| ನಿಖಿಲ್ ಕೋಲ್ಪೆ |

ಭಾರತ, ಪಾಕಿಸ್ತಾನ, ನೇಪಾಳ, ಅಫಘಾನಿಸ್ತಾನ, ಬಾಂಗ್ಲಾ, ಬರ್ಮಾ (ಮ್ಯಾನ್ಮಾರ್), ಶ್ರೀಲಂಕಾದ ಭೂಪ್ರದೇಶಗಳನ್ನು ಒಳಗೊಂಡ ‘ಅಖಂಡ ಭಾರತ’ದ ಹುಸಿ ಪರಿಕಲ್ಪನೆಯ ಕನವರಿಕೆಯು ದೇಶಪ್ರೇಮ ಎನಿಸಿಕೊಂಡಿರುವ ಈ ಕಾಲದಲ್ಲಿ, ದ್ರಾವಿಡ ರಾಜ್ಯಗಳು ಎನಿಸಿರುವ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಅರೆರಾಜ್ಯ ಪಾಂಡಿಚೇರಿಯನ್ನು ಒಳಗೊಂಡ, ಪರಸ್ಪರ ಸಹಕಾರದ ಒಂದು ಒಕ್ಕೂಟದ ಪರಿಕಲ್ಪನೆಯು ಕೆಲವರಿಗೆ ವಿಭಜನಕಾರಿ ಮತ್ತು ದೇಶದ್ರೋಹಿ ಅನಿಸಿದರೆ ಅಚ್ಚರಿಯೇನಿಲ್ಲ!

ಅದರೆ, ದಶಕಗಳಿಂದ ಇಂತಹಾ ಒಂದು ಪರಿಕಲ್ಪನೆ ಚಾಲ್ತಿಯಲ್ಲಿದ್ದರೂ, ದೊಡ್ಡ ಮಟ್ಟದಲ್ಲಿ ಚರ್ಚೆಗೆ ಬಂದಿಲ್ಲ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ನಡೆಯುತ್ತಿರುವ ಕೆಲವು ಆತಂಕಕಾರಿ ವಿದ್ಯಮಾನಗಳಿಂದ ಇದಕ್ಕೆ ಮತ್ತೆ ಚಾಲನೆ ದೊರೆತಿದೆ. ಮುಂದೆ ನಡೆಯಲಿವೆ ಎಂದು ಸುಲಭದಲ್ಲಿ ಊಹಿಸಬಹುದಾದ ವಿದ್ಯಮಾನಗಳು ಇಂತಹಾ ಪರಿಕಲ್ಪನೆಗೆ ಇನ್ನಷ್ಟು ಬಲ ನೀಡಬಹುದು. ಯಾರೂ ಪ್ರತ್ಯೇಕ ದೇಶವನ್ನು ಕೇಳುತ್ತಿಲ್ಲವಾದುದರಿಂದ ಇದಕ್ಕೆ ಕಾರಣವಾಗುತ್ತಿರುವ ವಿಷಯಗಳ ಕುರಿತು ಪೂರ್ವಗ್ರಹ ಇಲ್ಲದೇ ಚರ್ಚೆ ನಡೆಸುವುದರಲ್ಲಿ ತಪ್ಪೇನೂ ಇಲ್ಲ.

ಹೇಳಿಕೇಳಿ ಭಾರತವೂ ಹಲವು ಒಳರಾಷ್ಟ್ರೀಯತೆಗಳಿರುವ ಪ್ರಜಾಸತ್ತಾತ್ಮಕ ಒಕ್ಕೂಟ. ಇಲ್ಲಿ ರಾಜ್ಯಗಳಿಗೆ ಹೆಸರಿಗಾದರೂ ಕೆಲವು ಸಂವಿಧಾನಬದ್ಧ ಅಧಿಕಾರಗಳಿವೆ. ಜವಾಬ್ದಾರಿಗಳ ಹಂಚಿಕೆಯ ರಾಜ್ಯಪಟ್ಟಿ, ಸಮಾನಪಟ್ಟಿಯಲ್ಲಿಯೇ ಹಲವಾರು ವಿಷಯಗಳು ಸಂವಿಧಾನ ಪ್ರಕಾರವೇ ಇವೆ. ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂಬ ಬೇಡಿಕೆಯೂ ಇಂದು ನಿನ್ನೆಯದಲ್ಲ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ರಾಜ್ಯಪಾಲರುಗಳು ಕೇಂದ್ರ ಸರಕಾರದ ಏಜೆಂಟರುಗಳಂತೆ ವರ್ತಿಸುತ್ತಿದ್ದುದು ಸಾಮಾನ್ಯವಾಗಿತ್ತು. ಪಶ್ಚಿಮ ಬಂಗಾಳದ ಸಿದ್ಧಾರ್ಥ ಶಂಕರ ರಾಯ್ ಅತ್ಯಂತ ಕುಖ್ಯಾತ ಉದಾಹರಣೆ. ವಿರೋಧಿ ಆಡಳಿತ ಇರುವ ರಾಜ್ಯಗಳಲ್ಲಿ ಮನಬಂದಂತೆ ರಾಷ್ಟ್ರಪತಿ ಆಡಳಿತ ಹೇರಿದ್ದನ್ನು ನಾವು ಕಂಡಿದ್ದೇವೆ. ಪ್ರಾದೇಶಿಕ ಪಕ್ಷಗಳು ಪ್ರಬಲವಾದ ಬಳಿಕ ಈ ಪರಿಪಾಠ ಬಹುತೇಕ ಕಡಿಮೆಯಾದರೂ ಈಗ ಏಕಪಕ್ಷ ಪ್ರಾಬಲ್ಯದ ಕಾರಣದಿಂದ ಅದು ಮರುಕಳಿಸುತ್ತಿರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ದಿಲ್ಲಿ ಮತ್ತು ಪಾಂಡಿಚೇರಿ ಅರೆರಾಜ್ಯಗಳಲ್ಲಿ ಉಪರಾಜ್ಯಪಾಲರುಗಳ ಅಂದಾದುಂದಿ ವರ್ತನೆಗಳು ಕೇವಲ ದಿಕ್ಸೂಚಿಗಳಷ್ಟೇ.

ಒಂದು ಕಾಲದಲ್ಲಿ ಬಂದೂಕಿನ ಕಾನೂನು (Law of the Gun) ಇದ್ದ ಅಮೆರಿಕ ಸಂಯುಕ್ತ ಸಂಸ್ಥಾನ (ಯುಎಸ್‍ಎ), ನಂತರ ಉತ್ತರ ಮತ್ತು ದಕ್ಷಿಣದ ನಡುವೆ ಅಂತರ್ಯುದ್ಧವನ್ನೂ ಕಂಡು ಉತ್ತರದವರ ವಿಜಯದೊಂದಿಗೂ, ದಕ್ಷಿಣಕ್ಕೆ ಉತ್ತರದ ಅವಕಾಶವಾದಿಗಳ (Carpetbaggers) ಪ್ರವೇಶದೊಂದಿಗೂ ಕೊನೆಗೊಂಡಿತು. ಅಲ್ಲಿ ಅಧ್ಯಕ್ಷೀಯ ಮಾದರಿ ಪ್ರಬಲ ಕೇಂದ್ರ ಸರಕಾರವಿದ್ದರೂ, ಅಧ್ಯಕ್ಷ ಅಬ್ರಹಾಂ ಲಿಂಕನ್‍ರಂತಹಾ ಮುತ್ಸದ್ಧಿ ನಾಯಕರ ಕಾರಣದಿಂದ ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ ಇದೆ. ಎಷ್ಟರ ಮಟ್ಟಿಗೆ ಎಂದರೆ, ರಕ್ಷಣೆಗೆ ಮತ್ತು ಹಣಕಾಸಿಗೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟರೆ ಕ್ರಿಮಿನಲ್ ಕಾನೂನು ಸೇರಿದಂತೆ ಹಲವಾರು ವಿಷಯಗಳಲ್ಲಿ ಪ್ರತಿಯೊಂದು ರಾಜ್ಯವೂ ಬೇರೆಬೇರೆ ಕಾನೂನುಗಳನ್ನು ಹೊಂದಿದೆ. ಈ ಕಾರಣದಿಂದ ಅಲ್ಲಿನ ರಾಜ್ಯಗಳಿಗೆ ಬಯಸಿದಲ್ಲಿ ಹೊರನಡೆಯುವ ಅವಕಾಶವನ್ನು ನೀಡಲಾಗಿದ್ದರೂ, ಯಾರೂ ಈ ತನಕ ಅಂತಹಾ ಹೆಜ್ಜೆ ಇಟ್ಟಿಲ್ಲ. ಭಾರತದಲ್ಲಿ ಮಾತ್ರ ಪ್ರತ್ಯೇಕತೆಯ ಕೂಗು ಆಗಾಗ, ಅಲ್ಲಲ್ಲಿ ಕೇಳಿಸುತ್ತಿದೆ.

ಭಾರತದಂತಹ ವೈವಿಧ್ಯಮಯ ದೇಶಕ್ಕೆ ಅಧಿಕಾರ ವಿಕೇಂದ್ರೀಕರಣವೇ ಸೂಕ್ತ ಎಂಬುದು ಬಹುತೇಕ ಒಪ್ಪಿತ ಮಾತು. ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಎಸ್.ಕೆ. ದೇ ಅವರು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ ವಿಕೇಂದ್ರೀಕೃತ ಪಂಚಾಯಿತಿ ರಾಜ್ ಪರಿಕಲ್ಪನೆಗೆ ಚಾಲನೆ ಸಿಕ್ಕಿತ್ತು. ನಂತರ ಇಂದಿರಾಗಾಂಧಿ ಕಾಲದಲ್ಲಿ ಅದಕ್ಕೆ ಹಿನ್ನಡೆಯಾದದ್ದು ನಿಜ. ನಂತರ ಮತ್ತೆ ರಾಜೀವ್ ಗಾಂಧಿ ಮತ್ತು ಪಿ.ವಿ. ನರಸಿಂಹರಾವ್ ಅವರ ಕಾಲದಲ್ಲಿ ಈಗಿನ ಪಂಚಾಯತಿ ರಾಜ್ ರೂಪಿತವಾಯಿತು. ಆಗಲೂ, ನಂತರವೂ ಅದನ್ನು “ಅಧಿಕಾರ ವಿಕೇಂದ್ರೀಕರಣ ಎಂದರೆ ಭ್ರಷ್ಟಾಚಾರದ ವಿಕೇಂದ್ರೀಕರಣ” ಎಂಬ ಆಕರ್ಷಕ ಕುತರ್ಕದೊಂದಿಗೆ ವಿರೋಧಿಸಿದ್ದು ಜಮೀನ್ದಾರಿ, ವ್ಯಾಪಾರಿ, ಮೇಲ್ಜಾತಿ ಪರ, ಸರ್ವಾಧಿಕಾರಿ ಮನೋಭಾವದ ಆರೆಸ್ಸೆಸ್, ಮತ್ತದರ ಶಿಶು ಜನಸಂಘ ಮತ್ತದರ ಶಿಶು ಬಿಜೆಪಿ ಎಂಬುದನ್ನು ಮರೆಯಲಾಗದು. ಕರ್ನಾಟಕದಲ್ಲಿ ಕೂಡಾ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರು ದೇಶದಲ್ಲೇ ಅತ್ಯುತ್ತಮ ಮಾದರಿಗಳಲ್ಲಿ ಒಂದೆನ್ನಬಹುದಾದ ಪಂಚಾಯಿತಿ ರಾಜ್ ಕಾನೂನನ್ನು ತಂದರು.

ಅಸಮಾನತೆ ಇದ್ದಾಗ ಪ್ರತ್ಯೇಕತೆಯ ಬೇಡಿಕೆ ಬರುವುದು ಸಹಜ ಪ್ರಕ್ರಿಯೆ. ನಮ್ಮಲ್ಲೇ ಹಲವು ಕಡೆ ಇಂತಹಾ ಬೇಡಿಕೆ ಬಂದಿರುವುದು ಮತ್ತು ಕೆಲವು ಹೊಸ ರಾಜ್ಯಗಳ ಸ್ಥಾಪನೆಯೂ ಆಗಿರುವುದು ಈ ನಿಟ್ಟಿನಲ್ಲಿ ಗಮನಿಸಬೇಕಾದ ವಿಷಯ. ಇದರಿಂದ ದೇಶದ ಅಖಂಡತೆಗೇನೂ ಧಕ್ಕೆಯಾಗಿಲ್ಲ. ಆದುದರಿಂದ ದಕ್ಷಿಣದ ರಾಜ್ಯಗಳ ಒಕ್ಕೂಟದ ಪರಿಕಲ್ಪನೆ ವಿಭಜನಕಾರಿ ಅಥವಾ ದೇಶ ವಿರೋಧಿ ಎನ್ನಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಐರೋಪ್ಯ ಒಕ್ಕೂಟ (European Union)ವನ್ನೂ ನೋಡಬಹುದು. ಹಲವು ರಾಷ್ಟ್ರೀಯತೆಗಳನ್ನು ಹೊಂದಿರುವ ಇಪ್ಪತ್ತರಷ್ಟು ದೇಶಗಳು ಆರ್ಥಿಕ, ಸಾಮಾಜಿಕ ಸಹಕಾರದ ದೃಷ್ಟಿಯಿಂದ ಸ್ವಂತ ಸರಕಾರವನ್ನೂ, ಸಮಾನವಾದ ಯುರೋ ಕರೆನ್ಸಿಯನ್ನೂ ಹೊಂದಿರುವ ಒಕ್ಕೂಟವನ್ನು ಸ್ಥಾಪಿಸಬಹುದಾದರೆ, ದಕ್ಷಿಣ ಭಾರತೀಯ ರಾಜ್ಯಗಳ ಸಹಕಾರ ಒಕ್ಕೂಟ ಏಕೆ ಸ್ಥಾಪಿಸಲು ಸಾಧ್ಯವಿಲ್ಲ? ಅಲ್ಲಿನ ದೇಶಗಳ ದೇಶಪ್ರೇಮಕ್ಕೇನೂ ಧಕ್ಕೆಯಾಗಿಲ್ಲ.

ಇಂತಹಾ ಒಂದು ಒಂದು ಒಕ್ಕೂಟಕ್ಕೆ ಇತ್ತೀಚೆಗೆ ಡಿಎಂಕೆ ನಾಯಕ ಎಂ.ಕೆ. ಸ್ಟ್ಯಾಲಿನ್ ಬೆಂಬಲ ಘೋಷಿಸಿದ್ದರು. ಇದಕ್ಕೆ ಅವರ ರಾಜಕೀಯ ವಿರೋಧಿಗಳು ವಿರೋಧ ವ್ಯಕ್ತಪಡಿಸಿದಾಗ ಸ್ವಲ್ಪವೇ ರಕ್ಷಣಾತ್ಮಕವಾಗಿದ್ದರು. ಆದರೆ, ಅವರು ಹಿಂದಿ ಹೇರಿಕೆಯ ವಿಷಯ ಬಂದಾಗ ಮಾತ್ರ ಒಂದಿಷ್ಟೂ ಹಿಂದೆ ಸರಿಯದೇ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ ಮಾತ್ರವಲ್ಲ, ತಮಿಳರೆಲ್ಲಾ ಒಕ್ಕೊಲಳಿನಲ್ಲಿ ಇದೇ ಮಾತು ಆಡುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಉಳಿದ ದಕ್ಷಿಣ ರಾಜ್ಯಗಳಲ್ಲೂ ಪ್ರತಿಭಟನೆಯ ಧ್ವನಿಗಳು ಕೇಳಿಬರುತ್ತಿವೆ.

ಒಂದು ಭಾಷೆಯಾಗಿ ಹಿಂದಿಯನ್ನು ವಿರೋಧಿಸುವುದಲ್ಲ; ಅದರ ಹೇರಿಕೆಯನ್ನು ಖಡಾಖಂಡಿತವಾಗಿ ವಿರೋಧಿಸಬೇಕಾದ ಅಗತ್ಯವಿದೆ. ಯಾಕೆಂದರೆ, ಅದು ಕೇವಲ ಭಾಷೆಯ ಹೇರಿಕೆಯಲ್ಲ. ಅದು ಒಂದು ಸಾಂಸ್ಕೃತಿಕ ಹೇರಿಕೆ ಮತ್ತು ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುವ ಜಾಣತನದ ಸಂಚು. ನಮ್ಮ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಬಹುಪಾಲನ್ನು ಉತ್ತರ ಭಾರತೀಯರೇ ಆಕ್ರಮಿಸಿಕೊಳ್ಳುತ್ತಿರುವುದು ನಮ್ಮ ಕಣ್ಣಮುಂದಿರುವ ನಿಜ. ಇದರಲ್ಲಿ ದಕ್ಷಿಣ ಭಾರತೀಯರು ಹಿಂದಿಯನ್ನು ಒತ್ತಾಯದಿಂದಾದರೂ ಕಲಿಯುವಂತೆ ಮಾಡುವುದರ ಮೂಲಕ ವ್ಯಾಪಾರ ವ್ಯವಹಾರಗಳಲ್ಲಿ ಕೂಡಾ ಉತ್ತರ ಭಾರತದ ವಲಸಿಗರಿಗೆ ಅನುಕೂಲಕರ ವಾತಾವರಣ ಉಂಟುಮಾಡುವ ಸೂಕ್ಷ್ಮ ಹುನ್ನಾರವಿದೆ.

ಉದಾಹರಣೆಗೆ ನೋಡಿ: ಉತ್ತರ ಭಾರತೀಯನೊಬ್ಬ ಇಲ್ಲಿನ ಹಳ್ಳಿಹಳ್ಳಿಗಳಿಗೆ ಬಂದು ಪಾನ್ ಅಂಗಡಿಯೋ ಪಕೋಡಾ ಅಂಗಡಿಯೋ ತೆರೆಯಬಲ್ಲ, ಕಂಬಳಿ-ಬೆಡ್‍ಶೀಟೋ ಮಾರಬಲ್ಲ. ನಾವು ಅರೆಬರೆ ಹಿಂದಿಯಲ್ಲಿ ವ್ಯವಹರಿಸಿ ಅವರಿಗೆ ಅನುಕೂಲ ಮಾಡಿಕೊಡುತ್ತೇವೆ. ಆದರೆ, ಉತ್ತರದ ಪ್ರಮುಖ ನಗರಗಳಲ್ಲಿ ದಕ್ಷಿಣ ಭಾರತೀಯರು ಇದ್ದಾರಾದರೂ, ನಮ್ಮ ಹಳ್ಳಿಗರು ಅಲ್ಪಸ್ವಲ್ಪ ಹಿಂದಿ ಗೊತ್ತಿದ್ದರೂ ಉತ್ತರದ ಹಳ್ಳಿಗಳಲ್ಲಿ ಈ ರೀತಿ ತಿರುಗಿ ವ್ಯಾಪಾರ ಮಾಡುವುದು ಬಿಡಿ, ಪ್ರವೇಶ ಮಾಡುವುದು ಕೂಡಾ ಸಾಧ್ಯವಿಲ್ಲ. ಇಲ್ಲಿರುವ ಸೂಕ್ಷ್ಮ ಅವಕಾಶಗಳ ಅಸಮಾನತೆಯನ್ನು ಗಮನಿಸಿ.

The News Minute ವೆಬ್‍ಸೈಟಿನಲ್ಲಿ ತಾರಾ ಕೃಷ್ಣಸ್ವಾಮಿಯವರು ಒಂದು ಲೇಖನ ಬರೆದಿದ್ದು, ಅಲ್ಲಿ ಉಲ್ಲೇಖಿಸಲಾಗಿರುವ ಮತ್ತು ದಕ್ಷಿಣ ಭಾರತೀಯ ರಾಜ್ಯಗಳ ಒಕ್ಕೂಟದ ಪರಿಕಲ್ಪನೆಗೆ ಚಾಲನೆ ನೀಡುವ ಕೆಲವೇ ಅಂಶಗಳನ್ನು ಸ್ಥಳ ಮಿತಿಯ ದೃಷ್ಟಿಯಿಂದ ಸಂಕ್ಷಿಪ್ತವಾಗಿ ನೋಡೋಣ.

ಸುಮಾರು 20 ಶೇಕಡಾದಷ್ಟು ಜನಸಂಖ್ಯೆಯಿರುವ ದಕ್ಷಿಣ ಭಾರತವು ಸುಮಾರು 30 ಶೇಕಡಾದಷ್ಟು ತೆರಿಗೆ ಕಟ್ಟುತ್ತಿದೆ. ಒಟ್ಟು ರಾಷ್ಟ್ರೀಯ ಉತ್ಪನ್ನದ ಕಾಲು ಭಾಗವನ್ನು ಸೃಷ್ಟಿಸುತ್ತಿದೆ. ತಲಾ ಜಿಡಿಪಿಯು ಹಿಂದಿ ರಾಜ್ಯಗಳಿಗೆ ಹೋಲಿಸಿದಾಗ ದುಪ್ಪಟ್ಟು ಇದೆ. ಹೆಚ್ಚು ಕಡಿಮೆ ಮೂರನೇ ಒಂದರಷ್ಟು ತೆರಿಗೆ ಕಟ್ಟುವ ದಕ್ಷಿಣದ ರಾಜ್ಯಗಳು ಕೇಂದ್ರದಿಂದ ಮರಳಿ ಪಡೆಯುವುದು ಕೇವಲ 18 ಶೇಕಡಾ ಮಾತ್ರ. ಇದರಿಂದ ಲಾಭವಾಗುತ್ತಿರುವುದು ಮುಖ್ಯವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಿಗೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇದನ್ನು ನೋಡಿ: ತಮಿಳುನಾಡು ಕಟ್ಟುವ ಒಂದು ರೂಪಾಯಿ ತೆರಿಗೆಯಲ್ಲಿ ಅದು ಮರಳಿ ಪಡೆಯುವುದು 40 ಪೈಸೆ ಮಾತ್ರ. ಆದರೆ ಉತ್ತರ ಪ್ರದೇಶ ಒಂದು ರೂಪಾಯಿ ಎಂಭತ್ತು ಪೈಸೆಯನ್ನು ಮರಳಿಪಡೆಯುತ್ತಿದೆ!

ಉತ್ತರದ ರಾಜ್ಯಗಳು ಶಿಶು ಅಭಿವೃದ್ಧಿ, ಶಿಶು ಮತ್ತು ತಾಯಂದಿರ ಮರಣ, ಸಾಕ್ಷರತೆ, ಶಿಕ್ಷಣ, ಆರೋಗ್ಯ ಇತ್ಯಾದಿ ಎಲ್ಲಾ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಮೈಲುಗಟ್ಟಲೆ ಹಿಂದಿದೆ. ಆದರೆ, ದಕ್ಷಿಣ ಭಾರತದ ಫಲವತ್ತತೆ ದರ ಪಶ್ಚಿಮ ಯುರೋಪಿನ ಮಟ್ಟದಲ್ಲಿದ್ದು, ಜನಸಂಖ್ಯೆ ಸ್ಥಿರವಾಗಿದ್ದರೆ, ಹಿಂದೂಗಳು ಹೆಚ್ಚು ಮಕ್ಕಳನ್ನು ಹುಟ್ಟಿಸಿ ಎಂದು ಕರೆಕೊಡುವ ನಾಯಕರಿರುವ ಹಿಂದಿ ರಾಜ್ಯಗಳ ಜನಸಂಖ್ಯೆ ಎಗ್ಗಿಲ್ಲದೇ ಬೆಳೆಯುತ್ತಿದೆ. ತೆರಿಗೆಯ ಹಂಚಿಕೆಯಲ್ಲಿನ ಈ ಏರುಪೇರಿಗೆ ಕಾರಣವಾಗುತ್ತಿರುವುದೆಂದರೆ ಜನಸಂಖ್ಯೆ ಆಧರಿಸಿದ ಹಂಚಿಕೆ. ಆ ಹಣವಾದರೂ ಬಡವರ ಅಭಿವೃದ್ಧಿಗೆ ಹೋಗುತ್ತಿದೆಯೇ ಎಂದರೆ, ಇಲ್ಲ. ಅಲ್ಲಿ ಹಿಂದುಳಿದವರು, ದಲಿತರು, ಅಲ್ಪ ಸಂಖ್ಯಾತರ ಸ್ಥಿತಿ ಅಲ್ಲಿ ದಿನೇ ದಿನೇ ಬಿಗಡಾಯಿಸುತ್ತಿದೆ.

ಇದನ್ನು ಕಂಡರೆ ವಸಾಹತುಶಾಹಿಯ ನೆನಪು ಬರುತ್ತದೆ. ಭಾರತದಂತಹ ದೇಶಗಳನ್ನು ದೋಚಿ ಇಂಗ್ಲೆಂಡ್ ಶ್ರೀಮಂತವಾದರೆ, ಇಲ್ಲಿ ಸಾಕಷ್ಟು ಸ್ಥಿತಿವಂತವಾಗಿರುವ ದಕ್ಷಿಣ ಭಾರತದ ಸಂಪತ್ತನ್ನು ಹೀರುವ ಬಡತನದ ಸೋಗಿನ ಹಿಂದಿ ರಾಜ್ಯಗಳು ಹಣ್ಣಿನ ಮರಕ್ಕೆ ಅಂಟಿಕೊಂಡು ರಸಹೀರುವ ಪರೋಪಜೀವಿ ಬಂದಳಿಕೆಯಂತೆ ಆಗಿವೆ. ಇಲ್ಲಿ ಕೆಲವರು ನೈತಿಕತೆಯ ಪ್ರಶ್ನೆ ಎತ್ತಬಹುದು. ಅದನ್ನು ಪ್ರತ್ಯೇಕವಾಗಿ ಚರ್ಚಿಸಬೇಕಾಗುತ್ತದೆ.

ಇದೇ ರೀತಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಮುಂದೆ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಸ್ಥಾನಗಳನ್ನೂ ಕಳೆದುಕೊಳ್ಳಲಿದ್ದರೆ, ಹಿಂದಿ ರಾಜ್ಯಗಳ ಸದಸ್ಯತ್ವ ಏರಲಿದೆ. ಇದರ ಪರಿಣಾಮ ಏನು? ಸಂಖ್ಯಾಬಲದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಕ್ಷಿಣ ರಾಜ್ಯಗಳ ಧ್ವನಿ ಕುಗ್ಗಿ ಹಿಂದಿ ರಾಜಕಾರಣಿಗಳ ಆಟಾಟೋಪ ಹೆಚ್ಚಲಿದೆ. ಉತ್ತರದ ಅಧಾರ್ಮಿಕವಾದ, ಆದರೆ ಧರ್ಮದ ಹೆಸರಿನ ಕೋಮುವಾದಿ, ದ್ವೇಷ ರಾಜಕಾರಣದ ಪ್ರಯೋಗಗಳಿಗೆ ದಕ್ಷಿಣದ ರಾಜ್ಯಗಳು ಪ್ರಯೋಗಶಾಲೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಗಳು ಇನ್ನಷ್ಟು ಅಪಾಯಕಾರಿಯಾಗಬಲ್ಲವು. ದಕ್ಷಿಣ ಭಾರತೀಯ ರಾಜ್ಯಗಳ ಒಕ್ಕೂಟದ ಪರಿಕಲ್ಪನೆಯ ಇನ್ನಷ್ಟು ಆಯಾಮಗಳ ಕುರಿತು ಚರ್ಚೆಯ ಅಗತ್ಯವಿದೆ. ಉತ್ತರದ ರಾಜಕೀಯವು ದಕ್ಷಿಣವನ್ನು ಪ್ರತ್ಯೇಕತೆಯ ಹೊಸ್ತಿಲಿಗೆ ತಳ್ಳುತ್ತಿರುವ ಹೊತ್ತಿನಲ್ಲಿ ದೇಶದ ಅಖಂಡತೆಯ ರಕ್ಷಣೆಗಾಗಿ ಇದು ಅಗತ್ಯ.

LEAVE A REPLY

Please enter your comment!
Please enter your name here