ಹೆಸರಾಂತ ಹಿರಿಯ ವಿಜ್ಞಾನಿ ಪ್ರೊ.ರೊದ್ದಾಂ ನರಸಿಂಹರವರ ನಿಧನನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಏರೋಸ್ಪೇಸ್, ಮೋಡಗಳ ರಚನೆ, ಫ್ಲೂಯಿಡ್ ಡೈನಮಿಕ್ಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಂಶೋಧನೆ ನಡೆಸಿದ್ದ 87 ವರ್ಷದ ಪ್ರೊ.ರೊದ್ದಾಂ ನರಸಿಂಹರವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದರು.

ಒಂದು ತಿಂಗಳಿನಿಂದಲೂ ಮೆದುಳಿನ ರಕ್ತಸ್ರಾವ ಸೇರಿದಂತೆ ಹಲವು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಗದ್ವಿಖ್ಯಾತ ವಿಜ್ಞಾನಿ, ಪದ್ಮವಿಭೂಷಣ ರೊದ್ದಂ ನರಸಿಂಹ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. “ಏರೋಸ್ಪೇಸ್ ಮತ್ತು ಬಾಹ್ಯಾಕಾಶ ವಿಜ್ಞಾನಕ್ಕೆ ರೊದ್ದಂ ನರಸಿಂಹ ಅವರ ಕೊಡುಗೆ ಮಹತ್ವಪೂರ್ಣವಾದುದು. ಅವರ ನಿಧನದಿಂದ ದೇಶ ಶ್ರೇಷ್ಠ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿಯನ್ನು ಕರುಣಿಸಲಿ. ಅವರ ಕುಟುಂಬದವರು, ಅಭಿಮಾನಿ ಬಳಗದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ” ಅವರು ಟ್ವೀಟ್ ಮಾಡಿದ್ದಾರೆ.

ನಾಡಿನ ಹೆಸರಾಂತ ವಿಜ್ಞಾನಿ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ರೊದ್ದಂ ನರಸಿಂಹ ಅವರ ನಿಧನ ಅಪಾರ ನೋವನ್ನುಂಟು ಮಾಡಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ರೊದ್ದಂ ನರಸಿಂಹ ಅವರ ಕೊಡುಗೆ ಅವಿಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಭಾರತ: ಕಳೆದ 5 ತಿಂಗಳಲ್ಲೇ ಅತ್ಯಂತ ಕಡಿಮೆ ವರದಿಯಾದ ಕೊರೊನಾ ಪ್ರಕರಣಗಳು

LEAVE A REPLY

Please enter your comment!
Please enter your name here