Homeಮುಖಪುಟಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

ಕಾಂಗ್ರೆಸ್ ಅಭ್ಯರ್ಥಿಗೆ ಮುಖೇಶ್ ಅಂಬಾನಿ ಬೆಂಬಲ ಏನನ್ನು ತೋರಿಸುತ್ತದೆ?

- Advertisement -
- Advertisement -

| ನೀಲಗಾರ |

ಯಾವುದೇ ಚುನಾವಣೆಯ ಫಲಿತಾಂಶ ಬರುವ ಮುಂಚೆ ಎರಡು ಗುಂಪುಗಳಿಗೆ ಅದರ ವಾಸನೆ ಹತ್ತಿರುತ್ತದೆ ಎನ್ನಲಾಗುತ್ತದೆ. ಒಂದು ಉದ್ಯಮಿಗಳ ಗುಂಪು. ಇನ್ನೊಂದು ಅಧಿಕಾರಿಗಳ ಗುಂಪು. ಆದರೆ, ನರೇಂದ್ರ ಮೋದಿಯವರು ಮತ್ತು ಅವರ ತಂಡ ಹುಟ್ಟಿಸಿರುವ ಭೀತಿಯ ವಾತಾವರಣದಲ್ಲಿ ಯಾವುದೇ ಅಧಿಕಾರಿ ಅಥವಾ ಉದ್ದಿಮೆಪತಿ ಅವರ ವಿರುದ್ಧ ಮಾತನಾಡುವ ಪರಿಸ್ಥಿತಿ ಇಲ್ಲ.

ಸಮಾಜದಲ್ಲಿ ಸಾಮಾನ್ಯವಾಗಿ ನಿರ್ಭೀತಿಯಿಂದ ಮಾತಾಡುವ ಸಾಹಿತಿಗಳು, ಕಲಾವಿದರೇ ಹೆದರಿ ನಡುಗುವಂತಹ ವಾತಾವರಣ ಇದೆ. ಧಾಬೋಲ್ಕರ್, ಪಾನ್ಸರೆ, ಕಲಬುರ್ಗಿ, ಗೌರಿ ಲಂಕೇಶ್, ಜಸ್ಟೀಸ್ ಲೋಯಾರೂ ಸೇರಿದಂತೆ ಹಲವು ಕೊಲೆಗಳು ಸಮಾಜದಲ್ಲಿ ಒಂದು ನಿರ್ದಿಷ್ಟ ಸಂದೇಶವನ್ನು ರವಾನಿಸಿವೆ.

ಹೀಗಿರುವಾಗ ಉದ್ದಿಮೆಪತಿಗಳು ಮತ್ತು ಅಧಿಕಾರಿಗಳು ಮಾತನಾಡುವುದು ಕಷ್ಟಸಾಧ್ಯವೇ ಸರಿ.

ಇಂತಹ ಪರಿಸ್ಥಿತಿಯಲ್ಲಿ ದೇಶದ ನಂ.1 ಶ್ರೀಮಂತ ಮುಖೇಶ್ ಅಂಬಾನಿಯು ದಕ್ಷಿಣ ಮುಂಬೈನ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವ್ರಾ ಪರವಾಗಿ ಬ್ಯಾಟಿಂಗ್ ಮಾಡಿರುವುದು ಏನನ್ನು ತೋರಿಸುತ್ತದೆ ಎಂಬ ಕುತೂಹಲ ಮೂಡಿದೆ. ಮುಖೇಶ್ ಅಂಬಾನಿಯ ಜಿಯೋ ಲಾಂಚ್ ಮಾಡಿದಾಗ, ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನೇ ಬಳಸಿಕೊಂಡಿದ್ದರು. ಅಷ್ಟಲ್ಲದೇ ಮುಖೇಶ್ ಅಂಬಾನಿ ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ದೊಡ್ಡ ಪ್ರಮಾಣದಲ್ಲಿ ಹಣಕಾಸನ್ನು ಒದಗಿಸಿಕೊಟ್ಟಿದ್ದರು ಎಂಬ ಆರೋಪವಿದೆ.

ಮೋದಿ ಸರ್ಕಾರವನ್ನು ‘ಅಂಬಾನಿ, ಅದಾನಿಗಳ ಸರ್ಕಾರ’ ಎಂದು ಕರೆಯುವುದು ಒಂದು ನುಡಿಗಟ್ಟಾಗಿ ಹೋಗಿದೆ. ರಫೇಲ್ ಡೀಲ್.ಅನ್ನು ಮೋದಿ ಸರ್ಕಾರ ಎಲ್ಲಾ ನಿಯಮಗಳನ್ನೂ ಉಲ್ಲಂಘಿಸಿ ದಯಪಾಲಿಸಿದ್ದು ಅನಿಲ್ ಅಂಬಾನಿಗೆ. ಅಂದರೆ ಇದೇ ಮುಖೇಶ್ ಅಂಬಾನಿಯ ಸ್ವಂತ ಸಹೋದರನಿಗೆ. ಅದನ್ನು ರಾಹುಲ್ ಗಾಂಧಿಯವರು ತಮ್ಮ ಯಾವ ಚುನಾವಣಾ ಭಾಷಣದಲ್ಲೂ ಉಲ್ಲೇಖಿಸದೇ ಬಿಟ್ಟಿಲ್ಲ.

ಹೀಗಿದ್ದರೂ, ಮುಖೇಶ್ ಅಂಬಾನಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಬಹಿರಂಗವಾಗಿ ಮಾತಾಡಿರುವುದು ಏಕೆ? ಮಿಲಿಂದ್ ದೇವ್ರಾ ಮೊದಲಿಗೆ ಮು.ಅಂಬಾನಿಯ ವಿಡಿಯೋವನ್ನು ಟ್ವೀಟ್ ಮಾಡಿ, ಬೆಂಬಲವನ್ನು ಸಾದರಪಡಿಸಿದ್ದರು.

ಇದನ್ನು ಎರಡು ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು.

ಒಂದು, ಮೇಲೆ ಹೇಳಿದಂತೆ ಮೋದಿಯೇತರ ಸರ್ಕಾರ ಕೇಂದ್ರದಲ್ಲಿ ಬರಬಹುದು ಎಂಬ ವಾಸನೆ ಅಂಬಾನಿಗೆ ಹತ್ತಿದೆ. ಕೆಲವು ಕೋಟಿಗಳನ್ನು ಖರ್ಚು ಮಾಡಿದರೆ, ದೇಶಾದ್ಯಂತ ಇರುವ ಮತದಾರರ ಮನದಿಂಗಿತವನ್ನು ಸರ್ವೇ ಮಾಡಿಕೊಡುವ ಏಜೆನ್ಸಿಗಳಿವೆ. ದೇಶದ ನಂ.1 ಕಾರ್ಪೋರೇಟ್ ಸಂಸ್ಥೆಯು ತನಗಿಷ್ಟ ಬಂದ ಹಾಗೆ ಮತದಾರರ ಒಲವನ್ನು ತಿರುಚಲು ಅಥವಾ ಗಾಳಿ ಬಂದ ಕಡೆಗೆ ತಿರುಗಿಕೊಳ್ಳಲು ಇಂತಹ ಸರ್ವೇ ಮಾಡಿಸಿರಲ್ಲ ಎಂದು ನಂಬಲಾಗದು. ಹಾಗಾಗಿ ಮುಖೇಶ್ ಅಂಬಾನಿಗೆ ಸಣ್ಣ ಮೊತ್ತವಾಗಿರಬಹುದಾದ ಕೆಲವು ಕೋಟಿಗಳನ್ನು ಖರ್ಚು ಮಾಡಿ ತಿಳಿದುಕೊಂಡಿರಬಹುದಾದ, ಗಾಳಿಯ ದಿಕ್ಕಿನ ಅನುಸಾರ ಈ ಬಹಿರಂಗ ಬೆಂಬಲ ಇರಬಹುದು.

ಎರಡು, ಮಿಲಿಂದ್ ದೇವ್ರಾ ಕುಟುಂಬ ಮತ್ತು ಅಂಬಾನಿ ಕುಟುಂಬದ ಸಂಬಂಧ ಬಹಳ ಹಳೆಯದು. ಮುಂಬೈನ ಮೇಯರ್ ಸಹಾ ಆಗಿದ್ದ ಮುರಳಿ ಮನೋಹರ್ ದೇವ್ರಾ ಈ ಅಂಬಾನಿಯ ಅಪ್ಪ ಧೀರೂಬಾಯಿ ಅಂಬಾನಿಯ ಸ್ನೇಹಿತರಾಗಿದ್ದರು. ಸೀನಿಯರ್ ದೇವ್ರಾ ತೀರಿಕೊಂಡಾಗ ಅಂಬಾನಿಯ  ಇಡೀ ಕುಟುಂಬವಲ್ಲದೇ ಸೋನಿಯಾಗಾಂಧಿಯವರ ಇಡೀ ಕುಟುಂಬವೂ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿತ್ತು. ಆ ರೀತಿಯಲ್ಲಿ ದೇವ್ರಾ ಕುಟುಂಬವು 10, ಜನಪತ್ (ಸೋನಿಯಾ ನಿವಾಸ) ಮತ್ತು ಮುಂಬೈ ಉದ್ದಿಮೆದಾರರ ನಡುವಿನ ಕೊಂಡಿಯಾಗಿ ಕೆಲಸ ಮಾಡುತ್ತದೆ.

ಮುರಳೀ ದೇವ್ರಾ 2006ರಿಂದ 2011ರವರೆಗೆ ಸತತ ಐದು ವರ್ಷಗಳ ಕಾಲ ಕೇಂದ್ರ ಪೆಟ್ರೋಲಿಯಂ ಸಚಿವರಾಗಿದ್ದರು. ಇದೇ ಅವಧಿಯಲ್ಲಿ ಕೃಷ್ಣಾ ಗೋದಾವರಿ ಕಣಿವೆಯ ತೈಲ –ಅನಿಲ ನಿಕ್ಷೇಪಗಳು ಅಂಬಾನಿಯ ಪಾಲಿಗೆ ಹೋಗುವ ಪ್ರಕ್ರಿಯೆ ನಡೆದಿತ್ತು.

ಇವೆಲ್ಲದರ ಭಾಗವಾಗಿ ಮಿಲಿಂದ್ ಗೆ ನೀಡುತ್ತಿರುವ ಬೆಂಬಲ ಸುದೀರ್ಘ ಕಾಲದ ಕೌಟುಂಬಿಕ ಬಾಂಧವ್ಯದ ಕಾರಣಕ್ಕೆ ಎಂದು ಹೇಳಬಹುದಾಗಿದ್ದರೂ, ಅದನ್ನು ಬಹಿರಂಗವಾಗಿ ಹೇಳುವ ಅಗತ್ಯವಿರಲಿಲ್ಲ. ಬದಲಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಬಂದರೆ, ಇದೇ ಮಿಲಿಂದ್ ಸರ್ಕಾರದ ಜೊತೆ ಕೊಂಡಿಯಾಗಿ ಕಾರ್ಯನಿರ್ವಹಿಸಲಿ ಎಂಬ ಮುಂದಾಲೋಚನೆಯೂ ಅಂಬಾನಿಯದ್ದಿರಬಹುದು.

ಯಾರು ಅಧಿಕಾರಕ್ಕೆ ಬಂದರೂ, ಅಂಬಾನಿಗೆ ಏನೂ ಧಕ್ಕೆಯಾಗದಂತೆ ಇಂತಹ ಹಲವು ಏರ್ಪಾಡುಗಳಿರಲು ಸಾಧ್ಯ. ಆದರೆ, ‘ಮೋದಿಯು ಆ 15-20 ಉದ್ದಿಮೆಪತಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಪದೇ ಪದೇ ಆರೋಪ ಮಾಡುತ್ತಿರುವ ರಾಹುಲ್ ಗಾಂಧಿಯು ಮುಖೇಶ್ ಅಂಬಾನಿಯ ಪರವಾಗಿ ಇರುತ್ತಾರಾ ಎಂಬ ಪ್ರಶ್ನೆಗೆ ಭವಿಷ್ಯವಷ್ಟೇ ಉತ್ತರ ನೀಡಬಲ್ಲುದು.

ಅದೇ ಸಂದರ್ಭದಲ್ಲಿ ಮಿಲಿಂದ್ ದೇವ್ರಾನಂತಹ ವ್ಯಕ್ತಿಗಳು ಹೇಗೆ ರಾಜಕಾರಣ ಮತ್ತು ಉದ್ದಿಮೆಪತಿಗಳ ನಡುವಿನ ಕೊಂಡಿಯಾಗಿ ಎಲ್ಲಾ ಕಾಲದಲ್ಲೂ ಚಲಾವಣೆಯಲ್ಲಿರುತ್ತಾರೆಂಬುದನ್ನೂ ಈ ಬೆಳವಣಿಗೆ ತೋರಿಸುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪನ್ನೂನ್‌ ಹತ್ಯೆ ಸಂಚು: ವಾಷಿಂಗ್ಟನ್ ಪೋಸ್ಟ್ ವರದಿಗೆ ಅಮೆರಿಕ ಪ್ರತಿಕ್ರಿಯೆ

0
ಸಿಖ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂನ್‌ ಹತ್ಯೆಯ ಸಂಚಿಗೆ ಸಂಬಂಧಿಸಿದ 'ದಿ ವಾಷಿಂಗ್ಟನ್ ಪೋಸ್ಟ್ ವರದಿ' ಬೆನ್ನಲ್ಲಿ ಆರೋಪಗಳ ಬಗ್ಗೆ ತನಿಖೆಗೆ ಭಾರತ ಸರ್ಕಾರದೊಂದಿಗೆ ನಿಯಮಿತವಾಗಿ ಕೆಲಸ ಮಾಡುತ್ತಿದೆ ಎಂದು ಅಮೆರಿಕ...