ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಬೆಂಗಳೂರು ಬುಲ್ಸ್ ತಂಡ ಗೆಲುವಿನ ನಾಗಾಲೋಟ ಮುಂದುವರೆಸಿದ್ದು 10ನೇ ಗೆಲುವು ದಾಖಲಿಸಿದೆ. ಶುಕ್ರವಾರ ರಾತ್ರಿ ಗುಜರಾತ್ ಜೈಂಟ್ಸ್ ತಂಡದ ಎದುರಿನ ಪಂದ್ಯದಲ್ಲಿ 45-38 ಅಂಕಗಳಿಂದ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದುವರೆಗೆ ಆಡಿದ 15 ಪಂದ್ಯಗಳಲ್ಲಿ 10 ಗೆಲುವು, ನಾಲ್ಕು ಸೋಲು ಮತ್ತು ಒಂದು ಟೈನೊಂದಿಗೆ 56 ಅಂಕ ಗಳಿಸಿರುವ ಬೆಂಗಳೂರು ತಂಡ ಪ್ಲೇ ಆಫ್ ಕಡೆ ಮುಖ ಮಾಡಿದೆ.
ಭರವಸೆಯ ರೈಡರ್ ಭರತ್
ಬೆಂಗಳೂರು ಬುಲ್ಸ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈಡರ್ ಭರತ್. 8ನೇ ಆವೃತ್ತಿಯಿಂದ ಬೆಂಗಳೂರು ತಂಡದ ಪರವಾಗಿ ಆಡುತ್ತಿರುವ ಅವರು ಆ ಆವೃತ್ತಿಯಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ್ದರು. ಆದರೆ ಆಗ ಪವನ್ ಶೆರಾವತ್ ಕಾಲ ನಡೆಯುತ್ತಿತ್ತು. ಎಲ್ಲಾ ಪಂದ್ಯಗಳಲ್ಲಿಯೂ ಪವನ್ ಮಿಂಚುತ್ತಿದ್ದರು. ಹಾಗಾಗಿ ಭರತ್ ಸಹಾಯಕ ರೈಡರ್ ಮಾತ್ರ ಆಗಿದ್ದು ಅವರಿಗೆ ಅವಕಾಶದ ಕೊರತೆಯಿತ್ತು. 9ನೇ ಸೀಸನ್‌ನಲ್ಲಿ 20 ಲಕ್ಷ ರೂ ಗಳಿಗೆ ಬೆಂಗಳೂರು ಅವರನ್ನು ರಿಟೈನ್ ಮಾಡಿಕೊಂಡಿತು. ಈ ಬಾರಿ ವಿಕಾಸ್ ಖಂಡೋಲರನ್ನು ಮೇನ್ ರೈಡರ್ ಆಗಿ 1.7 ಕೋಟಿಗಳಿಗೆ ಬೆಂಗಳೂರು ತನ್ನದಾಗಿಸಿಕೊಂಡಿತು. ಆದರೆ ಇಡೀ ಸೀಸನ್‌ನಲ್ಲಿ ಮಿಂಚಿದ್ದು ಮಾತ್ರ ಭರತ್ ಹೂಡಾ.
ಭರತ್ ಆಡಿದ 15 ಪಂದ್ಯಗಳಲ್ಲಿ 177 ರೈಡ್ ಪಾಯಿಂಟ್ ಗಳಿಸಿ ಅತಿ ಹೆಚ್ಚು ರೈಡಿಂಗ್ ಪಾಯಿಂಟ್ ಗಳಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಹಾಗೆಯೇ 11 ಸೂಪರ್ ಟೆನ್ ಗಳಿಸಿದ್ದಾರೆ. ಅಲ್ಲದೆ ಅವರು 7 ಬಾರಿ ರೈಡಿಂಗ್‌ನಲ್ಲಿ ಮೂರಕ್ಕಿಂತ ಹೆಚ್ಚು ಜನರನ್ನು ಔಟ್ ಮಾಡಿ ಸೂಪರ್ ರೈಡ್ ಮಾಡಿದ್ದಾರೆ.
ಭರತ್‌ಗೆ ಸಹಾಯಕವಾಗಿ ವಿಕಾಸ್ ಖಂಡೋಲ ಮತ್ತು ನೀರಜ್ ನರ್ವಾಲ್ ಪ್ರದರ್ಶನ ನೀಡುತ್ತಿದ್ದಾರೆ. ಒಟ್ಟಾರೆ ಬೆಂಗಳೂರು ತಂಡದ ರೈಡಿಂಗ್ ಯೂನಿಟ್ ಪ್ರಬಲವಾಗಿದೆ. ಹಾಗಾಗಿ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ.
ಡಿಫೆಂಡಿಂಗ್ ಪ್ರಬಲವಾಗಬೇಕಿದೆ
ಬೆಂಗಳೂರು ತಂಡದ ಡಿಫೆಂಡಿಂಗ್ ಮತ್ತಷ್ಟು ಪ್ರಬಲವಾಗಿದೆ. ಕೆಲ ಪಂದ್ಯಗಳಲ್ಲಿ ಸೌರಭ್ ನಂದಲ್ ಉತ್ತಮ ಪ್ರದರ್ಶನ ನೀಡಿದರೆ ಕೆಲ ಪಂದ್ಯಗಳಲ್ಲಿ ಅಮನ್ ಚೆನ್ನಾಗಿ ಆಡುತ್ತಾರೆ. ಕೆಲವೊಮ್ಮೆ ಮಯೂರ್ ಕದಮ್ ಮಿಂಚಿದ್ದರೆ ಕೆಲವೊಮ್ಮೆ ತಂಡದ ನಾಯಕ ಮಹೇಂದರ್ ಮಿಂಚುತ್ತಿದ್ದಾರೆ. ಆದರೆ ಸಮಸ್ಯೆಯಿರುವುದು ಎಲ್ಲರೂ ಎಲ್ಲಾ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದಿರುವುದಾಗಿದೆ. ಇದುವರೆಗೂ ಸೌರಭ್ ನಂದಲ್ 47 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ ಅಮನ್ 31 ಟ್ಯಾಕಲ್ ಪಾಯಿಂಟ್‌ಗಳೊಂದಿಗೆ 15 ಸ್ಥಾನದಲ್ಲಿದ್ದಾರೆ.
ಬೆಂಗಳೂರು ತಂಡದ ಡಿಫೆಂಡಿಂಗ್ ತಂಡ ಸಮನ್ವಯತೆಯಿಂದ, ಆತ್ಮವಿಶ್ವಾಸದಿಂದ ಆಡಿದ್ದಲ್ಲಿ ಅದು ಬೆಂಗಳೂರು ತಂಡಕ್ಕೆ ವರದಾನವಾಗಲಿದೆ. ಮಲ್ಟಿಪಾಯಿಂಟ್ ಬಿಟ್ಟುಕೊಡದಿದ್ದರೆ ಬೆಂಗಳೂರು ತಂಡ ಚಾಂಪಿಯನ್ ಆಗುವ ಎಲ್ಲಾ ಅರ್ಹತೆ ಹೊಂದಿದೆ.
ಬೆಂಗಳೂರಿನ ಪ್ಲೇ ಆಫ್ ಹಾದಿ ಸುಗಮ
ಬೆಂಗಳೂರು ತಂಡ 56 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ಪುಣೇರಿ ಪಲ್ಟನ್ ತಂಡ ಸಹ 9 ಗೆಲುವಿನೊಂದಿಗೆ 54 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಈ ಆವೃತ್ತಿಯಲ್ಲಿ ಅತಿ ಉತ್ತಮ ಪ್ರದರ್ಶನ ನೀಡಿರುವ ಈ ಎರಡು ತಂಡಗಳು ಭಾನುವಾರ ಪರಸ್ಪರ ಕಣಕ್ಕಿಳಿಯುತ್ತಿವೆ. ಅಲ್ಲಿ ಗೆದ್ದವರು ಅಗ್ರಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.
ಬೆಂಗಳೂರು ತಂಡಕ್ಕೆ ಲೀಗ್ ಹಂತದಲ್ಲಿ ಇನ್ನು 7 ಪಂದ್ಯಗಳು ಬಾಕಿ ಇವೆ. ಏಳರಲ್ಲಿ ಮೂರು ಅಥವಾ ನಾಲ್ಕು ಪಂದ್ಯ ಗೆದ್ದರೆ ಅದು ಸುಲಭವಾಗಿ ಪ್ಲೇ ಆಫ್ ತಲುಪಲಿದೆ. ಆದರೆ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ 2ನೇ ಸ್ಥಾನದೊಳಗಿರುವುದು ಉತ್ತಮ. ಅದಕ್ಕಾಗಿ ಅದು ಕನಿಷ್ಟ 5 ಪಂದ್ಯಗಳನ್ನು ಗೆಲ್ಲಬೇಕಿದೆ. ಏಕೆಂದರೆ ಪ್ಲೇ ಆಫ್‌ಗೆ 6 ತಂಡಗಳು ಅರ್ಹತೆ ಪಡೆದರೆ, ಅವುಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ 2 ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ. ಉಳಿದ ನಾಲ್ಕು ತಂಡಗಳು ಎಲಿಮಿನೇಟರ್ ಪಂದ್ಯಗಳಲ್ಲಿ ಸೆಣಸಿ ಗೆದ್ದ 2 ತಂಡಗಳು ಸೆಮಿಫೈನಲ್ ತಲುಪಬೇಕಿದೆ.
ಪ್ಲೇ ಆಫ್ ಹೀಗಿರಲಿದೆ
ಒಟ್ಟು 12 ತಂಡಗಳಲ್ಲಿ ಅಂಕಪಟ್ಟಿಯಲ್ಲಿ ಅಗ್ರ 6 ರೊಳಗಿನ ತಂಡಗಳು ಪ್ಲೇ ಆಫ್ ಪ್ರವೇಶಿಸಿದರೆ ಉಳಿದ 6 ತಂಡಗಳು ಟೂರ್ನಿಯಿಂದ ಹೊರಬೀಳುತ್ತವೆ. ಅಂಕಪಟ್ಟಿಯಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ನೇರವಾಗಿ ಸೆಮಿಫೈನಲ್ ತಲುಪುತ್ತವೆ.
ಡಿಸೆಂಬರ್ 13ರಂದು 2 ಎಲಿಮಿನೇಟರ್ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೂರು ಮತ್ತು ಆರನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸಿದರೆ ಮತ್ತೊಂದು ಪಂದ್ಯದಲ್ಲಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳು ಸ್ಪರ್ಧಿಸುತ್ತವೆ. ಗೆದ್ದವರು ಸೆಮಿಫೈನಲ್ ಪ್ರವೇಶಿಸುತ್ತಾರೆ.
ಡಿಸೆಂಬರ್ 15ರಂದು ಎರಡು ಸೆಮಿಫೈನಲ್ ಪಂದ್ಯಗಳು ನಡೆದರೆ, ಡಿಸೆಂಬರ್ 17 ರಂದು ಫೈನಲ್ ಪಂದ್ಯ ನಡೆಯಲಿದೆ.
ಇದುವರೆಗಿನ ಪ್ರೊ ಕಬಡ್ಡಿ ಚಾಂಪಿಯನ್‌ಗಳು
ಮೊದಲ ಆವೃತ್ತಿ 2014: ಜೈಪುರ್ ಪಿಂಕ್ ಪ್ಯಾಂಥರ್ಸ್
ಎರಡನೇ ಆವೃತ್ತಿ 2014: ಯು ಮುಂಬಾ
ಮೂರನೇ ಆವೃತ್ತಿ 2015: ಪಟ್ನಾ ಪೈರೇಟ್ಸ್
ನಾಲ್ಕನೇ ಆವೃತ್ತಿ 2016: ಪಟ್ನಾ ಪೈರೇಟ್ಸ್
ಐದನೇ ಆವೃತ್ತಿ 2017: ಪಟ್ನಾ ಪೈರೇಟ್ಸ್
ಆರನೇ ಆವೃತ್ತಿ 2018: ಬೆಂಗಳೂರು ಬುಲ್ಸ್
ಏಳನೇ ಆವೃತ್ತಿ 2019: ಬೆಂಗಾಲ್ ವಾರಿಯರ್ಸ್
ಎಂಟನೇ ಆವೃತ್ತಿ 2021: ದಬಾಂಗ್ ಡೆಲ್ಲಿ
ಇದನ್ನೂ ಓದಿ: ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಪಾಲಿನ ಆಪತ್ಬಾಂಧವ ಭರತ್