ಸತತ ಇಂಧನ ಬೆಲೆ ಏರಿಕೆ: ನ.14 ರಿಂದ 15 ದಿನಗಳ ಕಾಲ ಕಾಂಗ್ರೆಸ್ ಪ್ರತಿಭಟನೆ

ದೇಶದಲ್ಲಿ ಸತತವಾಗಿ ಹೆಚ್ಚುತ್ತಿರುವ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ದೇಶಾದ್ಯಂತ 15 ದಿನಗಳ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ನವೆಂಬರ್ 14 ರಿಂದ 15 ದಿನಗಳು ನಿರಂತವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ.

“ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ನವೆಂಬರ್ 14 ರಿಂದ ನವೆಂಬರ್ 29 ರವರೆಗೆ ನಿರಂತರವಾಗಿ ಅಭಿಯಾನಗಳ ಮೂಲಕ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಶನಿವಾರ ತಿಳಿಸಿದ್ದಾರೆ.

ಸತತ ಐದನೇ ದಿನವೂ ದೇಶಾದ್ಯಂತ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 107.59 ರೂಪಾಯಿಗೆ ಏರಿದೆ. ಡೀಸೆಲ್ ಬೆಲೆ ಲೀಟರ್‌ಗೆ 96.32 ರೂಪಾಯಿಯಷ್ಟಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 113.12 ಮತ್ತು 104 ರೂಪಾಯಿಯಿದೆ.

ಇದನ್ನೂ ಓದಿ: ಬೆಂಕಿಪೊಟ್ಟಣಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ:14 ವರ್ಷಗಳ ಬಳಿಕ ಶೇ.100 ರಷ್ಟು ಬೆಲೆ ಏರಿಕೆ

ಆಯಾ ರಾಜ್ಯಗಳ ಆಯಾ ಪ್ರದೇಶಗಳಲ್ಲಿ ಕಾಂಗ್ರೆಸ್ ನಾಯಕರು ‘ಪಾದಯಾತ್ರೆ’ಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಭಟನೆ ನಡೆಸಲಿದ್ದಾರೆ ಎನ್ನಲಾಗಿದೆ.

ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೂಡ ಇಂಧನ ಬೆಲೆ ಏರಿಕೆಯ ಬಗ್ಗೆ ಒಕ್ಕೂಟ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಸಲಹೆಗಳ ಆಧಾರದ ಮೇಲೆ ತೆರಿಗೆಗಳನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

“ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಗೆ ಕಾರಣವಾಗಿರುವುದು ಸರ್ಕಾರದ ದುರಾಸೆ ಮಾತ್ರ. ಅದಕ್ಕಾಗಿಯೇ ‌ಇಂಧನ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಆರ್‌ಬಿಐ ಪದೇ ಪದೇ ಸರ್ಕಾರಕ್ಕೆ ಹೇಳುತ್ತಿದೆ” ಎಂದು ಚಿದಂಬರಂ ಹೇಳಿದ್ದಾರೆ.


ಇದನ್ನೂ ಓದಿ: ಮತ್ತೇ ಇಂಧನ ದರ ಏರಿಕೆ | ಉ.ಕ ಜಿಲ್ಲೆಯಲ್ಲಿ ಪೆಟ್ರೋಲ್‌‌‌ ದರ 112.48 ₹/L; ರಾಜ್ಯದಲ್ಲೇ ಅತೀ ಹೆಚ್ಚು!

LEAVE A REPLY

Please enter your comment!
Please enter your name here