Homeಮುಖಪುಟಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

ಶ್ರದ್ಧಾಂಜಲಿ; ಅಗಲಿದ ಆತ್ಮೀಯ ಗೆಳೆಯ ಗಂಗಾಧರಮೂರ್ತಿ

- Advertisement -
- Advertisement -

ಇನ್ನೂ ಒಂದು ವರ್ಷ ಮುಗಿದಿಲ್ಲ; ಇದು ಮೂರನೇ ಆಘಾತ. ಮೊದಲಿಗೆ ರಂಗಾರೆಡ್ಡಿ, ಎರಡು ತಿಂಗಳ ಹಿಂದೆ ಹೆಚ್.ವಿ.ವೇಣುಗೋಪಾಲ್, ಇದೀಗ ಗಂಗಾಧರ ಮೂರ್ತಿ; 1971ರಲ್ಲಿ ನಾನು ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕನ ಕೆಲಸಕ್ಕೆ ಸೇರಿದೆ. 1978 ಮತ್ತು ನಂತರ ಈ ಮೂವರು ನಮ್ಮ ಕಾಲೇಜಿನಲ್ಲಿ ಮೇಷ್ಟ್ರುಗಳಾದರು. 1992ರಲ್ಲಿ ನಾನು ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜಿಗೆ ವರ್ಗವಾಗುವವರೆಗೆ ನಾವು ನಾಲ್ವರೂ ಮತ್ತು ಇತರ ಕೆಲವರು ಕಾಲೇಜಿನಲ್ಲಿ ಮತ್ತು ಹೊರಗಡೆ ಜತೆಗೇ ದುಡಿಯುತ್ತಿದ್ದೆವು. ರಂಗಾರೆಡ್ಡಿ ಕನ್ನಡ ಪಾಠ ಮಾಡಿದರೆ, ವೇಣುಗೋಪಾಲ್ ಸಂಸ್ಕೃತ, ಗಂಗಾಧರ ಮೂರ್ತಿಯವರು ಇಂಗ್ಲಿಷ್.

ವಯಸ್ಸಿನಲ್ಲಿ ನನಗಿಂತಲೂ ಮೂರು ವರ್ಷ ಹಿರಿಯರಾದ ಗಂಗಾಧರಮೂರ್ತಿ ಮೈಸೂರಿನಲ್ಲಿ ಅಂಚೆ ಇಲಾಖೆಯ ಆರ್.ಎಂ.ಎಸ್.ನಲ್ಲಿ ಗೆಳೆಯರಾದ ಸಿರಿಮನೆ ನಾಗರಾಜರ ಹಿರಿಯ ಸಹೋದ್ಯೋಗಿಯಾಗಿ ದುಡಿಯುತ್ತಾ, ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಪಡೆದು ನಮ್ಮ ಕಾಲೇಜಿಗೆ ಬಂದರು. ಆ ಹೊತ್ತಿಗಾಗಲೇ ಅವರು ಕಾರ್ಮಿಕ ಸಂಘಟನೆಯ ಭಾಗವಾಗಿದ್ದರು; ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕರ್ನಾಟಕದ ಬೌದ್ಧಿಕ ವಲಯದಲ್ಲಿಯೂ ಹೆಸರು ಮಾಡಿದ್ದರು. ನಾನು ಆಂಧ್ರದಿಂದ ಬಂದು ಇನ್ನೂ ಕನ್ನಡದ ಮೇಲೆ ಸರಿಯಾದ ಹಿಡಿತ ಸಿಗದೆ ತೆಲುಗು-ಇಂಗ್ಲಿಷ್-ಕನ್ನಡಗಳ ನಡುವೆ ಹಾರಾಡುತ್ತಿದ್ದವನು; ಅವರಿಗೆ ಹೋಲಿಸಿದರೆ ಅನನುಭವಿ. ಆದರೆ ನನ್ನ ಚಿಂತನಾಕ್ರಮ, ವೈಚಾರಿಕ ನಿಲುವುಗಳು ಹಿಂದಿನಿಂದಲೂ ತೆಲುಗು, ಇಂಗ್ಲಿಷ್‌ನಲ್ಲಿನ ಪ್ರಗತಿಪರ ಸಾಹಿತ್ಯದ ಪ್ರಭಾವಕ್ಕೆ ಒಳಗಾಗಿದ್ದರಿಂದ ನಾವಿಬ್ಬರೂ ಬಹುಬೇಗನೆ ಬೌದ್ಧಿಕವಾಗಿ ಒಂದೇ ಧಾರೆಯ ಭಾಗವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅವರಿಗಿಂತ ಸೇವಾನುಭವದಲ್ಲಿ ನಾನು ಹಿರಿಯ ಅಥವಾ ಹೋರಾಟದ ಅನುಭವದಲ್ಲಿ, ಸಾಹಿತ್ಯ ಲೋಕದಲ್ಲಿ ಅವರು ನನಗಿಂತ ಹಿರಿಯ, ಪ್ರಖ್ಯಾತ ಅನ್ನುವ ಯಾವ ರೀತಿಯ ಹಮ್ಮುಬಿಮ್ಮುಗಳು ನಮ್ಮನ್ನು ಕಾಡಲಿಲ್ಲವಾದ್ದರಿಂದ, ಕಾಲೇಜಿನ ನಮ್ಮ ವಿಭಾಗದಲ್ಲಾಗಲಿ ಹೊರಗಡೆಯ ಸಾಮಾಜಿಕ ಕಾರ್ಯಕ್ರಮಗಳಲ್ಲಾಗಲಿ ಜತೆಜತೆಯಾಗಿ ನಡೆದೆವು.

ಅದೇ ಸಮಯದಲ್ಲಿ ಅಂದರೆ ಎಂಭತ್ತರ ದಶಕದ ಪ್ರಾರಂಭದಲ್ಲಿ ರಂಗ ಸಂಘಟನೆ ಸಮುದಾಯ ಹಾಗೂ ದಲಿತ ಸಂಘರ್ಷ ಸಮಿತಿಗಳು ಗೌರಿಬಿದನೂರಿಗೂ ಕಾಲಿಟ್ಟವು. ಅವುಗಳ ನಡುವೆ ಹೆಚ್ಚು ಸಮಯದ ಅಂತರವಿರಲಿಲ್ಲ. ಈ ಎರಡೂ ಸಂಘಟನೆಗಳಲ್ಲಿ ನಾವೆಲ್ಲರೂ ಗುರುತಿಸಿಕೊಂಡದ್ದಾಯಿತು. ಗಂಗಾಧರಮೂರ್ತಿಯವರು ದಸಂಸದ ಆರಂಭದ ದಿನಗಳಲ್ಲಿಯೇ ಅದಕ್ಕೆ ಬುನಾದಿ ಹಾಕಿದವರಲ್ಲಿ ಒಬ್ಬರಾಗಿದ್ದವರಿಂದ ನಮಗೆ ವಿಶೇಷವಾದ ಮಾರ್ಗದರ್ಶನ ಸಿಗುವುದು ಸಾಧ್ಯವಾಯಿತು. ನಾವುಗಳು ಸಮುದಾಯದ ರಂಗಚಟುವಟಿಕೆಗಳ ಭಾಗವಾಗಿ ಕೆಲವು ವಿದ್ಯಾರ್ಥಿಗಳ ಜತೆಗೆ ತಂಡವನ್ನೂ ಕಟ್ಟಿಕೊಂಡು ತಾಲೂಕಿನ ಹಲವು ಹಳ್ಳಿಗಳಲ್ಲಿ ಬೀದಿನಾಟಕಗಳನ್ನು ಆಡುತ್ತಿದ್ದೆವು.

ಕೆಲವು ಬಾರಿ ಈ ಪ್ರಯತ್ನಗಳು ನಮ್ಮನ್ನೆಲ್ಲರನ್ನೂ ಅಪಾಯದ ಅಂಚಿಗೂ ತಳ್ಳಿದ್ದಿದೆ. ಅಂಥ ಸಂದರ್ಭಗಳಲ್ಲಿ ಎಲ್ಲರೂ ಸಮಾನವಾಗಿ ಸಮಸ್ಯೆಗಳನ್ನ ಮತ್ತು ಸಂತೋಷಗಳನ್ನು ಹಂಚಿಕೊಳ್ಳುತ್ತಿದ್ದುದುಂಟು. ಅಂತೂ ಸಮಾಜದ ಒಳಿತಿಗಾಗಿ ಏನಾದರೂ ಮಾಡಬೇಕೆಂಬ ಉತ್ಸಾಹ ನಮ್ಮಲ್ಲಿ ತುಂಬಿತ್ತು, ನಮ್ಮೆಲ್ಲರ ಹಿರಿಯರಾದ ಬಿಜಿಎಂ ಅಲ್ಲಿ ನಮ್ಮ ದಾರಿದೀಪವಾಗಿದ್ದರು.

ದಸಂಸದ ಕಾರ್ಯಕಲಾಪಗಳ ಭಾಗವಾಗಿ ಹಳ್ಳಿಗಳಲ್ಲಿ, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗಾಗಿ ಕಾರ್ಯಕರ್ತರಿಗಾಗಿ ವಿಶೇಷ ತರಗತಿಗಳು ನಮ್ಮ ಕಾರ್ಯಸೂಚಿಯಲ್ಲಿ ಸೇರಿದ್ದವು. ಊರಿನ ಕೆಲವು ಉತ್ಸಾಹಿ ತರುಣರು ಸಹಸದಸ್ಯರಾಗಿದ್ದ ’ವಿಚಾರ ವೇದಿಕೆ’ಯಡಿ ಪ್ರತಿ ತಿಂಗಳಿನಲ್ಲಿ ಒಂದೆರಡು ಬಾರಿ ಹೊರಗಿನಿಂದ ತಜ್ಞರನ್ನು ಕರೆಸಿ ಉಪನ್ಯಾಸಗಳು, ಚರ್ಚೆಗಳು ಏರ್ಪಡಿಸುತ್ತಿದ್ದ ಕಾಲವದು. ಬಿಜಿಎಂ ಅವರಿಗಿದ್ದ ಸಂಪರ್ಕಗಳಿಂದಾಗಿ ಇಂತ ಚಿಂತಕರನ್ನು, ಸಾಹಿತಿಗಳನ್ನು ಕರೆಸುವುದು ನಮಗೆ ಕಷ್ಟವಾಗಲಿಲ್ಲ.

ಇದೆಲ್ಲದರ ಜತೆಗೆ ಆ ಸಮಯದಲ್ಲಿ ಅಲ್ಲಿ ಕಾಲೂರಬಯಸುತ್ತಿದ್ದ ಆರ್‌ಎಸ್‌ಎಸ್‌ಅನ್ನು ಸಹ ಬೌದ್ಧಿಕನೆಲೆಯಲ್ಲಿ ವಿರೋಧಿಸುವಲ್ಲಿ ಬಿಜಿಎಂ ಅವರ ಹಿಂದಿನ ಅನುಭವ ನಮ್ಮ ನೆರವಿಗಿತ್ತು. ಕಾಲೇಜಿನ ಒಳಗೂ ಸಹ ಕೆಲವು ಸಮಸ್ಯೆಗಳು ತಲೆ ಎತ್ತಿದಾಗ ಅದನ್ನು ಸಮನಾಗಿ ಎದುರಿಸಿ ಆಡಳಿತದ ನಿಷ್ಠೂರವನ್ನು ಅನುಭವಿಸಬೇಕಾಯಿತು.

ದಸಂಸದ ಹೋರಾಟಗಳಲ್ಲಿ ಗೌರಿಬಿದನೂರು ತಾಲೂಕಿನಲ್ಲಿ ನಡೆದ ನಾಗಸಂದ್ರ ಭೂ ಹೋರಾಟ ಅತಿ ಮುಖ್ಯವಾದದ್ದು. ನಾಗಸಂದ್ರವೆಂಬ ಹಳ್ಳಿಯ ಭೂಮಾಲಿಕರ ಹತ್ತಿರ ಜೀತಕ್ಕಿದ್ದು, ಕನಿಷ್ಠ ಕೂಲಿಗೆ ದುಡಿಯುವ ಆಳುಗಳಾಗಿಯೇ ಇದ್ದವರಲ್ಲಿ ಅತಿ ಹೆಚ್ಚು ಜನರು ದಲಿತರು. ಘನತೆ ತುಂಬಿದ ಬದುಕಿಗಾಗಿ ಅಲ್ಲಿನ ಸುತ್ತಮುತ್ತಲಿನ ಈಚಲ ವನವನ್ನು ಕಡಿದು ಕೃಷಿಗೆ ಯೋಗ್ಯವಾಗಿಸಿ ಆಕ್ರಮಿಸುವುದು ಚಳವಳಿಯ ಯೋಜನೆಯಾಗಿತ್ತು. ಆ ಮೂಲಕ ಅವರು ಜೀತದಾಳು ಸ್ಥಿತಿಯಿಂದಲೂ ಬಿಡುಗಡೆಯಾಗಬಹುದೆಂಬ ಆಶಯ ದಲಿತ ಚಳವಳಿಯದ್ದಾಗಿತ್ತು. ಇದಕ್ಕೆ ಬಿಜಿಎಂರವರೇ ಮುಖ್ಯಮಾರ್ಗದರ್ಶಕರಾಗಿದ್ದರು; ನಾವು ಅದರ ಭಾಗಿಗಳು; ಪೊಲೀಸರ ಲಾಠಿ ಏಟಿನ ರುಚಿ ನೋಡಿದವರು ಯುವಕಾರ್ಯಕರ್ತರು; ಈಚಲ ವನದ ಜಾಗದಲ್ಲಿ ಬೇಸಾಯದ ಭೂಮಿ ಸಿದ್ಧವಾಯಿತು. ಶಂಭೂಕ ನಗರವೆಂಬ ಕಾಲೋನಿ ನಿರ್ಮಾಣವಾಯಿತು. ತಕ್ಷಣದಲ್ಲಿ ಯಶಸ್ವಿಯಾದೆವು. ಆದರೆ ನಂತರದ ಬೆಳವಣಿಗೆಗಳು ಭ್ರಮನಿರಸನ ಮೂಡಿಸುವಂಥವು.

ಈ ಎಲ್ಲ ಚಟುವಟಿಕೆಗಳ ನಡುವೆಯೂ ನಮ್ಮನಮ್ಮ ಬೌದ್ಧಿಕ, ಶೈಕ್ಷಣಿಕ ಕಾರ್ಯಗಳೂ ಮುಂದುವರಿದವು. ಅವರ ಬರಹಗಳು, ಅನುವಾದಗಳು ಹೊರಬಂದವು. ಜತೆಗೆ, ನಾವೂ ಸಹ ಬರಹದಲ್ಲಿ ತೊಡಗಿಕೊಳ್ಳುವಂತಾಯಿತು. ನಾನು ಮತ್ತು ಗಂಗಾಧರ ಮೂರ್ತಿಯವರು ಮಿಲ್ಟನ್‌ನ ಮಹಾಕಾವ್ಯದಂಥ ಇಂಗ್ಲಿಷ್ ಅಭಿಜಾತ ಸಾಹಿತ್ಯದ ಮರು ಓದಿನಲ್ಲಿಯೂ ಒಂದಾಗುತ್ತಿದ್ದೆವು. ಆ ಸಮಯದಲ್ಲಿ ಕಾಲೇಜಿನ ಗ್ರಂಥಾಲಯಕ್ಕಾಗಿ ಯುಜಿಸಿಯಿಂದ ದೊಡ್ಡಮೊತ್ತದ ಅನುದಾನ ದೊರಕಿದ್ದರಿಂದ ಒಂದು ಒಳ್ಳೆಯ ಇಂಗ್ಲಿಷ್ ವಿಭಾಗವನ್ನೂ ಗ್ರಂಥಾಲಯದ ಭಾಗವಾಗಿಸುವುದರಲ್ಲಿಯೂ ಅವರ ಪಾತ್ರ ದೊಡ್ಡದು.

1992ರಲ್ಲಿ ಬೆಂಗಳೂರಿಗೆ ವರ್ಗವಾಗಿ ಮತ್ತೆ 2002ರಲ್ಲಿ ಅದೇ ಕಾಲೇಜಿಗೆ ಪ್ರಿನ್ಸಿಪಾಲನಾಗಿ ಹಿಂದಿರುಗಿ ಒಂದು ವರ್ಷವಿದ್ದಾಗಲೂ ನಮ್ಮ ಸ್ನೇಹ ಹಿಂದಿನಂತೆಯೇ ಮುಂದುವರಿಯಿತು.

ಈ ಎಲ್ಲದರ ನಡುವೆ ಕೆಲವರ್ಷಗಳಿಂದ ಅವರ ಆರೋಗ್ಯ ಕ್ಷೀಣಿಸುತ್ತಲೇ ಬಂದಿದ್ದೂ ನಮಗೆ ತಿಳಿದಿತ್ತು. ಅವರ ಸಂಗಾತಿ ಗೌರಮ್ಮನವರು ಅವರನ್ನು ಒಂದು ಮಗುವಿನಂತೆ ನೋಡಿಕೊಂಡಿದ್ದರಿಂದ ಕೊನೆಯವರೆಗೂ ತಮ್ಮ ಅನಾರೋಗ್ಯವನ್ನೂ ನಿಭಾಯಿಸುವುದು ಸಾಧ್ಯವಾಯಿತು. ತಮ್ಮ ಉಸಿರು ನಿಂತ ಮೇಲೂ ಇತರರಿಗೆ ಉಪಕಾರವಾಗಲೆಂಬ ಉದ್ದೇಶದಿಂದ ಬೆಂಗಳೂರು ಮೆಡಿಕಲ್ ಕಾಲೇಜಿಗೆ ದೇಹವನ್ನು ದಾನವನ್ನಾಗಿ ಕೊಡುವ ಅವರ ಇಚ್ಛೆಯನ್ನು ಕುಟುಂಬದವರು ಪೂರೈಸಿದ್ದಾರೆ. ಅವರ ಕಣ್ಣುಗಳು ಮತ್ತು ಇತರ ಅಂಗಗಳು ಬೇರೆ ಯಾರಲ್ಲಿಯೋ ಮನೆ ಮಾಡಿರುತ್ತವೆ. ಅವರು ಮತ್ತೆ ಹುಟ್ಟಿಬರಬೇಕಾಗಿಲ್ಲ; ಆ ನಂಬಿಕೆಯೂ ಅವರಿಗಿರಲಿಲ್ಲ. ಅವರ ಆಶಯಗಳು, ಆದರ್ಶಗಳು ಇಂದಿನ ಪೀಳಿಗೆಯವರಿಗೆ ಅನುಕರಣೀಯವೆಂದು ಕಂಡರೆ ಅವರ ಜೀವನ ಸಾರ್ಥಕ.


ಇದನ್ನೂ ಓದಿ: ಮರುಓದು: ಪ್ರೊ.ಬಿ.ಗಂಗಾಧರ ಮೂರ್ತಿಯವರು ಅನುವಾದಿಸಿರುವ ‘ದೇಶವಿಭಜನೆಯ ವಾಸ್ತವ ಸತ್ಯಗಳು’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...