Homeಪುಸ್ತಕ ವಿಮರ್ಶೆಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು...

ಪುಸ್ತಕ ಪರಿಚಯ; ಕಾಣೆಯಾಗಿದ್ದಾರೆ ಸಂಪಾದಕರು…

- Advertisement -
- Advertisement -

ಕೋವಿಡ್-19 ಸೋಂಕಿಗೆ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡರು. ಜೊತೆಗೆ, ಆಡಳಿತದಲ್ಲಿದ್ದವರ ಯಡವಟ್ಟುಗಳ ಕಾರಣ ಉದ್ಯೋಗ ಕಳೆದುಕೊಂಡವರೆಷ್ಟೋ? ಪಕ್ಕಾ ಲೆಕ್ಕ ಇನ್ನೂ ಸಿಕ್ಕಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಷ್ಟಗಳನ್ನು ಎದುರಿಸಿ ಬದುಕುಳಿದ ಜನರಲ್ಲಿ ಬರೆಯದೇ ಉಳಿದ ಸಾವಿರಾರು ಕತೆಗಳಿವೆ. ಅಂತಹ ಒಂದು ಕತೆಯನ್ನು ಹೇಳುವ ಕೃತಿ ’ಎಡಿಟರ್‍ಸ್ ಮಿಸ್ಸಿಂಗ್’. ಇದು ಕೇವಲ ವ್ಯಕ್ತಿಯ ಕತೆಯಲ್ಲ, ಪತ್ರಿಕೋದ್ಯಮದ ಇಂದಿನ ವ್ಯಥೆ.

’ಔಟ್‌ಲುಕ್’ ಎಂಬ ಇಂಗ್ಲಿಷ್ ವಾರಪತ್ರಿಕೆಯ ಸಂಪಾದಕರಾಗಿದ್ದ ರೂಬೆನ್ ಬ್ಯಾನರ್ಜಿ ತಮ್ಮ ಪುಸ್ತಕ ಶೀರ್ಷಿಕೆಯಲ್ಲಿ ’ಮಿಸ್ಸಿಂಗ್’ ಪದ ಸೇರಿಸಿರುವುದಕ್ಕೆ ಎರಡು ಕಾರಣಗಳಿವೆ. ಇತ್ತೀಚಿನ ವರ್ಷಗಳಲ್ಲಿ ದೊಡ್ಡದೊಡ್ಡ ಉದ್ಯಮಿಗಳು ನಡೆಸುವ ಪತ್ರಿಕೆ, ಮಾಧ್ಯಮಗಳಿಗೆ ವೃತ್ತಿನಿಷ್ಠ ಸಂಪಾದಕರು ಬೇಕಾಗಿಲ್ಲ. ಅವರ ವ್ಯವಹಾರಗಳಿಗೆ ಯಾವುದೇ ಧಕ್ಕೆ ಆಗದಂತೆ ಮಾಧ್ಯಮ ಸಂಸ್ಥೆ ಮುನ್ನಡೆಸುವ ಮ್ಯಾನೇಜರುಗಳು ಬೇಕಾಗಿದ್ದಾರೆ. ಹಾಗಾಗಿ ಈಗಿನ ಕಾಲದಲ್ಲಿ – ಸಂಪಾದಕರು ’ಮಿಸ್ಸಿಂಗ್’ (ಕಾಣೆಯಾಗಿದ್ದಾರೆ).

ರೂಬೆನ್ ಬ್ಯಾನೆರ್ಜಿ ಔಟ್‌ಲುಕ್ ಸಂಪಾದಕರಾಗಿ 2021ರ ಮೇ ತಿಂಗಳಲ್ಲಿ ’ಮಿಸ್ಸಿಂಗ್’ ಎಂಬ ತಲೆಬರಹದ ಮುಖಪುಟ ಲೇಖನದೊಂದಿಗೆ ಸಂಚಿಕೆ ಹೊರತಂದಿದ್ದರು. ಮುಖಪುಟದಲ್ಲಿ ’ಮಿಸ್ಸಿಂಗ್’ ಎಂದು ಕೆಂಪು ಅಕ್ಷರಗಳಲ್ಲಿ ದೊಡ್ಡದಾಗಿ ಬರೆಯಲಾಗಿತ್ತು. ಕಾಣೆಯಾದವರ “ಹೆಸರು: ಭಾರತ ಸರಕಾರ, ವಯಸ್ಸು: ಏಳು ಹಾಗೂ ಇಂತಹವರು ಸಿಕ್ಕರೆ ತಕ್ಷಣ ಭಾರತದ ಪ್ರಜೆಗಳಿಗೆ ತಿಳಿಸಿ” ಎಂದು ಬರೆಯಲಾಗಿತ್ತು.

ರೂಬೆನ್ ಬ್ಯಾನರ್ಜಿ

ಕೋವಿಡ್‌ನಿಂದ ಜನರು ತತ್ತರಿಸಿ ಹೋಗಿರುವಾಗ, ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಉಸಿರುಕಟ್ಟಿ ಸಾಯುತ್ತಿರುವಾಗ ಅವರ ನೆರವಿಗೆ ಬರಬೇಕಿದ್ದ ಸರಕಾರ ಕಾಣೆಯಾಗಿತ್ತು ಎಂಬುದನ್ನು ಆ ಕವರ್ ಪೇಜ್ ಸಂಕೇತಿಸುತ್ತಿತ್ತು. ಆಡಳಿತದಲ್ಲಿರುವ ಸರಕಾರದ ವಿರುದ್ಧದ ದನಿ ಆ ಮುಖಪುಟದ ಅಕ್ಷರಗಳಲ್ಲಿ ಗಟ್ಟಿಯಾಗಿತ್ತು.
ಅಲ್ಲಿಂದ ಆರಂಭವಾದ ಬೆಳವಣಿಗೆಗಳ ಕಾರಣ ರೂಬೆನ್ ಬ್ಯಾನರ್ಜಿಯವರು ಕೆಲಸ ಕಳೆದುಕೊಳ್ಳಬೇಕಾಯ್ತು. ಆ ಕಾರಣಕ್ಕಾಗಿ ಕೃತಿಯ ಶೀರ್ಷಿಕೆಯಲ್ಲಿರುವ ’ಮಿಸ್ಸಿಂಗ್’ ಪದಕ್ಕೆ ಹೆಚ್ಚಿನ ಮಹತ್ವ ಇದೆ. ಆ ಕವರ್ ಪೇಜ್ ಹೊತ್ತ ಔಟ್‌ಲುಕ್ ಸಂಚಿಕೆ ಮಾರುಕಟ್ಟೆಗೆ ಬರುವ ತನಕ ಮೂರು ವರ್ಷಗಳ ಕಾಲ ತನ್ನ ಹುದ್ದೆಗೆ ಯಾವುದೇ ತೊಂದರೆ ಇರಲಿಲ್ಲ ಹಾಗೂ ಯಾವುದೇ ಒತ್ತಡ ಇಲ್ಲದೆ ಸ್ವತಂತ್ರವಾಗಿ ಸಂಪಾದಕನಾಗಿ ಕೆಲಸ ಮಾಡಲು ಅವಕಾಶ ಇತ್ತು ಎಂದು ಅವರು ಹೇಳಿಕೊಂಡಿದ್ದಾರೆ.

ಈ ಕೃತಿ ಒಂದರ್ಥದಲ್ಲಿ ರೂಬೆನ್ ಬ್ಯಾನರ್ಜಿಯವರು ಆತ್ಮಕತೆಯೂ ಹೌದು. ವೃತ್ತಿ ಜೀವನಕ್ಕೆ ಸೀಮಿತವಾದ ಆತ್ಮಕತೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅವರು ಹೈದರಾಬಾದ್‌ನಲ್ಲಿ ಅಪರಾಧ ಸುದ್ದಿ ವರದಿಗಾರನಾಗಿ ಪತ್ರಕರ್ತನ ಕೆಲಸ ಆರಂಭಿಸುತ್ತಾರೆ. ಅವರ ಜೀವನಗಾಥೆಯ ನಿರೂಪಣೆಯಲ್ಲಿ ಓದುಗರು ಯಾವುದೇ ವಿಶೇಷ ಪ್ರಯತ್ನವಿಲ್ಲದೆ ಗುರುತಿಸಬಹುದಾದ ಒಂದು ಗುಣ ಪ್ರಾಮಾಣಿಕತೆ. ಅವರನ್ನು ತೀವ್ರ ಮುಜುಗರಕ್ಕೆ ಒಳಪಡಿಸಿದ ಸನ್ನಿವೇಶಗಳನ್ನು ಸಹಜವಾಗಿ ನಿರೂಪಿಸಿದ್ದಾರೆ. ಆತ್ಮಕತೆಗಳಲ್ಲಿ ಸಾಮಾನ್ಯವಾಗಿ ಸ್ವಪ್ರಶಂಸೆ ಹೆಚ್ಚಾಗಿರುತ್ತದೆ. ಆದರೆ ಇವರಲ್ಲಿ ಅದಿಲ್ಲ.

ವಿನೋದ್ ಮೆಹ್ತಾ ಅಂತಹವರು ನಿರ್ವಹಿಸಿದ ಔಟ್‌ಲುಕ್ ಸಂಪಾದಕರ ಸ್ಥಾನಕ್ಕೆ ತಾನು ’ಸೂಕ್ತ ವ್ಯಕ್ತಿಯೇ’ ಎಂದು ಹಲವು ಬಾರಿ ಅವರು ತಮ್ಮನ್ನು ಪ್ರಶ್ನಿಸಿಕೊಂಡಿದ್ದಾರೆ. ದೆಹಲಿಯ ಜನಪ್ರಿಯ ಪತ್ರಕರ್ತರ ಜೊತೆ ಅವರೇನು ಆತ್ಮೀಯ ಗೆಳೆತನ ಹೊಂದಿದ್ದವರಲ್ಲ. ಏಕೆಂದರೆ ಅವರು ಬಹಳ ಕಾಲ ಬೇರೆ ಊರುಗಳಲ್ಲಿ, ವಿದೇಶದಲ್ಲಿ ಕೆಲಸ ಮಾಡಿದ್ದವರು. ಹಾಗಾಗಿ ಔಟ್‌ಲುಕ್ ಸಂಪಾದಕರಾದ ಮೇಲೆ ಒಂದು ಕಾರ್ಯಕ್ರಮದಲ್ಲಿ ಇತರೆ ’ಜನಪ್ರಿಯ ಪತ್ರಕರ್ತರನ್ನು’ ಮಾತನಾಡಿಸಿ ಪರಿಚಯ ಮಾಡಿಕೊಳ್ಳಲು ಹೋದಾಗ, ಅಲ್ಲಿದ್ದವರು ಇವರ ಕಡೆ ಅಷ್ಟಾಗಿ ಗಮನವನ್ನೂ ಕೊಡುವುದಿಲ್ಲ. ಇವರು ತೀವ್ರ ಮುಜುಗರ ಎದುರಿಸುತ್ತಾರೆ. ಅದನ್ನು ನೈಜವಾಗಿ ನಿರೂಪಿಸಿದ್ದಾರೆ.

ಈ ಮೊದಲು ಕೆಲಸ ಕೇಳಲು ಹೋದ ಕಡೆಯಲ್ಲೆಲ್ಲಾ ಅವಮಾನ ಅನುಭವಿಸಿದ್ದನ್ನೂ ಪ್ರಾಮಾಣಿಕತೆಯಿಂದ ಬರೆದಿದ್ದಾರೆ. ಯಾವುದೋ ಒಂದು ಸನ್ನಿವೇಶದಲ್ಲಿ ಅರುಣ್ ಶೌರಿಯವರು ’ಅಕ್ಷರಶಃ ಅಟ್ಟಾಡಿಸಿಕೊಂಡು ಬಂದು ಹೊರ ಕಳುಹಿಸಿದರು’ ಎಂದು ಬರೆಯುತ್ತಾರೆ. ಇನ್ನೊಂದು ಕಡೆ ಇವರ ಸೀನಿಯರ್ “ನಿಮ್ಮನ್ನು ಈ ಪ್ರಮುಖ ಸ್ಥಾನಕ್ಕೆ ನೇಮಿಸಿಕೊಂಡು ತಪ್ಪು ಮಾಡಿದೆ..” ಎಂದು ಛೀಮಾರಿ ಹಾಕಿದ್ದನ್ನು ದಾಖಲಿಸುತ್ತಾರೆ.

ವೃತ್ತಿಜೀವನದ ಆರಂಭದಲ್ಲಿ ಅವರು ವರದಿಗಾರರಾಗಿ ಒಂದು ದಿನ ಸ್ನೇಹಿತರ ಒತ್ತಾಯಕ್ಕೆ ರಾತ್ರಿ ಪಾಳೆಯದಲ್ಲಿ ಸಿನಿಮಾಕ್ಕೆ ಹೋಗಿರುತ್ತಾರೆ. ಅಂದು ಕಚೇರಿಯಲ್ಲೇ ಇದ್ದು ಅಪರಾಧ ಘಟನೆಗಳ ಮಾಹಿತಿ ಕಲೆಹಾಕಬೇಕಿತ್ತು. ಆದರೆ ಆ ಕೆಲಸ ಮಾಡದ ಕಾರಣ, ಅಂದು ಹೈದರಾಬಾದ್ ಪಟ್ಟಣದಲ್ಲಿ ಕೋಮುಗಲಭೆ ನಡೆದು ಒಬ್ಬ ಶಾಸಕ ಕೂಡ ಹತ್ಯೆಯಾಗಿದ್ದನ್ನು ವರದಿ ಮಾಡಿರಲಿಲ್ಲ. ಅದು ನಡೆದದ್ದು 1980ರ ದಶಕದ ಕೊನೆ ಭಾಗದಲ್ಲಿ. ಈಗಿನಂತೆ ಮೊಬೈಲ್ ಫೋನ್ ಇರಲಿಲ್ಲ. ಮಾರನೇ ದಿನ ಬೆಳಗ್ಗೆ ಬೇರೆ ಪತ್ರಿಕೆಗಳನ್ನು ನೋಡಿದಾಗ ಆಗಿರುವ ಅನಾಹುತ ಗೊತ್ತಾಗುತ್ತದೆ. ಬೇರೆಲ್ಲಾ ಪತ್ರಿಕೆಗಳ ಸಿಟಿ ಎಡಿಷನ್‌ನಲ್ಲಿ ಲೀಡ್ ಆಗಿರುವ ಸುದ್ದಿ, ಇವರ ಪತ್ರಿಕೆಯಲ್ಲಿ ಇಲ್ಲವೇ ಇಲ್ಲ. ವರದಿಗಾರ ಸಿನಿಮಾ ನೋಡಲು ಹೋಗಿದ್ದ ಕಾರಣ ಸುದ್ದಿ ಬರಲಿಲ್ಲ. ಈ ಘಟನೆಯಿಂದ ತೀವ್ರ ಬೇಸರ ಪಟ್ಟು ಕಚೇರಿ ಕಡೆ ಮುಖ ಮಾಡುವುದಿಲ್ಲ. ಅಲ್ಲಿಗೆ ತನ್ನ ಪತ್ರಿಕೋದ್ಯಮ ಜೀವನ ಮುಗಿಯಿತೇನೋ ಎನಿಸಿದ್ದೂ ಉಂಟು. ಆದರೆ ಹಿರಿಯ ಸಹೋದ್ಯೋಗಿಗಳು ಮತ್ತೆ ಬಾ ಎಂದು ಕರೆದಾಗ ಕಚೇರಿಗೆ ಹೋದ ಕಾರಣ ಈ ಕ್ಷೇತ್ರದಲ್ಲಿ ಉಳಿಯುತ್ತಾರೆ. ಈ ಘಟನೆಯವನ್ನು ಅವರು ಇಲ್ಲಿ ಹೇಳಿಕೊಳ್ಳದಿದ್ದರೆ, ಯಾಕೆ ಹೇಳಲಿಲ್ಲ ಎಂದು ಯಾರೂ ಕೇಳುತ್ತಿರಲಿಲ್ಲ.

ಹಾಗೆಯೇ ಇನ್ನೊಂದು ಸಂದರ್ಭ ಔಟಲುಕ್‌ನ ಜಾಹಿರಾತು ಒಂದರಲ್ಲಿ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಹೆಸರು ಶ್ರೀಮತಿ ಈಡಿಯಟ್ ಎಂದೇನೋ ತಪ್ಪಾಗಿ ಅಚ್ಚಾಗಿರುತ್ತದೆ. ಕಚೇರಿಯಲ್ಲಿ ಇದ್ದ ಸಿಬ್ಬಂದಿ ಒಬ್ಬರು ಸಹೋದ್ಯೋಗಿ ಜೊತೆ ಕುಚೋದ್ಯ ಮಾಡಲು ಹೋಗಿ ಆಗಿದ್ದ ಪ್ರಮಾದ ಅದು. ಆ ಸಂಚಿಕೆ ಪ್ರಿಂಟ್ ಆಗಿ ಬಂದ ನಂತರವೇ ತಪ್ಪು ಗೊತ್ತಾಗುತ್ತದೆ. ತಕ್ಷಣ ಎಲ್ಲಾ ಸಂಚಿಕೆಗಳನ್ನು ವಾಪಸ್ಸು ತರಿಸಿ, ಇಡೀ ಸಂಚಿಕೆಯನ್ನು ಮತ್ತೆ ಮುದ್ರಿಸುತ್ತಾರೆ. ಈ ಘಟನೆಯೂ ಇಲ್ಲಿದೆ.

ಬ್ಯಾನರ್ಜಿ ಇಂಡಿಯಾ ಟುಡೆ ಪತ್ರಿಕೆಯ ವರದಿಗಾರರಾಗಿ ಹಲವು ಪ್ರಮುಖ ಸುದ್ದಿಗಳನ್ನು ಪ್ರಕಟಿಸುತ್ತಾರೆ. ನೆರೆ ಬಂದು ರಾಜ್ಯ ತತ್ತರಿಸಿದಾಗಲ್ಲೆಲ್ಲಾ ಅದರ ಬಗ್ಗೆ ಇವರು ಮಾಡಿದ ವರದಿಗಳು ಕವರ್ ಸ್ಟೋರಿಗಳಾಗಿ ಅಚ್ಚಾಗಿವೆ. ಕ್ರಿಶ್ಚಿಯನ್ ಮಿಷಿನರಿಯ ಗ್ರಹಾಂ ಸ್ಟೇನ್ಸ್ ಮತ್ತು ಅವರ ಇಬ್ಬರು ಮಕ್ಕಳನ್ನು ದಾರಾ ಸಿಂಗ್ ಮತ್ತು ಅವನ ಸಹಚರರು ಸುಟ್ಟು ಹಾಕಿದ್ದನ್ನು ಇಂಡಿಯಾ ಟುಡೆಗೆ ವರದಿ ಮಾಡಿದ್ದು ಇವರೇ. ಬಿಜು ಪಟ್ನಾಯಕ್ ಹಾಗೂ ನವೀನ್ ಪಟ್ನಾಯಕ್ ಅವರ ಜೊತೆ ಆತ್ಮೀಯ ಸಂಪರ್ಕ ಸಾಧಿಸಿದ್ದರು. ಆ ಕಾರಣಕ್ಕೆ ಮುಂದೆ ದೀರ್ಘ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿದಿರುವ ನವೀನ್ ಪಟ್ನಾಯಕ್ ಜೀವನಗಾಥೆಯನ್ನು ಪುಸ್ತಕವಾಗಿ ಹೊರತಂದಿದ್ದಾರೆ. ಆಲ್‌ಜಜೀರಾದ ವೆಬ್ ಎಡಿಷನ್‌ಗಾಗಿ ಹನ್ನೆರಡು ವರ್ಷ ದೋಹಾದಲ್ಲಿ ಕೆಲಸ ಮಾಡಿದ್ದಾರೆ.

ಔಟಲುಕ್‌ನಲ್ಲಿ ಸಂಪಾದಕರಾಗಿ ಅವರು ತಳೆದಿದ್ದ ನಿಲುವು ’ಎರಡೂ ಕಡೆಯ ಅಭಿಪ್ರಾಯಗಳಿಗೆ ಸಮಾನ ಮನ್ನಣೆ’ ಕೊಡಬೇಕು ಎನ್ನುವುದು. ಬಹುಶಃ ಆ ಕಾರಣಕ್ಕೆ ಔಟಲುಕ್‌ನ ಹಲವು ಸಾಂಪ್ರದಾಯಿಕ ಓದುಗರು ಅವರು ಜವಾಬ್ದಾರಿ ಹೊತ್ತ ನಂತರ ಪತ್ರಿಕೆಯಿಂದ ದೂರವಾದರು. ರೂಬೆನ್ ಬ್ಯಾನರ್ಜಿ ತಮ್ಮ ಈ ಧೋರಣೆಯನ್ನು ಈ ಕೃತಿಯಲ್ಲೂ ಬಲವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆ ನಿಲುವಿಗೆ ಕಟ್ಟುಬಿದ್ದು ಅವರು ತೀರಾ ಒಪ್ಪಲಾಗದ, ಲಾಜಿಕ್ಕೇ ಇಲ್ಲದ ಹಲವು ಅಭಿಪ್ರಾಯಗಳನ್ನು ಪ್ರಕಟಿಸಬೇಕಾಯಿತು. ಒಮ್ಮೆ ಅವರ ಕಿರಿಯ ಸಹೋದ್ಯೋಗಿಯೊಬ್ಬ, ಸಂಪಾದಕರ ಈ ನಿಲುವಿನ ಬಗ್ಗೆ ತನ್ನ ತಕರಾರು ತೆಗೆದ. ಆದರೆ ಅದರಿಂದ ಬ್ಯಾನರ್ಜಿಯವರು ಬೇಸರ ಮಾಡಿಕೊಳ್ಳಲಿಲ್ಲ. “ನಿನ್ನ ನಿಲುವನ್ನು ತಾನು ಗೌರವಿಸುತ್ತೇನೆ” ಎಂದು ಹೇಳಿ, ಆತನಿಂದಲೇ ಸಂಪಾದಕರ ಅಭಿಪ್ರಾಯದ ವಿರುದ್ಧ ಒಂದು ಬರಹ ಬರೆಯಿಸಿ ಅದನ್ನು ಯಥಾವತ್ತಾಗಿ ಪ್ರಕಟಿಸಿದರು. ಹೀಗೆ ಭಿನ್ನ ಅಭಿಪ್ರಾಯಗಳಿಗೆ ಸಮಾನ ಮಣೆಹಾಕುವುದರಿಂದ ಅಧಿಕಾರಸ್ಥರ ಕೆಂಗಣ್ಣಿಗೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಬಹುದು ಎಂಬ ಲೆಕ್ಕಾಚಾರವೂ ಸಂಪಾದಕರಿಗೆ ಇದ್ದಿರಬಹುದು. ಜೊತೆಗೆ ತನ್ನ ಪತ್ರಿಕೋದ್ಯಮದಿಂದ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬೇರುಬಿಟ್ಟಿರುವ ಮಾಲೀಕರಿಗೆ
ತೊಂದರೆ ಆಗಬಾರದು ಎಂಬ ಕಾಳಜಿಯೂ ಇರಬಹುದು.

ಆದರೆ ಇಂತಹ ಸರ್ಕಸ್ ಮಾಡಿದ ನಂತರವೂ ಅವರೇನು ತಮ್ಮ ಸ್ಥಾನದಲ್ಲಿ ಬಹಳ ಕಾಲ ಉಳಿಯಲಿಲ್ಲ. ಅತ್ತ ಮಾಲೀಕರ ಬೆಂಬಲವೂ ದೀರ್ಘಕಾಲ ಇರಲಿಲ್ಲ. ಕಂಪನಿಯ ಸಿಇಒ ಇವರ ಕೆಲಸದಲ್ಲಿ ಮಧ್ಯಪ್ರವೇಶ ಮಾಡಿ ಸಂಪಾದಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕೊನೆಗೆ ಬೇಸತ್ತು ಕೆಲಕಾಲ ರಜೆ ಮೇಲೆ ಹೋಗುತ್ತಾರೆ. ಆದರೆ ಹಿಂತಿರುಗಿ ಬರುವ ದಿನ ಅವರನ್ನು ಕೆಲಸದಿಂದ ಏಕಾಏಕಿ ತೆಗೆದುಹಾಕಲಾಗಿರುತ್ತದೆ. ಈ ಘಟನೆಗಳ ಪೂರ್ಣ ವಿವರಗಳು ಕೃತಿಯಲ್ಲಿವೆ.

ತಮ್ಮ ಕತೆಯ ಜೊತೆಗೆ ಬ್ಯಾನರ್ಜಿಯವರು ತಮ್ಮ ಕಾಲದ ಪತ್ರಿಕೋದ್ಯಮದ ಕತೆ ಹೇಳುತ್ತಾರೆ. ಸಂಪಾದಕರು ಕಾಣೆಯಾಗಿ ಸಿಇಒಗಳು ಪತ್ರಿಕೋದ್ಯಮ ನಡೆಸುತ್ತಿರುವ ವ್ಯವಸ್ಥೆ ಬಗ್ಗೆ ಬರೆಯುತ್ತಾರೆ. ಈ ವಾಸ್ತವ ಚಿತ್ರಣವನ್ನು ಈ ಕೃತಿ ಅಚ್ಚುಕಟ್ಟಾಗಿ ನಿರೂಪಿಸಿದೆ.

ಈಗೀಗ ಸಂಪಾದಕರು ಬಿಡಿ, ವರದಿಗಾರರೂ ಕಾಣೆಯಾಗಿದ್ದಾರೆ. ಜಿಲ್ಲಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವರದಿಗಾರರು ಈಗ ಜಾಹಿರಾತು ವ್ಯವಸ್ಥಾಪಕರೂ ಹೌದು, ಪತ್ರಿಕೆಗಳ ಉಸ್ತುವಾರಿಯೂ ಅವರದೇ. ಈ ಜವಾಬ್ದಾರಿಗಳ ಜೊತೆಗೆ ಆಗಾಗ ಜನಪ್ರತಿನಿಧಿಗಳನ್ನು ಕರೆದು ದೊಡ್ಡ ಕಾರ್ಯಕ್ರಮಗಳನ್ನು ಮಾಡಬೇಕು. ಆ ಕಾರ್ಯಕ್ರಮದ ನೆಪದಲ್ಲಿ ಸಂಸ್ಥೆಗೆ ಜಾಹಿರಾತು ತರಬೇಕು. ಆ ಬಗ್ಗೆ ತಿಂಗಳಿಗೆ ಇಷ್ಟು ಎಂಬಂತೆ ಟಾರ್ಗೆಟ್ ಕೂಡಾ ನಿಗದಿಯಾಗಿದೆ. ಯಾರು ಟಾರ್ಗೆಟ್ ರೀಚ್ ಮಾಡುವುದಿಲ್ಲವೋ ಅವರು ಕೆಲಸ ಕಳೆದುಕೊಳ್ಳುವ ಸಂಭವ ಇದೆ. ಎಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ.

ಪತ್ರಿಕೋದ್ಯಮ ಒಂದು ಉದ್ದಿಮೆಯಾಗಿ ಬದಲಾದ ವಿದ್ಯಮಾನ ಸಮಾಜಕ್ಕೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾದದ್ದು. ಪತ್ರಿಕಾ ಸಂಸ್ಥೆಗಳನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯಾವಾಗ ಎಂಬಿಎ ಓದಿ ಬಂದ ವ್ಯಕ್ತಿಗಳು ವಹಿಸಲು ಬಂದರೋ ಆಗಿನಿಂದ ಅಹಿತಕರ ಬದಲಾವಣೆಗಳು ಆರಂಭವಾದವು. ಪತ್ರಿಕೆ ಹೇಗಿರಬೇಕು, ಯಾರ ಪರ ಇದ್ದರಷ್ಟೇ ಜಾಹಿರಾತು ಬರುತ್ತವೆ ಎಂಬಿತ್ಯಾದಿಯನ್ನು ಅವರೇ ನಿರ್ಧರಿಸುವಂತಾಯಿತು.

ವಿನೋದ್ ಮೆಹ್ತಾ

ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಒಂದು ಘಟನೆ ನೆನಪು ಮಾಡಿಕೊಂಡರು. ಅವರು ಈ ಹಿಂದೆ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಡೆದ ಸನ್ನಿವೇಶ ಅದು. ಎಂಬಿಎ ಓದಿಕೊಂಡು ಕಾರು ಮಾರಾಟದ ಕಂಪನಿಯಲ್ಲಿ ಕೆಲಸದಲ್ಲಿದ್ದ ವ್ಯಕ್ತಿಯೊಬ್ಬರು ಪತ್ರಿಕಾ ಸಂಸ್ಥೆ ಮಾರುಕಟ್ಟೆ ವಿಭಾಗಕ್ಕೆ ನೇಮಕವಾದರು. ಮೀಟಿಂಗ್‌ನಲ್ಲಿ ಒಮ್ಮೆ ಪತ್ರಿಕೆಯ ಸಂಪಾದಕೀಯ ಧೋರಣೆ ಬಗ್ಗೆ ಆ ಮಹಾಶಯ ಚಕಾರ ಎತ್ತಿ, ’ಇದು ಬದಲಾಗಬೇಕು, ಆಗ ಮಾತ್ರ ಸೇಲ್ಸ್ ಜಾಸ್ತಿ ಆಗುತ್ತೆ’ ಎಂದರಂತೆ. ಅವರ ಮಾತಿಗೆ ಪ್ರತಿಕ್ರಿಯಿಸುತ್ತಾ ಸುಗತ ಹೇಳಿದ್ದು, “ನೀವು ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರು ಕಂಪನಿಯಲ್ಲಿ ಏನು ಮಾಡುತ್ತಿದ್ರಿ? ಕಂಪನಿ ಸಿದ್ಧಪಡಿಸುತ್ತಿದ್ದ ಕಾರನ್ನು ಮಾರಾಟ ಮಾಡುತ್ತಿದ್ರಿ ತಾನೆ? ಅದರ ಬದಲು ಅದರ ಹೆಡ್ ಲೈಟ್, ಸೀಟ್ಸ್, ಅಥವಾ ಟೈರ್‍ಸ್ ಬದಲಾಗಬೇಕು ಆಗ ಮಾತ್ರ ಮಾರಾಟ ಆಗುತ್ತೆ ಎಂದು ಯಾವಾಗಲಾದರೂ ಹೇಳಿದ್ರಾ? ಇಲ್ಲಾ ತಾನೆ. ಪತ್ರಿಕೆ ಹೇಗಿರಬೇಕು, ಅದರ ಧೋರಣೆ, ನಿಲುವು ಏನು ಎಂಬುದನ್ನು ಸಂಪಾದಕೀಯ ವಿಭಾಗ ನಿರ್ಧರಿಸುತ್ತದೆ. ಇರುವ ಪ್ರಾಡಕ್ಟ್ ಇರುವ ಹಾಗೆಯೇ ಮಾರ್ಕೆಟ್ ಮಾಡಬೇಕಾಗಿರುವುದು ನಿಮ್ಮ ಜವಾಬ್ದಾರಿ” ಎಂದರಂತೆ. ಇದು ತಕ್ಕ ಉತ್ತರ. ಆದರೆ ಆ ಉತ್ತರ ಹೇಳಿ ಅದನ್ನೇ ಸರಿ ಎಂದು ಸಾಧಿಸಿ ಈ ಬಿಗುವಿನ ಪೈಪೋಟಿ ಇರುವ ಜಗತ್ತಿನಲ್ಲಿ ಗೆಲ್ಲುವುದು ಕಷ್ಟದ ಮಾತು.

ಇಂದು ಅನೇಕ ಪತ್ರಿಕೆ, ಮಾಧ್ಯಮ ಸಂಸ್ಥೆಗಳು ನಡೆಯುತ್ತಿರುವುದು ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಓದಿ ಬಂದವರಿಂದ. ಸಂಪಾದಕೀಯ ಹಾಗೂ ಜಾಹೀರಾತು ಮಧ್ಯದ ಗೋಡೆ ಕಾಣೆಯಾಗಿರುವುದಷ್ಟೇ ಅಲ್ಲ, ಎಲ್ಲೆಲ್ಲೂ ಜಾಹೀರಾತು ವಿಭಾಗವೇ ತನ್ನ ಛಾಪು ಮೂಡಿಸಿದೆ. ರೂಬೆನ್ ಬ್ಯಾನರ್ಜಿಯವರ ಕೃತಿ ಈ ಬಗ್ಗೆ ಓದುಗರನ್ನು ಒಂದಿಷ್ಟು ಚಿಂತನೆಗೆ ಹಚ್ಚುತ್ತದೆ.

ಸಿ ಟಿ ಜಿತೇಶ್, ಪತ್ರಕರ್ತರು


ಇದನ್ನೂ ಓದಿ: ಪುರಾಣದ ಯಾವುದೋ ಕಲ್ಪಿತ ಜಗತ್ತನ್ನು ಹಂಬಲಿಸುತ್ತಾ ಹಿಮ್ಮುಖ ಚಲಿಸದ ಕಥಾ ಪಾತ್ರಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...