Homeಕರ್ನಾಟಕಕರ್ನಾಟಕ ವಿರೋಧಪಕ್ಷಗಳ ಚುನಾವಣೋತ್ತರ ಗೊಂದಲಗಳು

ಕರ್ನಾಟಕ ವಿರೋಧಪಕ್ಷಗಳ ಚುನಾವಣೋತ್ತರ ಗೊಂದಲಗಳು

- Advertisement -
- Advertisement -

ಚುನಾವಣೆ ಮುಗಿದು ಮೂರು ತಿಂಗಳಾಗುತ್ತಾ ಬಂದಿದೆ. ಹೊಸ ವಿಧಾನಸಭೆಯ ಪೂರ್ಣಾವಧಿ ಅಧಿವೇಶನವೊಂದು ಮುಗಿದೇ ಹೋಗಿದೆ. ಆದರೆ ಪ್ರಧಾನ ವಿರೋಧ ಪಕ್ಷವಾದ ಬಿಜೆಪಿ ವಿಧಾನಸಭೆಯಲ್ಲಿ ತನ್ನ ನಾಯಕನನ್ನು ಆರಿಸಿಕೊಂಡಿಲ್ಲ. ಮತ್ತೊಂದು ವಿರೋಧ ಪಕ್ಷವಾದ ಜನತಾದಳದಲ್ಲಿ ನಾಯಕತ್ವದ ಪ್ರಶ್ನೆ ಇಲ್ಲ. ಆದರೆ ಚುನಾವಣೆಯಲ್ಲಿ ಆದ ಹಿನ್ನಡೆಯಿಂದ ಆ ಪಕ್ಷಕ್ಕೆ ಸುಧಾರಿಸಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಸುಧಾರಿಸುವುದಿರಲಿ, ಅದು ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆಯೋ ಇಲ್ಲವೋ ಎನ್ನುವ ಮೂಲಭೂತ ಪ್ರಶ್ನೆ ಎದ್ದಿದೆ. ಇದರರ್ಥ, ಎರಡೂ ಪಕ್ಷಗಳೂ ಸರಕಾರವನ್ನು ವಿರೋಧಿಸುವಲ್ಲಿ ಹಿಂದೆ ಬಿದ್ದಿವೆ ಎಂದಲ್ಲ. ಎರಡು ವಿರೋಧ ಪಕ್ಷಗಳೂ ಸೇರಿ ಹೊಸ ಸರಕಾರ ನೆಟ್ಟಗೆ ನಿಲ್ಲುವ ಮೊದಲೇ ಅದರ ಮೇಲೆ ದೊಡ್ಡ ಮಟ್ಟದಲ್ಲೇ ಪ್ರಹಾರ ಆರಂಭಿಸಿವೆ. ಆದರೆ ಆಂತರಿಕವಾಗಿ ಎರಡೂ ಪಕ್ಷಗಳು ಎದುರಿಸುತ್ತಿರುವ ಗೊಂದಲ, ಅನಿಶ್ಚಿತತೆ ಕೊನೆಗೊಳ್ಳುವ ಸೂಚನೆಗಳೇ ಕಾಣಿಸುತ್ತಿಲ್ಲ.

ಬಿಜೆಪಿ ಸದನದಲ್ಲಿ ತನ್ನ ನಾಯಕನನ್ನು ಯಾಕೆ ಆಯ್ಕೆ ಮಾಡಿಕೊಂಡಿಲ್ಲ ಎನ್ನುವುದು ಸೋಜಿಗದ ವಿಚಾರ. ಕೆಲವು ವರದಿಗಳ ಪ್ರಕಾರ ಇತ್ತೀಚಿಗೆ ದೆಹಲಿಗೆ ಹೋದ ರಾಜ್ಯ ಬಿಜೆಪಿ ನಾಯಕರುಗಳು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಇನ್ನೂ ಆಯ್ಕೆ ಮಾಡದೆ ಇರುವುದರಿಂದಾಗಿ ತಮಗೆ ಮುಜುಗರ ಆಗುತ್ತದೆಂದು ಪಕ್ಷದ ಹೈಕಮಾಂಡ್ ಬಳಿ ಹೇಳಿಕೊಂಡಾಗ, ರಾಷ್ಟ್ರೀಯ ನಾಯಕರೊಬ್ಬರು ’ಕರ್ನಾಟಕ ಚುನಾವಣೆಯಲ್ಲಿ ಸೋತಾಗ ನಮಗಾಗಿರುವ ಮುಜುಗರಕ್ಕಿಂತ ಹೆಚ್ಚು ಮುಜುಗರ ನೀವು ಅನುಭವಿಸಲು ಸಾಧ್ಯವಿಲ್ಲ’ ಎಂದರಂತೆ!

ಹಾಗಾದರೆ, ಚುನಾವಣೆ ಗೆಲ್ಲಿಸಿಕೊಡದ ಕಾರಣಕ್ಕೆ ತನ್ನ ಪಕ್ಷದ ರಾಜ್ಯ ನಾಯಕರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ಬಿಜೆಪಿಯ ಹೈಕಮಾಂಡ್ ವಿರೋಧ ಪಕ್ಷದ ನಾಯಕರ ಆಯ್ಕೆಯನ್ನು ಅನಿರ್ದಿಷ್ಟವಾಗಿ ಮುಂದೂಡುತ್ತಿದೆಯೇ? ಈ ಬಾರಿ ಕರ್ನಾಟಕದಲ್ಲಿ ’ಆಪರೇಷನ್ ಕಮಲ’ದ ಬದಲಿಗೆ ಅಥವಾ ಅದನ್ನು ನಡೆಸಲು ಸೂಕ್ತ ಸಮಯ ಬರುವವರೆಗೆ ’ಆಪರೇಷನ್ ಕಡೆಗಣನೆ’ ಅಂತ ಏನಾದರೂ ಆ ಪಕ್ಷದ ಕೇಂದ್ರ ನಾಯಕರು ಅಭಿಯಾನ ಪ್ರಾರಂಭಿಸಿದರೆ? ಅಥವಾ ಈಗ ವಿಧಾನಸಭೆಗೆ ಆಯ್ಕೆಯೆಯಾಗಿರುವ ತನ್ನ ಸದಸ್ಯರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಯಾರಿಗೂ ಇಲ್ಲ ಅಂತ ನಿರ್ಣಯಿಸಿ ಪಕ್ಷದಲ್ಲೇ ಇರುವ ಆದರೆ ವಿಧಾನಸಭೆಗೆ ಆಯ್ಕೆಯಾಗದ ಯಾರನ್ನಾದರೂ ಆ ಸ್ಥಾನಕ್ಕೆ ಆಯ್ಕೆ ಮಾಡುವ ಇರಾದೆಯೇನಾದರೂ ಪಕ್ಷಕ್ಕೆ ಇದೆಯೇ? ಸದನಕ್ಕೆ ಆಯ್ಕೆ ಆಗದವರನ್ನು ಮಂತ್ರಿ ಮಾಡುವ ಅಥವಾ ಮುಖ್ಯಮಂತ್ರಿ ಮಾಡುವ ಅವಕಾಶ ಇದೆ. ಆರು ತಿಂಗಳ ಅವಧಿಯೊಳಗೆ ಅವರು ಮೇಲ್ಮನೆ ಅಥವಾ ಕೆಳಮನೆಯ ಸದಸ್ಯರಾದರೆ ಆಯಿತು. ಆದರೆ ವಿರೋಧ ಪಕ್ಷದ ನಾಯಕನನ್ನಾಗಿ ಸದಸ್ಯರಲ್ಲದವರನ್ನು ಆಯ್ಕೆ ಮಾಡುವುದಕ್ಕೂ ಅವಕಾಶವಿದೆಯೇ ಎನ್ನುವ ಹೊಸ ಪ್ರಶ್ನೆಯೊಂದು ಕರ್ನಾಟಕದ ಬೆಳವಣಿಗೆಯ ಹಿನ್ನೆಲೆಯಲ್ಲಿ ಎದ್ದಿದೆ.

ಇನ್ನೊಂದು ಸಾಧ್ಯತೆಯ ಕುರಿತಾಗಿಯೂ ಗುಸುಗುಸು ಇತ್ತು. ಬೆಂಕಿ ಇಲ್ಲದೆ ಹೊಗೆ ಏಳುವುದಿಲ್ಲ. ಈ ಸುದ್ದಿಯ ಪ್ರಕಾರ ಸಮ್ಮಿಶ್ರ ಸರಕಾರ ರಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಮ್ಮಿಶ್ರ ವಿರೋಧ ಪಕ್ಷವನ್ನು ಕಟ್ಟುವ ಯೋಚನೆಯೊಂದು ಇತ್ತೆಂದೂ ಅದಕ್ಕಾಗಿ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಜಾತ್ಯತೀತ ಜನತಾ ದಳದ ಹೆಚ್.ಡಿ. ಕುಮಾರಸ್ವಾಮಿಯವರಿಗೆ ನೀಡಿ ಕಾಂಗ್ರೆಸ್ಸನ್ನು ಸದನದಲ್ಲಿ ಮಣಿಸುವ ನಿರ್ಧಾರವಾಗಿದೆ ಎಂದೂ ಕೇಳಿಬಂದಿತ್ತು. ಆ ನಂತರ ಈ ಕುರಿತಾದ ಮಾತುಕತೆ ಮುರಿದು ಬಿದ್ದಿದೆ ಎನ್ನುವ ವರ್ತಮಾನವೂ ಬಂತು.

ಇದನ್ನೂ ಓದಿ: ನಮ್ಮ ಸಚಿವರಿವರು; ನಿರಾಡಂಬರ ವ್ಯಕ್ತಿತ್ವದ ಕೃಷ್ಣಭೈರೇಗೌಡ

ಮೇಲೆ ವಿವರಿಸಿದ ಸುದ್ದಿಗಳಲ್ಲಿ ಸತ್ಯವೇನಾದರೂ ಇದ್ದರೆ ಪ್ರಜಾತಾಂತ್ರಿಕ ರಾಜಕಾರಣದ ಸ್ಥಾಪಿತ ರೀತಿ ರಿವಾಜುಗಳನ್ನೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಅಸ್ತವ್ಯಸ್ತಗೊಳಿಸುವ ರಾಜಕೀಯ ಮಾದರಿಯನ್ನು ಹಿಂದಿನ ಆಪರೇಷನ್ ಕಮಲದ ರೀತಿಯಲ್ಲೇ ಕರ್ನಾಟಕದಲ್ಲಿ ಬಿಜೆಪಿ ಮತ್ತೊಮ್ಮೆ ಸ್ಥಾಪಿಸಲು ಹವಣಿಸುತ್ತದೆ ಎಂದು ಭಾವಿಸಬೇಕಾಗುತ್ತದೆ. ಹಾಗೇನೂ ಇಲ್ಲ ಅಂತಲೂ, ಕೊನೆಗೂ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಯಾರದ್ದೋ ಆಯ್ಕೆ ನಡೆಯುತ್ತಿದೆ ಅಂತಲೂ ಹೊಸ ಸುದ್ದಿಯೊಂದು ಬಂದಿದೆ. ಆದರೆ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದು ಬಿಜೆಪಿಯವರಲ್ಲ. ಬದಲಿಗೆ ಜನತಾ ದಳದ ವರಿಷ್ಠ ಹೆಚ್.ಡಿ. ದೇವೇಗೌಡರು! ಎಲ್ಲವೂ ಒಂಥರಾ ಅಸಂಗತ ನಾಟಕದ ಹಾಗೆ ಅನಾವರಣಗೊಳ್ಳುತ್ತಿದೆ.

ಇನ್ನು ಜಾತ್ಯತೀತ ಜನತಾದಳದ್ದು ಇನ್ನೊಂದು ಕತೆ. ಅದು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲಾಗದೆ ಹೋದದ್ದಕ್ಕೆ ತಾನು ಈವರೆಗೆ ಪ್ರತಿಪಾದಿಸುತ್ತಾ ಬಂದಿರುವ ಮತ್ತು ತನ್ನ ಹೆಸರಿನಲ್ಲೇ ಪ್ರತಿಷ್ಠಾಪಿಸಿಕೊಂಡಿರುವ ’ಜಾತ್ಯತೀತತೆ’ಯೇ ಕಾರಣವೆಂದು ತಿಳಿದಿದೆಯಂತೆ. ಎಷ್ಟರಮಟ್ಟಿಗೆ ಎಂದರೆ ಅದರ ಉನ್ನತ ನಾಯಕರಿಗೆ ’ಜಾತ್ಯತೀತ’ ತತ್ವಕ್ಕೆ ಈ ತನಕ ಅಂಟಿಕೊಂಡದ್ದಕ್ಕೆ ಪಶ್ಚಾತ್ತಾಪ ಇದೆಯಂತೆ. ನಾಯಕರ ಜತೆಗೆ ಪಕ್ಷದ ಒಂದಷ್ಟು ಮಂದಿ ಕಾರ್ಯಕರ್ತರು ಕೂಡಾ ’ಜಾತ್ಯತೀತತೆ’ಯ ತತ್ವಕ್ಕೆ ತಿಲಾಂಜಲಿ ನೀಡದೆ ಹೋದರೆ ಪಕ್ಷಕ್ಕೆ ಭವಿಷ್ಯ ಇಲ್ಲ ಎಂದು ಭಾವಿಸಿದ್ದಾರೆ ಎನ್ನುವ ವರ್ತಮಾನವಿದೆ. ಮುಖ್ಯವಾಗಿ ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಜನತಾ ದಳಕ್ಕೆ ನಿರ್ಣಾಯಕವಾಗಿ ಮತ ನೀಡದ ಕಾರಣ ಇನ್ನು ಜಾತ್ಯತೀತತೆಗೆ ಅಂಟಿಕೊಂಡಿರುವುದರಲ್ಲಿ ಅರ್ಥವಿಲ್ಲ ಎನ್ನುವುದು ಅವರ ನಿಲುವಾಗಿರುವಂತಿದೆ. ಜತೆಗೆ ಬಿಜೆಪಿಯ ಜತೆ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳುವ ಇರಾದೆಯೂ ಆ ಪಕ್ಷಕ್ಕೆ ಇದ್ದಂತಿದೆ. ಅದರ ಹಿನ್ನೆಲೆಯಲ್ಲೇ ಮೇಲೆ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಜನತಾ ದಳ ಪಡೆಯುವ ವಿಚಾರ ಹುಟ್ಟಿಕೊಂಡದ್ದು ಮತ್ತು ಜನತಾದಳ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಸದನದಲ್ಲಿ ಬಿಜೆಪಿ ನಾಯಕರೊಂದಿಗೆ ಅಷ್ಟೊಂದು ಆಪ್ಯಾಯಮಾನವಾಗಿ ವ್ಯವಹರಿಸುತ್ತಿರುವುದು.

ಮುಸ್ಲಿಂ ಮತದಾರರು ಹಿಂದಿನ ಚುನಾವಣೆಯಲ್ಲಿ ಜನತಾ ದಳವನ್ನು ಬೆಂಬಲಿಸಿದಷ್ಟು ಈ ಚುನಾವಣೆಯಲ್ಲಿ ಬೆಂಬಲಿಸದೆ ಇದ್ದಿರಬಹುದು. ಅದಕ್ಕೆ ಕಾರಣ ನಾಲ್ಕು ವರ್ಷಗಳ ಕಾಲದ ಬಿಜೆಪಿ ಆಡಳಿತ ಮುಸ್ಲಿಮರಲ್ಲಿ ಉಂಟುಮಾಡಿದ ಅಸುರಕ್ಷಿತ ಭಾವನೆ. ಮತ್ತೊಮ್ಮೆ ಬಿಜೆಪಿ ಗೆದ್ದರೆ ಅಥವಾ ಅತಂತ್ರ ಫಲಿತಾಂಶ ಬಂದು ಬಿಜೆಪಿ ಸಮ್ಮಿಶ್ರ ಸರಕಾರ ರಚಿಸಿದರೆ ತಮ್ಮ ಪರಿಸ್ಥಿತಿ ಇನ್ನಷ್ಟೂ ಹದಗೆಡಬಹುದು ಎಂದು ಯೋಚಿಸಿದ ಮುಸ್ಲಿಂ ಮತದಾರರು ಈ ಬಾರಿ ಒಂದು ಪಕ್ಷಕ್ಕೆ ಬಹುಮತ ಬರಲಿ ಎಂದು ಕಾಂಗ್ರೆಸ್ಸಿಗೆ ಬೆಂಬಲ ನೀಡಿರಬಹುದು. ಆದರೆ, ಜನತಾದಳಕ್ಕೆ ಮುಸ್ಲಿಂ ಸಮುದಾಯ ಎಲ್ಲೂ ಮತ ನೀಡಿಯೇ ಇಲ್ಲ ಎನ್ನುವ ವಾದ ತಪ್ಪು. ಯಾಕೆಂದರೆ ಹಾಸನ ಕ್ಷೇತ್ರವೂ ಸೇರಿದಂತೆ ಹಲವೆಡೆ ಮುಸ್ಲಿಂ ಮತ ಇಲ್ಲದೆ ಜನತಾ ದಳ ಗೆಲ್ಲುತ್ತಿರಲಿಲ್ಲ. ಅದೇನೇ ಇರಲಿ, ಜನತಾದಳ ಈ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದ್ದಕ್ಕೆ ಇದೊಂದೇ ಕಾರಣವಲ್ಲ. ಮುಸ್ಲಿಮೇತರ ಮತದಾರರೂ ಕೂಡಾ ದೊಡ್ಡ ಸಂಖ್ಯೆಯಲ್ಲಿ ಈ ಬಾರಿ ಜನತಾ ದಳಕ್ಕೆ ಮತ ನೀಡಿಲ್ಲ. ಇದಕ್ಕೆ ಕಾರಣ ಪಕ್ಷದ ಜಾತ್ಯತೀತ ನಿಲುವಲ್ಲ. ಪಕ್ಷದ ಒಳಗಣ ಮತ್ತು ಹೊರಗಣ ಹಲವಾರು ಬೆಳವಣಿಗೆಗಳು ಆ ಪಕ್ಷವನ್ನು ಇಂದಿನ ಸ್ಥಿತಿಗೆ ತಂದು ನಿಲ್ಲಿಸಿವೆ. ಕರ್ನಾಟಕ ರಾಜಕೀಯದ ಪ್ರಾಥಮಿಕ ಜ್ಞಾನ ಇದ್ದ ಯಾರಿಗಾದರೂ ಅರ್ಥ ಆಗುವ ವಿಷಯ ಇದು.

ಬಿಜೆಪಿಯ ಜತೆ ಕೈಜೋಡಿಸಲು ಚುನಾವಣಾ ಫಲಿತಾಂಶ ಒಂದು ನೆಪವಾದೀತೇ ಹೊರತು ಒಂದು ಸಮರ್ಥ ಕಾರಣ ಆಗಲಾರದು. ಈಗಲೂ ಜನತಾ ದಳ ಒಂದು ತೃತೀಯ ಶಕ್ತಿಯಾಗಿ ಕರ್ನಾಟಕದ ರಾಜಕೀಯದಲ್ಲಿ ಉಳಿಯಬೇಕೆಂದು ಬಯಸುವ ದೊಡ್ಡ ಸಂಖ್ಯೆಯ ಮತದಾರರು ಇದ್ದಾರೆ ಮತ್ತು ಜನತಾದಳಕ್ಕೆ ಮತ್ತೆ ಸಾವರಿಸಿಕೊಂಡು ಮೇಲೇಳುವ ಅವಕಾಶ ಇದ್ದೇ ಇದೆ. ಆದರೆ, ಈ ಅವಕಾಶವನ್ನು ಬಳಸಿಕೊಂಡು ಮೇಲೇಳುವ ಕಾರ್ಯ ಕಠಿಣ ಎಂದು ಭಾವಿಸಿ ಬಿಜೆಪಿಯ ಜತೆ ಹೆಜ್ಜೆ ಹಾಕುವುದೇ ಸುಲಭದ ಮಾರ್ಗ ಅಂತ ಜನತಾದಳದ ಒಂದು ಪ್ರಭಾವಿ ಬಳಗ ನಿರ್ಣಯಿಸಿದಂತಿದೆ. ಈ ತನಕ ಈ ಕುರಿತಾಗಿ ಬಂದಿರುವ ಸ್ಪಷ್ಟೀಕರಣದಲ್ಲಿ ಬಿಜೆಪಿಯ ಜತೆ ಸೇರುವುದರ ವಿರುದ್ಧ ದೃಢವಾದ ಮಾತುಗಳು ಕೇಳಿಬಂದಿಲ್ಲ. ಯಾರ ಜತೆಯೂ ಸೇರುವುದಿಲ್ಲ, ಸ್ವತಂತ್ರವಾಗಿ ಲೋಕಸಭಾ ಚುನಾವಣೆ ಎದುರಿಸುತ್ತೇವೆ ಅಂತ ಒಂದೆಡೆ ಹೇಳಿ ಇನ್ನೊಂದೆಡೆ ಬಿಜೆಪಿಯ ಜತೆ ಮೈತ್ರಿಮಾಡಿಕೊಳ್ಳದವರು ಯಾರಿದ್ದಾರೆ? ಹಿಂದೆ ರಾಮಕೃಷ್ಣ ಹೆಗಡೆ ಬಿಜೆಪಿಯ ಜತೆ ಸೇರಿ ಸರಕಾರ ಮಾಡಿಲ್ಲವೇ? ಅದರಲ್ಲಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿರಲಿಲ್ಲವೇ? ಇತ್ಯಾದಿ ಮಾತುಗಳನ್ನಾಡುವುದನ್ನು ಕೇಳಿದರೆ ಎಲ್ಲಾ ಸಾಧ್ಯತೆಗಳನ್ನೂ ಮುಕ್ತವಾಗಿರಿಸಿಕೊಂಡೇ ಮುಂದಿನ ನಿರ್ಧಾರಗಳನ್ನು ಆ ಪಕ್ಷ ಕೈಗೊಳ್ಳಲಿದೆ ಅಂತ ಅನ್ನಿಸುತ್ತದೆ.

ಒಂದು ರಾಜಕೀಯ ಪಕ್ಷವಾಗಿ ತನ್ನ ಅನುಕೂಲಕ್ಕೆ ಬೇಕಾದಂತಹ ನಿರ್ಧಾರವನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಜನತಾದಳಕ್ಕೆ ಇದೆ. ಆದರೆ, ರಾಜ್ಯ ರಾಜಕೀಯದಲ್ಲಿ ಮಧ್ಯಮ ಮಾರ್ಗವನ್ನು ಅನುಸರಿಸಿಕೊಂಡು ಬಂದಿರುವಂತ ಜನತಾ ದಳದಂತಹ ಒಂದು ಪಕ್ಷವು ಇಂದಿನ ಪರಿಸ್ಥಿತಿಯಲ್ಲಿ ಬಿಜೆಪಿಯ ಜತೆ ಕೈಜೋಡಿಸುವುದು ಎಂದರೆ ಆ ಪಕ್ಷವು ಕರ್ನಾಟಕದಲ್ಲಿ ಈ ತನಕ ಏನನ್ನು ಉಳಿಸಲು ಶ್ರಮಿಸಿತ್ತೋ ಅವೆಲ್ಲವನ್ನು ಕೆಡವುವ ರಾಜಕೀಯದ ಜತೆ ಕೈಜೋಡಿಸುತ್ತಿದೆ ಎಂದೇ ಅರ್ಥ. ಯಾಕೆಂದರೆ 2006ರಲ್ಲಿ ಬಿಜೆಪಿಯೊಂದಿಗೆ ಜನತಾ ದಳ ಮೈತ್ರಿ ಸರಕಾರ ಮಾಡಿಕೊಂಡಾಗ ಇದ್ದಾಗಿನ ಬಿಜೆಪಿಯೇ ಬೇರೆ, ಇಂದಿನ ಬಿಜೆಪಿಯೇ ಬೇರೆ. ಇಂದಿನ ಸ್ಥಿತಿಯಲ್ಲಿ ಬಿಜೆಪಿಯ ಜತೆ ಕೈಜೋಡಿಸುವುದು ಎಂದರೆ ರಾಜ್ಯಗಳ ಮೇಲೆ ಕೇಂದ್ರದ ಸವಾರಿಯ ರಾಜಕೀಯವನ್ನು ಬೆಂಬಲಿಸುದು ಎಂದು ಅರ್ಥ, ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ರಾಜಕೀಯವನ್ನು ಬೆಂಬಲಿಸುವುದು ಎಂದು ಅರ್ಥ, ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಾ ನಡೆಸುವ ಕೋಮು ರಾಜಕೀಯಕ್ಕೆ ಪ್ರೋತ್ಸಾಹಿಸುವುದು ಎಂದು ಅರ್ಥ, ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರದಂತಹ ಅಮಾನವೀಯ-ಅಸಂವಿಧಾನಿಕ ರಾಜಕೀಯವನ್ನು ಬೆಂಬಲಿಸುವುದು ಎಂದು ಅರ್ಥ, ಒಂದು ದೇಶ-ಒಬ್ಬ ನಾಯಕ-ಒಂದು ಪಕ್ಷ-ಒಂದು ಸಂಸ್ಕೃತಿ ಎಂಬ ಅಪ್ರಾಯೋಗಿಕ-ಅಪ್ರಯೋಜಕ ನೀತಿಯೊಂದನ್ನು ಪ್ರತಿಪಾದಿಸುತ್ತಾ ದೇಶದ ಬಹುತ್ವಕ್ಕೆ ಕೊಳ್ಳಿ ಇಡುವ ರಾಜಕೀಯವನ್ನು ಬೆಂಬಲಿಸುವುದು ಎಂದು ಅರ್ಥ. ಇಂತಹದ್ದೊಂದು ರಾಜಕೀಯದ ಜತೆ ಈ ಹಂತದಲ್ಲಿ ಗುರುತಿಸಿಕೊಳ್ಳುವುದು ಸರಿ ಎಂದು ಆ ಪಕ್ಷದ ನಾಯಕರಿಗೆ ಅನ್ನಿಸಿದ್ದೇ ಆದಲ್ಲಿ ಕರ್ನಾಟಕ ರಾಜಕೀಯದ ಕೆಟ್ಟ ಅಧ್ಯಾಯವೊಂದು ಆರಂಭವಾದಂತೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...