Homeಮುಖಪುಟಆರೋಗ್ಯ ಸೇತು ಆಪ್ ಕುರಿತ ಮಾಹಿತಿ ಇಲ್ಲ: ಕೇಂದ್ರ ಸರ್ಕಾರಕ್ಕೆ ನೋಟಿಸ್!

ಆರೋಗ್ಯ ಸೇತು ಆಪ್ ಕುರಿತ ಮಾಹಿತಿ ಇಲ್ಲ: ಕೇಂದ್ರ ಸರ್ಕಾರಕ್ಕೆ ನೋಟಿಸ್!

ಈ ಆಪ್‌ ಅಭಿವೃದ್ಧಿಯ ಬಗ್ಗೆ ಮಾಹಿತಿ ಇಲ್ಲ ಎಂದಿರುವ ಕೇಂದ್ರ ಸರ್ಕಾರದ ಅಧೀನ ಇಲಾಖೆಗಳು ಕೋಟ್ಯಂತರ ಭಾರತೀಯರ ಖಾಸಗೀ ಮಾಹಿತಿಯ ಬಗ್ಗೆ ನಿರ್ಲಕ್ಷ್ಯತೆ ತೋರುತ್ತಿದೆ.

- Advertisement -

ಕೊರೊನಾ ನಿಯಂತ್ರಣ ಮತ್ತು ಮಾಹಿತಿಗಾಗಿ ಭಾರತದ ಜನತೆ ಬಳಸುತ್ತಿದ್ದ ಆರೋಗ್ಯ ಸೇತು ಆಪ್‌ ಅನ್ನು ಅಭಿವೃದ್ಧಿಪಡಿಸಿದವರು ಯಾರೆಂದು ತಿಳಿದಿಲ್ಲ ಎಂದು ಕೇಂದ್ರ ಸರ್ಕಾರದ ಅಧೀನ ಇಲಾಖೆಗಳು ಹೇಳಿದೆ.

ಕೊರೊನಾ ಬಿಕ್ಕಟ್ಟಿನ ನಡುವೆ ಅದರ ನಿಯಂತ್ರಣಕ್ಕಾಗಿ ಸೋಂಕಿತರು ಮತ್ತು ಅವರೊಡನೆ ಸಂಪರ್ಕದಲ್ಲಿರುವವರ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಮತ್ತು ಜಾಗೃತಿ ನೀಡುವುದಕ್ಕಾಗಿ ಅಭಿವೃದ್ಧಿಪಡಿಸಲಾಗಿದ್ದ ಆರೋಗ್ಯ ಸೇತು ಆಪ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಬಳಿ ಮಾಹಿತಿ ಇಲ್ಲ ಎಂದು ಆರ್‌ಟಿಐ ಮಾಹಿತಿಯಿಂದ ಬಹಿರಂಗವಾಗಿದೆ.

ಈ ಆಪ್‌ ಅಭಿವೃದ್ಧಿಯ ಬಗ್ಗೆ ಮಾಹಿತಿ ಇಲ್ಲ ಎಂದಿರುವ ಕೇಂದ್ರ ಸರ್ಕಾರದ ಅಧೀನ ಇಲಾಖೆಗಳು ಕೋಟ್ಯಂತರ ಭಾರತೀಯರ ಖಾಸಗೀ ಮಾಹಿತಿಯ ಬಗ್ಗೆ ನಿರ್ಲಕ್ಷ್ಯತೆ ತೋರುತ್ತಿದೆ.

ಇದನ್ನೂ ಓದಿ: ಭಾರತದ ಇಂಟರ್ನೆಟ್ ಸ್ಪೀಡ್ ವಿಶ್ವದಲ್ಲಿಯೇ ಅತ್ಯಂತ ಕಳಪೆ; ಡಿಜಿಟಲ್ ಇಂಡಿಯಾ?

ಈ  ಹಿಂದೆ ಸರ್ಕಾರವೇ, ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಹಕಾರಿಯಾದ ಸಾಧನ ಎಂದು ಘೋಷಿಸಿತ್ತು. ಹಾಗಾಗಿ ಭಾರತದ ಕೋಟ್ಯಂತರ ಜನರು ಈ ಆಪ್‌ ಅನ್ನು ಬಳಸುತ್ತಿದ್ದಾರೆ. ಅದೂ ಅಲ್ಲದೇ ರೈಲುಗಳಲ್ಲಿ ಮತ್ತು ಸರ್ಕಾರಿ ಸಾರಿಗೆಗಳಲ್ಲಿ ಪ್ರಯಾಣಿಸಬೇಕೆಂದರೆ ಆರೋಗ್ಯ ಸೇತು ಆಪ್ ಖಡ್ಡಾಯ ಎಂದು ಸರ್ಕಾರವೇ ಹೇಳಿತ್ತು. ಆದರೆ ಈಗ ಏಕಾಏಕಿ ಇದರ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ದೊಡ್ಡ ಆಘಾತವನ್ನುಂಟುಮಾಡಿದೆ.

ಈ ಆಪ್ ಬಳಸುವ ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿಯೂ ಅದರಲ್ಲೇ ಅಡಕವಾಗಿರುತ್ತದೆ. ಈಗ ಇದನ್ನು ಅಭಿವೃದ್ಧಿಪಡಿಸಿದವರ ಬಗ್ಗೆ ಗೊತ್ತಿಲ್ಲ ಎನ್ನುವುದಾದರೆ ಈ ಮಾಹಿತಿಗಳು ಸುರಕ್ಷಿತವಾಗಿಲ್ಲ ಎಂದೇ ಅರ್ಥ. ಆದರೆ ಈ ಆಪ್‌ನಲ್ಲಿ ರಾಷ್ಟ್ರೀಯ ಮಾಹಿತಿ ಕೇಂದ್ರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಇದನ್ನು ಅಭಿವೃದ್ಧಿಗೊಳಿಸಿದೆ ಎಂದು ನಮೂದಿಸಲಾಗಿದೆ. ಆದರೆ ಇದನ್ನು ಅಭಿವೃದ್ಧಿಪಡಿಸಿದವರು ಯಾರು ಎಂಬ ಪ್ರಶ್ನೆಗೆ ಎರಡೂ ಇಲಾಖೆಗಳೂ ಹಾರಿಕೆಯ ಉತ್ತರ ನೀಡಿವೆ.

ಇದನ್ನೂ ಓದಿ: ಡಿಜಿಟಲ್ ಹೆಲ್ತ್ ಐಡಿಗೆ 60% ಜನ ಬೆಂಬಲ: ವೈಯಕ್ತಿಕ ಡೇಟಾ ಹಂಚಿಕೊಳ್ಳಲು ಹಿಂದೇಟು

ಆರ್‌ಟಿಐ ಕಾಯ್ದೆಯಡಿ ಇದರ ಬಗ್ಗೆ ಮಾಹಿತಿ ಕೋರಿದ್ದ ಸೌರವ್ ದಾಸ್ ಎಂಬುವವರು ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದು, ಆಪ್ ರೂಪಿಸಲು ಪ್ರಸ್ತಾವ ಸಲ್ಲಿಸಿದ್ದು ಯಾರು? ಅದಕ್ಕೆ ಅನುಮೋದನೆ ನೀಡಿದ್ದು ಯಾವತ್ತು? ಇದರಲ್ಲಿ ಭಾಗಿಯಾಗಿರುವ ಸಂಸ್ಥೆ, ವ್ಯಕ್ತಿಗಳು ಅಥವಾ ಸರ್ಕಾರದ ಇಲಾಖೆಯ ವಿವರ, ಇದನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಖಾಸಗೀ ವ್ಯಕ್ತಿಗಳ ನಡುವೆ ನಡೆದಿರುವ ಸಂವಹನದ ವಿವರಗಳನ್ನು ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಆದರೆ ಈ ಆಪ್ ರೂಪಿಸುವ ಕುರಿತ ಫೈಲ್ ನಮ್ಮ ಬಳಿ ಇಲ್ಲ ಎಂದು ರಾಷ್ಟ್ರೀಯ ಮಾಹಿತಿ ಕೇಂದ್ರ ಉತ್ತರಿಸಿತ್ತು. ಮಾಹಿತಿ ತಂತ್ರಜ್ಞಾನ ಇಲಾಖೆಯು ಈ ಅರ್ಜಿಯನ್ನು ರಾಷ್ಟ್ರೀಯ-ಇ-ಆಡಳಿತ ವಿಭಾಗಕ್ಕೆ ವರ್ಗಾಯಿಸಿತ್ತು. ಅಲ್ಲಿಯೂ ಇದಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲವೆಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಆರೋಗ್ಯ ಸೇತು ಆಪ್ ಕಡ್ಡಾಯ ಕಾನೂನುಬಾಹಿರ – ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶ್ರೀಕೃಷ್ಣ

ನೀಡಬಹುದಾದ ಯಾವುದೇ ವಿವರಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ನೀಡಬಹುದು ಎಂದು ಮಾಹಿತಿ ಆಯೋಗವೇ ಹೇಳಿದ್ದು, ಈ ರೀತಿ ಹಾರಿಕೆಯ ಉತ್ತರ ನೀಡಿರುವ ಇಲಾಖೆ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಜೊತೆಗೆ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ರಾಷ್ಟ್ರೀಯ-ಇ-ಆಡಳಿತ ವಿಭಾಗಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ.

ಆದರೂ ಸಾರ್ವಜನಿಕರ ಖಾಸಗೀ ಮಾಹಿತಿಗಳಿಗೆ ಜವಾಬ್ದಾರಿ ಯಾರು ಎಂಬ ಪ್ರಶ್ನೆ ಗಾಢವಾಗಿ ಕಾಡುತ್ತದೆ. ಈ ಹಿಂದೆ ಆಧಾರ್‌ ಕಾರ್ಡ್‌‌ಗೆ ಸಂಬಂಧಿಸಿದಂತೆ ಇದೇ ರೀತಿಯ ತೊಂದರೆ ಎದುರಾಗಿ, ಆಧಾರ್‌ ಮಾಹಿತಿಗಳು ಸುರಕ್ಷಿತವಲ್ಲ ಎಂದು ಹಲವು ಡಿಜಿಟಲ್ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಯಾವುದೆ ಕ್ರಮಗಳನ್ನು ಕೈಗೊಂಡಂತೆ ಕಾಣುತ್ತಿಲ್ಲ. ಹೀಗಿರುವಾಗ ಡಿಜಿಟಲ್ ಇಂಡಿಯಾ ಎಷ್ಟು ಸುರಕ್ಷಿತ ಎಂಬುದು ಮುಖ್ಯವಾಗಿದೆ.

ಇದನ್ನೂ ಓದಿ: ಆರೋಗ್ಯ ಸೇತು ಆ್ಯಪ್ ಅತ್ಯಾಧುನಿಕ ಕಣ್ಗಾವಲು ವ್ಯವಸ್ಥೆಯಾಗಿದೆ: ರಾಹುಲ್‌ ಗಾಂಧಿ

ಅಭಿವೃದ್ಧಿ ಯಾವತ್ತಿಗೂ ಮನುಷ್ಯನನ್ನು ಅಪಾಯಕ್ಕೆ ಸಿಲುಕಿಸುವಂತಿರಬಾರದು. ಆದರೆ ಇಂದು ಆಗುತ್ತಿರುವುದೇ ಬೇರೆ. ಮನುಷ್ಯ, ಅಭಿವೃದ್ಧಿಯ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋದಂತೆ ಅದರೊಂದಿಗಿನ ಅಪಾಯಗಳೂ ಒಂದೊಂದಾಗಿ ತೆರೆದುಕೊಳ್ಳುತ್ತಲೇ ಇವೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಂತೂ ನಾವು ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕು. ಆದರೆ ಸರ್ಕಾರದ ಇಂತಹ ಅವೈಜ್ಞಾನಿಕ ಮತ್ತು ಬೇಕಾಬಿಟ್ಟಿಯ ಧೋರಣೆಯಿಂದ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆ ಈ ಆರೋಗ್ಯ ಸೇತು ಆಪ್ ಮತ್ತು ಈ ಹಿಂದಿನ ಆಧಾರ್‌ ಕಾರ್ಡ್‌.

ಇಂದು ನಾವು ಮತ್ತು ನಮ್ಮ ಮಾಹಿತಿಯನ್ನು ರಕ್ಷಿಸುವಲ್ಲಿ ನಿರಾಸಕ್ತಿ ತೋರುತ್ತಿರುವ ಸರ್ಕಾರದ ವಿರುದ್ಧ ಆಂದೋಲನ ನಡೆಯಬೇಕಿದೆ. ಆದರೆ ಪಕ್ಷನಿಷ್ಟ ಮತ್ತು ವ್ಯಕ್ತಿನಿಷ್ಟ ಮಬ್ಬಕ್ತರಿಂದ ಇದು ಸಾಧ್ಯವಗುತ್ತಿಲ್ಲ. ಇಂದಿನ ಸೈಬರ್‌ ಯುಗದಲ್ಲಿ ನಾವು ಮತ್ತು ಮತ್ತು ನಮ್ಮ ಮಾಹಿತಿಗಳು ಸುರಕ್ಷಿತವಲ್ಲ ಎಂಬುದನ್ನು ಅರಿತಾಗ ಮಾತ್ರ ಮುಂದೆ ಸಂಭವಿಸಲಿರುವ ದೊಡ್ಡ ಅಪಾಯವನ್ನು ತಡೆಯಬಹುದು.


ಇದನ್ನೂ ಓದಿ: ದೇಶಪ್ರೇಮ ಇದ್ದರೆ, ಆರೋಗ್ಯ ಸೇತು ಸೋರ್ಸ್‌ ಕೋಡ್‌ ಪ್ರಕಟಿಸಿ | ಭಾರತ ಸರ್ಕಾರಕ್ಕೆ ಹ್ಯಾಕರ್‌ ಸವಾಲು

ಪ್ರತಾಪ ಹುಣಸೂರು
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ | Naanu Gauri

ಯುಪಿ ಚುನಾವಣೆ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

0
ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ (ಎಸ್‌ಪಿ) 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಹೆಸರಿಸಲಾದ ಪ್ರಮುಖ ಮುಖಗಳಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು...
Wordpress Social Share Plugin powered by Ultimatelysocial
Shares