ಕವಿತೆ ಓದಿದ್ದಕ್ಕಾಗಿ ಸಿರಾಜ್ ಬಿಸರಳ್ಳಿ, ರಾಜಭಕ್ಷಿಯವರ ಬಂಧನ ಭವಿಷ್ಯದ ಕರಾಳ ದಿನಗಳ ಸೂಚನೆ- ಸಿದ್ದು

ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರ್ಕಾರ ರೂಪಿಸಿ ಜಾರಿಗೊಳಿಸುವ ಯಾವುದೇ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅಧಿವೇಶನದಲ್ಲಿ ಮಾತನಾಡಿದ ಅವರು, ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ ಸ್ಥಳೀಯರು ಡಿ.18ರ ಬೆಳಿಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದರು. ಆದರೆ ಇದೇ ದಿನ ಸಂಜೆ ಪೊಲೀಸ್ ಇಲಾಖೆ 144 ಸೆಕ್ಷನ್ ಜಾರಿ ಮಾಡಿತು. ಈ ವಿಚಾರ ಹೆಚ್ಚು ಪ್ರಚಾರವಾಗದ ಕಾರಣ, ಡಿ.19 ರಂದು 100 ರಿಂದ 150 ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡರ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಮಂಗಳೂರಿಗೆ ತೆರಳಿ ಪರಿಸ್ಥಿತಿಯ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ, ಆ ದಿನ 144 ಸೆಕ್ಷನ್ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದೆ ಅಂದರೆ ಇಲ್ಲಿ ಪಿತೂರಿಯಿಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳೂರಿನ ಸ್ಟೇಟ್ ಬ್ಯಾಂಕ್ ಎಂಬ ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, 144 ಸೆಕ್ಷನ್ ಬಗ್ಗೆ ಮಾಹಿತಿಯಿಲ್ಲದೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರರ ಮನವೊಲಿಸಿ ಮನೆಗೆ ಕಳುಹಿಸುವ ಬದಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಬಲಿ ಪಡೆದಿರುವುದು ದುರಂತ ಎಂದು ಹೇಳಿದ್ದಾರೆ.

ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಿಸಿಟಿವಿ ವೀಡಿಯೊ ಹಾಗೂ ಫೋಟೋಗಳಲ್ಲಿ ತೋರಿಸಿರುವಂತೆ ಪ್ರತಿಭಟನಾಕಾರರು ಮಾರಕಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಆಧಾರಗಳನ್ನು ಹಾಜರುಪಡಿಸಿಲ್ಲ ಹಾಗೂ ಈ ವೇಳೆ ಏನು 21 ಜನರನ್ನು ಬಂಧಿಸಲಾಗಿತ್ತು, ಅವರಲ್ಲಿ ಯಾರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಬಂಧನಕ್ಕೊಳಗಾಗಿದ್ದ 21 ಜನರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಆದರೆ ಅವರ ಜೊತೆಯಲ್ಲಿದ್ದ ಇಬ್ಬರು ಗೋಲಿಬಾರ್‌ಗೆ ಬಲಿಯಾಗಿದ್ದಾರೆ. ಬಂಧನಕ್ಕೊಳಗಾದವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದಾದರೆ ಗೋಲಿಬಾರ್‌ನಲ್ಲಿ ಮೃತಪಟ್ಟವರು ಕೂಡ ಅಮಾಯಕರಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರು ಗೋಲಿಬಾರ್ ಗೆ ಮುನ್ನದಿನ ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಲಾಠಿಚಾರ್ಜ್ ಮಾಡದಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದರು, ಮರುದಿನವೇ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಮೃತರಾದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಮೀರಿ ಆದೇಶ ನೀಡುವ ಕಾಣದ ಕೈಗಳಿವೆ. ಇಲ್ಲದಿದ್ದರೆ ಆದೇಶವಿಲ್ಲದೆ ಪೊಲೀಸರು ಲಾಠಿಚಾರ್ಜ್, ಗೋಲಿಬಾರ್ ಮಾಡಲು ಹೇಗೆ ಸಾಧ್ಯ ಎಂದಿದ್ದಾರೆ.

ಸಿಎಎ-ಎನ್ ಆರ್‌ಸಿ ವಿರೋಧಿಸಿ ಕವಿತೆ ಓದಿದ್ದ ಸಿರಾಜ್ ಬಿಸರಳ್ಳಿ‌‌ ಮತ್ತು ಪತ್ರಕರ್ತ ರಾಜಭಕ್ಷಿ ಅವರ‌ ಬಂಧನ ಭವಿಷ್ಯದ ಕರಾಳ ದಿನಗಳ ಸೂಚನೆ.‌ ಪ್ರತಿರೋಧವನ್ನು ಸೈದ್ಧಾಂತಿಕವಾಗಿ ಎದುರಿಸಲಾಗದ ಬಿಜೆಪಿ ಪಕ್ಷ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊರಳು ಹಿಚುಕುತ್ತಿರುವುದು ಅದರ ಬೌದ್ಧಿಕ‌ ದಿವಾಳಿತನಕ್ಕೆ‌‌ ಸಾಕ್ಷಿ. ಸೋಮಶೇಖರ್ ರೆಡ್ಡಿ, ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ದಾಖಲಾಗದ ದೇಶದ್ರೋಹದ ಪ್ರಕರಣಗಳು ನಮ್ಮ ಪಕ್ಷದ ನಾಯಕರ ವಿರುದ್ಧ ಮಾತ್ರ ಏಕೆ ದಾಖಲಾಗಿವೆ? ಇದಕ್ಕೆ ಪೊಲೀಸ್ ರಾಜ್ಯವೆನ್ನದೆ ಬೇರೇನು ಕರೆಯಲು ಸಾಧ್ಯ ಎಂದಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಪೊಲೀಸ್ ದೌರ್ಜನ್ಯಗಳ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here