸ್)ನಲ್ಲಿ ಕನ್ವರ್ಟ್ ಮಾಡಿ ‘ಪೇಜ್ ಮೇಕರ್‌’ನಲ್ಲಿ ಪುಟ ಸಿದ್ಧಪಡಿಸಬೇಕಿತ್ತು. ‘ಫೊಟೊಶಾಪ್’ ಜ್ಞಾನವೂ ಅಗತ್ಯವಿತ್ತು. ಸಮಸ್ಯೆ ಎಂದರೆ, ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವುದಾದರೆ ಅತ್ಯುತ್ತಮ ಬ್ಯಾಟ್ಸ್‌ಮನ್ ಅಥವಾ ಅತ್ಯುತ್ತಮ ಬೌಲರನ್ನು ಮಾತ್ರ ಆಯುವಂತಿರಲಿಲ್ಲ! ಯಾಕೆಂದರೆ, ನನ್ನನ್ನೂ ಸೇರಿ ನಮ್ಮ ಕೋರ್ ಗ್ರೂಪ್‌ನಲ್ಲಿ ಅನುಭವಿಗಳಿದ್ದರೂ, ಕಂಪ್ಯೂಟರ್ ಮುಟ್ಟಿನೋಡಿದವರೇ ಇರಲಿಲ್ಲ. ಎನ್.ಎ.ಎಂ ಇಸ್ಮಾಯಿಲ್ ಬಿಟ್ಟರೆ, ಉಳಿದವರು ಡಾಸ್ ಅಲ್ಲದೆ ವಿಂಡೋಸ್, ಕಲರ್ ಮಾನಿಟರ್ ಇರುವ ಕಂಪ್ಯೂಟರ್ ನೋಡಿದ್ದೇ ಮೊದಲ ಬಾರಿಗೆ ಬಿಷಪ್ಸ್ ಹೌಸಿನಲ್ಲಿ! ಅಲ್ಲಿ ಎರಡು ಕಂಪ್ಯೂಟರ್‌ಗಳಿದ್ದವು. ಅಲ್ಲಿಯೇ ನಾನು ಪ್ರಿನ್ಸ್ ಆಟ ಅಡುತ್ತಾ ಇಲಿಯನ್ನು ನಿಯಂತ್ರಿಸಲು, ಅಂದರೆ ಮೌಸನ್ನು ನಿಯಂತ್ರಿಸಲು, ಮೂಲ ಜ್ಞಾನವನ್ನು ಪಡೆಯಲು ಸಾಧ್ಯವಾಯಿತು. ಇದೇ ರೀತಿ, ಅತ್ಯುತ್ತಮ ಡಿಟಿಪಿ ಅನುಭವ ಇರುವವರಿಗೆ ಪತ್ರಿಕಾವೃತ್ತಿಯ ಗಂಧಗಾಳಿಯೇ ಇದ್ದಂತಿರಲಿಲ್ಲ. ನಾವು ಹಲವಾರು ಅಲ್‌ರೌಂಡರ್‌ಗಳನ್ನೇ ಆಯ್ಕೆ ಮಾಡಬೇಕಾಗಿತ್ತು.

ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಪ್ರತೀ ಅರ್ಜಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಇವರಾಗಬಹುದು, ಇವರು ಬೇಡ, ಇವರು ಬೇಡವೇಬೇಡ ಎನ್ನುವ ಪ್ರಕ್ರಿಯೆ ನಡೆಯಿತು. ಇದರ ಹೊಣೆ ಸಂಪಾದಕರಾದ ಬಾಲಕೃಷ್ಣ ಗಟ್ಟಿ, ಮತ್ತು ಸಂಪಾದಕೀಯ ಕೋರ್ ಗ್ರೂಪಿನದ್ದು. ವಿಶೇಷವೆಂದರೆ, ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳಿಂದ ಹೆಚ್ಚಿನ ಅರ್ಜಿಗಳೇ ಇಲ್ಲದಿದ್ದದ್ದು! ಕೊನೆಗೂ ಒಂದು ಪಟ್ಟಿ ಸಿದ್ಧಪಡಿಸಿ ಸಂದರ್ಶನಕ್ಕೆ ಹಾಜರಾಗುವಂತೆ ಪತ್ರಕಳಿಸಲಾಯಿತು.

ಹಿಂದಿನಿಂದಲೇ ‘ಜನವಾಹಿನಿ’ ಪತ್ರಿಕೆಯ ಪರಿಕಲ್ಪನೆಯಲ್ಲಿ ಮುಖ್ಯವಾಗಿದ್ದವರೆಂದರೆ ಒಬ್ಬರು ಮಹಾ ವಿದ್ವಾಂಸರಾಗಿರುವ ಪಾದ್ರಿಯೆಂದೂ, ವಿಲಿಯಂ ಡಿಸಿಲ್ವಾ ಎಂದು ಅವರ ಹೆಸರೆಂದೂ, ಅವರು ಜರ್ಮನಿಯ ಓಸ್ನಾಬ್ರೂಕ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಂದೂ, ನಮಗೆ ತರಬೇತಿ ನೀಡಲು ಬರುತ್ತಾರೆಂದೂ ಕೇಳಿದ್ದೆವು. ಒಂದು ರೀತಿಯ ಭಯವೂ ಮೂಡಿತ್ತು! ಒಂದು ದಿನ ಬೆಳಿಗ್ಗೆ ಬಿಷಪ್ಸ್ ಹೌಸ್‌ನಲ್ಲಿದ್ದ ನಮ್ಮ ಕಚೇರಿಗೆ ಹೋದಾಗ ಎಲ್ಲವೂ ಏನೋ ಗಂಭೀರವಾಗಿದೆ. ಪಿಸುಮಾತಿನಲ್ಲೇ ಯಾರೋ ವಿಲಿಯಂ ಡಿಸಿಲ್ವಾ ಜರ್ಮನಿಯಿಂದ ಬಂದಿದ್ದಾರೆ ಎಂದು ಹೇಳಿದರು.

ನಾವೆಲ್ಲರೂ ಭಯಾತಂಕದಿಂದ ಕಾಯುತ್ತಾ ಕುಳಿತಿರುವಾಗ ಸಾಕಷ್ಟು ಎತ್ತರವಾಗಿ ಬೆಳ್ಳಗಿದ್ದ ವ್ಯಕ್ತಿಯೊಬ್ಬರು ಸ್ಯಾಮ್ಯುಯೆಲ್ ಸಿಕ್ವೇರ ಅವರ ಜೊತೆ ಬಂದರು. ಗಂಭೀರ ವ್ಯಕ್ತಿತ್ವ, ಮುಖದಲ್ಲಿ ವಿದ್ವಾಂಸರ ಕಳೆ! ಬಂದವರನ್ನು ಸಿಕ್ವೇರಾ ಅವರು ವಿಲಿಯಂ ಡಿಸಿಲ್ವಾ ಎಂದು ಪರಿಚಯಿಸಿದಾಗ ನನಗೆ ಬಹಳ ಅಚ್ಚರಿಯಾಯಿತು! ನಾನು ಬಿಳಿಯ ನಿಲುವಂಗಿ ತೊಟ್ಟ ಪಾದ್ರಿಯನ್ನು ನಿರೀಕ್ಷಿಸಿದ್ದರೆ, ಅಲ್ಲಿದ್ದ ವ್ಯಕ್ತಿ ಕಪ್ಪು ಪ್ಯಾಂಟು, ಕೆಂಪು, ಬಿಳಿ ಚಿಕ್ಕ ಚೌಕಳಿಯ ಸಣ್ಣ ಕಾಲರಿನ ಹತ್ತಿ ಅಂಗಿ ಧರಿಸಿದ್ದ ವ್ಯಕ್ತಿ!

ನಾನು ವಿಲ್ಯಂ ದಸಿಲ್ವ! ಹೋ! ವೆರೀ ಯಂಗ್ ಟೀಮ್! ಗುಡ್! ಅಂದ ತಕ್ಷಣ ನನ್ನ ಟ್ಯೂಬ್‌ಲೈಟ್ ಹತ್ತಿಕೊಂಡಿತು. ಇವರು ಸರಳೀಕೃತ ಕೊಂಕಣಿ ಪದಗಳ ಡಿಕ್ಷನರಿ ರಚಿಸಿದವರು, ನನ್ನ ಮೆಚ್ಚಿನ ಲೇಖಕ ಯಶವಂತ ಚಿತ್ತಾಲ ಅವರ ‘ಆಟ ಮತ್ತಿತರ ಕತೆಗಳ’ನ್ನು ‘ಖೆಳ್ ಆನಿ ಹೆರ್ ಕತಾ’ ಎಂದು ಅನುವಾದಿಸಿದವರು…. ಇತ್ಯಾದಿ ಇತ್ಯಾದಿ ಹೊಳೆಯಿತು.
ಸಿಕ್ವೇರಾ ಅವರು ಸ್ವತಃ ನಮ್ಮೆಲ್ಲರನ್ನು ಪರಿಚಯಿಸಿದರು. ಅವರು ನಮ್ಮನ್ನೆಲ್ಲ ಹಳೆಯ ವಿದ್ಯಾರ್ಥಿಗಳೋ ಎಂಬಂತೆ ಮಾತನಾಡಿಸಿ ಕೈಕುಲುಕಿದಾಗ ನನ್ನ ಭಯ ಜರ್ರನೇ ಇಳಿದು ಗೌರವ ಮಾತ್ರ ಉಳಿದುಕೊಂಡಿತ್ತು. ಅವರು ಮುಂದೆ ನಮ್ಮ ಯೋಚನೆಯ ದಿಕ್ಕನ್ನೇ ಬದಲಿಸಿದರು!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here