Homeಕರ್ನಾಟಕವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

ವೈರಲ್ ವೀಡಿಯೋದ ಒಳಸುಳಿಗಳೇನು? ಸಿದ್ದು-ಡೀಕೆ ನಡುವೆ ಗೌಡರ ದಾಳ!

- Advertisement -
- Advertisement -

| ಗಿರೀಶ್ ತಾಳಿಕಟ್ಟೆ |

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ, ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ.

ಇದು ದೇವೇಗೌಡರ ಪಾಲಿಗೆ ಬಯಸದೇ ಬಂದ ಭಾಗ್ಯ. ಹಾಗಂತ ಇದರಲ್ಲಿ ಅವರ ಶ್ರಮ ಏನೇನೂ ಇಲ್ಲ ಅಂತಲ್ಲ. ಆದರೆ ಅವರು ಒಂದು ಹಣ್ಣಿಗೆ ಗುರಿಯಿಟ್ಟು ಎಸೆದ ಕಲ್ಲು, ಎರಡು ಹಣ್ಣುಗಳನ್ನು ತಂದು ಬುಟ್ಟಿಗೆ ಬೀಳಿಸಿದಂತಾಗಿದೆ ಈಗಿನ ರಾಜಕೀಯ ಸನ್ನಿವೇಶ. ಗೌಡರ ನಸೀಬು ಅದೆಷ್ಟು ಹದವಾಗಿದೆಯೆಂದರೆ, ಒಕ್ಕಲಿಗರ ಮೇಲಿನ ಅವರ ಕುಟುಂಬದ ಅಧಿಪತ್ಯವನ್ನು ಕೊನೆಗಾಣಿಸಬೇಕೆಂದು ಟೊಂಕಕಟ್ಟಿದ್ದ ಬಿಜೆಪಿ ಮತ್ತು ಹೆಜ್ಜೆಹೆಜ್ಜೆಗೂ `ಗೌಡರ ಗೌರ್ಮೆಂಟಿ’ಗೆ ಕಾಟ ಕೊಡುತ್ತಲೇ ಬಂದ ಕನ್ನಡ ನ್ಯೂಸ್ ಚಾನೆಲ್‍ಗಳೂ ಅವರಿಗೆ ಅನುಕೂಲವಾಗುವಂತೆ ವರ್ತಿಸಲು ಶುರು ಮಾಡಿವೆ.

ಹೌದು, ಇದು ಡೀಕೆಶಿ ಸುತ್ತ ಹೆಣೆದುಕೊಂಡ ರಾಜಕೀಯ ಕಥನದ ಪೀಠಿಕೆ. ನೋ ಡೌಟ್, ಡೀಕೆ ಈಗ ಕಾಂಗ್ರೆಸ್ ಪಾಲಿನ ದೊಡ್ಡ ಹೀರೊ, ಅದು ಸಹಜವೂ ಕೂಡಾ. ಬಿಜೆಪಿಯ ಸೇಡಿನ ರಾಜಕಾರಣಕ್ಕೆ ಶರಣಾಗದೆ ತಿಹಾರ್ ಜೈಲಿನಲ್ಲಿ ಅಜಮಾಸು ಐವತ್ತು ದಿನ ಕಳೆದುಬಂದ ಡೀಕೆ ಮೇಲೆ ಸಾಮಾನ್ಯ ಕಾರ್ಯಕರ್ತರಿಗಿರಲಿ, ಖುದ್ದು ಹೈಕಮಾಂಡ್‍ಗೇ ವಿಶೇಷ ಅಭಿಮಾನ ಉಕ್ಕಿದೆ. ಇಲ್ಲದೇ ಹೋಗಿದ್ದಲ್ಲಿ ಸ್ವತಃ ಸೋನಿಯಾ ತಿಹಾರ್ ಜೈಲಿಗೆ ಹೋಗಿ ಭೇಟಿ ಮಾಡುತ್ತಿರಲಿಲ್ಲ, ಬಿಡುಗಡೆಯಾದ ಕೂಡಲೇ ತಮ್ಮ ಮನೆಗೇ ಕರೆಸಿಕೊಂಡು ಧೈರ್ಯ ತುಂಬಿ ಕಳಿಸುತ್ತಿರಲಿಲ್ಲ. ಇನ್ನು ಬೆಂಗಳೂರಿಗೆ ಕಾಲಿಟ್ಟ ಡೀಕೆಗೆ ಸಿಕ್ಕ ಅದ್ಭುತ ಸ್ವಾಗತ, ಭಾರೀ ಮೆರವಣಿಗೆಗಳೇನು ನಡೆದವಲ್ಲ, ಅದಕ್ಕೆಲ್ಲ ಪರ್ಮೀಷನ್ ಕೊಟ್ಟದ್ದೇ ಹೈಕಮಾಂಡ್. ಅಷ್ಟೇ ಅಲ್ಲ ಬೆಂಗಳೂರಿಗೆ ಬಂದ ತಕ್ಷಣ ಮನೆಗೆ ಹೋಗದೆ ಸೀದಾ ಕೆಪಿಸಿಸಿ ಕಚೇರಿಗೆ ಹೋಗಿ ಸುದ್ದಿಗೋಷ್ಠಿ ನಡೆಸುವಂತೆ ಸಲಹೆ ಕೊಟ್ಟದ್ದೂ ಹೈಕಮಾಂಡ್! `ಜೈಲಿಗೆ ಹೋಗಿ ಬಂದವ’ ಎಂಬ ಸಣ್ಣ ಅಳುಕು ಹೈಕಮಾಂಡ್‍ಗೆ ಇದ್ದಿದ್ದರೂ ಕೆಪಿಸಿಸಿ ಕಚೇರಿಯ ಹೆಬ್ಬಾಗಿಲು ಅಷ್ಟು ಸಲೀಸಾಗಿ ತೆರೆದುಕೊಳ್ಳುತ್ತಿರಲಿಲ್ಲ.

ಡೀಕೆ ಪರ ನಿಲ್ಲಲು ಗೌಡರಿಗಿರುವ ಕಾರಣವೇನು?

ಕಾಂಗ್ರೆಸ್‍ಗೇನೊ ಡೀಕೆಯನ್ನು `ಹೀರೊ’ ಆಗಿಸುವುದು ಅನಿವಾರ್ಯ. ಆದರೆ ಜೆಡಿಎಸ್‍ಗೆ, ಅರ್ಥಾತ್ ಗೌಡರ ಫ್ಯಾಮಿಲಿಗೆ ಇದ್ದಕ್ಕಿದ್ದಂತೆ ಡೀಕೆ ಮೇಲೆ ಇಂಥಾ ಮಮಕಾರ ಉಕ್ಕಲು ಕಾರಣವೇನು? ಜೀವನಪರ್ಯಂತ ತಮಗೆ ನಿಷ್ಠರಿದ್ದ ನಾಯಕರನ್ನೇ ರಾಜಕೀಯ ಸಮಾಧಿ ಮಾಡಿದ ಗೌಡರಿಗೆ, ನಿನ್ನೆ-ಮೊನ್ನೆವರೆಗೂ ತಮ್ಮ ವಿರುದ್ಧವೇ ಸೆಟೆದು ನಿಂತಿದ್ದ ಡೀಕೆಯನ್ನು ಹೀರೊ ಆಗಿಸುವಂತ ದರ್ದೇನು ಬಂತು?

ದೇವೇಗೌಡರ ರಾಜಕಾರಣದ ಅಡಿಪಾಯವೇ ಜಾತಿ. ಬಾಯಲ್ಲಿ ಹೇಳದೇ ಸಮುದಾಯಕ್ಕೆ ಸಂದೇಶ ರವಾನಿಸುವ ವಿಶೇಷ ಚಾಕಚಕ್ಯತೆ ಅವರದ್ದು. ಗೌಡರ ಈ ರಾಜಕೀಯ ಸಮೀಕರಣವನ್ನು ಬುಡಮೇಲು ಮಾಡಿದ್ದು 2019ರ ಲೋಕಸಭಾ ಚುನಾವಣೆ. ಮಂಡ್ಯ ಒಕ್ಕಲಿಗರ ಸೆಂಟಿಮೆಂಟು, ಸ್ವಾಭಿಮಾನಗಳು ನುಚ್ಚು ನೂರಾಗುವಂತೆ ಅವರ ಮೇಲೆ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಹೇರಲು ಹೊರಟದ್ದು ದೇವೇಗೌಡರು ಮಾಡಿದ ಬಹುದೊಡ್ಡ ಪ್ರಮಾದ. ಅದು ಮಂಡ್ಯ ರಾಜಕಾರಣಕ್ಕಷ್ಟೇ ಸೀಮಿತವಾಗಲಿಲ್ಲ, ಇಡೀ ಒಕ್ಕಲಿಗ ಸಮುದಾಯದಲ್ಲೆ `ಗೌಡರ ಫ್ಯಾಮಿಲಿ ರಾಜಕಾರಣ’ ಅತಿಯಾಯ್ತು ಎಂಬ ಭಾವನೆಯನ್ನು ಬಿತ್ತಿತ್ತು. ದೇವೇಗೌಡರು ತಮ್ಮ ಕುಟುಂಬದ ಹಿತಾಸಕ್ತಿಗಾಗಿ ಯಾವೆಲ್ಲ ಒಕ್ಕಲಿಗ ನಾಯಕರನ್ನು ಹೇಗೆಲ್ಲ ಬಲಿಕೊಡುತ್ತಾ ಬಂದರು ಅನ್ನೋ ಚರ್ಚೆ ಒಕ್ಕಲಿಗರಲ್ಲೇ ಹರಿದಾಡಲು ಶುರುವಾಯ್ತು. ಅದರ ಪರಿಣಾಮವೇ ಮಂಡ್ಯದಲ್ಲಿ ನಿಖಿಲ್ ಸೋತದ್ದು ಮಾತ್ರವಲ್ಲ, ಒಕ್ಕಲಿಗರ ಪ್ರಾಬಲ್ಯವಿರುವ ತುಮಕೂರಿನಲ್ಲಿ ಸ್ವತಃ ದೇವೇಗೌಡರು ಸೋತುಹೋದರು!

ಹಾಗೆ ನೋಡಿದರೆ, ಗೌಡರ ಕುಟುಂಬಕ್ಕೆ ಸೋಲುಗಳೇನು ಹೊಸದಲ್ಲ. ಆದರೆ ತಮ್ಮದೇ ಕುಟುಂಬ ಮುಖ್ಯಮಂತ್ರಿ ಹುದ್ದೆಯನ್ನು ಆವರಿಸಿದ್ದರೂ, ತಮ್ಮ ಕುಟುಂಬಕ್ಕೆ ನಿಷ್ಠರಾದ ಮಂತ್ರಿವರ್ಯರು ಅನೇಕರಿದ್ದರು ಎರಗಿದ ಈ ಸೋಲು ದೇವೇಗೌಡರಂತಹ ಬಲು ನಾಜೂಕಿನ ರಾಜಕಾರಣಿಯನ್ನು ಕಂಗೆಡಿಸದೇ ಇರಲು ಸಾಧ್ಯವೇ!? ಒಕ್ಕಲಿಗರ ವಿಶ್ವಾಸ ಕಳೆದುಕೊಳ್ಳಲು ಶುರು ಮಾಡಿದ್ದೇವೆ ಎಂದು ದೇವೇಗೌಡರಿಗೆ ಅನಿಸಿದ್ದೇ ಆಗ. ಹೇಗಾದರು ಮಾಡಿ ಅದನ್ನು ಸರಿಪಡಿಸಿಕೊಳ್ಳಬೇಕೆಂದು ಅವರು ರಾಜಕೀಯ ಪಂಚಾಂಗ ಬಿಚ್ಚಿ ಕೂತಿದ್ದಾಗ ಘಟಿಸಿದ್ದೇ ಈ ಡೀಕೆ ಪ್ರಕರಣ!

ಗೌಡರ ಒಕ್ಕಲಿಗ ಸೆಂಟಿಮೆಂಟ್; ಎಚ್‍ಡಿಕೆಯ ಬಿಜೆಪಿ ಸ್ಟೇಟ್‍ಮೆಂಟ್

ಕುಮಾರಸ್ವಾಮಿಯವರು ಡೀಕೆ ಮನೆಗೆ ಹೋಗಿ ಅವರ ತಾಯಿಗೆ ಸಾಂತ್ವನ ಹೇಳಿದ್ದಾಗಲಿ, ತಿಹಾರ್ ಜೈಲಿಗೆ ಹೋಗಿ ಮುಖತಃ ಭೇಟಿ ಮಾಡಿದ್ದಾಗಲಿ ಎಲ್ಲದರ ಹಿಂದೆ ಗೌಡರ ಸ್ಪಷ್ಟ ನೀಲನಕ್ಷೆಗಳಿದ್ದವು. ಅಷ್ಟೇ ಅಲ್ಲ ಕುಮಾರಸ್ವಾಮಿ ತಿಹಾರ್ ಜೈಲಿಗೆ ಹೋಗುವುದಕ್ಕೂ ಇಪ್ಪತ್ತು ದಿನ ಮೊದಲೇ ಖುದ್ದು ದೇವೇಗೌಡರೆ ಹಿರಿಮಗ ರೇವಣ್ಣನವರ ಜೊತೆಗೆ ತಿಹಾರ್ ಜೈಲಿಗೆ ಹೋಗಿ ಡೀಕೆಯನ್ನು ಭೇಟಿ ಮಾಡಬೇಕು ಅಂದುಕೊಂಡಿದ್ದರು. ಆದರೆ ಭೇಟಿಗೆ ಎರಡು ದಿನ ಮೊದಲೇ ಪರ್ಮೀಷನ್ನಿಗೆ ಅರ್ಜಿ ಹಾಕಬೇಕಿತ್ತು. ಆದರೆ ಗೌಡರು ನೇರವಾಗಿ ಭೇಟಿಗೆ ಅನುಮತಿ ಕೇಳಿದ್ದರಿಂದ ಜೈಲಿನ ಅಧಿಕಾರಿಗಳು ತಲೆ ಅಡ್ಡಡ್ಡ ಆಡಿಸಿದ್ದರು. ಭೇಟಿ ಸಾಧ್ಯವಾಗದಿದ್ದರೂ, ದಿಲ್ಲಿಯ ತಮ್ಮ ನಿವಾಸಕ್ಕೆ ಡಿ.ಕೆ.ಸುರೇಶ್‍ರನ್ನು ಕರೆಸಿಕೊಂಡ ಗೌಡರು `ಡೀಕೆಗೆ ಒಳ್ಳೆಯದಾಗಲಿ ಅಂತ ದೇವರ ಬಳಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ’ ಅಂತ ಸಂತೈಸಿ ಕಳಿಸಿದ್ದರು. ಇನ್ನು ಡೀಕೆ ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಕುಮಾರಸ್ವಾಮಿಯವರೇ ಹೋಗಿ ಸ್ವಾಗತಿಸಿದ್ದಾಗಲಿ, `ವೆಲ್‍ಕಂ’ ಮೆರವಣಿಗೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಪಕ್ಷದ ಬಾವುಟದ ಸಮೇತ ಹಾಜರಿರುವಂತೆ ನೋಡಿಕೊಂಡಿದ್ದಾಗಲಿ ಎಲ್ಲವೂ ಗೌಡರ ಲೆಕ್ಕಾಚಾರಗಳೇ ಆಗಿವೆ. `ಪಕ್ಷ ಯಾವುದಾದರೇನು ನಮಗೆ ಒಕ್ಕಲಿಗರ ಹಿತ ಕಾಯುವುದೇ ಮುಖ್ಯ’ ಎಂಬ ಸಂದೇಶ ರವಾನೆಯಾಗಿ ಕಳೆದುಹೋಗಿರುವ ಒಕ್ಕಲಿಗರ ವಿಶ್ವಾಸವನ್ನು ಮತ್ತೆ ಗಳಿಸಿಕೊಳ್ಳುವ ಸಿಂಗಲ್ ಅಜೆಂಡಾ ಗೌಡರದ್ದು.

ಇಲ್ಲೊಂದು ಇಂಟರೆಸ್ಟಿಂಗ್ ಸಂಗತಿಯಿದೆ. ಡೀಕೆ ಪರವಾಗಿ ಹೀಗೆ ನಿಲ್ಲುತ್ತಾ ಹೋಗಿ ತಮ್ಮ ಕುಟುಂಬ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರೇನು ಗತಿ? ಸಿಬಿಐ, ಇಡಿ, ಐಟಿ ಅಸ್ತ್ರಗಳು ತಮ್ಮ ಮೇಲೂ ಮುಗಿಬಿದ್ದರೆ ಏನು ಕತೆ? ಇಲ್ಲೂ ಗೌಡರು ಬ್ಯಾಲೆನ್ಸ್ ಮಾಡುತ್ತಲೇ ಬಂದರು. ಒಂದು ಕಡೆ ಕೇಂದ್ರದ ಅಧಿಕಾರ ದುರ್ಬಳಕೆಯ ವಿರುದ್ಧ ಮಾತಾಡುತ್ತಲೆ, ಮತ್ತೊಂದು ಕಡೆ ಪ್ರಧಾನಿ ಮೋದಿಯವರ `ದುಬಾರಿ ಹೆಮ್ಮೆ’ಯಾದ ಸ್ಟ್ಯಾಚ್ಯೂ ಆಫ್ ಯೂನಿಟಿ ಮುಂದೆ ಫೋಜು ಕೊಟ್ಟು, ಹೊಗಳಿ ಮೋದಿಯವರಿಂದ ಖುಷಿಯ ಟ್ವೀಟು ಗಿಟ್ಟಿಸಿಕೊಂಡರು. ಅತ್ತ ಕುಮಾರಸ್ವಾಮಿಯವರ ಮೂಲಕ `ಉತ್ತರ ಕರ್ನಾಟಕ ನೆರೆ ಸಂಕಷ್ಟಕ್ಕೆ ಸಿಲುಕಿರೋದ್ರಿಂದ ಈ ಬಿಜೆಪಿ (ರಾಜ್ಯ) ಸರ್ಕಾರ ಬೀಳದಂತೆ ನಾವು ನೋಡಿಕೊಳ್ಳುತ್ತೇವೆ’ ಎಂಬ ಹೇಳಿಕೆ ಹೇಳಿಸಿ ಬಿಜೆಪಿ ಜೊತೆಗೆ ಒಂದು ಬಾಂಧವ್ಯವನ್ನೂ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ.

ಸಿದ್ದು ಬೇಸರದ ಮೂಲ ಇದು

ದೇವೇಗೌಡರ ಇಂಥಾ ಸ್ಟ್ರಾಟಜಿಗಳನ್ನು ಬಹಳ ಹತ್ತಿರದಿಂದ ನೋಡಿ, ಸಿಟ್ಟಿಗೆದ್ದು ದೂರ ಬಂದ ಸಿದ್ರಾಮಯ್ಯನಂತಹ ರಾಜಕಾರಣಿಗೆ ಈಗ ಡೀಕೆಯನ್ನು ಅವರು ದಾಳವಾಗಿ ಬಳಸಿಕೊಳ್ಳುತ್ತಿರೋದರ ವಿರುದ್ಧ ಸಹಜವಾಗಿಯೇ ಬೇಸರವಿದೆ. ಅದು ದೇವೇಗೌಡರ ಇಡೀ ಷಡ್ಯಂತ್ರದ ಮೇಲಿನ ಬೇಸರವೇ ವಿನಾಃ ಡೀಕೆ ಮೇಲಿನ ವೈಯಕ್ತಿಕ ಹಗೆತನವಲ್ಲ. ಖಾಸಗಿ ವೀಡಿಯೊದಲ್ಲಿ ಸಿದ್ದು ಹೊರಹಾಕಿದ ಅಸಮಾಧಾನ ಕೂಡಾ ಡಿಕೆಶಿಯ ಜೆಡಿಎಸ್ ವಾಲಿಕೆಯ ವಿರುದ್ಧವಾಗಿತ್ತೆ ವಿನಾಃ ಡಿಕೆಶಿಗೆ ಸಿಕ್ಕ ಅದ್ಭುತ ಸ್ವಾಗತದ ವಿರುದ್ಧವಲ್ಲ. ಆದರೆ ಮೊದಲಿನಿಂದಲೂ ಸಿದ್ದು ಎಂದರೆ ಒಂದು ಬಗೆಯ ಅಸಿಡಿಟಿಯನ್ನು ಅದುಮಿಟ್ಟುಕೊಂಡೇ ಬಂದಿರುವ ಕೆಲ ಮೀಡಿಯಾಗಳು ಸಿದ್ದು-ಡಿಕೆ ನಡುವೆ ಶೀತಲಸಮರವನ್ನಾಗಿ ಅದನ್ನು ಬಿಂಬಿಸುತ್ತಿವೆ. ಅಸಲಿಗೆ, ಡಿಕೆ ಬಿಡುಗಡೆಯ ನಂತರ ಒಕ್ಕಲಿಗರ ಆಕ್ರೋಶ, ಅವರನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದ ಬಿಜೆಪಿ ವಿರುದ್ಧ ಆಸ್ಫೋಟಿಸುತ್ತಿದ್ದುದನ್ನು ಸಿದ್ದು ಕಡೆಗೆ ಡೈವರ್ಟ್ ಮಾಡಲು ಮೀಡಿಯಾಗಳು ಹೆಣಗಾಡುತ್ತಿವೆಯಷ್ಟೆ. ಇದು ಗೌಡರ ಪಾಲಿಗೆ ಬೋನಸ್ ಪ್ರತಿಫಲ.

ಡಿಕೆಗಿದೆ ಸರ್ವೈವಲ್ ಸ್ಟ್ರಾಟಜಿ!

ಸರಿ, ದೇವೇಗೌಡರಿಗೇನೊ ಅನಿವಾರ್ಯತೆ ಇದೆ, ಡಿಕೆ ಪರವಾಗಿ ಮಮಕಾರ ಹರಿಸುತ್ತಿದ್ದಾರೆ. ಆದರೆ ಅವರನ್ನು ವಿರೋಧಿಸಿಕೊಂಡೇ ಬಂದ ಡಿಕೆಗೆ, ದೇವೇಗೌಡರ ದಾಳವಾಗುವ ಅನಿವಾರ್ಯತೆಯೇನು? ಅಷ್ಟೂ ಅರ್ಥವಾಗದ ದಡ್ಡರೇ ಅವರು? ಖಂಡಿತ ಇಲ್ಲ. ಈ ವಿಚಾರದಲ್ಲಿ ಸಿದ್ದುಗೆ ಒಂದು ಐಡಿಯಾಲಜಿಕಲ್ ವ್ಯೂ ಇರುವಂತೆ, ದೇವೇಗೌಡರಿಗೆ ಸ್ಪಷ್ಟ ಗೇಮ್‍ಪ್ಲ್ಯಾನ್ ಇರುವಂತೆ, ಡಿಕೆಶಿಗೂ ಒಂದು ವಿಶಿಷ್ಟ ಸರ್ವೈವಲ್ ಸ್ಟ್ರಾಟಜಿ ಇದರ ಹಿಂದಿದೆ.

ಬಿಜೆಪಿ ಸರ್ಕಾರದ ಇನ್‍ಕಂಟ್ಯಾಕ್ಸ್ ಡಿಪಾರ್ಟ್‍ಮೆಂಟು ರೇಡ್ ಮಾಡಿದ ತರುವಾಯ ಡಿಕೆಶಿ ಒಂದಷ್ಟು ಬದಲಾಗಲೇಬೇಕಿತ್ತು, ಅದು ಜೆಡಿಎಸ್ ಮತ್ತು ದೇವೇಗೌಡರ ವಿಚಾರದಲ್ಲು ಕೂಡಾ. ಯಾಕೆಂದರೆ ಬಿಜೆಪಿಯಂತಹ ಬೃಹತ್ ಅಧಿಕಾರ ಶಕ್ತಿಯನ್ನು ಎದುರುಹಾಕಿಕೊಂಡಿದ್ದ ಡಿಕೆ ಏಕಕಾಲದಲ್ಲಿ ಇಬ್ಬರು ವೈರಿಗಳ ಸಂಗಡ ಕಾದಾಡು ವಂತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರ ಇದ್ದಷ್ಟು ದಿನ ಮಾತ್ರ ತಾನು ಸೇಫ್, ಅಧಿಕಾರ ಕೈತಪ್ಪುತ್ತಿದ್ದಂತೆಯೇ ಬಿಜೆಪಿ ತನ್ನ ಜೊತೆ ಭೀಕರವಾಗಿ ನಡೆದುಕೊಳ್ಳಲಿದೆ ಎಂಬುದನ್ನು ಡಿಕೆ ಮೊದಲೇ ಊಹಿಸಿದ್ದರು. ಆದದ್ದು ಕೂಡಾ ಹಾಗೆಯೇ.

2018ರಲ್ಲಿ ಅತಂತ್ರ ವಿಧಾನಸಭೆ ಏರ್ಪಟ್ಟಾಗ ಜೆಡಿಎಸ್-ಕಾಂಗ್ರೆಸ್ ನಡುವೆ ಮೈತ್ರಿ ಕುದುರಿಸಲು ಡಿಕೆಶಿ ಹಳೆಯದನ್ನೆಲ್ಲ ಮರೆತು ವಿಪರೀತ ಮುತುವರ್ಜಿ ವಹಿಸಿದ್ದು ಮತ್ತು ಆ ಮೈತ್ರಿಯನ್ನು ಉಳಿಸಿಕೊಳ್ಳಲು ಶತಾಯಗತಾಯ ಹೋರಾಡಿದ್ದು, ಎಲ್ಲವೂ ಇದೇ ಕಾರಣಕ್ಕೆ. ಜೆಡಿಎಸ್ ಜೊತೆಗಿನ ಮೈತ್ರಿ ಎಂದರೆ, ಗೌಡರ ಕುಟುಂಬದ ಜೊತೆಗಿನ ಮೈತ್ರಿ ಎಂದರಿತಿದ್ದ ಡಿಕೆಶಿ ಸಹಜವಾಗಿಯೇ ಆ ಕುಟುಂಬದ ಜೊತೆ ಉತ್ತಮ ಒಡನಾಟವಿರುವಂತೆ ವರ್ತಿಸುತ್ತಿದ್ದಾರೆ. ಈಗಂತೂ ಅವರ ಸುತ್ತ ಕ್ರೋಢೀಕರಣಗೊಳ್ಳುತ್ತಿರುವ `ಒಕ್ಕಲಿಗ ಜಾತಿಪ್ರಜ್ಞೆ’ಯ ರಾಜಕಾರಣ ದೇವೇಗೌಡರಿಗೆಷ್ಟು ಅನಿವಾರ್ಯವಿದೆಯೋ ಡಿಕೆಗೂ ಅಷ್ಟೇ ಅಗತ್ಯವಿದೆ. ಅಧಿಕಾರವಂತೂ ಇಲ್ಲ, ಇಂಥಾ ಸಮಯದಲ್ಲಿ ಜಾತಿರಾಜಕಾರಣವನ್ನೂ ಗುರಾಣಿಯಾಗಿ ಬಳಸಿಕೊಳ್ಳದಿದ್ದರೆ ಬಿಜೆಪಿ ಜೊತೆ ಸೆಣೆಸಾಡಲು ಸಾಧ್ಯವೇ? ಇದು ಡೀಕೆ ತರ್ಕ. ಅವತ್ತು ಜೆಡಿಎಸ್ ಬಾವುಟ ಡಿಕೆ ಕೈ ಏರುವಂತೆ ಮಾಡಿದ್ದು ಇದೇ ತರ್ಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...