Homeಕರ್ನಾಟಕಟ್ವೀಟ್‌ಗಳನ್ನು ನಿಲ್ಲಿಸುವುದಿಲ್ಲ, ಯಾರೇ ಇರಲಿ ಪ್ರಶ್ನೆ ಮಾಡುತ್ತೇವೆ; ಅದು ನಮ್ಮ ಹಕ್ಕು: ಬಿಡುಗಡೆಯ ಬಳಿಕ ಚೇತನ್‌...

ಟ್ವೀಟ್‌ಗಳನ್ನು ನಿಲ್ಲಿಸುವುದಿಲ್ಲ, ಯಾರೇ ಇರಲಿ ಪ್ರಶ್ನೆ ಮಾಡುತ್ತೇವೆ; ಅದು ನಮ್ಮ ಹಕ್ಕು: ಬಿಡುಗಡೆಯ ಬಳಿಕ ಚೇತನ್‌ ಪ್ರತಿಕ್ರಿಯೆ

- Advertisement -
- Advertisement -

“ಟ್ವೀಟ್‌ಗಳನ್ನು ಖಂಡಿತಾ ನಿಲ್ಲಿಸುವುದಿಲ್ಲ, ಸಿಎಂ, ಎಂಪಿ, ಎಂಎಲ್‌ಎ, ಐಪಿಎಸ್‌, ನ್ಯಾಯಾಧೀಶರು, ಮಲ್ಲಿಕಾರ್ಜುನ ಗೌಡ ಪಾಟೀಲ್ ಆಗಿರಬಹುದು ಅಥವಾ ಕೃಷ್ಣ ದೀಕ್ಷಿತ್ ಅವರಾಗಿರಬಹುದು ಯಾರೇ ಇರಲಿ ಪ್ರಶ್ನೆ ಮಾಡುತ್ತೇವೆ; ಅದು ನಮ್ಮ ಹಕ್ಕು, ಹೋರಾಟ ಮುಂದುವರಿಯುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸುವುದೇ ನಮ್ಮ ಗುರಿ” ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸೋಮವಾರ ಜೈಲಿನಿಂದ ಬಿಡುಯಗಡೆಯಾದ ಬಳಿಕ ಹೇಳಿದ್ದಾರೆ.

ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಾರೆಂದು ಆರೋಪಿಸಿ ಶೇಷಾದ್ರಿಪುರಂ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಚೇತನ್‌ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪ್ರಕ್ರಿಯೆಗಳು ಮುಗಿದಿದ್ದು ಸೋಮವಾರ ಸಂಜೆ ಚೇತನ್‌ ಬಿಡುಗಡೆಯಾಗಿದ್ದಾರೆ.

ಚೇತನ್ ಆಗಮನಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು, ಸಾಮಾಜಿಕ ಹೋರಾಟಗಾರರು ಘೋಷಣೆಗಳನ್ನು ಕೂಗಿದರು. ತಮಟೆ ಭಾರಿಸಿ, ಹೂವಿನ ಹೂಮಳೆಗರೆದು ಅವರನ್ನು ಬರಮಾಡಿಕೊಂಡರು. ಬಳಿಕ ಚೇತನ್‌ ಅವರನ್ನು ಹೊತ್ತು ಸಂಭ್ರಮಿಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, “ಹೋರಾಟ ಮುಂದುವರಿಯುತ್ತದೆ. ಪ್ರಜಾಪ್ರಭುತ್ವ ಉಳಿಸುವುದೇ ನಮ್ಮ ಗುರಿ” ಎಂದು ಘೋಷಿಸಿದರು.

“ಅನ್ಯಾಯವಿದ್ದರೆ ನಾವು ಅದನ್ನು ಪ್ರಶ್ನೆ ಮಾಡುತ್ತೇವೆ. ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಕುವೆಂಪು ವಿಚಾರಗಳೇ ಪರಿವರ್ತನೆಗಳು. ಇದೇ ನಮಗೆ ಬೇಕಾಗಿರುವುದು. ಇದೇ ಭವಿಷ್ಯ. ಖಂಡಿತ ಹೋರಾಟ ಮುಂದುವರಿಸುತ್ತೇವೆ” ಎಂದರು.

“ನಾವು ಅನ್ಯಾಯದ ವಿರುದ್ಧ ನಿಂತುಕೊಳ್ಳುತ್ತೇವೆ. ಉತ್ತಮ ಸಮಾಜದ ಪರ ನಿಲ್ಲುತ್ತೇವೆ. ಸಂವಿಧಾನ ನಮಗೆ ಸಮಾನತೆಯನ್ನು ನೀಡಿದೆ. ಅನ್ಯಾಯದ ವಿರುದ್ಧ ನಾವು ಧ್ವನಿ ಎತ್ತುತ್ತಾ ಬರುತ್ತಿದ್ದೇವೆ. ಸಮಸಮಾಜದ ವಿಚಾರಕ್ಕಾಗಿ ನಾವು ದನಿ ಎತ್ತುತ್ತಿದ್ದೇವೆ, ಜೈ ಭೀಮ್‌” ಎಂದು ಅವರು ಘೋಷಣೆ ಕೂಗಿದರು.

“ಪೊಲೀಸರು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿರುವುದು ಒಂದು ಪೋಸ್ಟ್‌ ವಿರುದ್ಧ. ಅದರಲ್ಲಿ ಯಾವುದೇ ಅವಹೇಳನಕಾರಿ ವಿಚಾರಗಳಿಲ್ಲ. ಯಾರನ್ನೂ ಪ್ರಚೋದಿಸುವ ಟ್ವೀಟ್ ಮಾಡಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.

“ಶಾಸನಸಭೆಯಲ್ಲಿ ಕೆಲವರು ರೇಪ್‌ ಬಗ್ಗೆ ಮಾತನಾಡುತ್ತಾರೆ, ಅದು ಪ್ರಚೋದನಕಾರಿಯಲ್ಲವಾ? ಅವರನ್ನು ಏಕೆ ಬಂಧಿಸಿಲ್ಲ. ಅಲ್ಪಸಂಖ್ಯಾತರ ವಿರುದ್ಧ ಎಷ್ಟು ಪ್ರಚೋದನಕಾರಿಯಾಗಿ ಮಾತನಾಡುತ್ತಾರೆ. ಅವರನ್ನೇಕೆ ಬಂಧಿಸಿಲ್ಲ. ಒಂದು ಟ್ವೀಟ್‌ ಮೂಲಕ ಮಹಿಳಾ ವಿರೋಧಿ ತೀರ್ಪನ್ನು ಟೀಕಿಸಿದ್ದಕ್ಕೆ ಜೈಲಿಗೆ ಹಾಕುತ್ತೀರಲ್ಲ, ಅದು ನಿಜಕ್ಕೂ ಅಪ್ರಜಾಪ್ರಭುತ್ವ ನಡೆ” ಎಂದು ಖಂಡಿಸಿದರು.

“ಪೊಲೀಸ್ ರಾಜ್ಯ ಮಾಡಲು ಹೊರಟಿದ್ದಾರೆ. ನಾವು ಸರ್ವಾಧಿಕಾರವನ್ನು ಯಾವುದೇ ಕಾರಣಕ್ಕೂ ಒಪ್ಪಲ್ಲ. ಇದು ಪ್ರಜಾಪ್ರಭುತ್ವ. ಅದನ್ನು ಎತ್ತು ಹಿಡಿಯುವುದು ನಮ್ಮ ಕರ್ತವ್ಯ. ಆ ಕೆಲಸವನ್ನು ಮಾಡುತ್ತೇವೆ” ಎಂದರು.

“ನಾವು ಕಾನೂನು ಉಲ್ಲಂಘನೆ ಮಾಡಿಲ್ಲ. ಬುದ್ಧ, ಬಸವ, ಅಂಬೇಡ್ಕರ್‌, ಪೆರಿಯಾರ್‌, ಕುವೆಂಪು ಸಿದ್ಧಾಂತದಲ್ಲಿ ಅಷ್ಟೊಂದು ಶಕ್ತಿ ಇದೆ. ಪೆರಿಯಾರ್‌ ಅವರು ಎಂಬತ್ತು ಸಲ ಜೈಲಿಗೆ ಹೋಗಿ ಬರುತ್ತಾರೆ. ಹದಿನೈದು ವರ್ಷಗಳಲ್ಲಿ ಇಪ್ಪತ್ತಮೂರು ಸಲ ಜೈಲಿಗೆ ಹೋಗುತ್ತಾರೆ. ಇಂತಹ ವಿಚಾರಗಳನ್ನು ಹೇಳುವವರನ್ನು ಜೈಲಿಗೆ ಹಾಕಿಯೇ ಹಾಕುತ್ತಾರೆ. ಟ್ವೀಟ್‌ ಮಾಡುವುದನ್ನು ಖಂಡಿತ ನಿಲ್ಲಿಸಲ್ಲ” ಎಂದು ಗುಡುಗಿದರು.

“ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಪ್ರಶ್ನಾತೀತರಲ್ಲ. ಈ ಟ್ವೀಟ್‌ಗಳನ್ನು ಖಂಡಿತ ನಿಲ್ಲಿಸುವುದಿಲ್ಲ. ಸಿಎಂ, ಎಂಪಿ, ಎಂಎಲ್‌ಎ, ಐಪಿಎಸ್‌, ನ್ಯಾಯಾಧೀಶರು, ಮಲ್ಲಿಕಾರ್ಜುನ ಗೌಡ ಪಾಟೀಲ್ ಆಗಿರಬಹುದು, ಕೃಷ್ಣ ದೀಕ್ಷಿತ್ ಅವರಾಗಿರಬಹುದು, ಎಲ್ಲರನ್ನೂ ನಾವು ಪ್ರಶ್ನೆ ಮಾಡಿಯೇ ಮಾಡುತ್ತೇವೆ. ಇದು ಸಂವಿಧಾನಿಕ ಹಕ್ಕು” ಎಂದು ಪ್ರತಿಪಾದಿಸಿದರು.

ಹಲವು ಸಾಮಾಜಿಕ ಹೋರಾಟಗಾರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಅನ್ಯಾಯದ ವಿರುದ್ಧದ ಚೇತನರ ಹೋರಾಟ ಮುಂದುವರೆಯಲಿ. ಆಡಳಿತಾರೂಢರ ದೌರ್ಜನ್ಯ, ದಬ್ಬಾಳಿಕೆಗಳಿಗೆ ಹೆದರುವುದು ಬೇಡ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...