Homeಮುಖಪುಟಏನಿವು ಮೂರು ಕೃಷಿ ಕಾಯಿದೆಗಳು - ಮರು ಓದು

ಏನಿವು ಮೂರು ಕೃಷಿ ಕಾಯಿದೆಗಳು – ಮರು ಓದು

- Advertisement -
- Advertisement -

ಮೊದಲಿಗೆ ಮೂರು ಕೃಷಿ ಕಾಯಿದೆಗಳ ಕೆಲವು ಪ್ರಮುಖ ಅಂಶಗಳು

ಕೃಷಿ ಕಾಯಿದೆಗಳ ಬಗ್ಗೆ ಮೂರು ಪ್ರಾಥಮಿಕ ಅಂಶಗಳು

1. ಈ ಕಾಯಿದೆಗಳಿಗೆ ಯಾವುದೇ ರೈತ ಸಂಘಟನೆ ಅಥವಾ ರೈತರು ಬೇಡಿಕೆ ಇಟ್ಟಿದ್ದಿಲ್ಲ. ರೈತರರ ಬೇಡಿಕೆಗಳು ಮತ್ತು ಕಾಯಿದೆಗಳ ನಿಯಮಗಳು ವಿರುದ್ಧ ದಿಕ್ಕಿನಲ್ಲಿವೆ.

2. ಸಂಸತ್ತಿನಲ್ಲಿ ಅಥವಾ ಹೊರಗೆ ಈ ಕಾಯಿದೆಗಳ ಬಗ್ಗೆ ಚರ್ಚೆ ನಡೆಸಲಿಲ್ಲ. ಈ ಕಾಯಿದೆಗಳನ್ನು ತರುವುದಕ್ಕಿಂತ ಮುಂಚೆ, ಯಾವ ರೈತ ಸಂಘಟನೆಗಳೊಂದಿಗೂ ಚರ್ಚಿಸಲಾಗಿಲ್ಲ. ಈ ಕಾಯಿದೆಗಳನ್ನು ಅನುಮೋದನೆ ಮಾಡುವಾಗ ಸಂಸತ್ತಿನಲ್ಲೂ ಚರ್ಚೆಗೆ ಅವಕಾಶ ಮಾಡಿಕೊಡಲಿಲ್ಲ.

3. ದೇಶದ ಎಲ್ಲಾ ರೈತ ಸಂಘಟನೆಗಳು ಈ ಕಾಯಿದೆಗಳ ವಿರುದ್ಧ ಪ್ರತಿಭಟನೆ ಮಾಡಿವೆ; ಆಡಳಿತಾರೂಢ ಭಾರತೀಯ ಜನತಾ ಪಕ್ಷದ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಕೂಡ ಈ ಕಾಯಿದೆಗಳ ವಿರುದ್ಧ ಧ್ವನಿ ಎತ್ತಿತ್ತು.

ರೈತರು ವಿರೋಧಿಸುತ್ತಿರುವ ಮೂರು ಕಾಯಿದೆಗಳ ಕೆಲವು ಪ್ರಮುಖ ಅಂಶಗಳು

ಇದನ್ನೂ ಓದಿ: ರಾಜ್ಯದಲ್ಲಿಯೂ ಕೃಷಿ, ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ವಾಪಸ್ ಆಗಲಿ: ಪ್ರಕಾಶ್ ಕಮ್ಮರಡಿ

1. THE FARMERS’ PRODUCE TRADE AND COMMERCE (PROMOTION AND FACILITATION) ACT, 2020

ಅಂದರೆ, ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ 2020
(ಇದನ್ನು ಎಪಿಎಂಸಿ ಬೈಪಾಸ್ ಕಾಯಿದೆ ಎಂತಲೂ ಕರೆಯಲಾಗುತ್ತಿದೆ)

ಈ ಕಾಯಿದೆಯ ಮುಖ್ಯ ಅಂಶಗಳು ಮತ್ತು ತಕರಾರುಗಳು

1. ಸರಕಾರದ ಪ್ರಕಾರ ರೈತರು ತಮ್ಮ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಹೊರಗೆ ಮಾರಲು ಈ ಕಾಯಿದೆಯು ಅನುವು ಮಾಡಿಕೊಡುತ್ತದೆ. ಆಯಾ ರಾಜ್ಯಗಳ ಹೊರಗೆ ಮತ್ತು ರಾಜ್ಯದಲ್ಲಿ ಎಲ್ಲಿಯಾದರೂ ಮತ್ತು ಇ-ಕಾಮರ್ಸ್ ಮೂಲಕ ಮಾರಾಟ ಮಾಡಲು, ಹಾಗೂ ಎಪಿಎಂಸಿ ಮಾರುಕಟ್ಟೆಯ ಹೊರಗೆ ವರ್ತಕರು ಯಾವುದೇ ಸುಂಕವಿಲ್ಲದೇ ಖರೀದಿ ಮಾಡಲು ಅನುವು ಮಾಡಿಕೊಡುತ್ತದೆ; ಹಾಗಾಗಿ ರೈತರಿಗೆ ಅನುಕೂಲವಾಗುತ್ತದೆ ಎಂದು ಪ್ರತಿಪಾದಿಸಲಾಗಿದೆ. ಆದರೆ, ಈ ಮುಂಚೆಯೂ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿಯಾದರೂ ಮಾರಾಟ ಮಾಡಬಹುದಿತ್ತು. ಇದುವರೆಗೆ ಎಪಿಎಂಸಿಯಲ್ಲಿ ವ್ಯಾಪಾರ ನಡೆಸುವ ವರ್ತಕರು ತೆರಿಗೆ ಕಟ್ಟಬೇಕಾಗಿತ್ತು. ಆದರೆ ಹೊಸ ಕಾಯಿದೆ ಬಂದ ಮೇಲೆ ಯಾವ ಸರಕಾರವೂ, ಎಪಿಎಂಸಿ ಹೊರಗಡೆ ಕೃಷಿ ಉತ್ಪನ್ನಗಳನ್ನು ವರ್ತಕರು ಖರೀದಿ ಮಾಡಿದಲ್ಲಿ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ಯಾವುದೇ ವರ್ತಕ ಎಪಿಎಂಸಿಯಲ್ಲಿ ಖರೀದಿ ಮಾಡುವುದಿಲ್ಲ. ಹಾಗಾಗಿ ಎಪಿಎಂಸಿಗಳು ಮುಚ್ಚಿಹೋಗುವುದು ಖಚಿತ. ಈ ಕಾಯಿದೆಯಿಂದ ವರ್ತಕರಿಗೆ ಅನುಕೂಲವಾಗುವುದೇ ಹೊರತು ರೈತರಿಗಲ್ಲ.

2. ರೈತರ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ, ಮಿನಿಮಮ್ ಸಪೋರ್ಟ್ ಪ್ರೈಸ್) ಬಗ್ಗೆ ಯಾವ ಉಲ್ಲೇಖವೂ ಇಲ್ಲ. ಪ್ರತಿ ವರ್ಷ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸುಮಾರು 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುತ್ತವೆ. ಎಪಿಎಂಸಿಗಳಲ್ಲಿ ಸರಕಾರ ಅದೇ ದರದಲ್ಲಿ ಖರೀದಿ ಮಾಡಿದಾಗ ರೈತರಿಗೆ ಅನುಕೂಲವಾಗುತ್ತದೆ. ಎಪಿಎಂಸಿಗಳೇ ಮುಚ್ಚಿಹೋದಲ್ಲಿ, ಎಂಎಸ್‌ಪಿ ಯಾರು ನೀಡುವರು?

3. ಕೃಷಿ ಎಂಬುದು ರಾಜ್ಯದ ಬಾಬತ್ತಿನ ವಿಷಯ, ಒಕ್ಕೂಟ ಸರಕಾರಕ್ಕೆ ಈ ಕಾನೂನನ್ನು ರಚಿಸುವ ಅಧಿಕಾರ ಇಲ್ಲ.

PC : Sponatanesous Order

4. ಈ ಕಾನೂನಿನಪ್ರಕಾರ ರೈತರು ಮತ್ತು ವರ್ತಕರ ಮಧ್ಯೆ ಯಾವುದೇ ವಿವಾದ ಉದ್ಭವಿಸಿದರೆ, ಆಗ ರೈತರು ನ್ಯಾಯಾಲಯಕ್ಕೆ ಹೋಗಿ ನ್ಯಾಯ ಕೇಳುವಂತಿಲ್ಲ. ಈ ಕಾಯಿದೆಯ ಚಾಪ್ಟರ್ 5ರ 15ನೇ ಕಲಂ ಹೇಳುವುದೇನೆಂದರೆ, ’ವಿವಾದಗಳಿಗೆ ಸಂಬಂಧಿಸಿದ ಯಾವುದೇ ವಿಷಯಗಳಲ್ಲಿ ಯಾವ ಸಿವಿಲ್ ನ್ಯಾಯಾಲಯಕ್ಕೂ ಅಧಿಕಾರ ಇರುವುದಿಲ್ಲ. ವಿವಾದಗಳನ್ನು ಬಗೆಹರಿಸಲು, ತಹಶೀಲ್ದಾರರಿಂದ ಶುರು ಮಾಡಿ ಜಂಟಿ ಕಾರ್ಯದರ್ಶಿ ಮಟ್ಟದ ನಿಯೋಜಿತ ಅಧಿಕಾರಿಯ ತನಕ ಹೋಗಬಹುದು. ಆದರೆ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ತಹಶೀಲ್ದಾರರಿಂದ ಜಂಟಿ ಕಾರ್ಯದರ್ಶಿಯವರೆಗಿನ ಕಾರ್ಯಾಂಗವು ಅಧಿಕಾರಸ್ಥರು ಮತ್ತು ಬಂಡವಾಳಸ್ಥರ ಪ್ರಭಾವಕ್ಕೆ ಸುಲಭಕ್ಕೆ ಮಣಿಯುತ್ತಾರಾದ್ದರಿಂದ ರೈತರಿಗೆ ನ್ಯಾಯ ಮರೀಚಿಕೆಯಾಗಲಿದೆ.

5. ಎಪಿಎಂಸಿ ಇದ್ದ ಕಾರಣದಿಂದ ಕೃಷಿ ಉತ್ಪನ್ನಗಳ ವ್ಯಾಪಾರದ ನಿಯಂತ್ರಣದ ಮೂಲಕ ವ್ಯಾಪಾರಿಗಳಿಂದ ಆಗಬಹುದಾದ ಶೋಷಣೆಯಿಂದ ತಪ್ಪಿಸಿಕೊಳ್ಳುವ ಒಂದು ಸಾಧ್ಯತೆ ಇತ್ತು. ಅದು ಈಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೇ ಇದ್ದರೂ ಕನಿಷ್ಠ ಮಟ್ಟದ ಪ್ರಯೋಜನ ಈಗಲೂ ಇತ್ತು. ರೈತರ ಹೋರಾಟದಿಂದ ಒತ್ತಡ ತಂದು ಪರಿಣಾಮಕಾರಿಯಾಗಿಸಿಕೊಳ್ಳುವ ಸಾಧ್ಯತೆಯಾದರೂ ಇತ್ತು. ಈಗ ಎಪಿಎಂಸಿ ಮುಚ್ಚಿ ಅಥವಾ ಅವುಗಳನ್ನು ನಗಣ್ಯಗೊಳಿಸಿ ಎಲ್ಲ ವ್ಯವಹಾರವೂ ನಿಯಂತ್ರಣಗಳಿಂದ ಹೊರಬಂದ ಮೇಲೆ, ರೈತರಿಗೆ ಯಾವ ಸಹಾಯವೂ ದೊರಕುವುದಿಲ್ಲ.

6. ಸರಕಾರ ಹೇಳುತ್ತಿರುವುದು; ರೈತರಿಗೆ ಮುಕ್ತ ವ್ಯಾಪಾರದ, ಸ್ಪರ್ಧಾತ್ಮಕ ಬೆಲೆಯ ಲಾಭ ಸಿಗುತ್ತದೆ ಎಂದು. ಆದರೆ, ಒಂದೆರಡು ವರ್ಷಗಳಲ್ಲಿ ಈ ವ್ಯವಹಾರ ಕೆಲವೇ ಕೆಲವು ಕಂಪನಿಗಳ ಏಕಸ್ವಾಮ್ಯಕ್ಕೆ ಒಳಗಾಗಿ, ಆಯಾ ಕಂಪನಿಗಳು ನಿಗದಿಪಡಿಸಿದ ದರಕ್ಕೆ (ಅದು ಎಷ್ಟೇ ಕಡಿಮೆಯಾಗಿರಲಿ) ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ತಲೆದೋರುತ್ತದೆ. ಅಂತಹ ಸಂದರ್ಭದಲ್ಲಿ ರೈತರ ಹಿತಾಸಕ್ತಿಗಳನ್ನು ರಕ್ಷಿಸಲು ಈ ಕಾಯಿದೆಯಲ್ಲಿ ಯಾವುದೇ ಅವಕಾಶಗಳಿಲ್ಲ. ಬಲಾಢ್ಯ ಕಂಪೆನಿಗಳು ಹೀಗೆ ಮಾಡಿದ ಸಾವಿರಾರು ಉದಾಹರಣೆಗಳು ಈಗಾಗಲೇ ಇದ್ದು, ಸರ್ಕಾರವು ಅವನ್ನು ನಿಯಂತ್ರಿಸಿದ್ದು ಇದುವರೆಗೆ ಕಂಡಿಲ್ಲ.

ಇದನ್ನೂ ಓದಿ: ವಿವಾದಿತ ಕೃಷಿ ಕಾಯ್ದೆಗಳು ರದ್ದು: ಕ್ಷಮೆಯಾಚಿಸಿದ ಮೋದಿ, ರೈತರ ಹೋರಾಟಕ್ಕೆ ಗೆಲುವು

2.THE FARMERS (EMPOWERMENT AND PROTECTION) AGREEMENT ON PRICE ASSURANCE AND FARM SERVICES ACT, 2020

ಅಂದರೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ 2020. ಇದನ್ನು ಗುತ್ತಿಗೆ ಕೃಷಿ ಕಾಯಿದೆ ಎಂದೂ ಕರೆಯಲಾಗುತ್ತಿದೆ.

ಈ ಕಾಯಿದೆ ಗುತ್ತಿಗೆ ಕೃಷಿಗೆ ಹಾಗೂ ಇ-ಮಾರುಕಟ್ಟೆಗಳಿಗೆ ಅನುವು ಮಾಡಿಕೊಡುತ್ತದೆ ಎಂದು ಬಿಂಬಿಸಲಾಗುತ್ತದೆ. ಅದು ನಿಜವೂ ಕೂಡ. ಆದರೆ ಅದರಿಂದ ರೈತರಿಗೆ ಅನುಕೂಲವಾಗುವುದೇ?

1. ಈ ಕಾನೂನಿನ ಅಡಿಯಲ್ಲಿ ವರ್ತಕರು, ಕಂಪನಿಗಳು, ದೊಡ್ಡ ದೊಡ್ಡ ಕಾರ್ಪೊರೇಟ್‌ಗಳು ರೈತರೊಂದಿಗೆ ಹೇಗೆಲ್ಲ ಒಪ್ಪಂದ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಸೂಚನೆಗಳಿವೆ. ಆದರೆ, ಇವುಗಳಿಂದ ಅನುಕೂಲ ಆಗುವುದು ವರ್ತಕರು ಮತ್ತು ದೊಡ್ಡ ದೊಡ್ಡ ಕಾರ್ಪೊರೇಟ್‌ಗಳಿಗೆ ಹೊರತು ರೈತರಿಗಲ್ಲ. ಏಕೆಂದರೆ, ಆಯಾ ಒಪ್ಪಂದದ ನಿಯಮಗಳು ಮತ್ತು ಷರತ್ತುಗಳನ್ನು ಎಂದೂ ರೈತರು ನಿರ್ಧರಿಸುವುದಿಲ್ಲ. ಆ ಒಪ್ಪಂದದ ಷರತ್ತುಗಳು, ಆಯಾ ಉತ್ಪನ್ನಗಳ ಗುಣಮಟ್ಟ, ದರ್ಜೆ, ಸ್ಟ್ಯಾಂಡರ್ಡ್, ಆ ಉತ್ಪನ್ನಗಳು ಯಾವಾಗ ನೀಡಲಾಗುವುದು ಎಂಬೆಲ್ಲದರ ಬಗ್ಗೆ ಇರುತ್ತವೆ. ಆ ಮಟ್ಟಕ್ಕೆ ಕೃಷಿ ಉತ್ಪನ್ನವನ್ನು ತಯಾರಿಸಿ ಕೊಡಲು ಜಮೀನೇನೂ ಕೈಗಾರಿಕೆಯಲ್ಲ. ಮಳೆ, ಬೀಜದ ಗುಣಮಟ್ಟ, ವಿವಿಧ ನೈಸರ್ಗಿಕ ಸಂಗತಿಗಳು ಗುಣಮಟ್ಟವನ್ನು ನಿರ್ಧರಿಸುತ್ತವೆ. ಅಂತಿಮವಾಗಿ ರೈತರು ತಾವು ತಿಂಗಳುಗಟ್ಟಲೆ ಶ್ರಮವಹಿಸಿ ಬೆಳೆದ ಬೆಳೆಯು ಗುಣಮಟ್ಟದ್ದಲ್ಲ ಎಂದು ತಿರಸ್ಕೃತವಾಗಿ, ಬೀದಿಯಲ್ಲಿ ನಿಲ್ಲುವಂತಾಗುತ್ತದೆ.

2. ಈ ಕಾಯಿದೆಯ ಪ್ರಕಾರ, ರೈತರು ಮತ್ತು ಗುತ್ತಿಗೆಯ ಕಂಪನಿಗಳ ಬಗ್ಗೆ ಯಾವುದೇ ವಿವಾದ ಉದ್ಭವಿಸಿದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ. ಆ ವಿವಾದಗಳನ್ನು ಬಗೆಹರಿಸಿಕೊಡಬೇಕೆಂದು ನಿರ್ದಿಷ್ಟ ಪ್ರಾಧಿಕಾರಕ್ಕೆ ಅಪೀಲು ಹೋಗಬೇಕು.

3. ಈ ಮುಂಚೆ ದೊಡ್ಡ ದೊಡ್ಡ ಕಂಪನಿಗಳು ಮತ್ತು ರೈತರ ನಡುವೆ ಆದ ಇಂತಹ ಗುತ್ತಿಗೆಗಳಲ್ಲಿ ರೈತರು ಯಾವಾಗಲೂ ನಷ್ಟ ಅನುಭವಿಸಿದ್ದಾರೆ. ತಮಗೆ ಲಾಭ ಇಲ್ಲ ಎಂದು ಅನಿಸಿದಾಗ ಕಂಪನಿಗಳು ಕೃಷಿ ಉತ್ಪನ್ನಗಳನ್ನು ಖರೀದಿಸಲು ನಿರಾಕರಿಸಬಹುದು. ಆಗ ರೈತನಿಗೆ ಏನೂ ಮಾಡಲು ಬರುವುದಿಲ್ಲ.

4. ಒಂದುವೇಳೆ ವಿವಾದವಾಗಿ ಕಂಪನಿ ತಪ್ಪಿತಸ್ಥ ಎಂದಿದ್ದಲ್ಲಿ, ಆ ಒಪ್ಪಂದದ ಒಂದೂವರೆ ಪಟ್ಟು ಖರ್ಚನ್ನು ನೀಡಬೇಕಾಗುತ್ತದೆ, ಆದರೆ ಒಂದು ವೇಳೆ ರೈತ ತಪ್ಪಿತಸ್ಥ ಎಂದಾದಲ್ಲಿ (ಗುಣಮಟ್ಟ, ತೇವಾಂಶ, ಕೀಟನಾಶಕಗಳ ಪ್ರಮಾಣ ಹೆಚ್ಚಿದೆಯೆಂದು ಅಥವಾ ಇಂತಹ ಕಾರಣಗಳನ್ನು ನೀಡಿ, ಕಂಪನಿಯು ಖರೀದಿಸಲು ಒಪ್ಪದೇ ಇದ್ದಾಗ) ಒಪ್ಪಂದದ ಪ್ರಕಾರ ಆ ನಿರ್ದಿಷ್ಟ ಬೆಳೆ ಬೆಳೆಯಲು ಕಂಪನಿ ಏನೇನು ಕೊಟ್ಟಿತ್ತೋ, ಅದರ ಖರ್ಚನ್ನು ಮರಳಿ ಪಾವತಿಸಬೇಕಾಗುತ್ತದೆ. ಅಂದರೆ, ಇತ್ತ ಬೆಳೆಯನ್ನು ಮಾರಾಟ ಮಾಡಲಾಗುವುದಿಲ್ಲ ಹಾಗೂ ಏನೆಲ್ಲಾ ಖರ್ಚಾಗಿದೆಯೋ ಅದರ ದುಡ್ಡನ್ನೂ ಪಾವತಿಸಬೇಕಾಗುತ್ತದೆ. 14. (2) (ii)

5. ಒಂದು ವೇಳೆ ಒಪ್ಪಂದದಿಂದ ಹೊರಬರ ಬೇಕೆಂದರೆ ಇರುವ ಷರತ್ತುಗಳು; ಪರಸ್ಪರ ಒಪ್ಪಿಗೆಯಿಂದ ಮಾತ್ರ ಹೊರಬರಬಹುದು. ಒಂದುವೇಳೆ ಕಂಪನಿ ಒಪ್ಪದಿದ್ದರೆ, ರೈತ ತಪ್ಪಿತಸ್ಥ ಎಂತಲೇ ಪರಿಗಣಿಸಲಾಗುವುದು. ಸೆಕ್ಷನ್ 11. ಅಂದರೆ, ಒಪ್ಪಂದ ಎಷ್ಟೇ ತಾರತಮ್ಯದಿಂದ ಕೂಡಿದ್ದರೂ, ಅದರಿಂದ ಹೊರಬರಲು ಸಾಧ್ಯವಿಲ್ಲ.

ಇದನ್ನೂ ಓದಿ: ಯಶಸ್ಸಿನತ್ತ ಒಗ್ಗಟ್ಟು ಮತ್ತು ನ್ಯಾಯ: ಕೃಷಿ ಕಾಯ್ದೆಗಳ ರದ್ಧತಿಗೆ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಕ್ರಿಯೆ

3. THE ESSENTIAL COMMODITIES (AMENDMENT) ACT, 2020

ಅಂದರೆ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ 2020

ಇದು ಹೊಸ ಕಾಯಿದೆ ಅಲ್ಲ. ವ್ಯಾಪಾರಸ್ಥರು ತಮ್ಮ ಗೋದಾಮುಗಳಲ್ಲಿ ಕೃಷಿ ಉತ್ಪನ್ನಗಳನ್ನು ಸಿಕ್ಕಾಪಟ್ಟೆ ಸಂಗ್ರಹ ಮಾಡಿಬಿಟ್ಟು ಕೃತಕ ಅಭಾವ ಸೃಷ್ಟಿಸಿ ವಿಪರೀತ ಬೆಲೆ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದ್ದೇ ಇರುತ್ತದೆ. ಹಾಗಾಗದಿರಲೆಂದು 1955ರಲ್ಲಿ ಆಹಾರ ಉತ್ಪನ್ನಗಳನ್ನು ಒಂದು ಮಿತಿಯ ನಂತರ ದಾಸ್ತಾನು ಮಾಡಬಾರದು ಎಂದು ಈ ಕಾಯಿದೆಯನ್ನು ತರಲಾಗಿತ್ತು. ಈಗ ಈ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ.
ಪ್ರಮುಖ ಅಂಶಗಳು-

1. ಆಹಾರ ಧಾನ್ಯಗಳು, ಬೇಳೆಕಾಳು, ಆಲೂಗಡ್ಡೆ, ಈರುಳ್ಳಿ, ಖಾದ್ಯತೈಲ ಇವುಗಳ ಶೇಖರಣೆ ಅಥವಾ ದಾಸ್ತಾನು ಮಾಡಿಕೊಳ್ಳುವುದರ ಮೇಲೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇವುಗಳ ಮೇಲೆ ಕ್ಷಾಮ, ಯುದ್ಧ ಅಥವಾ ಅಸಾಧಾರಣ ಬೆಲೆ ಏರಿಕೆಯ ಸಮಯದಲ್ಲಿ ನಿರ್ಬಂಧ ವಿಧಿಸಬಹುದು ಎಂದಿದ್ದರೂ, ಅದೇ ಕಾಯ್ದೆಯ ಇನ್ನೊಂದು ಕಲಂ ಅದನ್ನೂ ಅರ್ಥಹೀನಗೊಳಿಸಿದೆ.

2. ತೋಟಗಾರಿಕೆ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾ ನೂರಕ್ಕಿಂತಲೂ ಹೆಚ್ಚು ಏರಿಕೆಯಾದಾಗ ಮತ್ತು ಕೊಳೆಯದ ಆಹಾರ ಉತ್ಪನ್ನಗಳ ಬೆಲೆಯಲ್ಲಿ ಶೇಕಡಾ ಐವತ್ತಕ್ಕಿಂತಲೂ ಏರಿಕೆಯಾದಲ್ಲಿ ಮಾತ್ರ ನಿರ್ಬಂಧಗಳನ್ನು ವಿಧಿಸುವ ಅವಕಾಶ ಇದೆ. ಆದರೆ ಈ ನಿರ್ಬಂಧಗಳು ಸಂಸ್ಕರಣೆ ಮಾಡುವವರಿಗೆ (ಪ್ರೊಸೆಸರ್) ಅಥವಾ ಮೌಲ್ಯವರ್ಧನೆ ಮಾಡುವವರಿಗೆ (ವ್ಯಾಲ್ಯೂ ಚೈನ್ ಪಾರ್ಟಿಸಿಪಂಟ್) ಅನ್ವಯ ಆಗುವುದಿಲ್ಲ. ಇವರು ಯಾರು ಎಂದು ನೋಡಿದರೆ ಪ್ಯಾಕೇಜ್ ಮಾಡುವುದು, ಸ್ಟೋರೇಜ್ ಅಂದರೆ ಸಂಗ್ರಹ ಮಾಡುವುದು, ಸಾಗಣೆ ಮಾಡುವುದು ಇತ್ಯಾದಿಗಳನ್ನೂ ಮೌಲ್ಯವರ್ಧನೆ (ತಿದ್ದುಪಡಿ ಕಾಯ್ದೆಯ ಸೆಕ್ಷನ್ 2ರ ವಿವರಣೆ ಭಾಗ) ಎಂದು ಹೇಳಲಾಗಿದೆ.

3. 2015ರಲ್ಲಿ ತೊಗರಿಬೇಳೆಯ ಬೆಲೆ ಇನ್ನೂರಕ್ಕೆ ತಲುಪಿದ್ದು, ಈ ರೀತಿಯಲ್ಲಿ ಅಕ್ರಮ ಶೇಖರಣೆ ಮಾಡಿ, ಆಮದು ಮಾಡಿಕೊಂಡಿದ್ದರ ಕಾರಣಕ್ಕೆ. ಈಗ ಅವೇ ಅಕ್ರಮಗಳು ಸಕ್ರಮವಾಗುತ್ತವೆ. ಹಾಗೂ ರೈತರಿಂದ ಕಡಿಮೆ ಬೆಲೆಯಲ್ಲಿ ಖರೀದಿಸಿ, ಬೇಕಾದಷ್ಟು ಪ್ರಮಾಣದಲ್ಲಿ ಸಂಗ್ರಹ ಮಾಡಿ, ಕೃತಕ ಅಭಾವವನ್ನು ಸೃಷ್ಟಿಸಿ ಗ್ರಾಹಕರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅದೇ ಸಂದರ್ಭದಲ್ಲಿ ಒಂದುವೇಳೆ ರೈತರ ಜಮೀನಿನಿಂದ ಬೆಳೆ ಕಟಾವಾಗುವಾಗ ಶೇ.50ರಿಂದ 100ರಷ್ಟು ಬೆಲೆ ಏರಿಕೆಯಿದ್ದರೆ, ಆಗ ನಿರ್ಬಂಧಗಳನ್ನು ವಿಧಿಸುವ ಅವಕಾಶವಿರುತ್ತದೆ. ಅದರಿಂದಾಚೆಗೆ ವ್ಯಾಪಾರಿಗಳು ಕೊಂಡು ಸಂಗ್ರಹ ಮಾಡಿದರೆ ಅದು ಮೌಲ್ಯವರ್ಧನೆಯ ಅಡಿಯಲ್ಲಿ ಬಂದು ಅದಕ್ಕೆ ಯಾವುದೇ ನಿರ್ಬಂಧವಿಲ್ಲ.

ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ), ಎಂಎಸ್‌ಪಿ(ಕನಿಷ್ಠ ಬೆಂಬಲ ಬೆಲೆ), ಎಫ್‌ಸಿಐ (ಭಾರತೀಯ ಆಹಾರ ನಿಗಮ) ಮತ್ತು ಪಿಡಿಎಸ್ (ಪಡಿತರ ವ್ಯವಸ್ಥೆ) ಈ ನಾಲ್ಕೂ ವ್ಯವಸ್ಥೆಗಳು ಭಾರತದ ಆಹಾರ ಭದ್ರತೆಯ ಮೂಲಸ್ತಂಭಗಳು. ಈಗ ಎಫ್‌ಸಿಐಗೆ ನೀಡುವ ಸಬ್ಸಿಡಿಯನ್ನು ಈ ವರ್ಷದ ಬಜೆಟ್‌ನಲ್ಲಿ ಗಣನೀಯವಾಗಿ (ಸುಮಾರು 70%) ಕಡಿತಗೊಳಿಸಲಾಗಿದೆ, ಅಂದರೆ ಸರಕಾರದಿಂದ ಖರೀದಿ ಕಡಿಮೆಯಾಗುತ್ತಾ ಹೋಗಲಿದೆ. ಅಂದರೆ ಎಪಿಎಂಸಿಗಳಲ್ಲಿ ರೈತರಿಂದ ಸರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವುದನ್ನು ಕಡಿತಗೊಳಿಸಲಾಗುವುದು ಅಥವಾ ನಿಲ್ಲಿಸಲಾಗುವುದು. ಅದರಿಂದ ಸ್ವಾಭಾವಿಕವಾಗಿಯೇ ಪಡಿತರ ವ್ಯವಸ್ಥೆಯಿಂದ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸಿಗುತ್ತಿರುವ ಆಹಾರಧಾನ್ಯಗಳಲ್ಲೂ ಕಡಿತವಾಗುವುದು.

ಒಟ್ಟಾರೆಯಾಗಿ, ಈ ಮೂರೂ ಕೃಷಿ ಕಾಯಿದೆಗಳಿಂದ ಅನುಕೂಲವಾಗುವುದು ದೊಡ್ಡ ದೊಡ್ಡ ಕಾರ್ಪೊರೇಟ್‌ಗಳಿಗೇ ಹೊರತು ರೈತರಿಗೆ ಅಥವಾ ಗ್ರಾಹಕರಿಗಲ್ಲ. ಭಾರತದ ಸುಮಾರು 50%ರಷ್ಟು ಜನರು ತೊಡಗಿಸಿಕೊಂಡಿರುವ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ಗಳ ಹತೋಟಿಗೆ ನೀಡುವುದಕ್ಕಾಗಿಯೇ ಈ ಕಾನೂನುಗಳನ್ನು ರಚಿಸಲಾಗಿದೆ ಎಂದು ಖಡಾಖಂಡಿತವಾಗಿ ಹೇಳಬಹುದು.

ಈ ಸಂದರ್ಭದಲ್ಲಿ ಈ ಕಾಯ್ದೆಗಳನ್ನು ಏಕೆ ತರಲಾಗುತ್ತಿದೆ?

ದೊಡ್ಡ ಕಾರ್ಪೊರೇಟ್ ಕುಳಗಳು ತಮಗೆ ಬೇಕಾದ ಎಲ್ಲ ಕ್ಷೇತ್ರಗಳಿಗೂ ತಮ್ಮ ಕಬಂಧ ಬಾಹುಗಳನ್ನು ಚಾಚಿ ಆಗಿದೆ. ಉದ್ಯೋಗಾವಕಾಶಗಳು ಮತ್ತು ಸಂಪತ್ತಿನ ಹಂಚಿಕೆಯ ದೃಷ್ಟಿಯಿಂದ ಏಕಸ್ವಾಮ್ಯ ತಪ್ಪಿಸಬೇಕೆಂದು ಹಲವು ಕ್ಷೇತ್ರಗಳಲ್ಲಿ ದೊಡ್ಡ ಕುಬೇರರಿಗೆ ಅವಕಾಶವಿರಲಿಲ್ಲ. ಅಂತಹ ಹಲವು ಕ್ಷೇತ್ರಗಳಲ್ಲಿ ಅತಿಸಣ್ಣ, ಸಣ್ಣ, ಮಧ್ಯಮ ಉದ್ಯಮಿಗಳಿಗೆ (ಎಮ್‌ಎಸ್‌ಎಮ್‌ಈ) ಮಾತ್ರ ಪ್ರವೇಶಾವಕಾಶ ಇತ್ತು. ಕಳೆದ 30 ವರ್ಷಗಳಿಂದ ಅಂತಹ ನಿರ್ಬಂಧಗಳನ್ನೆಲ್ಲಾ ಸಡಿಲಿಸಿ ಆ ಕ್ಷೇತ್ರಗಳಿಗೆ ಕಾರ್ಪೋರೇಟ್‌ಗಳು ಬಂದು ಆಗಿದೆ. ಚಿಲ್ಲರೆ ವ್ಯಾಪಾರಕ್ಕೂ (ರೀಟೇಲ್) ಈ ಮುಂಚೆ ಕಾರ್ಪೊರೇಟ್‌ಗಳು ಮತ್ತು ವಿದೇಶಿ ಹೂಡಿಕೆಗೆ ನಿರ್ಬಂಧ ಇತ್ತು; ಈಗ ಆ ನಿರ್ಬಂಧವೂ ಇಲ್ಲ ಹಾಗೂ ಈ ಬಲಾಢ್ಯರು ಈಗಾಗಲೇ ಚಿಲ್ಲರೆ ವ್ಯಾಪಾರದಲ್ಲಿ ಗಟ್ಟಿಯಾಗಿ ತಳವೂರಲಾಗಿದೆ. ಬಾಕಿ ಉಳಿದಿದ್ದು; ಕೃಷಿ, ಕೃಷಿ ಮಾರುಕಟ್ಟೆ ಮತ್ತು ಕೃಷಿ ಭೂಮಿ. ದೇಶದ 130 ಕೋಟಿ ಜನರು ಮೂರು ಹೊತ್ತು ಬಳಸುವ ಪದಾರ್ಥಗಳಿಗೆ ಸಂಬಂಧಿಸಿದ ಮತ್ತು ದೇಶದ 70 ಕೋಟಿ ಜನರು ಉತ್ಪಾದನೆಯಲ್ಲಿ ತೊಡಗಿರುವ ಭಾರೀ ದೊಡ್ಡ ಕ್ಷೇತ್ರ ಇದಾಗಿದೆ. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಏಕಸ್ವಾಮ್ಯ ಸಾಧಿಸಿರುವ ಬಂಡವಾಳಿಗರಿಗೆ ಈ ಬೃಹತ್ ಕ್ಷೇತ್ರದ ಲಾಭ ಕಣ್ಣು ಕುಕ್ಕುತ್ತಿದೆ. ಆದರೆ ಅದನ್ನು ಅವಲಂಬಿಸಿ ಕೋಟಿ ಕೋಟಿ ಜನರು ಇದ್ದಾರೆ, ಅವರ ಲಾಭ, ಉದ್ಯೋಗಗಳಿಗೆ ಕೈ ಹಾಕಬಾರದು ಎಂಬ ಸ್ವಾತಂತ್ರ್ಯೋತ್ತರ ಭಾರತದ ಮೌಲ್ಯವನ್ನು ಗಾಳಿಗೆ ತೂರಲಾಗುವುದರ ಭಾಗವಾಗಿ ಇದುವರೆಗೆ ಇದ್ದ ಕಾಯ್ದೆಗಳನ್ನು ಕಿತ್ತು ಹಾಕಲಾಗುತ್ತಿದೆ. ಈಗ ದೆಹಲಿಯಲ್ಲಿರುವ ಸರ್ಕಾರವು ಇಂತಹ ನೀತಿಗಳನ್ನು ತರಲು ಏಕೆ ಉತ್ಸುಕವಾಗಿದೆ ಎಂಬುದಕ್ಕೆ ಕಾರಣಗಳಿವೆ.

ಅಂಬಾನಿ ಮತ್ತು ಅದಾನಿಯವರನ್ನು ಇದಕ್ಕೆ ಏಕೆ ದೂರಲಾಗುತ್ತಿದೆ?

ಅದಾನಿ ಕಂಪನಿಯು ಈಗಾಗಲೇ ಆಹಾರ ಉತ್ಪನ್ನಗಳ ವಲಯದಲ್ಲಿ ಗಟ್ಟಿಯಾಗಿ ತಳವೂರಿದೆ. ಭಾರತಕ್ಕೆ ಖಾದ್ಯ ತೈಲವನ್ನು ಆಮದು ಮಾಡಿಕೊಳ್ಳುವುದರಲ್ಲಿ ಅದಾನಿ ಒಡೆತನದ ಕಂಪೆನಿಯದ್ದೇ ಸಿಂಹಪಾಲು. ಗುಜರಾತಿನ ಕರಾವಳಿಯಲ್ಲಿ ಅವರ ದೊಡ್ಡ ಬಂದರು, ಮುಂದ್ರಾ, ದೇಶದ ಅತೀ ದೊಡ್ಡ ಗೋದಾಮಾಗಿದೆ. ಒಂದು ಉದಾಹರಣೆಯ ಮೂಲಕ ವಿವರಿಸುವುದಾದರೆ, ಇಡೀ ಕರ್ನಾಟಕದ ಭತ್ತದ ಉತ್ಪಾದನೆಯು 25 ಲಕ್ಷ ಟನ್ ಆದರೆ, ಈ ಮುಂದ್ರಾ ಬಂದರಿನ ಗೋದಾಮಿನ ಸಾಮರ್ಥ್ಯ 40 ಲಕ್ಷ ಟನ್‌ಗಳಾಗಿವೆ. ಅದರ ವಾರ್ಷಿಕ ವಹಿವಾಟಿನ ಪ್ರಮಾಣ ಇನ್ನೂ ಎಷ್ಟೋ ಪಟ್ಟಿದೆ. ಈಗ ಉಳಿದ ಕರಾವಳಿ ಪ್ರದೇಶಗಳಲ್ಲೂ ಅವರ ಸಾಮ್ರಾಜ್ಯ ವಿಸ್ತರಿಸುತ್ತಿದೆ. ಆಮದು ಮತ್ತು ರಫ್ತಿನ ಮೇಲೆ ಏಕಸ್ವಾಮ್ಯ ಸಾಧಿಸಲು ಇವು ನೆರವಾಗುತ್ತವೆ. ಆಗ ಆಹಾರ ಪದಾರ್ಥಗಳ ಖರೀದಿ, ಸಂಗ್ರಹ ಮತ್ತು ಲಾಭ ಪಡೆದುಕೊಳ್ಳಲು ಇದುವರೆಗೆ ಇದ್ದ ನಿರ್ಬಂಧಗಳೂ ಸಡಿಲವಾಗಬೇಕಾಗುತ್ತದೆ. ಅವನ್ನೇ ಮೇಲಿನ ಕಾಯ್ದೆಗಳು/ತಿದ್ದುಪಡಿಗಳು ಮಾಡಲಿವೆ.

ಹಾಗೆಯೇ ಅಂಬಾನಿ ಒಡೆತನದ ರಿಲೆಯನ್ಸ್ ಫ್ರೆಶ್ ಕಂಪೆನಿಯು ದೇಶದ ಎಲ್ಲಾ ನಗರ ಹಾಗೂ ದೊಡ್ಡ ಪಟ್ಟಣಗಳಲ್ಲಿ ತಮ್ಮ ಚಿಲ್ಲರೆ ವ್ಯಾಪಾರದ ಮಳಿಗೆಗಳನ್ನು ತೆರೆದಾಗಿದೆ. ಅಷ್ಟು ದೊಡ್ಡ ರೀಟೇಲ್ ಚೇನ್ ಅಂಗಡಿಗಳಲ್ಲಿ ಮಾರಾಟ ಮಾಡಲು ಬೇಕಾದ ಪದಾರ್ಥಗಳನ್ನು ಕೊಳ್ಳಲು ಮತ್ತು ಅದರಲ್ಲಿ ಲಾಭ ಮಾಡಲು ಈಗಿದ್ದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅವರಿಗೆ ಕೆಲವು ತೊಡಕುಗಳಿದ್ದವು. ಕಡಿಮೆ ಬೆಲೆಯಲ್ಲಿ ಕೊಂಡು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿದರೆ ತಾನೇ ವ್ಯಾಪಾರಿಗೆ ಲಾಭ. ಅಂತಹ ವ್ಯಾಪಾರಕ್ಕೆ ನಿರ್ಬಂಧ ಹೇರಲು ಎಪಿಎಂಸಿಗಳನ್ನು ಮಾಡಿದಾಗಲೇ ಹಲವು ಲೋಪದೋಷಗಳಿದ್ದವು. ಸಣ್ಣ ವ್ಯಾಪಾರಿಗಳ ಜೊತೆಗೇ ಚೌಕಾಶಿ ಮಾಡಲು ಸಾಧ್ಯವಾಗದ ರೈತರು ಈಗ ದೇಶದ ಅತೀ ದೊಡ್ಡ ಬಂಡವಾಳಸ್ಥರು, ಅದರಲ್ಲೂ ಒಕ್ಕೂಟ ಸರ್ಕಾರದ ನೇತಾರರ ಜೊತೆಗೆ ಅತ್ಯಂತ ಹತ್ತಿರದಲ್ಲಿರುವ ಕಾರ್ಪೊರೇಟ್ ಕಂಪೆನಿ ಮಾಲೀಕರು ಜೊತೆಗೆ ವ್ಯಾಪಾರ ನಡೆಸಿ ಲಾಭ ಗಳಿಸುವುದು ಕನಸಿನ ಮಾತೇ ಸರಿ.

ಈ ಕಾರಣಗಳಿಂದಲೇ ದೆಹಲಿ ಸುತ್ತ ಬೀಡು ಬಿಟ್ಟಿರುವ ರೈತರು ಕಾಯ್ದೆಗಳನ್ನು ವಿರೋಧಿಸುವುದರ ಜೊತೆಗೆ ಅಂಬಾನಿ ಮತ್ತು ಅದಾನಿಯ ವಿರುದ್ಧವೂ ಹೋರಾಡುತ್ತಿದ್ದಾರೆ.


ಇದನ್ನೂ ಓದಿ:  ವಿವಾದಿತ ಕೃಷಿ ಕಾಯ್ದೆಗಳು ರದ್ದು: ಕ್ಷಮೆಯಾಚಿಸಿದ ಮೋದಿ, ರೈತರ ಹೋರಾಟಕ್ಕೆ ಗೆಲುವು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...