Homeಚಳವಳಿಸಂಸ್ಕೃತ ವಿವಿಗೆ ದುಡ್ಡು ಸುರಿಯುವ ಬದಲು ಸರ್ಕಾರಿ ಶಾಲೆ ಉಳಿಸಿ: ಕನ್ನಡಿಗರ ಆಗ್ರಹ

ಸಂಸ್ಕೃತ ವಿವಿಗೆ ದುಡ್ಡು ಸುರಿಯುವ ಬದಲು ಸರ್ಕಾರಿ ಶಾಲೆ ಉಳಿಸಿ: ಕನ್ನಡಿಗರ ಆಗ್ರಹ

ಸಂಸ್ಕೃತ ವಿವಿಗೆ ಕೊಡಲು 359 ಕೋಟಿ ಹಣ, 100 ಎಕರೆ ಮೀಸಲು ಅರಣ್ಯ ಜಾಗ ಇದೆ. ಆದರೆ ಕನ್ನಡಿಗರ ಏಕೈಕ ವಿವಿಗೆ ಕೊಡಲು 2 ಕೋಟಿ ಹಣವಿಲ್ಲವೇ?

- Advertisement -
- Advertisement -

“ಮೊದಲು ಕುಸಿದು ಬೀಳುವ ಹಂತದಲ್ಲಿರುವ ಸರ್ಕಾರೀ ಶಾಲೆಗಳನ್ನು ಉಳಿಸಿ, ನಿಮ್ಮ ಯೋಗ್ಯತೆಗೆ ಅಷ್ಟು ಸಾಕು! ಸಂಸ್ಕೃತ ವಿವಿ ಬೇಡ” – ಇದು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಟ್ವಿಟರ್ ಅಭಿಯಾನದಲ್ಲಿ ಕಂಡುಬಂದ ಟ್ವೀಟ್. ಸಂಸ್ಕೃತ ವಿವಿ ಸ್ಥಾಪನೆಯ ವಿರುದ್ಧ ಬಹುತೇಕ ಕನ್ನಡಿಗರು ತಮ್ಮ ಆಕ್ರೋಶ ಹೊರ ಹಾಕಿದ್ದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈಗಾಗಲೇ ಶೃಂಗೇರಿ ಬಳಿ ಒಕ್ಕೂಟ ಸರ್ಕಾರ ಸಂಸ್ಕೃತ ವಿವಿ ಸ್ಥಾಪಿಸಿದೆ. ಆದರೆ ಅಲ್ಲಿ ಶೇ.50 ರಷ್ಟು ದಾಖಲಾತಿ ಆಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಎರಡನೇ ಸಂಸ್ಕೃತ ವಿವಿ ಏಕೆ? ದೇಶದಲ್ಲಿ ಒಟ್ಟು ಹದಿನಾರು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ. ಆದರೆ ಸಂಸ್ಕೃತ ನುಡಿ ಆಡುವವರ ಸಂಖ್ಯೆ ಜಗತ್ತನಲ್ಲಿಯೇ ಕೇವಲ 24,000. ಇಷ್ಟು ಜನರ ನುಡಿಗೆ ಹದಿನಾರು ವಿಶ್ವವಿದ್ಯಾಲಯಗಳ ಅಗತ್ಯವಾದರೂ ಏನಿತ್ತು. ಆದರೆ ಇನ್ನೊಂದೆಡೆ ಏಳು ಕೋಟಿ ಜನರು ಮಾತನಾಡುವ ಕನ್ನಡ ನುಡಿಗೆಂದು ಇರುವುದು ಒಂದೇ ವಿಶ್ವವಿದ್ಯಾಲಯ. ಅದಕ್ಕೂ ಸರ್ಕಾರ ಸಮರ್ಪಕ ಅನುದಾನ ಕೊಡುತ್ತಿಲ್ಲ ಎಂದು ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಎಲ್ಲಾ ಹಂತದಲ್ಲೂ ಕನ್ನಡ ಕಲಿಕೆಯನ್ನು ಮೊಟಕುಗೊಳಿಸಿ, ಕನ್ನಡ ಮಾಧ್ಯಮದಲ್ಲಿ ಸಂಸ್ಕ್ರುತ ಪದಗಳನ್ನೇ ತುಂಬಿ, ಕನ್ನಡದ ಮಕ್ಕಳಿಗೆ ಕಲಿಕೆಯನ್ನು ಕಷ್ಟವಾಗಿಸಿ, ಕನ್ನಡದ ಕೆಲಸಗಳಿಗೆ ದುಡ್ಡು ಬಿಡುಗಡೆ ಮಾಡದೆ ಸಂಸ್ಕ್ರುತ ವಿವಿಗೆ ಕನ್ನಡಿಗರ ನೆಲ, ದುಡ್ಡು ದೋಚಲು ಮುಂದಾಗಿದ್ದಾರೆ. ಕನ್ನಡಿಗರು ಇದನ್ನು ಎದುರಿಸಿಯೇ ತೀರುತ್ತೇವೆ” ಎಂದು ಶ್ರುತಿ ಎಂ ಎಚ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸಂಸ್ಕೃತ ವಿವಿಗೆ ಕೊಡಲು 359 ಕೋಟಿ ಹಣ, 100 ಎಕರೆ ಮೀಸಲು ಅರಣ್ಯ ಜಾಗ ಇದೆ. ಆದರೆ ಕನ್ನಡಿಗರ ಏಕೈಕ ವಿವಿಗೆ ಕೊಡಲು 2 ಕೋಟಿ ಹಣವಿಲ್ಲ ಎಂದು ಸಂಗೀತಾ ಶೆಟ್ಟಿ ಎಂಬುವವರು ಆಕ್ರೋಶ ಹೊರಹಾಕಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ನೂರು ಎಕರೆ ಅರಣ್ಯ ಪ್ರದೇಶವನ್ನೇ ಸಂಸ್ಕೃತ ವಿವಿಗೆ ಕೊಡಲಾಗಿದೆ. ಇರುವ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಓದಲು ವಿದ್ಯಾರ್ಥಿಗಳು ಬರುತ್ತಿಲ್ಲ. ಹೀಗಿರುವಾಗ ಇಷ್ಟು ದೊಡ್ಡ ಜಾಗವನ್ನು ಯಾಕೆ ಕೊಡಲಾಗಿದೆ? ಇದೇ ಜಾಗದಲ್ಲಿ ಇನ್ನೊಂದು ಕನ್ನಡ ವಿವಿ ತೆರೆಯಬಹುದಿತ್ತಲ್ಲವೇ? ಕನ್ನಡಿಗರ ತೆರಿಗೆ ಹಣದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗವನ್ನು ಸರ್ಕಾರ ಹಿಂದಕ್ಕೆ ಪಡೆಯಬೇಕು. ಅನುದಾನವನ್ನೂ ಸಹ ಹಿಂದಕ್ಕೆ ಪಡೆಯಬೇಕು ಎಂದು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ ನಾರಾಯಣಗೌಡರವರು ಒತ್ತಾಯಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿ, ಅತಿಥಿ ಉಪನ್ಯಾಸಕರಿಗೆ ಸೂಕ್ತ ಸಂಬಳ ನೀಡಿ, ಕನ್ನಡ ಮಾಧ್ಯಮದಲ್ಲಿ ಪಿಯುಸಿ ಹಂತದಲ್ಲಿ ಕಲಿಯಲು ಅಗತ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಿ. ಅದನ್ನೆಲ್ಲ ಬಿಟ್ಟು ಕೋಟ್ಯಂತರ ಕನ್ನಡಿಗರ ತೆರಿಗೆಯನ್ನು ವಿದ್ಯಾರ್ಥಿಗಳಿಗೆ ಉಪಯೋಗವಿಲ್ಲದ ಕಾರಣಗಳಿಗೆ ವ್ಯಯ ಮಾಡಬೇಡಿ ಎಂದು ದೇವಾರ್ಷ್ ಜೋಶಿ ಎಂಬುವರರು ತಾಕೀತು ಮಾಡಿದ್ದಾರೆ.

ಇಲ್ಲಿಯವರೆಗೆ ಕನ್ನಡಿಗರ ಮೇಲೆ #ibpsmosa #ಹಿಂದೀಹೇರಿಕೆ ಆಯ್ತು, ಈಗ #ಸಂಸ್ಕೃತ_ಹೇರಿಕೆಯ ಪ್ರಾರಂಭ! #ಸಂಸ್ಕೃತವಿವಿಬೇಡ ಎಂದು ಜಗದೀಶ್ ಕೆ.ಎ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸಂಸ್ಕೃತ ವಿವಿಗೆ ಮೀಸಲಿಟ್ಟಿರುವ ದುಡ್ಡು ಮತ್ತು ಜಾಗವನ್ನು ಕರ್ನಾಟಕದ ನುಡಿಗಳಾದ ತುಳು, ಬ್ಯಾರಿ, ಕೊಡವ, ಕೊಂಕಣಿಗಳ ಕುರಿತು ಅಧ್ಯಯನ ಮಾಡಲು ಒಂದು ವಿವಿ ನಿರ್‍ಮಿಸಲಿ. ಜನರ ನುಡಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿ ಎಂದು ಸಚಿನ್ ಒತ್ತಾಯಿಸಿದ್ದಾರೆ.

ಸಂಸ್ಕೃತ ವಿವಿ ಕಟ್ಟಲು ಹೊರಟಿರುವ 100 ಎಕರೆ ಜಾಗ ಮೀಸಲು ಅರಣ್ಯ ಸ್ಥಳ, ಮತ್ತು ಅಲ್ಲಿ ಆನೆ ಕಾರಿಡಾರ್ ಇದೆ, ಆನೆ ಗಣೇಶನ ಪ್ರತಿಬಿಂಬಿ ಅಂತಾರೆ ಅಂತಹ ಅರಣ್ಯ ಮತ್ತು ಆನೆಯ ದಾರಿಯನ್ನ ಮಣ್ಣುಮಾಡಿ ಅದರ ಮೇಲೆ ಕಟ್ಟಲು ಹೊರಟಿರುವ ಸಮಾಧಿ ಯಾರದು? ಎಂದು ದೀಪು ಗೌಡ್ರು ಎಂಬುವವರು ಪ್ರಶ್ನಿಸಿದ್ದಾರೆ.

ಸರಕಾರ ಕನ್ನಡ ವಿಶ್ವವಿದ್ಯಾಲಯದ ನಿರ್ವಹಣೆಗೆ ಅನುದಾನ ನೀಡಲು ವಿಳಂಬ ಮಾಡುತ್ತಿದೆ, ಕನ್ನಡ ಅಭಿವೃದ್ದಿ ಪ್ರಾಧಿಕಾರದಂತಹ ಕನ್ನಡ ಸಂಸ್ತೆಗಳ ಅನುದಾನ ಕಡಿತ ಮಾಡಲಾಗಿದೆ. ತುಳು ಶಿಕ್ಷಕರಿಗೆ ಸರಿಯಾದ ಸಂಬಳ ನೀಡಲ್ಲ,ಈ ನಡುವೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ನೂರಾರು ಕೋಟಿ ದುಡ್ಡು ಕೊಡುತ್ತಿರುವುದನ್ನು ಪ್ರಶ್ನಿಸಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅರುಣ್ ಜಾವಗಲ್ ಟ್ವೀಟ್ ಮಾಡಿದ್ದಾರೆ.

ಇಂದು ಇಡೀ ದಿನ ಸಂಸ್ಕೃತ ವಿವಿ ಬೇಡ ಎಂಬ ಟ್ವಿಟರ್ ಅಭಿಯಾನಕ್ಕೆ ಕರವೇ ಕರೆ ನೀಡಿದೆ. ಈಗಾಗಲೇ SayNoToSanskrit ಹ್ಯಾಷ್‌ಟ್ಯಾಗ್ ಭಾರತಮಟ್ಟದಲ್ಲಿ ಐದನೇ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದೆ.


ಇದನ್ನೂ ಓದಿ: ಸಂಸ್ಕೃತ ವಿವಿ ಸ್ಥಾಪನೆಗೆ ಕರವೇ ವಿರೋಧ: ಭಾನುವಾರ ಟ್ವಿಟರ್‌ ಅಭಿಯಾನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. Why do we need Urdu schools run by Government? Urdu never used in any of the offices, organisations , institutions…,
    Why shouldn’t we use the funds to the schools which develop nationalism…?

LEAVE A REPLY

Please enter your comment!
Please enter your name here

- Advertisment -

Must Read

ಹಿಂದು-ಮುಸ್ಲಿಂ ರೈತ ಮೈತ್ರಿಯ ಚಹರೆ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲ

0
ಭಾರತೀಯ ಕಿಸಾನ್ ಯೂನಿಯನ್‌ನ ಸಂಸ್ಥಾಪಕ ಸದಸ್ಯ ಮತ್ತು ಹಿಂದೂ-ಮುಸ್ಲಿಂ ಏಕತೆಯ ಪ್ರತೀಕವಾಗಿದ್ದ ಗುಲಾಮ್ ಮಹಮ್ಮದ್ ಜೌಲಾ ಇನ್ನಿಲ್ಲವಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಜೌಲಾ ನಿಧನದಿಂದಾಗಿ ಮಹೇಂದ್ರಸಿಂಗ್ ಟಿಕೇತ್ ಸ್ಥಾಪಿಸಿದ್ದ ಭಾರತೀಯ ಕಿಸಾನ್ ಯೂನಿಯನ್...