Homeಮುಖಪುಟಪೇಜಾವರರಿಗೆ ಶ್ರದ್ಧಾಂಜಲಿ ಮತ್ತು ಮೌಲ್ಯಮಾಪನ : ಸುಧಾರಣೆ ಮತ್ತು ಅಜೆಂಡಾ...

ಪೇಜಾವರರಿಗೆ ಶ್ರದ್ಧಾಂಜಲಿ ಮತ್ತು ಮೌಲ್ಯಮಾಪನ : ಸುಧಾರಣೆ ಮತ್ತು ಅಜೆಂಡಾ…

ಗಾಂಧಿಯ ಸಾವಿಗೆ ಮರುಗಿದ್ದ ಯುವಕ, ಅವರ ಸಾವಿಗೆ ಕಾರಣವೆನ್ನಲಾದ ಶಕ್ತಿಗಳ ಜೊತೆ ಏಕೆ ಗುರುತಿಸಿಕೊಳ್ಳಲಾರಂಭಿಸಿದ? ದೇಶ ವಿಭಜನೆಯೇ, ಅಂದಿನ ರಾಜಕಾರಣವೇ, ಇಲ್ಲವೇ ಮಠದ ಪೀಠವೇ? ಗೊತ್ತಿಲ್ಲ

- Advertisement -
- Advertisement -

ಪೇಜಾವರ ಶ್ರೀ ವಿಶ್ವೇಶತೀರ್ಥರು ತೀರಿಕೊಂಡಿದ್ದಾರೆ; ನಿರೀಕ್ಷೆಯಂತೆಯೇ ಏಕಪ್ರಕಾರದ ಭಜನೆ ನಡೆದಿದೆ. ಪಕ್ಕಾ ಅವೈದಿಕ ಪತ್ರಿಕೆಯೂ ‘ಪ್ರಜಾಪರ ವಿಶ್ವೇಶರು – ಪ್ರಜಾಪ್ರಭುತ್ವದ ದನಿ’ ಎಂಬ ಟೈಟಲ್ ಕೊಟ್ಟಿದೆ. ಆದರೆ ವಿಶ್ವೇಶತೀರ್ಥರದು ಸುಲಭ ವರ್ಗೀಕರಣಕ್ಕೆ ದಕ್ಕದ ಸಂಕೀರ್ಣ ವ್ಯಕ್ತಿತ್ವ. ಅವರ ಏಕದಂ ನಿರಾಕರಣೆಯೂ ಭಜನೆಯೂ ಸಲ್ಲ. ಸಾರ್ವಜನಿಕ ವ್ಯಕ್ತಿಗಳು ತೀರಿಕೊಂಡಾಗ ಅವರ ಜೀವನದ ಮರುಮನನ ಮತ್ತು ಮೌಲ್ಯಮಾಪನವು ಆ ಜೀವಿತಕಾಲದ ಸಂಸ್ಕೃತಿ ಕಥನವೇ ಸರಿ. ಅಂಥದೊಂದು ಪ್ರಯತ್ನವಿದು.

ಬ್ರಾಹ್ಮಣರ ಒಂದು ಉಪಪಂಗಡವಾದ ಮಾಧ್ವ ಸಂಪ್ರದಾಯದ ನೆಲೆ ಉಡುಪಿಯ ಅಷ್ಟಮಠಗಳಲ್ಲೊಂದಾದ ಪೇಜಾವರ ಮಠದ ಯತಿ ಹಿರಿಯರು ವಿಶ್ವೇಶತೀರ್ಥರು. ಆದರೆ ಅವರು ಅಷ್ಟೇ ಆಗಿದ್ದರೆ ಇಷ್ಟು ಚರ್ಚೆಯೇ ಆಗುತ್ತಿರಲಿಲ್ಲ. ಅವರು ಅದನ್ನು ಮೀರಿ ಬೆಳೆದಿದ್ದರು, ಮಠ ಬಿಟ್ಟು ಬಯಲಿಗೆ ಬಂದಿದ್ದರು. ಈ ಬಯಲ ಬದುಕಿನಲ್ಲಿ ಮೂರು ಪ್ರಮುಖ ಬಿಂದುಗಳನ್ನು ನಾವು ಗುರುತಿಸಬಹುದು – ಕರ್ಮಠ ಬ್ರಾಹ್ಮಣ ಮಠದ ಯತಿಗಳಾಗಿ ದಲಿತರೆಡೆ ಕೈಚಾಚಿದ್ದು, ಹಿಂದುತ್ವದ ಪ್ರವರ್ತಕರಾಗಿ ದೇಶ ತಿರುಗಿದ್ದು ಮತ್ತು ನಾಡಿನ ಕೆಲವು ವೈಚಾರಿಕ ಚರ್ಚೆಗಳಲ್ಲಿ ಡೆಮಾಕ್ರಟಿಕ್ ಆಗಿ ಭಾಗವಹಿಸಿ ಪಬ್ಲಿಕ್ ಇಂಟೆಲೆಕ್ಚುವಲ್ ಆಗಿದ್ದು. ಇದುವರೆಗೂ ಅವರ ಬಗೆಗೆ ಬಂದಿರುವ ಹಲವು ನುಡಿನಮನಗಳು ಈ ಮೂರು ಬಿಂದುಗಳನ್ನು ಅವರ ಜೀವನದ ಮೂರು ಆಯಾಮಗಳು, ಹಲವು ಬಾರಿ ಒಂದಕ್ಕೊಂದು ಎದುರುಬದುರಾಗಿ ದ್ವಂದ್ವಗಳನ್ನು ಸೃಷ್ಟಿಸುತ್ತಿತ್ತು ಎಂಬಂತೆ ಕಥಿಸಿವೆ. ಆದರೆ ಈ ಮೂರೂ ಆಯಾಮಗಳು ಚತುರ್ಮುಖ ಬ್ರಹ್ಮನ ಮೂರು ಮುಖಗಳಷ್ಟೆ ಎಂಬುದು ನನ್ನ ಅನಿಸಿಕೆ. ಸುಲಭವಾಗಿ ಕಾಣದ ಅವರ ನಾಲ್ಕನೆಯ ನೈಜ ಸುಧಾರಣಾವಾದಿ ಮುಖವೂ ಒಂದಿತ್ತೆ ಎಂಬುದು ಜಿಜ್ಞಾಸೆಯ ವಿಷಯ.

2012ರಲ್ಲಿ ಪೇಜಾವರ ಶ್ರೀಗಳು ತಮ್ಮನ್ನು ಇತರರು ದ್ವಂದ್ವಾಚಾರ್ಯರೆಂದು ಹಿಂದೆ ಆಡಿಕೊಳ್ಳುತ್ತಾರೆಂಬುದನ್ನು ತಾವೇ ಬಹಿರಂಗವಾಗಿಯೇ ಆಡಿದ್ದರು. ಕರ್ಮಠ ಬ್ರಾಹ್ಮಣ ಮಠದ ಯತಿಯಾಗಿ ಅವರು ದಲಿತ ಕೇರಿಗೆ ಪಾದ ಬೆಳೆಸಿದ್ದನ್ನೇ ಮುಂದುಮಾಡಿಕೊಂಡರೆ ಅವರು ಕರ್ಮಠ ಪರಂಪರೆ ಮತ್ತು ಸುಧಾರಣಾವಾದದ ನಡುವಿನ ದ್ವಂದ್ವದಲ್ಲಿದ್ದರೆನಿಸುತ್ತದೆ. ಆದರೆ ಅವರು ನಿಜವಾಗಿ ಎದುರಿಸುತ್ತಿದ್ದ ದ್ವಂದ್ವ: ಜಾತಿಯೇ ವಾಸ್ತವವಾಗಿರುವ ವೈದಿಕ ವರ್ಣಾಶ್ರಮ ಪದ್ಧತಿ ಮತ್ತು ವಿರಾಟ್ ಹಿಂದೂ ಕೋಮನ್ನು ಕಟ್ಟುವ ಹಿಂದುತ್ವದ ನಡುವಿನದು. ಅವರ ಸುಧಾರಣಾವಾದಿ ಹೆಜ್ಜೆಗಳೂ ಹಿಂದುತ್ವದ ಭಾಗವಾಗಿಯೇ ಬಂದವು.

ಅವರು ಕಳೆದ ಶತಮಾನದ ಅತಿ ದೊಡ್ಡ ರಾಜಕೀಯ `ಹಿಂದೂ’ ಸನ್ಯಾಸಿ. ಅವರಿಗೆ ರಾಜಕೀಯ ವೈಚಾರಿಕತೆಯ ಸ್ಪಷ್ಟತೆಯಿತ್ತು – ಅದು ಹಿಂದುತ್ವ. ಶ್ರೀಗಳು ಜನಿಸಿದ್ದು 1931ರಲ್ಲಿ. ಅದೊಂದು ಪರ್ವಕಾಲ. ಗಾಂಧೀಜಿಯ ಉಚ್ಛ್ರಾಯ, ಹಿಂದುತ್ವ ಬಲಿಯುತ್ತಿದ್ದ ಕಾಲ ಮತ್ತು ಜಿನ್ನಾನ ಮನದಲ್ಲಿ ಪಾಕಿಸ್ತಾನ ಮೂಡುತ್ತಿದ್ದ ಕಾಲ ಅದು. ಎಳವೆಯಲ್ಲಿ ಶ್ರೀಗಳ ಮೇಲೆ ಗಾಂಧಿಯವರ ಪ್ರಭಾವದ ಅನೇಕ ಕುರುಹುಗಳು ದೊರೆಯುತ್ತವೆ. ಅವರು ರೇಶ್ಮೆ-ಜರತಾರಿಗಳನ್ನು ತ್ಯಜಿಸಿ ಖಾದಿ ತೊಟ್ಟದ್ದು, ದಲಿತರ ಬಗ್ಗೆ ಕಾಳಜಿ ಹೊಂದಿದ್ದು ಹೀಗೆ.

ಶ್ರೀಗಳ ಪೂರ್ವಾಶ್ರಮದ ಬಂಧುವೂ ಆಗಿರುವ ಲಕ್ಷ್ಮೀಶ ತೋಳ್ಪಾಡಿಯವರು ಪ್ರಜಾವಾಣಿಯಲ್ಲಿ ಬರೆಯುತ್ತಾ ಎರಡು ವಿಷಯ ಪ್ರಸ್ತಾಪಿಸುತ್ತಾರೆ. ವಿಶ್ವೇಶತೀರ್ಥರು ಅವರ ಗುರು ವಿದ್ಯಾಮಾನ್ಯರಲ್ಲಿ ಅಭ್ಯಾಸ ಮಾಡುತ್ತಿದ್ದಾಗಲೇ ಅವರಿಗೆ ದಲಿತರ ಬಗೆಗೆ ವಿಶೇಷ ಕಾಳಜಿ ಎಷ್ಟರಮಟ್ಟಿಗಿತ್ತೆಂದರೆ “ಭಂಡಾರಕೇರಿಯಲ್ಲಿರುವ ದಲಿತರ ಕೇರಿಗಳನ್ನು ವಿದ್ಯಾಮಾನ್ಯರು ವಿಶ್ವೇಶತೀರ್ಥರಿಗೆ ತೋರಿಸುತ್ತಾ, ‘ನೋಡಿ, ನಿಮ್ಮವರ ಮನೆಗಳು’ ಎನ್ನುತ್ತಿದ್ದದ್ದುಂಟು!” ವಿಶ್ವೇಶತೀರ್ಥರು ಹಲವು ಬಾರಿ ಹೇಳಿದ್ದಿದೆ – ಅವರು ಹುಡುಗನಾಗಿದ್ದಾಗ ಬಾವಿಯಲ್ಲಿ ಬಿದ್ದ ಅವರ ಜೀವ ರಕ್ಷಿಸಿದ್ದು ಹರಿಜನರ ಹುಡುಗನೆಂದೂ, ಅದರ ಋಣ ತಾನು ತೀರಿಸಬೇಕೆಂದು. ಎಲ್ಲೋ ಒಂದು ಕಡೆ ಗಾಂಧೀಜಿ ಕೈಗೊಂಡಿದ್ದ ಅಸ್ಪೃಶ್ಯತಾ ನಿರ್ಮೂಲನೆ ಮತ್ತು ಹಿಂದೂ ಸಮಾಜದ ಸುಧಾರಣಾವಾದಿ ಚಳುವಳಿಯ ಪ್ರಭಾವ ಇದ್ದಂತೆನಿಸುತ್ತದೆ. ತೋಳ್ಪಾಡಿಯವರು ಗಾಂಧಿ ಅವರ ಹತ್ಯೆಯ ಪ್ರಸಂಗವನ್ನು ವಿವರಿಸುತ್ತಾ, ಹೇಗೆ ಗಾಂಧಿಯ ಸಾವನ್ನು ಸಂಭ್ರಮಿಸಬಹುದಾಗಿದ್ದವರ ನಡುವೆ ಇದ್ದರೂ 17ರ ಪ್ರಾಯದ ವಿಶ್ವೇಶತೀರ್ಥರು ಗಾಂಧಿ ಹತ್ಯೆಯಿಂದ ನೊಂದು ಉಪವಾಸ ಮಾಡಿದರು ಎಂದು ಬರೆಯುತ್ತಾರೆ. ಆದರೆ ಇಲ್ಲಿ ಒಬ್ಬ ಹಿಂದೂ ಗಾಂಧಿಯನ್ನು ಕೊಂದ ಬಗ್ಗೆ ಅವರ ನಿಲುವೇನಾಗಿತ್ತು ಎಂಬುದಕ್ಕೆ ಉತ್ತರ ದೊರೆಯುವುದಿಲ್ಲ. ಇದುವರೆಗಿನದು ಶ್ರೀಗಳ ಜೀವನದ ಆಶಯದ ಕಾಲ.

ಇದಾದ ನಾಲ್ಕು ವರ್ಷಗಳ ತರುವಾಯ 1952ರಲ್ಲಿ ಅವರು ಮೊದಲ ಬಾರಿಗೆ ಪರ್ಯಾಯ ಪೀಠಾರೋಹಣ ಮಾಡುತ್ತಾರೆ, ಅವರ ಜೀವನದ ಕ್ರಿಯೆಯ ಪರ್ವ ಅಲ್ಲಿಂದ ಶುರು. 1953ರ ಅಕ್ಟೋಬರ್‌ಲ್ಲಿ ಮೊದಲ ಬಾರಿಗೆ ಅವರು ಸಂಘ ಪರಿವಾರದ `ಗುರೂಜಿ’ ಎಂದೇ ಖ್ಯಾತರಾಗಿದ್ದ ಎಂ.ಎಸ್. ಗೋಳ್ವಾಲ್ಕರ್ ಅವರನ್ನು ಉಡುಪಿಯಲ್ಲಿ ಭೇಟಿಯಾಗುತ್ತಾರೆ, ಆಗ ಅವರಿಗೆ 22ರ ಹರೆಯ. ಇವತ್ತಿನ ಆರೆಸ್ಸೆಸ್ ಪ್ರಮುಖರೂ, ಜಾತಿ ಸಾಮರಸ್ಯ ಚಳವಳಿಯಲ್ಲಿ ಸಕ್ರಿಯಪಾತ್ರ ವಹಿಸುತ್ತಾ ಬಂದಿರುವ ವಾದಿರಾಜ್ ಅವರು ಪ್ರಜಾವಾಣಿಯಲ್ಲಿ ಬರೆಯುತ್ತಾರೆ – ಶ್ರೀಗಳು ಆರೆಸ್ಸೆಸ್ ಮುಖ್ಯಸ್ಥರಿಗೆ ಕೇಳಿದ ಪ್ರಶ್ನೆ: “ನಮ್ಮ ದೇಶ ಒಡೆದು ಹೋಯಿತಲ್ಲ ಏಕೆ? ಮತ್ತು ಈ ದೇಶ ಮತ್ತೆ ಒಂದಾಗಬಹುದೆ?”. ಇಲ್ಲಿಂದಲೇ ಅವರ ಸಂಘ ಪರಿವಾರ ಮತ್ತು ಹಿಂದುತ್ವದ ನಂಟು ಶುರುವಾಗುತ್ತದೆ. ಗಾಂಧಿಯ ಸಾವಿಗೆ ಮರುಗಿದ್ದ ಯುವಕ, ಅವರ ಸಾವಿಗೆ ಕಾರಣವೆನ್ನಲಾದ ಶಕ್ತಿಗಳ ಜೊತೆ ಏಕೆ ಗುರುತಿಸಿಕೊಳ್ಳಲಾರಂಭಿಸಿದ? ದೇಶ ವಿಭಜನೆಯೇ, ಅಂದಿನ ರಾಜಕಾರಣವೇ, ಇಲ್ಲವೇ ಮಠದ ಪೀಠವೇ? ಗೊತ್ತಿಲ್ಲ.

`ಹಿಂದೂ’ ಎಂಬುದಕ್ಕೆ ಧಾರ್ಮಿಕ ಒಪ್ಪಿಗೆ, ಐಡೆಂಟಿಟಿ ಇಲ್ಲದೆ ರಾಜಕೀಯ ಐಟೆಂಟಿಟಿಯಾಗಿ ಯಶಸ್ವಿಯಾಗದು ಎಂಬುದು ಸಂಘಪರಿವಾರಕ್ಕೆ ಮನವರಿಕೆಯಾಗುತ್ತಾ ಬಂದಂತೆ ಅವರು ಹಿಂದೂ ಸಮಾಜದ ಸಾಧು-ಸಂತರ ಸಂಘಟನೆಗೆ ತೊಡಗಿದರು. ಅವರು ಹಿಂದೂ ಎಂದು ಗುರುತಿಸಿಕೊಂಡರೆ ಈ ಐಡೆಂಟಿಟಿ ಸಮಾಜದಲ್ಲಿ ಮಾನ್ಯತೆ ಪಡೆಯುತ್ತದೆ ಎಂಬುದು ಸ್ಟ್ರಾಟಜಿ. `ಗುರೂಜಿ’ ಗೋಳ್ವಾಲ್ಕರ್ ಅವರು ಆಗಸ್ಟ್ 29, 1964ರಂದು ಬಾಂಬೆಯಲ್ಲಿ ಕೆಲ ಆಯ್ದ ಧರ್ಮಗುರುಗಳ ಸಂಸತ್ತನ್ನು ನಡೆಸಿ ವಿಶ್ವ ಹಿಂದೂ ಪರಿಷತ್ ಅನ್ನು ಹುಟ್ಟುಹಾಕಿದರು. ಈ ಪರಿಷತ್‌ನ ಮೂಲ ಆಧಾರ ಸ್ತಂಭಗಳಲ್ಲಿ ಪೇಜಾವರರೂ ಒಬ್ಬರು ಎಂದು ವಾದಿರಾಜ್ ಬರೆಯುತ್ತಾರೆ. ಸಾಧು-ಸಂತರು ದೊರಕಿಸಿಕೊಟ್ಟ ಈ ಮಾನ್ಯತೆ ಹಿಂದುತ್ವಕ್ಕೆ ಅತಿದೊಡ್ಡ ಶಕ್ತಿ, ಇದು ದೇಶದ ರಾಜಕೀಯದಲ್ಲೇ ಒಂದು ದೊಡ್ಡ ಚಲನೆ. ಈ ಬಗ್ಗೆ ಖ್ಯಾತ ಪತ್ರಕರ್ತ ಧೀರೇಂದ್ರ ಕೆ. ಝಾ ಅವರು ಇತ್ತೀಚೆಗೆ ಬರೆದ ’ಅಸೆಟಿಕ್ ಗೇಮ್ಸ್’ ಎಂಬ ಪುಸ್ತಕವನ್ನು ಓದಬಹುದು.

ವಿರಾಟ್ ಹಿಂದೂ ಸಮಾಜವನ್ನು ಒಂದು ತಾಟಿಗೆ ತರುವುದು ಅಷ್ಟು ಸುಲಭವಲ್ಲ. ಅದಕ್ಕೆ ಅದರೊಳಗಿನ ಜಾತಿ ತರತಮ ಭಾವನೆಗಳೇ ಅಡ್ಡಿ. ಸಂಘ ಪರಿವಾರವೂ ಸ್ವಭಾವತಃ ಬ್ರಾಹ್ಮಣತ್ವವನ್ನೇ ಪ್ರತಿಪಾದಿಸಿದರೂ ಅದು ಮುಸ್ಲಿ-ಕ್ರೈಸ್ತ ಧರ್ಮಗಳ ಗುಮ್ಮ ತೋರಿಸಿ ಹಿಂದೂ ಸಮಾಜವನ್ನು ಒಗ್ಗೂಡಿಸಲು ನೋಡುತ್ತದೆ. ಅದಕ್ಕೆ ಜಾತಿ ವಿರೋಧಿ ಅಜೆಂಡಾದ ರೆಟರಿಕ್ ಸಹ ಇದೆ. ಪೇಜಾವರ ವಿಶ್ವೇಶತೀರ್ಥರು, ಬ್ರಾಹ್ಮಣ ಮಠದ ಯತಿಗಳು, ದಲಿತರ ಬಗ್ಗೆ ಕೊಂಚ ಕಾಳಜಿ ಇದ್ದವರು. ದಲಿತರೆಡೆ ಕೈಚಾಚಲಾರಂಭಿಸಿದರು. “1967ರಲ್ಲಿ ಪ್ರಯಾಗದಲ್ಲಿ ನಡೆದ ಮೊದಲ ವಿಶ್ವ ಹಿಂದೂ ಪರಿಷತ್ತಿನ ಸಮಾವೇಶದ ಘೋಷವಾಕ್ಯ “ಯಾವ ಹಿಂದುವೂ ಪತಿತನಲ್ಲ” ಸೂಚಿಸಿದವರು ಪೇಜಾವರರೇ. ನಂತರ ಉಡುಪಿಯಲ್ಲೇ 1969ರಲ್ಲಿ ಪೇಜಾವರರ ಆತಿಥ್ಯದಲ್ಲಿ ಮತ್ತೊಂದು ಸಮಾವೇಶ ಆಯೋಜನೆ ಆಯಿತು. ಈ ಸಮ್ಮೇಳನದ ಉದ್ದೇಶ “ಹಿಂದೂ ಸಮಾಜವನ್ನು ಕಾಡುತ್ತಿರುವ ಅಸ್ಪೃಶ್ಯತೆ ಶಾಸ್ತ್ರ ಸಮ್ಮತವೇ?” ಎಂಬುದನ್ನು ಚರ್ಚಿಸುವುದಾಗಿತ್ತು. ಈ ಸಮ್ಮೇಳನದ ಘೋಷವಾಕ್ಯ “ಹಿಂದೂಗಳೆಲ್ಲರೂ ಸೋದರರು” ಕೊಟ್ಟವರೂ ಪೇಜಾವರರೇ. ಸಮ್ಮೇಳನ “ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ ಸ್ಥಾನವಿಲ್ಲ, ಅದು ಶಾಸ್ತ್ರ ಸಮ್ಮತವೂ ಅಲ್ಲ, ಅದನ್ನು ಬೇರುಸಹಿತ ಕಿತ್ತುಹಾಕಬೇಕು” ಎಂಬ ನಿರ್ಣಯ ಘೋಷಿಸಿದಾಗ ಅಧ್ಯಕ್ಷತೆ ವಹಿಸಿದ್ದ ಭರಣಯ್ಯನವರ (ರಾಜ್ಯದ ಮೊದಲ ದಲಿತ ಐಎಎಸ್ ಅಧಿಕಾರಿ) ಕಣ್ಣುಗಳು ತೇವವಾಗಿದ್ದವು ಎಂದು ಪೇಜಾವರರು ಅನೇಕ ಬಾರಿ ಸ್ಮರಿಸಿದ್ದಾರೆ” ಎಂದು ವಾದಿರಾಜರು ಬರೆಯುತ್ತಾ ಈ ಸಮ್ಮೇಳನವು ಪೇಜಾವರರನ್ನು ಗೋಳ್ವಾಲ್ಕರ್ ಅವರಿಗೆ ಹತ್ತಿರ ಮಾಡಿತು ಎಂದು ಬರೆಯುತ್ತಾರೆ. 1968ರಲ್ಲಿ ದಕ್ಷಿಣಭಾರತದಲ್ಲಿ ಮೊದಲ ಬಾರಿಗೆ ಉಡುಪಿ ಮುನಿಸಿಪಾಲಿಟಿಯಲ್ಲಿ ಜನ ಸಂಘ ಗೆದ್ದು ಅಧಿಕಾರಕ್ಕೆ ಬಂತು.

ಈ ಸಮಯದಲ್ಲೆ ಪೇಜಾವರರು ದಲಿತರ ಕೇರಿಗೆ ಹೋಗುವುದನ್ನು ಶುರು ಮಾಡಿದರು. ಇದಕ್ಕೆ ಸಂಪ್ರದಾಯವಾದಿಗಳಿಂದ ತುಂಬಾ ವಿರೋಧ ವ್ಯಕ್ತವಾಯಿತು. ಆಗ ನೊಂದು ಅವರು ಪೀಠತ್ಯಾಗ ಮಾಡಿ ಬಿಡಿ ಸನ್ಯಾಸಿಯಾಗಿ ಈ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿದಾಗ, “ಪೀಠದಲ್ಲದ್ದೇ ಇದನ್ನು ನೀವು ಸಾಧಿಸಬೇಕು, ಅಂತಿಮವಾಗಿ ಪರಿವರ್ತನೆ ಬರಬೇಕಾದ್ದು ಸವರ್ಣೀಯ ಸಮಾಜದ ಮಾನಸಿಕತೆಯಲ್ಲಿ ಎಂದು ಆರೆಸ್ಸೆಸ್ ಪ್ರಮುಖರು ಪೇಜಾವರರ ಬೆಂಬಲಕ್ಕೆ ನಿಂತರು” ಎಂದು ವಾದಿರಾಜರು ದಾಖಲಿಸುತ್ತಾರೆ. ಆದರೆ ಪೇಜಾವರರು ವಿರಾಟ್ ಹಿಂದೂ ಸಮಾಜದ ನಿರ್ಮಾಣದಲ್ಲಿ ತೊಡಗಿದ್ದರು, ದಲಿತರ ತಲೆಗೂ ಹಿಂದೂ ಐಡೆಂಟಿಟಿಯನ್ನು ಕಟ್ಟುತ್ತಿದ್ದರು.

ಸ್ವತಃ ದಲಿತರಾದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಯವರಿಗೆ ಬ್ರಾಹ್ಮಣ ಕೇರಿಯಲ್ಲಿ ಪಾದಯಾತ್ರೆ ಮಾಡಿಸಿ ಬ್ರಾಹ್ಮಣರ ಕೈಲಿ ಪೇಜಾವರರು ಪಾದಪೂಜೆ ಮಾಡಿಸಿದ್ದರು. ಅವರು ಪ್ರಜಾವಾಣಿಯಲ್ಲಿ ಬರೆಯುತ್ತಾ ಪೇಜಾವರರನ್ನೇ ಉಲ್ಲೇಖಿಸುತ್ತಾರೆ. ಮೂರು ಮಕ್ಕಳಿರುವ ಒಂದು ಮನೆಯಲ್ಲಿ ಕಡೆಯ ಮಗುವಿನ ಬಗ್ಗೆ, ಅವರದೇ ಕರುಳ ಕುಡಿಯಾದರೂ ಪೋಷಕರಿಗೆ ತಾತ್ಸಾರ. ಎಷ್ಟೇ ಅತ್ತು ಕರೆದರೂ ಮೂರನೆಯ ಮಗುವನ್ನು ಹೊರಗಟ್ಟಿ ಉಳಿದಿಬ್ಬರು ಮಕ್ಕಳೊಂದಿಗೆ ಸುಖವಾಗಿ ಒಳಗೆ ನಿದ್ರಿಸುತ್ತಿದ್ದರು. ಒಂದು ದಿನ ಹೊರಗಿದ್ದ ಈ ಮೂರನೆಯ ಮಗುವನ್ನು ಹುಲಿ ಎಳೆದೊಯ್ದಿತು. ನಂತರ ಎಷ್ಟು ಅತ್ತು ಕರೆದರೂ ಪ್ರಯೋಜನವಾಗಲಿಲ್ಲ-ಇದು ಮಹಾಭಾರತದೊಂದು ಕಥೆ. ಈ ಕಥೆಯನ್ನು ಬೆಂಗಳೂರಿನಲ್ಲಿ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಹೇಳುತ್ತಾ ಪೇಜಾವರರು ಗದ್ಗದಿತರಾರದು ಎಂದು ಮಾದಾರ ಚೆನ್ನಯ್ಯರು ಬರೆಯುತ್ತಾರೆ. “ಮೇಲು-ಕೀಳು ಅಸಮಾನತೆಯಿಂದ ಬೇಸತ್ತು ಶೋಷಿತ ಸಮುದಾಯಗಳು ಅನ್ಯಧರ್ಮಗಳೊಂದಿಗೆ ನಡೆದರೆ ಹಿಂದೂಗಳೇ ಈ ದೇಶದಲ್ಲಿ ಅಲ್ಪಸಂಖ್ಯಾತರಾಗುತ್ತೀರಿ. ಹುಲಿಗೆ ಆಹಾರವಾದ ಮಗು ಎಷ್ಟೇ ಅತ್ತು ಕರೆದರೂ ಹೇಗೆ ಬರಲು ಸಾಧ್ಯವಾಗಲಿಲ್ಲವೋ ಹಾಗೆ ಮುಂದೊಂದು ದಿನ ಈ ಧರ್ಮದ ಕಥೆಯಾಗುತ್ತದೆ” ಎಂದು ಹೇಳಿದರೆಂದು ಬರೆಯುತ್ತಾರೆ. ಈ ಉಪಮೆಯಲ್ಲಿ ಇಸ್ಲಾಂ-ಕ್ರೈಸ್ತ ಧರ್ಮಗಳು ಹುಲಿಗಳೆಂದು ಪ್ರತ್ಯೇಕ ಹೇಳಬೇಕಿಲ್ಲ. ವಾದಿರಾಜರು ಮತ್ತೊಂದು ಪ್ರಸಂಗವನ್ನು ಪ್ರಸ್ತಾಪಿಸುತ್ತಾರೆ. ಅಂಬೇಡ್ಕರರು ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿ ಸಾಯಲಾರೆ ಎಂಬ ಹೇಳಿಕೆಯನ್ನು ಪ್ರಸ್ತಾಪಿಸಿದ ಪೇಜಾವರರು, “ಒಬ್ಬ ವಿದ್ಯಾವಂತ ಯುವಕನಿಗೆ ಹೀಗೆ ಅನ್ನಿಸಿತಾದರೂ ಏಕೆ? ನಾನು ಹಿಂದೂ ಧರ್ಮ ಬಿಟ್ಟು ಹೋಗುತ್ತೇನೆ ಅಂದರೂ ಯಾವೊಬ್ಬ ಮಠಾಧೀಶರೂ ಅಂಬೇಡ್ಕರರನ್ನು ಕಂಡು ಸಂತೈಸಲಿಲ್ಲವೇಕೆ? ಇದೊಂದು ಪ್ರಮಾದ. ಈ ಪ್ರಮಾದಕ್ಕಾಗಿ ನಾನು ಎಲ್ಲ ಹಿಂದೂ ಮಠಾಧೀಶರ ಪರವಾಗಿ ಅಂಬೇಡ್ಕರರಲ್ಲಿ ಕ್ಷಮೆ ಯಾಚಿಸುತ್ತೇನೆ”, ಎಂದರೆಂದು ಅವರು ಬರೆಯುತ್ತಾರೆ.

ಇದರಿಂದ ಅವರು ಮೊದಲ ಬಾರಿ ಪರ್ಯಾಯವೇರುವ ಮೊದಲಿನ ಅವರ ಆಶಯದ ಕಾಲದಲ್ಲಿ ಗಾಂಧಿಯಿAದ ಪ್ರಭಾವಿತರಾದಂತೆ ಕಂಡರೂ, ಅವರ ಈ ಕ್ರಿಯೆ ಗಾಂಧೀತತ್ವದ ಸೆಲೆಯಿಂದ ಖಂಡಿತ ಪ್ರೇರಿತವಾಗಿರಲಿಲ್ಲವೆಂಬುದು ಸ್ಪಷ್ಟ. ದಲಿತರೆಡೆಗೆ ಅವರು ಕೈಚಾಚಿದ್ದು ಕಡೆಗೆ ಅವರನ್ನು ಒಂದು ಅಪಾಯಕಾರಿ ರಾಜಕೀಯಕ್ಕೆ ದಾಳ ಮಾಡಿಕೊಳ್ಳಲು ಮತ್ತು ಅದಕ್ಕೆ ಇತರ ಧರ್ಮಗಳ ಬಗೆಗಿನ ದ್ವೇಷವಲ್ಲದಿದ್ದರೂ ಅಸಹನೆಯೇ ಕಾರಣ. ಇದು ಗಾಂಧಿ-ವಿವೇಕಾನಂದರ ಮಾರ್ಗವಲ್ಲ. ಗಾಂಧಿಯೂ ಮೊದಲಿಗೆ ಸನಾತನಿಯೇ. ಆದರೆ ಅವರ ಜೀವಿತದ ಕಡೆಯಕಾಲದಲ್ಲಿ ಸವರ್ಣ-ದಲಿತ ಮದುವೆಗಳನ್ನು ಮಾತ್ರ ಮಾಡಿಸುತ್ತಿದ್ದರು, ಅವರ ಆಶ್ರಮದಲ್ಲಿ. ಪೇಜಾವರರು ಅಂತರ್ಜಾತಿ ಮದುವೆಗಳಿರಲಿ, ಅವರೇ ಹೋದ ದಲಿತರ ಮನೆಗಳಲ್ಲಿ ಏನೂ ತಿನ್ನುತ್ತಿರಲಿಲ್ಲ ಸಹ. ಇಲ್ಲಿಯೇ ಪೇಜಾವರ ಶ್ರೀಗಳ ದ್ವಂದ್ವವೂ ಶುರುವಾಗುತ್ತದೆ. ಅದೇ ಅವರ ಮಿತಿಯೂ ಆಗುತ್ತದೆ. ಆದರೆ ಇದಕ್ಕೆ ಅವರನ್ನು ಮಾತ್ರ ದೂಷಿಸುವುದು ತಪ್ಪು. ಇದು ಹಿಂದುತ್ವದ ಒಟ್ಟು ಹಿಪಾಕ್ರಸಿಯೇ ಹೌದು.

ಅತ್ತ ಹಿಂದುತ್ವಕ್ಕಾಗಿ ದಲಿತರೆಡೆಗೆ ಕೈಚಾಚಿದರೂ ಅದೊಂದು ರಾಜಕೀಯ ಕ್ರಿಯೆಯಷ್ಟೇ ಆಗಿತ್ತು. ಅವರಿಗೆ ಅವರ ಬ್ರಾಹ್ಮಣ್ಯವನ್ನು ಮೀರಲಾಗಲೇ ಇಲ್ಲ. ಒಬ್ಬ ಬ್ರಾಹ್ಮಣ ಯತಿಯಾಗಿ ತಾನು ದಲಿತರ ಕೇರಿಗೆ ಹೋಗುವುದೇ ಅವರ ಪುಣ್ಯವೆಂಬಂತೆ ಪಾದಯಾತ್ರೆ ಮಾಡಿದರೇ ಹೊರತು, ಅವರನ್ನು ಮಠದೊಳಗೇನೂ ಬಿಟ್ಟುಕೊಳ್ಳಲಿಲ್ಲ. ಮಡೆಸ್ನಾನವನ್ನು ಸಮರ್ಥಿಸಿಕೊಂಡರು, ಸುಪ್ರೀಂಕೋರ್ಟ್ ತೀರ್ಪಿನ ನಂತರ ಅದನ್ನು ಎಡೆಸ್ನಾನವಾಗಿಸಿದರು, ಅದನ್ನು ಮೊದಲೆ ಮಾಡಲಿಲ್ಲ. ಅವರೇ ಕಟ್ಟಿದ ಪೂರ್ಣಪ್ರಜ್ಞ ವಿದ್ಯಾಪೀಠ ಗುರುಕುಲದಲ್ಲಿ ಮಾಧ್ವರಲ್ಲದ ಬ್ರಾಹ್ಮಣರೂ ಇಲ್ಲ.

ಹಿಂದುತ್ವವೂ ಅಷ್ಟೆ, ಬ್ರಾಹ್ಮಣೇತರರನ್ನು ಹವಿಸ್ಸಾಗಿಯಷ್ಟೇ ಬಳಸುತ್ತದೆ. ಫುಲೆ-ಶಾಹು-ಅಂಬೇಡ್ಕರರ ನಾಡು ಮಹಾರಾಷ್ಟ್ರದಲ್ಲಿ ಈ ಕುರಿತು ಕೊಂಚ ಸ್ಪಷ್ಟತೆಯಿದೆ. ಅಲ್ಲಿ ಸಂಘಪರಿವಾರವು ಜಾತಿ ಸಮರಸತಾ ಮಂಚ್ ಅನ್ನು ಸ್ಥಾಪಿಸಿ ಇದೇ ಕೆಲಸ ಮಾಡುತ್ತಿದೆ. ಅಲ್ಲಿ ಅವರಿಗೆ ಎದುರಾಗಿರುವ ಪ್ರಶ್ನೆ ನೀವೇಕೆ ಜಾತಿ ಸಮಾನತಾ ಹೋರಾಟ ಮಾಡುವುದಿಲ್ಲ ಎಂದು. ಹಿಂದೂ ಸಮಾಜ ಜಾತಿಸಾಮರಸ್ಯದಿಂದ ಒಂದು ರಾಜಕೀಯ ಗುಂಪಾಗಿ ರೂಪು ತಳೆಯಬೇಕು, ಆದರೆ ಅದರೊಳಗೆ ಬ್ರಾಹ್ಮಣರು ಅವರ ಸವಲತ್ತು ಶ್ರೇಷ್ಠತೆಯ ಭ್ರಮೆಗಳನ್ನು ಬಿಟ್ಟುಕೊಡುವುದಿಲ್ಲ. ಈ ಸಮಾಜದಲ್ಲಿ ಎಲ್ಲ ಜಾತಿಗಳೂ ಅವರವರ ಸ್ಥಾನ ಅರಿತು ಸಾಮರಸ್ಯದಿಂದ ಬಾಳಬೇಕು.

1990ರ ದಶಕದಲ್ಲಿ ರಾಮಜನ್ಮಭೂಮಿ ಹೋರಾಟದ ಮುಂಚೂಣಿಗೆ ಪೇಜಾವರರು ಬಂದು ನಿಲ್ಲುವುದರೊಂದಿಗೆ ಅವರ ಸುಧಾರಣಾವಾದಿ ಮುಖವಾಡವು ಕೊಂಚ ಸರಿಯಿತು. ಅವತ್ತು ಡಿಸೆಂಬರ್ 6, 1992ರಂದು ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಕರಸೇವಕರು ಹೊಡೆದುರುಳಿಸಿದಾಗ ಅವರು ಅಲ್ಲೇ ಇದ್ದರು. ಈ ದೃಶ್ಯವನ್ನು ನೋಡಿ ಸಂಭ್ರಮಿಸಿದವನೊಬ್ಬನಿಗೆ ಅವರು ಕಪಾಳಕ್ಕೆ ಹೊಡೆದರು ಎಂಬ ಉಪಕಥೆಯ ಹೊರತಾಗಿಯೂ, ಅಂದಿನ ಬಹುತೇಕ ನಾಯಕರಿಗೆ ಅವರು ಆಧ್ಯಾತ್ಮ ಗುರುವಾದರು, ಉಮಾಭಾರತಿಗೆ ದೀಕ್ಷೆ ಕೊಟ್ಟರು. ಮಸೀದಿ ಕೆಡವಿದ್ದು ತಪ್ಪು ಎನ್ನುತ್ತಲೇ “ಮಂದಿರ ವಹೀಂ ಬನಾಯೇಂಗೆ” ಎಂದರು. ಬಿಡಿ ಇವತ್ತು ಸುಪ್ರೀಂಕೋರ್ಟ್ ಸಹ ಇದೇ ವಾದವನ್ನು ಒಪ್ಪಿದೆ.

ಮುಂದೆ ಹಿಂದೂ-ಮುಸ್ಲಿಂ ಧರ್ಮಗುರುಗಳ ಸಂಧಾನ ಸಭೆಯಲ್ಲಿ ’ಸ್ವಾಭಿಮಾನ ಗರ್ವ ಬಿಟ್ಟು’ ರಾಮಮಂದಿರದ ಭಿಕ್ಷೆ ಬೇಡಿದರೆಂದು ಲಕ್ಷ್ಮೀಶ ತೋಳ್ಪಾಡಿಯವರು ಬರೆಯುತ್ತಾರೆ. ಇದರ ತರುವಾಯ ದೇಶಾದ್ಯಂತ ನಡೆದ ಕೋಮುಗಲಭೆಗಳಲ್ಲಿ ಸಾವಿರಾರು ಜನ ಸತ್ತರು, ಮುಸ್ಲಿಮರು ತುಳಿತಕ್ಕೊಳಗಾದರು, ಅಲ್ಲಿನ ಕೆಲ ಹುಡುಗರು ಜಿಹಾದಿ ಮಾರ್ಗ ಹಿಡಿದರು ಬಾಂಬು ಸ್ಫೋಟಿಸಿದರು, ಗೋಧ್ರಾ ಹತ್ಯಾಕಾಂಡದಲ್ಲಿ ಸಾವಿರಾರು ಜನ ಹಿಂದೂಗಳು-ಮುಸ್ಲಿಮರು ಸತ್ತರು, ಮುಸ್ಲಿಮರ ಭಯೋತ್ಪಾದನೆಗೆ ಹಿಂದೂಗಳು ಉತ್ತರ ಕೊಡುತ್ತೇವೆಂದು ಅವರೂ ಬಾಂಬು ಸ್ಫೋಟಿಸಿದರು, ದೇಶದಲ್ಲಿ ಅಶಾಂತಿ ನೆಲೆಸಿತು. ಈ ಎಲ್ಲದರ ಬಗ್ಗೆ ಪೇಜಾವರ ಶ್ರೀ ವಿಶ್ವೇಶತೀರ್ಥರದು ಕಾಷ್ಠಮೌನ. ಅವರೂ ಬಿತ್ತಿದ ಬೆಳೆ. ಅವರ ಎಲ್ಲ ಹಿಂದೂ ಸಮಾಜದ ಸುಧಾರಣೆಯ ಹೆಜ್ಜೆಗಳ ಗುರಿ ಇದೇ ರಾಕ್ಷಸ ರಾಜಕಾರಣ, ಭಾರತದ ಆತ್ಮವನ್ನೇ ಕಲುಷಿತಗೊಳಿಸಿರುವ ಈ ರಾಜಕಾರಣವೇ ಪೇಜಾವರರ ರಾಜಕಾರಣ. ಮುಸ್ಲಿಂ-ಕ್ರೈಸ್ತ ಧರ್ಮಗಳನ್ನು ಹುಲಿಯನ್ನಾಗಿ ಚಿತ್ರಿಸುವ ರಾಜಕಾರಣ. ಇದನ್ನವರು ರಾಮಜನ್ಮಭೂಮಿಯ ಕುರಿತಾಗಿ ಇನ್ನೇನು ತೀರ್ಪು ಬರಲಿದೆ ಎಂದಾಗ ಮುಸ್ಲಿಮರಿಗೆ ಇಫ್ತಾರ್ ಕೂಟ ಆಯೋಜಿಸುತ್ತಲೇ ಸೂಕ್ಷ್ಮವಾಗಿ ಮಾಡಬಲ್ಲರು. ಪರಧರ್ಮದ ಅಸಹಿಷ್ಣುತೆ ಆಧ್ಯಾತ್ಮವೇ?

ಕಡೆಗೆ ಇದು ಎಲ್ಲಿ ಪರ್ಯಾವಸಾನವಾಗುತ್ತೆ ಎಂಬುದಕ್ಕೆ ಗೌರಿ ಲಂಕೇಶರೇ ಉದಾಹರಣೆ. ಆಕೆಯ ಮೇಲೆ ಗುಂಡು ಹಾರಿಸಿ ಕೊಂದವ ಸಿಂಧಗಿಯ 26 ವರ್ಷದ ಯುವಕ ಪರಶುರಾಮ ವಾಘ್ಮೋರೆ. ಜಾತಿಯಿಂದ ಪಾತ್ರೆಗೆ ಕಳಾಯಿ ಹಾಕುವ ಗೊಂದಲಿಗರೆಂಬ ಅಲೆಮಾರಿ ಸಮುದಾಯಕ್ಕೆ ಸೇರಿದವನು. ಅವನ ಬಂಧನದ ತರುವಾಯ ಪೊಲೀಸರು ಕೇಳಿದರು ಆತನೇಕೆ ಗೌರಿಯನ್ನು ಕೊಲ್ಲಲೊಪ್ಪಿದನೆಂದು. ಅವನು ಹೇಳಿದ್ದು ಕೇಳಿ ಪೊಲೀಸರೇ ದಂಗುಬಡಿದು ಕೂತರು. ಅವನು ಬೊಟ್ಟು ಮಾಡಿದ್ದು 2012ರಲ್ಲಿ ಮಂಗಳೂರಿನ ಸಭೆಯೊಂದರಲ್ಲಿ ಗೌರಿ ಲಂಕೇಶ್ ಮಾಡಿದ್ದ ಭಾಷಣದ ವೀಡಿಯೋ ಒಂದಕ್ಕೆ. ಹಿಂದೂ ಜಾಗರಣ ವೇದಿಕೆಯು ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ಯುವಕರ ಮೇಲೆ ದಾಳಿ ಮಾಡಿದ್ದನ್ನು ಪ್ರತಿಭಟಿಸಿ ನಡೆದ ಸಭೆಯದು. ಅದರಲ್ಲಿ ಗೌರಿ ‘ಹಿಂದೂ ಧರ್ಮದ ಹುಟ್ಟಿಗೂ ಇತರ ಧರ್ಮಗಳ ಹುಟ್ಟಿಗೂ ಇರುವ ವ್ಯತ್ಯಾಸ ಮತ್ತು ಒಂದೇ ಧರ್ಮದಲ್ಲಿರುವ ತಾರತಮ್ಯದ ಕುರಿತು’ ಮಾತಾಡುತ್ತಾರೆ:

“ಈ ವಿಡಿಯೋ ನೋಡಿ ನನಗೆ ಕೆಟ್ಟ ಕೋಪ ಬಂತು ಸರ್. ನಮ್ಮನ್ನೆಲ್ಲ ಒಟ್ಟು ಸೇರಿಸಿ ಜಾತಿ ಅನ್ನೋದೇ ಇಲ್ಲ, ನಾವೆಲ್ಲರೂ ಹಿಂದೂಗಳು ಅಂತ ಹೇಳಿದ್ದು ಸಂಘಪರಿವಾರ ಸರ್. ಅಂಥ ಶ್ರೇಷ್ಠ ಹಿಂದೂ ಧರ್ಮವೇ ಇಲ್ಲ ಅಂತ ಆಯಮ್ಮ ಮಾತಾಡಿದ್ದು ಕೋಪ ತರಿಸಿತು ಸರ್. ಧರ್ಮಕ್ಕಾಗಿ ಈ ಒಂದು ಕೆಲಸ ಮಾಡಬೇಕಿದೆ ಅಂದರು ಸರ್, ಕೊಂದೆ”, ಅಂದ ವಾಘ್ಮೋರೆ. ಈ ಹುಡುಗನಲ್ಲಿ ಯಾರು ತನ್ನ ಪರ, ಯಾರು ತನ್ನ ಹಿತಾಸಕ್ತಿಗಳ ವಿರುದ್ಧ ಮಾತಾಡುತ್ತಿದ್ದಾರೆ ಅನ್ನುವುದನ್ನು ಅರಿಯಲಾರದ ಗೊಂದಲ ಮೂಡಿಸಿದವರಾರು?

ಇನ್ನು ಪೇಜಾವರ ಶ್ರೀಗಳು ತಮ್ಮ ಜೀವಿತದುದ್ದಕ್ಕೂ ನಾಡಿನ ಎಲ್ಲ ಚಿಂತಕರ ಜೊತೆ ಸಂವಾದ ನಡೆಸುತ್ತಲೇ ಬಂದಿದ್ದಾರೆ, ಅವರ ವಿರುದ್ಧ ಮಾತಾಡಿದವರೊಂದಿಗೂ ಕೂಡಾ ಅದನ್ನು ಸಾತ್ವಿಕವಾಗಿ ಪ್ರಜಾಸತ್ತಾತ್ಮಕವಾಗಿಯೂ ನಡೆಸಿಕೊಂಡು ಬಂದಿದ್ದಾರೆ. ಮೊದಮೊದಲು ಪೇಜಾವರರ `ಸುಧಾರಣಾವಾದಿ’ ಹೆಜ್ಜೆಗಳನ್ನು ಸ್ವಾಗತಿಸಿದವರು ಅನೇಕರು. ಹೀಗೆ ಸ್ವಾಗತಿಸಿದ ಅದೇ ಅನಂತಮೂರ್ತಿಯವರು ಬಾಬ್ರಿ ಮಸೀದಿ ಧ್ವಂಸದ ನಂತರ ಪೇಜಾವರ ಶ್ರೀಗಳನ್ನು ವಿರೋಧಿಸಿದರು. “ಪೇಜಾವರರು ರಾಜಕೀಯಕ್ಕೆ ಹೋಗಿ ತನ್ನ ಧರ್ಮದ ನೆಲೆಗಳ ವಿರುದ್ಧವೇ ನಡೆದರು. ಈಗ ನಾನು ಅವರನ್ನು ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಎರಡೂ ನೆಲೆಯಲ್ಲಿ ವಿರೋಧಿಸುತ್ತೇನೆ” ಎಂದರು. ಇದರಲ್ಲಿ ಅವರು ಮೊದಲು ಸುಧಾರಣಾವಾದಿಯಾಗಿದ್ದು, ನಂತರ ಹಾದಿ ತಪ್ಪಿದರೆನ್ನುವಂತಿದೆ. ಆದರೆ ಅವರೊಂದಿಗೆ ಪತ್ರ ವ್ಯವಹಾರ ಹೊಂದಿದ್ದ ಚಂಪಾ ಅವರು, ತನಗೆ ಮೊದಲಿಂದಲೂ ಅವರ `ಸುಧಾರಣಾವಾದ’ ಅವರ ಹಿಂದುತ್ವದ ಅಜೆಂಡಾದ ಭಾಗವಾಗಿರುವುದು ತಿಳಿದಿದ್ದರೂ, ಅವರೊಂದಿಗೆ ಒಂದು ಸಂವಾದ ಸಾಧ್ಯವಿತ್ತು ಮತ್ತು ಅವರಲ್ಲಿ ಒಂದು ಸಣ್ಣ ಬದಲಾವಣೆ ಬರಬಹುದೆಂಬ ಆಸೆಯೊಂದಿಗೆ ಸಂವಾದಿಸುತ್ತಿದ್ದೆವೆಂದು ಹೇಳಿದರು. ಅದು ನಿಜ. ವೈಚಾರಿಕ ವಿರೋಧಿಗಳೊಂದಿಗೂ ನಾವು ಸಂವಾದಿಸಲೇಬೇಕು.

ಪೇಜಾವರರಿಗೆ ಕೆಲವು ಸಂಘ ಪರಿವಾರದ ಮಂದಿ ಹೇಳುತ್ತಿದ್ದರಂತೆ, ಅವರು ಮಠ ಬಿಟ್ಟು ಹೊರಬಂದು ಹಿಂದೂ ಸನ್ಯಾಸಿಯಾಗಿ ದೇಶಸಂಚಾರ ಮಾಡಿದರೆ ವಿವೇಕಾನಂದರಂತೆ ರಾಷ್ಟ್ರಸನ್ಯಾಸಿಯಾಗಬಹುದು, ಧರ್ಮಸ್ಥಾಪನೆ ಮಾಡಬಹುದು ಎಂದು. ಆದರೆ ಪೇಜಾವರ ಶ್ರೀ ವಿಶ್ವೇಶತೀರ್ಥರಿಗೆ ಅವರ ಬ್ರಾಹ್ಮಣ್ಯ, ಮಾಧ್ವ ಸಂಪ್ರದಾಯಗಳ ಬಿಟ್ಟು ಹೊರಬರಲಾಗಲಿಲ್ಲ. ಬದಲಿಗೆ ಭಾರತವೆಂಬ ದೇಶದ ಪರಿಕಲ್ಪನೆಗೇ ಧಕ್ಕೆ ತಂದಿರುವ ಅಪಾಯಕಾರಿ ಧಾರ್ಮಿಕ ರಾಜಕಾರಣಕ್ಕೆ ಪೂರಕವಾಗಿ ಕೆಲಸ ಮಾಡಿದರು. ಅದು ಅವರ ಮಿತಿಯಲ್ಲ, ಅಧಾರ್ಮಿಕವಾದ ಹಿಂದುತ್ವದ ಅಜೆಂಡಾ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...