Homeಕರ್ನಾಟಕಅಂಗಡಿಗಳು, ರೆಸ್ಟೋರೆಂಟ್‌ಗಳ ನಾಮಫಲಕಗಳಲ್ಲಿ 60% ಕನ್ನಡ ಬಳಕೆ ಕಡ್ಡಾಯ; ಗಡುವು ನಿಗದಿಪಡಿಸಿದ ಬಿಬಿಎಂಪಿ

ಅಂಗಡಿಗಳು, ರೆಸ್ಟೋರೆಂಟ್‌ಗಳ ನಾಮಫಲಕಗಳಲ್ಲಿ 60% ಕನ್ನಡ ಬಳಕೆ ಕಡ್ಡಾಯ; ಗಡುವು ನಿಗದಿಪಡಿಸಿದ ಬಿಬಿಎಂಪಿ

- Advertisement -
- Advertisement -

ಬೆಂಗಳೂರಿನಲ್ಲಿ 2024ರ ಫೆಬ್ರವರಿ ಅಂತ್ಯದೊಳಗೆ ಎಲ್ಲಾ ವಾಣಿಜ್ಯ ಸಂಸ್ಥೆಗಳು ತಮ್ಮಸಂಸ್ಥೆಗಳ ನಾಮಫಲಕಗಳಲ್ಲಿ  ಕನ್ನಡವನ್ನು ಪ್ರಮುಖವಾಗಿ ಅಂದರೆ ಶೇಕಡಾ 60ರಷ್ಟು ಬಳಸಬೇಕು. ಇಲ್ಲವಾದರೆ ಟ್ರೇಡ್ ಲೈಸೆನ್ಸ್‌ನ್ನು ಕಳೆದುಕೊಂಡು ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶೀಘ್ರದಲ್ಲೇ ಕನ್ನಡ ಅಳವಡಿಕೆ ಆದೇಶವನ್ನು ಅನುಸರಿಸದ ಸಂಸ್ಥೆಗಳನ್ನು, ಅಂಗಡಿಗಳನ್ನು, ರೆಸ್ಟೋರೆಂಟ್‌ಗಳನ್ನು ಗುರುತಿಸಲು ಪ್ರಾರಂಭಿಸುತ್ತದೆ ಮತ್ತು ಅವರಿಗೆ ನೋಟಿಸ್ ಕಳುಹಿಸುತ್ತದೆ. ನಿಯಮ ಪಾಲನೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳಲಿದೆ.

ಕನ್ನಡ ಪರ ಸಂಘಟನೆಯಾದ ಕರ್ನಾಟಕ ರಕ್ಷಣಾ ವೇದಿಕೆ ಮಲ್ಲೇಶ್ವರಂನಲ್ಲಿ ಕರೆದಿದ್ದ ಸಭೆಯಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಮಾತನಾಡಿ,  ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಕನ್ನಡ ನಾಮಫಲಕ ನಿಯಮವನ್ನು ಸಂಪೂರ್ಣವಾಗಿ ಅನುಸರಿಸಬೇಕು ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ, ವಾಣಿಜ್ಯ ಸಂಸ್ಥೆಗಳು ತಮ್ಮ ಹೆಸರಿನ ನಾಮ ಫಲಕಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಬಳಸಬೇಕಾಗುತ್ತದೆ. ಕರ್ನಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಪರ ಸಂಘಟನೆಗಳು ಈ ಆದೇಶಗಳನ್ನು ಕಟ್ಟುನಿಟ್ಟಿನ ಪಾಲನೆಗೆ ಆಗ್ರಹಿಸುತ್ತಿದೆ.

ಬಿಬಿಎಂಪಿ ಹೇಳಿಕೆಯ ಪ್ರಕಾರ, ನಿಯಮವನ್ನು ಅನುಸರಿಸದ ಅಂಗಡಿಗಳನ್ನು ಗುರುತಿಸಲು ನಗರದಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ನಿಯಮ ಪಾಲಿಸದ ಅಂಗಡಿಗಳಿಗೆ ಶೀಘ್ರದಲ್ಲೇ ನೋಟಿಸ್‌ಗಳನ್ನು ನೀಡಲಾಗುವುದು, ಫೆ.28, 2024ರ ಒಳಗೆ ನಿಯಮ ಪಾಲನೆಗೆ ಗಡುವು ನೀಡಲಾಗುವುದು. ಬಿಬಿಎಂಪಿಯ ವಲಯ ಅಧಿಕಾರಿಗಳು ಸಮೀಕ್ಷೆಯ ಮೇಲೆ ನಿಗಾ ವಹಿಸಲಿದ್ದು, ನಿಯಮ ಜಾರಿಗೊಳಿಸಲು ವಿಫಲವಾದರೆ ಕ್ರಮ ಎದುರಿಸಬೇಕಾಗುತ್ತದೆ.

ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಮಾಲ್ ಮಾಲೀಕರೊಂದಿಗೆ ಸಭೆ ನಡೆಸಿ ನಿಯಮ ಪಾಲಿಸಲು 15-20 ದಿನಗಳ ಕಾಲಾವಕಾಶ ನೀಡಲಿದೆ. ಮಾಲ್‌ಗಳ ಆಡಳಿತ ತಮ್ಮ ಮಾಲ್‌ಗಳಲ್ಲಿರುವ ಎಲ್ಲಾ ಅಂಗಡಿಗಳಲ್ಲಿ ಕನ್ನಡವನ್ನು ಪ್ರಮುಖವಾಗಿ ಪ್ರದರ್ಶಿಸುವಂತೆ ಕೇಳಿಕೊಳ್ಳುತ್ತಿದ್ದು, ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಿದೆ. ಬಿಬಿಎಂಪಿ ಈ ಬಗ್ಗೆ ಕಾನೂನು ಕ್ರಮವನ್ನು ನಿರ್ದಿಷ್ಟಪಡಿಸದಿದ್ದರೂ, ಇದು ದಂಡವನ್ನು ವಿಧಿಸುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ಕ.ರ.ವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ,  ಹೆಬ್ಬಾಳದಲ್ಲಿ ಹೊಸದಾಗಿ ತೆರೆದಿರುವ ಮಾಲ್‌ನ ಅಧಿಕಾರಿಗಳು ಬೋರ್ಡ್‌ನಲ್ಲಿ ಕನ್ನಡದ ಅಳವಡಿಕೆ ಕುರಿತು ನಿಯಮವನ್ನು ಪಾಲಿಸಲು ನಿರಾಕರಿಸಿದ ನಂತರ ನಾವು ಅಭಿಯಾನಕ್ಕೆ ಚಾಲನೆ ನೀಡಿದ್ದೇವೆ. ನಂತರ ಈ ವಿಷಯವನ್ನು ಬಿಬಿಎಂಪಿ ಮುಖ್ಯಸ್ಥರ ಗಮನಕ್ಕೆ ತಂದಿದ್ದೇವೆ. ವಾಣಿಜ್ಯ ಸಂಸ್ಥೆಗಳು ತಮ್ಮ ಹೆಸರಿನ ಫಲಕಗಳಲ್ಲಿ ಕನ್ನಡವನ್ನು ಬಳಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಬಿಬಿಎಂಪಿ:

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಿಂದ ಅನುಮತಿ ಪಡೆದ ಎಲ್ಲಅಂಗಡಿ-ಮುಂಗಟ್ಟುಗಳು, ಹೋಟೆಲ್‌ಗಳು, ಮಾಲ್‌ಗಳು, ಕಂಪನಿಗಳು, ವಾಣಿಜ್ಯ ಸಂಸ್ಥೆಗಳು ಸಾರ್ವತ್ರಿಕವಾಗಿ ಪ್ರದರ್ಶಿಸುವ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವುದು ಮತ್ತು  ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸುವುದನ್ನು ಕಡ್ಡಾಯಗೊಳಿಸಿ ಬಿಬಿಎಂಪಿಯು 2017, 2018 ಮತ್ತು 2019ರಲ್ಲಿಆದೇಶ ಹೊರಡಿಸಿತ್ತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು 2017ರ ಜು.18ರಂದು ಬಿಬಿಎಂಪಿಯಲ್ಲಿಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕನ್ನಡದಲ್ಲಿ  ನಾಮಫಲಕ ಬರೆಸದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆಯ ವಿರುದ್ಧ ಶಿಸ್ತು ಕ್ರಮಕ್ಕೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತುಕೊಂಡಿದ್ದ ಬಿಬಿಎಂಪಿ, ನಗರದ ಎಲ್ಲ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳ ನಾಮಫಲಕವನ್ನು ಕನ್ನಡದಲ್ಲಿ ಬರೆಸಲು ಮಾಲೀಕರಿಗೆ ತಾಕೀತು ಮಾಡಿತ್ತು. ಆದರೆ ಈ ಆದೇಶವು ಕಾಗದಕ್ಕಷ್ಟೇ ಸೀಮಿತವಾಗಿದೆ. ಎಲ್ಲೆಡೆ ನಿಯಮ ಕಟ್ಟು ನಿಟ್ಟಾಗಿ ಪಾಲನೆ ನಡೆದಿಲ್ಲ.

ಇದನ್ನು ಓದಿ: ಬೆಂಗಳೂರು: ಕ್ರಿಸ್ ಮಸ್ ಟ್ರೀ ಪ್ರದರ್ಶನಕ್ಕೆ ವಿರೋಧಿಸಿ ಗಲಾಟೆ; ಪುನೀತ್ ಕೆರೆಹಳ್ಳಿ ಸೇರಿ ಐವರ ವಿರುದ್ಧ ಎಫ್‌ಐಆರ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...