Homeಕರ್ನಾಟಕಆದಿಲ್‌ಷಾಹಿ ಸಾಹಿತ್ಯ; ಅವಗಣನೆಗೊಳಗಾಗಿದ್ದ ಇತಿಹಾಸಕ್ಕೆ ಅನುವಾದದ ಸಿಂಚನ

ಆದಿಲ್‌ಷಾಹಿ ಸಾಹಿತ್ಯ; ಅವಗಣನೆಗೊಳಗಾಗಿದ್ದ ಇತಿಹಾಸಕ್ಕೆ ಅನುವಾದದ ಸಿಂಚನ

- Advertisement -
- Advertisement -

ಬಿಜಾಪುರವನ್ನು ರಾಜಧಾನಿ ಆಗಿಸಿಕೊಂಡು ಸರಿಸುಮಾರು ಎರಡು ನೂರು ವರ್ಷಗಳ ಕಾಲ ಆಡಳಿತ ನಡೆಸಿದ್ದು ಆದಿಲ್ ಷಾಹಿ ಸಾಮ್ರಾಜ್ಯ. ಬಹಮನಿ ಸಾಮ್ರಾಜ್ಯದ ಕೊನೆಯ ದಿನಗಳಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ ನ್ಯಾಯವಂತ (ಆದಿಲ್) ಯುಸೂಫ್ ಸ್ವಾತಂತ್ರ್ಯ ಘೋಷಿಸಿದ. ಹೊಸ ಸಾಮ್ರಾಜ್ಯದ ಹುಟ್ಟಿಗೆ ನಾಂದಿಹಾಡಿದ. ಯುಸೂಫ್‌ನ ನಂತರದ ಆದಿಲ್‌ಷಾಹಿ ದೊರೆಗಳು ವಾಸ್ತುಶಿಲ್ಪ- ಕಲೆ- ಸಾಹಿತ್ಯ- ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಬಹಮನಿ- ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ಪರಸ್ಪರ ಹೊಂದಿಕೊಂಡು ಬಾಳುವ ಸಂಸ್ಕೃತಿಗೆ ಕಾಣಿಸಿಕೊಂಡಿತು. ಜತೆಯಾಗಿ ಬಾಳುವ ಸಂಸ್ಕೃತಿಗೆ ಸೂಫಿಗಳು ನೀರು ಎರೆದರು. ಔರಂಗಜೇಬ್‌ನ ಕಾಲದಲ್ಲಿ ಬಿಜಾಪುರ ಮೊಘಲ್‌ರ ಪಾಲಾಯಿತು. ಕ್ರಿ.ಶ.1489ರಿಂದ 1686ರ ನಡುವಿನ ಅವಯಲ್ಲಿ ಒಂಭತ್ತು ಆದಿಲ್‌ಷಾಹಿ ದೊರೆಗಳು ಆಡಳಿತ ನಡೆಸಿದರು.

ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ಇಸ್ಲಾಮಿಕ್ ಚಿತ್ರಕಲೆಯು ಪ್ರಫುಲ್ಲಿತವಾಗಿ ಅರಳಿತು. ಚಿತ್ರಕಲೆಯು ಮಿನಿಯೇಚರ್ ಭಾವಚಿತ್ರ ರಚಿಸುವ ಹಂತ ತಲುಪಿದರೆ ಇಬ್ರಾಹಿಂನ ಕಾಲದಲ್ಲಿ ಶಾಸ್ತ್ರೀಯ ಸಂಗೀತದಲ್ಲಿಯೂ ಗಣನೀಯ ಸಾಧನೆ ಕಂಡಿತು. ಬೃಹತ್ ಗುಂಬಜ್ ಇರುವ ಗೋಳಗುಮ್ಮಟ, ಕುಸುರಿ ಕೆಲಸದ ಇಬ್ರಾಹೀಂ ರೋಜಾ, ಅಪೂರ್ಣಗೊಂಡಿರುವ ಬಾರಾಕಮಾನ್‌ದಂತಹ ಅನನ್ಯ ವಾಸ್ತುಶಿಲ್ಪಕ್ಕೆ ಕಾರಣರಾದ ಆದಿಲ್‌ಷಾಹಿ ಅರಸರ ಕಾಲದಲ್ಲಿಯೇ ದಖನಿಯು ಸಾಹಿತ್ಯಕ ಅಭಿವ್ಯಕ್ತಿಯ ಹಂತಕ್ಕೆ ಏರಿತು. ಮರಾಠಿ-ಫಾರಸಿ-ದಖನಿ-ಉರ್ದು ಭಾಷೆಗಳಲ್ಲಿ ಆದಿಲ್‌ಷಾಹಿ ಸಾಮ್ರಾಜ್ಯದ ಐತಿಹಾಸಿಕ ದಾಖಲೆಗಳು ಹರಡಿಕೊಂಡಿವೆ.

ಇಂತಹ ಐತಿಹಾಸಿಕ, ಸಾಂಸ್ಕೃತಿಕ ಮಹತ್ವ ಇರುವ ಸಾಮ್ರಾಜ್ಯ ಮತ್ತು ಅದರ ಕೊಡುಗೆಗಳ ಕುರಿತು ನಡೆದ ಅಧ್ಯಯನಗಳು ಅಪರೂಪ ಎನ್ನುವಷ್ಟು ಕಡಿಮೆ; ಅದಕ್ಕೆ ಕಾರಣ ಇಲ್ಲದಿಲ್ಲ. ಹಲವು ಭಾಷೆಗಳಲ್ಲಿ ಹರಡಿಹೋಗಿದ್ದ ಆಕರಗಳು ಕೂಡ ಒಂದು ಪ್ರಮುಖ ಕಾರಣವಾಗಿತ್ತು. ಹೀಗಾಗಿ ಚರಿತ್ರೆಯ ಪಾರ್ಶ್ವನೋಟವನ್ನೇ ’ಪೂರ್ಣನೋಟ’ ಎಂದು ಭ್ರಮಿಸುವ ಹಾಗಾಗಿತ್ತು. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಎಂ.ಎಂ. ಕಲಬುರ್ಗಿ ಅವರ ಯೋಚನೆ-ಯೋಜನೆಯನ್ನು ಸಾಕಾರಗೊಳಿಸಲು ಯತ್ನಿಸಿದವರು ಕೃಷ್ಣ ಕೋಲಾರ ಕುಲಕರ್ಣಿ.

ಈ ಯೋಜನೆಯ ಬಗ್ಗೆ ಕಲಬುರ್ಗಿ ಅವರು ನನಗೆ ಒಮ್ಮೆ ಹೀಗೆ ವಿವರಿಸಿದ್ದರು- ಮಧ್ಯಕಾಲೀನ ಅವಧಿಯವರೆಗೆ ಭಾರತೀಯ ಮನಸ್ಸುಗಳು ಪುರಾಣಗಳಲ್ಲಿ ಮುಳುಗಿಹೋಗಿದ್ದವು. ಅವರಿಗೆ ಇತಿಹಾಸದ ಅರಿವು ಇರಲಿಲ್ಲ. ಆದರೆ, ಮುಸ್ಲಿಂ ಲೇಖಕರಿಗೆ ಐತಿಹಾಸಿಕ ಪ್ರಜ್ಞೆ ಇತ್ತು. ಇತಿಹಾಸಕಾರನ ಬರವಣಿಗೆಯಲ್ಲಿ ಕೇವಲ ರಾಜಕೀಯ ಮಾತ್ರ ಇರುವುದಿಲ್ಲ. ಸುತ್ತಲಿನ ಸಮಾಜದ ಆಗುಹೋಗುಗಳನ್ನು ಕೂಡ ದಾಖಲಿಸಿರುತ್ತಾನೆ. ಅಂತಹ ಪಠ್ಯಗಳನ್ನು ಅನುವಾದಿಸಿಕೊಂಡಾಗ ಮಾತ್ರ ಚರಿತ್ರೆಯನ್ನು ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಹಿಂದಿನ ಇತಿಹಾಸಕಾರರಿಗೆ ಮುಸ್ಲಿಮರು ನಮ್ಮವರಲ್ಲ ಎನ್ನುವ ಭಾವನೆ ಇತ್ತು. ಆದ್ದರಿಂದ ವಿಜಯನಗರದಷ್ಟೇ ಪ್ರಭಾವಶಾಲಿಯಾಗಿದ್ದ ಆದಿಲ್‌ಶಾಹಿ ಅರಸರ ಬಗ್ಗೆ ಹೆಚ್ಚು ಕೆಲಸ ಆಗಲಿಲ್ಲ. ಬಹುತೇಕ ಪಠ್ಯಗಳು ಉರ್ದು-ಅರಬ್ಬಿ- ಫಾರಸಿ ಭಾಷೆಗಳಲ್ಲಿ ಇದ್ದದ್ದರಿಂದ ಕನ್ನಡಕ್ಕಿರಲಿ ಇಂಗ್ಲಿಷಿಗೂ ಅನುವಾದ ಆಗಿರಲಿಲ್ಲ. ಅಷ್ಟೇ ಅಲ್ಲ, ಆದಿಲ್‌ಶಾಹಿ ಸಾಹಿತ್ಯಕ್ಕೆ ಸಂಬಂಧಿಸಿದ ಬಹಳಷ್ಟು ಪಠ್ಯಗಳು ಮುದ್ರಣ ಕಾಣದೇ ಕೇವಲ ಹಸ್ತಪ್ರತಿಗಳಲ್ಲಿ ಮಾತ್ರ ಉಳಿದುಕೊಂಡಿದ್ದವು, ಆಕರಗಳು ಅಮೂಲ್ಯ ಆಗಿದ್ದರೂ ಅವುಗಳ ಅಧ್ಯಯನ ಮತ್ತು ಪ್ರಕಟಣೆ ಸಾಧ್ಯ ಆಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆದಿಲ್‌ಶಾಹಿ ಆಡಳಿತದ ಅವಧಿಯಲ್ಲಿ ರಚಿತವಾದ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬಂತು. ಆದಿಲ್‌ಶಾಹಿ ಆಡಳಿತಕ್ಕೆ ಐತಿಹಾಸಿಕ ಮಹತ್ವದ ಗ್ರಂಥಗಳಲ್ಲದೇ ಈ ಅವಧಿಯ ಎರಡು ಸಂಪುಟಗಳಲ್ಲಿ ಸನದು ಮತ್ತು ಫರ್ಮಾನುಗಳಿವೆ. ಈ ಯೋಜನೆಗೆ ಆಸರೆಯಾಗಿ ಒದಗಿ ಬಂದದ್ದು ವಿಜಾಪುರದ ಬಿಎಲ್‌ಡಿಇ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಹಾಗೂ ಅದಕ್ಕೆ ಹಣಕಾಸಿನ ನೆರವು ನೀಡಿದ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಸಂಸ್ಕೃತಿ ಇಲಾಖೆ 75 ಲಕ್ಷ ರೂಪಾಯಿಗಳನ್ನು ನೀಡಿದರೆ ಹಳಕಟ್ಟಿ ಸಂಶೋಧನ ಸಂಸ್ಥೆ 47 ಲಕ್ಷ ರೂಪಾಯಿ ಒದಗಿಸಿದೆ.

ಇದನ್ನೂ ಓದಿ: ಮಲಬಾರಿನಲ್ಲಿ ಟಿಪ್ಪು ಸುಲ್ತಾನ

ನೋಡುವುದಕ್ಕೂ ದುರ್ಲಭವಾಗಿದ್ದ ಅಪರೂಪದ ಹಸ್ತಪ್ರತಿಗಳನ್ನು ಹೈದರಾಬಾದ್‌ನ ಸಾಲಾರ್‌ಜಂಗ್ ಮ್ಯೂಸಿಯಂ ಹಾಗೂ ಹೈದರಾಬಾದ್ ಮತ್ತು ದೆಹಲಿ ಪತ್ರಾಗಾರ ಇಲಾಖೆ, ಗೋಳಗುಮ್ಮಟ ಮ್ಯೂಸಿಯಂ- ಗ್ರಂಥಾಲಯ, ಪುಣೆ ಭಾರತೀಯ ಇತಿಹಾಸ ಸಂಶೋಧನ ಕೇಂದ್ರ, ಲಂಡನ್ ಬ್ರಿಟಿಷ್ ಮ್ಯೂಸಿಯಂ, ಲಂಡನ್ ಇಂಡಿಯಾ ಆಫೀಸ್ ಲೈಬ್ರರಿಗಳಿಂದ ಸಂಗ್ರಹಿಸಲಾಗಿದೆ.

ಅಹ್ಮದ್‌ನಗರದ ನಿಜಾಮ್‌ಷಾಹಿ ಅರಸು ಕುಮಾರರಿಗೆ ಫಾರಸಿ ಕಲಿಸುವ ಉದ್ದೇಶದಿಂದ ಕ್ಯಾಸ್ಪಿಯನ್ ಸಮುದ್ರದ ಮೂಲಕ ಭಾರತಕ್ಕೆ ಆಗಮಿಸಿದ ಫೆರಿಸ್ತಾ ಮೂಲತಃ ಇರಾನ್‌ನ ಆಸ್ತ್ರಾಬಾದ್ ನಗರದವ. ಮುಹಮ್ಮದ್ ಖಾಸೀಮ್ ಹಿಂದುಶಹಾ ಫೆರಿಸ್ತಾ ಅವನ ಪೂರ್ಣ ಹೆಸರು. ಎರಡನೇ ಇಬ್ರಾಹಿಂನ ಅವಧಿಯಲ್ಲಿ ಆಸ್ಥಾನ ಸೇರಿದ ಫೆರಿಸ್ತಾ ದೊರೆಯ ಅಣತಿಯಂತೆ ಭಾರತದ ಇತಿಹಾಸ ರಚನೆಗೆ ಮುಂದಾದ. ಅವನ ಇತಿಹಾಸದ ಬರವಣಿಗೆಯನ್ನು ಒಳಗೊಂಡ ಪುಸ್ತಕವನ್ನು ’ಗುಲ್ಶನ್ ಏ ಇಬ್ರಾಹಿಂ’ ಅಥವಾ ’ತಾರೀಖ್ ಏ ನೌರಸ್’ ಅಥವಾ ’ತಾರೀಖ್ ಏ ಫೆರಿಸ್ತಾ’ ಎಂದು ಕರೆಯಲಾಗುತ್ತದೆ. 13 ಅಧ್ಯಾಯಗಳಲ್ಲಿ ಇರುವ ’ತಾರೀಖ್ ಏ ಫೆರಿಸ್ತಾ’ ಕೃತಿಯಲ್ಲಿ ದೆಹಲಿಯಷ್ಟೇ ಪ್ರಾಮುಖ್ಯತೆಯನ್ನು ದಖನ್ ಮತ್ತಿತರ ಸಣ್ಣಪುಟ್ಟ ಸಂಸ್ಥಾನದ ದೊರೆಗಳಿಗೂ ನೀಡಿದೆ. ಈ ಕಾರಣಕ್ಕಾಗಿ ಇದು ಮಹತ್ವದ ದಾಖಲೆಯಾಗಿದೆ. ಇತಿಹಾಸ ರಚನೆಗಾಗಿ ಫೆರಿಸ್ತಾನು ಅದುವರೆಗೆ ಬಂದಿದ್ದ ಎಲ್ಲ ಕೃತಿಗಳನ್ನು ಅವಲೋಕಿಸಿದ್ದ. ಅಷ್ಟೇ ಅಲ್ಲ ತಾನು ಮಾಹಿತಿ ಪಡೆದ 29 ಕೃತಿಗಳ ಪಟ್ಟಿ ನೀಡಿದ್ದಾನೆ.

ಮಧ್ಯಕಾಲೀನ ಭಾರತದ ಮಹತ್ವದ ಐತಿಹಾಸಿಕ ಆಕರ ಎಂದು ಪರಿಗಣಿಸಲಾಗುವ ಫೆರಿಸ್ತಾನ ಕೃತಿಯು ನಾಲ್ಕು ಬಾರಿ ಇಂಗ್ಲಿಷಿಗೆ ಅನುವಾದಗೊಂಡಿದೆ. ಜೋನಾಥನ್ ಸ್ಕಾಟ್ 1794ರಲ್ಲಿ ಎರಡು ಸಂಪುಟಗಳಲ್ಲಿ “ಫೆರಿಸ್ತಾ’ಸ್ ಹಿಸ್ಟರಿ ಆಫ್ ಡೆಕ್ಕನ್” ಪ್ರಕಟಿಸಿದ. ಅದಾದ ನಂತರ 1803ರಲ್ಲಿ ಅಲೆಕ್ಸಾಂಡರ್ ಡೌ ಮೂರು ಸಂಪುಟಗಳಲ್ಲಿ ’ಹಿಸ್ಟರಿ ಆಫ್ ಹಿಂದೂಸ್ತಾನ್’ ಪ್ರಕಟಿಸಿದ. ಬ್ರಿಟಿಷ್ ಅನುವಾದಕರಾದ ಎಚ್.ಎಂ.ಎಲಿಯಟ್ ಮತ್ತು ಜಾನ್ ಡಾಸನ್ ಅವರು 1867ರಲ್ಲಿ ಪ್ರಕಟಿಸಿದ ’ಹಿಸ್ಟರಿ ಆಫ್ ಇಂಡಿಯಾ ಆಸ್ ಟೋಲ್ಡ್ ಬೈ ಇಟ್ಸ್ ಹಿಸ್ಟಾರಿಯನ್ಸ್’ ಎಂಬ ಎಂಟು ಸಂಪುಟಗಳಲ್ಲಿ ಫೆರಿಸ್ತಾನ ಪುಸ್ತಕದ ಆಯ್ದ ಭಾಗ ಅನುವಾದಗೊಂಡಿತು. ಈ ಮೂರು ಅನುವಾದಗಳೂ ಫೆರಿಸ್ತಾನ ಬೃಹತ್ ಗ್ರಂಥದ ಆಯ್ದ ಭಾಗಗಳಲ್ಲಿದ್ದವು.

ಅದಕ್ಕೂ ಮುನ್ನ (1829) ಮದ್ರಾಸಿನಲ್ಲಿ ಬ್ರಿಟಿಷ್ ಸೈನಿಕ ಅಕಾರಿ ಜಾನ್ ಬ್ರಿಗ್ಸ್ ಫೆರಿಸ್ತಾನ ಪುಸ್ತಕದ ಐತಿಹಾಸಿಕ ಮಹತ್ವ ಅರಿತಿದ್ದ. ಜಾನ್ ಬ್ರಿಗ್ಸ್ ಫೆರಿಸ್ತಾನ ಕೃತಿ ಅನುವಾದ ಮಾಡುವುದಕ್ಕಾಗಿಯೇ ಫಾರಸಿ ಕಲಿತಿದ್ದ. ’ಹಿಸ್ಟರಿ ಆಫ್ ದ ರೈಸ್ ಆಫ್ ಮಹೋಮದನ್ ಪವರ್ ಇನ್ ಇಂಡಿಯಾ’ ನಾಲ್ಕು ಸಂಪುಟಗಳಲ್ಲಿದೆ. ಲಭ್ಯವಿರುವ ನಾಲ್ಕು ಇಂಗ್ಲಿಷ್ ಅನುವಾದಗಳ ಪೈಕಿ ಬ್ರಿಗ್ಸ್‌ನ ಅನುವಾದವೇ ಹೆಚ್ಚು ಜನಪ್ರಿಯ. ಫೆರಿಸ್ತಾನ ಇತಿಹಾಸದ ಬಹುತೇಕ ಅನುವಾದ ಇರುವ ಈ ಕೃತಿಯು ಮೂಲಕ್ಕೆ ಹೆಚ್ಚು ನಿಷ್ಟವಾಗಿದೆ. ಆದರೆ, ಬ್ರಿಗ್ಸ್ ಕೂಡ ಇಡಿಯಾಗಿ ಫೆರಿಸ್ತಾನ ಪುಸ್ತಕ ಅನುವಾದ ಮಾಡಿರಲಿಲ್ಲ. ಭಾರತೀಯ ಸಂತರನ್ನು ಕುರಿತ ವಿವರಗಳಿರುವ 12ನೇ ಅಧ್ಯಾಯವನ್ನು ಬ್ರಿಗ್ಸ್ ಸಂಪೂರ್ಣವಾಗಿ ಕೈ ಬಿಟ್ಟಿದ್ದ. ಅಲ್ಲದೇ ತನಗೆ ಐತಿಹಾಸಿಕ ಮಹತ್ವದ್ದು ಎನಿಸುವ ಅಂಶಗಳಿಗೆ ಆದ್ಯತೆ ನೀಡಿ ಸಾಮಾನ್ಯರಿಗೆ ಸೇರಿದ ಕೆಲವು ಸಾಲುಗಳನ್ನು ಅನುವಾದಕ್ಕೆ ಪರಿಗಣಿಸಿರಲಿಲ್ಲ.

ಫೆರಿಸ್ತಾನ ಇತಿಹಾಸವು ಇಡಿಯಾಗಿ ತರ್ಜುಮೆಗೊಂಡಿರುವುದು ಉರ್ದು ಭಾಷೆಯಲ್ಲಿ ಮಾತ್ರ. 1964ರಲ್ಲಿ ದೇವಬಂದ್‌ನಿಂದ ಪ್ರಕಟವಾಗಿರುವ ಉರ್ದು ಅನುವಾದ ಮಾತ್ರ ಪದಶಃ ಭಾಷಾಂತರ. ಸದ್ಯ ಇದೇ ಆವೃತ್ತಿಯನ್ನು ಇಟ್ಟುಕೊಂಡು ಕನ್ನಡಕ್ಕೆ ಅನುವಾದಿಸಲಾಗಿದೆ. ಕನ್ನಡದಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗುತ್ತಿರುವ ಫೆರಿಸ್ತಾನ ಅನುವಾದವನ್ನು ಹದಿನಾಲ್ಕು ಜನ ಅನುವಾದಕರು ಮಾಡಿದ್ದಾರೆ. ಕನ್ನಡದ ಇತಿಹಾಸದ ಗ್ರಂಥಗಳ ಉಲ್ಲೇಖಗಳಲ್ಲಿ ದೊರಕುತ್ತಿದ್ದ ಫೆರಿಸ್ತಾನ ಪುಸ್ತಕವು ಮೊದಲ ಬಾರಿಗೆ ಕನ್ನಡಕ್ಕೆ ಇಡಿಯಾಗಿ ಬಂದಿದೆ.

ಎಂ.ಎಂ.ಕಲ್ಬುರ್ಗಿ

ದಖನಿ ಉರ್ದುವಿನಲ್ಲಿ ಇರುವ ’ಇಬ್ರಾಹಿಂನಾಮಾ’ ಕೃತಿಯು ಕಾವ್ಯದ ಮೂಲಕ ಇತಿಹಾಸವನ್ನು ಕಟ್ಟುವ ವಿಶಿಷ್ಟ ಪ್ರಯತ್ನ. ಇರುವ ದ್ವಿಪದಿ ರೂಪದ ಪದ್ಯಗಳು ತಮ್ಮ ಕಾವ್ಯಾತ್ಮಕ ಕಾರಣದಿಂದ ಗಮನ ಸೆಳೆಯುತ್ತವೆ. ಋತುಗಳ ವರ್ಣನೆ ಸೊಗಸಾಗಿದೆ. ದಖನಿಯಿಂದ ಉರ್ದುವಿಗೆ ಭಾಷಾಂತರಿಸಿಕೊಂಡು ನಂತರ ಕನ್ನಡೀಕರಣಗೊಂಡಿದೆ. ಹೈದರಾಬಾದ್‌ನ ಸಾಲಾರ್ ಜಂಗ್ ಅವರ ಆಸ್ಥಾನದಲ್ಲಿ ಇದ್ದ ಮೀರ್ ಅಲಿ ಅಹ್ಮದ್ ರಚಿಸಿದ ’ಗುಲ್‌ದಸ್ತ್ ಏ ಬಿಜಾಪುರ’ ಹಾಗೂ ಫಿತುರ್‌ಖಾನ್ ಲಾರಿಯ ’ಹಫ್ತ್ ಖುರ್ಷಿ’ ಹಾಗೂ ಮೊದಲನೇ ಅಲಿ ಆದಿಲ್‌ಶಹಾನಿಗೆ ಆಪ್ತನಾಗಿದ್ದ ರಫಿಯುದ್ದೀನ್ ತಜಕಿರುಲ್ ಉಲ್ ಮುಲ್ ಹಾಗೂ ಖಾಜಿ ನುರುಲ್ಲಾ ರಚಿಸಿದ ’ತಾರೀಖ್ ಏ ಅಲಿ ಆದಿಲ್‌ಶಹಾ’ ಮತ್ತು ಮುಲ್ಲಾ ನುಸ್ರತಿ ರಚಿಸಿದ ’ಅಲಿನಾಮ’ ಕೂಡ ಈ ಸಂಪುಟಗಳಲ್ಲಿ ಸೇರಿವೆ.

ಯೋಜನೆಯ ನಿರ್ದೇಶಕರಾಗಿರುವ ಕೃಷ್ಣ ಕೋಲಾರ ಕುಲಕರ್ಣಿ ಅವರು ಈ ಯೋಜನೆಯ ರೂಪುಗೊಂಡ ಬಗೆಯನ್ನು ವಿವರಿಸಿದ್ದು ಹೀಗೆ- ದಾಸ ಸಾಹಿತ್ಯದ ಪ್ರಮುಖರಲ್ಲಿ ಒಬ್ಬರಾದ ಕಾಖಂಡಕಿ ಮಹಿಪತಿದಾಸರ ಬಗ್ಗೆ ಪಿಎಚ್.ಡಿ. ಅಧ್ಯಯನ ನಡೆಸುತ್ತಿರುವ ಸಂದರ್ಭದಲ್ಲಿ ಮಹಿಪತಿದಾಸರು ಆದಿಲ್‌ಷಾಹಿ ಅರಸರಲ್ಲಿ ಅಧಿಕಾರಿಯಾಗಿದ್ದರು ಎಂಬ ಅಂಶ ಗೊತ್ತಾಯಿತು. ಅಧ್ಯಯನಕ್ಕೆ ಅಗತ್ಯವಾಗಿರುವ ಆಕರಗಳು ಲಭ್ಯವಿಲ್ಲದ್ದರಿಂದ ತುಂಬಾ ಕಷ್ಟಪಡಬೇಕಾಯಿತು. ಪಠ್ಯಪುಸ್ತಕಗಳಲ್ಲಿ ಇದ್ದ 2-3 ಪ್ಯಾರಾದಷ್ಟು ಮಾಹಿತಿ ಮಾತ್ರ ಸುಲಭಕ್ಕೆ ಲಭ್ಯವಿತ್ತು. ಬೇರೆಬೇರೆ ಕಡೆಗಳಲ್ಲಿಯೂ ಅದೇ ಮಾಹಿತಿ ಬೇರೆ ಪದಗಳಲ್ಲಿ ಸಿಗುತ್ತಿತ್ತು. ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದ ಅರಸು ಮನೆತನಕ್ಕೆ ಸಂಬಂಧಿಸಿದ ಮಾಹಿತಿ ವ್ಯಾಪಕವಾಗಿ ದೊರೆಯದೇ ಇರುವುದು ದೊಡ್ಡ ಕೊರತೆ ಅನಿಸಿತು. ಹಾಗಂತ ಆಕರ ಮಾಹಿತಿಯನ್ನು ಒಳಗೊಂಡ ಪುಸ್ತಕಗಳು ಇರಲಿಲ್ಲವೆಂದೇನಲ್ಲ. ಇದ್ದ ಸಾಮಗ್ರಿಯೆಲ್ಲ ಮರಾಠಿ-ಅರಬಿ-ಉರ್ದು-ಫಾರಸಿ ಭಾಷೆಯ ಗ್ರಂಥಗಳಲ್ಲಿ ಹಂಚಿಹೋಗಿದ್ದವು. ನಮ್ಮ ಭಾಗದ ಚರಿತ್ರೆಯನ್ನು ಕಟ್ಟಿಕೊಳ್ಳಲು ಬೇಕಾದ ಮಾಹಿತಿ ಕನ್ನಡದಲ್ಲಿ ದೊರೆಯದ ಬಗ್ಗೆ ಪಿಚ್ಚೆನ್ನಿಸಿತು. ಅದು ವಿಜಾಪುರ ಮತ್ತು ಆದಿಲ್‌ಶಾಹಿ ಅರಸು ಮನೆತನದ ಬಗೆಗೆ ನನ್ನ ಕಾಳಜಿ ಬೆಳೆಸಿಕೊಳ್ಳುವುದಕ್ಕೆ ಕಾರಣವಾಯಿತು.

ಇದನ್ನೂ ಓದಿ: ಕೃತಿ ವಿಮರ್ಶೆ: ಆರ್‌ಎಸ್‌ಎಸ್‌ ಜಾತಿ ರಾಜಕೀಯ ಕನಸುಗಳ ಸಾಕಾರಕ್ಕೆ ಟಿಪ್ಪು ಹೆಸರಲ್ಲಿ ನಕಲಿ ಇತಿಹಾಸ ಸೃಷ್ಟಿ!

ಹೀಗೆ ರೂಪುಗೊಂಡ ಅನುವಾದ ಯೋಜನೆಯು 19 ಸಂಪುಟಗಳ ಪ್ರಕಟಣೆ ಮತ್ತು ಬಿಡುಗಡೆಯೊಂದಿಗೆ ಒಂದು ಹಂತ ತಲುಪಿದೆ. ಈ ಪ್ರಕಟವಾಗಿರುವ ಸಂಖ್ಯೆಯ ನಾಲ್ಕಾರು ಪಟ್ಟು ಹೆಚ್ಚಿನ ಆಕರಗಳು ಲಭ್ಯವಿವೆ. ಅವನ್ನೂ ಕನ್ನಡೀಕರಿಸುವ ಕೆಲಸ ಆಗಬೇಕಿದೆ. ಈ 19 ಸಂಪುಟಗಳನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗೆ ತರ್ಜುಮೆ ಮಾಡುವ ಯೋಜನೆಯನ್ನೂ ಹಳಕಟ್ಟಿ ಸಂಸ್ಥೆ ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಎರಡು ಸಂಪುಟಗಳನ್ನು ಪ್ರಕಟಿಸಲಾಗಿದೆ. ಇಂತಹ ಯೋಜನೆ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಇಂಗ್ಲಿಷೂ ಸೇರಿದಂತೆ ಯಾವ ಭಾಷೆಯಲ್ಲಿಯೂ ಆಗಿಲ್ಲ ಎನ್ನುವುದೇ ವಿಶೇಷ.

ಅನುವಾದಗೊಂಡ ಪುಸ್ತಕಗಳು

1) ಮೀರ್ ಅಹ್ಮದ್ ಅಲಿಖಾನ್- ಗುಲ್‌ದಸ್ತಾ ಏ ಬಿಜಾಪುರ

2) ಅಬುಲ್ ಹಸನ್ ಖಾದ್ರಿ- ಷಾಹಿಪತ್ ಹಿ ಖುದಾ

3) ಸೈಯದ್ ಅಲಿ ಬಿಲ್‌ಗ್ರಾಮಿ- ತಾರೀಖ್ ಏ ದಖನ್

4) ಸೈಯದ್ ಮೊಹಿಯುದ್ದೀನ್ ಪೀರ್‌ಜಾದ್- ಅಹವಾಲೆ ಸಲಾತಿನ್ ಬಿಜಾಪುರ

5) ಫಿತುರ್‌ಖಾನ್ ವಲ್ಲದ್ ಅಸದ್‌ಖಾನ್ ಲಾರಿ- ಹಫ್ತ್ ಖುರ್ಷಿ

6) ಎರಡನೇ ಇಬ್ರಾಹಿಂ ಆದಿಲ್ ಶಹಾ- ಕಿತಾಬ್ ಏ ನೌರಸ್

7) ಇಬ್ರಾಹಿಂ ಜುಬೇರಿ- ರೌಜತ್ ಅಲ್ ಔಲಿಯಾ ಏ ಬಿಜಾಪುರ

8) ಇಬ್ರಾಹಿಂ ಜುಬೇರಿ- ಬಸಾತಿನ್ ಅಲ್ ಸಲಾತಿನ್

9) ಅಬ್ದುಲ್ ಇಬ್ರಾಹಿಂನಾಮಾ ಅಸದ್‌ಬೇಗ್- ವಕಾಯತ್ ಎ ಅಸದ್‌ಬೇಗ್

10) ಮುಲ್ಲಾ ನುಸ್ರತಿ – ಅಲಿನಾಮಾ

11) ಬಸಿರುದ್ದೀನ್ ಅಹ್ಮದ್-ವಕಾಯತ್ ಎ ಮಾಮಲ್‌ತಕ್ ಬಿಜಾಪುರ

12) ಉಮರ್ ಹಾಸಿಂ ಘಜ್ನಿ- ಫುತುಹತ್ ಏ ಆದಿಲ್‌ಷಾಹಿ

13) ಶೇಕ್ ಜೈನುದ್ದೀನ್ ಅಲ್ ಮಾಬಾದಿ- ಫುತುಹುತ್ ಉಲ್ ಮುಜಾಹಿದ್ದೀನ್

14) ಮೀರ್ ರಫಿಯುದ್ದೀನ ಶಿರಾಜಿ- ತಜಕ್‌ದಿರ್ ಉಲ್ ಮುಲ್ಕ್

15) ಫೆರಿಸ್ತಾ- ಗುಲ್ಶನ್ ಏ ಇಬ್ರಾಹಿಂ

16) ಮುಲ್ಲಾ ಜುಹುರ್ ಬಿನ್ ಜುಹುರಿ-ಮುಹಮ್ಮದ್ ನಾಮಾ

17) ಅಬ್ದುಲ್ ದೆಹಲ್ವಿ- ಇಬ್ರಾಹಿಂನಾಮಾ

18) ಖಾಜಿ ನೂರುಲ್ಲಾ- ತಾರೀಖ್ ಏ ಅಲಿ ಆದಿಲ್‌ಶಹಾ

ದೇವು ಪತ್ತಾರ

ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...