Homeಮುಖಪುಟತುಮಕೂರು: ಲಾಂಗು ಹಿಡಿದು ರೌಡಿಗಳ ಅಟ್ಟಹಾಸ - ಊರುಕೆರೆಯಲ್ಲಿ ಹರಿಯಿತು ರಕ್ತ

ತುಮಕೂರು: ಲಾಂಗು ಹಿಡಿದು ರೌಡಿಗಳ ಅಟ್ಟಹಾಸ – ಊರುಕೆರೆಯಲ್ಲಿ ಹರಿಯಿತು ರಕ್ತ

- Advertisement -
- Advertisement -

ತುಮಕೂರು ಮತ್ತು ಹೊರವಲಯದಲ್ಲಿ ರೌಡಿಗಳ ಅಟ್ಟಹಾಸ ಸದ್ದಿಲ್ಲದೆ ತಲೆಎತ್ತತೊಡಗಿದೆ. ನಗರದಲ್ಲಿ ಆಗಾಗ ಹೆಣಗಳು ಬೀಳುತ್ತಲೇ ಇವೆ. ಒಬ್ಬೊಬ್ಬರೇ ರೌಡಿಗಳು ಹತರಾಗುತ್ತಿದ್ದಾರೆ. ರೌಡಿಗಳ ದಾಳಿಗೆ ಸಾಮಾನ್ಯರು ನಲುಗವಂತಾಗಿದೆ.

ಬೆಂಗಳೂರು-ತುಮಕೂರು ಸಮೀಪಗೊಳ್ಳುತ್ತಿರುವಂತೆ ರೌಡಿಪಡೆಗಳು ಗರಿಬಿಚ್ಚುತ್ತಿವೆ. ರೌಡಿ, ಮರಿರೌಡಿಗಳ ಗುಂಪುಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದರೂ ಪೊಲೀಸರು ಅವರನ್ನು ಪರೇಡ್ ನಡೆಸುವುದನ್ನು ಬಿಟ್ಟು ಕಟ್ಟಿನಿಟ್ಟಿನ ಕ್ರಮಕ್ಕೆ ಮುಂದಾದಂತೆ ಕಾಣುತ್ತಿಲ್ಲ. ರಿಯಲ್ ಎಸ್ಟೇಸ್ಟ್ ವ್ಯವಹಾರ ಕುಸಿದು ಬಿದ್ದ ಮೇಲೆ ರೌಡಿಗಳ ಹಾವಳಿ ವ್ಯಾಪಕವಾಗುತ್ತಿದೆ. ಇದರಿಂದ ನಗರದ ಜನ ಬೆಚ್ಚಿಬಿದ್ದಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲಾಗಿದೆ.

ರೌಡಿ ಹಾವಳಿಯನ್ನು ಎಳವೆಯಲ್ಲೇ ಚಿವುಟದಿದ್ದರೆ ಅದು ಬೆಳೆದ ಮೇಲೆ ಹತ್ತಿಕ್ಕಲು ಮತ್ತು ನಿಯಂತ್ರಿಸಲು ಆಗದು. ಪೊಲೀಸ್ ಇಲಾಖೆ ಇದನ್ನು ಆರಂಭದಲ್ಲೇ ಅರ್ಥ ಮಾಡಿಕೊಂಡರೆ ಒಳ್ಳೆಯದು. ಕಳೆದ ಒಂದು ವರ್ಷದಿಂದೀಚೆಗೆ ನಗರದಲ್ಲಿ ನಡೆದಿರುವ ರೌಡಿ ಚಟುವಟಿಕೆಗಳು ಎಲ್ಲವೂ ಸರಿಯಿಲ್ಲ ಎಂಬುದನ್ನೇ ಹೇಳುತ್ತಿವೆ. ತುಮಕೂರು ನಗರ ಪಾಲಿಕೆ ಮಾಜಿ ಅಧ್ಯಕ್ಷ ರವಿಕುಮಾರ್ ನನ್ನು ಹಾಡಹಗಲೇ ಲಾಂಗು ಮಚ್ಚುಗಳಿಂದ ಕೊಚ್ಚಿಹೋದರು. ಅದರೆ ಮೇಲೆ ಉಪ್ಪಾರಹಳ್ಳಿ ಗೇಟ್ ನಲ್ಲಿ ಮತ್ತೊಂದು ಹೆಣವೂ ಉರುಳಿತು. ಈ ಪ್ರಕರಣಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರೇ ವಿನಃ ರೌಡಿ ಹಾವಳಿ ಮಟ್ಟಹಾಕಲು ಕಠಿಣ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ.

ಕೆಸರುಮಡು ಸಮೀಪ ವ್ಯಕ್ತಿಯೊಬ್ಬನ ಹತ್ಯೆಯಾಯಿತು. ಆರೋಪಿಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದಾಗ ರಾತ್ರಿ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಮತ್ತು ತಪ್ಪಿಸಿಕೊಳ್ಳಲು ಯತ್ನಿಸಿದ ಎಂಬ ಕಾರಣಕ್ಕೆ ಪೈರ್ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಶಿರಾಗೇಟ್ ನ ಅನಿಕೇತನ ಶಾಲೆಯ ಬಳಿ ರೌಡಿಗಳು ಇಬ್ಬರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದರು. ಲಾಂಗುಗಳಿಂದ ತಲೆ ಉರುಳಿಸಿದ್ದ ಮಾಂತೇಶನನ್ನ. ಮತ್ತೊಬ್ಬ ಮಂಜು ತೀವ್ರಗಾಯಗೊಂಡಿದ್ದ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಚೇತರಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾನೆ. ಈ ಘಟನೆಯಲ್ಲೂ ಪೊಲೀಸರು ರೌಡಿಗಳನ್ನು ಅರೆಸ್ಟ್ ಮಾಡಿದರು. ಇದು ಸುದ್ದಿಯಾಗಲಿಲ್ಲ. ಯಾಕೆಂದರೆ ಇದರಲ್ಲಿ ರಾಜಕೀಯ ಪಕ್ಷವೊಂದರ ಮುಖಂಡರ ನಡುವಿನ ಕದನವಾಗಿತ್ತು. ಅದು ಅಲ್ಲಿಗೆ ಮುಚ್ಚಿ ಹಾಕಲಾಯಿತು.ಹೀಗಾಗಿ ಪುಡಾರಿಗಳ ಚಟುವಟಿಕೆಗೆ ಬ್ರೇಕ್ ಬೀಳುವ ಬದಲು ಮತ್ತಷ್ಟು ಕುಮ್ಮಕ್ಕು ಕೊಟ್ಟಂತಾಯಿತು..

ಶಿರಾಗೇಟ್ ನ ಪುಟ್ಟಸ್ವಾಮಯ್ಯನಪಾಳ್ಯದಲ್ಲಿ ಮತ್ತೊಂದು ಹೆಣ ಬಿತ್ತು. ಈ ಪ್ರಕರಣದಲ್ಲಿ ಪ್ರಿಯ-ಪ್ರಿಯಕರ ಸೇರಿ ವ್ಯಕ್ತಿಯನ್ನು ಹತ್ಯೆಗೈದಿದ್ದರು.ಪೊಲೀಸರು ಇಲ್ಲೂ ಆರೋಪಿಗಳನ್ನು ಬಂಧಿಸಿದ್ದಾರೆ.

ಇದೀಗ ಊರುಕೆರೆ ಯಲ್ಲಿ ಲಾಂಗುಗಳು ರುದ್ರನರ್ತನಗೈದಿವೆ. ಐದಾರು ಮಂದಿ ಹಾಡಹಗಲೇ ಸಿನಿಮೀಯ ಮಾದರಿಯಲ್ಲಿ ಕೈಯಲ್ಲಿ ಲಾಂಗುಗಳನ್ನು ಹಿಡಿದ ರೌಡಿಗಳು ಪ್ರಶ್ನಿಸಿದರೆಂಬ ಕಾರಣಕ್ಕೆ ಮನಬಂದಂತೆ ದಾಳಿ ಮಾಡಿದ್ದಾರೆ. ಕೃಷ್ಣಪ್ಪ ಎಂಬ ರೌಡಿಶೀಟರ್ ಕಾರನ್ನು ಹಿಂದಕ್ಕೆ ತೆಗೆಯುವಾಗ ರಾಜಣ್ಣನಿಗೆ ಗುದ್ದಿದೆ. ರಾಜಣ್ಣ ಇದನ್ನು ಪ್ರಶ್ನಿಸಿದ್ದಾರೆ. ಆಗ ಕೃಷ್ಣಪ್ಪ ಮತ್ತು ಆತನ ರೌಡಿಪಡೆ ರಾಜಣ್ಣ ಮತ್ತು ಆತನ ಜೊತೆಯಲ್ಲಿದ್ದ, ಸುನಿಲ್, ಪುಟ್ಟನರಸಮ್ಮ ಅವರ ಮೇಲೆ ಲಾಂಗುಗಳಿಂದ ಅಟ್ಟಾಡಿಸಿಕೊಂಡು ಮಾರಣಾಂತಿಕ ಹಲ್ಲೆ ನಡೆಸಿದೆ.

ಹಲವು ಪ್ರಕರಣಗಳಲ್ಲಿ ಆರೋಪ ಎದುರಿಸುತ್ತಿರುವ ರಾಜಣ್ಣ, ಜಗೀಧಶ್, ಮಂಜುನಾಥ್, ಪುರುಷೋತ್ತಮ್ ರೌಡಿಶೀಟರ್ ಆಗಿದ್ದಾರೆ. ಈ ರೌಡಿಶೀಟರ್ ಗಳೊಂದಿಗೆ ಗುರುತಿಸಿಕೊಂಡಿರುವ ಅಕ್ಷಯ್ ಮತ್ತು ರಘು ಕೂಡ ಈ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರೌಡಿ ಗುಂಪಿನ ದಾಳಿಗೆ ಒಳಗಾಗಿರುವ ರಾಜಣ್ಣ, ಪುಟ್ಟನರಸಮ್ಮ, ಸುನಿಲ್ ತೀವ್ರ ಗಾಯಗೊಂಡು ತುಮಕೂರು ಜಿಲ್ಲಾಸ್ಪತ್ರೆ ಸೇರಿದ್ದಾರೆ. ರೌಡಿಶೀಟರ್ ಗಳ ಕೃತ್ಯವನ್ನು ನೋಡಿದ ಊರುಕೆರೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಹಾಡಹಗಲೇ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ ಕಾನೂನುಬಾಹಿರ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಜಿಲ್ಲಾ ಪೊಲೀಸ್ ಹಿಂದೆ ಬಿದ್ದಿದೆ ಎಂಬ ಆರೋಪಗಳು ವ್ಯಾಪಕವಾಗಿವೆ.

ತುಮಕೂರು ನಗರ ಮತ್ತು ಹೊರವಲಯದಲ್ಲಿ ಕ್ರೈಂ ಹೆಚ್ಚುತ್ತಿವೆ. ನಗರದ ನಾಲ್ಕು ದಿಕ್ಕಿಗೂ ಪೊಲೀಸ್ ಠಾಣೆಗಳು ಇವೆ. ಆದರೆ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿವೆ. ಹಿಂದಿನಿಂದಲೂ ಬೆಂಗಳೂರು ರೌಡಿಗಳ ಸಂಪರ್ಕವನ್ನು ಹೊಂದಿರುವ ತುಮಕೂರು ನಗರ ಬೆಳೆದಂತೆ ರೌಡಿಗಳ ಹಾವಳಿಯೂ ಮೇಲ್ಮುಖವಾಗಿ ನುಗ್ಗುತ್ತಿದೆ. ರೌಡಿ ಪಡೆಗಳು ಕಂಡಂತೆಯೂ ಕಾಣದಂತೆಯೂ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳುತ್ತಿವೆ. ತುಮಕೂರು ಪೊಲೀಸರು ರೌಡಿ ಆರೋಪಿಗಳು ತಪ್ಪಿಸಿಕೊಳ್ಳುವಾಗ ಗುಂಡು ಹಾರಿಸಿದರೂ ಅದಕ್ಕೆ ಕಿಮ್ಮತ್ತು ಕೊಟ್ಟಂತೆ ಕಾಣುತ್ತಿಲ್ಲ. ಪರೇಡ್ ನಡೆಸುವುದರಿಂದ ಮತ್ತೆ ಅವರನ್ನು ಎಚ್ಚರಿಸುವುದರಿಂದ ಪಾಠ ಕಲಿಯುವುದಿಲ್ಲ. ಬದಲಿಗೆ ‘ಬಲಿತು’ಕೊಳ್ಳುತ್ತಾರೆ ಎಂಬ ಸತ್ಯ ಪೊಲೀಸರಿಗೆ ಅರ್ಥವಾದರೆ ಒಳ್ಳೆಯದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...