Homeಪುಸ್ತಕ ವಿಮರ್ಶೆಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಉಸಿರುಗಟ್ಟಿಸುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದ ವ್ಯಕ್ತಿಯ ಜ್ವಾಲಾಮುಖಿಯಂತಹ ಆತ್ಮಕಥೆ

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ.

- Advertisement -
- Advertisement -

ಈಚೆಗೆ ಪಂಜಾಬಿ ಲೇಖಕಿ ಅಜಿತ್ ಕೌರರ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಓದಿದೆ. ಆತ್ಮಕಥೆ ನನ್ನ ಪ್ರಿಯ ಪ್ರಕಾರ. ವಿಜಯಾ ಅವರ ‘ಕುದಿ ಎಸರು’ವಿನಲ್ಲಿ ಇರುವಂತೆ ಇಲ್ಲಿ ಕೌಟುಂಬಿಕ ಹಿಂಸೆಯ ದಾರುಣ ಚಿತ್ರಗಳೇನಿಲ್ಲ. ಗೋದಾವರಿ ಪರುಳೇಕರ್ ಅವರಲ್ಲಿರುವಂತೆ ಚಳವಳಿಯ ಭಾಗವಾಗಿ ಎದುರಿಸಿದ ಕಠೋರ ಸವಾಲುಗಳಿಲ್ಲ. ಅಮೃತಾ ಪ್ರೀತಮ್ ಅವರಲ್ಲಿರುವಂತೆ ದೇಶವಿಭಜನೆಯ ಘೋರ ಘಟನೆಗಳಿಲ್ಲ. ಡಚ್ ಲೇಖಕಿ ಓಹರ್ನ್ ಅವರಲ್ಲಿರುವಂತೆ ಲೈಂಗಿಕ ದಾಸ್ಯಕ್ಕೆ ಒಳಗಾಗಿ ಜಪಾನಿ ಸೈನಿಕರ ಬಲಾತ್ಕಾರಕ್ಕೆ ಸಿಲುಕಿದ ಎದೆಸೀಳುವ ಸ್ಮೃತಿಗಳಿಲ್ಲ. ಬದಲಾಗಿ ತನ್ನಿಚ್ಛೆಯಂತೆ ಬದುಕಲು ಬಯಸುವ ಒಬ್ಬ ಮಹಿಳೆ ಪ್ರೇಮದಲ್ಲಿ ವಿಫಲೆಯಾಗಿ, ತನಗೊಲ್ಲದ ಸಂಸಾರವನ್ನು ಒಗೆದು ಹೊರಬಂದು, ಲೇಖಕಿಯಾಗಿ ಪತ್ರಕರ್ತೆಯಾಗಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡ ಕೆಲವು ಚಿತ್ರಗಳಿವೆ. ಆದರೆ ಈ ಚಿತ್ರಗಳ ಒಳಗಿಂದ ಹೊಮ್ಮುವ ಧೀಮಂತಿಕೆ ಸಂವೇದನೆಗಳು ಮಾತ್ರ ಝಗಝಗಿಸುವ ಕತ್ತಿಗಳಂತೆ ಹರಿತವಾಗಿವೆ.

ಭಾರತೀಯ ಸಾಂಪ್ರದಾಯಿಕ ಸಮಾಜವು ಮಹಿಳೆಯರ ಬದುಕಿಗೆ ಕೆಲವು ಚೌಕಟ್ಟುಗಳನ್ನು ಒದಗಿಸುತ್ತದೆ. ಬಂಧನ ಮತ್ತು ಅಪಮಾನಸಹಿತ ಸುರಕ್ಷೆಯಿರುವ ಚೌಕಟ್ಟದು. ಆದರೆ ಇದು ಅವರ ಸೃಜನಶೀಲ ಚೈತನ್ಯವನ್ನು ಚೂರುಚೂರು ಮಾಡುತ್ತದೆ. ಆಗ ದಿಟ್ಟೆಯರಾದ ಕೆಲವರು ಈ ಚೌಕಟ್ಟನ್ನು ಮುರಿದು ಹೊರಬರುವರು. ಇದರ ಫಲವಾಗಿ ಅಪಾರ ಕಷ್ಟವನ್ನೂ ಹಕ್ಕಿಯ ಸ್ವಾತಂತ್ರ್ಯವನ್ನೂ ಅನುಭವಿಸುವರು. ವಿಜಯಾ, ಪ್ರತಿಭಾ ನಂದಕುಮಾರ್, ಉಮಾಶ್ರೀ, ಅಮೃತಾಪ್ರೀತಂ, ಕಮಲಾದಾಸ್ ಮುಂತಾದವರ ಆತ್ಮಕಥೆಗಳು ಇದಕ್ಕೆ ನಿದರ್ಶನ. ಈ ಸರಣಿಯಲ್ಲೇ ಬರುವ ಅಜಿತ್ ಕೌರರ ಆತ್ಮಕಥೆ ಹಲವು ಕಾರಣಗಳಿಂದ ವಿಶಿಷ್ಟವಾಗಿದೆ.

1. ಓದುಗರನ್ನು ತಲ್ಲಣಗೊಳಿಸುವಂತೆ ಘಟನೆಗಳನ್ನು ವಿವರಿಸುವ ವಿಶಿಷ್ಟ ಬಗೆ. ಲೇಖಕಿಯ ಮಗಳು ಸುಟ್ಟುಕೊಂಡು ಸಾಯುವ ಇಲ್ಲವೇ ಲೇಖಕಿ ತನ್ನ ಪ್ರಿಯತಮನನ್ನು ಬೆನ್ನಹತ್ತಿಹೋಗುವ ಘಟನೆಗಳು, ಬಿರುಗಾಳಿಗೆ ಸಿಕ್ಕ ತರಗೆಲೆಯಂತೆ ಉದ್ವಿಗ್ನ ಓದುಗರನ್ನು ತನ್ನೊಟ್ಟಿಗೆ ಕರೆದೊಯ್ಯುವ ಕಸುವುಳ್ಳ ಶೈಲಿಯ ನಿರೂಪಣೆಯಿಲ್ಲಿದೆ. ತನ್ನ ಸಮಸ್ತ ಚೈತನ್ಯವನ್ನು ಬಸಿಯುವಂತೆ ಅಜಿತ್ ಬರೆಯುತ್ತಾರೆ.

2. ಬಾಲ್ಯದಿಂದ ಮುಪ್ಪಿನತನಕ ಬದುಕಿನ ವಿವಿಧ ಘಟ್ಟಗಳಲ್ಲಿ ಪಟ್ಟ ಅನುಭವಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಚಾರಿತ್ರಿಕ ನಿರೂಪಣ ವಿಧಾನವನ್ನು ಬಿಟ್ಟುಕೊಡುವುದು; ಬದಲಿಗೆ ಬಾಳಿನ ಕೆಲವು ಘಟನೆಗಳನ್ನು ಆಯ್ದು ನಿರೂಪಿಸುವ ಹಾದಿಯನ್ನು ಹಿಡಿಯುವುದು. ಇಲ್ಲಿರುವ ಮುಖ್ಯ ಘಟನೆಗಳೆಂದರೆ, ಹದಿಹರೆಯದಲ್ಲಿ ತನ್ನ ಪ್ರಿಯ ಅಧ್ಯಾಪಕನನ್ನು ಪ್ರೇಮಿಸುವ ಕಥೆ, ಮಗಳು ಸುಟ್ಟುಕೊಂಡು ಸಾಯುವುದಕ್ಕೆ ಸಾಕ್ಷಿಯಾಗುವ ಘಟನೆ, ಗಂಡನ ಮನೆಯನ್ನು ಬಿಟ್ಟು ಹೊರನಡೆವ ಘಟನೆ, ಹೊಸ ಪುರುಷನ ಪ್ರೇಮದಲ್ಲಿ ಅನುಭವಿಸುವ ಸುಖದುಃಖಗಳು, ಪತ್ರಕರ್ತೆಯಾಗಿ ಎದುರಿಸುವ ಬಿಕ್ಕಟ್ಟು, ಬಾಡಿಗೆ ಮನೆಯನ್ನು ಪಡೆಯಲು ಮಾಡುವ ಸೆಣಸಾಟ ಇತ್ಯಾದಿ. ಇಂತಹ ಕೆಲವೇ ಪ್ರಸಂಗಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಹೆಣ್ಣ ಬಾಳಿನ ತಲ್ಲಣಗಳನ್ನು ಅಜಿತ್ ಶಕ್ತವಾಗಿ ಕಾಣಿಸುವರು.

3. ವಿವರಗಳಿಗೆ ಹೋಗದೆ ಧ್ವನಿಪೂರ್ಣವಾದ ಸಂಕೇತ ಪ್ರತಿಮೆಗಳ ಮೂಲಕ ನಿರೂಪಿಸುವ ಪರಿ; ಕಥೆಯ ಭಾರವನ್ನು ಕಳೆದುಕೊಂಡು ಅನುಭವದ ಸೂಕ್ಷ್ಮಸ್ತರಗಳನ್ನು ಮುಟ್ಟಿ ಕಾಣಿಸುವಲ್ಲಿ ಸ್ವತಃ ಕಾವ್ಯವಾಗುವ ಗದ್ಯಭಾಷೆ. ವಿಷಾದಭರಿತವಾದ ಮತ್ತು ಹರಿತವಾದ ವ್ಯಂಗ್ಯ; ನಾಟಕೀಯವಾದ ಈ ವ್ಯಂಗ್ಯದೊಳಗೆ ಸ್ತ್ರೀಸಂವೇದನೆಯ ಮೌಲ್ಯಗಳನ್ನು ಕಾಣಿಸುವ ದಾರ್ಶನಿಕತೆ ಇದೆ. ಉದಾಹರಣೆಗೆ ವಾಣಿಜ್ಯ ವ್ಯವಹಾರದ ಪತ್ರಿಕೆಯ ಸಂಪಾದಕಿಯಾಗಿದ್ದ ಲೇಖಕಿಯನ್ನು, ಆಕೆಗೆ ಸಲ್ಲಬೇಕಾದ ಪ್ರಕಾಶನದ ಖರ್ಚನ್ನು ಹಣವನ್ನು ಪಾವತಿಸದೆ, ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಸತಾಯಿಸುವ ಪ್ರಕರಣವನ್ನು ಗಮನಿಸಬಹುದು. ‘ದುರ್ಘಟನೆಗಳ ಪರಿಷೆ’ ಎಂಬ ಹೆಸರಿನ ಅಧ್ಯಾಯದಲ್ಲಿ ಇದು ನಿರೂಪಿತಗೊಂಡಿದೆ. ಇದು ಶುರುವಾಗುವುದು ಹೀಗೆ:

“ಗೆಳೆಯರೇ, ನಾನೊಂದು ಸ್ವಾರಸ್ಯಕರ ಘಟನೆಯ ಬಗ್ಗೆ ಹೇಳ್ತೀನಿ. ಮಾಮೂಲಿ ಘಟನೆಯಾದರೂ ವಿಚಲಿತಗೊಳಿಸುವಂಥದ್ದು. ಮುಖ್ಯ ಅಪರಾಧ ‘ಹೆಣ್ಣಾಗಿರುವುದು’. ಎರಡನೆಯ ಅಪರಾಧ ‘ಒಂಟಿಯಾದ ಹೆಣ್ಣು’. ಮೂರನೆಯ ಅಪರಾಧ ‘ಏಕಾಂಗಿ ಮತ್ತು ತನ್ನ ರೊಟ್ಟಿಯನ್ನು ತಾನೇ ಗಳಿಸಬಲ್ಲ ಹೆಣ್ಣು’. ಮಹಾ ಅಪರಾಧ ‘ತನ್ನ ರೊಟ್ಟಿಯನ್ನು ಖುದ್ದು ಗಳಿಸಬಲ್ಲ, ಬುದ್ಧಿವಂತೆ, ಸ್ವಾವಲಂಬಿಯಾದ ಈ ಒಂಟಿ ಹೆಣ್ಣುಮಗಳು, ದೇವತೆಗಳು ವಾಸಿಸುವ ಈ ಭಾರತದಲ್ಲಿರುವುದು. ಆದ್ದರಿಂದ ಗೆಳೆಯರೇ, ಮೊಟ್ಟಮೊದಲು ಮೇಲೆ ಉಲ್ಲೇಖಿಸಿದ ನಾಲ್ಕೂ ಅಪರಾಧಗಳನ್ನು ನಾನು ಸ್ವೀಕರಿಸುತ್ತೇನೆ. ಈ ಅಪರಾಧಗಳಲ್ಲದೇ ಇನ್ನೂ ಒಂದು ಅಪರಾಧವಿದೆ ದಯಾಳುಗಳೇ. ಅದು ಇಡೀ ಮಾನವಜಾತಿಗೆ ಅನ್ವಯಿಸುವಂಥದ್ದು. ಮತ್ತದು ಅಪರಾಧಗೈದ ಅಪರಾಧಿಯನ್ನು ಸುಮ್ಮನೆ ಬಿಡುವುದಿಲ್ಲ. ಅಪರಾಧಿಯಾದವ ಯಾರ ಅನುಕಂಪವನ್ನೂ ಬೇಡುವುದಿಲ್ಲ. ಅನುಕಂಪದ ಹಪಹಪಿಯೇ ಇರುವುದಿಲ್ಲ ಅವನಿಗೆ. ಇದಕ್ಕೆ ವ್ಯತಿರಿಕ್ತವಾಗಿ ‘ಅನುಕಂಪ’, ‘ಕರುಣೆ’ಯಂಥ ಜಿಡ್ಡುಲಡ್ಡಾದ ಪೊಳ್ಳುಪದಗಳೆಂದರೆ ಅಪರಾಧಿಗೆ ತಿರಸ್ಕಾರವಿರುತ್ತದೆ. ಆ ಅಪರಾಧಗಳೆಂದರೆ- ತನ್ನ ಷರತ್ತುಗಳ ಮೇಲೆ ಬದುಕುವುದು. ತನ್ನ ಆತ್ಮಗೌರವದಲ್ಲಿ ತಲೆಯೆತ್ತಿ ಬಾಳುವುದು, ಸ್ವಾಭಿಮಾನದಿಂದ ಬಾಳುವುದು ಮತ್ತು ಲೋಕದ ಸಿದ್ಧಮಾದರಿಯ ಮೌಲ್ಯಗಳೊಂದಿಗೆ ರಾಜಿಯಾಗಲು ಅಥವಾ ಯಾವುದೇ ಷರತ್ತನ್ನು ಮನಸ್ಸೊಪ್ಪಿಕೊಳ್ಳದಿದ್ದಾಗ ಯಾವುದಕ್ಕೂ ರಾಜಿ ಮಾಡಿಕೊಳ್ಳದೇ ಇರುವುದು. ಅಂಥ ಅಪರಾಧಿಯನ್ನು ನಟ್ಟನಡುವೆ ನಾಲ್ಕು ದಾರಿ ಕೂಡುವಲ್ಲಿ ನೇಣುಗಂಬಕ್ಕೇರಿಸಬೇಕು ಸ್ನೇಹಿತರೇ”

4. ಸಹಜವಾದ ವಿವರಗಳನ್ನು ದಾರ್ಶನಿಕ ಅರ್ಥದಲ್ಲಿ ದುಡಿಸಿಕೊಳ್ಳುವುದು. ಚಿಕ್ಕಚಿಕ್ಕ ಮನೆ-ಹಾಸ್ಟೆಲುಗಳ ಖೋಲಿಗಳಲ್ಲಿ ಜೀವಿಸುವ ಲೇಖಕಿ ಕೊನೆಗೊಮ್ಮೆ ಇಷ್ಟಪಟ್ಟು ಹಿಡಿದ ಬಾಡಿಗೆ ಮನೆಯನ್ನು ವರ್ಣಿಸುವುದು ಹೀಗೆ:

“ವಿಶಾಲವಾದ ಮನೆ. ವಿಶಾಲವಾದ ಮನೆಯಲ್ಲಿ ಸುಳಿದಾಡುವ ರಾಶಿರಾಶಿ ಗಾಳಿ. ಆ ಮನೆಯಲ್ಲಿ ನಾವು ಆಗಂತುಕರಲ್ಲ. ನಮ್ಮದೇ ಮನೆಯೆಂದು ನುಸುಳುವ ಪೂರ್ತಿ ಬಿಸಿಲನ್ನು ಪೂರ್ತಿ ಬೆಳಕನ್ನು ನಿರುಮ್ಮಳವಾಗಿ ಆಸ್ವಾದಿಸುತ್ತಿದ್ದೆವು. ಪೂರಾ ಮನೆ, ಪೂರಾ ಮಾಳಿಗೆ ಮತ್ತು ಪೂರಾಪೂರಾ ನೀಲಿ ಆಕಾಶ. ಎಲ್ಲವೂ ನಮ್ಮದೇ! ಎದುರು ಚಾಚಿಕೊಂಡ ಹಸಿರು ಸಾಗರ ಮತ್ತು ಗಾಳಿಯಲ್ಲಿ ಮೆಲ್ಲಮೆಲ್ಲನೇ ಕಂಪಿಸುವ ಗಿಡಗಳು. ನಿಧಾನಕ್ಕೆ ಅವುಗಳ ಎತ್ತರ ನಮ್ಮ ಮಾಳಿಗೆಯವರೆಗೆ ಬೆಳೆಯುತ್ತಿತ್ತು. ಜೀವನದಲ್ಲಿ ಮೊದಲ ಬಾರಿ ಇಷ್ಟು ವಿಶಾಲ, ಇಂಥ ನೆಮ್ಮದಿಯ ಮನೆಯಲ್ಲಿದ್ದೆವು. ನಮ್ಮಿಬ್ಬರದೇ ಮನೆ-ಅಪರ್ಣಾ ಮತ್ತು ನನ್ನದು. ದೊಡ್ಡದೊಡ್ಡ ವಿಶಾಲ ಮನೆ ಲಾಹೋರಿನಲ್ಲೂ ಇತ್ತು. ಆದರೆ ಅದು ಅಪ್ಪಾಜಿಯದು. ಅಲ್ಲಿರುವ ಮತ್ತು ಇಲ್ಲದಿರುವ ಎಲ್ಲ ವಸ್ತುವೂ ಅಪ್ಪಾಜಿಯವರ ಇಚ್ಛೆಗನುಗುಣವಾಗಿದ್ದವು. ಈ ಮನೆಯಲ್ಲಿ ಎಲ್ಲವೂ ನಾವು ಸದಾ ಕಾಲ ಬಯಸಿದವೇ ಆಗಿದ್ದವು. ಗಾಳಿ-ಬಿಸಿಲು, ಈ ಜಾಗ, ಸುಂದರ ವಸ್ತುಗಳು, ಸಂಗೀತ, ಪುಸ್ತಕ ಎಲ್ಲವೂ”

ಇದು ಕೇವಲ ಮನೆಯ ವರ್ಣನೆಯಲ್ಲ. ಸೃಜನಶೀಲ ಜೀವವೊಂದು ಸ್ವತಂತ್ರವಾಗಿ ಬದುಕಲು ಬೇಕಾದ ಸಾಮಾಜಿಕ ಆರ್ಥಿಕ ಅವಕಾಶ ಕೂಡ ಎಂಬುದು ಓದುಗರಿಗೆ ಹೊಳೆಯುತ್ತದೆ. ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದಿರುವ ಅಜಿತ್ ಕೌರ್, ಕುವೆಂಪು ಕಾದಂಬರಿಗಳಲ್ಲಿ ಬರುವ ಎಲ್ಲ ಮಹಿಳಾ ಪಾತ್ರಗಳ ಚೈತನ್ಯದ ಪ್ರತೀಕದಂತಿದ್ದಾರೆ. ಕುವೆಂಪು ಗೃಹಿಣಿಯನ್ನು ಕುರಿತು ರಚಿಸಿರುವ ಒಂದು ಪದ್ಯದಲ್ಲಿ ‘ಹೊಸಲಾಚೆಗೆ ನೀ ಹೋದರೆ ಮನೆಯ ಬೆಳಕು ಆರಿಹೋಗುತ್ತದೆ’ ಎಂಬರ್ಥದ ಮಾತುಗಳಿವೆ. ಆದರೆ ಅಜಿತ್ ಕೌರ್, ತನ್ನ ಧೀಮಂತ ಬದುಕನ್ನು ಹೊಸಿಲಾಚೆ ಕಾಲಿಟ್ಟೇ ಕಟ್ಟಿಕೊಂಡವರು. ಪಂಜಾಬಿನ ಲೇಖಕಿಯರ ಆತ್ಮಕಥನಗಳಲ್ಲಿ ಅಲ್ಲಿನ ಪುರುಷಪ್ರಧಾನ ಸಮಾಜದ ತಣ್ಣನೆಯ ಕ್ರೌರ್ಯದ ಚಿತ್ರಗಳು ಸಾಮಾನ್ಯ.

ಅಮೃತಾ ಪ್ರೀತಂ ತಮ್ಮ ಆತ್ಮಕಥೆಗೆ ‘ರೆವಿನ್ಯೂ ಸ್ಟಾಂಪ್’ ಹೆಸರಿಡಲು ಕಾರಣ, ಅವರ ಜೀವನದ ಬಗ್ಗೆ ಕುಶವಂತ್‌ಸಿಂಗರು ಕುಹಕದಿಂದ ಆಡಿದ ಒಂದು ಮಾತು. ಬಹುಶಃ ಯೋಧ ಚಟುವಟಿಕೆ ಪ್ರಧಾನವಾಗಿರುವ ಸಮಾಜಗಳಲ್ಲಿ ಹೆಣ್ಣನ್ನು ಉಪಭೋಗದ ಸರಕಾಗಿ ನೋಡುವ ಗುಣ ದಟ್ಟವಾಗಿರುತ್ತದೆ. ಅದುವೇ ಇಂಥ ಸ್ತ್ರೀಸ್ವಾತಂತ್ರ್ಯವಾದಿಗಳನ್ನು ಕೂಡ ಪತ್ರಿಯಾಗಿ ಹುಟ್ಟಿಸುತ್ತದೆ. ಅಮೃತಾ ಮತ್ತು ಅಜಿತ್ ಇಬ್ಬರೂ, ಪಂಜಾಬಿ ಸಮಾಜದಲ್ಲಿದ್ದ ವಿವಾಹ-ಕುಟುಂಬ-ಪತಿನಿಷ್ಠೆ ಎಂಬ ಉಸಿರುಗಟ್ಟುವ ಸಾಂಪ್ರದಾಯಿಕ ಸಂಸ್ಥೆಗಳು ಕಂಗೆಡುವಂತೆ ಬದುಕಿದವರು. ಲಗ್ನವಾದ ಗಂಡನನ್ನು ಬಿಟ್ಟು ತಮ್ಮ ಜೀವಕ್ಕೆ ಮಿಡಿವ ಸಂಗಾತಿಗಳನ್ನು ಅರಸುತ್ತ ಹೋದವರು. ಆ ಸಂಗಾತಿಗಳ ಜತೆ ಮಾಡಿದ ಬಾಳುವೆಯನ್ನು ದಾಖಲಿಸಿದವರು. ಒಂಟಿ ಮಹಿಳೆಯರಾಗಿದ್ದು ತಮ್ಮ ಮಕ್ಕಳನ್ನು ಬೆಳೆಸಿದವರು.

ಈ ಆತ್ಮಕಥೆಯನ್ನು ದೆಹಲಿ ಕನ್ನಡತಿ ರೇಣುಕಾ ನಿಡಗುಂದಿ ಕನ್ನಡಿಸಿದ್ದಾರೆ. ಈ ಹಿಂದೆ ಅವರು ಅಮೃತಾ ಪ್ರೀತಮರ ನೆನಪುಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದವರು. ಅವರಿಗೆ ಅಮೃತಾ, ಅಜಿತ್ ಕೌರರಂತಹ ಪಂಜಾಬಿ ಲೇಖಕರ ಕುದಿಯುವ ವ್ಯಕ್ತಿತ್ವವನ್ನು, ಅವರ ಕಾವ್ಯಮಯ ಭಾಷೆ ಮತ್ತು ಸಂವೇದನೆ-ಸೂಕ್ಷ್ಮತೆಯನ್ನು ಹಿಡಿದುಕೊಡುವ ಕುಶಲತೆ ದಕ್ಕಿದೆ. ಈ ಕೃತಿ ಮಹಿಳಾ ಸಂವೇದನೆಯ ಕೃತಿಗಳನ್ನು ಪ್ರಕಟಿಸುವುದಕ್ಕೆ ಖ್ಯಾತವಾಗಿರುವ ಅಹರ್ನಿಶಿ ಪ್ರಕಾಶನದಿಂದ ಬಂದಿರುವುದು ಮತ್ತೂ ಔಚಿತ್ಯದಾಯಕವಾಗಿದೆ. ಪಂಜಾಬಿನ ಅಜಿತ್‌ಕೌರ್, ಧಾರವಾಡದ ರೇಣುಕಾ, ತೀರ್ಥಹಳ್ಳಿಯ ಅಕ್ಷತಾ ಇವರಿಗೆ ಕೃತಜ್ಞತೆಗಳು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ


ಇದನ್ನೂ ಓದಿ: ಪುಸ್ತಕ ವಿಮರ್ಶೆ; “ಐ ಕಾಂಟ್ ಬ್ರೀದ್” ಉಸಿರುಗಟ್ಟಿಸುವ ವಾತಾವರಣದ ಸಂಕಟಗಳ ಅನಾವರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...