ಎಸ್ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್ಐಆರ್ ವಿರೋಧಿ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳ ಒಕ್ಕೂಟದ ವತಿಯಿಂದ ‘ಎಸ್ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಒಕ್ಕೂಟದ ಪದಾಧಿಕಾರಿಗಳಾದ ಜೆ.ಎಂ. ವೀರಸಂಗಯ್ಯ, ಬಿ.ಟಿ. ಲಲಿತಾ ನಾಯಕ್, ಕೆ.ಎಲ್. ಅಶೋಕ್, ಮುಹಮ್ಮದ್ ಯೂಸುಫ್ ಕನ್ನಿ, ಕೆ. ಮಹಂತೇಶ್, ತಾಹೇರ್ ಹುಸೇನ್, ಸೀತಾರಾಂ ಗುಂಡಪ್ಪ ಹಾಗೂ ಕೆ.ಎಚ್. ಅಬ್ದುಲ್ ಮಜೀದ್ ಅವರು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ಪ್ರವಾಸದಲ್ಲಿ ಖ್ಯಾತ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಸಾಹಿತಿಗಳು, ಚಿಂತಕರು ಮತ್ತು ಜನಪರ ಹೋರಾಟಗಾರರು ಭಾಗವಹಿಸಲಿದ್ದಾರೆ.
SIR ಪ್ರಕ್ರಿಯೆಯು ಕರ್ನಾಟಕದಲ್ಲಿ ಈಗಾಗಲೇ ನಿರೀಕ್ಷೆಗೂ ಮೀರಿದ ಅನಾಹುತವನ್ನು ಸೃಷ್ಟಿಸಿದೆ. ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ 1.08 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದ್ದು, 43.81 ಲಕ್ಷ ಜನರನ್ನು ‘ಅನುಮಾನಾಸ್ಪದ ಮತದಾರರು’ ಎಂದು ವಿಚಾರಣೆಗೆ ಗುರಿಪಡಿಸಲಾಗಿದೆ. ಇಡೀ ಪ್ರಕ್ರಿಯೆಯು ಅವೈಜ್ಞಾನಿಕ ಹಾಗೂ ಅಸಂವಿಧಾನಿಕವಾಗಿದ್ದು, ಅರ್ಹ ನಾಗರೀಕರ ಪ್ರಜಾತಾಂತ್ರಿಕ ಹಕ್ಕನ್ನು ಕಸಿಯಲಾಗುತ್ತಿದೆ ಎಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಅಕ್ರಮದ ನೈಜ ಸ್ಥಿತಿಯನ್ನು ಅರಿಯಲು ರಾಜ್ಯವ್ಯಾಪಿಯಾಗಿ ಆಯ್ದ 100 ಬೂತ್ಗಳಲ್ಲಿ ‘ನಾಗರಿಕ ಮತಕಾವಲು ಸಮಿತಿ’ಗಳ ಮೂಲಕ ಮತ ಪರಿಶೋಧನಾ ಕಾರ್ಯ ನಡೆಸಲಾಗುತ್ತಿದೆ. ಇದರ ಭಾಗವಾಗಿಯೇ ಸೆ.22ರಂದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಿಂದ ‘ಪ್ರತಿರೋಧ ಪ್ರವಾಸ’ ಆರಂಭವಾಗಲಿದ್ದು; ಹುಬ್ಬಳ್ಳಿ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ವಿವಿಧ ಭಾಗಗಳಿಗೆ ತಂಡ ಭೇಟಿ ನೀಡಲಿದೆ.
ಎಸ್ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಪ್ರವಾಸದ ವೇಳಾಪಟ್ಟಿ:
| ದಿನಾಂಕ | ಸಮಯ | ಸ್ಥಳ |
| 22/09/2026 | ಬೆಳಿಗ್ಗೆ 9:00 – 11:00 | ಮುಂಡಗೋಡು |
| 22/09/2026 | ಮಧ್ಯಾಹ್ನ 1:00 – 3:00 | ಹುಬ್ಬಳ್ಳಿ |
| 22/09/2026 | ಸಂಜೆ 5:00 – 7:00 | ವಿಜಯಪುರ |
| 23/09/2026 | ಬೆಳಿಗ್ಗೆ 10:00 – 12:00 | ಕಲಬುರಗಿ |
| 23/09/2026 | ಮಧ್ಯಾಹ್ನ 1:00 – 3:00 | ಯಾದಗಿರಿ |
| 23/09/2026 | ಸಂಜೆ 5:00 – 7:00 | ರಾಯಚೂರು |
| 24/09/2026 | ಬೆಳಿಗ್ಗೆ 9:00 – 11:00 | ಸಿಂಧನೂರು |
| 24/09/2026 | ಮಧ್ಯಾಹ್ನ 12:00 – 2:00 | ಬಳ್ಳಾರಿ |
| 24/09/2026 | ಸಂಜೆ 4:00 – 6:00 | ಕೊಪ್ಪಳ |
| 25/09/2026 | ಬೆಳಿಗ್ಗೆ 9:00 – 11:00 | ಚಿತ್ರದುರ್ಗ |
| 25/09/2026 | ಮಧ್ಯಾಹ್ನ 12:00 – 2:00 | ತುಮಕೂರು |
| 25/09/2026 | ಸಂಜೆ 4:00 – 5:00 | ಹುಳಿಯಾರು |
| 25/09/2026 | ಸಂಜೆ 6:00 – ರಾತ್ರಿ 8:00 | ಚಿಕ್ಕನಾಯಕನಹಳ್ಳಿ |
| 26/09/2026 | ಬೆಳಿಗ್ಗೆ 9:00 – 10:30 | ಗೌರಿಬಿದನೂರು |
| 26/09/2026 | ಬೆಳಿಗ್ಗೆ 11:00 – ಮಧ್ಯಾಹ್ನ 1:00 | ಬಾಗೇಪಲ್ಲಿ |
| 26/09/2026 | ಮಧ್ಯಾಹ್ನ 3:00 – ಸಂಜೆ 6:00 | ಚಿಕ್ಕಬಳ್ಳಾಪುರ |
| 27/09/2026 | ಬೆಳಿಗ್ಗೆ 9:00 – 11:00 | ಹಾಸನ |
| 27/09/2026 | ಮಧ್ಯಾಹ್ನ 12:00 – 2:00 | ಕಡೂರು |
| 27/09/2026 | ಸಂಜೆ 4:00 – 6:00 | ಚಿಕ್ಕಮಗಳೂರು |
| 28/09/2026 | – | ಮಂಗಳೂರು |
| 29/09/2026 | ಬೆಳಿಗ್ಗೆ 8:00 – ಮಧ್ಯಾಹ್ನ 2:00 | ಮಡಿಕೇರಿ |
| 29/09/2026 | ಸಂಜೆ 4:00 – 6:00 | ಮೈಸೂರು |
| 29/09/2026 | ರಾತ್ರಿ 7:00 – 9:00 | ಮಂಡ್ಯ |
| 30/09/2026 | – | ಬೆಂಗಳೂರು |
ಪ್ರವಾಸದ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳು ಮತ್ತು 100 ಮತಗಟ್ಟೆಗಳ ಪರಿಶೋಧನೆಯ ಆಧಾರದ ಮೇಲೆ ಸೆಪ್ಟೆಂಬರ್ 30ರಂದು ಸಾರ್ವಜನಿಕವಾಗಿ ಹಾಗೂ ಸರ್ಕಾರಕ್ಕೆ ‘ನಾಗರಿಕ ವರದಿ’ಯನ್ನು ಸಲ್ಲಿಸಲಾಗುತ್ತದೆ. ಮತದಾರರ ಹಕ್ಕು ರಕ್ಷಣೆಗೆ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒತ್ತಾಯ ಮಂಡಿಸಲಾಗುವುದು. ಪ್ರಜ್ಞಾವಂತ ನಾಗರಿಕರು ಈ ಅಭಿಯಾನದಲ್ಲಿ ಜೋಡಿಸಿಕೊಳ್ಳಲು ಮೊಬೈಲ್ ಸಂಖ್ಯೆ 96060 87560 ಅನ್ನು ಸಂಪರ್ಕಿಸಬಹುದು ಎಂದು ಒಕ್ಕೂಟ ಕೋರಿದೆ.


