ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತಂತೆ ಮರುಪರಿಶೀಲನೆ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿಯನ್ನು ಅಂಗೀಕರಿಸಿದ್ದು, ತೀರ್ಪು ಪ್ರಕಟಿಸದೆ ಅರ್ಜಿಯನ್ನು 7 ಜನರ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.
ಐದು ಜನ ನ್ಯಾಯಮೂರ್ತಿಗಳಿದ್ದ ಪಂಚಪೀಠವು 3:2 ರ ಬಹುಮತದ ಆಧಾರದಲ್ಲಿ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಹಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್, ಡಿ.ವೈ.ಚಂದ್ರಚೂಡ್, ಹಾಗೂ ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ನ್ಯಾಯಪೀಠ ಈ ನಿರ್ಧಾರ ತೆಗೆದುಕೊಂಡಿದೆ.
ಇನ್ನು 2018ರ ಸೆಪ್ಟಂಬರ್ 25ರಂದು ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಐದು ಜನ ನ್ಯಾಯಮೂರ್ತಿಗಳ ನೇತೃತ್ವದ ಪೀಠವು 4:1 ಬಹುಮತದ ಆಧಾರದಲ್ಲಿ ಎಲ್ಲಾ ಮಹಿಳೆಯರು ದೇವಾಲಯ ಪ್ರವೇಶಿಸಬಹುದು ಎಂಬ ತೀರ್ಪು ನೀಡಿತ್ತು. ಆಗ ವಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್‍ಯ ನಡುವೆ ತಿಕ್ಕಾಟ ಶುರುವಾಗಿತ್ತು.
ಈಗ ಸಿಜೆಐ ರಂಜನ್ ಗಗೋಯಿ ನೇತೃತ್ವದ ಪೀಠವು ನೀಡಿದ ತೀರ್ಪಿನಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಕಳೆದ ವರ್ಷದ ತೀರ್ಪಿಗೆ ತಡೆಯಾಜ್ಞೆ ನೀಡಿಲ್ಲ. ಅಂದರೆ ಈಗಲೂ ಕೂಡ ಮಹಿಳೆಯರು ದೇವಾಲಯ ಪ್ರವೇಶಿಸಬಹುದಾಗಿದೆ.
ಬಹುತೇಕ ಪ್ರಕರಣಗಳಲ್ಲಿ ಮರುಪರಿಶೀಲನೆಯ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಮರುಪರಿಶೀಲನಾ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿರುವುದು ಹಲವೂ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷದ ಸುಪ್ರೀಂ ತೀರ್ಪಿನ ನಂತರ ಸುಮಾರು 56 ಮೇಲ್ಮನವಿಗಳು ಸಲ್ಲಿಕೆಯಾಗಿದ್ದವರು. 10-50 ವರ್ಷದ ಮಹಿಳೆಯರು ದೇವಾಲಯ ಪ್ರವೇಶಿಸಬಾರದು ಎಂಬುದು ಬಹುತೇಕ ಅರ್ಜಿಗಳ ಸಾರವಾಗಿದೆ.