ರೈತರ ಪ್ರತಿಭಟನೆಗೆ ಬಂದ ಬೆಂಬಲವನ್ನು ವಿಮರ್ಶಿಸಿ ಮತ್ತು ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಮಾಡಿದ ಟ್ವೀಟ್‌ಗಳ ಸುತ್ತ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಮಂಗಳವಾರ ತೀಕ್ಷ್ಣವಾದ ಮಾತುಗಳ ಮೂಲಕ ಪರಸ್ಪರ ದಾಳಿ ನಡೆಸಿದ್ದಾರೆ.
ಅಲಿಗಢ್ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ಶರ್ಜೀಲ್ ಉಸ್ಮಾನ್ ವಿಚಾರಣೆ ಮಾಡುವುದನ್ನು ಬಿಟ್ಟು ಇಬ್ಬರು ಭಾರತರತ್ನ ಪ್ರಶಸ್ತಿ ಪುರಸ್ಕೃತರ ವಿರುದ್ಧ ಆಡಳಿತಾರೂಢ ಶಿವಸೇನೆ ಹೆಚ್ಚು ಕಾಳಜಿ ವಹಿಸುತ್ತಿದೆ ಎಂದು ಫಡ್ನವೀಸ್ ಟೀಕಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ಗೃಹಸಚಿವ ದೇಶಮುಖ್, “ನಾವು ಲತಾ ಮಂಗೇಶ್ಕರ್ ಅಥವಾ ಸಚಿನ್ ತೆಂಡೂಲ್ಕರ್ ವಿರುದ್ಧ ವಿಚಾರಣೆ ನಡೆಸುತ್ತಿಲ್ಲ, ಆದರೆ ಬಿಜೆಪಿ ಐಟಿ ಸೆಲ್ ವಿರುದ್ಧ ವಿಚಾರಣೆ ಮಾಡುತ್ತಿದ್ದೇವೆ” ಎಂದಿದ್ದಾರೆ,
ಇತ್ತೀಚಿನ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ಭಾಷಣ ಮಾಡುವಾಗ “ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ’ ಭಾಷಣವನ್ನು ಶರ್ಜಿಲ್ ಉಸ್ಮಾನ್ ಮಾಡಿದ್ದಾರೆ ಎಂದು ಆರೋಪಿಸಿರುವ ಫಡ್ನವೀಸ್, ಮಹಾರಾಷ್ಟ್ರ ಸರ್ಕಾರಕ್ಕೆ ಉಸ್ಮಾನ್ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯವಿಲ್ಲ ಎಂದು ಟೀಕಿಸಿದ್ದಾರೆ.
“ಉಸ್ಮಾನ್ ಹಿಂದೂಗಳನ್ನು ಅವಮಾನಿಸುತ್ತಾರೆ ಮತ್ತು ನೀವು ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಎಲ್ಗಾರ್ ಪರಿಷತ್ ಸದಸ್ಯರು ಸಹ ಅವರ ಹೇಳಿಕೆಗಳನ್ನು ಬೆಂಬಲಿಸುತ್ತಾರೆ, ಆದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ನಿಮಗೆ ಯಾವುದೇ ಧೈರ್ಯವಿಲ್ಲ. ಆದರೆ ನೀವು ಭಾರತರತ್ನ ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಸಕ್ತಿ ತೋರುತ್ತೀರಿ’ ಎಂದು ಫಡ್ನವೀಸ್ ಅಸೆಂಬ್ಲಿಯಲ್ಲಿ ಹೇಳಿದರು.
“ಒಂದು ವೇಳೆ ನಾನು ಅವರನ್ನು ಆ ರೀತಿ ಟ್ವೀಟ್ ಮಾಡಲು ಕೇಳಿದೆ ಎಂದು ಭಾವಿಸೋಣ … ಹಾಗಾದರೆ ಇಲ್ಲಿ ನನ್ನ ಮೇಲಿನ ಆರೋಪ ಏನು? ಭಾರತವನ್ನು ಬೆಂಬಲಿಸಿ ಟ್ವೀಟ್ ಮಾಡಲು ನನ್ನ ಪಕ್ಷವು ಅವರನ್ನು ಕೇಳಿದ್ದರೆ, ನಾವು ಅದರ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ಫಡ್ನವೀಸ್ ಘೋಷಿಸಿದ್ದರು, “ನಾವು ನಿಮ್ಮ ವಿಚಾರಣೆಗೆ ಹೆದರುವುದಿಲ್ಲ’ ಎಂದು ಗೃಹ ಸಚಿವ ದೇಶಮುಖ್‌ಗೆ ಸವಾಲು ಹಾಕಿದರು.
ಈ ದಾಳಿಗೆ ಗೃಹ ಸಚಿವರು ಉತ್ತರಿಸಿದ್ದು, “ನಾವು ಬಿಜೆಪಿ ಐಟಿ ಸೆಲ್ ವಿರುದ್ಧ ವಿಚಾರಿಸುತ್ತಿದ್ದೇವೆ. ನಾವು ಲತಾ ಮಂಗೇಶ್ಕರ್ ಅಥವಾ ಸಚಿನ್ ತೆಂಡೂಲ್ಕರ್ ವಿರುದ್ಧ ವಿಚಾರಿಸುತ್ತಿಲ್ಲ … ಆದರೆ ಬಿಜೆಪಿ ಐಟಿ ಸೆಲ್ ವಿರುದ್ಧ ನಮ್ಮ ವಿಚಾರಣೆ ಮುಂದುವರೆದಿದೆ’ ಎಂದು ತಿಳಿಸಿದ್ದಾರೆ.
“ನೀವು ರಾಷ್ಟ್ರವನ್ನು ಬೆಂಬಲಿಸುವ ಜನರ ವಿರುದ್ಧ ವಿಚಾರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ. ಇದು ನಿಮ್ಮ ದೇಶಪ್ರೇಮವನ್ನು ತೋರಿಸುತ್ತದೆ’ ಎಂದು ಫಡ್ನವೀಸ್ ವ್ಯಂಗ್ಯ ಮಾಡಿದರು.
ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, “ಕಾಂಗ್ರೆಸ್ ಸಚಿನ್ ಅಥವಾ ರೇಖಾ ಅವರನ್ನು ರಾಜ್ಯಸಭೆಗೆ ಕಳುಹಿಸಿದೆ. ಆದರೆ ನಾವು ಅವರನ್ನು ಎಂದಿಗೂ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ಇಂದು ದೇವೇಂದ್ರ ಫಡ್ನವೀಸ್ ಅವರು ಬಿಜೆಪಿ ಸೆಲೆಬ್ರಿಟಿಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ’ ಎಂದು ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಕಳೆದ ತಿಂಗಳ ಆರಂಭದಲ್ಲಿ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ಸೇರಿದಂತೆ ಹಲವಾರು ಬಾಲಿವುಡ್ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳು ಪಾಪ್ ತಾರೆ ರಿಹಾನ್ನಾ ಅವರ ರೈತರ ಪರ ಟ್ವೀಟ್ ವಿರುದ್ಧ ಟ್ವೀಟ್ ಮಾಡಿ ಸರ್ಕಾರವನ್ನು ಬೆಂಬಲಿಸಿದ್ದರು.
ಈ ಹಲವಾರು ಟ್ವೀಟ್‌ಗಳು ಒಂದಕ್ಕೊಂದು ಹೋಲುತ್ತಿದ್ದವು, ಇದು, ಅವುಗಳು ಕೇಂದ್ರದಿಂದ ರಚಿಸಲ್ಪಟ್ಟವು ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಿತ್ತು ಮತ್ತು ಟ್ವೀಟ್ ಮಾಡಿದವರಲ್ಲಿ ಅನೇಕರು ಸರ್ಕಾರದ ‘ನಿರ್ದೇಶನದ’ ಮೇರೆಗೆ ಟ್ವೀಟ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಕೂಡ, ಕೇಂದ್ರವು ತೆಂಡೂಲ್ಕರ್ ಮತ್ತು ಮಂಗೇಶ್ಕರ್ ಅವರಂತಹವರನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕೆ ಮಾಡಿದ್ದರು.
ಗೃಹ ಸಚಿವ ದೇಶಮುಖ್ ಅವರು ಈ ಟ್ವೀಟ್‌ಗಳ ಹಿಂದಿನ ರಾಜಕೀಯದ ಕುರಿತು ತನಿಖೆಗೆ ಆದೇಶಿಸಿದ್ದರು. ‘ಬಿಜೆಪಿಯ ವಿರುದ್ಧ ಮಾತನಾಡಿದರೆ ರಾಜಕಾರಣಿಗಳಿಗೆ ಇ.ಡಿ ಅಥವಾ ಸಿಬಿಐ ತನಿಖೆಯ ಬೆದರಿಕೆ ಹಾಕುತ್ತಾರೆ… ಸೆಲೆಬ್ರಿಟಿಗಳ ಟ್ವೀಟ್‌ಗಳಿಗೆ ಸಂಬಂಧಿಸಿದಂತೆ, ನಾವು ಖಂಡಿತವಾಗಿಯೂ ಆ ಬಗ್ಗೆ ತನಿಖೆ ನಡೆಸುತ್ತೇವೆ” ಎಂದು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದರು.
ಇದನ್ನೂ ಓದಿ: ಅತ್ಯಾಚಾರ ಆರೋಪಿಗೆ ಸಂತ್ರಸ್ತೆಯನ್ನು ಮದುವೆಯಾಗಲು ಸಲಹೆ: ಸುಪ್ರೀಂ ನಡೆಗೆ ತೀವ್ರ ಖಂಡನೆ