Homeಕರ್ನಾಟಕಮೈಸೂರು: ಅಂಬೇಡ್ಕರ್‌ ಪ್ರತಿಮೆ ತೆರವು; ಕತ್ತುಕೊಯ್ದುಕೊಂಡ ಯುವಕ; ಏನಿದು ವಿವಾದ?

ಮೈಸೂರು: ಅಂಬೇಡ್ಕರ್‌ ಪ್ರತಿಮೆ ತೆರವು; ಕತ್ತುಕೊಯ್ದುಕೊಂಡ ಯುವಕ; ಏನಿದು ವಿವಾದ?

- Advertisement -
- Advertisement -

ಮೈಸೂರು ನಗರದ ಮಾತೃ ಮಂಡಲಿ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆ ಇರಿಸಲು ಅವಕಾಶ ನೀಡಲಿಲ್ಲ ಎಂದು ಯುವಕನೊಬ್ಬ ಕತ್ತುಕೊಯ್ದುಕೊಂಡಿರುವ ಘಟನೆ ನಡೆದಿದೆ.

ಶನಿವಾರ ಮುಂಜಾನೆ 3 ಗಂಟೆಯ ವೇಳೆಯಲ್ಲಿ ಪ್ರತಿಮೆಯನ್ನು ಇರಿಸಲು ಯತ್ನಿಸಲಾಗಿದೆ. ಯಾವುದೇ ಅನುಮತಿ ಪಡೆದಿಲ್ಲವೆಂದು ಪಾಲಿಕೆ ಸಿಬ್ಬಂದಿ ಹಾಗೂ ವಿ.ವಿ.ಪುರಂ ಠಾಣೆ ಪೊಲೀಸರು ಪ್ರತಿಮೆಯನ್ನು ತೆರವು ಮಾಡಿಸಿದ್ದಾರೆ. ಈ ವೇಳೆ ಸತೀಶ್‌ (29) ಎಂಬ ಯುವಕ ಕತ್ತುಕೊಯ್ದುಕೊಂಡಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡು ಪೊಲೀಸರು ಹಾಗೂ ಪಾಲಿಕೆ ಸಿಬ್ಬಂದಿ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಸಂಬಂಧ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ವಿ.ವಿ.ಪುರಂ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ ವೆಂಕಟೇಶ್‌, “ವಿವಾದಿತ ವೃತ್ತದಲ್ಲಿ ಪ್ರತಿಮೆ ಇರಿಸಲಾಗಿತ್ತು. ಯಾವುದೇ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಪಾಲಿಕೆಯವರು ಹಾಗೂ ಪೊಲೀಸರು ಜೊತೆಗೂಡಿ ಪ್ರತಿಮೆಯನ್ನು ತೆರವುಗೊಳಿಸಿ ಅಂಬೇಡ್ಕರ್‌ ಭವನದೊಳಗೆ ಇರಿಸಿದೆವು. ಈ ವೇಳೆ ಯುವಕನೊಬ್ಬ ಕತ್ತುಕೊಯ್ದುಕೊಂಡಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾನೆ” ಎಂದು ತಿಳಿಸಿದರು.


ಇದನ್ನೂ ಓದಿರಿ: ‘ದಲಿತನನ್ನು ಮದುವೆಗೆ ಕರೆದರು, ಸಹಪಂಕ್ತಿ ಭೋಜನ ಮಾಡಿದ್ದಕ್ಕೆ ಕೊಲೆ ಮಾಡಿದರು’


‘ಬೇರೆ ಸ್ಥಳಗಳಲ್ಲಿ ಅನಧಿಕೃತವಾಗಿ ಬೇರೆಯವರ ಪ್ರತಿಮೆಗಳನ್ನು ಇರಿಸಿದ್ದರೂ ಪಾಲಿಕೆ ಹಾಗೂ ಪೊಲೀಸರು ಕ್ರಮ ವಹಿಸುವುದಿಲ್ಲ. ದಲಿತರು ಅಂಬೇಡ್ಕರ್‌ ಪ್ರತಿಮೆ ಇರಿಸಿದರೆ ಮಾತ್ರ ತೆರವು ಮಾಡಿಸುತ್ತಾರೆ’ ಎಂಬ ಆರೋಪಗಳಿವೆ ಎಂದು ಕೇಳಿದಾಗ, “ನಮ್ಮ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅನಧಿಕೃತ ಪ್ರತಿಮೆಗಳಿಲ್ಲ. ಮತ್ತೊಂದು ವಿಷಯವೇನೆಂದರೆ ಸಾರ್ವಜನಿಕ ಸ್ಥಳಗಳಲ್ಲಿ ವಿಗ್ರಹಗಳನ್ನು ಇರಿಸಿದರೆ, ಪೊಲೀಸರಿಗೆ ಎಂದಿಗೂ ಸಮಸ್ಯೆಯೇ. ಯಾಕೆಂದರೆ ಆ ಪ್ರತಿಮೆಗಳನ್ನು ಕಾಯ್ದುಕೊಳ್ಳಬೇಕು, ಅಲ್ಲಿ ಸಿಸಿ ಟಿವಿ ಅಳವಡಿಸಬೇಕು. ಯಾರಾದರೂ ಅವಿವೇಕಿ ಬಂದು ಮದ್ಯದ ಅಮಲಿನಲ್ಲಿ ಪ್ರತಿಮೆಗಳನ್ನು ವಿರೂಪಗೊಳಿಸಿದರೆ ಪೊಲೀಸರೇ ಹೊಣೆಗಾರರಾಗಬೇಕಾಗುತ್ತದೆ” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

“ಶನಿವಾರ ಬೆಳಿಗ್ಗೆ ಅಂಬೇಡ್ಕರ್‌ ಭವನದಲ್ಲಿ ಸಭೆ ನಡೆಯಿತು. ಅನುಮತಿ ಪಡೆಯದೇ ಅಂಬೇಡ್ಕರ್‌ ಪ್ರತಿಮೆ ಇರಿಸಿದ್ದು ತಪ್ಪಾಗಿದೆ. ಅನುಮತಿ ಪಡೆದೇ ಪ್ರತಿಮೆಯನ್ನು ಸ್ಥಾಪಿಸುತ್ತೇವೆ ಎಂದು ದಲಿತ ಮುಖಂಡರು ತಿಳಿಸಿದ್ದಾರೆ” ಎಂದು ಇನ್‌ಸ್ಪೆಕ್ಟರ್‌ ತಿಳಿಸಿದರು.

ನಾನುಗೌರಿ.ಕಾಂ ಜೊತೆ ಮಾತನಾಡಿದ ಮಾಜಿ ಮೇಯರ್‌‌ ಹಾಗೂ ದಲಿತ ಮುಖಂಡ ಪುರುಷೋತ್ತಮ್‌ ಅವರು, “ಅನಧಿಕೃತವಾಗಿ ಪ್ರತಿಮೆಗಳನ್ನು ಸ್ಥಾಪಿಸುವುದು ತಪ್ಪು. ನಗರದ ಅನೇಕ ಕಡೆ ವಿವಿಧ ದಾರ್ಶನಿಕರ ಪ್ರತಿಮೆಗಳನ್ನು ಇಡಲಾಗಿದೆ. ಅವುಗಳನ್ನು ಯಾರೂ ತೆರವು ಮಾಡಿಸಿಲ್ಲ. ಅಂಬೇಡ್ಕರ್‌ ಪ್ರತಿಮೆ ಇರಿಸಿದರೆ ಕ್ರಮ ಜರುಗಿಸುತ್ತಾರೆ. ನಾವು ಯಾವ ದಾರ್ಶನಿಕರ ವಿರೋಧಿಗಳಲ್ಲ. ಆದರೆ ಬಾಬಾ ಸಾಹೇಬರ ಪ್ರತಿಮೆಯನ್ನು ವಿರೋಧಿಸುವುದು ಸಲ್ಲದು. ಮಾತೃಮಂಡಲಿ ಜಾಗದಲ್ಲಿ ಅಂಬೇಡ್ಕರ್‌‌ ಪ್ರತಿಮೆ ಇರಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಪಾಲಿಕೆಗೆ ಮತ್ತೊಮ್ಮೆ ಮನವಿ ಮಾಡಲಾಗುವುದು. ಈ ಸಂಬಂಧ ಮತ್ತೊಂದು ಸಭೆ ನಡೆಸಿ, ಪಾಲಿಕೆಯ ಮೇಲೆ ಒತ್ತಡ ತರಲಾಗುವುದು” ಎಂದು ತಿಳಿಸಿದರು.

ದಾರ್ಶನಿಕರ ಹೆಸರಲ್ಲಿ ಜಗಳ ಸಲ್ಲದು

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌, ರಾಷ್ಟ್ರಕವಿ ಕುವೆಂಪು ಅವರು ದೇಶಕಂಡ ಮಹಾನ್‌ ಮಾನವತಾವಾದಿಗಳು ಹಾಗೂ ದಾರ್ಶಕನಿಕರು. ಆದರೆ ಜಾತಿವಾದಿ ಸಮಾಜ ಈ ದಾರ್ಶನಿಕರನ್ನು ಜಾತಿಯ ಗೂಟಕ್ಕೆ ಕಟ್ಟಿರುವುದು ವಿಷಾದನೀಯ. ಈ ಇಬ್ಬರು ಮಹಾನೀಯರು ಸಮಾಜದಲ್ಲಿನ ಅಸಮಾನತೆ, ಶ್ರೇಣಿಕೃತ ವ್ಯವಸ್ಥೆಯನ್ನು ಪ್ರಶ್ನಿಸಿದವರು. ದುರಾದೃಷ್ಟವಶಾತ್‌ ಅಂಬೇಡ್ಕರ್‌ ಎಂದರೆ ದಲಿತರಿಗೆ, ಕುವೆಂಪು ಎಂದರೆ ಒಕ್ಕಲಿಗರಿಗೆ ಎಂಬ ವಿಂಗಡಣೆ ಆಗಿರುವುದು ಮಾತ್ರ ವಿಷಾದನೀಯ. ಕುವೆಂಪು ಹಾಗೂ ಅಂಬೇಡ್ಕರ್‌ ಅವರನ್ನು ಸಮಾನ ದೂರದಲ್ಲಿಟ್ಟು ಅಣಕ ಮಾಡುವ ರಾಜಕೀಯ ವ್ಯವಸ್ಥೆ ಒಂದು ಕಡೆ ಇದ್ದರೆ, ಈ ಇಬ್ಬರ ಹೆಸರಲ್ಲಿ ಜಗಳ ಆಡುತ್ತಿರುವ ಜನವರ್ಗ ಒಂದು ಕಡೆ ಇದೆ. ನಿನ್ನೆ ಆಗಿರುವ ಘಟನೆಗೂ ಇಂಥದ್ದೇ ಕಾರಣವಿದೆ ಎನ್ನುತ್ತವೆ ಮೂಲಗಳು.

ಮೈಸೂರು ನಗರದ ಪಡುವಾರಹಳ್ಳಿ, ಒಂಟಿಕೊಪ್ಪಲು ಭಾಗದಲ್ಲಿ ಇರುವ ಮಾತೃಮಂಡಳಿ ವೃತ್ತದಲ್ಲಿ ಅಂಬೇಡ್ಕರ್‌ ಪ್ರತಿಮೆ ಇಡಬೇಕೆಂದು ದಲಿತರು ಆಗ್ರಹಿಸುತ್ತಿದ್ದರೆ, ಕುವೆಂಪು ಪ್ರತಿಮೆ ಇಡಬೇಕೆಂದು ಒಕ್ಕಲಿಗರು ಬಯಸುತ್ತಿದ್ದಾರೆ. ಈ ಭಾಗದಲ್ಲಿ ದಲಿತರು, ನಾಯಕರು ಹಾಗೂ ಒಕ್ಕಲಿಗರು- ವಾಸವಿದ್ದಾರೆ. ಆದರೆ ಪ್ರತಿಮೆ ವಿಚಾರವಾಗಿ ಒಡೆದುಹೋಗುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಅಂಬೇಡ್ಕರ್‌‌ ಮತ್ತು ಕುವೆಂಪು ಮಹಾನ್‌ ಮಾನವತಾವಾದಿಗಳು. ಆದರೆ ಈ ಮಹಾನೀಯರ ಹೆಸರಲ್ಲಿ ಜಗಳ ಆಡುವುದನ್ನು ಬಿಟ್ಟು- ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಶಾಂತಿಪ್ರಿಯ, ಸಂವಿಧಾನಪ್ರಿಯ ಸಮಾಜದ ಆಗ್ರಹ.


ಇದನ್ನೂ ಓದಿರಿ: ಬೆಂಗಳೂರು: ಯುವಕನ ಬಲಗೈ ಕಟ್ ಆಗುವಂತೆ ಚಿತ್ರಹಿಂಸೆ ನೀಡಿದ್ದ ಮೂವರು ಪೊಲೀಸರ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...