ಸಾಲದ ವಿಚಾರದಲ್ಲಿ ಸುಳ್ಳು ಹೇಳುವುದು ಬಿಟ್ಟು, ಬಡವರಿಗೆ ಆಹಾರ, ಪ್ಯಾಕೇಜ್ ಘೋಷಿಸಿ- ಸಿದ್ದರಾಮಯ್ಯ

ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ರಾಜ್ಯದ ಬಹುಪಾಲು ಜನ ದುಡಿಮೆಯಿಲ್ಲದೆ ಅಗತ್ಯ ವಸ್ತುಗಳ ಖರೀದಿಗೂ ಪರದಾಡುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಹಿಂದಿನ ಸರ್ಕಾರ ಸಾಲ ಮಾಡಿಟ್ಟು ಹೋಗಿದೆ ಎಂಬ ಹುಸಿ ಸಬೂಬು ನೀಡದೆ ರಾಜ್ಯ ಸರ್ಕಾರ ಕೂಡಲೇ ಆಹಾರ ಮತ್ತು ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರಾಜ್ಯ ಮಾಡಿರುವ ಸಾಲದ ವಿಚಾರದಲ್ಲಿ ಬಿಜೆಪಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ. ರಾಜ್ಯ ಬಿಜೆಪಿಯ ಟ್ವಿಟರ್‌ ಖಾತೆಯಲ್ಲಿ ಸಾಲದ ವಿಚಾರವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಹಲವು ಟ್ವಿಟ್‌ಗಳನ್ನು ಮಾಡಲಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ತಾವು ಮುಖ್ಯಮಂತ್ರಿಯಾಗಿದ್ದಾಗ ಮಾಡಿರುವ ಸಾಲದ ಬಗ್ಗೆ ಅಂಕಿ-ಅಂಶ ಸಮೇತ ವಿವರ ನೀಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳು ಹೆಚ್ಚು ಸಾಲ ಮಾಡಿಬಿಟ್ಟಿದ್ದರು ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ, ಬಡವರಿಗೆ ಕೂಡಲೇ ಆಹಾರ ಮತ್ತು ಆರ್ಥಿಕ ಪ್ಯಾಕೇಜು ಘೋಷಿಸಬೇಕೆಂದು ಮತ್ತು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ’ಅನ್ನಭಾಗ್ಯ ಕೊಟ್ಟವರು ನಾವು, ಸಾವಿನ ಭಾಗ್ಯ ಕೊಟ್ಟವರು ನೀವು’-ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ

ಕೊರೊನಾ ಹಿನ್ನೆಲೆ ಲಾಕ್‌ಡೌನ್ ವಿಧಿಸಲಾಗಿದ್ದು, ಈ ಸಮಯದಲ್ಲಿ ರಾಜ್ಯದ ಜನರಿಗೆ ಸೂಕ್ತ ಪ್ಯಾಕೇಜು ನೀಡಿ ಎಂದರೆ, ಬಿಜೆಪಿಯಲ್ಲಿ ಕೆಲವರು ಸಿದ್ದರಾಮಯ್ಯನವರು ಸಾಲ ಮಾಡಿದ್ದರು. ಅದರಿಂದಾಗಿ ರಾಜ್ಯದಲ್ಲಿ ಹಣಕಾಸಿನ ಸಮಸ್ಯೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಅಭಿಪ್ರಾಯಗಳನ್ನು ರೂಪಿಸುತ್ತಿದ್ದಾರೆ. ಬಿಜೆಪಿ ಎಂದರೆ ಸುಳ್ಳಿನ ಕಾರ್ಖಾನೆ ಎಂಬುದರ ಕುರಿತು ನಾಡಿನ ಜನರಿಗೆ ಈಗ ಯಾವ ಸಂಶಯವೂ ಉಳಿದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

2008-2013 ರ ವರೆಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ  ಶೇ. 94.18 ರಷ್ಟು ಏರಿಕೆಯಾಗಿತ್ತು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಶೇ.78 ರಷ್ಟು ಮಾತ್ರ ಏರಿಕೆಯಾಗಿತ್ತು.  ಹಿಂದಿನಿಂದಲೂ ಪ್ರತಿ ವರ್ಷ 20 ರಿಂದ 30 ಸಾವಿರ ಕೋಟಿ ರೂ ಗಳಷ್ಟು ಸಾಲ ಮಾಡುವುದು  ಮತ್ತು ತೀರಿಸುವುದು ವಾಡಿಕೆ. 2012-13 ರಲ್ಲೂ 21609 ಕೋಟಿ ಸಾಲ ಮಾಡಲಾಗಿತ್ತು. 2017-18 ರವರೆಗೆ ರಾಜ್ಯದ ಒಟ್ಟಾರೆ ಸಾಲ 242420 ಕೋಟಿ ಮಾತ್ರ ಇತ್ತು. ಈಗ ರಾಜ್ಯ ಸರ್ಕಾರವೇ ಅಧಿಕೃತವಾಗಿ ಹೇಳುವ ಮಾಹಿತಿಯಂತೆ ಈ ವರ್ಷದ ಕಡೆಗೆ 457899 ಕೋಟಿ ಗಳಷ್ಟು ಸಾಲವಾಗುತ್ತಿದೆ. ಬಹುಶಃ ಅದು ಇನ್ನಷ್ಟು ಹೆಚ್ಚುವ ಸಾಧ್ಯತೆಯೂ ಇದೆ. 2020-21 ರಲ್ಲಿ  69000 ಕೋಟಿ ಸಾಲ ಮಾಡಲಾಗಿದೆ. ಅಂದರೆ ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರ 214479 ಕೋಟಿಗಳಷ್ಟು ಹೆಚ್ಚು ಸಾಲವನ್ನು ಮಾಡಲಾಗುತ್ತಿದೆ. ಯಡಿಯೂರಪ್ಪನವರು ಎರಡನೇ ಬಾರಿಗೆ ಮುಖ್ಯ ಮಂತ್ರಿಯಾದ ಮೇಲೆ  ಕೇವಲ ಮೂರು ವರ್ಷಗಳಲ್ಲಿ ಸುಮಾರು 190000 ಕೋಟಿ ರೂಗಳಷ್ಟು ಸಾಲ ಮಾಡಿದ್ದಾರೆ. ಈಗ ಪ್ರತಿ ವರ್ಷ ಸಾಲ ಮಾಡುವ ಪ್ರಮಾಣ 72000 ಕೋಟಿಗೆ ತಲುಪಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

“ಕಳೆದ ವರ್ಷ 69 ಸಾವಿರ ಕೋಟಿ ಸಾಲ ಮಾಡಿದರೂ ಕೊರೋನ ನಿರ್ವಹಣೆಗೆ ಖರ್ಚು ಮಾಡಿದ್ದು 5400 ಕೋಟಿ ರೂಗಳು ಮಾತ್ರ ಎಂದು ಹೇಳಿದ್ದೀರಿ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು..?” ಎಂದು ಸುದೀರ್ಘ ಪತ್ರದಲ್ಲಿ ವಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‌ನಲ್ಲಿ 14 ದಿನ ಉಚಿತ ಆಹಾರ ನೀಡಲು ಪೌರಾಡಳಿತ ಇಲಾಖೆ ನಿರ್ಧಾರ

2018-19 ರಿಂದ 2021-22 ರವರೆಗೆ ಕಳೆದ 4 ವರ್ಷಗಳಲ್ಲಿ  ಹೆಚ್ಚಾದ ಜಿಎಸ್‍ಡಿಪಿಯ ಪ್ರಮಾಣ ಕೇವಲ 2,93,642 ಕೋಟಿ ರೂ ಮೌಲ್ಯ ಮಾತ್ರ ಹೆಚ್ಚಾಗಿದೆ. ಒಂದು ಕಡೆ ವೇಗವಾಗಿ ರಾಜ್ಯದ ಆರ್ಥಿಕತೆ ಕುಸಿದು ಹೋಗುತ್ತಿದೆ. ಆದರೆ ಸಾಲದ ಪ್ರಮಾಣ ರಾಕೆಟ್ಟಿನ ವೇಗದಲ್ಲಿ ಬೆಳೆಯುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳಿದ್ದ ಮುಖ್ಯಮಂತ್ರಿಗಳು ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಯಾವುದೇ ಆರ್ಥಿಕ ಪ್ಯಾಕೇಜು ನೀಡಲಾಗುವುದಿಲ್ಲ ಎನ್ನುತ್ತಿದ್ದಾರೆ. ಹಾಗಿದ್ದರೆ ರಾಜ್ಯದ ಜನ ಏನು ಮಾಡಬೇಕು…? ಏನು ತಿನ್ನಬೇಕು..? ಎಂದು ಪ್ರಶ್ನಿಸಿದ್ದಾರೆ.

“ನಾವು ಪದೇ ಪದೇ ಹೇಳುತ್ತಿದ್ದೇವೆ. ದುಡಿಯುವ ಜನರ ಕೈಯಲ್ಲಿ ಹಣ ಇದ್ದರೆ ಜನರೂ ನೆಮ್ಮದಿಯಾಗಿರುತ್ತಾರೆ. ಆರ್ಥಿಕತೆಯೂ ಉತ್ತಮ ಸ್ಥಿತಿಗೆ ಬರುತ್ತದೆ ಎಂದು.  ಜಗತ್ತಿನ ಅನೇಕ ದೇಶಗಳು ತಮ್ಮ ಆರ್ಥಿಕತೆಯನ್ನು ಕಾಪಾಡಿಕೊಂಡಿರುವುದೇ ಹೀಗೆ. ಆದರಿಂದ ಹಿಂದಿನ ಮುಖ್ಯಮಂತ್ರಿಗಳು ಹೆಚ್ಚು ಸಾಲ ಮಾಡಿಬಿಟ್ಟಿದ್ದರು ಎಂದು ಅಪಪ್ರಚಾರ ಮಾಡುವುದನ್ನು ನಿಲ್ಲಿಸಿ, ಬಡವರಿಗೆ ಕೂಡಲೇ ಆಹಾರ ಮತ್ತು ಆರ್ಥಿಕ ಪ್ಯಾಕೇಜು ಘೋಷಿಸಬೇಕೆಂದು ಮತ್ತು ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಸಿದ್ದರಾಮಯ್ಯ  ಪತ್ರದಲ್ಲಿ ಆಗ್ರಹಿಸಿದ್ದಾರೆ.


ಇದನ್ನೂ ಓದಿ: ಸರ್ಕಾರ ಜನರ ಮೇಲೆ ದರ್ಪ ಪ್ರದರ್ಶಿಸುವುದು ಬಿಟ್ಟು ಪರಿಹಾರ ನೀಡಲಿ- ಎಚ್.ಡಿ.ಕುಮಾರಸ್ವಾಮಿ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here