ಪ್ರಾಚೀತ ಭಾರತ ಭೂಖಂಡದ ಮತ್ತು ಆಧುನಿಕ ಭಾರತದ ಪರಂಪರೆಯಲ್ಲಿ ಪುರಾಣಗಳ ಸ್ಥಾನ ಮಹತ್ವದ್ದು. ಈ ಪುರಾಣಗಳು ಜನರ ಅಥವಾ ಸಮುದಾಯಗಳ ಕೇವಲ ವೈಯಕ್ತಿಕ ನಂಬಿಕೆಗಳಾಗಿ ಮಾತ್ರ ಉಳಿಯದೆ, ಹಲವು ಕಾಲಘಟ್ಟಗಳಲ್ಲಿ ಪ್ರಭುತ್ವಗಳನ್ನು ಪ್ರಭಾವಿಸುವುದರಲ್ಲಿ, ಸಾಮಾಜಿಕ ಚಿಂತನೆಗಳನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿವೆ. ಜನಜೀವನದ ಹಲವು ಸ್ತರಗಳಲ್ಲಿ ಹಾಸುಹೊಕ್ಕಾಗಿರುವ ಪುರಾಣ ಸಂಬಂಧಿತ ನಂಬಿಕೆಗಳು ಕಾಲಕ್ಕೆ ತಕ್ಕಂತೆ ತಮ್ಮ ಚಹರೆಗಳನ್ನು ಬದಲಾಯಿಸುತ್ತಾ, ಹೊಸಹೊಸ ಸೇರ್ಪಡೆಗಳಿಗೆ ಅವಕಾಶ ನೀಡುತ್ತಾ, ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಾ ಬಂದಿವೆ. ಆದರೆ, ಬೌದ್ಧ ಧರ್ಮ ಉಚ್ಛ್ರಾಯ ಕಾಲದಲ್ಲಿತ್ತು ಎಂದು ಹೇಳುವಾಗ ಅಥವಾ ಸೀಮಿತ ದೇಶ-ಕಾಲದಲ್ಲಿ ಪ್ರಭಾವವಿದ್ದ ಬಸವ ಯುಗದಂತಹ ಸಂದರ್ಭಗಳನ್ನು ಹೊರತುಪಡಿಸಿದಂತೆ, ಈ ನೆಲದ ಅಸಂಖ್ಯಾತ ಸಮುದಾಯಗಳ ನಂಬಿಕೆಗಳನ್ನು ಏಕತ್ರಗೊಳಿಸುವ ನಿಟ್ಟಿನಲ್ಲಿ ವೈದಿಕ-ಬ್ರಾಹ್ಮಣ ಪುರಾಣಗಳು ಯಜಮಾನಿಕೆಯನ್ನು ಸಾಧಿಸಿರುವುದನ್ನು ಹಲವು ಸಂಶೋಧಕರು- ಚಿಂತಕರು ಪ್ರಶ್ನೆ ಮಾಡಿ, ಅಧ್ಯಯನ ಮಾಡಿ ತಿಳಿವಳಿಕೆಯನ್ನು ಹೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ಪುರಾಣಗಳನ್ನು ನಿಕಷಕ್ಕೆ ಒಡ್ಡುವ ಹಲವು ಧಾರೆಗಳು ನಮ್ಮಲ್ಲಿ ನೆಲೆಗೊಂಡಿವೆ. ಪುರಾಣಗಳು ಅದರಲ್ಲಿಯೂ ವೈದಿಕ ಪುರಾಣಗಳು ಹೇಗೆ ಜನಸಾಮಾನ್ಯರನ್ನು ಸುಲಿಗೆ ಮಾಡಿವೆ ಎಂಬುದನ್ನು ತಮ್ಮ ಭಾಷಣಗಳು ಮತ್ತು ಬರಹಗಳಲ್ಲಿ ಪ್ರಚುರಪಡಿಸಿದ ಪೆರಿಯಾರ್ ಅವರ ವೈಚಾರಿಕ ಮಾದರಿ ಅಂತಹ ಒಂದು ಬಗೆ. ಪುರಾಣಗಳನ್ನು ತಿರಸ್ಕರಿಸಿ ಆಧುನಿಕ ಜ್ಞಾನ ಮತ್ತು ವಿಜ್ಞಾನಕ್ಕೆ ತೆರೆದುಕೊಂಡು ಶೋಷಣೆಯನ್ನು ತೊಡೆದುಹಾಕಬೇಕೆಂದು ಕರೆಕೊಡುವ ಈ ಮಾರ್ಗ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ಸಮಾಜಕ್ಕೆ ನೀಡಿದೆ. ಜನಸಾಮಾನ್ಯರ ನಂಬಿಕೆಗಳ ಸಂಪೂರ್ಣ ತಿರಸ್ಕಾರ  ಎಲ್ಲ ಕಾಲದಲ್ಲೂ ಒಳಿತಿನ ಪರಿಣಾಮವನ್ನೇ ಹೊಂದಿರುವುದಿಲ್ಲ ಎಂಬ ಟೀಕೆಯ ಹೊರತಾಗಿಯೂ ವಿಜ್ಞಾನದ ಬೆಳವಣಿಗೆಯೊಂದಿಗೆ ತಿರಸ್ಕರಿಸಲೇಬೇಕಿದ್ದ, ಅಪ್ರಸ್ತುತಗೊಳಿಸಲೇಬೇಕಿದ್ದ ಹಲವು ಪುರಾಣಗಳ ಬಗ್ಗೆ ಜನಕ್ಕೆ ಅದರಲ್ಲಿಯೂ ಯುವಸಮುದಾಯಕ್ಕೆ ಅತ್ಯುತ್ತಮವಾದ ಬೆಳಕನ್ನು ಚೆಲ್ಲಲು ಈ ಮಾರ್ಗಕ್ಕೆ ಸಾಧ್ಯವಾಯಿತು. ಇಂದು ವಿಶ್ವಸೃಷ್ಟಿಯ ಬಗ್ಗೆ ಹಲವು ಪುರಾಣಗಳಲ್ಲಿ ಇರುವ ನಂಬಿಕೆಗಳಲ್ಲಿ ಹುರುಳಿಲ್ಲ ಎಂಬುದು ಜನಸಾಮಾನ್ಯರ ನಂಬಿಕೆಯ ಭಾಗವಾಗಿರುವುದಕ್ಕೆ ಇಂತಹ ವೈಚಾರಿಕತೆ ಮತ್ತು ಅದಕ್ಕೆ ಪೂರಕವಾದ ವಿಜ್ಞಾನದ ಬೆಳವಣಿಗೆಯೇ ಕಾರಣವಾಗಿದೆ.

ಪೆರಿಯಾರ್

ಇದಕ್ಕೂ ಸಾವಿರಾರು ವರ್ಷಗಳ ಮೊದಲೇ ಹಲವು ಶ್ರಮಣ ಪರಂಪರೆಗಳು ವೈದಿಕ ಪುರಾಣಗಳನ್ನು, ಅವುಗಳು ಪ್ರತಿಪಾದಿಸುತ್ತಿದ್ದ ನಂಬಿಕೆಗಳನ್ನು ಮತ್ತು ಬ್ರಾಹ್ಮಣರ ಯಜಮಾನಿಕೆಯನ್ನು ವಿರೋಧಿಸಿ ಬೆಳೆದವು. ಜೈನ ಮತ್ತು ಬೌದ್ಧ ಪರಂಪರೆಗಳು ಅವುಗಳಲ್ಲಿ ಹೆಚ್ಚು ಜನಪ್ರಿಯವಾದವು. ವೈದಿಕದಲ್ಲಿದ್ದ ಹಿಂಸೆಯನ್ನು ಒಂದು ಮಟ್ಟದಲ್ಲಿ ಈ ಶ್ರಮಣ ಪರಂಪರೆಗಳು ಮೆಟ್ಟಿನಿಂತದ್ದೂ ಅಲ್ಲದೆ, ಸಮಾನತೆಯ ಒಂದು ಹಂತದ ಪರಿಕಲ್ಪನೆಯನ್ನು ವೈದಿಕ ಶ್ರೇಣೀಕರಣಕ್ಕೆ ವಿರುದ್ಧವಾಗಿ ಪ್ರತಿಪಾದಿಸಿದವು. ಇಂತಹ ಪರಂಪರೆಗಳನ್ನು ಕೂಡ ಬೃಹತ್ ಮಟ್ಟದಲ್ಲಿ ಬೆಳೆಯದಂತೆ ನೋಡಿಕೊಳ್ಳಲು ಬ್ರಾಹ್ಮಣ ಪ್ರೇರಿತ ಪುರಾಣಗಳು ಕೆಲಸ ಮಾಡಿದವು. ಆಧುನಿಕ ಯುಗದಲ್ಲಿ ಆ ಪರಂಪರೆಗಳ ಪ್ರತಿಪಾದಕರನ್ನೂ ತನ್ನ ಪುರಾಣಗಳಲ್ಲಿ ಸೇರಿಸಿಕೊಳ್ಳಲು ಅವು ಯಶಸ್ವಿಯಾದವು. ದಶಾವತಾರಗಳಲ್ಲಿ ಬುದ್ಧನೂ ಸೇರಿಹೋದದ್ದು ಹಾಗೆಯೇ.

ಕನ್ನಡನಾಡಿನಲ್ಲಿಯೇ ಹುಟ್ಟಿದ ಶರಣ ಕ್ರಾಂತಿ ಕೂಡ ವೈದಿಕತೆಯನ್ನು ವಿರೋಧಿಸಿ ಬೆಳೆದ ಪ್ರಮುಖ ಧಾರೆ. ಅದನ್ನು ಕೂಡ ವೈದಿಕ ಧರ್ಮ ಅಪೋಶನ ಪಡೆದುಕೊಳ್ಳಲು ಶ್ರಮಿಸುತ್ತಲೇ ಇದೆ. ಆ ಕ್ರಾಂತಿಯಲ್ಲಿ ಹೊರಚಿಮ್ಮಿದವರು ಕೊನೆಗೆ ಹಿಂದೂಧರ್ಮದ ಜಾತಿಯಾಗಿಯೇ ಹೋದರು. ನಂತರದಲ್ಲಿ ಈ ದೇಶದ ವಿವಿಧೆಡೆಗಳಲ್ಲಿ ಹಲವು ಭಕ್ತಿಪರಂಪರೆಗಳು ಕೂಡ ವೈದಿಕ ಪುರಾಣಗಳ ನಂಬಿಕೆಗಳನ್ನು ಬುಡಮೇಲು ಮಾಡಲು ಶ್ರಮಿಸಿದವು. ಶರಣಪರಂಪರೆಯ ಬಸವಣ್ಣನವರಿಂದ ಪ್ರಭಾವಿತರಾದ ಹರಿಹರನಂತಹ ಕವಿಗಳೂ ತಮ್ಮ ರಗಳೆಗಳಲ್ಲಿ ವೈದಿಕ-ಬ್ರಾಹ್ಮಣ ಪುರಾಣಗಳನ್ನು ಬುಡಮೇಲು ಮಾಡಲು ಪ್ರಯತ್ನಿಸಿದ ಮಾರ್ಗವೂ ನಮ್ಮದಾಗಿದೆ.

ಇದೇ ಕವಿಪರಂಪರೆಯಲ್ಲಿ 20ನೇ ಶತಮಾನದ ಕನ್ನಡ ಸಾಹಿತಿ ಕುವೆಂಪು ಅವರು ಕೂಡ ಹಲವು ಪುರಾಣಗಳ ಅಮಾನವೀಯ ಸಂಗತಿಗಳನ್ನು ಕಾವ್ಯದ ಚೌಕಟ್ಟಿನಲ್ಲೇ (ಆದರಾಚೆಗೂ) ಸರಿಪಡಿಸಲು ಪ್ರಯತ್ನಪಟ್ಟವರು. ’ಪಾಪಿಗೂ ಉದ್ಧಾರಮಿಹುದು’ ಎಂದು ಹೇಳಿ, ವೈದಿಕ ಪುರಾಣಗಳಲ್ಲಿ ಕೇವಲ ಕ್ರೌರ್ಯದ ರೀತಿಯಲ್ಲಿ ಚಿತ್ರಿತರಾಗಿದ್ದ ಅಸುರರ ಮಾನವೀಯ ಸೆಲೆಗಳನ್ನು ಹುಡುಕಲು ಪ್ರಯತ್ನ ಮಾಡಿದವರು ಕುವೆಂಪು. ರಾಮಾಯಣದ ಕತೆಯನ್ನು ಆಧುನಿಕ ಮಾನವೀಯ ಚಿಂತನೆಗಳಿಗೆ ಹುರಿಗೊಳಿಸಿ ಶ್ರೀರಾಮಾಯಣ ದರ್ಶನಂ ರಚಿಸಿದರು. ರಾಮಾಯಣದಲ್ಲಿ ಒಂದು ಭಾಗದಲ್ಲಿ ಚಿತ್ರಿತವಾಗಿರುವ, ತಪಸ್ಸು ಮಾಡಿದ ಶೂದ್ರನನ್ನು ಕೊಲ್ಲುವ ಪುರಾಣದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿ ಶೂದ್ರತಪಸ್ವಿ ನಾಟಕವನ್ನು ಬರೆದರು. ಈ ಸುಧಾರಣೆಯ ನಡೆಗಳು ಎಷ್ಟೋ ವೈದಿಕರಿಗೆ ಅಪಾಯದಂತೆ ಕಂಡವು. ಕುವೆಂಪು ಅವರ ಮೇಲೆ ದಾಳಿ ಮಾಡುವ ಒಂದು ವೈದಿಕ ವರ್ಗವೇ ಸೃಷ್ಟಿಯಾಯಿತು. ಅದು ಈ ದಿನಕ್ಕೂ ಮುಂದುವರೆದಿರುವುದು ವೈದಿಕ ಪುರಾಣಗಳ ರಾಜಕಾರಣದ ಸೂಚಿತ ಪ್ರಣಾಳಿಕೆಯ ದ್ಯೋತಕವಾಗಿದೆ.

ಕುವೆಂಪು

ಐತಿಹಾಸಿಕ, ಮಾನವಶಾಸ್ತ್ರೀಯ, ಸಮಾಜಶಾಸ್ತ್ರಗಳ, ಪುರಾತತ್ವ ಶಾಸ್ತ್ರ ಅಧ್ಯಯನದ ಹಿನ್ನೆಲೆಯಲ್ಲಿ ಪುರಾಣಗಳನ್ನು ಮತ್ತು ಅವುಗಳ ನಿಜ ಚಹರೆಯನ್ನು ಕಟ್ಟಿಕೊಟ್ಟ ಅಕಾಡೆಮಿಕ್ ವಲಯ ಕೂಡ ಒಟ್ಟಾರೆ ತಿಳಿವಳಿಕೆಯ ದೃಷ್ಟಿಯಿಂದ ಅಪಾರ ಕೊಡುಗೆಯನ್ನೇ ನೀಡಿದೆ. ಭಾರತೀಯ ಪುರಾಣಗಳಲ್ಲಿ ಇರುವ ಹಿಂಸೆಯ ಪರಂಪರೆಯನ್ನು ವಿಶ್ಲೇಷಣೆ ಮಾಡಿ ಅವುಗಳ ವಾಸ್ತವತೆಯನ್ನು ಬಹುಶಿಸ್ತೀಯ ಅಧ್ಯಯನದ ಮೂಲಕ ನಮ್ಮ ಮುಂದೆ ಇಟ್ಟವರಲ್ಲಿ ಡಿಡಿ ಕೋಸಾಂಬಿ ಅವರದ್ದು ದೊಡ್ಡ ಹೆಸರು. ಮಹಾಭಾರತದ ಬಗ್ಗೆ ಸಮಾಜ-ಮಾನವ ಶಾಸ್ತ್ರೀಯ ಅಧ್ಯಯನ ಮಾಡಿದ ಐರಾವತಿ ಕರ್ವೆಯವರು ಕಟ್ಟಿಕೊಟ್ಟ ತಿಳಿವು ಕೂಡ ಪ್ರಮುಖವಾದದ್ದು. ಈ ಇಬ್ಬರೂ ಮಹನೀಯರು ಭಗವದ್ಗೀತೆ ಮಹಾಭಾರತದ ಮೂಲ ಪಠ್ಯವಾಗಿರದೆ, ಅದನ್ನು ಕಾಲಕ್ರಮೇಣದಲ್ಲಿ ಸೇರಿಸಲಾಗಿದೆ ಮತ್ತು ಅದರ ಹಿಂದಿನ ರಾಜಕೀಯ ಎಂತಹುದ್ದು ಎಂಬುದನ್ನು ವಿಸ್ತೃತವಾಗಿ ಚರ್ಚಿಸಿದ್ದಾರೆ. ಭಗವದ್ಗೀತೆಯ ಹಲವು ಮುಖಗಳನ್ನು ಪರಿಚಯಿಸುವ ಡಿಡಿ ಕೋಸಾಂಬಿಯವರ ಬರಹಗಳು ಇಂದಿಗೂ ಪುರಾಣಗಳನ್ನು ಅರಿಯಲು ದಾರಿದೀಪವಾಗಿವೆ. ಇದೇ ಹಾದಿಯಲ್ಲಿ ದೇವಿಪ್ರಸಾದ್ ಚಟ್ಟೋಪಾಧ್ಯಾಯ, ರೋಮಿಲಾ ಥಾಪರ್ ಸೇರಿದಂತೆ ಹಲವು ಅಧ್ಯಯನಕಾರರು ಪುರಾಣಗಳ ನಿಜ ಮುಖಗಳನ್ನು ಅರಿಯಲು ಸಹಕರಿಸಿದ್ದಾರೆ.

ಈ ಅಧ್ಯಯನಕಾರರಿಗಿಂತಲೂ ಎಷ್ಟೋ ವರ್ಷಗಳ ಮೊದಲು ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಜ್ಯೋತಿಬಾ ಫುಲೆ (1827-1890) ಅವರು ಕೂಡ ಪುರಾಣಗಳನ್ನು ಒಡೆದು, ವೈದಿಕ ರಾಜಕಾರಣವನ್ನು ಸಾಮಾನ್ಯರಿಗೆ ಅರ್ಥ ಮಾಡಿಸಲು ಶ್ರಮಿಸಿದವರು. ತಮ್ಮ ’ಸ್ಲೇವರಿ’ ಅಥವಾ ’ಗುಲಾಮಗಿರಿ’ ಪಠ್ಯದಲ್ಲಿ ಬಲಿ ಚಕ್ರವರ್ತಿಯ ಸಾಮ್ರಾಜ್ಯದ ಸಮೃದ್ಧತೆ, ಮಾನವೀಯತೆ ಮತ್ತು ಜನಪರತೆಯ ಬಗ್ಗೆ ಬರೆದು, ವೈದಿಕಶಾಹಿಯ ವಾಮನ ಅವತಾರ ಪುರಾಣದ ಹಿಂದಿನ ರಾಜಕೀಯವನ್ನು ಬಿಚ್ಚಿಟ್ಟವರು ಅವರು. ಅವರ ಬರಹದ ಒಂದು ಭಾಗವನ್ನು ಈ ಸಂಚಿಕೆಯಲ್ಲಿ ಓದಬಹುದಾಗಿದೆ.

_________________________________________________________________

ಇದನ್ನೂ ಓದಿ: ಬಲಿಯ ಆದರ್ಶ ರಾಜ್ಯ ಮತ್ತು ಅದನ್ನು ಕಸಿದುಕೊಂಡು ಕಟ್ಟಿದ ಪುರಾಣದ ಬಗ್ಗೆ ಜ್ಯೋತಿಬಾ ಫುಲೆ ಬರಹ

_________________________________________________________________

ಫುಲೆ ಅವರನ್ನು ತಮ್ಮ ಗುರುಗಳು ಎಂದು ಕರೆದುಕೊಂಡಿದ್ದ ಡಾ. ಬಿ ಆರ್ ಅಂಬೇಡ್ಕರ್ ಅವರು ಪುರಾಣಗಳ ಬಗ್ಗೆ ತಳೆದ ನಿಲುವು ವಿಭಿನ್ನವಾದದ್ದು. ವೈಚಾರಿಕತೆಯ ಕಡೆಗೆ ಹೆಚ್ಚು ಒಲವಿದ್ದ ಅಂಬೇಡ್ಕರ್ ಅವರು ಹಿಂದೂ ಧರ್ಮದ ಪುರಾಣಗಳ ಅಪಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟರಲ್ಲದೆ, ಅವು ಹೇಗೆ ಸಮಾನತೆಯ ವಿರೋಧಿ ಎಂಬುದನ್ನು ಸಾರಿದರು. ಪೆರಿಯಾರ್ ಅವರ ಮಾದರಿಯಂತೆ ಅಂಬೇಡ್ಕರ್ ಮಾರ್ಗವೂ ಇಂದು ಯುವಜನತೆ ಅದರತ್ತ ಚಿಂತಿಸುವಂತೆ ಮಾಡುತ್ತಿದೆ.

ಜ್ಯೋತಿಬಾ ಫುಲೆ

ಇದನ್ನೂ ಓದಿ: ಬ್ರಾಹ್ಮಣ್ಯ ಶೋಷಣೆಯ ರೂಪದ ಹಿಂದೂ ಧರ್ಮ; ಜ್ಯೋತಿಬಾ ಫುಲೆ ಅವರ ಚಿಂತನೆ

_____________________________________________________________________

ದಸರಾ ಹಬ್ಬ ಸನ್ನಿಹಿತವಾಗಿದೆ. ಭಾರತ ಬಹುತ್ವದ ನೆಲೆಯ ಬೀಡು. ಇಲ್ಲಿ ಹಲವು ನಂಬಿಕೆಗಳು ಅಸಂಖ್ಯಾತ ಸಮುದಾಯಗಳ ನಡುವೆ ನೆಲೆಸಿವೆ. ಇವುಗಳನ್ನೆಲ್ಲಾ ಅಳಿಸಿ ಏಕತ್ರಗೊಳಿಸುವ ಹುನ್ನಾರ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ ವಿಭಿನ್ನ ಕಾಲಘಟ್ಟಗಳಲ್ಲಿ ಅದರ ವಿರುದ್ಧ ಸಿಡಿದೆದ್ದಂತೆ, ಆಧುನಿಕ ಸಮಾಜದ ಹಲವು ಸಮುದಾಯಗಳು, ಅಸುರ-ದಾನವ-ರಾಕ್ಷಸ ಎಂದು ಬಿತ್ತಿರುವ ಸುಳ್ಳು ಪುರಾಣಗಳ ವಿರುದ್ಧ ಸಿಡಿದು ನಿಂತಿವೆ. ಪುರಾಣಗಳನ್ನು ಬಹುಶಿಸ್ತೀಯ ನೆಲೆಯಿಂದ ಶೋಧಿಸುತ್ತಿರುವುದರ ಭಾಗವಾಗಿಯೇ ಮಹಿಷ ದಸರಾವನ್ನು, ದಸರಾ ಹಬ್ಬದ ಮುಂಚಿತವಾಗಿ ಆಚರಿಸುವುದನ್ನು ಕೆಲವು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಬಹುತ್ವದ ವಿರೋಧಿಗಳಾದ ಸಂಘ ಪರಿವಾರ ಮತ್ತು ಅದನ್ನು ಪೋಷಿಸುವ ಸರ್ಕಾರಗಳು ಈ ಏಕತ್ರಗೊಳಿಸುವ ಹುನ್ನಾರದ ಪರವಾಗಿ ಕೆಲಸ ಮಾಡುತ್ತಾ ಮಹಿಷ ದಸರಾಗೆ ವಿರೋಧವನ್ನು ವ್ಯಕ್ತಪಡಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಚಿಂತಕ ಜಿ ಎನ್ ನಾಗರಾಜ್ ಅವರು ಮಹಿಷ ಕಲ್ಪನೆಯ ಹಲವು ಸಂಗತಿಗಳನ್ನು ಈ ಸಂಚಿಕೆಯಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ಮಹಿಷಾಸುರ ಯಾರು? ಕೋಣನ ಬಲಿಯ ಮೇಲೆ ಮಹಿಷ ಮರ್ಧನ ಪುರಾಣದ ಹೇರಿಕೆಯೇ?

________________________________________________________________________

ಪುರಾಣಗಳನ್ನು ಬಳಸಿಕೊಂಡು ಈ ದೇಶದಲ್ಲಿ ಹಬ್ಬಿಸಲಾಗುತ್ತಿರುವ ಕೋಮುಹಿಂಸೆಯನ್ನು ನಾವು ಇಂದು ಗಂಭೀರವಾಗಿ ಅವಲೋಕಿಸುವ ಅಗತ್ಯ ಇದೆ. ನಮ್ಮ ಪುರಾಣಗಳಲ್ಲಿ ಕೊಲ್ಲುವುದರ ಬಗ್ಗೆ, ಹಿಂಸೆಯ ಬಗ್ಗೆ ಅಂತರ್ಗತವಾಗಿರುವ ವಿಪುಲವಾದ ಸಂಗತಿಗಳು ಇಂದಿನ ವರ್ತಮಾನದ ಸಮಸ್ಯೆಗಳಿಗೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಿರುವುದು ನಿಜವಲ್ಲವೇ? ಈ ನಿಟ್ಟಿನಲ್ಲಿ ಪುರಾಣಗಳನ್ನು ಒಡೆದು ಕಟ್ಟುವ, ಅವುಗಳನ್ನು ಸುಧಾರಿಸುವ, ಅಗತ್ಯ ಬಿದ್ದಲ್ಲಿ ತಿರಸ್ಕರಿಸುವ ಮತ್ತು ಅಪ್ರಸ್ತುತಗೊಳಿಸುವ ಹಲವು ಧಾರೆಗಳನ್ನು ನಾವಿಂದು ಪರಿಗಣಿಸುವ ಅಗತ್ಯ ಹೆಚ್ಚಿದೆ.


ಇದನ್ನೂ ಓದಿ: ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಗುರುಪ್ರಸಾದ್ ಡಿ ಎನ್
+ posts

LEAVE A REPLY

Please enter your comment!
Please enter your name here