ದೆಹಲಿಯ ಉದ್ಯಾನವನವೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಲಿಸುತ್ತಿದ್ದ ಸ್ಲೀಪರ್ ಬಸ್‌ನೊಳಗೆ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸೇರಿದಂತೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇತ್ತೀಚೆಗೆ ವರದಿಯಾದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಸ್ವಯಂಪ್ರೇರಿತವಾಗಿ (suo motu) ವಿಚಾರಣೆಗೆ ಕೈಗೆತ್ತಿಕೊಂಡಿದೆ.
ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್‌ಸಿಆರ್) ಮರುಕಳಿಸುತ್ತಿರುವ ಲೈಂಗಿಕ ಅಪರಾಧಗಳ ಕುರಿತಾದ ಸುದ್ದಿ ವರದಿಗಳಿಂದ ತಾವು ತೀವ್ರ ನೊಂದಿರುವುದಾಗಿ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದ್ದು, ಈ ನಿಟ್ಟಿನಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ.
ತನ್ನ ಆದೇಶದಲ್ಲಿ ಪೀಠವು ದೆಹಲಿಯ ಸ್ವರೂಪ್ ನಗರದಲ್ಲಿ ನಡೆದ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉಲ್ಲೇಖಿಸಿದ್ದು, ಅಲ್ಲಿ ಪೊಲೀಸರು ಸಂತ್ರಸ್ತೆಯ ಕೊಳೆತ ಶವವನ್ನು ಹೊಲವೊಂದರಲ್ಲಿ ಪತ್ತೆಹಚ್ಚಿದ್ದರು. ಗ್ರೇಟರ್ ನೋಯ್ಡಾದಿಂದ ದೆಹಲಿವರೆಗೆ 47 ಕಿಲೋಮೀಟರ್ ಚಲಿಸುವಾಗಲೂ ಪೊಲೀಸರು ತಡೆಯಲು ವಿಫಲರಾದ, ಚಲಿಸುತ್ತಿದ್ದ ಸ್ಲೀಪರ್ ಬಸ್‌ನೊಳಗೆ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಉಲ್ಲೇಖಿಸಿದ ನ್ಯಾಯಾಲಯವು, “2012ರ ನಿರ್ಭಯಾ ಘಟನೆಗೆ ಇಲ್ಲಿ ಅತ್ಯಂತ ನೋವಿನ ಸಾಮ್ಯತೆಗಳನ್ನು ಕಾಣದಿರಲು ಸಾಧ್ಯವಿಲ್ಲ” ಎಂದು ಹೇಳಿದೆ.
“ಈ ಘಟನೆಗಳು ನಿರ್ಭಯಾ ಪ್ರಕರಣದ ನಂತರ ವ್ಯವಸ್ಥಿತ ಕಾನೂನು ಜಾರಿ ಕಾರ್ಯವಿಧಾನಗಳು ಯಾವುದೇ ಅರ್ಥಪೂರ್ಣ ಪ್ರಗತಿಯನ್ನು ಸಾಧಿಸಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ” ಎಂದು ನ್ಯಾಯಾಲಯವು ಹೇಳಿದೆ.
“ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾದ ಇತರ ಲೈಂಗಿಕ ಅಪರಾಧಗಳ ವರದಿಗಳೊಂದಿಗೆ ಈ ಘಟನೆಗಳನ್ನು ಒಟ್ಟಾಗಿ ಗಮನಿಸಿದಾಗ, ಮೂಲಭೂತ ಸಾರ್ವಜನಿಕ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆಡಳಿತಾಧಿಕಾರಿಗಳ ಕಡೆಯಿಂದ ಉಂಟಾಗಿರುವ ವ್ಯವಸ್ಥಿತ ವೈಫಲ್ಯವು ಸ್ಪಷ್ಟವಾಗಿ ಎದ್ದು ಕಾಣುತ್ತದೆ” ಎಂದು ಪೀಠವು ತಿಳಿಸಿದೆ.
“ಹಿಂಸೆಯ ಭಯವಿಲ್ಲದೆ ಘನತೆಯಿಂದ ಬದುಕುವ ಹಕ್ಕು ಸಂವಿಧಾನದ 21ನೇ ವಿಧಿಯಡಿ ಜೀವಿಸುವ ಹಕ್ಕಿನ ಅತ್ಯಗತ್ಯ ಭಾಗವಾಗಿದೆ. ರಸ್ತೆಗಳು, ಉದ್ಯಾನವನಗಳು, ಬಸ್‌ಗಳು, ಮೆಟ್ರೋ ನಿಲ್ದಾಣಗಳು, ಸಬ್‌ವೇಗಳು ಮತ್ತು ಪಾದಚಾರಿ ಮೇಲ್ಸೇತುವೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಅತ್ಯಂತ ಕಳಪೆ ಬೆಳಕಿನ ವ್ಯವಸ್ಥೆ, ಕಳಪೆ ಕಣ್ಗಾವಲು, ಗಸ್ತು ತಿರುಗುವಿಕೆಯ ಕೊರತೆ ಮತ್ತು ತಡೆಗಟ್ಟಬಹುದಾದ ಇತರ ಆಡಳಿತಾತ್ಮಕ ಲೋಪಗಳಿಂದಾಗಿ ‘ಹೆಚ್ಚಿನ ಅಪಾಯದ ವಲಯಗಳಾಗಿ’ ಬದಲಾಗಲು ಅನುಮತಿಸಲಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಕೇವಲ ಸಾರ್ವಜನಿಕ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಕಳಕಳಿ ಹಾಗೂ ಒಗ್ಗಟ್ಟನ್ನು ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡುವುದು ಸಾಕಾಗುವುದಿಲ್ಲ ಎಂದು ತಿಳಿಸಿದ ಪೀಠವು, ಇಂತಹ ಘಟನೆಗಳು ಸಂಭವಿಸಲು ಕಾರಣವಾದ ವೈಫಲ್ಯಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ ಎಂದಿದೆ.
“ಹೊಣೆಗಾರಿಕೆ ಇಲ್ಲದ ಕೇವಲ ಒಗ್ಗಟ್ಟಿನ ಅಭಿವ್ಯಕ್ತಿಗಳು ವಿಶಾಲವಾದ ಸಾಂಸ್ಥಿಕ ಪ್ರಶ್ನೆಗೆ ಉತ್ತರಿಸಲು ಸಾಧ್ಯವಿಲ್ಲ. ಒಗ್ಗಟ್ಟು ವ್ಯಕ್ತಪಡಿಸುವುದು ಈ ಸಾಮಾಜಿಕ ಪಿಡುಗಿಗೆ ಪರಿಹಾರವಲ್ಲ. ಅಪರಾಧಗಳ ತಡೆಗಟ್ಟುವಿಕೆ, ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಮತ್ತು ದುರ್ಬಲ ವ್ಯಕ್ತಿಗಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ಮೇಲೆ ನಿರ್ದಿಷ್ಟ ಹೊಣೆಗಾರಿಕೆ ಹಾಗೂ ಜವಾಬ್ದಾರಿಯನ್ನು ನಿಗದಿಪಡಿಸುವಂತಹ ಅಳೆಯಬಹುದಾದ ಪ್ರತಿಕ್ರಿಯೆಯ ಅಗತ್ಯವಿದೆ” ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಈ ವಿಷಯವನ್ನು ಪರಿಶೀಲಿಸಲು ಸ್ವಯಂಪ್ರೇರಿತ ಪ್ರಕರಣವೊಂದನ್ನು ದಾಖಲಿಸುವಂತೆ ಪೀಠವು ನಿರ್ದೇಶಿಸಿದೆ.
Courtesy : livelaw.in


