ಮಯನ್ಮಾರ್‌ನಲ್ಲಿ ಮಿಲಿಟರಿ ಪಡೆಗಳು ಕನಿಷ್ಠ 50 ಪ್ರತಿಭಟನಾಕಾರರನ್ನು ಗುಂಡಿಕ್ಕಿ ಕೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲಿನ ಆಡಳಿತಾರೂಢ ಪಕ್ಷ ಒಂದು ವರ್ಷ ತುರ್ತುಪರಿಸ್ಥಿತಿ ಹೇರಿ, ಮಿಲಿಟರಿ ಆಡಳಿತಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಈ ಪ್ರತಿಭಟನೆ ಆರಂಭವಾಗಿದ್ದು, ಅಂದಿನಿಂದಲೂ ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಿದೆ.
“50 ಜನ ಪ್ರತಿಭಟನಾಕಾರರು ಮಿಲಿಟರಿ ಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ. ಇದು ಸಶಸ್ತ್ರ ಪಡೆಗಳಿಗೆ ಅವಮಾನಕರವಾದ ದಿನ” ಎಂದು ಪದಚ್ಯುತ ಶಾಸಕರು ಸ್ಥಾಪಿಸಿದ ಜುಂಟಾ ವಿರೋಧಿ ಗುಂಪಿನ ಸಿಆರ್‌ಪಿಹೆಚ್‌ನ ವಕ್ತಾರ ಡಾ.ಸಾಸಾ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಶನಿವಾರ ಬೆಳಿಗ್ಗೆ ಯಾಂಗೊನ್‌ನ ದಲಾ ಉಪನಗರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಜನಸಮೂಹದ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ನೌ ವರದಿ ಮಾಡಿದೆ. ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಇನ್ಸೈನ್ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ 21 ವರ್ಷದೊಳಗಿನ ಫುಟ್ಬಾಲ್ ತಂಡದಲ್ಲಿ ಆಡುವ ಯುವಕ ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ನೆರೆಹೊರೆಯವರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಯನ್ಮಾರ್ ಮೇಲೆ ಹಿಡಿತ ಸಾಧಿಸಿದ ಸೇನೆ; ಆಂಗ್ ಸಾನ್ ಸೂಕಿ ಬಂಧನ
ಮ್ಯಾಂಡಲೆನಲ್ಲಿ ನಡೆದ ವಿವಿಧ ಘಟನೆಗಳಲ್ಲಿ 13 ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ನೌ ಹೇಳಿದೆ. ಮ್ಯಾಂಡಲೆ ಬಳಿಯ ಸಾಗಿಂಗ್ ಪ್ರದೇಶ, ಪೂರ್ವದ ಲಾಶಿಯೊ ಪಟ್ಟಣ, ಬಾಗೊ ಪ್ರದೇಶದಲ್ಲಿ, ಯಾಂಗೊನ್ ಬಳಿ ಮತ್ತು ಇತರೆಡೆಗಳಿಂದ ಸಾವುಗಳು ವರದಿಯಾಗಿವೆ ಎಂದು ಅದು ಹೇಳಿದೆ.
ಶನಿವಾರ ಒಟ್ಟು 50 ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್ ನೌ ಹೇಳಿದೆ. ಪ್ರತಿಭಟನಾಕಾರರ ಕೊಲೆಗಳನ್ನು ನಿಲ್ಲಿಸಿ ಎಂದು ವಿಶ್ವಸಂಸ್ಥೆ ಒತ್ತಾಯಿಸಿತ್ತು. ಆದರೆ ಅಲ್ಲಿನ ಮಿಲಿಟರಿ ಪಡೆಗಳು ಪ್ರತಿಭಟನೆಯನ್ನು ಹತ್ತಿಕ್ಕಲು ಈ ರೀತಿ ಪ್ರಯತ್ನಿಸುತ್ತಿದೆ.
ಮಯನ್ಮಾರ್‌ನಲ್ಲಿ ಆಡಳಿತವನ್ನು ಸೇನೆಯು ಕ್ಷಿಪ್ರಕ್ರಾಂತಿ ಮೂಲಕ ವಶಕ್ಕೆ ಪಡೆದುಕೊಂಡಿದ್ದು, ಇದನ್ನು ವಿರೋಧಿಸಿ ಸಾವಿರಾರು ಪ್ರತಿಭಟನಾಕಾರರು ಮಯನ್ಮಾರ್‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಮ್ಯಾನ್ಮಾರ್‌ನಲ್ಲಿನ ಫೆ.1ರಿಂದಲೂ ಸೇನಾದಂಗೆ ವಿರುದ್ಧ ಜನರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸೇನಾಡಳಿತವು ಯತ್ನಿಸುತ್ತಿದೆ. ಈ ಗಲಭೆಯಲ್ಲಿ ಈವರೆಗೆ ಸುಮಾರು 380ಕ್ಕೂ ಹೆಚ್ಚು ಪ್ರತಿಭಟನಕಾರರು ಹತರಾಗಿದ್ದಾರೆ.
ಇದನ್ನೂ ಓದಿ: ಪ್ರತಿಭಟನಾಕಾರರ ಕೊಲೆಗಳನ್ನು ನಿಲ್ಲಿಸಿ: ಮ್ಯಾನ್ಮಾರ್ ಸೈನ್ಯಕ್ಕೆ ವಿಶ್ವಸಂಸ್ಥೆ ಒತ್ತಾಯ