Homeಮುಖಪುಟಕೇಂದ್ರದಿಂದ ಅನುದಾನ ತಾರತಮ್ಯ ಎಂದ ಜಗನ್‌ಮೋಹನ್‌ ರೆಡ್ಡಿ : ಬಿಜೆಪಿ ಸಖ್ಯ ತೊರೆದ್ರಾ ಆಂಧ್ರ ಸಿಎಂ?

ಕೇಂದ್ರದಿಂದ ಅನುದಾನ ತಾರತಮ್ಯ ಎಂದ ಜಗನ್‌ಮೋಹನ್‌ ರೆಡ್ಡಿ : ಬಿಜೆಪಿ ಸಖ್ಯ ತೊರೆದ್ರಾ ಆಂಧ್ರ ಸಿಎಂ?

- Advertisement -
- Advertisement -

ಬಿಜೆಪಿಯೊಂದಿಗೆ ಬಹಳ ಆತ್ಮೀಯತೆಯಿಂದ ಇದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಕಳೆದ ಎರಡು ವಾರಗಳಿಂದ ತನ್ನ ವರಸೆ ಬದಲಿಸಿದ್ದಾರೆ. ದಕ್ಷಿಣದ ಇತರ ರಾಜ್ಯಗಳಂತೆ ಕೇಂದ್ರ ಸರ್ಕಾರ ಅನುದಾನ ತಾರತಮ್ಯ ಮಾಡಿದೆ ಎಂದಿದ್ದಾರೆ.

ಜಗನ್‌ಮೋಹನ್‌ ರೆಡ್ಡಿ ಆಂಧ್ರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ವೇಳೆ ಆಡಿರುವ ಮಾತುಗಳು ರಾಜಕೀಯ ಚರ್ಚೆಗೆ ಕಾರಣವಾಗಿದೆ.

“ಯಾವುದೇ ಪಕ್ಷವು ಕೇಂದ್ರದಲ್ಲಿ ಸಂಪೂರ್ಣ ಬಹುಮತವನ್ನು ಪಡೆಯಬಾರದು ಎಂದು ನಾನು ಬಯಸುತ್ತೇನೆ. ಯಾಕೆಂದರೆ, ನಮ್ಮ ಬೆಂಬಲವನ್ನು ನೀಡಿದ್ದಕ್ಕೆ ಪ್ರತಿಯಾಗಿ ನಾವು ವಿಶೇಷ ಸ್ಥಾನಮಾನವನ್ನು ಕೇಳಬಹುದು” ಎಂದು ಜಗನ್‌ಮೋಹನ್‌ ರೆಡ್ಡಿ ಹೇಳಿದ್ದಾರೆ.

ಆಂಧ್ರ ಪ್ರದೇಶ ಒಂದೆರಡು ತಿಂಗಳಲ್ಲಿ ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸಾಕ್ಷಿಯಾಗಲಿದೆ. ಇದಕ್ಕೂ ಮುನ್ನ ಫೆಬ್ರವರಿ 5 ರಂದು ಬಜೆಟ್ ಅಧಿವೇಶನ ಆರಂಭಗೊಂಡಿದೆ. ರಾಜ್ಯಪಾಲ ಅಬ್ದುಲ್ ನಝೀರ್ ಅವರು ವೈಎಸ್ ಜಗನ್ ಅವರ ನಾಲ್ಕೂವರೆ ವರ್ಷಗಳ ಆಡಳಿತವನ್ನು ಶ್ಲಾಘಿಸಿ ಅಧಿವೇಶನವನ್ನು ಪ್ರಾರಂಭಿಸಿದ್ದಾರೆ.

ಫೆಬ್ರವರಿ 6 ರಂದು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ 13 ಟಿಡಿಪಿ ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ. ಟಿಡಿಪಿ ಶಾಸಕರು ಹಣದುಬ್ಬರ ಮತ್ತು ವಿದ್ಯುತ್ ದರಗಳ ಹೆಚ್ಚಳದ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಅವರನ್ನು ಒತ್ತಾಯಿಸಿದ್ದರು. ಆದರೆ, ಸ್ಪೀಕರ್‌ ಅವಕಾಶವನ್ನು ನಿರಾಕರಿಸಿದ್ದರು. ನಂತರ ಅವರನ್ನು ಅಮಾನತುಗೊಳಿಸಲಾಗಿದೆ. ಈ ನಡುವೆ ಮುಖ್ಯಮಂತ್ರಿ ವೈಎಸ್ ಜಗನ್ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಸಿಎಂ ಜಗನ್ ಅವರು ಪವರ್‌ಪಾಯಿಂಟ್ ಪ್ರಸ್ತುತಿಯ ಮೂಲಕ ರಾಜ್ಯದ ಹಣಕಾಸು ಪರಿಸ್ಥಿತಿಯ ಕುರಿತು ಸದನಕ್ಕೆ ವಿವರಿಸಿದ್ದಾರೆ. ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಕಡಿಮೆ ಪಾಲು ನೀಡಲಾಗಿದೆ. ಅಲ್ಲದೆ ಕೋವಿಡ್ -19 ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಅಧಿಕ ಸಾಲ ಮಾಡಿ ಟಿಡಿಪಿ ರಾಜ್ಯವನ್ನು ನಮಗೆ ಹಸ್ತಾಂತರಿಸಿತ್ತು ಎಂದು ಜಗನ್‌ ಮೋಹನ್‌ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಜಗನ್‌ ಅವರ ಭಾಷಣದ ವೇಳೆ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಂತೆ ಕೇಂದ್ರ ಸರ್ಕಾರ ನಮಗೆ ಅನುದಾನದಲ್ಲಿ ಕಡಿಮೆ ಪಾಲು ಕೊಟ್ಟಿದೆ ಎಂದಿದ್ದಾರೆ. ರಾಜ್ಯದ ವಿತ್ತೀಯ ಸ್ಥಿತಿಗೆ ಕೇಂದ್ರದ ತಾರತಮ್ಯವೇ ಕಾರಣ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ₹38,916 ಕೋಟಿ ಮೊತ್ತದ ತೆರಿಗೆ ಆದಾಯದ ನಷ್ಟವನ್ನು ಕಂಡಿದೆ. ಕೇಂದ್ರ ಸರ್ಕಾರದ ಅನುದಾನ ಹಂಚಿಕೆಯಲ್ಲಿ ಕುಸಿತವಾಗಿದೆ. ಆಂಧ್ರ ಪ್ರದೇಶಕ್ಕೆ ಒಟ್ಟು ₹66,116 ಕೋಟಿ ಬರಬೇಕಿತ್ತು. ಈ ಪೈಕಿ ಕೇವಲ ₹27,200 ಕೋಟಿ ಬಂದಿದೆ. ಕೇಂದ್ರದಿಂದ ಸರಿಯಾದ ರೀತಿಯಲ್ಲಿ ಹಣ ಬರದ ಹಿನ್ನೆಲೆ ಮತ್ತು ವೆಚ್ಚದ ಹೆಚ್ಚಳದಿಂದಾಗಿ ನಾವು ಸಾಲ ಮಾಡಬೇಕಾಯಿತು ಎಂದಿದ್ದಾರೆ.

15ನೇ ಹಣಕಾಸು ಆಯೋಗವು ಕೇಂದ್ರ ತೆರಿಗೆಗಳಲ್ಲಿ (ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಹೊರತುಪಡಿಸಿ) 41 ಪ್ರತಿಶತದಷ್ಟು ಪಾಲನ್ನು ಸೂಚಿಸಿದ್ದರೂ, ರಾಜ್ಯವು ಕೇಂದ್ರ ಸರ್ಕಾರದಿಂದ ಕಡಿಮೆ ಅನುದಾನ ಪಡೆದಿದೆ. 2010-2015ರ 13ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲಿ ಶೇ. 32ರಷ್ಟು ಪಾಲು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿತ್ತು. ಆದರೆ, ಕೇವಲ 28 ಶೇ. ಬಂದಿದೆ. 14ನೇ ಹಣಕಾಸು ಆಯೋಗವು (2015-20) ಅವಧಿಯಲ್ಲಿ ರಾಜ್ಯಕ್ಕೆ ಕೇಂದ್ರ ತೆರಿಗೆಯ ಶೇ. 42 ಪಾಲನ್ನು ಶಿಫಾರಸು ಮಾಡಿತ್ತು. ಆದರೆ, ರಾಜ್ಯಕ್ಕೆ ಕೇವಲ 35 ಶೇ. ದೊರೆತಿದೆ. 15ನೇ ಹಣಕಾಸು ಆಯೋಗದಲ್ಲಿ ಇದು ಇನ್ನೂ ಕೆಟ್ಟದಾಗಿದೆ. ಏಕೆಂದರೆ, ಅದು ಮುಂದಿನ ಐದು ವರ್ಷಗಳವರೆಗೆ ಶೇ. 41ರಷ್ಟು ಅನುದಾನ ಶಿಫಾರಸು ಮಾಡಿದೆ. ಆದರೆ, ರಾಜ್ಯಗಳು ಪ್ರಸ್ತುತ ಸರಾಸರಿ 31.5 ಶೇ. ಮಾತ್ರ ಪಡೆಯುತ್ತಿವೆ ಎಂದು ಜಗನ್ ಮೋಹನ್ ರೆಡ್ಡಿ ವಿವರಿಸಿದ್ದಾರೆ.

ಅನುದಾನ ತಾರತಮ್ಯದ ವಿರುದ್ದ ಕರ್ನಾಟಕ ಇಂದು (ಫೆ.7) ದೆಹಲಿಯ ಜಂತರ್‌ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ನಾಳೆ (ಫೆ.8) ಕೇರಳ ಸರ್ಕಾರ ಅದೇ ಜಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ತಮಿಳುನಾಡು ಕೇರಳಕ್ಕೆ ಸಾಥ್ ನೀಡಲಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವಿರುವುದರಿಂದ ಕರ್ನಾಟಕದ ನಿಲುವನ್ನೇ ಹೊಂದಿದೆ. ಇದೀಗ ದಕ್ಷಿಣದ ಮತ್ತೊಂದು ರಾಜ್ಯ ಆಂಧ್ರ ಪ್ರದೇಶ ಕೂಡ ಕೇಂದ್ರದ ವಿರುದ್ದ ಸಮರ ಸಾರುವ ಲಕ್ಷಣ ಕಾಣುತ್ತಿದೆ. ಆದರೆ, ಎನ್‌ಡಿಎ ಬಣದ ಜೊತೆ ಗುರುತಿಸಿಕೊಂಡಿರುವ ಜಗನ್‌ ಮೋಹನ್‌ ರೆಡ್ಡಿ ಕೇಂದ್ರದ ತಾರತಮ್ಯದ ವಿರುದ್ದ ಧ್ವನಿಯೆತ್ತಿರುವುದು ವಿಶೇಷವೆನಿಸಿದೆ.

ಇದನ್ನೂ ಓದಿ : ಕೇಂದ್ರದ ವಿರುದ್ಧ ಕೇರಳ ಸರ್ಕಾರದಿಂದ ನಾಳೆ ದೆಹಲಿಯಲ್ಲಿ ಪ್ರತಿಭಟನೆ: ತಮಿಳುನಾಡಿನಿಂದ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗದಿದ್ದರೆ ಮತ್ತೆ ಹಾಗೆ ಮಾಡ್ತಾರೆ: ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಹೇಳಿಕೆ

0
"ಪ್ರಜ್ವಲ್ ಮತ್ತು ರೇವಣ್ಣ ಯಾವತ್ತೂ ತಲೆ ಎತ್ತಿ ನಡೆಯಬಾರದು, ಅಂತಹ ಶಿಕ್ಷೆಯಾಗಬೇಕು" ಎಂದು ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯೊಬ್ಬರ ಸಹೋದರಿ ಮಾಲಾ (ಹೆಸರು ಬದಲಿಸಲಾಗಿದೆ) ಹೇಳಿರುವುದಾಗಿ thenewsminute.com ವರದಿ ಮಾಡಿದೆ. ಮಾಲಾಗೆ ತನ್ನ ಸಹೋದರಿ...