Homeಮುಖಪುಟಯುವ ಕಾರ್ಮಿಕರಿಗೆ ಭಾರಿ ಹೊಡೆತ ನೀಡಿದ ಕೊರೋನಾ ಸಾಂಕ್ರಾಮಿಕ: ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಿದ ಮಹಿಳಾ...

ಯುವ ಕಾರ್ಮಿಕರಿಗೆ ಭಾರಿ ಹೊಡೆತ ನೀಡಿದ ಕೊರೋನಾ ಸಾಂಕ್ರಾಮಿಕ: ಮತ್ತಷ್ಟು ದಯನೀಯ ಸ್ಥಿತಿಗೆ ತಲುಪಿದ ಮಹಿಳಾ ಕಾರ್ಮಿಕರ ಸ್ಥಿತಿ

- Advertisement -
- Advertisement -

ಭಾರತದಲ್ಲಿ ಕೊರೋನಾ ಸಾಂಕ್ರಾಮಿಕ ತೀವ್ರತೆ ಇಳಿಯುತ್ತಿಲ್ಲ. 2021 ರ ಏಪ್ರಿಲ್ ಅವಧಿಯಲ್ಲಿ ತೀವ್ರವಾಗಿ ಏರಲು ಪ್ರಾರಂಭವಾದ ಕೊರೋನಾ ಎರಡನೇ ಅಲೆಯು ಹಲವು ಲಾಕ್‌ಡೌನ್‌ಗಳ ನಂತರವೂ ನಿಯಂತ್ರಣಕ್ಕೆ ಬಂದಿಲ್ಲ. ದೇಶದ ಅನೇಕ ರಾಜ್ಯಗಳು ಜೂನ್ ತಿಂಗಳ ಅವಧಿಯ ಮೊದಲಾರ್ಧದಲ್ಲೂ ಲಾಕ್ ಡೌನ್ ಮೊರೆ ಹೋಗಿವೆ. ದೇಶದ ಅತಿದೊಡ್ಡ ಉತ್ಪಾದನಾ ವಲಯಗಳಾದ ಬೃಹತ್ ಕೈಗಾರಿಕೆ, ರಫ್ತು, ಮಾರುಕಟ್ಟೆಗಳು ನಿಂತು ಹೋಗಿರುವುದು ದೇಶದ ಜಿಡಿಪಿಯ ಜೊತೆಗೆ ಜನರ ಬದುಕನ್ನು ಅತಂತ್ರಗೊಳಿಸಿವೆ. ದೇಶದಲ್ಲಿ ನಿರುದ್ಯೋಗ ತಾಂಡವಾಡುತ್ತಿದೆ.

ದೇಶದ ಅತಿ ದೊಡ್ಡ ಉತ್ಪಾದನಾ ವಲಯಗಳಾದ ದೆಹಲಿ ಮತ್ತು ಮುಂಬೈನಲ್ಲಿ ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ಗಳು ತೀವ್ರವಾದ ಉದ್ಯೋಗ ನಷ್ಟಕ್ಕೆ ಕಾರಣವಾಗಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶ ಇತಿಹಾಸದಲ್ಲೇ ಅತಿ ಹೆಚ್ಚು ನಿರುದ್ಯೋಗ ದರವನ್ನು ಹೊಂದಿದೆ. ಹೆಚ್ಚಿನದಾಗಿ ಉದ್ಯೋಗವನ್ನು ಕಳೆದುಕೊಳ್ಳುತ್ತಿರುವವರು 25 ವರ್ಷ ಒಳಗಿನ, ಕಡಿಮೆ ಅನುಭವವನ್ನು ಹೊಂದಿರುವ ಯುವ ಕಾರ್ಮಿಕರ ವರ್ಗ ಮತ್ತು ಮಹಿಳಾ ಉದ್ಯೋಗಿಗಳು.

ಇಪಿಎಫ್‌ಒ ಪೇ ರೋಲ್ ಅಂಕಿ ಅಂಶಗಳು ತೋರಿಸುವಂತೆ ಸಂಘಟಿತ ಮತ್ತು ಅರೆ ಸಂಘಟಿತ ವಲಯದಲ್ಲಿ ಕಾರ್ಯ ನಿರ್ಹವಹಿಸುವ ಕಾರ್ಮಿಕರ ಸಂಬಳದಲ್ಲಿ ಮತ್ತು ಇಪಿಎಫ್‌ಒ ಮತ್ತು ಇತರ ಸೌಲಭ್ಯಗಳಲ್ಲಿ ತೀವ್ರ ಇಳೆಕೆಯಾಗಿರುವುದು ಕಂಡು ಬಂದಿದೆ. ಇಪಿಎಫ್‌ಒ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಅತ್ಯಂತ ಕಳವಳಕಾರಿಯಾಗಿದ್ದು, ದೇಶದ ಅತ್ಯಂತ ಕ್ರಿಯಾಶೀಲ ಉದ್ಯೋಗಿ ವರ್ಗ ಕಳೆದ 1 ವರ್ಷದ ಅವಧಿಯಲ್ಲಿ ತೀವ್ರವಾದ ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿಹೋಗಿದೆ.

ಮುಖ್ಯವಾಗಿ ಇದುವರೆಗೆ 25 ವರ್ಷ ಕೆಳಗಿನ ಕಾರ್ಮಿಕ ವರ್ಗವು ದೇಶದಲ್ಲಿನ ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

2020-21 ರ ಆರ್ಥಿಕ ವರ್ಷದ ಇಪಿಎಫ್‌ಒ ಅಂಕಿ ಅಂಶಗಳು ಹೇಳುವಂತೆ  18 ವರ್ಷ ,18-21 ವರ್ಷದ ಒಳಗಿನ ಕಾರ್ಮಿಕರ ಸರಾಸರಿ ಸಂಬಳದಲ್ಲಿ ತೀವ್ರ ಕುಸಿತವಾಗಿದೆ. 22-25 ವರ್ಷ ಒಳಗಿನ ಕಾರ್ಮಿಕರ ಸಂಬಳದಲ್ಲೂ ಕುಸಿತ ಕಂಡಿದ್ದು, ಈ ಕಡಿತ ಹಿರಿಯ ಉದ್ಯೋಗಿಗಳ ಸಂಬಳದಲ್ಲಿನ ಕಡಿತಕ್ಕಿಂತ ಅತ್ಯಂತ ಹೆಚ್ಚಾಗಿದೆ. ಈ ವಯೋಮಾನದ ಯುವ ಕಾರ್ಮಿಕರ ಸಂಬಳದಲ್ಲಿ ಸರಿ ಸುಮಾರು 19% ವರೆಗೆ ಈ ಸಂಕ್ರಾಮಿಕದ ಸಂದರ್ಭದಲ್ಲಿ ಸಂಬಳ ಕಡಿತಗೊಂಡಿದೆ. ಇದು ಕೇವಲ ಸಂಘಟಿತ ವಲಯದ ಕಾರ್ಮಿಕರ ಸಂಬಳದಲ್ಲಿನ ಕಡಿತವಷ್ಟೆ. ಆದರೆ ಅಸಂಘಟಿತ ವಲಯದಲ್ಲಿನ ಕಾರ್ಮಿಕರ ಸಂಬಳದ ಕಡಿತ ಉದ್ಯೋಗ ನಷ್ಟ ಸರ್ಕಾರ ಅಥವಾ ಯಾವುದೇ ಸಂಸ್ಥೆಗಲ ಲೆಕ್ಕಕ್ಕೆ ಸಿಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ ಅಸಂಘಟಿತ ವಲಯದ ಕಾರ್ಮಿಕರಲ್ಲಿ 60-75% ಜನರು ಕೊರೋನಾ ಸಾಂಕ್ರಾಮಿಕದ ಒಂದು ವರ್ಷದ ಅವಧಿಯಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

ಆದರೆ ಇದೇ ಅವಧಿಯಲ್ಲಿ 26 ವರ್ಷ ಮೇಲ್ಪಟ್ಟ ಅನುಭವಿ ಉದ್ಯೊಗಿ ವರ್ಗ ಮತ್ತು ಕಾರ್ಮಿಕ ವರ್ಗದ ಸರಾಸರಿ ವೇತನದಲ್ಲಿ ಹೆಚ್ಚಳವಾಗಿದೆ.

ಉದ್ಯೋಗದ ಮೇಲೆ ಸಾಂಕ್ರಾಮಿಕದ ಪರಿಣಾಮ

ಕಳೆದ ಹಣಕಾಸು ವರ್ಷದ ಆರಂಭದ ತಿಂಗಳಲ್ಲಿ ಕೊರೋನಾ ಸಾಂಕ್ರಾಮಿಕ ಮತ್ತು ಇತರ ಕಾರಣಗಳಿಂದ ಭಾರತದ ಆರ್ಥಿಕತೆ ತೀವ್ರವಾಗಿ ಕುಸಿತಗೊಂಡಿತು. ನಂತರದ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಳ್ಳುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಲಾಕ್‌ಡೌನ್ ಕಾರಣದಿಂದ ದೇಶದಲ್ಲಿ ಕೋಟ್ಯಾಂತರ ಉದ್ಯೋಗಗಳು ಕಳೆದ ಮಾರ್ಚ್‌, ಏಪ್ರಿಲ್, ಮೇ ತಿಂಗಳುಗಳಲ್ಲಿ ನಷ್ಟವಾಗಿವೆ. ಆದರೆ ನಂತರದ ತಿಂಗಳುಗಳಲ್ಲಿಯೂ ಯುವ ಕಾರ್ಮಿಕರು ಮತ್ತು ಯುವ ವರ್ಗ ತಮ್ಮ ಕಳೆದುಕೊಂಡ ಹಳೆಯ ಕೆಲಸಗಳನ್ನು ಪಡೆದುಕೊಂಡ ಯಾವ ದಾಖಲೆಯೂ ಸಿಗುತ್ತಿಲ್ಲ.

Centre for Monitoring Indian Economy ಸಂಸ್ಥೆಯ ಅಂಕಿ ಅಂಶಗಳು ಹೇಳುವಂತೆ ಭಾರತದಲ್ಲಿ ಕಳೆದ ಹಣಕಾಸು ವರ್ಷದಲ್ಲಿ 1.22 ಕೋಟಿ ಯುವ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಇದರಲ್ಲಿ ಹೆಚ್ಚಿನ ಉದ್ಯೋಗಗಳು ಗ್ರಾಮೀಣ ಭಾಗದಲ್ಲಿ ನಷ್ಟವಾಗಿದೆ.

ಕೊರೋನಾ ಸಾಂಕ್ರಾಮಿಕವು ಬಹುವಾಗಿ ನೇರವಾಗಿ ಉತ್ಪಾದನೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಜೊತೆಗೆ ಉತ್ಪಾದನೆಗೆ ಸಮಬಂಧಿಸಿದ ಇತರ ಉದ್ಯೋಗಿಗಳನ್ನು ನಿರುದ್ಯೋಗಿಗಳಾಗುವಂತೆ ಮಾಡಿದೆ. ಯುವ ಮತ್ತು ಮಹಿಳಾ ಉದ್ಯೋಗಿಗಳು ಈ ಸಾಂಕ್ರಾಮಿಕ ದ ಹೊಡೆತಕ್ಕೆ ಬಹುವಾಗಿ ತತ್ತರಿಸಿದ್ದಾರೆ ಎಂದು ಜೆಮ್‌ಶೆಡ್‌ ಪುರದ XLRI ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ವಿಭಾಗದ ಪ್ರೊಫೆಸರ್ ಕೆ.ಆರ್. ಶ್ಯಾಮ್‌ಸುಂದರ್  ಹೇಳುತ್ತಾರೆ.

ಪ್ರೊಫೆಸರ್ ಕೆ.ಆರ್‌ ಶ್ಯಾಮ್‌ ಸುಂದರ್ ಅವರು ಹೇಳುವ ಪ್ರಕಾರ “ಆಧುನಿಕ ಸೂಪರ್ ಮಾರ್ಕೆಟ್ ಗಳು, ಸಿನೆಮಾ ಮಾಲ್ ಗಳು, ಗಾರ್ಮೆಂಟ್‌ ಗಳು, ಸಾರಿಗೆ ಸಂಸ್ಥೆಗಳು ಹೆಚ್ಚಾಗಿ ಯುವಕ ಯುವತಿಯರು ಮತ್ತು ಮಹಿಳೆಯರಿಗೆ ಉದ್ಯೋಗವನ್ನು ನೀಡುವ ಉತ್ಪಾದನಾ ವಲಯಗಳಾಗಿವೆ. ಆದರೆ ಕಳೆದ ಅನೇಕ ತಿಂಗಳುಗಳಿಂದ ಈ ವಲಯವು ನೆಲಕಚ್ಚಿದ್ದು  ಮಹಿಳೆಯರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ನಿರುದ್ಯೊಗಕ್ಕೆ ದೂಡಿದೆ. ಬೇಡಿಕೆ ಮತ್ತು ಪೂರೈಕೆ ಎರಡೂ ವಿಭಾಗದಲ್ಲಿ ತೀವ್ರ ಕುಸಿತವಾಗಿರುವುದು ಯುವ ಉದ್ಯೋಗಿಗಳಿಗೆ ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ತಮ್ಮ ಉದ್ಯೋಗಗಳು ಮರಳಿ ಸಿಗುವ ಯಾವ ನಿರೀಕ್ಷೆಗಳನ್ನು ಹುಟ್ಟಿಸುತ್ತಿಲ್ಲ.

ನಿರೀಕ್ಷೆ ಮತ್ತು ವಾಸ್ತವಗಳ ನಡುವಿನ ಅಂತರವನ್ನು ಹೆಚ್ಚಿಸಿದ ಕೊರೋನಾ ಸಾಂಕ್ರಾಮಿಕ

ಸಾಂಕ್ರಾಮಿಕ, ಲಾಕ್‌ಡೌನ್, ಆರ್ಥಿಕ ಹಿಂಜರಿತಗಳಿಂದ ಹೆಚ್ಚಿನ ಹೊಡೆತಗಳು ಹಿರಿಯ ಕಾರ್ಮಿಕ ವರ್ಗಕ್ಕೆ ಬೀಳುತ್ತಿಲ್ಲ. ಕಾರ್ಮಿಕ ಸಂಘಟನೆಗಳು ಪ್ರಬಲವಾಗಿರುವ ಕಾರಣ ಅನೇಕ ಕಡೆ 5-10 ವರ್ಷಗಳ ಅನುಭವವಿರುವ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಳೆದ 1 ವರ್ಷದಲ್ಲಿ ನಿರುದ್ಯೋಗದ  ಸಮಸ್ಯೆಗೆ ಒಳಗಾಗಿಲ್ಲ. ಆದರೇ ಇದೇ 2020-2021 ರ ಆರ್ಥಿಕ ವರ್ಷದಲ್ಲಿ ಯುವ ಉದ್ಯೋಗಿಗಳು ಮತ್ತು ಕೆಲಸದ ನಿರೀಕ್ಷೆಯಲ್ಲಿ ಉತ್ಪಾದನಾ ವಲಯವನ್ನು ಪ್ರವೇಶಿಸಲು ಸಿದ್ಧರಾಗಿದ್ದ ಹೊಸ ಯುವ ಸಮೂಹ ದೊಡ್ಡ ಪ್ರಮಾಣದ ಹತಾಶೆಗೆ ಒಳಗಾಗಿದೆ.

ಮೇ 31 ರಂದು ಅಶೋಕ ವಿಶ್ವವಿದ್ಯಾಲಯದ ಸಂಶೋಧಕರಾದ ಅಂಕುರ್ ಭಾರದ್ವಾಜ್ ಮತ್ತು ಕಾನಿಕ ಮಹಾಜನ್ ಪ್ರಕಟಿಸಿದ ಸಂಶೋಧನಾ ಪ್ರಬಂಧ ಕೂಡ ಇದನ್ನೇ ಹೇಳುತ್ತಿದೆ. ತಮ್ಮ ಜೀವಿತದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗದ ನಿರೀಕ್ಷೆಯಲ್ಲಿದ್ದ, ಸಂಘಟಿತ ವಲಯದ ಉದ್ಯೋಗಕ್ಕೆ  ಪ್ರವೇಶಿಸಲು ಸಿದ್ಧರಾಗಿದ್ದ ಒಂದು ದೊಡ್ಡ 18-25 ವರ್ಷದೊಳಗಿನ ಯುವ ಸಮುದಾಯ ಕೊರೋನಾ ಬಿಕ್ಕಟ್ಟಿನಿಂದ ತಮ್ಮ ಉದ್ಯೋಗದ ನಿರೀಕ್ಷೆಗಳನ್ನು ಮತ್ತು ಜೀವನದ ಕನಸುಗಳನ್ನು ಕಳೆದುಕೊಳ್ಳತೊಡಗಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸಂಘಟಿತ ವಲಯದ ಯಾವ ಸಂಸ್ಥೆಗಳಲ್ಲೂ ಹೆಚ್ಚಿನ ಉದ್ಯೋಗ ನೇಮಕಾತಿ ನಡೆದಿಲ್ಲ. ಬದಲಾಗಿ ಬೇಡಿಕೆ ಪೂರೈಕಗಳು ಕುಂಠಿತವಾದ ಪರಿಣಾಮ ಕೋಟ್ಯಾಂತರ ಜನರನ್ನು ಇರುವ ಉದ್ಯೋಗಗಳಿಂದ ತೆಗೆದು ಹಾಕಲಾಗಿದೆ. ಈಗ ಮತ್ತೊಮ್ಮೆ ಭಾರತದ ಆರ್ಥಿಕತೆ ಚೇತರಿಸಿಕೊಂಡರೆ ಈಗ ಉದ್ಯೋಗವನ್ನು ಕಳೆದುಕೊಂಡ ಒಂದು ದೊಡ್ಡ ವರ್ಗ ಮತ್ತು ಈಗಷ್ಟೇ  ಉದ್ಯೋಗದ ನಿರೀಕ್ಷೆಯಲ್ಲಿರುವ ಮತ್ತೊಂದು ವರ್ಗ ಪರಸ್ಪರ ಸ್ಪರ್ಧಿಸಬೇಕಾಗುತ್ತದೆ. ಈ ಸ್ಪರ್ಧೆಯಲ್ಲಿ ಇನ್ನೂ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸಿರದ ಹೊಸ ವರ್ಗ ಹಿನ್ನಡೆಯನ್ನು ಹೊಂದಬಹುದು. ಇಂದು ಮುಂದಿನ 4-5 ವರ್ಷಗಳವರೆಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚುವಂತೆ ಮಾಡುತ್ತದೆ ಎಂದು ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಅಂಕುರ್ ಬಾರದ್ವಾಜ್ ಹೇಳುತ್ತಾರೆ.

ಸಣ್ಣ ಪುಟ್ಟ ಉದ್ದಿಮೆಗಳಲ್ಲಿ ಉದ್ಯೋಗಕ್ಕೆ ತೊಡಗಿರುವ ಮಹಿಳೆಯರು ಮತ್ತು ಯುವ ಕಾರ್ಮಿಕರು ಸಾಂಕ್ರಾಮಿಕದ ಕಾರಣದಿಂದ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.  ಪಟ್ಟಣ ಮತ್ತು ನಗರದಲ್ಲಿ ಕಾರ್ಯ ನಿರ್ವಹಿಸುವ ಈ ಸಣ್ಣ ಉತ್ಪಾದನಾ ಕೇಂದ್ರಗಳಲ್ಲಿ ಹಲವು ಈಗಲೇ ಮುಚ್ಚಿಹೋಗಿವೆ. ಇನ್ನುಳಿದವು ಅತ್ಯಂತ ಕಡಿಮೆ ಉದ್ಯೋಗಿಗಳ ಮೂಲಕ ಕಾರ್ಯ ನಿರ್ವಹಿಸುತ್ತಿವೆ. ದೇಶ ಎದುರಿಸುತ್ತಿರುವ ಸದ್ಯದ ಈ ಆರೋಗ್ಯ ಬಿಕ್ಕಟ್ಟಿನಿಂದ ಸಣ್ಣ ಪುಟ್ಟ ಉದ್ದಿಮೆಗಳು ಸದ್ಯದಲ್ಲಿ ಉಸಿರಾಡುವಂತಾಗಲು ಸಾಧ್ಯವಿಲ್ಲ. ಇಂದಿನ ಈ ಮಹಾ ಆರ್ಥಿಕ ಸಂಕಟದಿಂದ ಭಾರತ ಸದ್ಯಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿಲ್ಲ. ನೆಲಕಚ್ಚಿದ ಆರ್ಥಿಕತೆಯ ನಡುವೆ ಯುವಕರ ಮಹಿಳೆಯರ ನಿರುದ್ಯೋಗದ ಆರ್ತನಾದ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಜವಾಬ್ಧಾರಿ ಹೊಂದಿದವರಿಗೆ ಕಾಣಿಸುವುದೂ ಇಲ್ಲ, ಕೇಳಿಸುವುದೂ ಇಲ್ಲ.

ಕೃಪೆ: ದಿ ಪ್ರಿಂಟ್


ಇದನ್ನೂ ಓದಿ; 2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...