Homeಮುಖಪುಟಇಬ್ಬರು ಸ್ವಯಂ ಸೇವಕರ ಹತ್ಯೆ: ಮಣಿಪುರ, ದೆಹಲಿಯಲ್ಲಿ ಕುಕಿ-ಝೋ ಮಹಿಳೆಯರಿಂದ ಪ್ರತಿಭಟನೆ

ಇಬ್ಬರು ಸ್ವಯಂ ಸೇವಕರ ಹತ್ಯೆ: ಮಣಿಪುರ, ದೆಹಲಿಯಲ್ಲಿ ಕುಕಿ-ಝೋ ಮಹಿಳೆಯರಿಂದ ಪ್ರತಿಭಟನೆ

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ. ಚುನಾವಣೆ ಬಹಿಷ್ಕರಿಸಲು ನಿರ್ಧಾರ

- Advertisement -
- Advertisement -

ಶನಿವಾರ (ಏ.13) ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕುಕಿ ಸಮುದಾಯದ ಇಬ್ಬರು ‘ಗ್ರಾಮ ಸ್ವಯಂ ಸೇವಕರು’ ಕೊಲ್ಲಲ್ಪಟ್ಟಿದ್ದಾರೆ. ಇದನ್ನು ಖಂಡಿಸಿ ಮಣಿಪುರದ ಚುರಾಚಂದ್‌ಪುರ, ಕಾಂಗ್‌ಪೊಕ್ಪಿ ಜಿಲ್ಲೆಗಳಾದ್ಯಂತ ಮತ್ತು ನವ ದೆಹಲಿಯಲ್ಲಿ ಕುಕಿ-ಝೋ ಸಮುದಾಯದ ಜನರು ಪ್ರತಿಭಟನೆ ನಡೆಸಿದ್ದಾರೆ.

ದೆಹಲಿ ಎನ್‌ಸಿಆರ್‌ನಲ್ಲಿರುವ ಕುಕಿ ವಿದ್ಯಾರ್ಥಿಗಳ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಮಣಿಪುರಕ್ಕೆ ಭೇಟಿ ನೀಡಬೇಕು ಮತ್ತು ಸಂಘರ್ಷವನ್ನು ಶಮನಗೊಳಿಸುವುದಾಗಿ ಭರವಸೆ ನೀಡಬೇಕು ಎಂದು ಆಗ್ರಹಿಸಿದೆ.

ಮಣಿಪುರದಲ್ಲಿ ಏಪ್ರಿಲ್ 19 ಮತ್ತು 26 ರಂದು ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಕ್ಕೂ ಮುನ್ನ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇದು ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರದಲ್ಲಿ ಕುಕಿ-ಝೋ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಜನಾಕ್ರೋಶವಿರುವ ಕಾರಣ ರಾಜಕೀಯ ಪಕ್ಷಗಳು ಬೀದಿಗಿಳಿದು ಚುನಾವಣಾ ಪ್ರಚಾರ ನಡೆಸಲು ಹೆದರುತ್ತಿವೆ. ರಹಸ್ಯ ಮಾರ್ಗಗಳ ಮೂಲಕ ಮತದಾರರನ್ನು ಓಲೈಸುವ ಪ್ರಯತ್ನ ಮಾಡುತ್ತಿವೆ. ಈ ಕಾರಣದಿಂದ ಮಣಿಪುರದಲ್ಲಿ ಈ ಬಾರಿ ಚುನಾವಣೆಯ ಉತ್ಸಾಹ ಕಾಣುತ್ತಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ಒಂದು ಬಾರಿಯೂ ರಾಜ್ಯಕ್ಕೆ ಭೇಟಿ ನೀಡಿಲ್ಲ. ಇದೀಗ ಚುನಾವಣೆ ಬರುವಾಗ ಗೃಹ ಸಚಿವ ಅಮಿತ್ ಶಾ ಅವರು ಪ್ರಚಾರಕ್ಕಾಗಿ ಇಂಫಾಲಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿತ್ತು. ಈ ನಡುವೆ ಹಿಂಸಾಚಾರ ಮತ್ತು ಪ್ರತಿಭಟನೆಗಳು ಭುಗಿಲೆದ್ದಿವೆ.

ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಔಟರ್ ಮಣಿಪುರದ ಮಾಜಿ ಸಂಸದೆ ಕಿಮ್ ಗ್ಯಾಂಗ್ಟೆ ಮತ್ತು ದೆಹಲಿಯ ಕುಕಿ-ಝೋಮಿ ಮಹಿಳಾ ವೇದಿಕೆಯ ಮುಖಂಡರು ಸೇರಿದಂತೆ ಕುಕಿ-ಝೋ ಮಹಿಳೆಯರ ಗುಂಪು ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು “ಗ್ಲೋಬಲ್ ಕುಕಿ-ಝೋಮಿ-ಹ್ಮಾರ್ ಮಹಿಳಾ ಸಮುದಾಯ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

“ಈ ಬಾರಿಯ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ಸಾಂವಿಧಾನಿಕ ಮತ್ತು ಕಾನೂನುಬದ್ಧ ನಮ್ಮ ಹಕ್ಕನ್ನು ಚಲಾಯಿಸುತ್ತಿಲ್ಲ ಎಂದು ಭಾರವಾದ ಮನಸ್ಸಿನಿಂದ ತಿಳಿಸುತ್ತಿದ್ದೇವೆ. ಈ ನಿರ್ಧಾರ ಸುಮ್ಮನೆ ತೆಗೆದುಕೊಂಡಿಲ್ಲ. ಪ್ರಸ್ತುತ ಇರುವ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಿಂದ ನಾವು ನಂಬಿಕೆ ಕಳೆದುಕೊಂಡಿದ್ದೇವೆ ಮತ್ತು ಭ್ರಮನಿರಸನಗೊಂಡಿದ್ದೇವೆ” ಎಂದು ಕುಕಿ-ಝೋಮಿ ಮಹಿಳಾ ವೇದಿಕೆ ಸದಸ್ಯರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಚುರಾಚಂದ್‌ಪುರದ ಮೋಟ್‌ಬಂಗ್ ಪ್ರದೇಶದಲ್ಲಿ ಕುಕಿ-ಝೋ ನಾಗರಿಕ ಸಮಾಜ ಸಂಘಟನೆಗಳು ಮತ್ತು ಬುಡಕಟ್ಟು ಸಂಸ್ಥೆಗಳು ಪ್ರತಿಭಟನಾ ಮೆರವಣಿಗೆ ನಡೆಸಿವೆ. ಅಲ್ಲಿ ಸಾವಿರಾರು ಜನರು ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು, ತಮ್ಮ ಇಬ್ಬರು ಗ್ರಾಮ ಸ್ವಯಂ ಸೇವಕರ ಅಮಾನವೀಯ ಹತ್ಯೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಡಕಟ್ಟು ಏಕತಾ ಸಮಿತಿಯು ಕಾಂಗ್‌ಪೋಕ್ಪಿ ಜಿಲ್ಲೆಯಾದ್ಯಂತ ಒಂದು ದಿನದ ಬಂದ್‌ಗೆ ಕರೆ ನೀಡಿದೆ. ಚುರಾಚಂದ್‌ಪುರದ ಕುಕಿ ವಿದ್ಯಾರ್ಥಿಗಳ ಸಂಘಟನೆ (ಕೆಎಸ್‌ಒ) ಜಿಲ್ಲೆಯ ಡಿಸಿ ಕಚೇರಿ ಎದುರಿನ ಆಟದ ಮೈದಾನದಲ್ಲಿರುವ ‘ಸ್ಮರಣೆಯ ಗೋಡೆ’ (Wall of Remembrance) ಬಳಿ ಮೇಣದಬತ್ತಿ ಹೊತ್ತಸಿ ಆಹೋರಾತ್ರಿ ಪ್ರತಿಭಟನೆ ನಡೆಸಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ, ಕೆಎಸ್‌ಒದ ದೆಹಲಿ ಎನ್‌ಸಿಆರ್ ಘಟಕ ಮತ್ತು ದೆಹಲಿಯ ಕುಕಿ-ಝೋ ಮಹಿಳಾ ವೇದಿಕೆ ಭಾನುವಾರ ಬೆಳಿಗ್ಗೆ ಪ್ರತಿಭಟನೆಯನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ನೂರಾರು ಜನರು ಮಣಿಪುರದ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ‘ಬೀರೆನ್‌ ಸಿಂಗ್ ಬಹು ಜನಾಂಗೀಯ ರಾಜ್ಯವನ್ನು ಮುನ್ನಡೆಸಲು ಅಸಮರ್ಥರು’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ ಡಿಸಿಪಿ ದೇವೇಶ್ ಕುಮಾರ್ ಅವರು, “ಮಣಿಪುರದ ಕೇವಲ 10-15 ಮಂದಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಜಮಾಯಿಸಿದ್ದರು. ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಅವರಿಗೆ ಪೂರ್ವಾನುಮತಿ ಇಲ್ಲದ ಕಾರಣ, ಮೈದಾನದಿಂದ ಹೊರ ಹೋಗಿ ಪ್ರತಿಭಟನೆಗೆ ಅನುಮತಿ ಪಡೆಯುವಂತೆ ಅವರಿಗೆ ತಿಳಿಸಲಾಯಿತು. ಎಲ್ಲಾ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದರು” ಎಂದು ಹೇಳಿದ್ದಾರೆ.

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ನೂರಾರು ಜನರು ಕಪ್ಪು ಬಟ್ಟೆ ಧರಿಸಿ ಕೇಂದ್ರ ಮತ್ತು ಮಣಿಪುರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿರುವುದು ಕಾಣಬಹುದು.

ಒಟ್ಟಿನಲ್ಲಿ, ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಕುಕಿ ಸಮುದಾಯದ ಇಬ್ಬರು ಸ್ವಯಂ ಸೇವಕರನ್ನು ಶನಿವಾರ ಹತ್ಯೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅದನ್ನು ಖಂಡಿಸಿ ಮಣಿಪುರದ ಕಾಂಗ್‌ಪೋಕ್ಪಿ ಮತ್ತು ಚುರಾಚಂದ್‌ಪುರ ಜಿಲ್ಲೆಗಳಲ್ಲಿ ಮತ್ತು ದೆಹಲಿಯಲ್ಲಿ ಪ್ರತಿಭಟನೆಗಳು ನಡೆದಿವೆ. ಆದರೆ, ಈ ವಿಚಾರ ಯಾವುದೇ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿಲ್ಲ.

ಇದನ್ನೂ ಓದಿ : ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಪ್ರಕಟ: ಈಶಾನ್ಯ ದೆಹಲಿಯಿಂದ ಕಣಕ್ಕಿಳಿದ ಕನ್ಹಯ್ಯಾ ಕುಮಾರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...