ಫ್ರೆಂಚ್ ವಿಮಾನ ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್‌ನೊಂದಿಗಿನ 59,000 ಕೋಟಿ ರಫೇಲ್ ಫೈಟರ್ ಜೆಟ್ ಒಪ್ಪಂದದಲ್ಲಿ ಆದ ಅಕ್ರಮಗಳ ಬಗ್ಗೆ ಸಿಬಿಐ ನ್ಯಾಯಾಲಯ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಮಾಡಿದೆ. ಆ ಮೂಲಕ ಡಿಸೆಂಬರ್ 2018 ರ ತೀರ್ಪನ್ನು ಎತ್ತಿ ಹಿಡಿದಿದೆ.
ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠವು ಈ ಹಿಂದೆ ಮೇ 10 ರಂದು ಪರಿಶೀಲನಾ ಅರ್ಜಿಗಳ ಬಗ್ಗೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಕೇಂದ್ರದ ಮಾಜಿ ಸಚಿವರಾದ ಯಶ್ವಂತ್ ಸಿನ್ಹಾ ಮತ್ತು ಅರುಣ್ ಶೌರಿ, ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಪುನರ್ ಪರಿಶೀಲನಾ ಮನವಿಗಳನ್ನು ಸಲ್ಲಿಸಿದ್ದರು.
ರಕ್ಷಣಾ ಖರೀದಿಗೆ ಸಂಬಂಧಿಸಿದ ಒಪ್ಪಂದಗಳನ್ನು ಜಗತ್ತಿನಲ್ಲಿ ಎಲ್ಲಿಯೂ ನ್ಯಾಯಾಲಯಗಳು ಪರಿಶೀಲಿಸುವುದಿಲ್ಲ ಮತ್ತು ರಫೇಲ್ ಪ್ರಕರಣವನ್ನು ಪುನಃ ತೆರೆಯುವುದನ್ನು ವಿರೋಧಿಸುತ್ತದೆ ಎಂದು ಕೇಂದ್ರ ಸರ್ಕಾರ ವಾದಿಸಿತು. ಅರ್ಜಿದಾರರಾದ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್‌ರವರು ಸರ್ಕಾರ ಸುಳ್ಳು ಮಾಹಿತಿಯನ್ನು ನೀಡಿದೆ ಎಂಬ ಆರೋಪದ ಮೇಲೆ ಕೇಂದ್ರದ ವಿರುದ್ಧ ವಿಚಾರಣೆಯನ್ನು ಕೋರಿದ್ದರು. 2018 ರ ಡಿಸೆಂಬರ್ ತೀರ್ಪಿನಲ್ಲಿ ಸರ್ಕಾರ ನ್ಯಾಯಾಲಯವನ್ನು ದಾರಿ ತಪ್ಪಿಸಿದೆ ಎಂದು ಅವರು ಆರೋಪಿಸಿದ್ದರು.
ಈ ಒಪ್ಪಂದಕ್ಕೆ ಸಂಬಂಧಿಸಿದ ನಿರ್ಣಾಯಕ ಟಿಪ್ಪಣಿಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮರೆಮಾಡಿದೆ ಎಂದು ಅರ್ಜಿದಾರರು ಆರೋಪಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿ ಹಳೆಯ ತೀರ್ಪನ್ನೆ ಎತ್ತಿ ಹಿಡಿದಿದೆ.