Homeಅಂಕಣಗಳುಯುಎಸ್‌ಎ ಸುಪ್ರೀಂಕೋರ್ಟ್ ತೀರ್ಪು; ಜನಾಂಗೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಅವಕಾಶಗಳಿಗೆ ಹೊಡೆತ

ಯುಎಸ್‌ಎ ಸುಪ್ರೀಂಕೋರ್ಟ್ ತೀರ್ಪು; ಜನಾಂಗೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಅವಕಾಶಗಳಿಗೆ ಹೊಡೆತ

- Advertisement -
- Advertisement -

ನ್ಯಾಯಾಲಯಗಳು ಸಂವಿಧಾನದ ಮೂಲ ಆಶಯವನ್ನು ಕಡೆಗಣಿಸಿ, ಮಾತುಗಳನ್ನು ಕೇವಲ ಯಾಂತ್ರಿಕವಾಗಿ ಅಥವಾ ಪೂರ್ವಗ್ರಹದಿಂದ ವ್ಯಾಖ್ಯಾನಿಸಿದರೆ ದಮನಿತರಿಗೆ ಅನ್ಯಾಯವಾಗುತ್ತದೆ ಎಂಬುದನ್ನು ನಾವು ಭಾರತದಲ್ಲಿ ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಈಗ ಯುಎಸ್‌ಎಯಲ್ಲಿ ಜನಾಂಗೀಯ ತಾರತಮ್ಯ ನಿವಾರಿಸುವ ಉದ್ದೇಶ ಹೊಂದಿರುವ, ಐತಿಹಾಸಿಕವಾದ ಹದಿನಾಲ್ಕನೇ ತಿದ್ದುಪಡಿಯನ್ನೇ ಆಧಾರವಾಗಿಸಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪೊಂದು ಹಲವು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಶೈಕ್ಷಣಿಕ ಅವಕಾಶಗಳ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರಲಿದೆ.

*******

ಯುಎಸ್‌ಎಯ ಸುಪ್ರೀಂ ಕೋರ್ಟ್ ಜೂನ್ 29, 2023ರಂದು 6-2 ಮತಗಳಲ್ಲಿ, ಬಹುಮತದ ತೀರ್ಪೊಂದನ್ನು ನೀಡಿ, ಇನ್ನು ಮುಂದೆ ಕಾಲೇಜು ಪ್ರವೇಶದಲ್ಲಿ ಸಕಾರಾತ್ಮಕ ಕ್ರಿಯಾ ನೀತಿಯನ್ನು (affirmative action policy) ಅನುಸರಿಸುವಾಗ, ಜನಾಂಗವನ್ನು ಒಂದು ಅಂಶವನ್ನಾಗಿ ಪರಿಗಣಿಸಲಾಗದು ಎಂದು ಹೇಳಿದೆ. ’ಸ್ಟೂಡೆಂಟ್ಸ್ ಫಾರ್ ಫೇರ್ ಅಡ್ಮಿಷನ್ಸ್ ವರ್ಸಸ್ ಹಾರ್ವರ್ಡ್ ವಿಶ್ವವಿದ್ಯಾಲಯ’ದ ಪ್ರಕರಣದಲ್ಲಿ ಈ ತೀರ್ಪು ನೀಡಿರುವ ಯುಎಸ್‌ಎಯ ಸುಪ್ರೀಂ ಕೋರ್ಟ್, ಕಾಲೇಜು ಪ್ರವೇಶದಲ್ಲಿ ಜನಾಂಗವನ್ನು ಒಂದು ಅಂಶವನ್ನಾಗಿ ಪರಿಗಣಿಸುವುದು- ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.

ಹದಿನಾಲ್ಕನೇ ತಿದ್ದುಪಡಿಯನ್ನು ದೇಶದಲ್ಲಿ ಗುಲಾಮಿ ಪದ್ಧತಿಯನ್ನು ನಿಷೇಧಿಸಿದ ಸ್ವಲ್ಪ ಸಮಯದಲ್ಲಿಯೇ ತರಲಾಗಿದ್ದು, ಅದು ಜನಾಂಗದ ಪರಿಗಣನೆಯಿಲ್ಲದೆ ಎಲ್ಲರಿಗೂ ಸಮಾನ ರಕ್ಷಣೆಯ ಖಾತರಿ ನೀಡಿತ್ತು. ಹದಿನಾಲ್ಕನೇ ತಿದ್ದುಪಡಿಯು ಹಲವಾರು ಪ್ರಗತಿಪರ ತೀರ್ಪುಗಳಿಗೆ ತಳಹದಿಯಾಗಿತ್ತು. ಇವುಗಳಲ್ಲಿ ಮುಖ್ಯವಾದವು ’ಬ್ರೌನ್ ವರ್ಸಸ್ ಶಿಕ್ಷಣ ಮಂಡಳಿ’ (ಜನಾಂಗೀಯ ಪ್ರತ್ಯೇಕೀಕರಣದ ನಿಷೇಧ), ’ಒಬರ್‌ಗೆಫೆಲ್ ವರ್ಸಸ್ ಹೋಜ್ಸ್’ (ಒಂದೇ ಲಿಂಗಿಗಳ ವಿವಾಹದ ಕಾನೂನುಬದ್ಧತೆ) ಸೇರಿವೆ. ಆದರೆ, ಸುಪ್ರೀಂ ಕೋರ್ಟಿನ ಈಗಿನ ಅನ್ವಯ ಅಥವಾ ವ್ಯಾಖ್ಯಾನವು ಯುಎಸ್‌ಎಯಲ್ಲಿ ಹಲವು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳಿಗೆ ಭಾರೀ ಹೊಡೆತವಾಗಿದೆ.

ಯುಎಸ್‌ಎಯ ಸಕಾರಾತ್ಮಕ ಕ್ರಿಯಾ ನೀತಿ ಎಂದರೇನು?

ಯುಎಸ್‌ಎಯ ವಿಶ್ವವಿದ್ಯಾಲಯಗಳ ಪ್ರವೇಶಾತಿಯು ಹಲವಾರು ಅಂಶಗಳ ಮೇಲೆ ಆಧಾರಿತವಾಗಿದೆ. ಶಾಲೆಯಲ್ಲಿ ಪಡೆಯುವ ಅಂಕವು ಕೇವಲ ಒಂದು ಮಾನದಂಡ ಮಾತ್ರವೇ ಆಗಿದೆ. ಸಮುದಾಯ ಸೇವೆ, ಶಾಲೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ, ಜೀವನದ ಅನುಭವ ಮತ್ತು ಹಿನ್ನೆಲೆ ಇತ್ಯಾದಿಗಳನ್ನೂ ಪ್ರವೇಶಾತಿಯ ಸಮಯದಲ್ಲಿ ಪರಿಗಣಿಸಲಾಗುತ್ತದೆ.

ಹಲವಾರು ವಿಶ್ವವಿದ್ಯಾಲಯಗಳು- ಅವು ಖಾಸಗಿಯಾಗಿದ್ದರೂ ಕೂಡಾ ಸರಕಾರದ ಅನುದಾನವನ್ನು ಪಡೆಯುತ್ತವೆ ಮತ್ತು ಸರಕಾರವು ಇಂಥ ವಿದ್ಯಾಲಯಗಳ ವಿದ್ಯಾರ್ಥಿ ಸಮುದಾಯದಲ್ಲಿ ಜನಾಂಗೀಯ ವೈವಿಧ್ಯ ಇರಬೇಕೆಂದು ಬಯಸುತ್ತದೆ. ಇದು 1960ರ ದಶಕದ ನಾಗರಿಕ ಹಕ್ಕುಗಳ ಚಳವಳಿಯ ನಂತರದಿಂದ ಆರಂಭವಾಯಿತು. ವಿಶ್ವವಿದ್ಯಾಲಯಗಳು ಈ ನೀತಿಗಳನ್ನು ಅನುಸರಿಸಲೇಬೇಕೆಂದು ಇಲ್ಲವಾದರೂ, ಅವುಗಳನ್ನು ಅನುಸರಿಸುವಂತೆ ಪ್ರೋತ್ಸಾಹಿಸಲಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಈ ಸಕಾರಾತ್ಮಕ ಕ್ರಮಗಳಲ್ಲಿ ಏರುಪೇರು ಇರಬಹುದು.

ಸಕಾರಾತ್ಮಕ ಕ್ರಮಗಳು ಮತ್ತು ಮೀಸಲಾತಿಯ ನಡುವಿನ ವ್ಯತ್ಯಾಸವನ್ನು ಮೊದಲಾಗಿ ಮನಗಾಣುವುದು ಅಗತ್ಯ. ಯುಎಸ್‌ಎಯಲ್ಲಿ ಸಕಾರಾತ್ಮಕ ಕ್ರಮ ಎಂದರೆ, ಅಲ್ಪಸಂಖ್ಯಾತರ ಪ್ರವೇಶಾತಿ ವಿಷಯದಲ್ಲಿ ಅವರ ಪರವಾಗಿ ಸ್ವಲ್ಪ ಮಟ್ಟಿನ ತಾರತಮ್ಯ ಅಥವಾ ಒಲವು ತೋರುವುದು. ಈ ತಾರತಮ್ಯವು- ಲಿಂಗ ಮತ್ತು ಲಿಂಗತ್ವ, ಅಂಗವಿಕಲತೆ ಮತ್ತು ರಾಷ್ಟ್ರೀಯತೆಯ ಮೂಲ ಸೇರಿದಂತೆ ಹಲವು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ಅದು ಒಂದು ವಿದ್ಯಾಲಯದ ಕ್ಯಾಂಪಸ್‌ಅನ್ನು ಪ್ರಾತಿನಿಧಿಕಗೊಳಿಸಬಹುದು ಅಥವಾ ಇಲ್ಲದೆಯೂ ಇರಬಹುದು. ಮೀಸಲಾತಿಗಳು ಸಾಮಾನ್ಯವಾಗಿ ಕಟ್ಟುನಿಟ್ಟಿನ ವಿಭಾಗಗಳನ್ನು ಹೊಂದಿರುತ್ತವೆ. ಅವು- ನೀತಿಯು ಆದೇಶಿಸುವ ಅಂಶಗಳನ್ನು ಮಾತ್ರವೇ ಹೊಂದಿರುವ ಸಂಯೋಜನೆಗಳಾಗಿರುತ್ತವೆ. ಮೀಸಲಾತಿಯು- ಕ್ಯಾಂಪಸ್‌ಗಳನ್ನು ವಿಶಾಲವಾದ ಸಮಾಜಕ್ಕೆ ಸಂಬಂಧಿಸಿ ಪ್ರಾತಿನಿಧಿಕವಾಗಿರುವಂತೆ ಮಾಡುವ ಉದ್ದೇಶ ಹೊಂದಿದೆ.

ಯುಎಸ್‌ಎಯಲ್ಲಿ ಜನಾಂಗಾಧರಿತ ಮೀಸಲಾತಿಯನ್ನು ’ರೀಜೆಂಟ್ಸ್ ಆಫ್ ದಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ವರ್ಸಸ್ ಬಕ್ಕೆ’ (1978) ಪ್ರಕರಣದಲ್ಲಿ ಅಸಾಂವಿಧಾನಿಕ ಎಂದು ತೀರ್ಮಾನಿಸಲಾಗಿದೆ. ಭಾರತದಲ್ಲಿ ಅನುಷ್ಟಾನಗೊಳಿಸಲಾಗಿರುವ ಮಾದರಿಯಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅನುಷ್ಟಾನಗೊಳಿಸಲು ಯುಎಸ್‌ಎಯ ಸಂವಿಧಾನ ಅವಕಾಶ ನೀಡುವುದಿಲ್ಲ. ಕಾಲೇಜುಗಳು ಸಕಾರಾತ್ಮಕ ಕ್ರಮಗಳನ್ನು ಅನುಸರಿಸಿದಲ್ಲಿ, ಪ್ರವೇಶಾತಿಯಲ್ಲಿ ಜನಾಂಗವನ್ನು ಪರಿಗಣಿಸುವ ಅವಕಾಶ ನೀಡಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿತ್ತು. ಈ ತನಕ ಧನಾತ್ಮಕ ಕ್ರಮದ ಅನುಷ್ಟಾನದ ಅಭ್ಯಾಸ ಹೇಗಿತ್ತೆಂದರೆ, ಕ್ಯಾಂಪಸ್ಸಿನಲ್ಲಿ ಕಡಿಮೆ ಪ್ರಾತಿನಿಧ್ಯ ಇರುವ ಸಮುದಾಯಗಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ಆದ್ಯತೆ ನೀಡುವುದಾಗಿತ್ತು.

“ಸ್ಟೂಡೆಂಟ್ಸ್ ಫಾರ್ ಫೇರ್ ಎಡ್ಮಿಷನ್ಸ್” ಎಂಬುದು ಒಂದು ಕಾನೂನು ಕಾರ್ಯಕರ್ತರ ಗುಂಪಾಗಿದ್ದು, ಸಕಾರಾತ್ಮಕ ಕ್ರಿಯಾ ನೀತಿಯನ್ನು ಕೊನೆಗೊಳಿಸಲು ಬದ್ಧವಾಗಿದೆ. ಈ ಪ್ರಕರಣದಲ್ಲಿ ಅದು ವಾದಿಸಿದ್ದೇನೆಂದರೆ- ಬಲವಾದ ಶೈಕ್ಷಣಿಕ ಅರ್ಹತೆ ಇದ್ದರೂ, ಸಕಾರಾತ್ಮಕ ಕ್ರಿಯೆಯ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಏಷ್ಯನ್ ಮೂಲದ ಅರ್ಜಿದಾರ ವಿದ್ಯಾರ್ಥಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು.

ಇದನ್ನೂ ಓದಿ: ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಟ್ರಂಪ್

ಏಷ್ಯನ್ ಅಮೆರಿಕನ್ನರಲ್ಲಿ ದಾಖಲಾತಿ ದರವು ಹೆಚ್ಚಿದ್ದು, ರಾಷ್ಟ್ರೀಯ ಸರಾಸರಿಯ ಬಹುತೇಕ 150 ಶೇಕಡಾ ಇದೆ. ಏಷ್ಯನ್ ಮೂಲದ ವಿದ್ಯಾರ್ಥಿಗಳು ಯುಎಸ್‌ಎಯ ಕಾಲೇಜುಗಳಲ್ಲಿ ತೀರಾ ಹೆಚ್ಚಿನ ಪ್ರಾತಿನಿಧ್ಯ ಹೊಂದಿರುವುದು ಐತಿಹಾಸಿಕ ಕಾರಣಗಳಿಗಾಗಿ. ಎರಡನೇ ಮಹಾಯುದ್ಧಕ್ಕೆ ಮೊದಲು ಯುಎಸ್‌ಎಯ ಸಮಾಜವು ಭಾರತೀಯರೂ ಸೇರಿದಂತೆ ಏಷ್ಯನ್ನರ ವಿರುದ್ಧ ಜನಾಂಗೀಯ ದ್ವೇಷವನ್ನು ಹೊಂದಿತ್ತು. ಮೊದಲ ವಲಸೆ ವಿರೋಧಿ ಕಾಯಿದೆಗಳು ಮುಖ್ಯವಾಗಿ ಏಷ್ಯನ್ನರನ್ನು ಗುರಿಯಾಗಿಸಿದ್ದವು. ಆಗ ಏಷ್ಯನ್ ಸಮುದಾಯಗಳ ಜನರು ಕಡುಬಡತನ ಅನುಭವಿಸುತ್ತಿದ್ದು, ಅವರನ್ನು ಗುಂಪುಥಳಿತ ಮಾಡಿ ಕೊಲೆ ಮಾಡುವುದರಿಂದ ಹಿಡಿದು ಹಿಂಸಾತ್ಮಕವಾದ ದಾಳಿಗಳಿಗೆ ಗುರಿಯಾಗಿಸಲಾಗುತ್ತಿತ್ತು. ಎರಡನೇ ಮಹಾಯುದ್ಧದ ನಂತರ ಇದು ಬದಲಾಯಿತು. ಆ ನಂತರ ಯುಎಸ್‌ಎಯು- ದೇಶದ ಒಳಗೆ ಮತ್ತು ಹೊರಗೆ ಜನಾಂಗೀಯವಾದದ ಆರೋಪಕ್ಕೆ ಗುರಿಯಾಯಿತು. ವಲಸೆ ಕಾನೂನುಗಳು ಬದಲಾಗಿ, ತೀರಾ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಏಷ್ಯನ್ ಸಮುದಾಯಗಳ ಜನರು ಯುಎಸ್‌ಎಗೆ ವಲಸೆ ಬರಲು ಅವಕಾಶ ನೀಡಲಾಯಿತು.

ಈ ನೀತಿ ನಿರೂಪಣೆಯ ಬದಲಾವಣೆಯ ನಂತರದಲ್ಲಿ ಏಷ್ಯನ್ ಮೂಲದ ಜನರು ಶಿಕ್ಷಿತರು, ಯಶಸ್ವಿ, ಕಾನೂನು ಪಾಲಿಸುವ ನಾಗರಿಕರು ಎಂದು ವಾದಿಸಿ ಕಪ್ಪು ನಾಗರಿಕ ಹಕ್ಕುಗಳ ಚಳವಳಿಯ ಮೇಲೆ ಜನರು ಮುಗಿಬೀಳಲು ಆರಂಭಿಸಿದರು. ಅವರು ಏಷ್ಯನ್ನರನ್ನು ಯುಎಸ್‌ಎಗೆ ವಲಸೆ ಬಂದು “ಅಮೆರಿಕನ್ ಕನಸನ್ನು” ಸಾಧಿಸುವಲ್ಲಿ ಯಶಸ್ವಿಯಾದ ’ಮಾದರಿ ಅಲ್ಪಸಂಖ್ಯಾತ’ರು ಎಂದು ಕರೆಯಲಾರಂಭಿಸಿದರು. ಏಷ್ಯನ್ನರು ಇನ್ನೂ ಕೂಡಾ ವೈಯಕ್ತಿಕ ಮಟ್ಟದಲ್ಲಿ ಜನಾಂಗೀಯವಾದವನ್ನು ಅನುಭವಿಸಿದರೂ, ಅನೇಕ ಏಷ್ಯನ್ನರನ್ನು ಹೊರಗಿಡಲಾಗಿದ್ದರೂ- ಏಷ್ಯನ್ ಕುಟುಂಬಗಳ ಜನರು- ಮುಖ್ಯವಾಗಿ ತೀರಾ ಸುಶಿಕ್ಷಿತ ವಲಸಿಗರ ಮಕ್ಕಳು- ಈ ಧನಾತ್ಮಕ ಸಿದ್ಧಚಿತ್ರದ (ಸ್ಟೀರಿಯೋಟೈಪ್) ಲಾಭಪಡೆದರು, ಮತ್ತದು ಅವರಿಗೆ ಕಾಲೇಜು ಪ್ರವೇಶಾತಿಯಲ್ಲಿ ಹೆಚ್ಚಿನ ಅನುಕೂಲ ಮಾಡಿಕೊಟ್ಟಿತು.

ಪರಿಣಾಮವಾಗಿ, ಅವರು ಪ್ರತಿಷ್ಟಿತ ಶೈಕ್ಷಣಿಕ ಅವಕಾಶಗಳಿಗೆ ತಮ್ಮ ಜನಸಂಖ್ಯೆಗೆ ಹೋಲಿಸಿದಾಗ ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶ ಪಡೆದರು. ಸಕಾರಾತ್ಮಕ ಕ್ರಿಯಾ ನೀತಿಯಲ್ಲಿ, ಕ್ಯಾಂಪಸ್‌ಗಳು ಸಾಮಾನ್ಯ ಜನಸಂಖ್ಯೆಯನ್ನು (ಎಲ್ಲಾ ಸಮುದಾಯಗಳನ್ನು) ಪ್ರತಿಫಲಿಸುವಂತಿರಬೇಕು ಎಂದು ಬಯಸುತ್ತದೆ. ಏಷ್ಯನ್ ಅಮೆರಿಕನ್ನರು ಈಗ ಯುಎಸ್‌ಎಯಲ್ಲಿ ಹೆಚ್ಚು ಉನ್ನತ ಶಿಕ್ಷಣ ಹೊಂದಿರುವ ಜನಸಮುದಾಯಗಳಾಗಿದ್ದು, ಈ ನೀತಿಯು ಈಗ ಕೊಂಚಮಟ್ಟಿಗೆ ಅವರ ವಿರುದ್ಧವಾಗಿ ಕೆಲಸಮಾಡಲು ಆರಂಭಿಸಿದೆ.

ಕಾಲೇಜು ಶಿಕ್ಷಣದಲ್ಲಿ ಕಪ್ಪು ಅಮೆರಿಕನ್ನರು ಎದುರಿಸುತ್ತಿರುವ ಜನಾಂಗೀಯವಾದವನ್ನು ಅಲ್ಲಗಳೆಯಲು ಏಷ್ಯನ್ ಅಮೆರಿಕನ್ನರನ್ನು ಬಳಸಲಾಗುತ್ತಿದೆ. ಒಂದು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯವಾಗಿ, ಸುಲಭವಾಗಿ ಅವರನ್ನು “ಒಳ್ಳೆಯ” ಅಲ್ಪಸಂಖ್ಯಾತರು ಎಂದು ಬೆಟ್ಟು ಮಾಡಿ ತೋರಿಸಲು ಸಾಧ್ಯವಿದೆ. ಹೆಚ್ಚುತ್ತಿರುವ ಶೈಕ್ಷಣಿಕ ವೆಚ್ಚದ ಕಾರಣದಿಂದ ಯುಎಸ್‌ಎಯ ಕಾಲೇಜುಗಳಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚಿನ ಸಮಯದಿಂದ ಎಲ್ಲಾ ಜನಾಂಗೀಯ ಗುಂಪುಗಳಲ್ಲೂ ದಾಖಲಾತಿಯ ಪ್ರಮಾಣ ನಿಧಾನವಾಗಿ ಕುಸಿಯುತ್ತಿದ್ದು, ಸ್ತ್ರೀಯರು ಪುರುಷರಿಗಿಂತ ಹೆಚ್ಚಿನ ದಾಖಲಾತಿ ದರ ಹೊಂದಿದ್ದಾರೆ.

ಈ ತೀರ್ಪನ್ನು ಖಂಡಿಸಿರುವ ಅಧ್ಯಕ್ಷ ಜೋ ಬೈಡನ್, ದೇಶದಲ್ಲಿ ಜನಾಂಗೀಯ ತಾರತಮ್ಯ ಇನ್ನೂ ಮುಂದುವರಿದಿದ್ದು, ಈ ತೀರ್ಪು ಒಂದು ಹೆಜ್ಜೆ ಹಿಂದಕ್ಕೆ ಇಟ್ಟಂತಾಗಿದೆ ಎಂದು ಹೇಳಿದ್ದಾರೆ. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ತೀರ್ಪನ್ನು ಸ್ವಾಗತಿಸಿದ್ದಾರೆ. ಈ ತೀರ್ಪು ಯುಎಸ್‌ಎಯ ಒಳಗೆ ಜನಾಂಗೀಯ ಅಲ್ಪಸಂಖ್ಯಾತರ ಶೈಕ್ಷಣಿಕ ಆಕಾಂಕ್ಷೆಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ. ಅಮೆರಿಕನ್ ನ್ಯಾಷನಲ್ ಸೆಂಟರ್ ಫಾರ್ ಎಜುಕೇಷನ್ ಸ್ಟಾಟಿಸ್ಟಿಕ್ಸ್ ಪ್ರಕಾರ- ಕಪ್ಪು ಮತ್ತು ಬಿಳಿಯ ವಿದ್ಯಾರ್ಥಿಗಳ ನಡುವೆ ಕಾಲೇಜು ಪ್ರವೇಶಾತಿಯಲ್ಲಿ ಇನ್ನೂ ಸಮಾನತೆ ಇದ್ದರೂ, ಮೂಲ ಅಮೆರಿಕನ್ನರು, ಮಿಶ್ರ ಅಥವಾ ಬಹುಜನಾಂಗೀಯ ಅಮೆರಿಕನ್ನರು ಮತ್ತು ಲ್ಯಾಟಿನ್ ಅಮೆರಿಕನ್ ಮೂಲದ ವಿದ್ಯಾರ್ಥಿಗಳು ಇನ್ನೂ ಕೂಡಾ ಈ ವಿಷಯದಲ್ಲಿ ಹಿಂದೆ ಉಳಿದಿದ್ದಾರೆ. ಕಪ್ಪು ವಿದ್ಯಾರ್ಥಿಗಳು ಒಂದೇ ರೀತಿಯ ದಾಖಲಾತಿ ದರ ಹೊಂದಿದ್ದರೂ, ಜನಾಂಗೀಯ ತಾರತಮ್ಯ, ಅತಿಯಾದ ಶೈಕ್ಷಣಿಕ ವೆಚ್ಚ ಮತ್ತು ಇತರ ಕಾರಣಗಳಿಂದಾಗಿ ಅವರ ನಡುವೆ ಶಿಕ್ಷಣ ಪೂರ್ಣಗೊಳಿಸುವವರ ಪ್ರಮಾಣ ಕಡಿಮೆಯಿದೆ. ಸುಪ್ರೀಂಕೋರ್ಟಿನ ಈಗಿನ ನಿರ್ಧಾರವು ಈ ಅಲ್ಪ ಸಂಖ್ಯಾತರ ಮೇಲೆ ಇನ್ನಷ್ಟು ಆಳವಾದ ವ್ಯತಿರಿಕ್ತ ಪರಿಣಾಮವನ್ನು ಬೀರಲಿದೆ.

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...