ಬಾಂಗ್ಲಾದೇಶಕ್ಕೆ ಪೂರೈಸುವುದಾಗಿ ಒಪ್ಪಂದ ಮಾಡಿಕೊಂಡಿರುವ ವಿದ್ಯುತ್ ಅನ್ನು ಭಾರತದೊಳಗೆ ಮಾರಾಟ ಮಾಡಲು ಅದಾನಿ ಪವರ್‌ಗೆ ಅವಕಾಶ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ವಿದ್ಯುತ್ ರಫ್ತು ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿದೆ ಎಂದು ರಾಯಿಟರ್ಸ್ ಬುಧವಾರ ವರದಿ ಮಾಡಿದೆ.
ಈ ಕ್ರಮವು ಬಾಂಗ್ಲಾದೇಶದ ರಾಜಕೀಯ ಬಿಕ್ಕಟ್ಟಿನಿಂದ ಉಂಟಾಗುವ ಸಂಭವನೀಯ ಸಮಸ್ಯೆಗಳಿಂದ ಅದಾನಿ ಪವರ್ ಅನ್ನು ರಕ್ಷಿಸಲು ಸಹಾಯ ಮಾಡುತ್ತದೆ ಎಂದು ವರದಿ ತಿಳಿಸಿದೆ.
ಬಾಂಗ್ಲಾದೇಶಕ್ಕೆ ಪ್ರತ್ಯೇಕವಾಗಿ ವಿದ್ಯುತ್ ಸರಬರಾಜು ಮಾಡುವ ಜನರೇಟರ್‌ಗಳ ಕುರಿತು 2018ರಲ್ಲಿ ಕೇಂದ್ರ ಸರ್ಕಾರವು ಮಾರ್ಗಸೂಚಿಗಳನ್ನು ರೂಪಿಸಿತ್ತು. ಅದರನ್ವಯ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿರುವ ಅದಾನಿ ಪವರ್‌ನ 1,600-ಮೆಗಾವ್ಯಾಟ್ ವಿದ್ಯುತ್ ಸ್ಥಾವರವು ಪ್ರಸ್ತುತ ಅದು ಉತ್ಪಾದಿಸುವ ಎಲ್ಲಾ ವಿದ್ಯುಚ್ಛಕ್ತಿಯನ್ನು ಮತ್ತೊಂದು ದೇಶಕ್ಕೆ ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಸುತ್ತಿದೆ.
ಆಗಸ್ಟ್ 12ರಂದು ಕೇಂದ್ರ ವಿದ್ಯುತ್ ಸಚಿವಾಲಯವು ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿದ್ದು, ಇದರಿಂದ ಭಾರತದೊಳಗೆ ವಿದ್ಯುತ್ ಮಾರಾಟಕ್ಕೆ ಅನುಕೂಲವಾಗುವಂತೆ ವಿದ್ಯುತ್ ಉತ್ಪಾದನಾ ಕೇಂದ್ರವನ್ನು ಭಾರತೀಯ ಗ್ರಿಡ್‌ಗೆ ಸಂಪರ್ಕಿಸಲು ಸರ್ಕಾರವು ಅನುಮತಿ ನೀಡಬಹುದು ರಾಯಿಟರ್ಸ್ ಹೇಳಿದೆ.
ರಾಯಿಟರ್ಸ್ ಪ್ರಕಾರ, ಹೊರ ದೇಶದಿಂದ ಪಾವತಿ ವಿಳಂಬವಾದರೆ ಭಾರತೀಯ ಗ್ರಿಡ್‌ಗೆ ವಿದ್ಯುತ್ ಮಾರಾಟ ಮಾಡಲು ತಿದ್ದುಪಡಿ ಅನುಮತಿಸುತ್ತದೆ. ಮಾರ್ಗಸೂಚಿಗಳ ತಿದ್ದಪಡಿ ಭಾರತದಲ್ಲಿ ಒಟ್ಟಾರೆ ವಿದ್ಯುತ್ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅದಾನಿ ಗ್ರೂಪ್ ಸಮರ್ಥಿಸಿಕೊಂಡಿದೆ. ಆದರೆ, ಇದು ಅದಾನಿಯನ್ನು ರಕ್ಷಿಸುವ ಪ್ರಯತ್ನ ಎಂದು ವರದಿಗಳು ಹೇಳಿವೆ.
ಬಾಂಗ್ಲಾದೇಶದಲ್ಲಿ ಅದಾನಿ ಪವರ್‌ನ ವಿದ್ಯುಚ್ಛಕ್ತಿ ರಫ್ತು ವಿವಾದದ ಕೇಂದ್ರವಾಗಿದೆ. ಅದಾನಿ ಹೆಚ್ಚಿನ ಬೆಲೆಗೆ ವಿದ್ಯುತ್ ಮಾರುತ್ತಿದೆ ಎಂದು ಬಾಂಗ್ಲಾದ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅದಾನಿ ಸಮೂಹ ಸಂಸ್ಥೆಯು 2017ರಲ್ಲಿ ಸಹಿ ಮಾಡಿದ ಒಪ್ಪಂದದ ಪ್ರಕಾರ, ಅದು ನೆರೆಯ ಬಾಂಗ್ಲಾದೇಶಕ್ಕೆ ವಿದ್ಯುತ್ ಮಾರಾಟ ಮಾಡುತ್ತಿದೆ. ಆದರೆ, ಕಳೆದ ವರ್ಷ, ಬಾಂಗ್ಲಾದೇಶದ ವಿದ್ಯುತ್ ಅಭಿವೃದ್ಧಿ ಮಂಡಳಿಯು ಒಪ್ಪಂದವನ್ನು ಪರಿಷ್ಕರಿಸುವಂತೆ ಕೋರಿ ಕಂಪನಿಗೆ ಪತ್ರ ಬರೆದಿತ್ತು. ಆದರೆ, ಪರಿಷ್ಕರಣೆಯ ಬಗ್ಗೆ ಇದುವರೆಗೆ ಯಾವುದೇ ವರದಿಯಾಗಿಲ್ಲ.
ಇದನ್ನೂ ಓದಿ : ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿಯಿಂದ 100ಕ್ಕೂ ಹೆಚ್ಚು ‘ಇಸ್ಲಾಮೋಫೋಬಿಕ್’ ಹೇಳಿಕೆ: ಹ್ಯೂಮನ್ ರೈಟ್ಸ್ ವಾಚ್