Homeಮುಖಪುಟಟು ನೇಷನ್‌ ಥಿಯೆರಿ: ಯಾವುದು ’ರಾಷ್ಟ್ರ’? ಯಾರು ’ಪ್ರಜೆ’? - ಪ್ರೊ.ಕೆ.ಫಣಿರಾಜ್

ಟು ನೇಷನ್‌ ಥಿಯೆರಿ: ಯಾವುದು ’ರಾಷ್ಟ್ರ’? ಯಾರು ’ಪ್ರಜೆ’? – ಪ್ರೊ.ಕೆ.ಫಣಿರಾಜ್

ವಿಭಜನೆಯು ವಾಸ್ತವಿಕವಾಗುವುದು ಖಾತ್ರಿಯಾದ ನಂತರವೂ ಭಾರತದ ರಾಜಕೀಯ ಧಾರೆಗಳು ‘ಭಾರತದ ಪ್ರಭುತ್ವ’ವನ್ನು ‘ಎರಡು ರಾಷ್ಟ್ರ’ಗಳ ಸೈದ್ಧಾಂತಿಕ ಮಾದರಿಯಲ್ಲಿ ಕಟ್ಟಲು ನಿರಾಕರಿಸಿದವು;

- Advertisement -
- Advertisement -

ತಾಂತ್ರಿಕವಾಗಿ ನೋಡುವುದಾದರೆ (ಭಾರತೀಯ ಮುಸ್ಲಿಮರನ್ನೂ ಒಳಗೊಂಡು) ಭಾರತದ ನಾಗರಿಕರಿಗೆ ಹೊಸ ಪೌರತ್ವ ಕಾಯ್ದೆ ತಿದ್ದುಪಡಿಯಿಂದ ತೊಂದರೆಯಿಲ್ಲ. ಆದರೆ ಪರಿಣಾಮದಲ್ಲಿ ಏನಾಗಬಹುದು ಎಂಬುದಕ್ಕೆ ಹಲವು ವ್ಯಾಖ್ಯಾನಗಳಿವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಸಾವರ್ಕರ್ ಮತ್ತು ಜಿನ್ನಾರ ಎರಡು ರಾಷ್ಟ್ರ ಸಿದ್ಧಾಂತಗಳನ್ನು ಒಪ್ಪದೇ ಭಾರತದ ಮುಂಚೂಣಿ ನಾಯಕರು ಅಪ್ಪಿಕೊಂಡ ‘ಎಲ್ಲರ ಭಾರತ’ ತಾತ್ವಿಕತೆಗೆ ಈ ತಿದ್ದುಪಡಿ ಕೊಡಲಿಪೆಟ್ಟು ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ಚಿಂತಕ ಪ್ರೊ.ಕೆ.ಫಣಿರಾಜ್ ಅವರು ‘ಎರಡು ರಾಷ್ಟ್ರ ಸಿದ್ಧಾಂತ’ವನ್ನಷ್ಟೇ ಅಲ್ಲದೇ ಗಾಂಧಿ, ಟ್ಯಾಗೋರ್ ಮತ್ತು ಅಂಬೇಡ್ಕರರ ಚಿಂತನೆಯ ನೆಲೆಯಲ್ಲಿ ತಮ್ಮ ವಿಶ್ಲೇಷಣೆಯನ್ನು ಮುಂದಿಟ್ಟಿದ್ದಾರೆ.

“ಹಿಂದು ಮತ್ತು ಇಸ್ಲಾಂ ಒಂದಕ್ಕೊಂದು ವಿರುದ್ಧವಾದ ಸಂಹಿತೆ-ಸಂಸ್ಕೃತಿಗಳನ್ನು ಹೊಂದಿರುವ ಮತಗಳು ಎಂಬ ವಿಚಾರದ ವಿರುದ್ಧ ನನ್ನ ಇಡಿ ಆತ್ಮವು ಬಂಡೇಳುತ್ತದೆ. ಅಂತಹ ವಿಚಾರವನ್ನು ಒಪ್ಪಿದೆನಾದರೆ, ನಾನು ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಂತೆಯೇ ಸರಿ.” (ಮೋಹನದಾಸ ಕರಮಚಂದ್ ಗಾಂಧಿ, 1940ರಲ್ಲಿ ನಡೆಯುತ್ತಿದ್ದ ‘ಎರಡು ರಾಷ್ಟ್ರ’ ಗಳ ಸೈದ್ಧಾಂತಿಕ ಚರ್ಚೆಗೆ ಪ್ರತಿಕ್ರಿಯೆ)

“ರಾಷ್ಟ್ರ ಪ್ರೇಮವು ನಮಗೆ ಕ್ಷೇಮವೆಂದು ಅನಿಸುತ್ತಿಲ್ಲ. ಕೊನೆಗೂ ನಾನು ಆಶ್ರಯಿಸುವುದು ಮನುಷ್ಯರಿಗೆ ಹಿತವನ್ನುಂಟು ಮಾಡುವ ವಿಚಾರಗಳನ್ನು” (ರಬೀಂದ್ರನಾಥ ಠಾಕೂರ್, 1908ರಲ್ಲಿ ಅಬ್ಲಾ ಬೋಸ್ ಅವರು, ಸ್ವದೇಶಿ ಚಳವಳಿಯ ಬಗ್ಗೆ ರಬೀಂದ್ರರು ಉತ್ಸಾಹ ಕಳೆದುಕೊಂಡಿರುವುದನ್ನು ಪ್ರಶ್ನಿಸಿ ಬರೆದ ಪತ್ರಕ್ಕೆ ಕೊಟ್ಟ ಉತ್ತರದಲ್ಲಿ)

ರಾಜಕೀಯವನ್ನು ಬಲ್ಲ ಜನ “ಭಾರತದ ಜನರು” ಎಂಬ ಕಲ್ಪನೆಯನ್ನು ಅಸಡ್ಡೆಯಿಂದ ಕಂಡು,”ಭಾರತ ರಾಷ್ಟ್ರ”ದ ಬಗ್ಗೆ ಒಲವು ತೋರುತ್ತಿದ್ದ ದಿನಗಳು ನನಗಿನ್ನು ನೆನಪಿದೆ. ನನ್ನ ಪ್ರಕಾರ ನಾವು ಒಂದು ರಾಷ್ಟ್ರವಾಗಿದ್ದೇವೆ ಎನ್ನುವುದೇ ಒಂದು ಭ್ರಮೆ. ಜನ ಸಾವಿರಾರು ಜಾತಿಗಳಾಗಿ ಒಡೆದುಹೋಗಿರುವಾಗ ನಾವು ಒಂದು ರಾಷ್ಟ್ರವಾಗಲು ಹೇಗೆ ಸಾಧ್ಯ? ಸಾಮಾಜಿಕವಾಗಿ ಹಾಗು ಮಾನಸಿಕವಾಗಿ ನಾವಿನ್ನೂ ಒಂದು ರಾಷ್ಟ್ರವಾಗಿಲ್ಲ ಎಂದು ಎಷ್ಟು ಬೇಗ ಅರಿಯುತ್ತೇವೆಯೋ ಅಷ್ಟು ನಮಗೆ ಕ್ಷೇಮ… ಜಾತಿಯು ರಾಷ್ಟ್ರ ವಿರೋಧಿ. ಜಾತಿಯು ಸಾಮಾಜಿಕ ಬದುಕನ್ನು ಪ್ರತ್ಯೇಕಿಸುತ್ತದೆ, ಜಾತಿ ಜಾತಿಗಳ ನಡುವೆ ದ್ವೇಷಸೂಯೆಗಳನ್ನು ಬಿತ್ತುತ್ತದೆ ಎಂಬ ಕಾರಣಕ್ಕಾಗಿ ರಾಷ್ಟ್ರ ವಿರೋಧಿ. ನೈಜ ರಾಷ್ಟ್ರವಾಗಲು ನಾವು ಇದನ್ನೂ ಮೀರಲೇಬೇಕು. ರಾಷ್ಟ್ರವಿದ್ದಾಗ ಮಾತ್ರವೇ ಸಹೋದರತ್ವವು ಸಾಕಾರವಾಗುವುದು. ಸಹೋದರತ್ವ ಇರದೇ ಹೋದಲ್ಲಿ ಸ್ವಾತಂತ್ರ್ಯ, ಸಮಾನತೆಗಳು ತೋರಿಕೆಯ ಬಣ್ಣಗಳಷ್ಟೇ ಆಗಿರುತ್ತವೆ. (ಡಾ.ಬಿ.ಆರ್.ಅಂಬೇಡ್ಕರ್,ನವೆಂಬರ್ 25, 1949ರಂದು ಕಾನ್‍ಸ್ಟಿಟ್ಯುಯೆಂಟ್ ಅಸೆಂಬ್ಲಿಯಲ್ಲಿ ಮಾಡಿದ ಕೊನೆಯ ಭಾಷಣದಲ್ಲಿ)

1923ರಲ್ಲಿ ಪ್ರಕಟವಾಗಿ, 1950ರಲ್ಲಿ ಭಾರತದ ಗಣರಾಜ್ಯದ ಸಂವಿಧಾನವನ್ನು ಅಂಗೀಕರಿಸುವಲ್ಲಿಗೆ ಮುಗಿದುಹೋಗಿದೆ ಎಂದುಕೊಂಡಿದ್ದ ‘ಎರಡು ರಾಷ್ಟ್ರ’ಗಳ ಸಿದ್ಧಾಂತವು, ’ಪೌರತ್ವ (ತಿದ್ದುಪಡಿ) ಕಾಯ್ದೆ’ಯ ಕುರಿತ ಪರ-ವಿರೋಧಗಳ ಈ ಹೊತ್ತಲ್ಲಿ, ಹೊಸ ರೂಪದಲ್ಲಿ ಪ್ರಕಟವಾಗಿದೆ. 1923ರಲ್ಲಿ ವಿ.ಡಿ.ಸಾವರ್ಕರ್ ತಮ್ಮ ‘ಹಿಂದುತ್ವ: ಯಾರು ಹಿಂದು ಆಗಿರುವರು? (ಹಿಂದುತ್ವ: ಹೂ ಇಸ್ ಎ ಹಿಂದು?)’ ಎಂಬ ಕಿರು ಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ‘ಮತಾಧಾರಿತ ರಾಷ್ಟ್ರ’ದ ಪರಿಕಲ್ಪನೆಗೆ ಖಚಿತ ಆಕಾರ ಒದಗಿಸಿದರು. “ಯಾರು ಸಿಂಧು ನದಿಯ ತಟದಿಂದ ಸಾಗರದ ಅಂಚಿನವರೆಗೆ ಹಬ್ಬಿರುವ ವಿಶಾಲ ಭರತವರ್ಷವನ್ನು ತನ್ನ ಪಿತೃಭೂಮಿ ಹಾಗು ತನ್ನ ಮತದ ತೊಟ್ಟಿಲಾಗಿರುವ ಪವಿತ್ರಭೂಮಿ ಎಂದು ಮನ್ನಿಸುವರೋ, ಅವರೇ ಹಿಂದು” ಎಂಬ ನಿಖರ ಉದ್ಘೋಷ ಹೊಂದಿರುವ ಈ ಪ್ರಕಟಣೆಯಲ್ಲಿ, ‘(ಈ ಬಗೆಯಲ್ಲಿ) ಹಿಂದುಗಳಲ್ಲದವರು, ಹಿಂದುಗಳಿಗೆ ಅಡಿಯಾಳಾಗಿ, ಎರಡನೇ ದರ್ಜೆಯ ಸ್ಥಾನಮಾನ ಒಪ್ಪಿಕೊಂಡು ಬದುಕಬೇಕು’ ಎಂದೂ, ‘ಹಿಂದುತ್ವವು ಹಿಂದು ಮತಾಚರಣೆಗಳಿಗಿಂತ ಭಿನ್ನವಾದ ವಿಚಾರ’ ವೆಂದೂ ನಿರೂಪಿಸಲಾಗಿದೆ.

1925ರಲ್ಲಿ ‘ರಾಷ್ಟ್ರೀಯ ಸ್ವಯಂಸೇವಕ ಸಂಘ’ವು (ಆರ್.ಎಸ್.ಎಸ್.) ಸ್ಥಾಪನೆಯಾಗಿ, ತನ್ನನ್ನು ವಿ.ಡಿ.ಸಾವರ್ಕರರ ‘ಹಿಂದು ಮಹಾಸಭಾ’ದ ಜೊತೆ ನೇರ ಸಂಬಂಧವಿರದ ಸಂಘಟನೆ ಎಂದು ಗುರುತಿಸಿಕೊಂಡರೂ, ‘ರಾಷ್ಟ್ರ ಎಂದರೇನು?’ ಎಂಬ ಕಣ್ಣೋಟಕ್ಕೆ ಸಾವರ್ಕರರ ‘ಹಿಂದುತ್ವ ವಾದ’ವನ್ನೇ ಆಧಾರವಾಗಿಟ್ಟುಕೊಂಡಿತು. ಇದನ್ನು ಹೆಚ್ಚು ಸುಸ್ಪಷ್ಟಗೊಳಿಸಲು, ಆರ್.ಎಸ್.ಎಸ್.ನ ಸೈದ್ಧಾಂತಿಕ ಗುರುವೆಂದು ಮನ್ನಣೆ ಪಡೆದಿರುವ ಎಂ.ಎಸ್. ಗೋಲ್ವಾಲ್ಕರ್ ‘ನಾವು ಅಥವ ನಮ್ಮ ರಾಷ್ಟ್ರೀಯತೆಯ ಖಚಿತಾರ್ಥನಿರೂಪಣೆ (ವಿ ಆರ್ ಅವರ್ ನೇಷನ್‍ಹುಡ್ ಡಿಫೈನ್ಡ್)’ ಎಂಬ ಕೃತಿಯನ್ನು 1937ರಲ್ಲಿ ರಚಿಸಿ, 1939ರಲ್ಲಿ ಪ್ರಕಟಿಸಿದರು. ಗೋಲ್ವಾಲ್ಕರ್ ಸಾವರ್ಕರರ ಮೂಲ ಸಿದ್ಧಾಂತವನ್ನು ಮನ್ನಿಸಿಯೂ ಅದಕ್ಕೊಂದು ತಿರುವು ಕೊಟ್ಟರು; ಅದೇನೆಂದರೆ: ’ಹಿಂದು ರಾಷ್ಟ್ರ’ ವಿಚಾರವು ಬರಿ ಪ್ರಭುತ್ವ ಸ್ಥಾಪನೆಗೆ ಸಾಧನವಾಗುವ ಸಂಗತಿಯಾಗಿರದೇ, ‘ಆರ್ಯಾ ಸಂಸ್ಕೃತಿ’ಯ ಪ್ರಾಚೀನ ಆಸ್ಮಿತೆಯನ್ನು ಹೊಂದಿರುವ ಉತ್ಕೃಷ್ಟ ನಾಗರಿಕತೆಯನ್ನು ಗುರುತಿಸಿ, ಸಾಮಾಜಿಕ ಜೀವನವನ್ನು ನಿಯಂತ್ರಿಸುವ ಯಜಮಾನ ಸ್ವರೂಪದ ‘ಸಾಂಸ್ಕೃತಿಕ ರಾಷ್ಟ್ರೀಯತೆ’ಯಾಗಿದೆ. ಈ ನಿರೂಪಣೆಯ ಮೂಲಕ ಗೋಲ್ವಾಲ್ಕರ್ ಆರ್ಯಾ ಜನಾಂಗದ ವಿಶ್ವ ಸರ್ವಾಧಿಕಾರವನ್ನು ಘೋಷಿಸಿದ ‘ನಾಝಿವಾದ’ವನ್ನು ಮಾದರಿಯಾಗಿಯೂ ಎತ್ತಿ ಹಿಡಿದರು. ಗೋಲ್ವಾಲ್ಕರ್ ನಮೂನೆಯ ರಾಷ್ಟ್ರೀಯ ವಾದಕ್ಕೆ ಕಾಂಗ್ರೆಸ್ಸಿನಲ್ಲೂ ಬೆಂಬಲಿಗರಿದ್ದರೂ (ಕಾಂಗ್ರೆಸ್ಸಿಗರಾಗಿದ್ದು ’ಲೋಕ ನಾಯಕ’ ಎಂಬ ಖ್ಯಾತಿ ಹೊಂದಿದ್ದ ಆಣೆಯವರು ಗೋಲ್ವಾಲ್ಕರರ ಕೃತಿಗೆ ಸುದೀರ್ಘ ಮುನ್ನುಡಿ ಬರೆದಿರುವರು), ಅಂದಿನ ಕಾಂಗ್ರೆಸ್ಸಿನಲ್ಲಿ ಬಹಳ ಪ್ರಭಾವಿಯಾಗಿದ್ದ ‘ಭೌಗೋಳಿಕ ರಾಷ್ಟ್ರವಾದ’ದ ಮುಂದಾಳತ್ವವನ್ನು ನಿರಾಕರಿಸುವ ಸ್ಥಿತಿ ಇರಲಿಲ್ಲ.

1928ರಲ್ಲಿ ದೇಶಿಯ ಪ್ರಾತಿನಿಧಿಕ ಸರಕಾರ ರಚನೆಗೆ ಅವಶ್ಯಕವಾಗಿದ್ದ ಒಂದು ಕರಡು ಸಂವಿಧಾನವನ್ನು ಮೋತಿಲಾಲ್ ನೆಹರು ಅವರ ಆಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಆ ಸಂವಿಧಾನವು, ಸ್ಪಷ್ಟವಾಗಿ ‘ಭೌಗೋಳಿಕ ರಾಷ್ಟ್ರೀಯತೆ’ಯ ಪರಿಕಲ್ಪನೆಯ ಆಧಾರದಲ್ಲಿ, ಪಶ್ಚಿಮದ ದೇಶಗಳಲ್ಲಿ ಆಗಲೇ ಆಚರಣೆಯಲ್ಲಿ ಇದ್ದ ‘ಪ್ರಜಾಪ್ರಭುತ್ವ ಸಂವಿಧಾನ’ವಾಗಿತ್ತು. ಆ ಸಂವಿಧಾನವು, ಬ್ರಿಟಿಷ್ ವಸಾಹತುಶಾಹಿಯ ಆಡಳಿತದ ಅಡಿ ಇದ್ದ, ಬಲೂಚಿಸ್ಥಾನದಿಂದ ಪೂರ್ವ ಬಂಗಾಳದ ವರೆಗೆ ಹಾಗು ಹಿಮಾಲಯದಿಂದ ದಕ್ಷಿಣ ಸಾಗರದ ಅಂಚಿನವರೆಗೆ ಇದ್ದ ಅಖಂಡ ಭೂಪ್ರದೇಶವನ್ನು ‘ರಾಷ್ಟ್ರ’ವೆಂದು ಕಂಡುಕೊಂಡಿತ್ತು; ಈ ಭೂಪ್ರದೇಶದಲ್ಲಿ ಬದುಕಿರುವ ಪ್ರತಿಯೊಬ್ಬ ಮನುಷ್ಯನೂ ಜಾತಿ, ಮತ, ಲಿಂಗ, ಪ್ರದೇಶ, ಜನಾಂಗಗಳ ತರತಮವಿಲ್ಲದೇ, ಸಮಾನ ಹಕ್ಕು ಉಳ್ಳ ‘ಪೌರ’ನಾಗಿರುತ್ತಾಳೆ ಎಂದು ಖಚಿತವಾಗಿ ನಿರೂಪಿಸಿತ್ತು. ಆ ಬಗೆಯ ‘ರಾಷ್ಟ್ರೀಯತೆ ಹಾಗು ಪೌರತ್ವ’ದ ಕಲ್ಪನೆಯನ್ನು ಗೋಲ್ವಾಲ್ಕರ್ ತಮ್ಮ ‘ಹಿಂದು ರಾಷ್ಟ್ರ’ ನಿರೂಪಣೆಯಲ್ಲಿ ಖಂಡಿತವಾಗಿ ಅಯೋಗ್ಯವೆಂದು ನಿರಾಕರಿಸಿದ್ದರು. ಆದರೆ, ವಸಾಹತುಶಾಹಿ ವಿರೋಧಿ ಚಳುವಳಿಯಲ್ಲಿ ನೇರ ಭಾಗಿಯಾಗಿದ್ದ ಬಹುತೇಕ ವೈಚಾರಿಕ ತೊರೆಗಳಿಗೆ ‘ಭೌಗೋಳಿಕ ರಾಷ್ಟ್ರೀಯತೆ’ ಹಾಗು ‘ತಾರತಮ್ಯವಿಲ್ಲದ ಸಮಾನ ಪೌರತ್ವ ಹಕ್ಕಿನ ಪ್ರಜಾಪ್ರಭುತ್ವ ಸಂವಿಧಾನ’ ಆಧರಿತ ‘ರಾಷ್ಟ್ರ’ ಸ್ಥಾಪನೆಯ ಕುರಿತು ಸಹಮತವಿತ್ತು. ಹಾಗಾಗಿ, 1935ರ ಪ್ರಾದೇಶಿಕ ಸರಕಾರ ರಚನೆಗಾಗಿ ನಡೆದ ಚುನಾವಣೆಗಳ ರಾಜಕೀಯ ಪ್ರಚಾರವೂ, ಈ ರಾಷ್ಟ್ರ ವಿಚಾರಗಳ ಆಧಾರದಲ್ಲಿಯೇ ನಡೆಯಿತು.

ಈ ಚುನಾವಣೆ ಹಾಗು ಅದರ ಫಲಿತಾಂಶಗಳ ನಂತರದಲ್ಲಿ, ಮಹಮ್ಮದಾಲಿ ಜಿನ್ಹಾ ನೇತೃತ್ವದ ‘ಮುಸ್ಲಿಮ್ ಲೀಗ್’ಗೆ, ಕಾಂಗ್ರೆಸ್ಸಿನಲ್ಲಿ ‘ಹಿಂದು ಮತೀಯರ ಯಜಮಾನಿಕೆ’ ಇದ್ದು, ಹೊಸ ಪ್ರಭುತ್ವದಲ್ಲಿ ಮುಸ್ಲಿಮರಿಗೆ ಸಮಾನ ಪ್ರತಿನಿಧೀಕರಣ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ ಎಂಬ ಅಸಂತೃಪ್ತಿ ಹುಟ್ಟಿತ್ತು. ಅದರ ಪರಿಣಾಮವಾಗಿ, ಮುಸ್ಲಿಮರು ಬಹುಮತೀಯರಾಗಿದ್ದ ಪ್ರದೇಶಗಳಿಗೆ ಸ್ವಾಯತ್ತ ಅಧಿಕಾರ ವ್ಯವಸ್ಥೆಯ ಅಹವಾಲುಗಳನ್ನು ಮುಂದಿಡಲಾಯಿತು. ಈ ಪ್ರತಿನಿಧೀಕರಣದ ವಾಗ್ವಾದವೇ ಮುಂದುವರೆದು, ಜಿನ್ಹಾ 1940ರಲ್ಲಿ ತಮ್ಮ, ಮತವು ರಾಷ್ಟ್ರದ ಆಸ್ಮಿತೆಯಾಗಿದ್ದು, ಇಸ್ಲಾಮ್ ಮತಕ್ಕೆ ಪ್ರತ್ಯೇಕ ರಾಷ್ಟ್ರೀಯ ಆಸ್ಮಿತೆ ಇದೆ ಮತ್ತೂ ಅದು ಹಿಂದು ಮತ ಆಸ್ಮಿತೆಯ ರಾಷ್ಟ್ರಕ್ಕಿಂತ ಭಿನ್ನವಾಗಿದೆ, ಎಂಬ ‘ಎರಡು ರಾಷ್ಟ್ರ’ಗಳ ಸಿದ್ಧಾಂತವನ್ನು ಮುಂದಿಟ್ಟರು. ಇದು, ಬ್ರಿಟಿಷರಿಗೆ ವಸಾಹತುಶಾಹಿ ಆಳ್ವಿಕೆಯ ನಂತರವೂ, ದಕ್ಷಿಣ ಏಶಿಯಾ ರಾಜಕೀಯದಲ್ಲಿ ಒಂದು ನಿಯಂತ್ರಣ ಸೂತ್ರ ಸಿಕ್ಕಂತೆ ಭಾವಿಸಿ, ದೇಶ ವಿಭಜನೆಯ ಚಟುವಟಿಕೆಗಳಲ್ಲಿ ಕೊನೆಗೊಂಡಿತು ಎನ್ನುವುದು ಸರಿ; ಆದರೆ, ವಿಭಜನೆಯು ವಾಸ್ತವಿಕವಾಗುವುದು ಖಾತ್ರಿಯಾದ ನಂತರವೂ ಭಾರತದ ರಾಜಕೀಯ ಧಾರೆಗಳು ‘ಭಾರತದ ಪ್ರಭುತ್ವ’ವನ್ನು ‘ಎರಡು ರಾಷ್ಟ್ರ’ಗಳ ಸೈದ್ಧಾಂತಿಕ ಮಾದರಿಯಲ್ಲಿ ಕಟ್ಟಲು ನಿರಾಕರಿಸಿದವು; ಆ ಕಾರಣವಾಗಿ ಭಾರತದ ಪ್ರಭುತ್ವವು ‘ಸಮಾನ ಪೌರತ್ವ ಹಕ್ಕಿನ ಪ್ರಜಾಪ್ರಭುತ್ವ ಸಂವಿಧಾನ’ ಆಧಾರಿತ ರಾಷ್ಟ್ರವಾಗಿ ಕಟ್ಟಲಾಯಿತು; ಸ್ವತಂತ್ರ ‘ಗಣರಾಜ್ಯ ವ್ಯವಸ್ಥೆ’ಯ ಭಾರತದ ಸಂವಿಧಾನ ರಚನೆಯು, ಸ್ಪಷ್ಟವಾಗಿ ‘ಎರಡು ರಾಷ್ಟ್ರ’ ಸಿದ್ಧಾಂತವನ್ನೂ, ‘ಹಿಂದುತ್ವ ರಾಷ್ಟ್ರ’ದ ಪರಿಕಲ್ಪನೆಯನ್ನೂ ನಿರಾಕರಿಸಿತು. ಇಂತಾಗಿ, 1955ರ ಪೌರತ್ವ ಕಾಯ್ದೆಯು, ಭಾರತ ಸಂವಿಧಾನದ ‘ಸಮಾನ ಹಕ್ಕಿನ ಪೌರತ್ವ’ ತತ್ವದ ಆಧಾರದಲ್ಲಿ ನಿರೂಪಿತವಾಯಿತು.

ಇಲ್ಲಿಗೆ, ‘ರಾಷ್ಟ್ರ ಮತ್ತು ಪೌರತ್ವ’ ಕಲ್ಪನೆಯ ಸೈದ್ಧಾಂತಿ ವಾಗ್ವಾದಗಳು ಅಂತ್ಯಗೊಂಡವು ಎಂದು ಭಾವಿಸಿದ್ದೇ ಸ್ವತಂತ್ರೋತ್ತರ ಭಾರತದ ರಾಜಕೀಯ ಪ್ರಮಾದ. ತನ್ನ ಪ್ರಭಾವನ್ನು ಸ್ಥಾಪಿಸಲಾಗದ ‘ಹಿಂದುತ್ವ ರಾಷ್ಟ್ರ’ ವಾದವು ಸುಮ್ಮನೆ ಕೂಡದೆ ‘ರಾಷ್ಟ್ರ’ದ ಸ್ವರೂಪವನ್ನು ಬದಲಾಯಿಸುವ ರಾಜಕೀಯದಲ್ಲಿ ಸಕ್ರಿಯವಾಗಿ ಮುಂದುವರೆಯಿತು; ಹಾಗೆಯೇ, ಸ್ಥಾಪಿತವಾದ ‘ಸಂವಿಧಾನಬದ್ಧ ಭೌಗೋಳಿಕ ರಾಷ್ಟ್ರ’ವು ಸಶಕ್ತವಾಗಲು, ಒಳಗೊಳಗೇ ಉಳಿಸಿರುವ ಅನೇಕ ವೈಚಾರಿಕತೆಗಳನ್ನು ಸಂವಿಧಾನಿಕ ಆಚರಣೆಗಳಲ್ಲಿ ಗಟ್ಟಿಯಾಗಿ ಹೆಣೆಯುವ ರಾಜಕೀಯವು ನಡೆಯಲೇ ಇಲ್ಲ. ಈ ಸನ್ನಿವೇಶದಲ್ಲಿ, ‘ರಾಷ್ಟ್ರ’ದ ಕುರಿತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನಿರೂಪಿತವಾದ ಮೂರು ವೈಚಾರಿಕತೆಗಳನ್ನು ನಾವು ಪುನಃ ಮನನ ಮಾಡಿಕೊಳ್ಳಬೇಕಿದೆ.

(1) ಅಂಬೇಡ್ಕರರು ಸತತವಾಗಿ ಎತ್ತಿ ಹೇಳುತ್ತಿದ್ದ ಸಹೋದರತ್ವವು ಸಹಜ ಮನೋಭಾವವಾಗಿರುವ ಸಾಮಾಜಿಕ ಪ್ರಜಾಪ್ರಭುತ್ವವನ್ನು ಸಾಕಾರಗೊಳಿಸುವ ರಾಜಕಾರಣ. ಅದಕ್ಕೆ ಮುಖ್ಯವಾಗಿ ಬೇಕಾಗಿರುವುದು, ಅಧಿಕಾರಹೀನರಿಗೆ ಸಮಾಜ ಹಾಗು ಪ್ರಭುತ್ವದ ಎಲ್ಲ ವಲಯಗಳಲ್ಲಿ ಸಮಾನ ಪ್ರತಿನಿಧೀಕರಣ ಹಕ್ಕು ಮತ್ತು ಅದನ್ನು ಖಚಿತಗೊಳಿಸುವ ಸಂವಿಧಾನಿಕ ವ್ಯವಸ್ಥೆ.

(2) ಗಾಂಧೀಜಿಗೆ ‘ರಾಷ್ಟ್ರ’ಕ್ಕಿಂತ ‘ಪ್ರಜಾ ಸಮೂಹ’ವು ಮುಖ್ಯವಾಗಿತ್ತು. ಅವರಿಗೆ ಭಾರತದಲ್ಲಿ ಪರಂಪರಾನುಗತವಾಗಿ ಮತಗಳು ಒಂದನ್ನೊಂದು ಅರಿತು ಸಹಬಾಳ್ವೆ ನಡೆಸುವ ಸ್ಫೂರ್ತಿಯನ್ನು ತಮ್ಮ ಮತದ ಅಂತರಂಗದ ಆಧ್ಯಾತ್ಮದಿಂದ ಪಡೆದು ‘ಪ್ರಜಾ ಸಮೂಹ’ವಾಗಿರುವುದು, ಮಹಾನ್ ನಾಗರಿಕತೆಯ ಲಕ್ಷಣವಾಗಿ ಕಂಡಿತು. ಆ ನಾಗರಿಕತೆಯನ್ನು ಜತನದಿಂದ ಕಾಪಾಡುವ ಸಾಮಾಜಿಕ ರಾಜಕೀಯವಾದ ‘ಸ್ವರಾಜ್ಯ’ವನ್ನು ಅವರು ಪ್ರತಿಪಾದಿಸುತ್ತಿದ್ದರು.

(3) ರಬೀಂದ್ರನಾಥ ಠಾಕೂರ್, ‘ರಾಷ್ಟ್ರ’ವನ್ನು ಸಂಪೂರ್ಣವಾಗಿ ನಿರಾಕರಿಸಿ, ವಿಶ್ವಾತ್ಮಕವಾದ ಸಹೋದರ ಸಾಮಾಜಿಕ ಮನೋಭಾವವನ್ನು ರೂಢಿಸಿಕೊಳ್ಳುವುದಕ್ಕೆ ಒತ್ತು ಕೊಡುತ್ತಿದ್ದರು. ಆ ವಿಶ್ವಾತ್ಮಕತೆಗೆ ಪೂರಕವಾದ ದೇಶಿ ಸಾಮಾಜಿಕ ಜೀವನಮೌಲ್ಯಗಳನ್ನು ಹೆಣೆಯುವ ಬಗ್ಗೆ ಅವರ ಆಲೋಚನೆ ಇತ್ತು. ಅವರಿಗೆ ‘ರಾಷ್ಟ್ರ’ವೆಂಬುದು ಭೂಗಡಿ (ಮೃಣ್ಮಯ)ಯಾಗುವುದು ಸಮ್ಮತವಿರಲಿಲ್ಲ; ಅದು ವಿಶ್ವ ಮೌಲ್ಯಗಳನ್ನು ಆಚರಿಸುವ ಭಾವ (ಚಿನ್ಮಯ)ವಾಗಬೇಕು ಎಂಬ ಆದರ್ಶವಿತ್ತು.

ಈ ಮೂರು ಕಲ್ಪನೆಗಳನ್ನು ಪ್ರಾಯೋಗಿಕ ಆಚರಣೆಯ ರಾಜಕೀಯವನ್ನಾಗಿಸುವ ಸವಾಲು ಸ್ವೀಕರಿಸದೇ, ‘ಹಿಂದುತ್ವ ರಾಷ್ಟ್ರ’ವಾದವನ್ನು ಎದುರಿಸುವುದು ಕಠಿಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಕ್ಕಳಿಗೆ ಆರ್‌ಎಸ್‌ಎಸ್‌ ತರಬೇತಿ ನೀಡುವುದನ್ನು ಟೀಕಿಸಿ ವಿಡಿಯೋ ಹಂಚಿಕೆ : ಯುವಕನನ್ನು ವಶಕ್ಕೆ ಪಡೆದ ಪೊಲೀಸರು!

ರಾಜಸ್ಥಾನದ ಜುಂಜುನು ಜಿಲ್ಲೆಯ ನವೀನ್ ಚೌಧರಿ ಎಂಬ 25 ವರ್ಷದ ಯುವಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಕುರಿತು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. 'ಜುಂಜುನು ಎಕ್ಸ್‌ಪ್ರೆಸ್' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ...

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...