Homeಮುಖಪುಟನಮ್ಮ ಉಡುಗೆ ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕು: ಬಿಜೆಪಿ ನಾಯಕನಿಗೆ ಮೋಯಿತ್ರಾ ತಿರುಗೇಟು

ನಮ್ಮ ಉಡುಗೆ ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕು: ಬಿಜೆಪಿ ನಾಯಕನಿಗೆ ಮೋಯಿತ್ರಾ ತಿರುಗೇಟು

- Advertisement -
- Advertisement -

”ಅರೆಬರೆ ಬಟ್ಟೆ ಧರಿಸುವ ಹುಡುಗಿಯರು ರಾಮಾಯಣದಲ್ಲಿ ಬರುವ ಶೂರ್ಪನಖಿ ರಾಕ್ಷಸಿಯ ಹಾಗೆ ಕಾಣುತ್ತಾರೆ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯ ವರ್ಗೀಯ ನಾಲಿಗೆ ಹರಿಬಿಟ್ಟಿದ್ದಾರೆ. ಅವರ ವಿರುದ್ಧ ಇದೀಗ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೋಯಿತ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ನಮ್ಮ ಉಡುಗೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ’ ಎಂದು ಮೋಯಿತ್ರಾ ಟೀಕಿಸಿದ್ದಾರೆ.

ಮೊಯಿತ್ರಾ ಅವರು ತಮ್ಮ ಹೇಳಿಕೆಯ ವಿಡಿಯೊವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದು, ”ಶುಕ್ರವಾರ ಬೆಳಿಗ್ಗೆ ಬಿಜೆಪಿ ನಾಯಕರು ಮತ್ತು ಭಕ್ತರಿಗೆ ಒಂದು ಸಂದೇಶವಿದೆ. ನಾವು ಬೆಂಗಾಲಿ ಮಹಿಳೆಯರು, ನಮಗೆ ಏನು ಬೇಕೊ ಅದನ್ನು ಹಾಕಿಕೊಳ್ಳುತ್ತೇವೆ, ನಮಗೆ ಏನು ಬೇಕೊ ಅದನ್ನು ತಿನ್ನುತ್ತೇವೆ ಮತ್ತು ನಮಗೆ ಯಾರನ್ನು ಪೂಜಿಸಬೇಕೆನಿಸುತ್ತದೋ ಅವರನ್ನು ಪೂಜಿಸುತ್ತೇವೆ. ನಮ್ಮ ಬಟ್ಟೆಗಳು ಕೊಳಕಲ್ಲ, ನಿಮ್ಮ ಆಲೋಚನೆ ಕೊಳಕಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಟಿಎಂಸಿ ಖಂಡನೆ:

”ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಭಾರತವು ನಿರಂತರವಾಗಿ ಹಿಂದಕ್ಕೆ ಸಾಗುತ್ತಿದೆ. ಯುವತಿಯರು ತಮ್ಮಿಷ್ಟದ ಉಡುಗೆ ತೊಡುತ್ತಾರೆಂಬ ಕಾರಣಕ್ಕೆ ಬಿಜೆಪಿ ಪಕ್ಷದ ಮುಖಂಡರು ನಮ್ಮ ದೇಶದ ಮಹಿಳೆಯರನ್ನು ರಾಕ್ಷಸಿಗೆ ಹೋಲಿಕೆ ಮಾಡುತ್ತಿದ್ದಾರೆ” ಎಂದು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಆರೋಪಿಸಿದೆ.

”ಬಿಜೆಪಿ ನಾಯಕರೊಬ್ಬರು ಬಹಿರಂಗವಾಗಿ ನೀಡಿರುವ ಈ ಕೀಳುಮಟ್ಟದ ಹೇಳಿಕೆಯು ಆ ಪಕ್ಷದ ಕೆಟ್ಟ ಮನಸ್ಥಿತಿಯನ್ನು ತೋರ್ಪಡಿಸುತ್ತದೆ” ಎಂದು ಟಿಎಂಸಿ ರಾಜ್ಯಸಭಾ ಸದಸ್ಯ ಜವಾಹರ್‌ ಸರ್ಕಾರ್‌ ಟ್ವೀಟ್‌ ಮಾಡಿದ್ದಾರೆ.

”ಉಡುಪುಗಳಲ್ಲಿ ಒಳ್ಳೆಯವು, ಕೆಟ್ಟವು ಎಂಬುದು ಇದೆಯೇ. ಅದನ್ನು ವ್ಯಾಖ್ಯಾನಿಸುವವರು ಯಾರು? ವಿಜಯ ವರ್ಗೀಯರ ಹೇಳಿಕೆ ನಾಚಿಕೆಗೇಡಿನದ್ದು” ಎಂದು ಟಿಎಂಸಿ ರಾಜ್ಯಸಭಾ ಸದಸ್ಯೆ ಸುಶ್ಮಿತಾ ದೇವ್‌ ಟೀಕಿಸಿದ್ದಾರೆ.

ಕಾಂಗ್ರೆಸ್‌ ಕಿಡಿ:

”ವಿಜಯ ವರ್ಗೀಯ ಅವರು ದೇಶದ ಮಹಿಳೆಯರನ್ನು ಅವಮಾನಿಸಿದ್ದಾರೆ. ಇದು ಬಿಜೆಪಿಯ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ” ಎಂದು ಕಾಂಗ್ರೆಸ್‌ ಕಿಡಿಕಾರಿದೆ.

”ಬಿಜೆಪಿಯಲ್ಲಿ ಮಹಿಳೆಯರನ್ನು ಗೌರವಿಸುವ ಪರಿಪಾಠವಿಲ್ಲ. ನಾವೇನು ತಾಲಿಬಾನಿಗಳ ಆಡಳಿತದಲ್ಲಿದ್ದೇವೆಯೇ? ಏನನ್ನು ಧರಿಸಬೇಕು, ಯಾವುದನ್ನು ತಿನ್ನಬೇಕು, ಯಾರನ್ನು ಭೇಟಿಯಾಗಬೇಕು ಎಂಬುದನ್ನು ಸರ್ಕಾರವು ಮಹಿಳೆಯರಿಗೆ ಹೇಳಬೇಕೆ” ಎಂದು ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜ ಪ್ರಶ್ನಿಸಿದ್ದಾರೆ.

”ಕೆಟ್ಟ ಅಭಿರುಚಿಯ ಈ ಹೇಳಿಕೆ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರೇಕೆ ಪ್ರತಿಕ್ರಿಯೆ ನೀಡಿಲ್ಲ. ಅವರು ಇನ್ನಾದರೂ ಮೌನ ಮುರಿಯುವರೇ. ಪ್ರತಿದಿನವೂ ಮಹಿಳೆಯರನ್ನು ನಿಂದಿಸುವುದು ಬಿಜೆಪಿಗೆ ಹವ್ಯಾಸವಾಗಿಬಿಟ್ಟಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಬಿಜೆಪಿಯಲ್ಲಿ ಇರುವವರಿಗೆ ಶೂರ್ಪಣಕಿ ಮೇಲೆ ಬಹಳ ಪ್ರೀತಿ ಇದ್ದಂತೆ ಕಾಣುತ್ತಿದೆ. ವಿಜಯ ವರ್ಗೀಯ ಅವರ ಹೇಳಿಕೆ ಇದಕ್ಕೆ ಸಾಕ್ಷಿಯಂತಿದೆ. ಬಿಜೆಪಿಯವರ ನಡತೆ ಎಂತಹದ್ದು ಎಂಬುದಕ್ಕೆ ಇದೊಂದು ನಿದರ್ಶನ. ಹೀಗಾಗಿಯೇ ಆ ಪಕ್ಷದ ಬಹುಪಾಲು ಜನಪ್ರತಿನಿಧಿಗಳು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅತ್ಯಾಚಾರಿಗಳಿಗೆಲ್ಲಾ ಬಿಜೆಪಿ ಜೊತೆ ರಾಜಕೀಯ ಸಂಬಂಧ ಇರುವುದೇಕೆ? ಕೈಲಾಶ್‌ ಅವರಂತಹ ವ್ಯಕ್ತಿಗಳು ಮಹಿಳೆಯರನ್ನು ಅವಮಾನಿಸುವ ಧಾಟಿಯ ಹೇಳಿಕೆಗಳನ್ನು ನೀಡುತ್ತಿದ್ದರೂ ಕೂಡ ಆ ಪಕ್ಷದಲ್ಲಿರುವ ಮಹಿಳಾ ನಾಯಕಿಯರು ಅದನ್ನು ಖಂಡಿಸುವ ಧೈರ್ಯ ತೋರದಿರುವುದನ್ನು ಕಂಡು ದಿಗ್ಭ್ರಾಂತಳಾಗಿದ್ದೇನೆ” ಎಂದು ಕಾಂಗ್ರೆಸ್‌ ವಕ್ತಾರೆ ಸುಪ್ರಿಯಾ ಶ್ರೀನಾಥೆ ಹೇಳಿದ್ದಾರೆ.

ಮಹಿಳೆಯರು ಯಾವ ಬಗೆಯ ಉಡುಪು ಧರಿಸಬೇಕು ಎಂಬುದನ್ನು ಬಿಜೆಪಿ ನಿರ್ಧರಿಸುತ್ತದೆಯೇ? ಮಹಿಳೆಯರನ್ನು ನಿಂದಿಸುವ ಹಕ್ಕನ್ನು ನಿಮಗೆ ನೀಡಿದ್ದು ಯಾರು? ಎಂದು ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ನಟ್ಟಾ ಡಿಸೋಜ ಅವರು ಪ್ರಶ್ನೆ ಮಾಡಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ್ದ ಕೈಲಾಶ್‌ ವಿಜಯವರ್ಗೀಯ ಅವರು, ”ರಾತ್ರಿ ವೇಳೆ ನಾನು ಹೊರಗೆ ಹೋಗುವಾಗ ಅನೇಕ ಯುವಕ–ಯುವತಿಯರು ಕುಡಿದ ಅಮಲಿನಲ್ಲಿ ತೇಲಾಡುತ್ತಿರುತ್ತಾರೆ. ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಅವರನ್ನು ನಿಲ್ಲಿಸಿ ಕೆನ್ನೆಗೆ ಬಾರಿಸಬೇಕೆಂದು ಎನ್ನಿಸುತ್ತದೆ. ಮಹಿಳೆಯರು ಮತ್ತು ಯುವತಿಯರನ್ನು ನಾವು ದೇವತೆಗಳೆಂದು ಕರೆಯುತ್ತೇವೆ. ಯುವತಿಯರು ಅರೆಬರೆ ಬಟ್ಟೆಗಳನ್ನು ಧರಿಸಿ ಓಡಾಡುವ ಅವರು ದೇವತೆಯ ಹಾಗೆ ಕಾಣುವುದಿಲ್ಲ. ರಾಕ್ಷಸಿ ’ಶೂರ್ಪನಖಿ’ ಹಾಗೆ ಕಾಣುತ್ತಾರೆ ಎಂದು ಹೇಳಿಕೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...