Homeಮುಖಪುಟಅನಾಥ ಮಕ್ಕಳ ಮಹಾತಾಯಿ ‘ಸಿಂಧೂತಾಯಿ ಸಪ್ಕಾಲ್‌’ ನಿಧನ

ಅನಾಥ ಮಕ್ಕಳ ಮಹಾತಾಯಿ ‘ಸಿಂಧೂತಾಯಿ ಸಪ್ಕಾಲ್‌’ ನಿಧನ

- Advertisement -
- Advertisement -

ಪುಣೆ: ‌ಅನಾಥ ಮಕ್ಕಳ ತಾಯಿ ಎಂದೇ ಗುರುತಿಸಲಾದ ಸಮಾಜ ಸೇವಕಿ ಸಿಂಧೂತಾಯಿ ಸಪ್ಕಾಲ್‌ ಅವರು ಹೃದಯಾಘಾತದಿಂದಾಗಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಪದ್ಮಶ್ರೀ ಪುರಸ್ಕೃತರಾದ ಅವರಿಗೆ 73 ವರ್ಷ ವಯಸ್ಸಾಗಿತ್ತು. ಕಡು ಬಡತನದಲ್ಲಿ ಬೆಳೆದ ಅವರು ಚಿಕ್ಕ ವಯಸ್ಸಿನಿಂದಲೇ ಅಪಾರ ಕಷ್ಟಗಳನ್ನು ಸಹಿಸಿಕೊಂಡು ಬೆಳೆದರು. ಎಲ್ಲ ಕಷ್ಟಗಳನ್ನು ಎದುರಿಸುತ್ತಲೇ ಅನಾಥ ಮಕ್ಕಳಿಗಾಗಿ ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿದರು.

ಸಿಂಧೂತಾಯಿ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿರುವ ಗ್ಯಾಲಕ್ಸಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು, ಮತ್ತೆ ಚೇತರಿಸಿಕೊಳ್ಳಲಿಲ್ಲ. ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್ ಪುಂಟಂಬೆಕರ್ ತಿಳಿಸಿದ್ದಾರೆ.

ನವೆಂಬರ್ 14, 1948ರಂದು ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯಲ್ಲಿ ಜನಿಸಿದ ಸಪ್ಕಾಲ್ ಅವರು 4ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಶಾಲೆಯನ್ನು ಬಿಡಬೇಕಾಯಿತು. 12ನೇ ವಯಸ್ಸಿನಲ್ಲಿ ಅವರಿಗೆ 32 ವರ್ಷದ ವ್ಯಕ್ತಿಯೊಂದಿಗೆ ವಿವಾಹವಾಯಿತು. ಮೂರು ಮಕ್ಕಳಿಗೆ ಜನ್ಮ ನೀಡಿದ ನಂತರ, ಮತ್ತೆ ಗರ್ಭಿಣಿಯಾಗಿದ್ದಾಗ ಪತಿ ಅವರನ್ನು ತೊರೆದರು. ಒಂದು ಹಂತದಲ್ಲಿ, ಅವರ ಸ್ವಂತ ತಾಯಿ ಹಾಗೂ ಊರಿನವರೇ ಸಹಾಯ ಮಾಡಲು ನಿರಾಕರಿಸಿದ್ದರಿಂದ, ಸಪ್ಕಾಲ್ ತನ್ನ ಹೆಣ್ಣು ಮಕ್ಕಳನ್ನು ಬೆಳೆಸಲು ಭಿಕ್ಷಾಟನೆಯನ್ನು ಆಶ್ರಯಿಸಬೇಕಾಯಿತು.

ಆದಾಗ್ಯೂ, ಈ ಸಂದರ್ಭಗಳನ್ನು ನಿವಾರಿಸಿ ಅವರು ಶೀಘ್ರದಲ್ಲೇ ಅನಾಥರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1,050ಕ್ಕೂ ಹೆಚ್ಚು ಅನಾಥ ಮಕ್ಕಳನ್ನು ಬೆಳೆಸಿರುವ ಅವರು 207 ಅಳಿಯಂದಿರು ಮತ್ತು 36 ಸೊಸೆಯರನ್ನು ಹೊಂದಿದ್ದಾರೆ.

ಪದ್ಮಶ್ರೀ ಪ್ರಶಸ್ತಿಯ ಜೊತೆಗೆ, ಸಪ್ಕಾಲ್‌ ಅವರು ತಮ್ಮ ಜೀವಿತಾವಧಿಯಲ್ಲಿ 750ಕ್ಕೂ ಹೆಚ್ಚು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದಾರೆ. ಪ್ರಶಸ್ತಿಯ ಹಣವನ್ನು ಅನಾಥ ಮಕ್ಕಳಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸಲು ಬಳಸಿದ್ದಾರೆ.

ಅವರ ಜೀವನ ಅನೇಕರಿಗೆ ಸ್ಫೂರ್ತಿಯಾಗಿದೆ. 2010ರಲ್ಲಿ, ಅವರ ಜೀವನದ ಕುರಿತು ಮರಾಠಿ ಭಾಷೆಯಲ್ಲಿ ‘ಮೀ ಸಿಂಧುತೈ ಸಪ್ಕಾಲ್’ ಚಲನಚಿತ್ರ ಬಿಡುಗಡೆಯಾಯಿತು. 54ನೇ ಲಂಡನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ಪ್ರದರ್ಶನವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರು ಸಪ್ಕಾಲ್‌ ತಾಯಿಯವರಿಗೆ ಸಂತಾಪ ಸೂಚಿಸಿದ್ದು, “ಡಾ.ಸಿಂಧುತಾಯಿ ಸಪ್ಕಾಲ್ ಅವರು ಸಮಾಜಕ್ಕೆ ನೀಡಿರುವ ಉದಾತ್ತ ಸೇವೆಯಿಂದಾಗಿ ಸ್ಮರಣೀಯರಾಗುತ್ತಾರೆ. ಅವರ ಪ್ರಯತ್ನದಿಂದಾಗಿ ಅನೇಕ ಮಕ್ಕಳು ಉತ್ತಮ ಗುಣಮಟ್ಟದ ಜೀವನವನ್ನು ನಡೆಸುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

“ಅಳಿವಿನ ಅಂಚಿನಲ್ಲಿರುವ ಸಮುದಾಯಗಳ ನಡುವೆಯೂ ಅವರು ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ನಿಧನದಿಂದ ನೋವಾಗಿದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ” ಎಂದು ಪ್ರಧಾನಿ ತಿಳಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಅನಾಥ ಮಕ್ಕಳ ತಾಯಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಸಾವಿರಾರು ಮಕ್ಕಳನ್ನು ಸಾಕಿದ ಸಪ್ಕಾಲ್ ತಾಯಿಯವರು ಸಾಕ್ಷಾತ್‌ ದೇವರ ರೂಪವಾಗಿದ್ದಾರೆ” ಎಂದಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಬುಧವಾರ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಮಾತನಾಡಿ, “ಸಪ್ಕಾಲ್ ಅವರು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಾ ಬೆಳೆದರು. ಸಮಾಜದಿಂದ ತಿರಸ್ಕರಿಸಲ್ಪಟ್ಟವರಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಸಾವಿನಿಂದಾಗಿ ಮಹಾರಾಷ್ಟ್ರವು ತಾಯಿಯನ್ನು ಕಳೆದುಕೊಂಡಿದೆ” ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.


ಇದನ್ನೂ ಓದಿರಿ: ದ್ವೇಷ ಭಾಷಣ: ವಿವಾದಿತ ಕಾಳಿಚರಣ್ ಸ್ವಾಮಿಯನ್ನು ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...