Homeಮುಖಪುಟಸಾಮಾಜಿಕ ಕಾರ್ಯಕರ್ತರ ಮೊಬೈಲ್ ಹ್ಯಾಕಿಂಗ್‌ಗೆ ಪುಣೆ ಪೊಲೀಸರ ತಳಕು

ಸಾಮಾಜಿಕ ಕಾರ್ಯಕರ್ತರ ಮೊಬೈಲ್ ಹ್ಯಾಕಿಂಗ್‌ಗೆ ಪುಣೆ ಪೊಲೀಸರ ತಳಕು

- Advertisement -
- Advertisement -

ಜಗತ್ತಿನಾದ್ಯಂತ ಪ್ರತಿಭಟನಾಕಾರರು ಮತ್ತು ಭಿನ್ನಮತವಿರುವ ಸರಕಾರ ವಿರೋಧಿ ಕಾರ್ಯಕರ್ತರನ್ನು ಪತ್ತೆಹಚ್ಚಲು, ರಾಜಕೀಯ ವಿರೋಧಿಗಳ ಗುಟ್ಟನ್ನು ಬಹಿರಂಗಪಡಿಸಲು ಪೊಲೀಸರು ಹ್ಯಾಕಿಂಗ್ ಟೂಲ್‌ಗಳನ್ನು ಹೆಚ್ಚುಹೆಚ್ಚಾಗಿ ಬಳಸುತ್ತಿದ್ದಾರೆ. ಅದರ ಭಾಗವಾಗಿ ಸಾಮಾಜಿಕ ಕಾರ್ಯಕರ್ತರ ಕಂಪ್ಯೂಟರ್ ಮತ್ತು ಫೋನ್‌ಗಳನ್ನು ಗುರಿ ಮಾಡುತ್ತಾರೆ.

ಆದರೆ, ಭಾರತದಲ್ಲಿ ಕಾನೂನು ಆನುಷ್ಟಾನ ಸಂಸ್ಥೆಗಳು ಇದೇ ಸಾಧನಗಳನ್ನು ಬಳಸಿ ಒಂದು ಹ್ಯಾಕಿಂಗ್ ಅಭಿಯಾನ ನಡೆಸಿರುವ ಬಗ್ಗೆ ಹೊಸ ಸುಳಿವುಗಳು ಸಿಕ್ಕಿದ್ದು, ಇದು ಒಂದು ಹೆಜ್ಜೆ ಮುಂದೆ ಹೋಗಿದೆ; ತಾವು ಗುರಿಯಾಗಿಸಿಕೊಂಡವರ ಕಂಪ್ಯೂಟರ್‌ಗಳಲ್ಲಿ ಸುಳ್ಳು ಸಾಕ್ಷ್ಯಗಳಿರುವ ಫೈಲುಗಳನ್ನು ತುರುಕಿಸಿ, ಅವುಗಳ ಆಧಾರದಲ್ಲಿ ಅಂತವರನ್ನು ಬಂಧಿಸಿ, ಜೈಲಿಗೆ ತಳ್ಳುವ ಪ್ರಜಾಪ್ರಭುತ್ವ ವಿರೋಧಿ ಅಪಾಯಕಾರಿ ಅಭಿಯಾನವಿದು.

2018ರಲ್ಲಿ ಅಜ್ಞಾತ ಹ್ಯಾಕರ್‌ಗಳು- ಭಯೋತ್ಪಾದನೆಯ ಆರೋಪದಲ್ಲಿ ಪುಣೆಯಲ್ಲಿ ಬಂಧಿತರಾದ ಕನಿಷ್ಟ ಇಬ್ಬರು ಸಾಮಾಜಿಕ ಕಾರ್ಯಕರ್ತರ ಕಂಪ್ಯೂಟರುಗಳಲ್ಲಿ ಸಿದ್ಧಪಡಿಸಿದ ಇಂತಹ ಸುಳ್ಳು ಸಾಕ್ಷ್ಯಗಳನ್ನು ತುರುಕಿಸಿದ್ದರು ಎಂದು ಒಂದು ವರ್ಷಕ್ಕೂ ಮೊದಲು ಫೊರೆನ್ಸಿಕ್ ತಜ್ಞರು ಬಹಿರಂಗಪಡಿಸಿದ್ದರು. ಇವರಿನ್ನೂ ಜೈಲಿನಲ್ಲಿಯೇ ಇದ್ದಾರೆ. ಜೊತೆಗೆ ಇದೇ ಸುಳ್ಳು ಸಾಕ್ಷ್ಯಗಳ ಆಧಾರದಲ್ಲಿ ಬಂಧಿತರಾದ ಇನ್ನೂ 13 ಮಂದಿಯಲ್ಲಿ 12 ಮಂದಿ ಜೈಲಿನಲ್ಲಿದ್ದು, ಭಯೋತ್ಪಾದನೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಭದ್ರತಾ ಸಂಸ್ಥೆಯಾಗಿರುವ ’ಸೆಂಟಿನೆಲ್ ಒನ್’, ಲಾಭರಹಿತ ಸಂಸ್ಥೆ ’ಸಿಟಿಜನ್ ಲ್ಯಾಬ್’ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಸಂಶೋಧಕರು ಈಗ ಈ ಸುಳ್ಳು ಸಾಕ್ಷ್ಯ ಸೃಷ್ಟಿಗೆ ಹಾಗೂ ಕಳೆದೊಂದು ದಶಕದಿಂದ ನೂರಾರು ವ್ಯಕ್ತಿಗಳನ್ನು ಗುರಿಮಾಡಿದ ಬೃಹತ್ ಹ್ಯಾಕಿಂಗ್ ಕಾರ್ಯಾಚರಣೆಗೆ ಸಂಬಂಧ ಇರುವುದನ್ನು ಕಂಡುಕೊಂಡಿದ್ದಾರೆ. ಈ ಹ್ಯಾಕರ್‌ಗಳು ಫಿಶಿಂಗ್ ಇ-ಮೇಲ್‌ಗಳನ್ನು (phishing emails) ಬಳಸಿ, ಗುರಿಪಡಿಸಲಾದ ಕಂಪ್ಯೂಟರುಗಳಲ್ಲಿ ಸ್ಪೈವೇರ್‌ಗಳನ್ನು ಸೇರಿಸಿದ್ದಾರೆ ಮತ್ತು ಇಸ್ರೇಲಿನ ಹ್ಯಾಕಿಂಗ್ ಗುತ್ತಿಗೆ ಸಂಸ್ಥೆಯಾದ ಎನ್‌ಎಸ್‌ಓ ಗ್ರೂಪಿನ ಸ್ಮಾರ್ಟ್‌ಫೋನ್ ಹ್ಯಾಕಿಂಗ್ ಟೂಲ್‌ಗಳನ್ನು ಬಳಸಿದ್ದಾರೆ.

ಆದರೆ, ಇದೀಗಷ್ಟೇ ’ಸೆಂಟಿನೆಲ್ ಒನ್’ನ ಸಂಶೋಧಕರು ಈ ಹ್ಯಾಕರ್‌ಗಳು ಮತ್ತು ಸುಳ್ಳು ಸಾಕ್ಷ್ಯಗಳ ಆಧಾರದಲ್ಲಿ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ಪುಣೆ ಪೊಲೀಸರ ನಡುವೆ ಸಂಬಂಧ ಇರುವುದನ್ನು ಬಹಿರಂಗಪಡಿಸಿದ್ದಾರೆ. “ಈ ಆಸಾಮಿಗಳು ಭಯೋತ್ಪಾದಕರನ್ನು ಬೆಂಬತ್ತಿ ಹೋಗುತ್ತಿಲ್ಲ. ಬದಲಾಗಿ ಮಾನವ ಹಕ್ಕುಗಳ ಸಂರಕ್ಷಕರು ಮತ್ತು ಪತ್ರಕರ್ತರನ್ನು ಬೆನ್ನುಹತ್ತಿ ಹೋಗುತ್ತಿದ್ದಾರೆ. ಇದು ಸರಿಯಲ್ಲ” ಎಂದು ಇ-ಮೇಲ್ ಸೇವೆ ಒದಗಿಸುವ ಸಂಸ್ಥೆಯೊಂದರ ನೌಕರರೊಬ್ಬರು, ’ಮಾಡಿಫೈಡ್ ಎಲಿಫೆಂಟ್’ ಎಂಬ ಹ್ಯಾಕಿಂಗ್ ಅಭಿಯಾನದ ಜೊತೆಗೆ ಪೊಲೀಸರ ಸಂಬಂಧದ ಸಾಕ್ಷ್ಯಗಳನ್ನು ಹಂಚಿಕೊಳ್ಳುತ್ತಾ ಹೇಳಿದ್ದಾರೆ.

“ಈ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿದ ವ್ಯಕ್ತಿಗಳು ಮತ್ತು ಅವರ ಕಂಪ್ಯೂಟರುಗಳಲ್ಲಿ ಸುಳ್ಳು ಸಾಕ್ಷ್ಯಗಳನ್ನು ಸೇರಿಸಿದವರ ನಡುವಿನ ಸಂಬಂಧದ ಬಗ್ಗೆ ಸಾಬೀತುಪಡಿಸಬಹುದಾದ ಪುರಾವೆಗಳಿವೆ” ಎಂದು ’ಸೆಂಟಿನೆಲ್ ಒನ್’ನ ಭದ್ರತಾ ಸಂಶೋಧಕ ಜುವಾನ್ ಆಂದ್ರೆಸ್ ಗೆರೆರೋ-ಸಾಡೆ ಹೇಳಿದ್ದು, ಅವರು ಮತ್ತು ಸಹ ಸಂಶೋಧಕ ಟಾಮ್ ಹೆಗೆಲ್ ಅವರು ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ’ರೆಡ್ ಹ್ಯಾಟ್’ ಭದ್ರತಾ ಸಮಾವೇಶದಲ್ಲಿ ತಮ್ಮ ಸಂಶೋಧನೆಯನ್ನು ಮಂಡಿಸಲಿದ್ದಾರೆ. “ಇದು ನೈತಿಕತೆಯಲ್ಲಿ ರಾಜಿಯನ್ನು ಮೀರಿದ್ದಾಗಿದೆ. ಇದು ಅಸಡ್ಡೆಯನ್ನು ಮೀರಿದ್ದಾಗಿದೆ. ಆದುದರಿಂದಲೇ ನಾವು ಈ ಬಲಿಪಶುಗಳಾಗಿರುವವರಿಗೆ ನೆರವಾಗುವ ಆಶಯದಿಂದ ಆದಷ್ಟು ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ಬಹಳ ಕಾಲದಿಂದ ನಡೆಸಲಾಗುತ್ತಿರುವ ’ಮಾಡಿಫೈಡ್ ಎಲಿಫೆಂಟ್’ ಎಂದು ಕರೆಯಲಾಗುವ ಹ್ಯಾಕಿಂಗ್ ಅಭಿಯಾನದೊಂದಿಗೆ ಪುಣೆ ನಗರ ಪೊಲೀಸರನ್ನು ಬೆಸೆಯುವುದನ್ನು ’ಸೆಂಟಿನೆಲ್ ಒನ್’ ಸಂಸ್ಥೆಯ ಹೊಸ ಸಂಶೋಧನೆಗಳು ಬಹಿರಂಗಪಡಿಸಿವೆ. ಈ ಅಭಿಯಾನವು ಮುಖ್ಯವಾಗಿ ಮಾನವಹಕ್ಕು ಹೋರಾಟಗಾರರಾದ ರೋಣ ವಿಲ್ಸನ್ ಮತ್ತು ಕ್ರಾಂತಿಕಾರಿ ಕವಿ ವರವರ ರಾವ್ ಅವರನ್ನು ಗುರಿಮಾಡಿದ್ದವು ಎಂದು ಅವು ಹೇಳುತ್ತವೆ. ಇವರಿಬ್ಬರನ್ನು ಭೀಮಾ ಕೋರೆಗಾಂವ್ 16 ಎಂದು ಕರೆಯಲಾಗಿರುವ ಗುಂಪಿನ ಭಾಗವೆಂದು 2018ರಲ್ಲಿ ಬಂಧಿಸಲಾಗಿತ್ತು. ಭೀಮಾ ಕೋರೆಗಾಂವ್‌ನಲ್ಲಿ ಆ ವರ್ಷ ಹಿಂದುತ್ವ ಸಂಘಟನೆಗಳು ದಲಿತರ ಮೇಲೆ ವ್ಯವಸ್ಥಿತ ದಾಳಿ ನಡೆಸಿ ಗಲಭೆ ಎಬ್ಬಿಸಿದ್ದವು.

ಬಂಧಿತರಲ್ಲಿ ಒಬ್ಬರಾಗಿದ್ದ 84ರ ಹರೆಯದ ಜೇಸುಯಿಟ್ ಪಾದ್ರಿ ಸ್ಟ್ಯಾನ್ ಸ್ವಾಮಿ ಅವರು ಕೋವಿಡ್ ಸೋಂಕಿನಿಂದ ಕಳೆದ ವರ್ಷ ಜೈಲಿನಲ್ಲಿಯೇ ಮರಣಹೊಂದಿದ್ದರು. 81 ವರ್ಷಗಳ ವರವರ ರಾವ್ ಅವರನ್ನು ತೀವ್ರ ಅನಾರೋಗ್ಯದ ಕಾರಣದಿಂದ ವೈದ್ಯಕೀಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದು, ಆದು ಮುಂದಿನ ತಿಂಗಳು ಕೊನೆಗೊಳ್ಳುತ್ತದೆ. ಉಳಿದ 14 ಮಂದಿಯಲ್ಲಿ ಸುಧಾ ಭಾರದ್ವಾಜ್ ಅವರಿಗೆ ಮಾತ್ರ ಜಾಮೀನು ನೀಡಲಾಗಿದೆ.

ಕಳೆದ ವರ್ಷದ ಆರಂಭದಲ್ಲಿ ’ಆರ್ಸೆನಲ್ ಕನ್ಸಲ್ಟಿಂಗ್’ ಎಂಬ ಡಿಜಿಟಲ್ ಫೊರೆನ್ಸಿಕ್ ಸಂಸ್ಥೆ ಆರೋಪಿಗಳ ಪರವಾಗಿ ವಿಲ್ಸನ್ ಮತ್ತು ಇನ್ನೊಬ್ಬ ಮಾನವಹಕ್ಕುಗಳ ವಕೀಲ ಸುರೇಂದ್ರ ಗಾಡ್ಲಿಂಗ್ ಅವರ ಲ್ಯಾಪ್‌ಟಾಪ್‌ಗಳ ದತ್ತಾಂಶಗಳ ವಿಶ್ಲೇಷಣೆ ನಡೆಸಿತ್ತು. ಎರಡರಲ್ಲೂ ಸುಳ್ಳು ಸಾಕ್ಷ್ಯಗಳನ್ನು ಉತ್ಪಾದಿಸಿ ಸೇರಿಸಲಾಗಿದೆ ಎಂಬ ಸ್ಪಷ್ಟ ಸಾಕ್ಷ್ಯಗಳು ಆರ್ಸೆನಲ್ ವಿಶ್ಲೇಷಕರಿಗೆ ಸಿಕ್ಕಿದ್ದವು.

ವಿಲ್ಸನ್ ಅವರ ಪ್ರಕರಣದಲ್ಲಿ ’ನೆಟ್‌ವೈರ್’ ಎಂದು ಕರೆಯಲಾಗುವ ಮಾಲ್‌ವೇರ್ ಮೂಲಕ ಕಂಪ್ಯೂಟರಿನ ಹಾರ್ಡ್‌ಡ್ರೈವಿಗೆ 32 ಫೈಲುಗಳನ್ನು ಸೇರಿಸಲಾಗಿತ್ತು. ಅವುಗಳಲ್ಲಿದ್ದ ಒಂದು ನಕಲಿ ಪತ್ರದಲ್ಲಿ ವಿಲ್ಸನ್ ಅವರು ನಿಷೇಧಿತ ನಕ್ಸಲ್ ಗುಂಪೊಂದರ ಜೊತೆ ಸೇರಿ ಪ್ರಧಾನಿ ನರೇಂದ್ರ ಮೋದಿಯ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ಕಾಣುವಂತೆ ಮಾಡಲಾಗಿತ್ತು. ವಾಸ್ತವದಲ್ಲಿ ಈ ಪತ್ರವನ್ನು ಮೈಕ್ರೋಸಾಫ್ಟ್ ವರ್ಡ್‌ನ ಒಂದು ಆವೃತ್ತಿಯಲ್ಲಿ ಬರೆಯಲಾಗಿದ್ದು, ವಿಲ್ಸನ್ ಎಂದೂ ಆ ಆವೃತ್ತಿಯನ್ನು ಡೌನ್ಲೋಡ್ ಮಾಡಿರಲಿಲ್ಲ. ವಿಲ್ಸನ್ ಅವರು ವರವರ ರಾವ್ ಅವರ ಅಕೌಂಟಿನಿಂದ ಬಂದ ಇ-ಮೇಲ್ ಒಂದನ್ನು ತೆರೆದಾಗ ’ನೆಟ್‌ವೈರ್’ ಮಾಲ್‌ವೇರನ್ನು ಇನ್‌ಸ್ಟಾಲ್ ಮಾಡಲಾಗಿತ್ತು ಮತ್ತು ಅದಕ್ಕೆ ಮೊದಲೇ ಅದೇ ಹ್ಯಾಕರ್‌ಗಳು ವರವರ ರಾವ್ ಅವರ ಆ ಇ-ಮೇಲನ್ನು ಹ್ಯಾಕ್ ಮಾಡಿದ್ದರು ಎಂದು ’ಆರ್ಸೆನಲ್’ ಕಂಡುಕೊಡಿತ್ತು.

“ಇದು ಸಾಕ್ಷ್ಯ ತಿರುಚುವುದಕ್ಕೆ ಸಂಬಂಧಪಟ್ಟಂತೆ ’ಆರ್ಸೆನೆಲ್’ ಕಂಡ ಅತ್ಯಂತ ಗಂಭೀರ ಪ್ರಕರಣಗಳಲ್ಲಿ ಒಂದು” ಎಂದು ’ಆರ್ಸೆನಲ್’ನ ಅಧ್ಯಕ್ಷ ಮಾರ್ಕ್ ಸ್ಪೆನ್ಸರ್ ಅವರು ಭಾರತೀಯ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದರು.

ಫೆಬ್ರವರಿಯಲ್ಲಿ ’ಸೆಂಟಿನೆಲ್ ಒನ್’ ಸಂಸ್ಥೆಯು ’ಮಾಡಿಫೈಡ್ ಎಲಿಫೆಂಟ್’ ಕುರಿತ ವಿವರವಾದ ವರದಿಯನ್ನು ಪ್ರಕಟಿಸಿತ್ತು. ’ಆರ್ಸೆನಲ್’ ಕಂಡುಹಿಡಿದ ಸುಳ್ಳು ಸಾಕ್ಷ್ಯ ಸೃಷ್ಟಿಯ ಎರಡು ಪ್ರಕರಣಗಳು ಇನ್ನೂ ವಿಸ್ತಾರವಾದ ಅಭಿಯಾನವೊಂದರ ಭಾಗ ಎಂದು ಅದರಲ್ಲಿ ಬಳಸಲಾದ ಮಾಲ್‌ವೇರ್ ಮತ್ತು ಸರ್ವರ್ ಇನ್‌ಫ್ರಾಸ್ಟ್ರಕ್ಚರನ್ನು ವಿಶ್ಲೇಷಿಸಿ ’ಸೆಂಟಿನೆಲ್ ಒನ್’ ತನ್ನ ವರದಿಯಲ್ಲಿ ಹೇಳಿತ್ತು. ಅದರ ಪ್ರಕಾರ, ಹ್ಯಾಕರ್‌ಗಳು ನೂರಾರು ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಣ ಕ್ಷೇತ್ರದವರು ಮತ್ತು ವಕೀಲರನ್ನು 2012ರಿಂದಲೇ ಗುರಿ ಮಾಡಿದ್ದರು.

ಆದರೆ, ಅಲ್ಲಿಗೇ ಈ ವಿಷಯವನ್ನು ನಿಲ್ಲಿಸಿದ ’ಸೆಂಟಿನೆಲ್ ಒನ್’, ಈ ’ಮಾಡಿಫೈಡ್ ಎಲಿಫೆಂಟ್’ ಹ್ಯಾಕಿಂಗ್ ಅಭಿಯಾನದ ಹಿಂದೆ ಇರುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಹೆಸರಿಸಲು ಹಿಂಜರಿದಿತ್ತಾದರೂ, ಈ ಹ್ಯಾಕಿಂಗ್ ಚಟುವಟಿಕೆಗಳು ಸರಕಾರಿ ಹಿತಾಸಕ್ತಿಗಳ ಜೊತೆ ಸಂಬಂಧ ಹೊಂದಿವೆ ಎಂದು ಹೇಳಿತ್ತು.

ಇದೀಗ, ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿ, ಈ ಗುಂಪಿನ ಸಂಬಂಧವನ್ನು ಬೆಟ್ಟುಮಾಡಿದ್ದಾರೆ. ಇ-ಮೇಲ್ ಸೇವಾ ಸಂಸ್ಥೆಯೊಂದರ ಭದ್ರತಾ ವಿಶ್ಲೇಷಕರೊಬ್ಬರ ಜೊತೆಗೆ ಕೆಲಸ ಮಾಡಿರುವ ಸಂಶೋಧಕರು, ಮೂವರು ಸಂತ್ರಸ್ತರ ಇ-ಮೇಲ್ ಖಾತೆಗಳನ್ನು 2017-18ರಲ್ಲಿಯೇ ಹ್ಯಾಕ್ ಮಾಡಿ, ಒಂದು ರಿಕವರಿ ಇ-ಮೇಲ್ ಎಡ್ರೆಸ್ ಮತ್ತು ಫೋನ್ ನಂಬರನ್ನು ಸೇರಿಸಲಾಗಿತ್ತು ಎಂದು ಕಂಡುಕೊಂಡಿದ್ದಾರೆ. ವಿಲ್ಸನ್, ವರವರ ರಾವ್ ಮತ್ತು ದಿಲ್ಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು ಅವರ ಇ-ಮೇಲ್ ಖಾತೆಗಳಿಗೆ ಸೇರಿಸಲಾದ ರಿಕವರಿ ಖಾತೆ ಮತ್ತು ಫೋನ್ ನಂಬರುಗಳು- ಒಂದು ವೇಳೆ ಅವರು ಪಾಸ್‌ವರ್ಡ್ ಬದಲಿಸಿದರೆ, ಮತ್ತೆ ಸುಲಭದಲ್ಲಿ ಆ ಖಾತೆಗಳಿಗೆ ಪ್ರವೇಶಪಡೆದು, ನಿಯಂತ್ರಿಸುವ ಉದ್ದೇಶ ಹೊಂದಿತ್ತು. ಸಂಶೋಧಕರಿಗೆ ಅಚ್ಚರಿ ತಂದ ಒಂದು ವಿಷಯವೆಂದರೆ, ಈ ಮೂರೂ ರಿಕವರಿ ಅಕೌಂಟುಗಳಲ್ಲಿ, ಭೀಮಾ ಕೋರೆಗಾಂವ್ 16 ಪ್ರಕರಣದಲ್ಲಿ ಭಾಗಿಯಾಗಿದ್ದ ಪುಣೆಯ ಪೊಲೀಸ್ ಅಧಿಕಾರಿಯೊಬ್ಬರ ಪೂರ್ಣ ಹೆಸರಿದ್ದದ್ದು.

ಈ ಮೂರೂ ರಿಕವರಿ ಖಾತೆಗಳು ಪರಸ್ಪರ ಮತ್ತು ನೇರವಾಗಿ ಪುಣೆ ಪೊಲೀಸರಿಗೆ ಸಂಬಂಧ ಕಲ್ಪಿಸುವ ಹಾಗೂ ಪುಣೆ ಪೊಲೀಸರು ಮತ್ತು ’ಮಾಡಿಫೈಡ್ ಎಲಿಫೆಂಟ್’ಗೆ ಸಂಬಂಧ ಕಲ್ಪಿಸುವ ಇಲೆಕ್ಟ್ರಾನಿಕ್ ಹೆಜ್ಜೆ ಗುರುತುಗಳನ್ನು ಬಿಟ್ಟಿವೆ. ಈ ಮೂರೂ ರಿಕವರಿ ಖಾತೆಗಳನ್ನು ಈಗಾಗಲೇ ’ಸೆಂಟಿನೆಲ್ ಒನ್’ ಮತ್ತು ಅಮ್ನೆಸ್ಟಿ
ಇಂಟರ್‌ನ್ಯಾಷನಲ್ ಈಗಾಗಲೇ ಗುರುತಿಸಿರುವ ’ಮಾಡಿಫೈಡ್ ಎಲಿಫೆಂಟ್’ ಜಾಲಕ್ಕೆ ಸೇರಿದ ಐಪಿ ಅಡ್ರೆಸ್‌ನಿಂದ ತೆರೆಯಲಾಗುತ್ತಿತ್ತು ಎಂದು ಈ ಇ-ಮೇಲ್ ಸೇವೆ ಒದಗಿಸುವ ಸಂಸ್ಥೆಯು ಕಂಡುಕೊಂಡಿದೆ.

ವಿಲ್ಸನ್ ಪ್ರಕರಣದಲ್ಲಿ, ಇ-ಮೇಲ್ ಸಂಸ್ಥೆಯ ಭದ್ರತಾ ವಿಶ್ಲೇಷಕರ ಪ್ರಕಾರ, ಅವರಿಗೆ ಏಪ್ರಿಲ್ 2018ರಲ್ಲಿ ಒಂದು ಫಿಶಿಂಗ್ ಇ-ಮೇಲ್ ಬಂದಿತ್ತು. ಆ ಮೂಲಕ ಅವರ ಖಾತೆಯನ್ನು ಹ್ಯಾಕ್ ಮಾಡಿದ ಹೊತ್ತಿನಲ್ಲೇ ಪುಣೆ ನಗರ ಪೊಲೀಸರಿಗೆ ಸಂಬಂಧ ಇರುವ ರಿಕವರಿ ಅಕೌಂಟ್ ಮತ್ತು ಫೋನ್ ನಂಬರ್ ಸೇರಿಸಲಾಗಿತ್ತು. ಆ ಬಳಿಕ ವಿಲ್ಸನ್ ಅವರ ಖಾತೆಯು ತನ್ನಿಂದ ತಾನೇ- ಅವರ ಬಂಧನವಾಗುವುದಕ್ಕೆ ಎರಡು ತಿಂಗಳುಗಳ ಮೊದಲೇ- ಉಳಿದ ಬಂಧಿತ ಗುರಿಗಳಿಗೆ ಫಿಶಿಂಗ್ ಇ-ಮೇಲ್‌ಗಳನ್ನು ಕಳಿಸಲು ಆರಂಭಿಸಿತ್ತು.

“ನಾವು ಸಾಮಾನ್ಯವಾಗಿ ಜನರಿಗೆ ಅವರನ್ನು ಗುರಿ ಮಾಡಿದವರು ಯಾರೆಂದು ಹೇಳುವುದಿಲ್ಲ. ಆದರೆ, ನನಗೆ ಇಷ್ಟೊಂದು ಕೊಳಕು ಕೆಲಸ ನೋಡಿ ಸಾಕಾಗಿಹೋಗಿದೆ” ಎಂದು ತನ್ನನ್ನು ಗುರುತಿಸಿಕೊಳ್ಳದ ಇ-ಮೇಲ್ ಸಂಸ್ಥೆಯ ಭದ್ರತಾ ವಿಶ್ಲೇಷಕರು ’ವಯರ್ಡ್’ಗೆ ತಿಳಿಸಿದ್ದಾರೆ.

ಹ್ಯಾಕ್ ಮಾಡಲಾದ ಖಾತೆಗಳು, ರಿಕವರಿ ಖಾತೆಗಳು ಮತ್ತು ಫೋನ್ ನಂಬರುಗಳು ಮತ್ತು ಪುಣೆ ನಗರ ಪೊಲೀಸರಿಗೆ ಇರುವ ಸಂಬಂಧವನ್ನು ಇನ್ನಷ್ಟು ಖಾತರಿಪಡಿಸಲು ’ವಯರ್ಡ್’, ಕೆನಡಾದ ಟೊರೊಂಟೊ ವಿಶ್ವವಿದ್ಯಾಲಯದ ’ಸಿಟಿಜನ್ಸ್ ಲ್ಯಾಬ್’ನ ಭದ್ರತಾ ಸಂಶೋಧಕ ಜಾನ್ ಸ್ಕಾಟ್-ರೈಲ್ಟನ್ ಅವರನ್ನು ಸಂಪರ್ಕಿಸಿತು. ಅವರು, ಹ್ಯಾಕ್ ಮಾಡಲು ಇಸ್ರೇಲಿನ ಪೆಗಸಸ್ ಹ್ಯಾಕಿಂಗ್ ಟೂಲ್ ಬಳಸಲಾಗಿದೆ ಎಂದು ಮೊದಲೇ ಬಹಿರಂಗಪಡಿಸಿದ್ದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಜೊತೆಸೇರಿದ್ದವರು.

ಹ್ಯಾಕ್ ಮಾಡಲಾದ ಖಾತೆಗಳಿಗೆ ಜೋಡಿಸಲಾದ ರಿಕವರಿ ಖಾತೆಗಳು ಮತ್ತು ಫೋನ್ ನಂಬರುಗಳು ಪುಣೆ ನಗರ ಪೊಲೀಸರಿಗೆ ಸಂಬಂಧಿಸಿದ ವ್ಯಕ್ತಿಗೆ ಸೇರಿದವು ಎಂದು ಸಾಬೀತು ಮಾಡಲು ಸ್ಕಾಟ್-ರೈಲ್ಟನ್ ಅವರು ಭಾರತೀಯ ಮೊಬೈಲ್ ಫೋನ್ ಮತ್ತು ಇ-ಮೇಲ್‌ಗಳ ಓಪನ್ ಸೋರ್ಸ್ ಡೇಟಾಬೇಸನ್ನು ಜಾಲಾಡಿದಾಗ, ಈ ಖಾತೆಗಳು, ಮತ್ತು ಫೋನ್ ನಂಬರ್ [email protected] ಎಂದು ಕೊನೆಗೊಳ್ಳುವ ಖಾತೆಗೆ ಸಂಬಂಧಿಸಿದವುಗಳೆಂದು ತಿಳಿಯಿತು. ಇದನ್ನು ಪುಣೆ ನಗರ ಪೊಲೀಸರ ಇತರ ಇ-ಮೇಲ್ ಖಾತೆಗಳಿಗೂ ಬಳಸಲಾಗುತ್ತದೆ ಮತ್ತು ಈ ಇ-ಮೇಲ್ ಖಾತೆಗಳು ಅಲ್ಲಿನ ನಿರ್ದಿಷ್ಟ ಪೊಲೀಸ್ ಅಧಿಕಾರಿಗೆ ಸೇರಿದ್ದು ಎಂದೂ ಗೊತ್ತಾಯಿತು.

ಜೊತೆಗೆ ಜೀಶನ್ ಅಜೀಜ್ ಎಂಬ ಸ್ವತಂತ್ರ ಭದ್ರತಾ ಸಂಶೋಧಕರು ಈ ರಿಕವರಿ ಇ-ಮೇಲ್ ಖಾತೆಗಳಿಗೆ ಜೋಡಿಸಿದ ಫೋನ್ ನಂಬರ್- ಕಾಲ್ ಐಡಿ ಗುರುತಿಸಿ, ಬ್ಲಾಕ್ ಮಾಡುವ- ’ಟ್ರೂಕಾಲರ್’ ಡೇಟಾಬೇಸಿನಲ್ಲಿ ಲಿಂಕ್ ಹೊಂದಿರುವುದನ್ನು ಪತ್ತೆಹಚ್ಚಿದರು. ನಂತರ ಭಾರತದ ಉದ್ಯೋಗ ವಿನಿಮಯ ವೆಬ್‌ಸೈಟ್ iimjobs.comನ ಸೋರಿಕೆಯಾದ ಡೇಟಾಬೇಸ್‌ನಿಂದ ಈ ಅಧಿಕಾರಿಯ ಹೆಸರಿನೊಂದಿಗೆ ಫೋನ್ ನಂಬರಿನ ಲಿಂಕ್ ಕಂಡುಹಿಡಿದರು.

ಕೊನೆಗೆ ಈ ಅಧಿಕಾರಿಯ ಹೆಸರಿನ ರಿಕವರಿ ಫೋನ್ ನಂಬರ್- ಪುಣೆ ನಗರ ಪೊಲೀಸರು ಸೇರಿದಂತೆ ಭಾರತೀಯ ಪೊಲೀಸರ ಹಲವಾರು ಹಳೆಯ ಆರ್ಕೈವ್ ಮಾಡಲಾದ ವೆಬ್ ಡಿರೆಕ್ಟರಿಗಳಲ್ಲಿ ಇರುವುದನ್ನೂ ಅಜೀಜ್ ಪತ್ತೆ ಮಾಡಿದರು.

ಸ್ಕಾಟ್-ರೈಲ್ಟನ್ ಇನ್ನೂ ಮುಂದುವರಿದು, ಈ ರಿಕವರಿ ಫೋನ್ ನಂಬರಿಗೆ ಸಂಬಂಧಿಸಿದ ವಾಟ್ಸ್‌ಆಪ್ ಖಾತೆಯ ಪ್ರೊಫೈಲ್ ಫೋಟೋದಲ್ಲಿ ಈ ಆಧಿಕಾರಿಯ ಸೆಲ್ಫಿ ಇರುವುದನ್ನು ಪತ್ತೆ ಮಾಡಿದರು. ಈ ಚಿತ್ರವು ವರವರ ರಾವ್ ಅವರ ಬಂಧನದ ವೇಳೆ ಪೊಲೀಸ್ ಮಾಧ್ಯಮ ಗೋಷ್ಠಿಯಲ್ಲಿ ಇದ್ದ ಅಧಿಕಾರಿಯ ಚಿತ್ರದೊಂದಿಗೆ ತಾಳೆಯಾಗಿದೆ.

ಭೀಮಾ ಕೋರೆಗಾಂವ್ 16 ಪ್ರಕರಣದ ಹಲವು ಬಂಧಿತರ ಪರ ವಕೀಲರಾಗಿರುವ ಮುಂಬಯಿಯ ಮಿಹಿರ್ ದೇಸಾಯಿ, ಈ ಹೊಸ ಸಾಕ್ಷ್ಯಗಳನ್ನು ಸ್ವತಂತ್ರವಾಗಿ ಕಲೆ ಹಾಕಬೇಕಾಗಬಹುದಾದರೂ, ಮೇಲ್ನೋಟಕ್ಕೆ ಇದು ಪುಣೆ ಪೊಲೀಸರ ವಿರುದ್ಧ ಬಲವಾದ ಸಾಕ್ಷ್ಯ ಒದಗಿಸುವಂತಿದೆ ಎಂದು ಹೇಳಿದ್ದಾರೆ. ಇದರಿಂದ ಆನಂದ ತೇಲ್ದುಂಬ್ಡೆ ಸೇರಿದಂತೆ ತನ್ನ ಕಕ್ಷಿದಾರರಿಗೆ ತುಂಬಾ ಅನುಕೂಲವಾಗಬಹುದು ಎಂದೂ ಅವರು ಹೇಳಿದ್ದಾರೆ.

“ಸುಳ್ಳು ಸಾಕ್ಷ್ಯಗಳನ್ನು ಸೃಷ್ಟಿಸಲಾಗಿದೆ ಎಂದು ನಮಗೆ ಹಿಂದೆಯೇ ಗೊತ್ತಿತ್ತು. ಆದರೆ, ನಾವದನ್ನು ಮಾಡಿಯೇ ಇಲ್ಲವೆಂದು ಪೊಲೀಸರು ಹೇಳಲು ಸಾಧ್ಯವಿತ್ತು. ಈಗ ಪೊಲೀಸರು ಇದನ್ನು ಮಾಡಿದ್ದಾರೆ ಎಂದರೆ, ಈ ಆರೋಪಿಗಳನ್ನು ಬಂಧಿಸಲು ಯೋಜಿತ ಸಂಚು ಇತ್ತು ಎಂದಾಗುತ್ತದೆ. ಸಾಕ್ಷ್ಯಗಳು ಸುಳ್ಳು ಎಂದು ಗೊತ್ತಿದ್ದರೂ, ಪೊಲೀಸರು ಬೇಕೆಂದೇ ಈ ಕ್ರೂರ ಕೃತ್ಯ ಮಾಡಿದ್ದಾರೆಂದು ಸಾಬೀತಾಗುತ್ತದೆ” ಎಂದು ದೇಸಾಯಿ ಹೇಳಿದ್ದಾರೆ.

“ಈ ಸಾಮಾಜಿಕ ಕಾರ್ಯಕರ್ತರ ಬಂಧನವು- ಕಾನೂನುಪಾಲಕರ ಕೈಯಲ್ಲಿ ಹ್ಯಾಕಿಂಗ್ ಟೂಲ್‌ಗಳು ಭಾರತದಂತಹ ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಎಂತಹ ಅಪಾಯಕಾರಿ ಎಂದು ತೋರಿಸಿಕೊಡುತ್ತದೆ. ಕಂಪ್ಯೂಟರಿನಿಂದ ತೆಗೆಯಲಾದ ಸಾಕ್ಷ್ಯಗಳ ಸಿಂಧುತ್ವವೇ ಪ್ರಶ್ನಾರ್ಹವಾಗುತ್ತದೆ” ಎಂದು ’ಸೆಂಟಿನೆಲ್ ಒನ್’ ಸಂಶೋಧಕ ಗೆರೆರೊ-ಸಾಡೆ ವಾದಿಸುತ್ತಾರೆ.

ಹಲವಾರು ದೊಡ್ಡ ಪ್ರಶ್ನೆಗಳಿಗಿಂತಲೂ ಹೆಚ್ಚಾಗಿ ಸಂಶೋಧಕ ಗೆರೆರೊ-ಸಾಡೆ ಮತ್ತು ಅವರ ಸಹಸಂಶೋಧಕ ಟಾಮ್ ಹೆಗೆಲ್ ಅವರು ಭೀಮಾ ಕೋರೆಗಾಂವ್ ಆರೋಪಿಗಳಿಗೆ ನ್ಯಾಯ ಒದಗಿಸುವುದಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ.

(ಅಮೆರಿಕ ಮೂಲದ ವಯರ್‍ಡ್ ಪತ್ರಿಕೆಯಲ್ಲಿ ಜೂನ್ 16 ರಂದು ಪ್ರಕಟವಾದ ವರದಿಯನ್ನು ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿದೆ.)

ನಿರೂಪಣೆ: ನಿಖಿಲ್ ಕೋಲ್ಪೆ


ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಆರೋಪಿಗಳ ಡಿವೈಸ್‌ಗಳಿಗೆ ಪೊಲೀಸರಿಂದಲೇ ನಕಲಿ ದಾಖಲೆ ವರ್ಗಾವಣೆ!?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...