Homeಮುಖಪುಟ’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

’ಸಂಸ್ಕೃತ’ ಪುನರುತ್ಥಾನ ಮತ್ತು ನೆಲದ ’ನುಡಿ’ಗಳ ಕೂಗು

- Advertisement -
- Advertisement -

ಸಂಸ್ಕೃತ ವಿದ್ವಾಂಸ ಎನ್.ಆರ್.ನಾವಲೇಕರ್ ಅವರು ಬರೆದ ’ರಾಮಾಯಣ’ದಿಂದ ಮಾತು ಆರಂಭಿಸುವುದು ಸೂಕ್ತವೆನಿಸುತ್ತಿದೆ. ನಾವಲೇಕರ್ ರಾಮಾಯಣದ ಸಂದೇಶ ಇಂದಿನ ರಾಜಕೀಯ ವಿದ್ಯಮಾನಗಳ ಪ್ರತಿಬಿಂಬದಂತೆ ಭಾಸವಾಗುತ್ತದೆ. ರಾಮನ ರಾಜತಾಂತ್ರಿಕ ಯಶಸ್ಸಿಗೂ ಆರ್‌ಎಸ್‌ಎಸ್ ಕಾರ್ಯಸೂಚಿಗೂ ಇರುವ ಸಾಮ್ಯತೆಯನ್ನು ಈ ಕೃತಿಯ ಮೂಲಕ ಗುರುತಿಸಬಹುದು. ಆರ್‌ಎಸ್‌ಎಸ್ ಕಾರ್ಯವೈಖರಿಯ ಕುರಿತು ನಾವಲೇಕರ್ ನೇರವಾಗಿ ಹೇಳದಿದ್ದರೂ, ಕೃತಿಯಲ್ಲಿ ಪ್ರಸ್ತಾಪಿಸಲಾಗುವ ರಾಮನ ರಾಜಕಾರಣದ ಪಟ್ಟುಗಳು ಆರ್‌ಎಸ್‌ಎಸ್‌ನ ಹಿಡನ್ ಅಜೆಂಡಾಗಳಿಗೆ ಕಾಕತಾಳೀಯವೆಂಬಂತೆ ಹೋಲಿಕೆಯಾಗುತ್ತವೆ.

ರಾಮ ತನ್ನ ಅಲೆದಾಟದ (ರಾಮಾಯಣ) ಮೂಲಕ ಹೇಗೆ ಈ ನೆಲದಲ್ಲಿ ಆರ್ಯ ಸಂಸ್ಕೃತಿಯನ್ನು ಸ್ಥಾಪಿಸಿದ ಎಂಬುದನ್ನು ನಾವಲೇಕರ್ ಚರ್ಚಿಸುತ್ತಾರೆ. ಮೂಲನಿವಾಸಿ ರಾಕ್ಷಸ ಕುಲವನ್ನು ಸದೆಬಡಿಯಲು ರಾಮ ಬಳಿಸಿದ್ದು ಇದೇ ರಾಕ್ಷಸ ಕುಲದ ಜನರನ್ನು. ರಾವಣನನ್ನು ಸುಲಭವಾಗಿ ಸೋಲಿಸುವುದು ಕಷ್ಟವೆಂದು ರಾಮ ಅರಿತ್ತಿದ್ದ. ಹೀಗಾಗಿ ದೀರ್ಘಕಾಲೀನ ರಾಜತಾಂತ್ರಿಕತೆಯನ್ನು ರೂಪಿಸಿಕೊಂಡ. ವನವಾಸದ ಹೆಸರಿನಲ್ಲಿ ದಕ್ಷಿಣ ಭಾರತವನ್ನು ಸುತ್ತಿ ಸಂಘಟಿಸಿದ. ರಾವಣನ ತಮ್ಮ ವಿಭೀಷಣನನ್ನು, ವಾಲಿಯ ಸಹೋದರ ಸುಗ್ರೀವನನ್ನು ಬಳಸಿಕೊಂಡ. ಹಿಗೆ ರಾಮ ಹೇಗೆ ಒಂದೊಂದೇ ಹೆಜ್ಜೆಯನ್ನು ಇಡುತ್ತಾ ದಿಗ್ವಿಜಯ ಸಾಧಿಸಿದ ಎಂಬುದನ್ನು ನಾವಲೇಕರ್ ರಾಮಾಯಣ ಚರ್ಚಿಸುತ್ತದೆ.

ಬಹಳ ಯೋಜಿತವಾಗಿ ರಾಮ ನಡೆಸಿದ ತಂತ್ರಗಳಿಗೂ, ಆರ್‌ಎಸ್‌ಎಸ್ ಸ್ಥಾಪನೆಯಾಗಿ ಸುಮಾರು 90 ವರ್ಷಗಳ ನಂತರದಲ್ಲಿ ಈ ದೇಶದ ಅಧಿಕಾರದ ಚುಕ್ಕಾಣಿಯನ್ನು ಆರ್‌ಎಸ್‌ಎಸ್ ಬೆಂಬಲಿತ ಶಕ್ತಿಗಳು ಹಿಡಿದದ್ದಕ್ಕೂ ಸಾಮ್ಯತೆಗಳಿವೆ. ಸಂಘ ಪರಿವಾರ ಯಾವುದೇ ವಿಚಾರವನ್ನು ಮುನ್ನಲೆಗೆ ತಂದರೂ ಅದು ದೀರ್ಘಕಾಲೀನ ಅಜೆಂಡಾವಾಗಿಯೇ ರೂಪಿತವಾಗಿರುತ್ತದೆ ಎಂಬುದನ್ನು ಚಿಂತಕರು ಗುರುತಿಸುತ್ತಾರೆ. ರಾಮ ಮಂದಿರ ನಿರ್ಮಾಣ, ಕಾಶ್ಮೀರ ವಿಶೇಷ ಸ್ಥಾನ-ಮಾನ ರದ್ದತಿ- ಇವೆಲ್ಲವೂ ಆರ್‌ಎಸ್‌ಎಸ್ ಹಾಕಿಕೊಂಡ ದೀರ್ಘಕಾಲೀನ ಕೋಮು ವಿಭಜನೆಯ ಅಜೆಂಡಾಗಳು. ಅವುಗಳಲ್ಲಿ ಯಶಸ್ಸನ್ನೂ ಸಂಘಪರಿವಾರ ಸಾಧಿಸಿದೆ. ಇದರ ಮುಂದಿನ ಕಾರ್ಯಸೂಚಿ- ’ಸಂಸ್ಕೃತವನ್ನು ರಾಷ್ಟ್ರಭಾಷೆಯನ್ನಾಗಿ ಮಾಡುವುದು ಹಾಗೂ ಸತ್ತು ಹೋಗಿರುವ ಭಾಷೆಯನ್ನು ಪುನರುಜ್ಜೀವನಗೊಳಿಸಿ, ಸಂಸ್ಕೃತವೇ ಎಲ್ಲ ಭಾಷೆಗಳ ಮೂಲವೆಂದು ನಂಬಿಸುವುದು’. ಈ ನಿಟ್ಟಿನಲ್ಲಿ ಸಂಸ್ಕೃತ ವಿವಿಗಳನ್ನು ಬಲಪಡಿಸುವತ್ತ ಸಂಘ ಪರಿವಾರ ಹೊರಟಿದೆ.

ಭಾರತದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿವಿಗಳಿವೆ. ಸಂಸ್ಕೃತವನ್ನು ಮಾತನಾಡುವವರು ವಿರಳಾತಿ ವಿರಳ ಎನ್ನಬಹುದು. ಕರ್ನಾಟಕದಲ್ಲಿ ಈಗಾಗಲೇ ಸಂಸ್ಕೃತ ವಿವಿ ಸ್ಥಾಪನೆಯಾಗಿದೆ. ಈಗ ಸಂಸ್ಕೃತ ವಿವಿಗೆ 359 ಕೋಟಿ ರೂ ಹಾಗೂ 100 ಎಕರೆ ಮೀಸಲು ಅರಣ್ಯ ಜಾಗ ನೀಡಲು ಸರ್ಕಾರ ಮುಂದಾಗಿದೆ. ಏಳು ಕೋಟಿ ಕನ್ನಡಿಗರನ್ನು ಪ್ರತಿನಿಧಿಸುವ ಕನ್ನಡ ವಿವಿಗೆ ಸಿಗದ ಮಾನ್ಯತೆಯನ್ನು ಸಂಸ್ಕೃತ ವಿವಿಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ನೀಡಲು ಹೊರಟಿರುವುದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದೆ. ಕನ್ನಡಿಗರ ನಿಜದನಿಯನ್ನು ಮುಚ್ಚಿ ಹಾಕಲು ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂಬ ಸುಳ್ಳನ್ನು ಬಿತ್ತಲು ಸಂಘ ಪರಿವಾರ ಹೊರಟಿದೆ. ಆರ್‌ಎಸ್‌ಎಸ್ ಹಿಡನ್ ಅಜೆಂಡಾ ನಿಧಾನವಾಗಿ ಹೇರಿಕೆಯಾಗುತ್ತಿರುವುದನ್ನು ಜನರು ಗುರುತಿಸುತ್ತಿದ್ದಾರೆ.

’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಚಿಂತಕರು, ಕನ್ನಡಪರ ಹೋರಾಟಗಾರರೆಲ್ಲ ಸರ್ಕಾರದ ನಿಲುವುಗಳನ್ನು, ಸಂಸ್ಕೃತದ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳುಗಳನ್ನು ಪ್ರಶ್ನಿಸಿದ್ದಾರೆ. ಸಂಸ್ಕೃತ ಹೇರಿಕೆಯ ಹಿಂದಿನ ಉದ್ದೇಶವನ್ನು ಕೆದಕಿದ್ದಾರೆ.

’ಹಿಬ್ರೂ’ ಮಾದರಿಯಲ್ಲಿ ಪುನರುತ್ಥಾನ: ರಂಗನಾಥ್

ಭಾಷಾ ತಜ್ಞರಾದ ಡಾ.ರಂಗನಾಥ್ ಕಂಟನಕುಂಟೆ ಪ್ರತಿಕ್ರಿಯೆ ನೀಡಿ, ’ಹಿಬ್ರೂ’ ಭಾಷೆಯ ಪುನರುತ್ಥಾನದ ಮಾದರಿಯಲ್ಲಿ ಸಂಸ್ಕೃತವನ್ನು ಪುನರುತ್ಥಾನ ಮಾಡುವ ಉದ್ದೇಶವನ್ನು ಸಂಘಪರಿವಾರ ಹೊಂದಿದೆ ಎಂದು ವಿಶ್ಲೇಷಿಸಿದರು.

ಡಾ.ರಂಗನಾಥ್ ಕಂಟನಕುಂಟೆ

“ಲಕ್ಷಾಂತರ-ಕೋಟ್ಯಂತರ ಜನರನ್ನು ಪ್ರತಿನಿಧಿಸುವ ಭಾಷೆಗಳಿವೆ. ಅವುಗಳನ್ನು ಪ್ರತಿನಿಧಿಸುವ ಸಂಸ್ಥೆಗಳಿವೆ. ಉದಾಹರಣೆಗೆ ಕನ್ನಡ ಭಾಷೆಗಾಗಿ ಹಲವು ಸಂಸ್ಥೆಗಳಿವೆ. ಅವುಗಳಿಗೆ ಅನುದಾನ ಕೊಡದೆ ನಾಶ ಮಾಡಲಾಗುತ್ತಿದೆ. ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಮರ್ಪಕ ಅನುದಾನ ನೀಡಿಲ್ಲ. ಹೀಗಾಗಿ ಅದು ತನ್ನ ಎಷ್ಟೋ ಕೆಲಸಗಳನ್ನು ನಿಲ್ಲಿಸಿದೆ. ಜಾನಪದ ವಿಶ್ವವಿದ್ಯಾನಿಲಯ, ರಾಣಿ ಚೆನ್ನಮ್ಮ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಲ್ಲವೂ ಸೊರಗುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಅನುದಾನ ಇರದಿರುವ ಕಾರಣ ನೇಮಕಾಗಳೂ ನಡೆಯುತ್ತಿಲ್ಲ. ಮೇಷ್ಟ್ರುಗಳಿಲ್ಲದೆ ತರಗತಿಗಳು ನಡೆಯುತ್ತಿಲ್ಲ. ಕಟ್ಟಡಗಳಿವೆ, ವಿದ್ಯಾರ್ಥಿಗಳಿದ್ದಾರೆ. ಬೋಧಕರಿಲ್ಲ. ಆದರೆ ಸಂಸ್ಕೃತದ ಹೆಸರಲ್ಲಿ ಕನ್ನಡ ಜನರ ಸಂಪತ್ತು ದೋಚಲಾಗುತ್ತಿದೆ. ಸಂಸ್ಕೃತವನ್ನು ಮಾತೃಭಾಷೆ ಎಂದು ಪ್ರತಿಪಾದಿಸುವವರು ಬೆರಳೆಣಿಕೆಯಷ್ಟು ಇದ್ದಾರೆ. ಅಷ್ಟು ಜನಕ್ಕೆ ನೂರಾರು ಎಕರೆ ಜಮೀನು ಕೊಟ್ಟು, 359 ಕೋಟಿ ದುಡ್ಡು ಕೊಟ್ಟು ವಿವಿಯನ್ನು ಕಟ್ಟುವುದು ಏಕೆ? ಅಲ್ಲಿಗೆ ಬರುವ ವಿದ್ಯಾರ್ಥಿಗಳು ಯಾರು?” ಎಂದು ಪ್ರಶ್ನಿಸುತ್ತಾರೆ ಕಂಟನಕುಂಟೆ.

ಮುಂದುವರಿದು, “ಸಂಸ್ಕೃತವನ್ನು ಬೆಳೆಸುವುದರ ಹಿಂದೆ ಪುರೋಹಿತಶಾಹಿಯ ಹಿಡನ್ ಅಜೆಂಡಾವಿದೆ. ತಮ್ಮ ಯಜಮಾನಿಕೆಯನ್ನು ಇಡೀ ದೇಶದ ಮೇಲೆ ಸ್ಥಾಪಿಸಲು ಸಂಸ್ಕೃತವನ್ನು ಬಳಸುತ್ತಿದ್ದಾರೆ. ಸಂಸ್ಕೃತವನ್ನು ಜೀವಂತ ಭಾಷೆಯನ್ನಾಗಿ ಮಾಡುವುದು, ದೇಶದ ಆಡಳಿತ ಭಾಷೆಯಾಗಿ ಜಾರಿಗೆ ತರುವುದು ಅವರ ಉದ್ದೇಶ. ಹಿಂದಿಯನ್ನು ರಾಷ್ಟ್ರಭಾಷೆ ಎಂದು ಕರೆದು ಹೇಗೆ ಅದನ್ನೊಂದು ಆಡಳಿತ ಭಾಷೆಯನ್ನಾಗಿ ಬಳಸುತ್ತಿದ್ದಾರೋ ಹಾಗೆಯೇ ಸಂಸ್ಕೃತವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವ ಅಜೆಂಡಾ ಇಲ್ಲಿದೆ. ಇದು ದೀರ್ಘಕಾಲೀನ ಅಜೆಂಡಾವಾಗಿದೆ. ಇಪ್ಪತ್ತು, ಮೂವತ್ತು, ನೂರು ಹೀಗೆ ಎಷ್ಟು ವರ್ಷವಾದರೂ ಸರಿ, ಈ ಅಜೆಂಡಾವನ್ನು ಜಾರಿಗೊಳಿಸುವ ಗುರಿ ಇಟ್ಟುಕೊಂಡಿದ್ದಾರೆ. ಪುರೋಹಿತಶಾಹಿ ಸಿದ್ಧಾಂತವನ್ನು ಕಾಪಾಡಲು ಸಂಸ್ಕೃತ ವಿಶ್ವವಿದ್ಯಾನಿಲಯವನ್ನು ಮಾಡಿ ವಿಸ್ತರಿಸಲು ಹೊರಟಿದ್ದಾರೆ. ಬೇರೆಬೇರೆ ಕಾಲೇಜುಗಳು, ವಿವಿಗಳು, ನೂರಾರು ಎನ್‌ಜಿಒಗಳು ಹಾಗೂ ಮಠಗಳ ಮೂಲಕ ಸಂಸ್ಕೃತಕ್ಕೆ ಬೇಕಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಹೊಸ ಶಿಕ್ಷಣ ನೀತಿಯಲ್ಲೂ ಸಂಸ್ಕೃತವನ್ನು ಬೆಳೆಸುವುದರ ಬಗ್ಗೆ ಪ್ರಸ್ತಾಪವಿದೆ. ಈಗಾಗಲೇ ಉತ್ತರ ಪ್ರದೇಶದಂತಹ ಸರ್ಕಾರಗಳು ಯಾವ ಭಾಷೆಗೂ ಕೊಡದೆ ಇರುವಷ್ಟು ಹಣವನ್ನು ಸಂಸ್ಕೃತಕ್ಕೆ ಕಳೆದ ನಾಲ್ಕೈದು ವರ್ಷಗಳಲ್ಲಿ ನೀಡುತ್ತಾ ಬಂದಿವೆ. ಅದರ ಮುಂದುವರಿದ ಭಾಗವನ್ನು ಕರ್ನಾಟಕದಲ್ಲಿ ಈಗ ನೋಡುತ್ತಿದ್ದೇವೆ. ಮುಂದೆ ಕನ್ನಡ, ತೆಲುಗು, ತಮಿಳು, ಕೊಡವ, ತುಳು ಮುಂತಾದ ನೆಲಮೂಲಭಾಷೆಗಳನ್ನು ಮೂಲೆಗೆ ತಳ್ಳಿ ಸಂಸ್ಕೃತವನ್ನು ಬೆಳೆಸಲಾಗುತ್ತದೆ. ಸಂಸ್ಕೃತದ ಮೂಲಕ ಇಡೀ ದೇಶದ ಜನಸಮೂಹವನ್ನು ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ಉದ್ದೇಶವಿದೆ. ಅಧಿಕಾರದಲ್ಲಿ ಇದ್ದಾಗಲೇ ಇದನ್ನು ಮಾಡಬೇಕು ಎಂದು ಬಿಜೆಪಿ ಹೊರಟಿದೆ” ಎನ್ನುತ್ತಾರೆ ರಂಗನಾಥ್.

“ಇಸ್ರೇಲ್‌ನಲ್ಲಿ ಹಿಬ್ರೂ ಭಾಷೆಯನ್ನು ಪುನುರುತ್ಥಾನಗೊಳಿಸಿ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಲಾಯಿತು. ಆ ಮಾದರಿಯನ್ನು ಸಂಸ್ಕೃತ ವಿಚಾರದಲ್ಲಿಯೂ ಅನುಸರಿಸಲಾಗುತ್ತಿದೆ. ಯಹೂದೂದಿಗಳ ಮೂಲಭಾಷೆ ಹಿಬ್ರೂ. ಅನಾದಿ ಕಾಲದಿಂದಲೂ ಹಿಬ್ರೂ ದೇವಭಾಷೆ, ಅದನ್ನು ಜನಸಾಮಾನ್ಯರು ಬಳಸಬಾರದು, ಧಾರ್ಮಿಕ ಸಂಗತಿಗಳಿಗೆ ಮಾತ್ರ ಬಳಸಬೇಕು ಎಂದು ಯಹೂದಿಗಳು ಹೇಳುತ್ತಿದ್ದರು. ಹಾಗಾಗಿ ಹಿಬ್ರೂ ಭಾಷೆಯ ಬಳಕೆಯನ್ನೇ ಜನರು ನಿಲ್ಲಿಸಿದರು. ಶತಮಾನಗಳ ಕಾಲ ಅದು ಜನರ ಭಾಷೆಯಾಗಿ ಉಳಿಯಲಿಲ್ಲ. ಹರಿದು ಹಂಚಿಹೋಗಿದ್ದ ಯಹೂದಿಗಳು ಇಸ್ರೇಲ್‌ನಲ್ಲಿ ಒಂದುಗೂಡಿದ ಬಳಿಕ 19ನೇ ಶತಮಾನದಲ್ಲಿ ಹಿಬ್ರೂ ಪುನರುತ್ಥಾನ ಚಾಲ್ತಿಗೆ ಬಂತು. ಧಾರ್ಮಿಕ ವಿಧಿವಿಧಾನಕ್ಕೆ ಬಳಸುತ್ತಿದ್ದ ಹಿಬ್ರೂ ಭಾಷೆಯನ್ನು ಆಡುನುಡಿಯಾಗಿ ನಿಧಾನಕ್ಕೆ ಬಳಸುತ್ತಾ ಬಂದರು. ಆ ಮಾದರಿಯನ್ನು ಸಂಸ್ಕೃತಕ್ಕೂ ಅನ್ವಯಿಸಲು ಹೊರಟಿದ್ದಾರೆ. ಒಂದು ಕಾಲಕ್ಕೆ ತಳಸಮುದಾಯಗಳಿಗೆ ಸಂಸ್ಕೃತವನ್ನು ಕಲಿಸದೆ ನಿಯಂತ್ರಿಸಲಾಯಿತು. ಆದರೆ ಈಗ ಎಲ್ಲರಿಗೂ ಸಂಸ್ಕೃತವನ್ನು ಕಲಿಸಿ ಆ ಮೂಲಕ ನಿಯಂತ್ರಿಸುವ ಪ್ರಯತ್ನ ಮಾಡಲಾಗುತ್ತದೆ. ಭಾಷೆಯೊಂದು ಪುನರುತ್ಥಾನವಾಗುವುದೆಂದರೆ ಅದರ ಪರಿಣಾಮಗಳು ವಿಪರೀತವಾಗಿರುತ್ತವೆ. ಜನರು ಎಚ್ಚರಗೊಂಡು ಎಷ್ಟು ಹಿಮ್ಮೆಟ್ಟುಸುತ್ತಾರೋ ಅಷ್ಟರ ಮಟ್ಟಿಗೆ ಉಳಿದ ಭಾಷೆಗಳಿಗೆ, ತಳ ಸಮುದಾಯಗಳಿಗೆ ಭವಿಷ್ಯವಿದೆ. ಇಲ್ಲವಾದರೆ ಗುಲಾಮಗಿರಿ ಶಾಶ್ವತವಾಗುತ್ತದೆ” ಎಂದು ಎಚ್ಚರಿಸುತ್ತಾರೆ ರಂಗನಾಥ್.

ಈ ನೆಲದ ಹಣ ಬೇಕು, ಭಾಷೆ ಬೇಡವೇ?: ನಾರಾಯಣಗೌಡ

ಸಂಸ್ಕೃತ ವಿವಿಯ ಸ್ಥಾಪನೆಗೆ ನೀಡುತ್ತಿರುವ ಆದ್ಯತೆಯ ವಿರುದ್ಧ, ಕನ್ನಡ ವಿರೋಧಿ ನಿಲುವುಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯು ದೊಡ್ಡ ಮಟ್ಟದಲ್ಲಿ ದನಿ ಎತ್ತಿದೆ. ಟ್ವಿಟ್ಟರ್ ಅಭಿಯಾನ ನಡೆಸಿ ಯಶಸ್ವಿಯಾಗಿದೆ. ಜೊತೆಗೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಸರ್ಕಾರವನ್ನು ಎಚ್ಚರಿಸಿದೆ.

ನೆಲದ ನುಡಿಗಳ ಕುರಿತ ಸರ್ಕಾರದ ನಿರ್ಲಕ್ಷ್ಯವನ್ನು, ಕನ್ನಡ ವಿರೋಧಿಗಳನ್ನು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಅವರು ಪ್ರಶ್ನಿಸಿದ್ದಾರೆ.

“ಹಂಪಿ ವಿಶ್ವವಿದ್ಯಾನಿಲಯ ಬಿಟ್ಟರೆ ಕನ್ನಡ ಭಾಷೆ ಸಂಸ್ಕೃತಿಗಳ ಅಧ್ಯಯನಕ್ಕೆಂದೇ ಮತ್ತೊಂದು ವಿಶ್ವವಿದ್ಯಾನಿಲಯವಿಲ್ಲ. ಸರಿಯಾದ ಅನುದಾನ ಕೊಡದೆ, ಅಧ್ಯಾಪಕರಿಗೆ ನೆರವು ನೀಡದೆ ಕನ್ನಡ ವಿಶ್ವವಿದ್ಯಾನಿಲಯ ಸೊರಗಿದೆ. ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆಂದು ನೂರಾರು ಎಕರೆ ಕೇಳಿದವರು, 359 ಕೋಟಿ ರೂಗಳನ್ನು ಸರ್ಕಾರದಿಂದ ಪಡೆಯಲು ಮುಂದಾಗಿರುವವರು ಹೈಕೋರ್ಟ್‌ನಲ್ಲಿ ಕನ್ನಡ ವಿರೋಧಿಸಿ ರಿಟ್ ಅರ್ಜಿ ಹಾಕಿದ್ದಾರೆ. ಪದವಿಪೂರ್ವ ಕಾಲೇಜುಗಳಲ್ಲಿ ಕನ್ನಡ ಕಡ್ಡಾಯವೆಂದು ಸರ್ಕಾರ ಆದೇಶ ಹೊರಡಿಸಿದೆ. ಆ ಆದೇಶಕ್ಕೆ ವಿರುದ್ಧವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದವರಿಗೆ ಕರ್ನಾಟಕ ಸರ್ಕಾರದ ಹಣ ಬೇಕು, ಕನ್ನಡದ ಜಾಗ ಬೇಕು, ಕನ್ನಡ ಮಾತ್ರ ಬೇಡವಾಗಿದೆ. ಹೀಗಿರುವಾಗ ಸಂಸ್ಕೃತ ವಿಶ್ವವಿದ್ಯಾನಿಲಯ ಕನ್ನಡಿಗರಿಗೆ ಏಕೆ ಬೇಕು?” ಎಂದು ಪ್ರಶ್ನಿಸುತ್ತಾರೆ ನಾರಾಯಣಗೌಡರು.

ಟಿ.ಎ.ನಾರಾಯಣಗೌಡ

“24 ಸಾವಿರ ಜನ ಸಂಸ್ಕೃತವನ್ನು ಮಾತನಾಡುತ್ತಾರೆ. ಸಂಸ್ಕೃತಕ್ಕಾಗಿ 16 ವಿವಿಗಳಿವೆ. ಏಳು ಕೋಟಿ ಜನರಿಗೆ ಇರುವುದು ಒಂದೇ ವಿಶ್ವವಿದ್ಯಾನಿಲಯ. ನಾನು ಸಂಸ್ಕೃತ ಭಾಷೆಯ ವಿರೋಧಿಯಲ್ಲ. ಸಂಸ್ಕೃತ ಹೇರಿಕೆಯ ವಿರೋಧಿ. ಕನ್ನಡಕ್ಕೆ ಸಿಗದೆ ಇರುವ ಸೌಲಭ್ಯಗಳನ್ನು ಸಂಸ್ಕೃತಕ್ಕೆ ಕೊಡುವ ಸರ್ಕಾರವನ್ನು ಒಪ್ಪಲಾಗುವುದೇ?” ಎಂದು ಕೇಳುತ್ತಾರೆ ಕರವೇ ಅಧ್ಯಕ್ಷರು.

ಕನ್ನಡಕ್ಕೆ ಸಂಸ್ಕೃತ ಅಮ್ಮನೂ ಅಲ್ಲ ಅಪ್ಪನೂ ಅಲ್ಲ: ದಿನೇಶ್ ಕುಮಾರ್

ಬರಹಗಾರ, ಕನ್ನಡಪರ ಹೋರಾಟಗಾರ ಎಸ್.ಸಿ.ದಿನೇಶ್ ಕುಮಾರ್ ’ನ್ಯಾಯಪಥ’ದೊಂದಿಗೆ ಮಾತನಾಡಿ, “ಕನ್ನಡದಲ್ಲಿ ಸಂಸ್ಕೃತ ಪದಗಳು ತುಂಬಿಕೊಂಡಿರುವುದು ನಿಜ. ಇದಕ್ಕೆ ಕಾರಣ ಯಾರು? ಪಠ್ಯಪುಸ್ತಕಗಳನ್ನು ಬರೆದವರು ಸಂಸ್ಕೃತ ಹಿನ್ನೆಲೆಯವರಾಗಿದ್ದರು. ’ನುಡಿ’ ಎಂಬ ಒಳ್ಳೆಯ ಶಬ್ದ ಇರಬೇಕಾದರೆ ’ಭಾಷೆ’ ಎಂದು ಬಳಸುತ್ತೇವೆ. ಹಾಗೆಂದು ಕನ್ನಡದಲ್ಲಿ ಪರ್ಯಾಯ ಪದಗಳು ಇಲ್ಲವೆಂದೇನೂ ಇಲ್ಲ. ಪರ್ಯಾಯ ಪದಗಳನ್ನು ಬಳಕೆ ಮಾಡಲಾಗದಷ್ಟು ಸಂಸ್ಕೃತ ಪದಗಳನ್ನು ತುರುಕಲಾಗಿದೆ. ಇದರ ವಿರುದ್ಧವೂ ದೊಡ್ಡ ಚಳವಳಿ ಮಾಡುತ್ತಿದ್ದೇವೆ. ಶಂಕರ ಬಟ್ಟರ ’ಎಲ್ಲರ ಕನ್ನಡ’ ನಿಧಾನವಾಗಿ ಚಾಲ್ತಿಗೆ ಬರುತ್ತಿದೆ. ಹಾಗೆಂದು ಒಂದೇಒಂದು ಸಂಸ್ಕೃತ ಪದವನ್ನೂ ಬಳಬಾರದೆಂಬ ಮಡಿವಂತಿಕೆ ನಮಗೇನೂ ಇಲ್ಲ. ಅನಿವಾರ್ಯವಾಗಿ ಬೇಕಾದರೆ ಬಳಸುತ್ತೇವೆ. ಸುಲಭವಾಗಿ ತಿಳಿಯುವ ಕನ್ನಡ ಪದಗಳು ಇರಬೇಕಾದರೆ, ಸಂಸ್ಕೃತವನ್ನು ಏಕೆ ಹೇರಿಕೊಳ್ಳಬೇಕು? ಸಂಕೀರ್ಣವಾದ ಸಂಸ್ಕೃತ ಪದಗಳಿಗೆ ಕನ್ನಡ ಪದಗಳನ್ನು ಕೊಡುತ್ತಾ ಬಂದಿದ್ದೇವೆ. ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂಬುದು ಮಹಾ ಸುಳ್ಳು” ಎಂದು ಸ್ಪಷ್ಟಪಡಿಸಿದರು.

“ಸಂಸ್ಕೃತ ಸತ್ತುಹೋದ ಭಾಷೆ. ಜನರ ನಡುವೆ ಚಲಿಸುವ ಗುಣ ಸಂಸ್ಕೃತಕ್ಕೆ ಇಲ್ಲ. ಜೊತೆಗೆ ಸಂಸ್ಕೃತ ಶ್ರೇಷ್ಠ ಭಾಷೆ ಎಂಬ ಸುಳ್ಳನ್ನು ಹಬ್ಬಿಸಲಾಗುತ್ತಿದೆ. ಎಲ್ಲ ಭಾಷೆಗಳ ತಾಯಿ ಎಂದು ಸುಳ್ಳು ಸೃಷ್ಟಿಸಲಾಗುತ್ತಿದೆ. ಒಂದು ಸುಳ್ಳನ್ನು ಸಾವಿರ ಸಲ ಹೇಳಿ ನಿಜವೆಂದು ಬಿಂಬಿಸಲಾಗುತ್ತಿದೆ. ಹಿಂದಿ ರಾಷ್ಟ್ರಭಾಷೆ ಎಂದು ಜನರ ತಲೆಯೊಳಗೆ ತುಂಬಲಾಗಿತ್ತು. ಈಗ ಸಂಸ್ಕೃತ ಎಲ್ಲ ಭಾಷೆಗಳ ತಾಯಿ ಎಂದು ಹಬ್ಬಿಸಲಾಗುತ್ತಿದೆ. ಸಂಸ್ಕೃತ ಕನ್ನಡದ ಅಪ್ಪನೂ ಅಲ್ಲ, ಅಮ್ಮನೂ ಅಲ್ಲ, ಚಿಕ್ಕಪ್ಪ, ಚಿಕ್ಕಮ್ಮನೂ ಅಲ್ಲ. ಅದು ಹೊರಗಿನ ಇಂಡೋಆರ್ಯನ್ ಭಾಷೆ. ಇಲ್ಲೇ ಹುಟ್ಟಿ ಬೆಳೆದಿದ್ದು ದ್ರಾವಿಡ ಭಾಷೆಗಳು” ಎನ್ನುತ್ತಾರೆ ದಿನೇಶ್.

“ನುಡಿ ಅರಿಮೆ (ಭಾಷಾ ವಿಜ್ಞಾನ) ಕೊಡುಕೊಳ್ಳುವಿಕೆಯ ಮೂಲಕವೇ ಬೆಳೆದು ಬಂದಿದೆ. ಬೇರೆಬೇರೆ ಭಾಷೆಯ ಪದಗಳು ಕನ್ನಡದಲ್ಲಿವೆ. ನಮ್ಮ ಪದಗಳು ಬೇರೆ ಭಾಷೆಗಳಲ್ಲಿವೆ. ಉದಾಹರಣೆಗೆ ನಾವು ಊಹಿಸಲಾಗದಷ್ಟು ಪರ್ಷಿಯನ್ ಪದಗಳನ್ನು ಕನ್ನಡದಲ್ಲಿ ಬಳಸುತ್ತಿದ್ದೇವೆ. ’ಗೋರಿ’, ’ಅರ್ಜಿ’, ’ಗುಲಾಮ’, ’ಕಮಾಲು’, ’ದವಾಖಾನೆ’, ’ದಲ್ಲಾಳಿ’, ’ಜಾಮೀನು’, ’ಅವಾಲ್ದಾರ’, ’ಆಮದು’, ’ವರದಿ’, ’ಜವಾನ’, ’ಕೊತ್ವಾಲ’, ’ಪಾಯಖಾನೆ’, ’ಅರ್ಜಿ’, ’ಕಚೇರಿ’, ’ಕಾರ್ಖಾನೆ’, ’ಸಲಾಮು’, ’ರಸ್ತೆ’, ’ಕಾನೂನು’, ’ನಕಲಿ’, ’ದರ್ಬಾರು’, ’ಜಮೀನ್ದಾರ’- ಹೀಗೆ ಅನೇಕ ಪರ್ಷಿಯನ್ ಪದಗಳು ಕನ್ನಡದೊಳಗೆ ಸೇರಿವೆ. ಹಾಗೆಂದು ಪರ್ಷಿಯನ್ ನಮ್ಮಮ್ಮ, ಚಿಕ್ಕಮ್ಮ, ದೊಡ್ಡಮ್ಮ ಅನ್ನಲು ಸಾಧ್ಯವೆ? ನಾವು ಬೇರೊಂದು ಭಾಷೆಯಿಂದ ಪದಗಳನ್ನು ತೆಗೆದುಕೊಳ್ಳುವುದು ಬೇರೆ, ತುರುಕುವುದು ಬೇರೆ” ಎನ್ನುತ್ತಾರೆ ದಿನೇಶ್.

ಎಸ್.ಸಿ.ದಿನೇಶ್ ಕುಮಾರ್

ಇಂಗ್ಲಿಷ್‌ನ ’ಪೊಲೀಸ್’ ಎಂಬುದನ್ನು ’ಆರಕ್ಷಕ’ ಎಂಬ ಸಂಸ್ಕೃತ ಪದದಲ್ಲಿ ಕರೆದು ಇದೇ ಕನ್ನಡ ಎನ್ನಲಾಯಿತು. ಜನರು ಯಾರೂ ’ಆರಕ್ಷಕ’ ಎನ್ನುವುದಿಲ್ಲ. ಪೊಲೀಸ್ ಎಂದೇ ಬಳಸುತ್ತಾರೆ. ’ಮಿಷನ್’ ಎಂಬ ಪದವನ್ನು ’ಮಿಷನ್ನು’ ಎಂದು ಕನ್ನಡೀಕರಿಸುತ್ತಾರೆ. ವಚನಕಾರರು ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು ಬಳಸಿ, ಸಂಸ್ಕೃತವನ್ನು ದೂರವಿಟ್ಟರು. ಯಾಕೆಂದರೆ ಸಂಸ್ಕೃತ ಜನರ ಭಾಷೆಯಲ್ಲ ಎಂಬುದು ವಚನಕಾರರಿಗೆ ಅರಿವಿತ್ತು” ಎಂದು ವಿಶ್ಲೇಷಿಸುತ್ತಾರೆ ದಿನೇಶ್.

“ಸಂಸ್ಕೃತ ವಿಶ್ವವಿದ್ಯಾನಿಲಯದಿಂದ ಏನು ಲಾಭ? ವಿವಿ ಎಂದ ಮೇಲೆ ಏನಾದರೂ ಔಟ್‌ಪುಟ್ ಇರಬೇಕಲ್ಲ? ಮೆಡಿಕಲ್ ಕಾಲೇಜು ಮಾಡಿದರೆ ಒಂದಿಷ್ಟು ಡಾಕ್ಟರ್‌ಗಳು ಹೊರಬರುತ್ತಾರೆ. ಇಂಜಿನಿಯರಿಂಗ್ ಕಾಲೇಜು ಮಾಡಿದರೆ ಇಂಜಿನಿಯರ್‌ಗಳು ಹೊರಬರುತ್ತಾರೆ. ಸಂಸ್ಕೃತ ವಿವಿಯಿಂದ ಯಾರಿಗೆ ಅನುಕೂಲವಾಗುತ್ತದೆ?” ಎಂದು ಪ್ರಶ್ನಿಸುತ್ತಾರೆ ಅವರು.

“ಸಂಸ್ಕೃತ ವಿವಿಗಾಗಿ ರಕ್ಷಿತ ಅರಣ್ಯವನ್ನು ನಾಶ ಮಾಡಲು ಹೊರಟಿದ್ದೀರಿ. ಮಾಗಡಿಯಲ್ಲಿ ಕೃಷಿ ವಿವಿಯನ್ನೋ, ತೋಟಗಾರಿಕೆ ವಿವಿಯನ್ನೋ ಮಾಡಬಹುದು. ಇಲ್ಲಿನ ಜನಕ್ಕೆ ಬೇಡವಾದ ಸಂಸ್ಕೃತ ವಿವಿಯನ್ನು ಏಕೆ ಹೇರುತ್ತಿದ್ದೀರಿ. ಆರ್‌ಎಸ್‌ಎಸ್‌ನವರು ತಮ್ಮ ಅಜೆಂಡಾಗಳನ್ನು ಜಾರಿ ಮಾಡಲು ಸರ್ಕಾರವನ್ನು ಸಶಕ್ತವಾಗಿ ಬಳಸುತ್ತಿದ್ದಾರೆಂಬುದು ಸ್ಪಷ್ಟ” ಎಂದು ಅಭಿಪ್ರಾಯಪಡುತ್ತಾರೆ ದಿನೇಶ್.

ಸಂಸ್ಕೃತ ಕಲಿತು ಮೇಷ್ಟ್ರಾಗಬೇಕಷ್ಟೇ: ಎಚ್.ವಿ.ವೇಣುಗೋಪಾಲ್

ಸಂಸ್ಕೃತ ಪ್ರಾಧ್ಯಾಪಕರಾದ ಎಚ್.ವಿ.ವೇಣುಗೋಪಾಲ್ ಅವರು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಮತ್ತು ಅಲ್ಲೇ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಸಂಸ್ಕೃತ ವಿವಿ ವಿವಾದಕ್ಕೆ ಸಂಬಂಧಿಸಿದಂತೆ ವೇಣುಗೋಪಾಲ್ ಅವರು ತಮ್ಮ ಅಭಿಪ್ರಾಯಗಳನ್ನು ’ನ್ಯಾಯಪಥ’ದೊಂದಿಗೆ ಹಂಚಿಕೊಂಡರು.

“ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ ಬಹಳ ವರ್ಷಗಳಾಗಿವೆ. ಕೆಲಸವೂ ನಡೆಯುತ್ತಿವೆ. ಹೊಸದಾಗಿ ಸ್ಥಾಪನೆಯನ್ನೇನೂ ಮಾಡುತ್ತಿಲ್ಲ. ಆದರೆ ಅದನ್ನು ವಿಸ್ತಾರ ಮಾಡುತ್ತಿದ್ದಾರೆ. ಈಗ ಆಗುತ್ತಿರುವ ಚರ್ಚೆಯನ್ನು ಗಮನಿಸಿದೆ. ಕನ್ನಡಕ್ಕೆ ಆದ್ಯತೆ ಕೊಡಿ ಸಂಸ್ಕೃತ ಆಮೇಲಿರಲಿ ಎಂಬ ವಾದ ಸರಿ ಇದೆ” ಎಂದು ಸ್ಪಷ್ಟಪಡಿಸಿದರು.

“ಸಾಮಾನ್ಯ ಜನರು, ಸಂಸ್ಕೃತ ಗೊತ್ತಿಲ್ಲದವರು ಅಂದುಕೊಂಡಿರುವಂತೆ, ಸಂಸ್ಕೃತ ವಿವಿಯಲ್ಲಿ ಮಂತ್ರ ಕಲಿಸುತ್ತಾರೆ, ಪೂಜೆ ಮಾಡೋದನ್ನು ಕಲಿಸುತ್ತಾರೆ ಎಂಬುದು ತಪ್ಪು ಅಭಿಪ್ರಾಯ. ಪಾರಂಪರಿಕವಾದ ತರ್ಕ, ನ್ಯಾಯ, ವೇದವಿದ್ಯೆ ಮುಂತಾದವನ್ನು ಇಲ್ಲಿ ಕಲಿಸುತ್ತಾರೆ. ಅಂದರೆ ವಿವಿಧ ಜ್ಞಾನಶಾಖೆಗಳನ್ನು ಅಧ್ಯಯನ ಮಾಡಲಾಗುತ್ತದೆ. ಅದರಲ್ಲಿ ವಿಶೇಷವೇನೂ ಇಲ್ಲ. ಸಂಸ್ಕೃತ ವಿಶ್ವವಿದ್ಯಾನಿಲಯ ಇಲ್ಲದಿದ್ದರೂ ಈ ವಿಷಯಗಳನ್ನು ಆಸಕ್ತರು ಕಲಿಯುತ್ತಿದ್ದರು. ಮೊದಲೆಲ್ಲ ಸಂಸ್ಕೃತದ ಬಿ.ಎ., ಎಂ.ಎ. ಇರಲಿಲ್ಲ. ಸಂಸ್ಕೃತ ವಿವಿಯಿಂದ ಇದೊಂದು ಸಾಧ್ಯವಾಗುತ್ತಿದೆ. ಸಂಸ್ಕೃತ ವಿವಿಯಲ್ಲಿ ಕಲಿತು ಮೇಷ್ಟ್ರಾಗಬಹುದೇ ಹೊರತು ಬೇರೇನೂ ಆಗಲು ಸಾಧ್ಯವಿಲ್ಲ ಎನ್ನುತ್ತಾರೆ ಸುಮಾರು 38 ವರ್ಷಗಳ ಕಾಲ ಸಂಸ್ಕೃತ ಕಲಿಸಿರುವ ವೇಣುಗೋಪಾಲ್.

“ಈಗ ಬರುತ್ತಿರುವ ವಿರೋಧಗಳಲ್ಲಿ ಸತ್ಯವಿದೆ. ಹಣ ಹಾಗೂ ಜಾಗದ ದುರುಪಯೋಗದ ಪ್ರಶ್ನೆ ಎದ್ದಿರುವುದು ಸರಿಯೇ ಇದೆ. ಸಂಸ್ಕೃತ ವಿವಿ ಈಗ ಇರುವ ಮಾದರಿಯಲ್ಲೇ ಇದ್ದರೆ ನಷ್ಟವೇನೂ ಆಗಲ್ಲ. ಯಾಕೆಂದರೆ ಸಂಸ್ಕೃತ ಓದುತ್ತಿರುವವರು ಕಡಿಮೆ ಇದ್ದಾರೆ. ಸಂಸ್ಕೃತದಿಂದ ಉಪಯೋಗ ಪಡೆಯುವವರೂ ಕಡಿಮೆ. ತುಂಬಾ ಸಂಪ್ರದಾಯಸ್ಥರು ಸಂಸ್ಕೃತ ಓದುತ್ತಾರೆ. ತ್ರಿಮಸ್ಥರು ಬೇರೆಬೇರೆ ಸಂಸ್ಕೃತ ಕಾಲೇಜುಗಳನ್ನು ರೂಪಿಸಿಕೊಂಡು ಅವರಿಗೆ ಸಂಬಂಧಿಸಿದ್ದನ್ನು ಮಾತ್ರ ಬೋಧಿಸುತ್ತಾರೆ. ಇದೆಲ್ಲ ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಇದರಿಂದ ಯಾರಿಗೇನೂ ತೊಂದರೆಯಾಗಿರಲಿಲ್ಲ. ಆದರೆ ಒಂದು ಸರ್ಕಾರ ಇಷ್ಟು ದೊಡ್ಡ ಪ್ರಮಾಣದ ದುಡ್ಡು ಕೊಟ್ಟು, ಜಾಗ ಕೊಟ್ಟು ಏನೋ ಮಾಡುತ್ತೇನೆ ಎನ್ನುವುದು ಸದ್ಯದ ಸಂದರ್ಭದಲ್ಲಿ ತಪ್ಪಾಗಿದೆ” ಎನ್ನುತ್ತಾರೆ.

ಎಚ್.ವಿ.ವೇಣುಗೋಪಾಲ್

“ಸಂಸ್ಕೃತವನ್ನು ಜ್ಞಾನಕ್ಕಾಗಿ ಕಲಿಯುತ್ತಾರಷ್ಟೇ. ಅದು ಒಂದೇ ಚಾನೆಲ್. ಒಂದು ಪೈಪ್‌ನೊಳಗೆ ಹಾಕಿ ಹುಡುಗರನ್ನು ಕಳಿಸಿದಂತೆ. ಈ ಕಡೆಯಿಂದ ಹೋದರೆ, ಆ ಕಡೆ ಹೊರಗೆ ಬರಬೇಕಷ್ಟೇ. ಇನ್ನೊಂದು ದಾರಿ ಸಂಸ್ಕೃತದಲ್ಲಿ ಇಲ್ಲವೇ ಇಲ್ಲ. ಮೇಷ್ಟ್ರಾಗದಿದ್ದರೆ ಸಂಶೋಧನೆ ಮಾಡಿ, ಪೇಪರ್ ಪಬ್ಲಿಷ್ ಮಾಡಬಹುದು. ಪುಸ್ತಕ ಬರೆದು, ಎಲ್ಲ ಜನರಿಗೂ ಹಂಚಬಹುದು. ಯಾರು ಕೊಂಡುಕೊಳ್ಳುತ್ತಾರೆ? ದೇವರ ಬಗ್ಗೆ, ವ್ರತದ ಬಗ್ಗೆ ಬರೆದರೆ ಹೆಚ್ಚು ಜನ ಕೊಂಡುಕೊಳ್ಳುತ್ತಾರೆ. ಬ್ರಹ್ಮಸೂತ್ರದಲ್ಲಿ ಹೀಗೆ ಹೇಳಿದೆ, ಶಂಕರಚಾರ್ಯರು ಹೀಗೆ ಹೇಳಿದ್ದಾರೆ ಎಂದು ಬರೆದರೆ ನಾಲ್ಕು ಜನ ಶಂಕರರು, ನಾಲ್ಕು ಜನ ಮಾಧ್ವರು ಖರೀದಿಸುತ್ತಾರಷ್ಟೇ. ಸಂಶೋಧನೆಗಳು ಮಗ್ಗುಮ್ಮಾಗಿ ನಡೆಯುತ್ತಿವೆ. ಅದಕ್ಕೆ ತಕರಾರು ತೆಗೆಯಬೇಕಿಲ್ಲ. ಕೆಲವರು ಅದರಲ್ಲೇ ತೊಡಗಿಸಿಕೊಂಡಿದ್ದಾರೆ. ಬೇರೆಯವರು ಆ ಕಡೆ ಹೋಗುವುದೂ ಇಲ್ಲ. ಹೋಗಬೇಕಾಗಿಯೂ ಇಲ್ಲ ಎನ್ನುತ್ತಾರೆ.

“ವಿಶ್ವವಿದ್ಯಾನಿಲಯವನ್ನು ವಿರೋಧಿಸುವುದಿಲ್ಲ. ಆದರೆ ವಿಶ್ವವಿದ್ಯಾನಿಲಯಕ್ಕೆ ಇಷ್ಟು ಜಾಗ ಕೊಟ್ಟು, ದುಡ್ಡು ಕೊಡುವುದನ್ನು ವಿರೋಧಿಸಬೇಕಿದೆ. ಸಂಸ್ಕೃತ ಸಂಶೋಧನೆಗೆ ಬೇಕಾದರೆ ಹಣ ಕೊಡಲಿ. ಈವರೆಗೆ ಹಳೆಯ ಕಾಲದವರು ಮಾಡಿದ್ದನ್ನು ಓದಿಕೊಂಡು ಬಂದಿದ್ದೇವೆ. ಹೊಸ ಸಂಶೋಧನೆ ಆಗಬೇಕಿದೆ” ಎಂಬ ವೇಣುಗೋಪಾಲ್ ಅವರಿಗೆ “ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಹಣ ಕೊಟ್ಟು, ಸಂಸ್ಕೃತ ವಿವಿಯನ್ನು ದೊಡ್ಡ ಮಟ್ಟದಲ್ಲಿ ಕಟ್ಟಿದರೂ ಸಂಸ್ಕೃತ ಜನಭಾಷೆಯಾಗಿ ರೂಪುಗೊಳ್ಳಲು ಸಾಧ್ಯವೆ?” ಎಂದು ಕೇಳಿದ್ದಕ್ಕೆ, “ಖಂಡಿತವಾಗಿಯೂ ಜನಭಾಷೆಯಾಗಿ ಸಂಸ್ಕೃತ ರೂಪುಗೊಳ್ಳುವುದಿಲ್ಲ. ಜನಭಾಷೆಯಾಗಿ ಮಾಡುವ ಅಗತ್ಯವೂ ಇಲ್ಲ. ಇಷ್ಟವಿದ್ದರೆ ಓದಿಕೊಳ್ಳಬಹುದು. ನನಗೆ ಇಷ್ಟವಿದೆ ಓದಿಕೊಳ್ಳುತ್ತೇನೆ. ನನಗೊಂದು ವಿಷಯ ಬೇಕಾದರೆ ಪುಸ್ತಕ ತಿರುವು ಹಾಕಿ ರೆಫರ್ ಮಾಡುತ್ತೇನೆ. ಅದು ಬಿಟ್ಟು ಸಂಸ್ಕೃತವನ್ನು ಇಂಜೆಕ್ಟ್ ಮಾಡುತ್ತೇನೆ- ನಿನಗೊಂದು ಡೋಸ್, ಮತ್ತೆ ಸೆಕೆಂಡ್ ಡೋಸ್ ಎನ್ನಲು ಸಾಧ್ಯವಿಲ್ಲ ಎಂದು ಸ್ಪಷ್ಟಪಸಿದರು.

ಕನ್ನಡದ ಸಂಸ್ಥೆಗಳೇ ಸೊರಗಿಹೋಗುತ್ತಿರುವ ಈ ಸಮಯದಲ್ಲಿ ಮೀಸಲು ಅರಣ್ಯದ ಜಾಗದಲ್ಲಿ ತಲೆ ಎತ್ತುವಂತೆ ಯೋಜಿಸಲಾಗಿರುವ ಈ ಸಂಸ್ಕೃತ ವಿವಿ ನಿಜಕ್ಕೂ ಯಾಕಾಗಿ ಎಂಬುದು ಹಲವರ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತನ್ನ ನಿರ್ಧಾರದ ಬಗ್ಗೆ ಮರುಚಿಂತಿಸಬೇಕು ಎಂಬುದು ಕನ್ನಡಿಗರ ಕೂಗಾಗಿದೆ.


ಇದನ್ನೂ ಓದಿ: ಕನ್ನಡ ಸಂಘಟನೆಗಳು v/s BJP, RSS ಆದ ಸಂಸ್ಕೃತ ವಿವಿ ವಿವಾದ: ದಿ ಪ್ರಿಂಟ್ ವರದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಳಗಾವಿ: ಕಾಲೇಜಿನಲ್ಲಿ ಕನ್ನಡ ಬಾವುಟ ಹಿಡಿದ ವಿದ್ಯಾರ್ಥಿಗೆ ಥಳಿತ -ಕರವೇ ಪ್ರತಿಭಟನೆ

0
ಕರ್ನಾಟಕ - ಮಹಾರಾಷ್ಟ್ರ ಗಡಿ ವಿವಾದ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಅದು ಕಾಲೇಜು ಹಂತದವರೆಗೂ ವ್ಯಾಪಿಸಿರುವುದು ದುರಂತ. ನಿನ್ನೆ ಬೆಳಗಾವಿಯ ಗೋಗ್ಟೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಬಾವುಟ ಹಿಡಿದು ಸಂಭ್ರಮಿಸಿದ ದ್ವಿತೀಯ ಪಿಯುಸಿ...