ರಾಜಸ್ಥಾನ ಸರ್ಕಾರ ಫೋನ್ ಕದ್ದಾಲಿಕೆ ಮಾಡಿದೆಯನ್ನಲಾದ ಆರೋಪದ ಕುರಿತು ಕೇಂದ್ರ ಗೃಹ ಸಚಿವಾಲಯ ರಾಜಸ್ಥಾನ ಮುಖ್ಯಕಾರ್ಯದರ್ಶಿಯವರಿಂದ ವರದಿ ಕೇಳಿರುವುದಕ್ಕೆ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಕೆಡವಲು ಸಂಚುರೂಪಿಸಿದ ಆರೋಪ ಮೇಲೆ ಕೇಂದ್ರ ಸಚಿವರೊಬ್ಬರ ವಿರುದ್ದ ಎಫ್ಐಆರ್ ದಾಖಲಿಸಿದ ಬೆನ್ನ ಹಿಂದೆಯೇ ಕೇಂದ್ರ ಗೃಹ ಸಚಿವಾಲಯ ವರದಿ ಕೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
ಪೊಲೀಸ್ ತನಿಖೆ, ಅಪರಾಧಿಕ ಪ್ರಕ್ರಿಯೆಯನ್ನು ತಡೆಯಲು ಹಾಗೂ ಕುದುರೆ ವ್ಯಾಪಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಕ್ಲೀನ್ ಚಿಟ್ ಕೊಡಿಸಲು ಯತ್ನಗಳು ನಡೆಯುತ್ತಿವೆ ಎಂದು ಸಿಂಘ್ವಿ ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಂಘ್ವಿ, ಕೇಂದ್ರ ಗೃಹ ಸಚಿವಾಲಯ ಫೋನ್ ಕದ್ದಾಲಿಕೆ ಆರೋಪದ ಕುರಿತು ವರದಿ ಕೇಳುತ್ತಿರುವುದು ಸತ್ಯವನ್ನುಮುಚ್ಚಿ ಹಾಕಲು ಹುನ್ನಾರ ನಡೆಸಿದೆ ಎಂದು ಟೀಕಿಸಿದ್ದಾರೆ.
Serious allegations of horse trading &toppling re various #Raj MLAs incl Central Minister. Police inquiry, FIR & Crl process on. To avoid completion of Crl process, #BJP conveniently demands #CBI. #MHA immly steps in. Wl hand over 2CBI to give clean chit & thwart truth!
— Abhishek Singhvi (@DrAMSinghvi) July 19, 2020
ಕಾಂಗ್ರೆಸ್ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಪ್ರಾದೇಶಿಕ ಪಕ್ಷದ ಇಬ್ಬರು ಶಾಸಕರು ಆಡಳಿತ ಸರ್ಕಾರವನ್ನು ಬೆಂಬಲಿಸುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಸಿಎಂ ಗೆಹ್ಲೋಟ್ ರಾಜ್ಯಪಾಲ ಕಾಳ್‌ರಾಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ. ಮುಖ್ಯಮಂತ್ರಿಗಳು ಇದನ್ನು ಸೌಜನ್ಯ ಸಭೆ ಎಂದು ಕರೆದರೂ, ಮುಂದಿನ ವಾರ ವಿಧಾನಸಭೆ ಅಧಿವೇಶನ ಕರೆಯಲು ಇಚ್ಛಿಸಿರುವುದಾಗಿ ಅವರು ರಾಜ್ಯಪಾಲರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಸ್ಪೀಕರ್ ಕಳುಹಿಸಿದ ಅನರ್ಹತೆ ನೋಟಿಸ್ ಅನ್ನು ಸಚಿನ್ ಪೈಲಟ್ ಬಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕಾರಣ ಕೋರ್ಟ್ ನಾಲ್ಕು ದಿನಗಳ ರಕ್ಷಣೆ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದ ನಂತರವೇ ಕಾಂಗ್ರೆಸ್ ಈ ಬಗ್ಗೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ.