ಪೆಟ್ರೋಲ್ ಮತ್ತು ಡೀಸೆಲ್ ದರ ದಿನದಿನಕ್ಕೆ ಬೇಸಿಗೆಯ ಬಿಸಿಲಿನಂತೆ ಏರುತ್ತಲೇ ಇದೆ. ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ ನೂರು ಮುಟ್ಟಿದೆ. ಇದರಿಂದ ಪ್ರಯಾಣ ದರ ಹೆಚ್ಚುತ್ತದೆ. ಸರಕು ಸಾಗಣೆ ಖರ್ಚು ಹೆಚ್ಚುತ್ತದೆ. ಆ ಮೂಲಕ ಜೀವನಾಧಾರಕ್ಕೆ ಅಗತ್ಯವಾದ ಆಹಾರ ಪದಾರ್ಥಗಳು, ತರಕಾರಿ ಎಲ್ಲದರ ದರ ಹೆಚ್ಚುತ್ತದೆ. ಸರ್ಕಾರ ಆಹಾರ ಧಾನ್ಯಗಳ ಬೆಲೆ ಇಳಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಧ್ಯಮವರ್ಗದ ಜನ, ಬಡವರು ಈ ಬೆಲೆ ಏರಿಕೆಯ ಬವಣೆಯನ್ನು ಹತ್ತಾರು ವರ್ಷಗಳಿಂದ ಅನುಭವಿಸುತ್ತಿದ್ದಾರೆ. ಈ ಗೋಳನ್ನು ನಿವಾರಿಸಬೇಕೆಂದು ಸರ್ಕಾರಕ್ಕೆ ಅನ್ನಿಸುತ್ತಲೇ ಇಲ್ಲ. ಇದೇ ರೀತಿ ಅಡುಗೆ ಅನಿಲದ ಬೆಲೆಯೂ ಪ್ರತಿಸಾರಿ ನೂರು, ಇನ್ನೂರು ರೂಗಳಷ್ಟು ಹೆಚ್ಚುತ್ತಲೇ ಹೋಗುತ್ತಿದೆ. ಜನ ಸಾಮಾನ್ಯರ ಕಷ್ಟಗಳಿಗೆ ಸರ್ಕಾರ ಸ್ಪಂದಿಸುತ್ತಲೇ ಇಲ್ಲ ಜಡ್ಡುಕಟ್ಟಿದ ಸರ್ಕಾರ ಬಡವರ ಬವಣೆಗೆ ಕಿವುಡಾಗಿದೆ, ಕುರುಡಾಗಿದೆ.

ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷರು ಭಾರತೀಯರನ್ನು ಹೀಗೆಯೇ ನಡೆಸಿಕೊಂಡರು. ಆಹಾರಧಾನ್ಯಗಳು ಅಂಗಡಿಗಳಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ಅದು ದುಬಾರಿ ಬೆಲೆ ಕೊಡಲಾರದ ಬಡವರು ಹಸಿವಿನಿಂದ ಕಲ್ಕತ್ತದ ಬೀದಿ ಬೀದಿಗಳಲ್ಲಿ ಸತ್ತುಬಿದ್ದರು.

ಸ್ವಾತಂತ್ರ್ಯ ಪ್ರಾಪ್ತವಾದ ಹೊಸದರಲ್ಲಿ ಕೆಲ ವರ್ಷಗಳ ಕಾಲ ಕಾಂಗ್ರೆಸ್ ಬೆಲೆಗಳನ್ನು ಹತೋಟಿಯಲ್ಲಿಡಲು ಅನೇಕ ಕ್ರಮಗಳನ್ನು ಕೈಗೊಂಡವು. ಕಳ್ಳದಾಸ್ತಾನು ಇಟ್ಟಿರುವ ವರ್ತಕರ ರಹಸ್ಯ ಮಳಿಗೆಗಳ ಮೇಲೆ ದಾಳಿ ಮಾಡಿ, ಆ ಬಚ್ಚಿಟ್ಟ ಪದಾರ್ಥಗಳನ್ನು ಬಡವರಿಗೆ ನ್ಯಾಯ ಬೆಲೆಯಲ್ಲಿ ಒದಗಿಸುವ ಪ್ರಯತ್ನ ಮಾಡಿತು. ಹೆಚ್ಚು ಬೆಲೆಗೆ ಆಹಾರ ಧಾನ್ಯವನ್ನು ಮಾರಾಟ ಮಾಡುತ್ತಿದ್ದ ವರ್ತಕರ ವಿರುದ್ಧ ಖಟ್ಳೆ ಹೂಡಿ ಅವರನ್ನು ಸೆರೆಮನೆಗೆ ಅಟ್ಟಿತು. ಸರ್ಕಾರ ಬಡವರ ದಲಿತರ ಪರವಾಗಿದೆ ಎಂದು ಸಾಬೀತು ಮಾಡಿತು.

ಇಂದಿನ ಮೋದಿ, ಯಡಿಯೂರಪ್ಪನವರ ಸರ್ಕಾರಗಳು ತಾವು ಕಾಳಸಂತೆಕೋರರ, ಧನಪಿಶಾಚಿಗಳ ಪರವಾಗಿದೆ ಎಂದು ರಾಜಾರೋಷವಾಗಿ ಘೋಷಿಸಲು ಹಿಂಜರಿಯುತ್ತಿಲ್ಲ. ಸರ್ಕಾರದ ಈ ಭಂಡತನವನ್ನು ಜನಸಾಮಾನ್ಯರು ಇನ್ನೆಷ್ಟು ದಿನ ಸಹಿಸಬಲ್ಲರು? ಜನ ಬೀದಿಗಿಳಿಯುವ ದಿನ ಇನ್ನು ಕೆಲದಿನಗಳಲ್ಲೇ ಪ್ರಾಪ್ತವಾಗುವುದಿದೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವಾಗ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹಾಕಿರುವ ತೆರಿಗೆಯನ್ನಾದರೂ ಹಿಂದಕ್ಕೆ ತೆಗೆದುಕೊಂಡು ಜನರಿಗೆ ನೆಮ್ಮದಿ ತರಬಹುದಿತ್ತು. 2014ಕ್ಕೆ ಮೊದಲು ಅಂದರೆ ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಅಂದಿನ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮೇಲೆ ಶೇ.10 ರಷ್ಟು ಡೀಸೆಲ್ ಮೇಲೆ ಶೇ.5 ರಷ್ಟು ತೆರಿಗೆ ಹಾಕಿತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಮೇಲಿನ ತೆರಿಗೆ ಶೇ.10 ರಷ್ಟಿದ್ದದ್ದನ್ನು ಈಗ ಶೇ.32ಕ್ಕೆ, ಡೀಸೆಲ್ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.31ಕ್ಕೆ ಏರಿಸಿದ್ದಾರೆ. ಇದು ಹಗಲು ದರೋಡೆ ಎಂದು ಕರೆಯದೇ ಬೇರೆ ಯಾವ ಹೆಸರಿನಿಂದ ಕರೆಯಬೇಕು?

PC : Prajavani

ಮೋದಿಯವರು ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿಯವರು, ಕ್ರೂಡ್ ಆಯಿಲ್ ಬೆಲೆಗಿಂತ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹಾಕಿರುವ ತೆರಿಗೆಯೇ ಜಾಸ್ತಿ ಎಂದು ಹೇಳಿ, ಅಂದಿನ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು. ಈಗ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ 3ಪಟ್ಟು ಏರಿದ್ದರೂ ಬಿಜೆಪಿ ರಾಜ್ಯ ಸರ್ಕಾರಗಳು ಮೋದಿ ಸರ್ಕಾರದ ಹಗಲು ದರೋಡೆಯ ವಿರುದ್ಧ ಒಂದು ಕೂಗನ್ನು ಹಾಕಿಲ್ಲ. ರಾಜ್ಯಾಂಗ ಮತ್ತು ಆಡಳಿತಾಂಗ ಈ ಬಗೆಗೆ ಉದಾಸೀನ ಭಾವನೆ ತೋರಬೇಕಾದರೆ, ನ್ಯಾಯಾಂಗವಾದರೂ ಮಧ್ಯೆಪ್ರವೇಶಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಬೇಕಾಗಿತ್ತು. ನ್ಯಾಯಾಂಗ ಈ ಜ್ವಲಂತ ಪ್ರಶ್ನೆಯ ಬಗೆಗೆ ಪರಿಹಾರ ರೂಪದಲ್ಲಿ ಸಲಹೆ ಸೂಚನೆಯನ್ನಾದರೂ ಸರ್ಕಾರಕ್ಕೆ ನೀಡಬೇಕಾಗಿತ್ತು. ಅದೂ ಈ ಬಗೆಗೆ ಮೈನ ತಳೆದಿರುವುದು ದೇಶದ ದೌರ್ಭಾಗ್ಯ.

ಮೋದಿ ಷಾ ಸರ್ಕಾರಕ್ಕೆ ಜನರ ಸಮಸ್ಯೆಗಳನ್ನು ಹೆಚ್ಚಿಸುವುದಕ್ಕಿರುವ ಆಸಕ್ತಿ ಜನರ ಬವಣೆಯನ್ನು ಕಡಿತಗೊಳಿಸುವುದರಲ್ಲಿ ಇಲ್ಲ. ಅವರೀಗ ಭಾರತವನ್ನೆಲ್ಲ ಬಿಜೆಪಿ ವಶಮಾಡಿಕೊಳ್ಳುವ ಅವೇಶದಲ್ಲಿದ್ದಾರೆ. ಪುದುಚೇರಿಯಲ್ಲಿ ಸಮಸ್ಯೆ ಹುಟ್ಟಿ ಹಾಕಿ ವಿದ್ಯುಕ್ತ ಸರ್ಕಾರವನ್ನು ಕೆಡವಿ, ರಾಷ್ಟ್ರಾಧ್ಯಕ್ಷರ ಆಡಳಿತ ಜಾರಿಗೆ ಬರುವಂತೆ ಮಾಡಲಾಯಿತು. ತಮಿಳುನಾಡಿನಲ್ಲಿ ಆಡಳಿತಾರೂಢ ಎಐಡಿಎಂಕೆ ಪಕ್ಷವನ್ನು ತನ್ನ ವಶ ಮಾಡಿಕೊಂಡು ಅಧಿಕಾರ ಹಿಡಿಯುವ ಪ್ರಯತ್ನದಲ್ಲಿದೆ. ಮೊದಲು ಪಶ್ಚಿಮ ಬಂಗಾಳವನ್ನು ಶತಾಯುಗತಾಯು ತೆಕ್ಕೆಗೆ ತೆಗೆದುಕೊಳ್ಳುವ ತವಕದಲ್ಲಿ ನಿರತರಾಗಿದ್ದಾರೆ. ತಮಿಳುನಾಡು ಇಲ್ಲಿಯವರೆಗೂ ತಮಿಳರ ಸಾರ್ವಭೌಮತ್ವದಲ್ಲಿ ನಡೆಯುತ್ತಿತ್ತು. ಪಶ್ಚಿಮ ಬಂಗಾಳದಲ್ಲಿ ಬಂಗಾಳಿಗಳ ಐಕ್ಯತೆಯಲ್ಲಿ ರಾಜ್ಯಭಾರ ನಡೆಯುತ್ತಿತ್ತು. ಈಗ ಬಂಗಾಳದಲ್ಲಿ ಬಂಗಾಳಿಗಳಲ್ಲಿ ಒಡಕು ಉಂಟು ಮಾಡಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ತೊಡಗಿದ್ದಾರೆ. ಇದು ಅನೀತಿಯುತ ನಡವಳಿಕೆ ಎಂದು ಮೋದಿ ಷಾಗಳಿಗೆ ಅನಿಸುತ್ತಿಲ್ಲ. ಭಾರತದ ಸಾರ್ವಭೌಮರಾಗುವ ಆತುರದಲ್ಲಿ ಮೋದಿ ಮತ್ತು ಷಾ ಎಲ್ಲ ಮಾನವೀಯ ಮೌಲ್ಯಗಳನ್ನೂ ಗಾಳಿಗೆ ತೂರುತ್ತಿದ್ದಾರೆ. ಸಂಚು ಪಿತೂರಿ ಇವು ಅವರ ರಾಜಕೀಯ ಮೌಲ್ಯಗಳಾಗಿವೆ.

’ಸಬ್ ಕೆ ಲಿಯೆ ಹಮ್ ಎಂದು ಘೋಷಣೆ ಕೂಗುತ್ತಾ, ಹಿಂದುತ್ವ ಪ್ರತಿಪಾದನೆಗೆ ಮಾತ್ರ ಅವರು ಬದ್ಧರು. ವಿರೋಧ ಪಕ್ಷವಾದ ಕಾಂಗ್ರೆಸ್‌ಅನ್ನು ದುರ್ಬಲಗೊಳಿಸುವುದು, ನಾಮಾವಶೇಷ ಮಾಡುವುದಾಗಿ ಘೋಷಣೆ ಕೂಗುವುದು, ವಿರೋಧ ಪಕ್ಷಗಳಲ್ಲಿರುವವರನ್ನು ತಮ್ಮ ವಶ ಮಾಡಿಕೊಳ್ಳುವುದು, ಅನೈತಿಕವಾಗಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದು, ರಾಜ್ಯಗಳಲ್ಲಿರುವ ಅನ್ಯ ಆಡಳಿತಾರೂಢ ಪಕ್ಷವನ್ನು ದುರ್ಬಲಗೊಳಿಸುವುದು ಇವೆಲ್ಲ ರಾಜನೀತಿಯೇ?

ಒಟ್ಟಿನಲ್ಲಿ ಕಚ್ಚಾ ಪೆಟ್ರೋಲಿಯಂ ಬೆಲೆ ಇಳಿಸಬೇಕೆಂದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬಾಯಿ ಬಡಿದುಕೊಳ್ಳುತ್ತಿದ್ದ ಬೆಜಿಪಿ, ಮೋದಿ ಷಾ ಅಧಿಕಾರಕ್ಕೆ ಬಂದು 7 ವರ್ಷಗಳೇ ಕಳೆದಿದ್ದರೂ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಒಂದೇ ಸಮನೆ ಏರುತ್ತಿದ್ದರೂ, ಕ್ರೂಡ್ ಆಯಿಲ್ ಬೆಲೆ ಕಡಿಮೆಯಾದ ಸಂದರ್ಭಗಳಲ್ಲೂ ಸುಂಕದ ದರವನ್ನು ಹೆಚ್ಚಿಸಿಕೊಂಡು ಹೋಗುತ್ತಿದ್ದರೂ, ಬಾಯಿ ಮುಚ್ಚಿಕೊಂಡು ಕೂತಿದೆ. ಜನತೆಯೊಡನೆ ಚೆಲ್ಲಾಟವಾಡುತ್ತಿದೆ.


ಇದನ್ನೂ ಓದಿ: ಪೆಟ್ರೋಲ್ ಬೆಲೆ ಏರಿಕೆಗೆ ಹಿಂದಿನ ಸರ್ಕಾರಗಳೇ ಕಾರಣ: ಪ್ರಧಾನಿ ಮೋದಿ

LEAVE A REPLY

Please enter your comment!
Please enter your name here