ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ನಕಲಿ ದಾಖಲೆ ಸೃಷ್ಟಿಸಿ 1054 ಮಂದಿ ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ‘ಮರಣ’ ಹೊಂದಿದ್ದಾರೆ ಎಂದು ಸುಳ್ಳು ಹೇಳಿ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಿಸಲು ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಯತ್ನಾಳ್ ಅವರು ತಮ್ಮ ಅಧಿಕೃತ ಲೆಟರ್ ಹೆಡ್‌ನಲ್ಲಿ 1054 ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ವಿಜಯಪುರ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಮತದಾರರ ನೋಂದಣಿ ಅಧಿಕಾರಿಗೆ (ಇಆರ್‌ಒ) ಪತ್ರ ಬರೆದು ಮನವಿ ಮಾಡಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಇಆರ್‌ಒ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹೇಳಿರುವುದಾಗಿ ತಿಳಿದು ಬಂದಿದೆ.
ಎಸ್‌ಐಆರ್ ಭಾಗವಾಗಿ 2026ರ ಆಗಸ್ಟ್ 24ರಂದು ಕರ್ನಾಟಕದ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದೆ. ಇದಾಗಿ ಒಂದು ವಾರದ ನಂತರ, ಅಂದರೆ 2026ರ ಆಗಸ್ಟ್ 31ರಂದು ಇಆರ್‌ಒಗೆ ಯತ್ನಾಳ್ ಪತ್ರ ಬರೆದಿದ್ದಾರೆ. ಇದೇ ವಿಚಾರವಾಗಿ ಕ್ರಮ ಕೈಗೊಳ್ಳುವಂತೆ 2026ರ ಸೆಪ್ಟೆಂಬರ್ 5ರಂದು ವಿಜಯಪುರ ಜಿಲ್ಲಾಧಿಕಾರಿ ಕೂಡ ಇಆರ್‌ಒಗೆ ಪತ್ರದ ಮೂಲಕ ಸೂಚಿಸಿದ್ದಾರೆ. 2026ರ ಸೆಪ್ಟೆಂಬರ್ 21ರಂದು ಈ ಕುರಿತು ಯತ್ನಾಳ್ ಅವರಿಗೆ ಇಆರ್‌ಒ ಹಿಂಬರಹ ನೀಡಿದ್ದು, ಕ್ರಮದ ಭರವಸೆ ನೀಡಿದ್ದಾರೆ.
ಯತ್ನಾಳ್ ಅವರು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ 198 ಮತಗಟ್ಟೆಗಳ ವ್ಯಾಪ್ತಿಯ ಒಟ್ಟು 1054 ಜೀವಂತವಿರುವ ಮುಸ್ಲಿಂ ಮತದಾರರ ಹೆಸರುಗಳನ್ನು ಮರಣ ಹೊಂದಿದ್ದಾರೆ ಎಂದು ಸುಳ್ಳು ಹೇಳುವ ಮೂಲಕ ಮತಪಟ್ಟಿಯಿಂದ ಡಿಲೀಟ್ ಮಾಡಲು ಕೋರಿದ್ದು, ಈ ಪೈಕಿ ಎಂಟು ಮಂದಿಯ ನಕಲಿ ಮರಣ ಪ್ರಮಾಣಪತ್ರಗಳನ್ನು ಒದಗಿಸಿದ್ದಾರೆ. ಇನ್ನುಳಿದ 1046 ಮಂದಿಯ ಎಪಿಕ್ ಮತ್ತು ಭಾಗ ಸಂಖ್ಯೆ ತಿಳಿಸಿದ್ದಾರೆ ಎಂಬುವುದು ಇಆರ್‌ಒ ಬರೆದ ಪತ್ರದಿಂದ ರುಜುವಾತುಗೊಂಡಿದೆ.
ಮರಣ ಹೊಂದಿದ್ದಾರೆ ಎಂದು ಯತ್ನಾಳ್ ಡೆತ್ ಸರ್ಟಿಫಿಕೇಟ್ ಸಲ್ಲಿಸಿರುವ 8 ಮಂದಿಯ ಪೈಕಿ ಮೂವರನ್ನು ಜಾಗೃತ ಕರ್ನಾಟಕ ಸಂಘಟನೆ ಬುಧವಾರ (ಅ.7) ಮಾಧ್ಯಮಗಳ ಮುಂದೆ ಕರೆತಂದಿತ್ತು. ಸಂಘಟನೆಯ ಪ್ರಕಾರ, ಯತ್ನಾಳ್ ಡೆತ್ ಸರ್ಟಿಫಿಕೇಟ್ ಒದಗಿಸಿರುವವರು ಸೇರಿದಂತೆ, ಹೆಸರು ಡಿಲೀಟ್ ಮಾಡಲು ಕೋರಿರುವ ಎಲ್ಲಾ 1054 ಮತದಾರರು ಜೀವಂತ ಇದ್ದಾರೆ.
ಗಮನಾರ್ಹವಾಗಿ, 1054 ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಾಳ್ ಯಾವುದೇ ಫಾರಂ ನಂಬರ್-7 ಸಲ್ಲಿಸಿಲ್ಲ. ಬದಲಾಗಿ, ತನ್ನ ಲೆಟರ್ ಹೆಡ್ ಮೂಲಕ ಮನವಿ ಮಾಡಿದ್ದಾರೆ. ಇದಕ್ಕೆ ಇಆರ್‌ಒ ಮತ್ತು ಜಿಲ್ಲಾಧಿಕಾರಿ ಕೂಡ ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ.
ಯಾರದ್ದಾದರು ಹೆಸರು ಡಿಲೀಟ್ ಮಾಡಬೇಕಂದರೆ ಫಾರಂ ನಂಬರ್-7 ಮೂಲಕವೇ ಅರ್ಜಿ ಸಲ್ಲಿಸಬೇಕು. ಅದರ ಮೇಲೆ ಚುನಾವಣಾ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು. ಆದರೆ, ಇಲ್ಲಿ ಶಾಸಕರ ಪತ್ರದ ಅನುಸಾರ ಕ್ರಮಕೈಗೊಳ್ಳುವುದಾಗಿ ಇಆರ್‌ಒ ಹೇಳಿದ್ದಾರೆ. ಹಾಗಾಗಿ, ಇಆರ್‌ಒ ಚುನಾವಣಾ ಆಯೋಗದ ಸ್ಥಾಪಿತ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ, ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಜಾಗೃತ ಕರ್ನಾಟಕ ಆಗ್ರಹಿಸಿದೆ.
ಯತ್ನಾಳ್ ಅವರು ಒದಗಿಸಿರುವ 8 ಮಂದಿಯ ಡೆತ್ ಸರ್ಟಿಫಿಕೇಟ್ ಕೂಡ ನಕಲಿ ಎಂದು ಜಾಗೃತ ಕರ್ನಾಟಕ ಆರೋಪಿಸಿದೆ. ಇದರಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸಂಘಟನೆ ಆರೋಪಿಸಿದೆ. ಹಾಗಾಗಿ, ಯತ್ನಾಳ್ ಜೊತೆ ಚುನಾವಣಾ ಆಧಿಕಾರಿಗಳು ಮತ್ತು ನಕಲಿ ಡೆತ್ ಸರ್ಟಿಫಿಕೇಟ್ ಕೊಟ್ಟ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದವೂ ಕ್ರಮ ಆಗಬೇಕೆಂದು ಸಂಘಟನೆ ಒತ್ತಾಯಿಸಿದೆ.
ಮರಣ ಹೊಂದಿದ್ದಾರೆ, ಹಾಗಾಗಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಬೇಕು ಎಂದು ಯತ್ನಾಳ್ ಹೇಳಿರುವ ಮತದಾರರಾದ ಮಹಬೂಬಿ ಶೇಖ್, ಮಾಲ್ಬನಿ ಜಮಾದಾರ ಮತ್ತು ರಝಿಯಾ ಶೇಖ್ ಮಾಧ್ಯಮಗಳ ಮುಂದೆ ಬಂದಿದ್ದರು. ಇವರೆಲ್ಲರ ಹೆಸರಿನಲ್ಲಿ ನಕಲಿ ಡೆತ್ ಸರ್ಟಿಫಿಕೇಟ್‌ಗಳನ್ನು ಶಾಸಕ ಯತ್ನಾಳ್ ಸಲ್ಲಿಕೆ ಮಾಡಿದ್ದು, ಅದನ್ನೇ ಸುದ್ದಿಗೋಷ್ಠಿಯಲ್ಲೂ ತೋರಿಸಿದ್ದಾರೆ.
ಜೀವಂತ ಇರುವ ಮೂವರು ಮತದಾರರು ಮತ್ತು ಅವರ ಹೆಸರಿನಲ್ಲಿ ಸಲ್ಲಿಸಿದ ನಕಲಿ ಡೆತ್ ಸರ್ಟಿಫಿಕೇಟ್ ಇಲ್ಲಿ ನೋಡಬಹುದು

(ಎಡದಿಂದ) ರಝಿಯಾ ಶೇಕ್, ಮಾಲನ್ಬಿ ಜಮಾದಾರ್, ಮಹಬೂಬಿ ಶೇಖ್
ತಮ್ಮ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಶಾಸಕ ಯತ್ನಾಳ್ ಯತ್ನಿಸಿರುವ ಬಗ್ಗೆ ಮಾತನಾಡಿದ ಸಂತ್ರಸ್ತೆ ಮಹಬೂಬಿ ಶೇಖ್ “ನಾನು ಸತ್ತೊಗಿದ್ದೀನಿ ಎನ್ನುತ್ತಿದ್ದಾರೆ. ಆದರೆ, ನಾನು ಬದುಕಿದ್ದೀನಿ, ನೋಡಿ ನಿಮ್ಮ ಎದುರಿಗೆ ಬಂದಿದ್ದೀನಿ. ನಮ್ಮ ಹೆಸರಿನಲ್ಲಿ ನಕಲಿ ಡೆತ್ ಸರ್ಟಿಫಿಕೇಟ್ ಕೊಟ್ಟು ವೋಟ್ ಡಿಲೀಟ್ ಮಾಡಲು ಯತ್ನಿಸಿರುವ ವಿಚಾರ ಮಾಧ್ಯಮಗಳು ಮತ್ತು ಇತರ ವ್ಯಕ್ತಿಗಳ ಮೂಲಕ ಗೊತ್ತಾಯಿತು. ವಿಷಯ ತಿಳಿದು ನಮ್ಮ ಎದೆ ಒಡೆದೋಯ್ತು. ಈಗ ಊಟ ಸೇರ್ತಿಲ್ಲ, ನಿದ್ದೆ ಬರ್ತಿಲ್ಲ. ಯತ್ನಾಳ್ ಅವರು ಎಲ್ಲಾ ಮುಸ್ಲಿಮರ ಹೆಸರುಗಳನ್ನೇ ಮತಪಟ್ಟಿಯಿಂದ ಡಿಲೀಟ್ ಮಾಡಲು ಯತ್ನಿಸಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
ಇನ್ನೊಬ್ಬರು ಸಂತ್ರಸ್ತೆ ರಝಿಯಾ ಶೇಖ್ ಮಾತನಾಡಿ, “ಕನಿಷ್ಠ 35 ವರ್ಷಗಳಿಂದ ನಾನು ವಿಜಯಪುರದಲ್ಲಿ ಇದ್ದೇನೆ. ನಾನು ಅಂಗನವಾಡಿ ಸಹಾಯಕಿ. ನಾವೆಲ್ಲ ಸತ್ತೋಗಿದ್ದೇವೆ ಎನ್ನುತ್ತಿದ್ದಾರೆ. ನಮಗೆ ಅನ್ಯಾಯ ಆಗಿದೆ ನ್ಯಾಯ ಬೇಕು” ಎಂದು ಒತ್ತಾಯಿಸಿದ್ದಾರೆ.
ಸಂತ್ರಸ್ತೆ ಮಾಲನ್ಬಿ ಜಮಾದಾರ್ ಕೂಡ, “ನಾವು ಮರಣ ಹೊಂದಿದ್ದೇವೆ ಎಂದು ಸುಳ್ಳು ಹೇಳಿ ನಮ್ಮ ವೋಟ್ ಡಿಲೀಟ್ ಮಾಡಲು ಯತ್ನಿಸಿದ್ದಾರೆ. ನಮಗೆ ದೊಡ್ಡ ಅನ್ಯಾಯ ಆಗಿದೆ. ನ್ಯಾಯ ಕೊಡಿಸಿ ಎಂದು ಕೆಲಸ-ಕಾರ್ಯ ಬಿಟ್ಟು ಬೆಂಗಳೂರಿಗೆ ಬಂದಿದ್ದೇವೆ. ನಾವು ಬಡವರು, ಕೂಲಿ-ನಾಲಿ ಮಾಡಿ ಜೀವನ ನಡೆಸುವವರು. ದಯವಿಟ್ಟು ನಮಗೆ ನ್ಯಾಯಕೊಡಿಸಿ” ಎಂದು ಅಲವತ್ತುಕೊಂಡಿದ್ದಾರೆ.
ಯತ್ನಾಳ್ ಅವರು ಸಲ್ಲಿಸಿರುವ 8 ಮತದಾರರ ಹೆಸರಿನ ನಕಲಿ ಡೆತ್ ಸರ್ಟಿಫಿಕೇಟ್‌ಗಳು
ಜಾಗೃತ ಕರ್ನಾಟಕದ ಡಾ.ವಾಸು ಮಾತನಾಡಿ, “ಶಾಸಕ ಯತ್ನಾಳ್ ಮಾಡಿರುವುದು ಕ್ರಿಮಿನಲ್ ಕೃತ್ಯ. ಅವರ ವಿರುದ್ದ ಕ್ರಮ ಯಾಕೆ ಆಗಿಲ್ಲ ಎಂದು ಪ್ರಶ್ನಿಸಿದರು. ಯತ್ನಾಳ್ ಹುಡುಕಿ ಹುಡುಕಿ ನಕಲಿ ಡೆತ್ ಸರ್ಟಿಫಿಕೇಟ್ ಸಲ್ಲಿಸಿದಾಗ ಚುನಾವಣಾ ಆಯೋಗ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಬೇಕಿತ್ತು. ಆದರೆ, ಆಯೋಗ ಸುಪ್ರೀಂ ಕೋರ್ಟ್‌ನ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂದು ಹೇಳಿದ್ದಾರೆ.
ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡರೆ, 30ರಂದು 1054 ಮತದಾರರ ಹೆಸರು ಡಿಲೀಟ್ ಮಾಡುವಂತೆ ಯತ್ನಾಳ್ ಅರ್ಜಿ ಸಲ್ಲಿಸಿದ್ದಾರೆ. ಕೇವಲ ಒಂದು ವಾರದೊಳಗೆ ಅಷ್ಟೊಂದು ಜನರನ್ನು ಯತ್ನಾಳ್ ಹೇಗೆ ಹುಡುಕಿದ್ರು? ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ಕೊಡದೆ, ಅವರ ಸಹಕಾರ ಇಲ್ಲದೆ ಯತ್ನಾಳ್ ಈ ಕೆಲಸ ಮಾಡಲು ಸಾಧ್ಯವಿಲ್ಲ. ಕಲರ್ ಫೋಟೋ ಇರುವ ಮತದಾರರ ಪಟ್ಟಿಯನ್ನು ಯತ್ನಾಳ್ ಅವರಿಗೆ ಕೊಟ್ಟವರು ಯಾರು? ಇವೆಲ್ಲದರ ಬಗ್ಗೆ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ಯತ್ನಾಳ್ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಅಕ್ರಮದಲ್ಲಿ ಕೈ ಜೋಡಿಸಿದ ಚುನಾವಣಾ ಆಯೋಗ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಬಳಿ ಈ ಅಕ್ರಮಗಳ ಕುರಿತು ಹೇಳಿದಾಗ, “ಯಾರ ವೋಟ್ ಕೂಡ ಡಿಲೀಟ್ ಆಗಿಲ್ವಲ್ಲಾ?” ಎನ್ನುತ್ತಾರೆ. ಸಿಎಂ ಮತ್ತು ಸಚಿವರು ಅವರ ಕಚೇರಿ ಮುಂದೆ ಧರಣಿ ಕುರಿತು ಬಳಿಕ, ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (ಡಿಇಒ) ಆದೇಶ ನೀಡಿ ಕ್ರಮ ಕೈಗೊಳ್ಳಿ ಎನ್ನುತ್ತಿದ್ದಾರೆ. ಹಾಗಾದರೆ, ಮುಖ್ಯಸ್ಥರಾಗಿ ಈ ವಿಚಾರದಲ್ಲಿ ನಿಮ್ಮ ಪಾತ್ರ ಎನ್ನುವುದು ನಮ್ಮ ಪ್ರಶ್ನೆ ಎಂದು ವಾಸು ಹೇಳಿದ್ದಾರೆ.
ಯತ್ನಾಳ್ ಕಳ್ಳಾಟವನ್ನು ಬಯಲಿಗೆಳೆದ ಪತ್ರಕರ್ತ ಇರ್ಫಾನ್ ಶೇಖ್ ಮಾತನಾಡಿ, ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ವಿಜಯಪುರದ ಶಾಸಕರು, ಈ ಹಿಂದೆ ಬೇರೆ ಬೇರೆ ಕ್ಷೇತ್ರಗಳ ಮತದಾರರನ್ನು ತನ್ನ ಕ್ಷೇತ್ರಕ್ಕೆ ಕರೆತಂದು ಮತ ಹಾಕಿಸುತ್ತಿದ್ದರು. ಎಸ್‌ಐಆರ್ ವೇಳೆ ಇಂತಹ ನಕಲಿ ಮತಗಳನ್ನು ಪರಾಜಿತ ಅಭ್ಯರ್ಥಿ ಕಡೆಯ ಬಿಎಲ್‌ಎಗಳು ತೆಗೆಸಿದ್ದಾರೆ. ಇದರಿಂದ ಬೋಗಸ್ ವೋಟ್‌ನಲ್ಲಿ ಗೆಲ್ಲುವ ಶಾಸಕರಿಗೆ ಭಯ ಶುರುವಾಗಿದೆ. ಹಾಗಾಗಿ, ಒಮ್ಮೆ 5 ಸಾವಿರ, ಮತ್ತೊಮ್ಮೆ 8 ಸಾವಿರ ಫಾರಂ-7 ಸಲ್ಲಿಸಿದ್ದರು ಎಂದಿದ್ದಾರೆ.
ಮುಂದುವರಿದು, ಮೊದಲು ಶಾಸಕರ ಬೆಂಬಲಿಗರು ಒಟ್ಟು 13 ಸಾವಿರ ಫಾರಂ-7 ಸಲ್ಲಿಸಿದ್ದರು. ಅದಕ್ಕೆ ವಿರೋಧ ವ್ಯಕ್ತವಾದಾಗ, ವಾಪಸ್ ಪಡೆದರು. ಈಗ ಲೆಟರ್ ಹೆಡ್ ಮೂಲಕ ಜೀವಂತ ಇರುವವರನ್ನು ಸಾಯಿಸಿ ವೋಟ್ ಡಿಲೀಟ್ ಮಾಡಿಸಲು ಮುಂದಾಗಿದ್ದಾರೆ. ಯತ್ನಾಳ್ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ 1054 ಮಂದಿ ಸತ್ತೋದವರ ಹೆಸರು ಮತಪಟ್ಟಿಯಲ್ಲಿ ಇದೆ ಎಂದಾಗ ನಾವು ಪರಿಶೀಲನೆ ನಡೆಸಿದೆವು. ಈ ವೇಳೆ ಯತ್ನಾಳ್ ಹೇಳಿರುವ ಎಲ್ಲರೂ ಬದುಕಿರುವುದು ಕಂಡು ಬಂದಿದೆ. ಡೆತ್ ಸರ್ಟಿಫಿಕೇಟ್ ಕೊಟ್ಟವರೂ ಜೀವಂತ ಇದ್ದಾರೆ ಎಂದು ತಿಳಿಸಿದ್ದಾರೆ.
ಯತ್ನಾಳ್ ಹಿಟ್ ರನ್ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಅರ್ಹ ಮತದಾರರ ಹೆಸರು ಡಿಲೀಟ್ ಮಾಡಲು ಯತ್ನಿಸಿರುವ ಅವರ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ಇರ್ಫಾನ್ ಶೇಖ್ ಒತ್ತಾಯಿಸಿದ್ದಾರೆ.


