Homeಮುಖಪುಟನರೇಗಾ ಬಾಕಿ: ನಿರ್ಮಲಾ ಸೀತಾರಾಮನ್‌ರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲ್ ಹಾಕಿದ ಟಿಎಂಸಿ ಸಂಸದ

ನರೇಗಾ ಬಾಕಿ: ನಿರ್ಮಲಾ ಸೀತಾರಾಮನ್‌ರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲ್ ಹಾಕಿದ ಟಿಎಂಸಿ ಸಂಸದ

- Advertisement -
- Advertisement -

ಕರ್ನಾಟಕದ ಬಳಿಕ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕೇಂದ್ರದ ಅನುದಾನದ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಸವಾಲ್ ಹಾಕಿದೆ.

“ಕರ್ನಾಟಕಕ್ಕೆ ಕೇಂದ್ರದಿಂದ ಕೊಡಬೇಕಿದ್ದ ಹಣದ ಪೈಕಿ ಒಂದೊಂದು ಪೈಸೆಯನ್ನೂ ಬಾಕಿ ಉಳಿಸದೆ ಸರಿಯಾದ ಸಮಯಕ್ಕೆ ನೀಡಿದ್ದೇವೆ” ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಈ ಹೇಳಿಕೆ ಸುಳ್ಳು ಎಂದು ದಾಖಲೆ ಬಿಡುಗಡೆ ಮಾಡಿದ್ದ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, “ಮುಖಾಮುಖಿ ಚರ್ಚೆಗೆ ನಾನು ಸಿದ್ದ, ನೀವು ಬನ್ನಿ” ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.

ಇಂದು (ಏ.6) ಬೆಂಗಳೂರಿನ ಗಾಂಧಿ ಭವನದಲ್ಲಿ ಸಂಜೆ 5 ಗಂಟೆಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ವಿತ್ತ ಸಚಿವೆಯ ನಡುವಿನ ಮುಖಾಮುಖಿ ಚರ್ಚೆಗೆ ವೇದಿಕೆ ಸಿದ್ದವಾಗಿದೆ.

ಈ ನಡುವೆ ಪಶ್ಚಿಮ ಬಂಗಾಳದ ನರೇಗಾ ಯೋಜನೆಯ ಕುರಿತು ನಿರ್ಮಲಾ ಸೀತಾರಾಮನ್ ಸುಳ್ಳು ಹೇಳಿದ್ದಾರೆ ಎಂದು, ಅಲ್ಲಿನ ಆಡಳಿತರೂಢ ಟಿಎಂಸಿ ಪಕ್ಷದ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಆರೋಪಿಸಿದ್ದು, ಅಂಕಿ ಅಂಶಗಳನ್ನು ಬಿಡುಗಡೆ ಮಾಡಿ ಬಹಿರಂಗ ಚರ್ಚೆಗೆ ಬರುವಂತೆ ಆಹ್ವಾನಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಸಾಕೇತ್ ಗೋಖಲೆ, “ಫೆಬ್ರವರಿಯಲ್ಲಿ ಕೋಲ್ಕತ್ತಾದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ನಕಲಿ ಜಾಬ್ ಕಾರ್ಡ್‌ಗಳು ಮತ್ತು ಫಲಾನುಭವಿಗಳ” ಕಾರಣದಿಂದ ಪಶ್ಚಿಮ ಬಂಗಾಳದ 7000 ಕೋಟಿ ರೂ.ಗೂ ಹೆಚ್ಚು ಹಣವನ್ನು ಮೋದಿ ಸರ್ಕಾರ ತಡೆ ಹಿಡಿದಿದೆ ಎಂದು ಹೇಳಿದ್ದರು ಎಂದಿದ್ದಾರೆ.

ನಿರ್ಮಲಾ ಸೀತಾರಾಮನ್ ಭಾಷಣದಲ್ಲಿ “ಬಾಪ್ ಕಾ ಪೈಸಾ ಹೈ ಕ್ಯಾ (ಇದು ನಿಮ್ಮ ಅಪ್ಪನ ಹಣವೇ)?” ಎಂದು ಕೀಳು ಭಾಷೆ ಬಳಸಿ ಬಂಗಾಳದ ಬಡ ಕಾರ್ಮಿಕರನ್ನು ಕ್ರೂರವಾಗಿ ಅಪಹಾಸ್ಯ ಮಾಡಿದ್ದರು ಎಂದು ಹೇಳಿದ್ದಾರೆ.

ಆದರೆ, ಅವರದ್ದೇ ಸರ್ಕಾರದ ಸಾರ್ವಜನಿಕ ಡೇಟಾ ಬೇರೆಯದ್ದೇ ಹೇಳುತ್ತಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಒಟ್ಟು 1,36,62,600 ನರೇಗಾ ಜಾಬ್ ಕಾರ್ಡ್‌ಗಳನ್ನು ನೀಡಲಾಗಿದೆ. ಇವುಗಳಲ್ಲಿ 1,36,58,541 ಜಾಬ್ ಕಾರ್ಡ್‌ಗಳನ್ನು ಪರಿಶೀಲಿಸಲಾಗಿದೆ. ಅಂದರೆ, ಒಟ್ಟು ಶೇ. 99.97 ಪರಿಶೀಲಿಸಲಾಗಿದೆ. ಅಂದರೆ, ಬಂಗಾಳದಲ್ಲಿ 1.36 ಕೋಟಿ ಜಾಬ್ ಕಾರ್ಡ್‌ಗಳಲ್ಲಿ 4,059 ಮಾತ್ರ ಪರಿಶೀಲಿಸಲಾಗಿಲ್ಲ. ಹೀಗಿರುವಾಗ ಪಶ್ಚಿಮ ಬಂಗಾಳದ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಹೇಳಿದಾಗ ಹಣಕಾಸು ಸಚಿವರು ಏನು ಯೋಚಿಸುತ್ತಿದ್ದರು? ಯಾರೂ ಪರಿಶೀಲಿಸಲು ಹೋಗುವುದಿಲ್ಲ ಎಂದು ಅವರು ಭಾವಿಸಿದ್ರಾ? ಎಂದು ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಮೋದಿ ಸರ್ಕಾರ ನಕಲಿ ‘ಜಾಬ್ ಕಾರ್ಡ್‌’ ಸಬೂಬು ಹೇಳಿ 21 ಲಕ್ಷಕ್ಕೂ ಅಧಿಕ ಬಡ ನರೇಗಾ ಕಾರ್ಮಿಕರು ವೇತನದಿಂದ ವಂಚಿತರಾಗುವಂತೆ ಮಾಡಿದೆ. ಪಶ್ಚಿಮ ಬಂಗಾಳದ 7000 ಕೋಟಿ ರೂ.ಗೂ ಹೆಚ್ಚು ಬಾಕಿಯನ್ನು ತಡೆ ಹಿಡಿದಿದ್ದಾರೆ. 10 ವರ್ಷಗಳ ಕಾಲ ಅಧಿಕಾರದಲ್ಲಿರುವುದರಿಂದ ಕೇವಲ ಹಣಕಾಸು ಸಚಿವರಷ್ಟೇ ಅಲ್ಲ, ಸ್ವತಃ ಮೋದಿ ಸೇರಿದಂತೆ ಹಲವಾರು ಕೇಂದ್ರ ಸಚಿವರ ತಲೆಯಲ್ಲಿ ದುರಹಂಕಾರ ತುಂಬಿದೆ ಎಂದು ಗೋಖಲೆ ಕಿಡಿಕಾರಿದ್ದಾರೆ.

ನಿರ್ಮಲಾ ಸೀತಾರಾಮನ್ ಬಂಗಾಳದ ಕುರಿತು ಹಸಿ ಸುಳ್ಳು ಹೇಳಿದ್ದಾರೆ. ಬಳಿಕ ಅದನ್ನು ಸಮರ್ಥಿಸಲು ಸೊಕ್ಕಿನ ಮಾತುಗಳನ್ನು ಆಡಿದ್ದಾರೆ. ಹಾಗಾಗಿ, ಬಂಗಾಳದ ನರೇಗಾ ಯೋಜನೆಯ ಕುರಿತು ದಾಖಲೆ ಸಹಿತ ಬಹಿರಂಗ ಚರ್ಚೆಗೆ ನಾನು ನಿರ್ಮಲಾ ಸೀತಾರಾಮನ್ ಅವರನ್ನು ಆಹ್ವಾನಿಸುತ್ತೇನೆ. ನಿಮಗೆ ಏನಾದರು ನೈತಿಕತೆ ಇದ್ದರೆ ಚರ್ಚೆಗೆ ಬನ್ನಿ. ದೇಶದ ಜನರಿಗೆ ಸತ್ಯ ಗೊತ್ತಾಗಲಿ ಎಂದು ಗೋಖಲೆ ಪಂಥಾಹ್ವಾನ ನೀಡಿದ್ದಾರೆ.

ಪಶ್ಚಿಮ ಬಂಗಾಳದ ನರೇಗಾ ಬಾಕಿ ತಡೆ ಹಿಡಿಯಲು “ನಕಲಿ ಜಾಬ್ ಕಾರ್ಡ್‌ಗಳು ಮತ್ತು ಫಲಾನುಭವಿಗಳು” ಕಾರಣ ಎಂದು ನೀವು ಸುಳ್ಳು ಯಾಕೆ ಹೇಳಿದ್ದು? “ಬಾಪ್ ಕಾ ಪೈಸಾ ಹೈ ಕ್ಯಾ?” ಎಂದು ಹೇಳುವ ಮೂಲಕ ಬಂಗಾಳದ ಬಡ ಕಾರ್ಮಿಕರನ್ನು ಅವಮಾನಿಸುವ ಮತ್ತು ಸೊಕ್ಕಿನ ಪದಗಳನ್ನು ಬಳಸುವ ಮುನ್ನ ನಿಮ್ಮ ಸ್ವಂತ ಸರ್ಕಾರದಿಂದ ನೀವು ಸತ್ಯಗಳನ್ನು ಏಕೆ ಪರಿಶೀಲಿಸಲಿಲ್ಲ? ನಿಮ್ಮಲ್ಲಿ ಉತ್ತರವಿಲ್ಲದಿದ್ದರೆ ಪಶ್ಚಿಮ ಬಂಗಾಳದ ಜನರಲ್ಲಿ ಕ್ಷಮೆಯಾಚಿಸಿ ಮತ್ತು ರಾಜ್ಯದ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಿ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಇದನ್ನೂ ಓದಿ : ಆರ್ಥಿಕ ಅನ್ಯಾಯ| ಮುಖಾಮುಖಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ: ನಿರ್ಮಲಾ ಸೀತಾರಾಮನ್‌ರಿಗೆ ಆಹ್ವಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಬಿಜೆಪಿ ಮಾತ್ರ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದೆ ಎಂಬ ಮೋದಿ...

0
ಮೇ 1, 2024 ರಂದು ಗುಜರಾತ್‌ನ ಬನಸ್ಕಾಂತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, "ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 272ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಸ್ಪರ್ಧಿಸಿದ ಏಕೈಕ ಪಕ್ಷ ಬಿಜೆಪಿ"...